ಶಬರಿ – ೧೪

ಶಬರಿ – ೧೪

ಸೂರ್ಯ ಮಲಗಿರಲಿಲ್ಲ. ಕೈಯ್ಯಲ್ಲಿ ಪುಸ್ತಕ, ಪಕ್ಕದಲ್ಲಿ ಬಗಲುಚೀಲ, ಚಿಂತೆಯ ಮುಖ.

“ಸೂರ್ಯ”,-ಶಬರಿ ಮಾತನಾಡಿಸಿದಳು.
ಸೂರ್ಯ ತಲೆಯತ್ತಿ ನೋಡಿದ. “ಬಾ, ಶಬರಿ” ಎಂದ.
ಶಬರಿ ಬಂದು ಕೂತಳು. ಮೆಲ್ಲಗೆ ಆತನ ಕೈ ಹಿಡಿದುಕೊಂಡಳು.
“ನಿಮ್ಮವ್ವನ್ನ ಒಂದ್‍ ಕಿತ ಇಲ್ಲಿಗ್ ಕರ್‍ಕಂಡ್ ಬಾ.”
ಸೂರ್ಯ ಮೌನವಾಗಿ ಶಬರಿಯ ಕೈಯನ್ನು ಒತ್ತಿ ಹಿಡಿದ.
“ನಂಗಂತೂ ಅವ್ವ ಇಲ್ಲ. ನಿಂಗಾನ ಐತಲ್ಲ. ಕರ್‍ಕಂಡ್ ಬಾ?”- ಮತ್ತೆ ಒತ್ತಾಯ.
“ಹೌದು, ನನಗೆ ಅವ್ವ ಇದಾಳೆ- ಇದ್ದೂ ಇಲ್ದಂತೆ.”- ಸೂರ್ಯ ನಿಟ್ಟುಸಿರಿನೊಂದಿಗೆ ನುಡಿದ.
“ಯಾಕಂಗಂಬ್ತೀಯ? ನಿಂಗೂ ನಿನ್ನವ್ವಂಗೂ ಆಗಾಕಿಲ್ವ”
“ಹಾಗೇನಿಲ್ಲ. ಅಮ್ಮನ್ನ, ನೋಡೋಕೆ ಆಗ್ತಾ ಇಲ್ವಲ್ಲ.”
“ಅದಕ್ಕೇ ನಾನಂದಿದ್ದು- ಇಲ್ಲಿ ಕೆಲ್ಸ ಇದ್ದೇ ಇರ್‍ತೈತೆ. ಅಂಗಂಬ್ತ ಯೆತ್ತವ್ವನ್ ಮರ್‍ಯಾದುಂಟಾ? ಒಂದ್‍ ಕಿತ ವೋಗ್‍ ಬಾ. ಬತ್ತೀನಿ ಅಂದ್ರೆ ಕರ್‍ಕಂಡ್ ಬಾ.”
“ಅದಕ್ಕೂ ಕಾಲ ಬರ್‍ಬೇಕು.”
“ಯೆತ್ತವ್ನನ್‍ ನೋಡಾಕೂ ಕಾಲ ಬರ್‌ಬೇಕಾ?”
“ಈ ದೇಶ್ದಲ್ಲಿ ಹಾಗಾಗಿದೆ ನಮ್ಮಂತೋರ್‍ ಪಾಡು.”
“ಏನೋಪ್ಪ ನಂಗೊಂದೂ ತಿಳ್ಯಾಕಿಲ್ಲ. ಬರ್‍ತಾ ಬರ್‍ತಾ ನೀನು ಒಗಟಾಗ್ತಿದ್ದೀಯ.”
“ಒಗಟು ಬಿಡ್ಸೋಕ್‍ ಬಂದೋನೇ ಒಗಟಾಗೋದು ಎಂಥ ವಿಪರ್ಯಾಸ.”
“ನಂಗಿವೆಲ್ಲ ದೊಡ್‍ ದೊಡ್‍ ಮಾತು ತಿಳ್ಯಾಕಿಲ್ಲ. ಬೂಮ್‍ತಾಯಿ, ತೋಪು, ಅಟ್ಟ್ತ್, ಬೆಟ್ಟ ಅಂದ್ರೆ ಚಂದಾಗ್ ತಿಳೀತೈತೆ. ಅಂಗೇ ಅವ್ವ ಅಂದ್ರೆ ಮನಸ್ನಾಗೆಲ್ಲ ಮಳೆ ವೂಯ್ದಂಗಾಯ್ತದೆ.”
ಸೂರ್ಯ ಶಬರಿಯ ತಲೆನೇವರಿಸಿದ. ಆಕೆಯ ಕಣ್ಣಲ್ಲಿ ನೀರು ತುಂಬಿರುವುದನ್ನು ನೋಡಿದ. ಕಣ್ಣೀರು ಒರೆಸುತ್ತ “ನನ್ನವ್ವ ಹಟ್ಟೀಗ್‍ ಬರೋ ದಿನ ಬಂದೇ ಬರುತ್ತೇ” ಎಂದು ಕಣ್ಣಲ್ಲಿ ನೀರು ತುಂಬಿಕೂಂಡ.
* * *

ಅಮ್ಮನ ನೆನಪು ತೋಪಿನ ತಂಗಾಳಿ.
ಕಾಂಡ ಕೂಂಬೆಗಳಲ್ಲಿ ಲಾವಾರಸ.
ಕೆಂಡಕ್ಕೆ ಕವಚ-ಸೂರ್ಯಮುಖ.

ಸೂರ್ಯ ಮರದಿಂದ ಮರಕ್ಕೆ ಓಡಾಡಿದ.
ಮನಸ್ಸಿನಲ್ಲೇ ‘ನೀವು ಕಂಡಿರೆ’ ಎಂದು ಕೇಳಿದ.
ತಾಯಿಯನ್ನು ಕಾಣಲು ಹೋಗುವುದೆ ಬಿಡುವುದೆ-ಗೊತ್ತಾಗದ ಗಾಣದ ಸುತ್ತು.

ಅಷ್ಟರಲ್ಲಿ ನವಾಬ ಬಂದ. ಸೂರ್ಯ ಆತನನ್ನು ಕೇಳಿದ-
“ನಾನ್ ಅಮ್ಮನ್ ನೋಡ್ಕಂಡ್‍ ಬರ್‍ಲಾ?”
“ಏನ್‍ ಮಾತೂಂತ ಆಡ್ತೀಯ ಸೂರ್ಯ? ಹೋಗಿ ಸಿಕ್ಕೊಳ್ಬೇಕು ಅಂತಿದ್ದೀಯೇನು? ಇನ್‍ ಸ್ವಲ್ಪದಿನ ಎಲ್ಲಾ ಒಂದು ಸ್ಥಿತೀಗ್‍ ಬರುತ್ತೆ. ಆಮೇಲೆ ಹೋದ್ರಾಯ್ತು?” ಎಂದು ನವಾಬ ಹೇಳಿದರೂ ಸೂರ್ಯನಿಗೆ ಸಮಾಧಾನವಾಗಲಿಲ್ಲ.

“ನಾನು ಎಲ್ಲದ್ದೀನಿ ಹೇಳು ಅಂತ ಅಮ್ಮಂಗೆ ಪೋಲಿಸ್ನೋರು ಅದೆಷ್ಟು ತೊಂದ್ರೆ ಕೂಟ್ಟಿರ್‌ಬಹ್ದು. ಅಲ್ವಾ?”

“ನಮ್‍ ಸಂಗಾತಿಗಳು ಇದಾರಲ್ಲ. ಅದೆಲ್ಲ ನಿಭಾಯ್ಸಿರ್‍ತಾರೆ.”
“ಆದ್ರೂ ಅಮ್ಮಂಗೆ ಎಷ್ಟು ಸಂಕಟ ಆಗಿರ್‍ಬೇಕು; ಅದೆಷ್ಟು ಅತ್ತಿರ್‍ಬೇಕು.”
“ಸೂರ್ಯ, ನಿನ್‍ ತಳಮಳ ನಂಗರ್ಥ ಆಗುತ್ತೆ. ರಾತ್ರಿ ತಿಮ್ಮರಾಯಿ ನಿನ್‍ ತಾಯಿ ಬಗ್ಗೆ ಕೇಳ್ದಾಗ್ನಿಂದ ನಿನಗೆ ಅದೇ ನೆನಪು ಕೊರೀತಾ ಇದೆ. ಆದ್ರೆ ತಾಯಿ ನೆನಪಲ್ಲಿ ತಾಳ್ಮೆ ಕಳ್ಕೋಬೇಡ. ಇನ್‍ ಸ್ನಲ್ಪದಿನ ಅಷ್ಟೆ.”
“ಅಂದ್ರೆ ಕಾಲಕ್ಕಾಗಿ ಕಾಯ್ಬೇಕು”- ಸೂರ್ಯ ಬೇಸರದಿಂದ ಹೇಳಿದ.

“ಅದು ನಿನ್ನದೇ ಮಾತು ಸೂರ್ಯ; ನೀನೇ ಹೇಳ್ತಿದ್ದ ಮಾತು. ಕಾಲದ ಜೊತೆ ಹೋಗ್ಬೇಕು; ಕಾಲಕ್ಕಾಗಿ ಕಾಯ್ಬೇಕು. ಕಾಲಾನ ಮೀರ್‍ಬೇಕು. ಇದು ನೀನೇ ಹೇಳಿಕೊಟ್ಟ ನೀತಿ, ಅಲ್ವ?” – ನವಾಬ ಅಪ್ತವಾಗಿ ಪ್ರಶ್ನಿಸಿದ.

“ನಿಜ. ಆದ್ರೇನ್‍ ಮಾಡೋದು. ಅಮ್ಮನ ಜಾಗ್ದಲ್ಲಿ ನಿಂತು ನೋಡ್ದಾಗ ತುಂಬಾ ನೋವಾಗುತ್ತೆ?”

“ಅದೇನೇ ಇರ್‍ಲಿ ಸೂರ್ಯ. ನೀನು ಈಗ ಹೋದ್ರೆ ವಿನಾಕಾರಣ ತೊಂದ್ರೇಗ್‍ ಸಿಕ್ಕೋತೀಯ. ನಿನಗಾಗಿ ಪೋಲಿಸರು ಬಲೆ ಬೀಸಿರ್‍ತಾರೆ. ಸದ್ಯ ಅವ್ರು ಈಕಡೆ ಬರೋದ್‍ ಕಡ್ಮೆ. ಹಾಗ್‍ ನೂಡಿದ್ರೆ ನಾನ್‍ ಬಂದ್ಮೇಲಂತೂ ಬಂದೇ ಇಲ್ಲ. ದಯವಿಟ್ಟು ನನ್‍ ಮಾತು ಕೇಳು. ಸದ್ಯಕ್ಕೆ ಎಲ್ಲೂ ಹೋಗ್ಬೇಡ.”

ಸೂರ್ಯ ಮೌನವಾದ.

ಆದರೆ ಒಳಗಿನ ಬೇಗೆ ಆರಿರಲಿಲ್ಲ. ಅದೊಂದು ಹಿತವಾದ ಬೇಗೆ. ನೆನಪಿನ ಸಂತೋಷದೊಳಗೆ ಸೇರಿದ ಸಂಕಟದ ಸುಳಿ. ಮನುಷ್ಯಸಂಬಂಧದ ಬಳುವಳಿ. ಹೋರಾಟದ ಹಾದಿ ಸುಗಮವಲ್ಲ. ವೈಯಕ್ತಿಕ ಒಳಹೋರಾಟಗಳನ್ನು ಉಳಿಸಿಕೊಳ್ಳುತ್ತ, ಒಳಗನ್ನು ಮೀರಿ ಹೊರಗಿನ ವಿರೋಧಗಳಿಗೆ ಮುಖಾಮುಖಿ ಯಾಗಿ ಮತ್ತೆ ಅಂತರ್ಮುಖಿಯಾಗುವ ಹಾಗೆ-ಕಮ್ಮಾರನ ಕಮ್ಮಟ.

ನವಾಬನಿಗೆ ಸೂರ್ಯ ಪ್ರತಿಕ್ರಿಯಿಸದೆ ಬೆನ್ನು ತಟ್ಟಿದ. ಭಾವನೆಯ ಗಟ್ಟಿಯನ್ನು ಬೇಗೆಯಲ್ಲಿ ಬೇಯಿಸುತ್ತ ಕರಗಿಸತೊಡಗಿದ.

ಆಗ ನವಾಬ್‍ ಹೇಳಿದ- “ಸುತ್ತಮುತ್ತ ಇರೋ ಬೇರೆ ಜನ್ರನ್ನೂ ಶಾಲೇಗ್ ಕರೆತರಬೇಕು. ಆ ಬಗ್ಗೆ ಇನ್‍ ಮುಂದೆ ಕೆಲ್ಸ ಮಾಡ್ಬೇಕು. ಈ ಭೂಮಿ ನಮ್ಮದು ಅನ್ನೋ ಹಾಡು ಹರಡ್ಬೇಕು…” ಗೆಳೆಯನ ಉತ್ಸಾಹವನ್ನು ಕಂಡು ಸೂರ್ಯನಿಗೆ ಹೆಮ್ಮೆಯೆನಿಸಿತು. ಹಗುರವಾಗುತ್ತ ಹೇಳಿದ- “ಮದ್ವೆ ರಜಾನ ತುಂಬಿಕೊಡ್ಬೇಕು ಅಂತ ಹೂರಟಂಗಿದೆ.”

“ತಮಾಷೆ ಮಾಡ್ಬೇಡಪ್ಪ” ಎಂದು ನವಾಬ ಹುಸಿಮುನಿಸು ತೋರಿದಾಗ.

“ಓಕೆ ನಾನ್‍ ರೆಡಿ. ಕ್ರಿಯೇನೆ ನಮ್‍ ತಾಯಿ. ಸರೀನಾ?”

“ತಾಯೀನೊ ತಂದೇನೊ ಒಟ್ನಲ್ಲಿ ಕೆಲ್ಸ ಮಾಡೋಣ. ಸ್ತ್ರೀವಾದಿಗಳು ತಾಯಿ ಅನ್ನೋದು, ಪುರುಷವಾದಿಗಳು ತಂದೆ ಅನ್ನೋದು. ಆಮೇಲ್ ಮಾಡ್‍ಬೇಕಾದ ಕೆಲ್ಸ ಒಂದ್‍ಬಿಟ್ಟು, ಬೇರೆ ಎಲ್ಲಾ ಮಾಡೋದು. ಅದೆಲ್ಲ ಈಗ ನಮಿಗ್ ಬೇಡ”. ನವಾಬನ ಮಾತು ಕೇಳಿ ಸೂರ್ಯ ಅಚ್ಚರಿಗೊಂಡ.

“ಏನ್ ಗೆಳೆಯ. ಸಿನಿಕಲ್‍ ಆಗ್ತಾ ಇದ್ದೀಯಾ ಹೇಗೆ?”
“ಖಂಡಿತ ಇಲ್ಲ. ಸಿನಿಕಲ್‍ ಆಗಿರೋರು ಹೀಗೆಲ್ಲ ಚರ್ಚೆ ಮಾಡ್‍ಬಹುದು ಅಂತ ಹೇಳ್ದೆ. ಯಾಕಂದ್ರೆ ಅವ್ರಿಗ್ಯಾವ್ದೂ ರುಚಿಸೊಲ್ಲ ನೋಡು, ತಾಯಿ-ತಂದೆ, ಅಣ್ಣ-ತಂಗಿ ಎಲ್ರುನ್ನೂ ಎದುರುಬದುರು ನಿಲ್ಸಿ ಕ್ರಿಯೇನ ನಿಷ್ಕ್ರಿಯ ಮಾಡಿ ಮಹಾನ್‍ ಸಾಧಕರಾಗ್ತಾರೆ. ಅದಕ್ಕೆ ಸುಮ್ನೆ ಹಾಗಂದೆ-ಪಾಸಿಂಗ್‍ ರಿಮಾರ್ಕ್ಸ್ ಥರಾ. ಆಮೇಲೆ ಅದನ್ನೇ ಹಚ್ಕೊಂಡು ನಿದ್ದೆ ಕೆಡ್ಬೇಡ.”- ನವಾಬ್‍ ವಿವರಿಸಿದ.

“ನಿದ್ದೆ ಕೆಟ್ರೂ ಪರ್‍ವಾಗಿಲ್ಲ; ದೃಷ್ಟಿ ಕೆಡಬಾರದು”- ಸೂರ್ಯ ಸಮಸ್ಥಿತಿಗೆ ಬರುತ್ತಾ ಹೇಳಿದ.

ನವಾಬ “ಮಾತು ಅಂದ್ರೆ ಇದು ನೋಡು” ಎಂದು ಮೆಚ್ಚುಗೆ ಸೂಚಿಸಿದ. ಆಗ ಸೂರ್ಯ ಮತ್ತೆ ಗಂಭೀರವಾಗಿ ಹೇಳಿದ- “ನೋಡು ಗಳಯ, ನಾನು ಭಾವ ಆದಾಗ ನೀನು ಬುದ್ಧಿ ಆಗ್ಬೇಕು. ನೀನು ಭಾವ ಅದಾಗ ನಾನ್‍ ಬುದ್ಧಿ ಆಗ್ತೀನಿ. ಆಗ ಭಾವ-ಬುದ್ಧಿ ಸಮಾನವಾಗಿ ಒಬ್ರಲ್ಲೇ ಇರೋಕ್‍ ಸಾಧ್ಯ ಆಗುತ್ತೆ.”

“ಭಾವ-ಬುದ್ಧಿಗಳ ಸಮಾನತೆ! ಅಲ್ವಾ?”

“ಹೌದಲ್ಲ ಗೆಳೆಯ? ನಾವು ಎಲ್ಲಾ ಕಡೆ ಎದುರಿಸ್ತಾ ಇರೋದು ಕ್ರೈಸಿಸ್ ಆಫ್ ಈಕ್ಟಾಲಿಟಿ ಅಲ್ವಾ? ದೇಹದ ಒಳಗೆ, ದೇಹದ ಹೊರಗೆ- ಎಲ್ಲಾ ಕಡೆ ಸಮಾನತೆಯ ಬಿಕ್ಕಟ್ಟು.”

“ಬಿಕ್ಕಟ್ಟನ್ನು ತೆಗೆದು ಸಮಾನತೆ ಉಳ್ಸೋಕಾಗಿ ನಮ್‍ಕ್ರಿಯೆ. ಬಾ ಹೋಗೋಣ? ಎಂದು ನವಾಬ್‍ ಹಜ್ಜೆಹಾಕಿದ.

ಇಬ್ಬರೂ ಜೊತೆಯಲ್ಲಿ ಹೊರಟರು.

ನಾಲ್ಕೈದು ದಿನ ಬೆಟ್ಟದಾಚೆಯ ಬುಡಕಟ್ಟಿನ ಜನರನ್ನು, ಊರಿನ ಬಡಜನರನ್ನು ಭೇಟಿಯಾದರು. ಹುಚ್ಚೀರ, ಸಣ್ಣೀರ ಮುಂತಾದವರ ಸಹಾಯದಿಂದ ಇವರನ್ನೆಲ್ಲ ಸಂಪರ್ಕಿಸಿ ಸ್ನೇಹಸಂಪಾದನೆ ಮಾಡತೊಡಗಿದರು.

ಊರೊಳಗೆ ಇವರು ಬಂದು ಹೋದ ಸುದ್ದಿ ಗೊತ್ತಾದ ಮೇಲೆ ಜೋಯಿಸರು ಜಾಗೃತರಾದರು. ನರಸಿಂಹರಾಯಪ್ಪನಿಗೆ ಸ್ವಲ್ಪ ಬಿಗಿಯಾಗಿರಬೇಕೆಂದು ಸಲಹೆಕೊಟ್ಟರು.

“ನಾನ್ ಯಾವ್ದುಕ್ಕೂ ಎದ್ರಲ್ಲ ಸಾಮೇರ” ಎಂದ ನರಸಿಂಹರಾಯಪ್ಪ.
ಇದು ಎಂದಿನಂತೆ ಆಡುವ ಜಡಮಾತೆಂದು ಜೋಯಿಸರು ಭಾವಿಸಿದರು. ಆದರೆ ನರಸಿಂಹರಾಯಪ್ಪನ ಮುಂದಿನ ಮಾತು ಅವರನ್ನೇ ಚಕಿತಗೊಳಿಸಿತು.

“ನಮ್ ಎಮ್ಮೆಲ್ಲೆ ಸಾಯೇಬ ಸಿಕ್ಕಿದ್ದ. ನಮ್ಮೂರ್ ಉದ್ದಾರ ಮಾಡಾಕ್ ಬತ್ತೀನಿ ಅಂದವ್ನೆ. ಮನ್ನೆ ಪೋಲಿಸಪ್ಪನೂ ಬಂದಿದ್ದ. ನಾನು ನನ್‍ ಉಸಾರ್‍ಗೆ ಏನ್ ಬೇಕೊ ಎಲ್ಲಾ ಮಾಡ್ತಾ ಇವ್ನಿ.”

“ನಂಗೊಂದ್ ಮಾತೂ ಹೇಳಲೇ ಇಲ್ವಲ್ಲ?”- ಎಂದು ಕೇಳಿಯೇಬಿಟ್ಟರು ಜೋಯಿಸರು.

“ಅದೇನೊ ವಿಸ್ಯ ಒಸಿ ಗುಟ್ಟಾಗಿರ್‍ಲಿ ಅಂದಿದ್ರು, ಅದಕ್ಕೇ ಸುಮ್ಕಿದ್ದೆ. ಯಾವತ್ತಿದ್ರೂ ನಿಮಗೇಳ್ದೆ ಏನಾರ ಮಾಡಕಾಯ್ತದ? ನಾಳೆ ನಾಡಿದ್‍ ಎಮ್ಮೆಲ್ಲೆ ಜತ್ಯಾಗೆ ಯಾರ್‍ಯಾರೊ ದೊಡ್ಡೋರ್‍ ಬತ್ತಾರೆ. ಅದ್ಕೇ ಇವತ್‍ ಯೇಳ್‍ ಬಿಟ್ಟೆ ನಿಮ್ಗೆ.” ಎಂದು ವಿವರಿಸಿದ ನರಸಿಂಹರಾಯಪ್ಪ.

“ಆದ್ರೂ ಇಷ್ಟು ದಿನ ಮುಚ್ಚಿಟ್ಕೋಬಾರದಿತ್ತು” ಎಂದು ಹೇಳಿಬಿಟ್ಟರು ಜೋಯಿಸರು.

“ನಿಮ್ದೊಳ್ಳೆ ರಗಳೆ ಆತಲ್ಲ. ಅವ್ರ್‍ ಮುಚ್ಚಿಡು ಅಂದಿದ್ರು. ಅದ್ಕೆ ಅಂಗಿದ್ದೆ ಅಂಬ್ತ ಹೇಳಿದ್ನಲ್ಲ. ನಮ್ಮೂರ್‍ಗೆ ಅದೇನೇನೊ ತರ್‍ತಾರಂತೆ. ನಿಮ್ಗೂ ಯೇಳ್ತಾರೆ ಸುಮ್ಕಿರ್ರಿ ಸಾಮೇರ” ಎಂದು ನರಸಿಂಹರಾಯಪ್ಪ ದೊಡ್ಡ ದನಿಯಲ್ಲೇ ಹೇಳಿದ.

“ಒಟ್ನಲ್ಲಿ ‘ನರ’ ಆಗಿರಪ್ಪ ‘ಸಿಂಹ’ ಆಗ್‍ಬೇಡ” ಎಂದು ಜೋಯಿಸರು ಮಾರ್‍ಮಿಕವಾಗಿ ನುಡಿದರು.

“ಸಿಂಹ ಆದ್ರೇನಂತೆ ನಿಮ್ಮನ್‍ ತಿನ್ತೀನಾ? ನಿಮ್ದೇನ್‍ ಮಾಂಸ, ಮುದ್ದೆ ತಿಂದ್ ಬೆಳ್ದೀರಾ ಸ್ಯರೀರಾನ ತಿನ್ನಾಕೆ. ನೀವ್ ಸುಮ್ಕಿರಿ ಸಾಮೇರ” ಎಂದು ನರಸಿಂಹರಾಯಪ್ಪ ಒಡೆಯನ ಠೇಂಕಾರದಲ್ಲಿ ಮಾತು ಮುಂದುವರಿಸಿದಾಗ ಜೋಯಿಸರೇ ಸುಮ್ಮನಾದರು.

ಇಷ್ಟೆಲ್ಲ ಮಾತುಕತೆಯನ್ನು ಪೂಜಾರಪ್ಪ ಕೇಳಿಸಿಕೊಂಡಿದ್ದ. ಇತ್ತೀಚೆಗೆ ಇವರ ಕಡೆ ಸುಳಿಯದಿದ್ದವನು ಹೀಗೆ ದೂರವಾಗುವುದು ಸರಿಯಲ್ಲವೆಂದು ಭಾವಿಸಿ ಮೊದಲಿನಂತಲ್ಲದಿದ್ದರೂ ಸುಮ್ಮನೆ ಆಗೊಮ್ಮೆ ಈಗೊಮ್ಮೆ ಬಂದು ಹೋಗೋಣವೆಂದುಕೊಂಡು ಸದ್ದಿಲ್ಲದೆ ಗೋಡೆಯ ಪಕ್ಕದಲ್ಲೆ ಬಂದು ನಿಂತಿದ್ದ. ಮುಂದೆ ಹಜ್ಜೆಯಿಡಲು ಹಿಂಜರಿಯುತ್ತಿದ್ದಾಗ ಇವರ ಮಾತುಗಳು ಕೇಳಿಸಿ ಅಲ್ಲೇ ನಿಂತ. ಆನಂತರ ಅವರ ಬಳಿ ಹೋಗಲು ಮನಸ್ಸಾಗಲಿಲ್ಲ. ಇಬ್ಬರ ಮಧ್ಯೆ ಏನೋ ನಡೆಯುತ್ತಿದೆ- ಇದು ಸರಿಯಾದ ಸಮಯವಲ್ಲ ಎಂದು ಭಾವಿಸಿ ಹಿಂತಿರುಗಿಬಿಟ್ಟ.

ಇಲ್ಲಿ ನಡೆದದ್ದನ್ನು, ಪೂಜಾರಪ್ಪ ಸೂರ್ಯನಿಗೆ ತಿಳಿಸಿದ. ಜೋಯಿಸರಿಗೂ ತಿಳಿಸದೆ ಒಡೆಯರು ಏನೋ ಮಾಡುತ್ತಿದ್ದಾರೆಂದು ಹೇಳಿದ. ಆಗ ಸೂರ್ಯನಿಗೆ ಅನ್ನಿಸಿತು-ಪೂಜಾರಪ್ಪ ಅವರ ಜೊತೆ ಸಂಪರ್ಕದಲ್ಲಿರುವುದು ಒಳ್ಳೆಯದು-ಅಂತ. ಅದನ್ನೇ ಹೇಳಿದ “ನಿನ್‍ ಹಳೇ ಸಂಬಂಧ ಯಾಕ್‍ ಬಿಡ್ತೀಯ ಪೂಜಾರಪ್ಪ. ಇಷ್ಟಕ್ಕೂ ಹಾಗೆಲ್ಲ ಒಂದೇ ಸಾರಿ ಕಡಕೊಳ್ಳೋ ಸಂದರ್ಭ ಬಂದಿಲ್ಲ.”

ಪೂಜಾರಪ್ಪನಿಗೂ ಹಾಗೆ ಅನ್ನಿಸಿದ್ದರಿಂದಲೇ ಒಡೆಯರ ಬಳಿ ಹೋಗಿದ್ದ. ಹಾಗೇ ವಾಪಸ್ ಬರಬಾರದಿತ್ತು ಎನ್ನಿಸಿ “ನಾಳೇನೇ ವೋಯ್ತೀನಿ ಕಣಪ್ಪ. ಮೊದ್ಲು ಜೋಯಿಸಪ್ನೋರ್ ತಾವ್‍ ವೋಯ್ತೀನಿ. ಆಮ್ಯಾಕ್‍ ಒಡೇರ್‌ತಾವ” ಎಂದ.
* * *

ಹಟ್ಟಿಯಲ್ಲಿ ಕೆಲವು ಮಕ್ಕಳು ಬಿಟ್ಟು ಬೇರಾರೂ ಇರಲಿಲ್ಲ. ಎಲ್ಲರೂ ಕೆಲಸಕ್ಕೆ ಹೋಗಿದ್ದರು. ತಿಮ್ಮರಾಯಿಗೆ ತುಂಬಾ ಕೆಮ್ಮು ಜ್ವರ ಕಾಣಿಸಿಕೂಂಡದ್ದರಿಂದ ಶಬರಿ ಮನೆಯಲ್ಲೇ ಇದ್ದಳು. ಸೂರ್ಯ, ನವಾಬ್‍-ಇಬ್ಬರೂ ಬೆಟ್ಟದಾಚೆಯ ಜನರನ್ನು ಕಂಡು ಹಾಗೇ ಅಡ್ಡಾಡಿಕೊಂಡು ಬರುತ್ತೇವೆಂದು ಹೋಗಿದ್ದರು. ಮಕ್ಕಳು ಆಟ ಆಡುತ್ತ ಗದ್ದಲ ಮಾಡುತ್ತಿದ್ದರು. ಶಬರಿ ಹೂರಬಂದು “ಅಪ್ಪಯ್ಯ ಮಲೀಕಂಡೈತೆ, ಅಂಗೆಲ್ಲಾರ ತೋಪ್ನಾಗ್‍ವೋಗಿ ಆಡ್ಕಂಡ್‍ ಬರ್ರಪ್ಪ” ಎಂದು ಮಕ್ಕಳಿಗೆ ಮೃದುವಾಗಿ ಹೇಳಿದಳು. ಒಬ್ಬ ಹುಡುಗ “ಮನೆ ಕಾಯ್ಬೇಕು ನಾವು” ಎಂದ. “ಯೇ ಮನ್ಯಾಗೇನ್‍ ಪಿಠಾರಿ ಇಟ್ಟವ್ರ? ಸುಮ್ಕೆ ವೋಗ್ರಿ, ಇಲ್ಲ ಅಂದ್ರೆ ತುಟಿಪಿಟಿಕ್ ಅನ್ದಂಗೆ ಕಟ್ಟೆ ಮ್ಯಾಲ್ ಕುಂತ್ಕಾಬೇಕು” ಎಂದು ತಾಕೀತು ಮಾಡಿದಳು. ಆಗ ಅವರು “ಅಂಗಾರ್‍ ತೋಪ್ನಾಗೋಗ್ತೀವಿ” ಎಂದು ಕುಣಿಯುತ್ತ ಹೊರಟರು. ಹೋಗುವಾಗ ಒಂದಿಬ್ಬರು “ಯಕ್ಕೋ ಮನೇ ಕಡೀಕ್‍ ಒಸಿ ನೋಡ್ಕಳಕ್ಕೋ” ಎಂದು ಕೂಗಿ ಹೇಳಿದರು. “ಚಿನ್ನ, ಬಳ್ಳಿ ಎಲ್ಲಾ ಜ್ವಾಪಾನ್ವಾಗ್ ನೋಡ್ಕಂಬ್ತೀನಿ, ವೋಗ್ರಲ ಸುಮ್ಕೆ” ಎಂದು ಶಬರಿ ನಗುತ್ತಾ ಹೇಳಿ ಕಟ್ಟೆ ಮೇಲೆ ಕೂತಳು.

ಹಾಗೆ ಹೋದ ಹುಡುಗರು ಹೀಗೆ ಓಡೋಡಿ ಬಂದರು. ಶಬರಿ ಕುತೂಹಲದಿಂದ “ಯಕ್ರಲಾ ಇಂಗ್‍ ಎದ್ನೋ ಬಿದ್ನೊ ಅಂಬ್ತ ಬತ್ತಾ ಇದ್ದೀರ?” ಎಂದು ಕೇಳಿದಳು.

“ತೋಪ್ನಾಗೆ ನಾವ್‍ ಆಡಾಕಾಗಕಿಲ್ಲ ಕಣಕ್ಕೊ, ಅದ್ಯಾರೊ ಬಿಳೀಜನ ಬಂದವ್ರೆ. ಡುರ್‌ಡುರ್‍ ಅಂಬ್ತೈತಲ್ಲ, ಅಂತ ಗಾಡಿ ತಗಂಡ್‍ ಬಂದವ್ರೆ. ನಾವ್ ನೋಡಿದ್ದೇ ತಡ ಎದ್ರಿಕಂಡ್‍ ಓಡ್‍ ಬಂದ್ವಿ” ಎಂದು ಹೊಸತು ಕಂಡ ಉತ್ಸಾಹದಲ್ಲಿ ವರದಿ ಒಪ್ಪಿಸಿದರು. ಅವರಿಗೆ ಆಟವಾಡಲು ತೋಪು ತಪ್ಪಿಹೋಯಿತು ಎಂಬ ಬೇಸರಕ್ಕಿಂತ ಹೊಸ ಸುದ್ದಿಯನ್ನು ಕೊಡುತ್ತಿರುವ ಹುರುಪೇ ಹೆಚ್ಚಾಗಿತ್ತು. “ಅದೇನ್ ಬೆಳ್ಳಗವ್ರಕ್ಕ ಅವ್ರು. ಫಳಪಳ ಅಂಬ್ತ ವೂಳೀತಾ ಅವ್ರೆ. ಜತ್ಯಾಗೆ ಒಡೇರೂ ಜೋಯ್ಸಪ್ಪ ಎಲ್ಲಾ ಅವ್ರೆ” ಎಂದು ಮತ್ತಷ್ಟು ವಿವರ ಕೂಟ್ಟರು.

ಶಬರಿಗೂ ತಡೆಯಲಾಗಲಿಲ್ಲ. “ನೋಡಾನ್‍ ಬರ್ರಲ” ಎಂದು ಹೂರಟಳು. ತೋಪಿನ ಹತ್ತಿರ ಬಂದಾಗ ಹುಡುಗರು ಹೇಳಿದ್ದು ನಿಜವೆಂದು ಗೊತ್ತಾಯಿತು. ಅಲ್ಲೊಂದು ಹೊಸ ರೀತಿಯ ಕಾರು ಮತ್ತು ಒಂದು ಜೀಪು ನಿಂತಿದ್ದವು. ಮೂವರು ಬಿಳಿಜನರು ಇದ್ದರು; ಜೊತೆಗೆ ನರಸಿಂಹರಾಯಪ್ಪ, ಜೋಯಿಸ ಮತ್ತು ಎಂ.ಎಲ್‍.ಎ. ಎಲ್ಲರೂ ತೋಪನ್ನು ನೋಡುತ್ತಿದ್ದರು. ಆನಂತರ ಬಯಲು ಎಷ್ಟಿದೆಯೆಂದು ಲೆಕ್ಕ ಹಾಕುತ್ತಿದ್ದರು. ಎಂ.ಎಲ್‍.ಎ. “ನೀವ್‍ ಯಾವ್ದಕ್ಕೂ ಯೋಚಿಸ್ಬೇಡಿ. ಎಲ್ಲಾ ವ್ಯವಸ್ಥೆ ಆಗುತ್ತೆ. ಸರ್ಕಾರ ಸಿದ್ಧವಿದೆ” ಎಂದು ಹೇಳುತ್ತಿದ್ದ. ಊರ ಒಡಯನಿಗೆ “ಈ ಪ್ರದೇಶದ ಬಣ್ಣಾನೇ ಬದ್ಲಾಗ್ ಬಿಡುತ್ತೆ” ಎಂದದ್ದಲ್ಲದೆ “ಏನಂಬ್ತೀರ ಜೋಯಿಸ್ರೆ” ಎಂದು ಕೇಳಿದ. ಜೋಯಿಸರು “ನಾವು ಇಲ್ಲೀವರ್‍ಗೆ ಮೂರು ಬಣ್ಣಾನೇ ಶ್ರೇಷ್ಠ ಅಂತಿದ್ವಿ-ಅದೇ ಕೇಸರಿ, ಬಿಳಿ, ಹಸಿರು-ಇವ್ರು ಬಂದ್ ಮೇಲೆ ಬೇರೆ ಬಣ್ಣಾನೇ ಆಗುತ್ತೆ ಬಿಡಿ. ಹೊಸಜನ, ಹೊಸಬಣ್ಣ; ಜೈ ಅಂದ್ರಾಯ್ತು” ಎಂದು ದೇಶಾವರಿ ನಗೆ ನಕ್ಕಾಗ ಎಂ.ಎಲ್.ಎ. “ದೇಶ ಮುಂದುವರೀ ಬೇಕಲ್ವ. ದುಡ್ಡಿದ್ದೋನೆ ದೊಡ್ಡಪ್ಪ. ಜೈಜೈ ಅಂದು ನಮ್ಗೂ ಅನುಕೂಲ ಮಾಡ್ಕೋಳ್ಳೋಣ. ದೇಶಕ್ಕೂ ಮಾಡೋಣ. ಏನಂತೀರ?” ಎಂದು ಉತ್ಸಾಹದಲ್ಲಿ ಹೇಳಿದಾಗ ಜೋಯಿಸರು “ಬೇರೆ ಅನ್ನೋದೇನಿದೆ? ಇದು ನಮ್ಮ ಪ್ರದೇಶದ ಪುಣ್ಯ” ಎಂದು ಭಾಷ್ಯ ಬರೆದರು-ಬಾಯಲ್ಲೆ. ಆಗ ಎಂ.ಎಲ್‍.ಎ. “ಪುಣ್ಯ ಅಲ್ದೆ ಇನ್ನೇನು? ಈ ಮೂಲೇಗೆ ಅಮೇರಿಕದೋರು ಬರ್‍ತಾರೆ ಅಂದ್ರೆ ಅದೇನ್ ಸಾಮಾನ್ಯಾನ” ಎಂದು ಉಬ್ಬಿಹೋದ. ಬಿಳಿಯರೂ- ಅದೇ ಅಮರಿಕದವರು- “ಬ್ಯೂಟಿಫೂಲ್ ಏರಿಯಾ” ಎಂದು ಉದ್ಗರಿಸುತ್ತಿದ್ದರು. ಇದರಿಂದ ಎಂ.ಎಲ್‍.ಎ. ಮತ್ತಷ್ಟು ಉಬ್ಬಿಹೋದ.

ಶಬರಿಗೆ ಇವರೆಲ್ಲ ಏನು ಮಾತಾಡುತ್ತಿದ್ದಾರೆ. ಏನು ಮಾಡುತ್ತಾರೆ ಎಂದು ಸ್ಪಷ್ಟವಾಗಲಿಲ್ಲ. ಆದರೆ ಎಂ.ಎಲ್‍.ಎ. “ಹೆಚ್ಚು ಕಡಿಮೆ ಒಂದ್‍ ತಿಂಗಳೊಳ್ಗಡೆ ಕೆಲ್ಸ ಶುರು ಮಾಡ್ತಾರೆ ನರಸಿಂಹರಾಯಪ್ಪ” ಎಂದದ್ದು ಮಾತ್ರ ಸ್ಪಷ್ಟವಾಗಿತ್ತು. ಇಲ್ಲಿ -ಈ ತೋಪಿನ ಸ್ಥಳದಲ್ಲಿ. ಏನೋ ಕೆಲಸ ಶುರುವಾಗುತ್ತದೆಯೆಂಬ ಸೂಚನೆ ಸಿಕ್ಕಿತ್ತು.

ರಾತ್ರಿ, ಶಾಲೆಯಲ್ಲಿ ಸೇರಿದಾಗ ಶಬರಿ ತಾನು ಕಂಡದ್ದು, ಕೇಳಿದ್ದು- ಎಲ್ಲವನ್ನೂ ವಿವರಿಸಿದಳು. ಸೂರ್ಯ ಮತ್ತು ನವಾಬ್‍ಗೆ ಈ ಭೂಮಿ ಬೇರೆಯವರ ಪಾಲಾಗುತ್ತಿರಬಹುದೆಂಬ ಅನುಮಾನ ಬಂದಿತು. ಅದರಲ್ಲೂ ಬಿಳಿಯರು ಬಂದಿದ್ದರು ಎಂದ ಮೇಲೆ ಯಾವುದಾದರೂ ಬಹುರಾಷ್ಟ್ರೀಯ ಕಂಪನಿಗೆ ಈ ಜಾಗವನ್ನು ಸರ್ಕಾರ ಕೂಡುತ್ತಿರಬಹುದೆ ಎಂಬ ಊಹಯನ್ನೂ ಮಾಡಿದರು ಅವರು ನಗರ ಬಿಟ್ಟು ಇಷ್ಟು ದೂರ ಬರುತ್ತಾರೆಯೆ ಎಂಬ ಪ್ರಶ್ನೆಯೂ ಎದುರಾಯಿತು. ಗಲಾಟೆಯಿಲ್ಲದ ಪ್ರದೇಶ. ಕಡಿಮೆ ಬೆಲೆ- ಎಂದೆಲ್ಲ ಯೋಚಿಸಿರಬಹುದೆಂಬ ಉತ್ತರವೂ ಹೊಳಯಿತು. ಆದರ ಯಾವುದೂ ಸ್ಪಷ್ಟವಿಲ್ಲ.

ಸೂರ್ಯ ಒಂದು ಉಪಾಯ ಮಾಡಿದ. ಮಾರನೇ ದಿನವೇ ಪೂಜಾರಪ್ಪನ ಜೊತೆ ಮಾತಾಡಿದ. “ಏನಾದ್ರು ಮಾಡಿ ವಿಷ್ಯ ತಿಳ್ಕೋಬೇಕಲ್ಲ” ಎಂದು ಒತ್ತಾಯಿಸಿದ. ಪೂಜಾರಪ್ಪ ಅಳೆದೂ ಸುರಿದು ಮೂರ್‍ನಾಲ್ಕು ದಿನ ತೆಗೆದುಕೊಂಡ. ಹಿಂಜರಿಯುತ್ತಲೇ ಒಡೆಯರ ಮನೆ ಹತ್ತಿರ ಬಂದ.

“ಏನ್ಲಾ ಪೂಜಾರಪ್ಪ, ಮಗಳ್‍ಮದ್ವೆ ಮಾಡಿದ ಮ್ಯಾಕೆ ಮರ್‍ತೆ ಬಿಟ್ಟೇನ್ಲ ನಮ್ಮನ್ನ” ಎಂದು ನರಸಿಂಹರಾಯಪ್ಪ ಗದರಿದ.

“ನಿಮ್ಮನ್ನೆಲ್ಲಾನ ಮರ್ಯಾದುಂಟಾ ದಣೇರ. ನೀವೇನ್‍ ತಪ್‍ ತಿಳ್ಕಂಡಿವ್ರೊ ಅಂಬ್ತ ಹೆದ್ರಿಕಂಡ್ ಬರ್‍ಲಿಲ್ಲ ಆಟೇಯ” ಎಂದು ಪೂಜಾರಪ್ಪ ಸಮಜಾಯಿಷಿ ನೀಡಿದ. ಅಷ್ಟರಲ್ಲಿ ಹೊರಬಂದ ಸಾವಿತ್ರಮ್ಮ “ತೆಪ್ ತಿಳ್ಕಂಡಿದ್ರೆ ನಾನೇ ಬಂದು ಸೀರೆಕುಪ್ಪಸ ಕೂಡ್ತಿದ್ನೇನು” ಎಂದಳು. ಪೂಜಾರಪ್ಪ “ಅದೆಲ್ಲ ನಮ್ಮ ಪುಣ್ಣೇವು ಕಣ್ರವ್ವ” ಎಂದು ವಿನೀತನಾಗಿ ನುಡಿದ. “ಆಟ್‍ ಬುದ್ದಿ ಇದ್ರೆಸಾಕು” ಎಂದ ನರಸಿಂಹರಾಯಪ್ಪ. “ಆಟ್ ಬುದ್ದಿ ಇಲ್ದೆ ಏನ್‍ ದಣಿ. ನಂಗೆ ಯೆದ್ರಿಕೆ ಆಗಿತ್ತು. ಅದ್ಕೇ ಬಂದಿರ್‍ಲಿಲ್ಲ. ಏನೋ ಎಲ್ಲಾ ವೊಟ್ವೇಗ್ ಆಕ್ಕಂಡು ಮದ್ಲಿನಂಗೇ ಮಾತಾಡ್ಸಿದ್ರಿ, ನನ್ ಪುಣ್ಣೇವು” ಎಂದು ಮತ್ತೆ ಒತ್ತಿ ಹೇಳಿದ.

ನರಸಿಂಹರಾಯಪ್ಪ ಉಬ್ಬಿಹೋದ. “ಪುಣ್ಣೇವು ಇಷ್ಟಕ್ಕೇ ನಿಲ್ಲಲ್ಲ ಕಣಯ್ಯ. ನಮ್‍ ಊರಿಗೆ ಅಮರಿಕಾದೋರ್‍ ಬತ್ತಾರೆ. ಅದೇ, ನಿಮ್ಮ ಅಟ್ಟತಾವ್‍ ಒಂದ್ ತೋಪು, ಬಯಲು, ಎಲ್ಲಾ ಐತಲ್ಲ, ಅದೆಲ್ಲ ಅವ್ರೇ ತಗಂಡು ಏನೇನೋ ಕಟ್ತಾರಂತೆ, ಏನೇನೋ ತಯಾರ್‍ ಮಾಡ್ತಾರಂತೆ. ನಿಮ್ಮೋರ್‍ಗೂ ಕೆಲ್ಸ ಸಿಗ್ತೈತೆ ಬಿಡು.” ಎಂದು ಉತ್ಸಾಹದಿಂದ ವಿವರಿಸಿದ.

“ಅಂಗಾ ದಣೇರ. ನಮ್ಗೇನ್‍ ಕೆಲ್ಸ ಕೊಟ್ಟಾರು ದಣೇರ” ಎಂದು ಪೂಜಾರಪ್ಪ ಕೇಳಿದ. ಆಗ ನರಸಿಂಹರಾಯಪ್ಪ “ಕೆಲ್ಸ ಕೊಡಾದೇನ್‍ ನನ್‍ ಕೈಯ್ಯಾಗೈತ? ಅವ್ರ್ ಅದೇನ್‍ ಮಾಡ್ತಾರೊ ಏನ್‍ ಕೊಡ್ತಾರೊ ನಾನ್ಯಾರ್‍ಲ ಕೇಳಾಕೆ” ಎಂದು ಕಡ್ದಿತುಂಡಾದಂತೆ ಹೇಳಿದರು. ಮತ್ತೇನೂ ಕೇಳಲಾಗದೆ ಪೂಜಾರಪ್ಪ “ಬತ್ತೀನಿ ದಣಿ” ಎಂದು ಹೂರಟ. “ಮನೇಗ್ ಬಂದಾನ್ ಬರೀ ಕೈಯ್ಯಾಗ್ ಯಾಕ್ಲ ವೋಗ್ತೀಯ” ಎಂದು ನರಸಿಂಹರಾಯಪ್ಪ ಸಾವಿತ್ರಮ್ಮನಿಗೆ “ಏನಾರ ರಾಗಿನೊ ಅಕ್ಕಿನೋ ಕೊಟ್‍ಕಳ್ಸು. ಬಾಳಾದಿನದ್‍ ಮ್ಯಾಗ್‍ ಬಂದವನೆ” ಎಂದ. ಸಾವಿತ್ರಮ್ಮ ಅಕ್ಕಿಯನ್ನೇ ತಂದುಕೊಟ್ಟಳು. ಪೂಜಾರಪ್ಪ ತೆಗೆದುಕೊಂಡು ಕೈಮುಗಿದು ಹೊರಟ.

ಪೂಜಾರಪ್ಪನಿಂದ ಎಷಯ ತಿಳಿದ ಸೂರ್ಯ ಮುಂದಿನ ಅಪಾಯವನ್ನು ಮನಗಂಡ. ರಾತ್ರಿ ಕಟ್ಟೆಯ ಹತ್ತಿರ ಎಲ್ಲರನ್ನೂ ಕೂಡಿಸಿಕೂಂಡು ವಿವರಿಸಿದ. ಅಮೆರಿಕದ ಕಂಪನಿ ಇಲ್ಲಿಗೆ ಬಂದರೆ ಅದರ ಮೇಲೆ ಸರ್ಕಾರದ ನಿಯಂತ್ರಣ ಇರೊಲ್ಲ ಎಂಬ ಅಂಶದಿಂದ ಹಿಡಿದು ಎಲ್ಲ ಅಪಾಯಗಳನ್ನೂ ಸರಳವಾಗಿ ವಿವರಿಸಿದ. ಆಗ ಶಬರಿ ಹೇಳಿದಳು-

“ನೀನ್‍ ಯೇಳಾದೆಲ್ಲ ದೊಡ್ಡ ವಿಸ್ಯ. ನಮಗೆ ನಮ್ ತೋಪುಬೇಕು. ಅದನ್ನ ನಾವ್‍ ಬಿಟ್‍ಕೂಡಕೊಡ್ದು. ಆಟೇಯ.”

“ನಾನೂ ಅದನ್ನೇ ಹೇಳೋದು. ಅದನ್ ಹೇಳೋಕೆ ಹಿನ್ನೆಲೆ ಹೇಳ್ತಾ ಇದ್ದೆ.” ಎಂದು ಸೂರ್ಯ ಸ್ಪಷ್ಟಪಡಿಸಿದ.

ಸಣ್ಣೀರ ಒಂದು ಪ್ರಶ್ನೆ ಕೇಳಿದ- “ಅಲ್ಲ ಸೂರ್ಯಪ್ಪ, ಅವ್ರ್ ಯಾರೋ ಬಂದಾಗ ನಮ್ಗೂ ಕೆಲ್ಸ ಕೂಡ್ತಾರೆ ಅಲ್ವ? ಅವಾಗ ಈ ಒಡಯನ್‍ ಉಸಾಬರೀನೇ ಇರಾಕಿಲ್ಲ ಏನಂಬ್ತೀಯ?”

ಸೂರ್ಯ ವಿವರಿಸಿದ-“ಬಾಣಲೆಯಿಂದ ಬೆಂಕಿಗ್‍ ಬಿದ್ದಂತೆ ಆಗುತ್ತೆ ಅಷ್ಟೆ. ಇಷ್ಟಕ್ಕೂ ಇವ್ರ್‍ ಕೊಡೋದೂ ಕೂಲಿ ಕೆಲ್ಸಾನೇ. ಇನ್ನೊಂದು ವಿಷ್ಯ ನೆನಪಿರ್‍ಲಿ. ಬಾಣಲೆ-ಬೆಂಕಿ ಬೇರ್‍ ಬೇರೆ ಆಗಿರೋಲ್ಲ. ಒಂದಕ್ಕೆ ಇನ್ನೊಂದ್‍ ಬೇಕು. ಅದ್ರಿಂದ ಒಡೆಯನಿಂಂದ ತಪ್ಪಿಸ್ಕೊಳ್ತೀನಿ ಅಂತ ತಿಳ್ಕೋಬೇಡಿ. ನೀವೇ ಒಡೆಯರಾಗ್ಬೇಕು. ಈ ತೋಪಿಗೆ ಬಯಲಿಗೆ ನೀವೇ ಒಡೆಯರು ಅಂತ ಅವ್ರ್ ಮುಂದೆ ಹೇಳ್ಬೇಕು.”

“ಯೇಳಿದ್ ಕೂಡ್ಲೆ ಒಡೇರಾಗಾಕಾಯ್ತದ”- ಪೂಜಾರಪ್ಪ ಪ್ರಶ್ನಿಸಿದ.

“ಇಲ್ಲ. ಹೇಳಿದ್ರಷ್ಟೇ ಸಾಲ್ದು. ನಮ್ಮ ಹಕ್ಕನ್ನ ಸ್ಥಾಪಿಸ್ಬೇಕು. ನೋಡಿ, ಈ ತೋಪನ್ನ ಅವ್ರ್ ಬೆಳ್ಸಿದಾರ? ತಿಮ್ಮರಾಯಿ, ನೀನು ದೊಡ್ಡೋನು, ನೀನೇ ಹೇಳಪ್ಪ?”- ಸೂರ್ಯ ಕೇಳಿದ.

“ಅವ್ರ್ ಯಾಕ್ ಬೆಳುಸ್ತಾರೆ? ಅಲ್ಲಿ ಗಿಡಪಡ ಬೆಳ್ಯಾದ ನೋಡಿ ನಾವೇ ಉಡುಗ್ರಾಗಿದ್ದಾಗ್ನಿಂದ ಜ್ವಾಪಾನ ಮಾಡಿದ್ವಿ, ಈ ಮಟ್ಟಕ್‍ ಬೆಳುದ್ವು”- ತಿಮ್ಮರಾಯಿ ಹೆಮ್ಮೆಯಿಂದ ಹೇಳಿದ.

“ಅದಕ್ಕೇ ನಾನ್‍ ಹೇಳೋದು. ಇದು ನಿಮ್ಮದು. ನಿಮಿಗ್‍ ಸರಿದ್ದು”- ಮತ್ತೆ ಸೂರ್ಯ ಹೇಳಿದ.

“ಅದ್ಸರಿ, ನಮ್ದು ನಮಿಗ್ ಕೊಡ್ರಿ ಅಂಬ್ತ ಕೇಳಾಕೋಗಿ ಇದ್‍ಬದ್ ಕೂಲಿ ಕೆಲ್ಸಾನೂ ಕಳ್ಳಂಡ್ರೆ?” ಎಂದು ಒಬ್ಬಾತ ಯಾವತ್ತಿನ ಆತಂಕವನ್ನು ತೆರೆದಿಟ್ಟ.

“ಒಂದೆರಡು ದಿನ ಅವ್ರ್ ಧಿಮಾಕ್ ಮಾಡ್‍ಬಹುದು. ಆದ್ರೆ ಆಮೇಲ್ ಕೂಲಿ ಕೆಲ್ಸಕ್‍ ಯಾರ್‍ನ ಕರ್‍ಕಂಡ್ ಬರ್‍ತಾರೆ? ನೀವಿಲ್ದೆ ಇದ್ರೆ ಅವ್ರ್‌ಗೆ ವನವಾಸವೇ ಗತಿ”- ಸೂರ್ಯ ಧೈರ್‍ಯ ತುಂಬಿದ.

“ನಮ್‍ ಬದ್ದು ಬ್ಯಾರೇರ್ ಕೂಲೀಗ್ ಬಂದ್ರೆ?”- ಸಣ್ಣೀರ ಕೇಳಿದ.

“ಅದಕ್ಕೇ, ಎಲ್ರೂ ಒಟ್ಟಾಗೇ ಭೂಮಿ ಕೇಳ್ಬೇಕು. ಬೆಟ್ಟದ ಆ ಕಡೆ ಇರೋರು, ಊರ್‍ನಲ್ ಇರೋ ಬಡಜನ ಎಲ್ರೂ ಒಟ್ಟಿಗೆ ಸೇರ್‍ಬೇಕು. ನಾಳೆ ಅವ್ರ್ ಜೊತೇನೂ ಮಾತಾಡೋಣ”; ಎಂದು ಸೂರ್ಯ ಹೇಳಿದಾಗ ಸ್ವಲ್ಪ ಸಮಾಧಾನ ಮೂಡಿತು.

ಮಾರನೇ ದಿನವೇ ಸೂರ್ಯ ಮತ್ತು ನವಾಬ ಬೆಟ್ಟದಾಚೆಯ ಬುಡಕಟ್ಟಿನವರನ್ನು ಭೇಟಿಯಾದರು. ಊರಲ್ಲಿರುವ ರಾಮಣ್ಣ, ತಿಮ್ಮಣ್ಣ ಮುಂತಾದ ಬಡವರ ಪ್ರತಿನಿಧಿಗಳ ಜೊತ ಮಾತಾಡಿದರು. ಎಲ್ಲರೂ ಹಟ್ಟಿಯಲ್ಲಿ ಸೇರುವುದೆಂದು ತೀರ್ಮಾನವಾಯಿತು.

ಅವರೆಲ್ಲ ಬರುತ್ತಾರೆಂದು ಗೊತ್ತಾದಾಗ ಶಬರಿ ಸಂಭ್ರಮದಿಂದ ಇತರೆ ಹೆಂಗಸರಿಗೆ ಹೇಳಿದಳು- “ಇವತ್ತು ಎಲ್ರೂ ಕಟ್ಟೆತಾವ ಒಟ್ಟಿಗೆ ಉಂಬಾನ. ಊರಿನ್ ಜನ, ಬೆಟ್ಟದಾಕಡೆ ಜನ ಬತ್ತಾರೆ. ಏನಾರ ಪಾಯ್ಸಗೀಯ್ಸ ಮಾಡಾನ!!

ಶಬರಿಯ ಮಾತಿಗೆ ಎಲ್ಲರೂ ಒಪ್ಪಿದರು. ತಂತಮ್ಮ ಮನೆಯಲ್ಲಿರುವ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ ಒಂದೇ ಕಡೆ ಅಡುಗೆ ಮಾಡುವ ತೀರ್ಮಾನವಾಯಿತು. ಅದರಂತೆ ರಾತ್ರಿಗೆ ಪಾಯಸ ಸಿದ್ಧವಾಯಿತು.

ಊರಿನ ರಾಮಣ್ಣ, ತಿಮ್ಮಣ್ಣ ಮುಂತಾದ ಏಳಂಟು ಜನರು ಬಂದರು. ಬೇರೆ ಬುಡಕಟ್ಟಿನ ಗೋವಿಂದ, ಹನುಮಂತ. ಮುಂತಾದವರೂ ಬಂದಿದ್ದರು. ಎಲ್ಲಾ ಕೂತಾಗ ಶಬರಿ “ಮದ್ಲು ಉಂಬಾಕ್‍ ಇಡ್ತೀವಿ. ಆಮ್ಯಾಲ್ ಮಾತುಕತೆ” ಎಂದಳು.

ಎಲ್ಲರೂ ಒಟ್ಟಿಗೆ ಕೂತು ಊಟ ಮಾಡಿದರು. ಊರಿನ ರಾಮಣ್ಣ “ಇಂಗೇ ಆವಾಗಾವಾಗ ಕರ್‍ದು ಉಂಬಾಕಿಡವ್ವ ಶಬರಿ” ಎಂದ ಸಂತೋಷದಿಂದ. ಆಕೆ “ನೀವೂ ಆಟೇಯ. ನಮ್ಮನ್ನೂ ಊರಿಗ್ ಕರ್‍ದು ಉಂಬಾಕಿಡ್ರಿ” ಎಂದಳು. “ನಾಳೀಕೆ ಬರ್ರವ್ವ ಅದಕ್ಕೇನು! ನಮ್‍ ಕೇರಿನಾಗೆ ಸಮಾರಾದನೆ ಮಾಡಿಸ್‍ಬಿಡ್ತೀನಿ” ಎಂದ ರಾಮಣ್ಣ. ತಿಮ್ಮಣ್ಣ “ನಾವ್‍ನಾವ್‍ ಒಟ್ಟಿಗೆ ಇದ್ರೇನೆ ಚಂದ. ಯಾವತ್ ಬತ್ತೀರ ಯೇಳ್ರಿ” ಎಂದು ಕೇಳಿಯೇಬಿಟ್ಟ. ಆಗ ಸೂರ್ಯ “ಮನಸಿದ್‍ ಕಡೆ ಮಾರ್‍ಗ ಇರುತ್ತೆ ಅನ್ನೋದ್ಕೆ ಇದೇ ಸಾಕ್ಷಿ” ಎಂದು ಮೆಚ್ಚುಗೆ ಸೂಚಿಸಿದ.

ಊಟವಾದ ಕೂಡಲೇ ನವಾಬ ಒಂದು ಸಲಹೆಕೊಟ್ಟ- “ಮೊದ್ಲು ನಮ್ ಹಾಡಿನಿಂದ ಶುರುಮಾಡೋಣ. ಏನಂತೀಯ ಸೂರ್ಯ?” ಸೂರ್ಯ “ಆಗಲಿ” ಎಂದ. ನವಾಬ “ಗೌರಿ, ಶಬರಿ, ಸಣೀರ ರೆಡಿ” ಎಂದ. ಶಬರಿ ಮತ್ತು ಗೌರಿಯ ನೇತೃತ್ವದಲ್ಲಿ ಹೆಂಗಸರು ಮತ್ತು ಸಣ್ಣೀರನ ನೇತೃತ್ವದಲ್ಲಿ ಗಂಡಸರು ನಿಂತುಕೊಂಡರು.

“ಈ ಭೂಮಿ ನಮ್ಮದು, ಆಕಾಶ ನಮ್ಮದು, ಈ ಬಯಲು ನಮ್ಮದು, ತೋಪು ನಮ್ಮದು” ಎಂದು ಉತ್ಕಟತೆಯಿಂದ ಹಾಡಿದರು. ಇದರ ಫಲವಾಗಿ ಉತ್ಕಟ ವಾತಾವರಣವೇ ನಿರ್‍ಮಾಣವಾಯಿತು. ಆನಂತರ ಸೂರ್ಯ ತೋಪು ಮತ್ತು ಬಯಲಿಗೆ ಎದುರಾಗಿರುವ ಕಂಟಕವನ್ನು ವಿವರಿಸಿದ. ಅದನ್ನು ಪಡೆದು ನೀವೇ ಒಡೆಯರಾಗಬೇಕು- ಎಂದ. ಬಡವರೇ ಭೂಮಿಯ ಒಡೆಯರು- ಎಂದು ಒತ್ತಿ ಹೇಳಿದ. ಆಗ ಶಬರಿ “ದುಡಿಯೋರೆ ಒಡೇರು” ಎಂದು ಉತ್ಸಾಹದಿಂದ ಘೋಷಿಸಿದಳು. ಎಲ್ಲರ ಮನಸಿನಲ್ಲೂ ತೋಪು ತುಂಬಿಕೊಂಡಿತ್ತು. ಆದರೆ ಪಕ್ಕದಲ್ಲೇ ಬಯಲು ಇತ್ತು!

ಮತ್ತದೇ ಪ್ರಶ್ನೆ- “ನಾವು ತಿರುಗಿ ಬಿದ್‍ಮೇಲೆ ಊರಾಗ್ ಬದ್ಕಾದೆಂಗೆ? ಆ ಒಡೆಯ ಸುಮ್ಕೆ ಬಿಡ್ತಾನ? ನಿಮ್ಗಾನ ದೂರ್‍ದಾಗೊಂದು ನೆಲೆ ಅಂಬ್ತ ಐತೆ. ನಾವು ಊರ್‍ನಾಗಿರೊ ಬಡವರು ನೆಲೆ ಕಳ್ಕಮಂಗಾದ್ರೆ?” – ರಾಮಣ್ಣ, ತಿಮ್ಮಣ್ಣ ತಮ್ಮ ಅಳುಕನ್ನು ಪ್ರಾಮಾಣಿಕವಾಗಿ ಹೇಳಿದರು.

ಸೂರ್ಯನಿಗೆ ಅದರಲ್ಲೂ ಸತ್ವವಿದೆ ಅನ್ನಿಸಿತು. ಅಷ್ಟರಲ್ಲೇ ಶಬರಿ “ನಿಮ್ಗೆ ಊರಾಗ್ ನೆಲೆ ಇಲ್ಲ ಅಂದ್ರೆ ಇಲ್ಲೇ ನಾವ್ ಕರ್‍ಕಂಬ್ತೀವಿ” ಎಂದಳು. ಇದರಿಂದ ಸಂತೋಷವಾದರೂ ವಸ್ತುಸ್ಥಿತಿಯನ್ನು ಬಿಟ್ಟು ಮುಂದೆ ಹೋಗುವುದಕ್ಕೆ ಮತ್ತಷ್ಟು ಚರ್ಚೆಯ ಅಗತ್ಯವಿತ್ತು. ಸೂರ್ಯ ಚರ್ಚೆಗೆ ದಾರಿ ತೋರಿದ. “ಯಾರ್‍ಯಾರಿಗೆ ಏನೇನು ಅನ್ಸುತ್ತೆ ಹಾಗೇ ಹೇಳಿ. ಯಾವ್ದೂ ಮುಚ್ಚಿಟ್ಕೋಬೇಡಿ” ಎಂದ.

ಎಲ್ಲರಿಗೂ ಭೂಮಿ ಬೇಕಾಗಿತ್ತು. ತೋಪು ತಮ್ಮದೇ, ಬಯಲಭೂಮಿ ತಮ್ಮದೇ ಎಂಬ ಬಗ್ಗೆ ಯಾರಲ್ಲೂ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ ಬಹಿರಂಗವಾಗಿ ಈ ಭೂಮಿ ನಮ್ಮದು, ಈ ಬಯಲು ನಮ್ಮದು, ಈ ತೋಪು ನಮ್ಮದು- ಎಂದು ಕೇಳಿದ ನಂತರದ ಬೆಳವಣಿಗೆಗಳ ಬಗೆ ಸಹಜ ಆತಂಕವಿತ್ತು. ಅದನ್ನು ಅವರೆಲ್ಲ ಹೇಳಿದರು. ಸೂರ್ಯ ಅವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದ.

“ಒಮ್ಮೆ ಮುಖಾಮುಖಿ ಆಗದಿದ್ದರೆ ಭವಿಷ್ಯದಲ್ಲಿ ಬಳಕಿಲ್ಲ. ಗುಪ್ತ ಗುಲಾಮಗಿರಿಯೇ ಗತಿ. ಮೇಲ್ನೋಟಕ್ಕೆ ನಿಮಗೆಲ್ಲ ಸ್ವಾತಂತ್ರ್ಯ ಇದ್ದಂತೆ ಕಾಣ್ಸುತ್ತೆ. ಊರು ಬಿಟ್ಟು ಕಾಡಲ್ಲಿರೋರ್‍ಗೆಲ್ಲ ಸ್ವಾತಂತ್ರ್ಯ ಇದೆ ಅಂತ ಕೆಲವರು ಬುದ್ಧಿವಂತ್ರು ಹೇಳ್ತಾರೆ. ಇನ್ನು ಊರು ಅನ್ನೋದೆ ಸ್ವತಂತ್ರ ಪ್ರದೇಶ ಅನ್ನೋರು ಇದ್ದಾರ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಊರು ಮತ್ತು ಕಾಡು ಎರಡೂಕಡೆ ಇರೋರು ವ್ಯವಸ್ಥೆಯ ಒಳ ಸುಳೀಲಿದಾರೆ. ಹೀಗಾಗಿ ಇಬ್ಬರೂ ಗುಪ್ತ ಗುಲಾಮಗಿರೀಲಿದಾರೆ. ಈ ವ್ಯವಸ್ಥಯೇ ಗುಪ್ತ ಗುಲಾಮಗಿರಿ ವ್ಯವಸ್ಥೆ. ಇದ್ರಿಂದ ಇವತ್ತಲ್ಲ ನಾಳೆ ಹೊರಬರಬೇಕು.”

-ಈ ವಿಚಾರವನ್ನು ಮೊದಲು ಹೀಗೆಯೇ ಹೇಳಿದ. ಆಮೇಲೆ ಪ್ರಶ್ನೆಗಳು, ಉತ್ತರಗಳು ನಡೆದವು. ತನ್ನ ವಿಚಾರವನ್ನು ಅವರಿಗೆ ಅರ್ಥವಾಗೋ ಹಾಗೆ ಮತ್ತೆ ಮತ್ತೆ ಹೇಳಿದ. “ಊರಿನ ಆಸ್ತಿವಂತರು, ಸರ್ಕಾರದ ಅಧಿಕಾರಸ್ಥರು, ಮೌಢ್ಯ ಬಿತ್ತೊ ಜನರು, ಎಲ್ಲರೂ ನಿಮ್ಮನ್ನ ಒಂದಲ್ಲ ಒಂದು ರೀತಿ ಗುಲಾಮರನ್ನಾಗಿ ಮಾಡ್ತಾರೆ. ಈಗ ವಿದೇಶ ಸಾಹುಕಾರರು ಬಂದು ಮತ್ತಷ್ಟು ಗುಲಾಮರನ್ನಾಗಿ ಮಡ್ತಾರೆ” ಎಂದೆಲ್ಲ ವಿವರಿಸಿದ.

ಕಡೆಗೆ, ಮೊದಲು ಸೂರ್ಯ ಮತ್ತು ನವಾಬ್‍ ಈ ವಿಷಯವನ್ನು ಊರ ಒಡೆಯರ ಬಳಿ ಪ್ರಸ್ತಾಪಿಸಬೇಕೆಂದೂ ಆನಂತರದ ಬಳವಣಿಗೆ ಗಮನಿಸಿ ಒಟ್ಟಾಗಿ ತೀರ್ಮಾನ ತಗೆದುಕೊಳ್ಳಬೇಕೆಂದೂ ನಿರ್ಧಾರವಾಯಿತು.

ಶಬರಿಗೆ ಅಷ್ಟು ಸಮಾಧಾನವಾಗಿರಲಿಲ್ಲ. ಆನಂತರ ತನ್ನ ಮನದಾಳವನ್ನು ಸೂರ್ಯನ ಎದುರು ತೆರೆದಿಟ್ಟಳು.

“ನಾವಲ್ಲ ಒಟ್ಗೆ ಒಡೇರ್‌ತಾವೋಗಿ ಕೇಳ್ಬೇಕಿತ್ತು. ಇನ್ ಕಾಯೋದ್ರಾಗೆ ಒಳ್ಳೇದೇನೊ ಕಾಣ್ಸಾಕಿಲ್ಲ ನಂಗೆ.”

“ಶಬರೀನೇ ಕಾಯೊಲ್ಲ ಅಂದ್ರೆ ಹೇಗೆ?” ಎಂದು ಸೂರ್ಯ ನಕ್ಕ.

“ಕಾಯೋದು ಅಂದ್ರೆ ಸುಮ್ಕೆ ಇರಾದಲ್ಲ. ಕಾಯೋದು ಕುದಿಯೋದು ಎಲ್ಡೂ ಒಂದೇ. ಅದು ಕಾಯೋರ್‍ಗಾಟೇ ಗೊತ್ತಾಗ್ತೈತೆ”- ಶಬರಿ ನಿಖರವಾಗಿ ನುಡಿದಳು.

“ಸರ್‍ಯಾಗ್ ಹೇಳ್ದೆ ಶಬರಿ. ಆದ್ರೆ ಇದು ಒಬ್ಬ ವ್ಯಕ್ತಿ ವಿಷಯ ಅಲ್ಲ, ಒಂದು ಸಮೂಹದ ವಿಷಯ. ಆದ್ರಿಂದ ಎಲ್ರೂ ಕುದಿಯೋವರ್‍ಗೆ ಕಾಯ್ಬೇಕು”- ಸೂರ್ಯ ವಸ್ತುಸ್ಥಿತಿಯನ್ನು ವಿವರಿಸಿದ.

ಶಬರಿ ಮಾತಾಡಲಿಲ್ಲ. ಆಕೆಯ ಮುಖದಲ್ಲಿ ಬಿಗುವಿತ್ತು. ಒಳಗೆ ಲಾವಾರಸದ ಕುದಿತವಿತ್ತು.

ಕೆಂಡ ಮುಚ್ಚಿದ ಕೊಂಡ;

ಬೆಂಕಿಯ ಮನೆಯ ಮುಚ್ಚಿದ ಬಾಗಿಲು;
ಕಾಯುತ್ತಿರುವ ಭಾವ; ಕುದಿವ ಜೀವ.

ಸೂರ್ಯ ದಿಟ್ಟಿಸಿದ; ಬಿಗಿ ಮುಖದ ಭಾವಕ್ಕೆ ಕಚಗುಳಿಯಿಡಲೆಂದು ಹೇಳಿದ- “ಆದ್ರೆ ಒಂದ್ ವಿಷ್ಯ. ಮದ್ವೆ ಆಗೋಕೆ ಇಷ್ಟು ಕಾಯ್ಸೊಲ್ಲ.” ಶಬರಿ ದಿಟ್ಟಿಸುತ್ತ ನಗೆಮುಖ ಮಾಡಿದಳು. “ಆವಿಷ್ಯ ಮರ್‍ತೇಬಿಟ್ಟಿದ್ಯೇನೊ ಅಂದ್ಕೊಂಡಿದ್ದೆ” ಎಂದಳು. “ಎಲ್ಲಾದ್ರೂ ಉಂಟಾ ಶಬರಿ? ಅದು ಒಳ್ಗಡೆ ಕೊರೀತಾನೇ ಇರುತ್ತೆ. ಆದ್ರೆ ಮದ್ವೆ ನಮ್ ಕೈಯ್ಯಲ್ಲಿದೆ. ಹೋರಾಟ ನಮ್ಮಿಬ್ರ ಕೈಯ್ಯಲ್ಲಷ್ಟೇ ಇಲ್ಲ. ಅಲ್ವಾ?” ಎಂದು ಪ್ರಶ್ನಾರ್ಥಕವಾಗಿ ಶಬರಿಯ ಮುಖ ನೋಡಿದ ಸೂರ್ಯ. “ಅದು ಗೊತ್ತು” ಎಂದಳು ಶಬರಿ.

ಶಬರಿಯೊಳಗೆ ಸೂರ್ಯ ಹುಟ್ಟುವುದನ್ನು ಕಂಡು ಭಾವಾವೇಶದಿಂದ ಬಿಗಿದಪ್ಪಿದ.
* * * *

ಹೊಲದಲ್ಲಿ ಕೆಲಸ ನಡೆಯುತ್ತಿತ್ತು. ಒಡೆಯ ಬದುವಿನ ಮೇಲೆ ನಿಂತು ಸೂಚನೆ ಕೊಡುತ್ತಿದ್ದ. ಆನಂತರ ಬಾವಿಯ ಬಳಿಯಿದ್ದ ಕರೆಂಟು ರೂಮಿನ ಮುಂದೆ ಬಂದು, ಆಳು ಹಾಕಿದ ಕುರ್ಚಿಯಲ್ಲಿ ಕೂತ. ಒಮ್ಮೆ ದಿಟ್ಟಿಸಿದ. ನೂರಾರು ಎಕರೆ ಜಮೀನು. ಇಂಥದೇ ಜಮೀನು ಮೂರ್‍ನಾಲ್ಕು ಕಡೆ ಇದೆ. ಕೆಲಸ ಮಾಡುವವರ ಸಂಖ್ಯೆಯೂ ನೂರಾರು.

ಕೂಲಿಗಾರರಲ್ಲಿದ್ದ ಶಬರಿ ಆಗಾಗ್ಗೆ ಈತನ ಕಡೆ ನೋಡುತ್ತಿದ್ದಳು. ಯಾಕೆ ಹೀಗೆ ಎಂದುಕೊಂಡ. ಶಬರಿ ಈತನ ಕಡೆಗೊಮ್ಮೆ ದೂರಕ್ಕೊಮ್ಮೆ ನೋಡುತ್ತಿದ್ದಳು. ಒಡೆಯ ಅವಳ ನೋಟಕ್ಕೆ ತನ್ನದೇ ಅರ್ಥಕೊಡುತ್ತ ಮೀಸೆಯನ್ನು ಸರಿಯಗಿ ತೀಡುತ್ತ ಅವಳ ಕಡೆ ನೋಡಿದ. ಅವಳು ದೃಷ್ಟಿ ಬದಲಿಸಿ ದೂರಕ್ಕೆ ನೋಡಿದಳು. ಆಕೆ ಯಾರೂ ಇಲ್ಲದ ಜಾಗವನ್ನು ಹುಡುಕುತ್ತಿರಬಹುದೇ ಎಂದುಕೊಂಡು ನೋಡಿದ. ಶಬರಿ ಹಸನ್ಮುಖಿಯಾಗಿದ್ದಳು. ಖುಷಿಗೊಂಡು ದಿಟ್ಟಿಸುತ್ತಿರುವಾಗ ಸೂರ್ಯ-ನವಾಬ ಹತ್ತಿರ ಬಂದಿದ್ದರು. “ನರಸಿಂಹರಾಯಪ್ಪನೋರೆ” ಎಂದು ಕರೆದ ಸೂರ್ಯ “ನಮಸ್ಕಾರ” ಎಂದ. ನರಸಿಂಹರಾಯಪ್ಪ ಶಬರಿಯಿಂದ ದೃಷ್ಟಿಕಿತ್ತು “ಬರ್ರಪ್ಪ ಬರ್ರಿ” ಎಂದು ಕರೆದ. ಮತ್ತೆ ಆಕಡೆ ನೋಡಿದ. ಇದನ್ನು ಗಮನಿಸಿದ್ದ ಸೂರ್ಯ “ಶಬರಿ ನಮ್ಮನ್‍ ಕಾಯ್ತಾ ಇದ್ದಳು. ನಿಮ್‍ ಜೊತೆ ಒಂದು ವಿಷ್ಯ ಮಾತಾಡೋಕ್ ಬರ್‍ತೀವಿ ಅಂತ ಮೊದ್ಲೇ ಹೇಳಿದ್ವಿ” ಎಂದು ಹೇಳಿ ಒಡೆಯನಿಗೆ ನಿರಾಶೆ ತಂದ. ಆತ “ಯೆಹ್ಹೆಹ್ಹೆ” ಎನ್ನುತ್ತಾ “ಸರ್‍ಯಾಗ್ ಕೆಲ್ಸ ಮಾಡ್ತಾರೋ ಇಲ್ವೊ ಅಂಬ್ತ ಕಾಯ್ತಾ ಕುಂತಿವ್ನಿ” ಎಂದಾಗ “ಅಂತೂ ನೀವೂ ಕಾಯ್ಬೇಕಾಯ್ತು” ಎಂದು ಸೂರ್ಯ ತಮಾಷೆ ಮಾಡಿದ. ಆಗ ನರಸಿಂಹರಾಯಪ್ಪ “ಅದಿರ್‍ಲಿ. ಏನ್‍ ಬಂದಿದ್ದು ನಿಮ್‍ ಸವಾರಿ?” ಎಂದು ಬಿಗಿಯಾಗಿ ಕೇಳಿದ. ಸೂರ್ಯ ನೇರವಾಗಿ ವಿಷಯಕ್ಕೆ ಬಂದ- “ಆ ತೋಪು ಇದ್ಯಲ್ಲ. ಅದನ್ನ ಆಮೇಲ್ ಅಲ್ಲೆ ಇರೋ ಬಯಲು ಜಮೀನನ್ನ ಬುಡಕಟ್ಟಿನೋರ್‍ಗೆ, ಊರಲ್ಲಿರೊ ಬಡವರಿಗೆ ಹಂಚಬೇಕು. ಅದನ್‍ ಕೇಳೋಕ್‍ ಬಂದಿದ್ದೇವೆ” ಎಂದ.

ನರಸಿಂಹರಾಯಪ್ಪ ಎದ್ದುನಿಂತ. ಹತ್ತಿರಕ್ಕೆ ಬಂದ. “ಬರ್ರಿ ಮಾತಾಡ್ಕಂಡ್ ವೋಗಾನ” ಎಂದ. ನಡೆಯುತ್ತ ಹೇಳಿದ. “ಅದು ನಂದಲ್ಲಪ್ಪ. ಸರ್ಕಾರದ್ದು. ನಾನೆಂಗ್‍ ಅಂಚಾಕಾಯ್ತದೆ?”

ನರಸಿಂಹರಾಯಪ್ಪ ರೇಗದೆ ತಣ್ಣಗೆ ಹೇಳಿದ್ದು ಅಚ್ಚರಿ ಮೂಡಿಸಿತ್ತು.

“ಹಾಗಂದ್ರೆ ಹೇಗೆ? ನೀವೇ ಇಷ್ಟುದಿನ ಅನುಭವುಸ್ತಾ ಇದ್ರಿ?” – ಸೂರ್ಯ ಕೇಳಿದ.

“ಆದ್ರೇನ್ ಬಂತಪ್ಪ ನಾನು ನಂದೇ ಅಂದ್ಕಂಡು ಈಟೊರ್ಸ ಆ ತೋಪು ನೋಡ್ಕಂಡಿವ್ನಿ. ಆ ಎಮ್ಮೆಲ್ಲೆ ಧರ್ಮಯ್ಯ ಬಂದು ಧರ್ಮಕರ್ಮ ಒಂದೂ ನೋಡ್ದೆ ಅದ್ಯಾರ್‍ಗೋ ಅಮರಿಕಾದೋರಿಗ್‍ ಕೊಡುಸ್ತೀನಿ ಅಂಬಾದ? ಏನೊ ನಮ್ಮೂರ್‍ಗೂ ಒಸಿ ಕಿಮ್ಮತ್‍ ಬರ್‍ತೈತೆ ಅಂಬ್ತ ನಾನು ಊ ಅಂದ್‍ ಬಿಟ್ಟೆ. ಇವಾಗ್ ನನ್ ಕೈಯ್ಯಾಗೇನೂ ಇಲ್ಲ. ಬೇಕಾರೆ ಜೋಯಿಸ್ರನ್ನೇ ಕೇಳ್ರಿ”- ನರಸಿಂಹರಾಯಪ್ಪ ಕೈಚೆಲ್ಲಿದಂತೆ ಮಾತಾಡಿದ.

“ಇಂಗ್ ಮಾತಾಡಿ ಅಂತ ಜೋಯಿಸರೇ ಹೇಳಿಕೊಟ್ಟಿದಾರ?”- ಸೂರ್ಯ ಚುಚ್ಚಿದ.

“ಯಾಕೆ ನಂಗೇನ್‍ ಮಾತ್‍ ಬರಾಕಿಲ್ವ? ಅಮೆರಿಕಾದೋರ್ ಜತ್ಯಾಗೇ ಮಾತಾಡಿವ್ನಿ, ನಿಮ್ತಾವ್‍ ಮಾತಾಡಾಕ್‍ ಬರಾಕಿಲ್ವ?” ಎಂದು ನರಸಿಂಹರಾಯಪ್ಪ ಬಿಗುಮಾನದಿಂದ ಹೇಳಿದ.

“ಬರುತ್ತೆ, ಬರುತ್ತೆ” ಸೂರ್ಯ ವ್ಯಂಗ್ಯವಾಗಿ ಹೇಳಿ ಮತ್ತೆ ಮಾತು ಮುಂದುವರಸಿದ-” ಈಗ ತೋಪನ್ನು ಅನುಭವಿಸ್ತಾ ಇರೋರು ನೀವು. ಬೆಳಿಸ್ದೋರು ಬಡವರು. ಅವ್ರಿಗ್‍ ಬಿಟ್‍ಕೊಡೋದು ನ್ಯಾಯ.”

“ಕಂಡೋರ್‌ತಾವ ನ್ಯಾಯ ಯೇಳಿಸ್ಕಳಾಕೆ ನಮ್ ಬುದ್ದಿ ಏನ್‍ ಬತಗೆಟ್ಟಿಲ್ಲ. ನಮ್ ತಲೇನಾಗೇನ್ ಸಗಣಿ ಇಲ್ಲ. ಸುಮ್ಕೆ ಆ ಬಡವರ ತಲೆ ಕೆಡ್ಸಿ ಅವ್ರ್ ಕೂಲೀಗೂ ಕಲ್‍ ಆಕ್‍ ಬ್ಯಾಡ್ರಿ. ಏನೊ ನಾಲಕ್ ಕಾಸುಟ್ಟಿಸ್ಕಂಡು ವೊಟ್ಟೆ ತುಂಬಿಸ್ಕಂಬ್ತಾ ಅವ್ರೆ.”- ನರಸಿಂಂಹರಾಯಪ್ಪ ಗಡುಸಾಗಿ ನುಡಿದ.

“ಅದೆಲ್ಲ ನಮ್ಗೂಗೊತ್ತು. ಅವ್ರ್ ಹೂಟ್ಟೆ ಮೇಲೆ ಹೊಡ್ಯೋಕೇಂತ ನಾವ್ ಹೊರಟಿಲ್ಲ. ಅವ್ರ್ ಮನಸ್ನಲ್ಲಿರೋದ್ನ ನಿಮ್‍ ಕಿವೀಗ್‍ ಹಾಕಿದ್ದೀವಿ. ನಿಮ್ ಊರಿನ ಜನ, ನಿಮ್‍ ಹಟ್ಟಿಜನ. ಆಮೇಲೆ ನಿವುಂಟು ಅವರುಂಟು. ಸುಮ್ನೆ ಯಾಕ್ ಅವಮಾನ ಅನುಭವಿಸ್ತೀರಿ ಅಂತ ಮೊದ್ಲೇ ಹೇಳೋಕ್‍ ಬಂದಿದ್ದೀವಿ, ಅಷ್ಟೆ”- ಸೂರ್ಯನ ಮಾತು ನಿಖರವಾಗಿತ್ತು.

“ಅವ್‍ಮಾನ ಗಿವ್‍ಮಾನ ಏನಿದ್ರು, ಇನ್‍ಮ್ಯಾಕೆ ಆ ಬಿಳೀ ಒಡೇರು, ಅದೇ ಅಮೇರಿಕಾದೋರು, ಅವ್ರೇ ನೋಡ್ಕಂಬ್ತಾರೆ.” ಎಂದು ಹೇಳಿದ ನರಸಿಂಂಹರಾಯಪ್ಪ “ಯೇ ಏನ್‍ ಈ ಕಡೀಕ್‍ ನೋಡ್ತಾ ಇವ್ರಿ. ಇಲ್ಲೇನ್‍ ಕೋತಿ ಕುಣಿತಾ ಐತಾ?” ಎಂದು ಈಕಡೆಯೇ ನೋಡುತ್ತಿದ್ದ ಕೂಲಿಯವರ ಕಡೆ ನೋಡಿ ಗದರಿದ. “ಬತ್ತೀನಿ” ಎಂದು ಹೂರಟೇಬಿಟ್ಟ.

ಸೂರ್ಯ ಮತ್ತು ನವಾಬ ಮುಂದೇನು ಮಾಡುವುದೆಂದು ಚಿಂತಿಸಿದರು. ಈಗ ವಿಷಯ ಬಯಲಾಗಿದೆ. ಸುಮ್ಮನಿರುವುದು ಸಾಧ್ಯವೇ ಇಲ್ಲ. ಈ ಜನರಿಂದ ಪ್ರತಿಭಟನೆ ನಡೆಯಲೇಬೇಕು- ಯೋಚಿಸಿದರು. ನವಾಬ್‍ ಹೇಳಿದ- “ಈ ಸಂದರ್ಭಕ್ಕೆ ನಮ್ ಗೆಳೆಯರೆಲ್ಲ ಬರೋದು ವಾಸಿ ಅನ್ಸುತ್ತೆ. ಈಗ ಇಲ್ಲಿ ಒಂದು ಘಟ್ಟಕ್ಕೆ ಬಂದದ್ದಾಗಿದೆ. ಈಗ ನೇರ ಎಂಟ್ರಿ ಆಗ್ಲೇಬೇಕು. ಈ ಜನರ ಜೊತೆಗೆ ನಮ್ಮ ಸಂಘ ಸೇರ್‍ಬೇಕು. ಸಂಘದ ನೇತೃತ್ವದಲ್ಲೇ ಪ್ರತಿಭಟನೆ ನಡೀಬೇಕು. ಆಗ ಈ ಜನಕ್ಕೂ ಧೈರ್‍ಯ ಬರುತ್ತೆ.”

ನವಾಬನ ಸಲಹೆ ಸೂರ್ಯನಿಗೆ ಸರಿ ಎನ್ನಿಸತೊಡಗಿತು. ಆದರೂ ಯೋಚಿಸಿದ. ಇದು ನಿರ್ಣಾಯಕ ಘಟ್ಟವಾಗ್ತಾ ಇದೆ. ಆದ್ದರಿಂದ ಸಂಘದವರ ಜೊತೆ ಮಾತಾಡೋದಂತೂ ಆಗಲೇಬೇಕು. ನವಾಬನನ್ನು ಸಂಘದ ಗೆಳೆಯರ ಬಳಿಗೆ ಕಳಿಸಿ ಚರ್ಚಿಸಲು ಹೇಳಬೇಕು. ಅವರು ಇಲ್ಲಿಗೆ ಬರುವುದು ಸರಿಯೆಂದು ನಿರ್ಣಯಿಸಿದರೆ ಕರೆತರಬೇಕು. ತಾನೊಬ್ಬನೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಬದಲು ಹೀಗೆ ಮಾಡುವುದೇ ಸರಿಯೆಂದು ಭಾವಿಸಿ ನವಾಬನಿಗೆ ಹೇಳಿದ. ಆತನಿಗೂ ಅದು ಸೂಕ್ತ ಅನ್ನಿಸಿತು. “ನಾಳೆಯೇ ಹೂರಡ್ತೀನಿ” ಎಂದ.

ಪಟ್ಟಣಕ್ಕೆ ಹೋಗಿ ಗೆಳೆಯರನ್ನು ಭೇಟಿಯಾಗಿ ಬರುತ್ತೇನೆಂದು ಹೇಳಿದಾಗ ಗೌರಿಯು ತಾನೂ ಬರುತ್ತೇನೆಂದು ನವಾಬನಿಗೆ ಒತ್ತಾಯಮಾಡಿದಳು.

“ಈಗ ಬೇಡ ಮರಿ” ಎಂದ.
“ನಾನೊಬ್ಳೆ ಇರಲ್ಲ ಇಲ್ಲಿ” ಎಂದಳು.
“ಇಷ್ಟುದಿನ ಇರ್‍ಲಿಲ್ವ?”
“ಇದ್ದೆ ಆವಾಗ ಅಟ್ಟೀನೆ ನಂದೂ ಅನ್ನುಸ್ತಿತ್ತು. ಈಗ ನೀನೇ ಅಟ್ಟಿ ಅನುಸ್ತಾ ಐತೆ.”
“ಮದ್ವೆ ಆದ ಹೊಸತು. ಅನ್ಸೋದು ಸಹಜ.”
“ಅದೆಲ್ಲ ನಂಗೊತ್ತಿಲ್ಲ. ನಾನೂ ಪಟ್ಟಣ ನೋಡ್‍ಬೇಕು.”
“ನಾನ್ ಪಟ್ಟಣ ನೋಡೋಕ್‍ ಹೋಗ್ತಾ ಇಲ್ಲ. ಅಲ್ಲಿ ಗೆಳೆಯರನ್ನು ನೋಡ್‍ಬೇಕು. ಇಲ್ಲಿನ ವಿಷ್ಯ ಮಾತಾಡ್ಬೇಕು.”
“ಮಾತಾಡ್ವಾಗ ನಾನೂ ಇರ್‍ತೀನಿ. ನಮ್‍ ವಿಸ್ಯಕ್ಕೆ ನಾವೇ ಇರಾದ್‍ ಬ್ಯಾಡ್ವ?”
ಗೌರಿಯ ಪ್ರಶ್ನೆಗೆ ನವಾಬನಿಗೆ ಏನು ಉತ್ತರಕೊಡುವುದೆಂದು ತಕ್ಷಣಕ್ಕೆ ತಿಳಿಯಲಿಲ್ಲ.

ಸೂರ್ಯನ ಬಳಿ ಎಲ್ಲವನ್ನೂ ಹೇಳಿದ. ಸೂರ್ಯ ಯೋಚಿಸಿ “ಗೌರೀನ್ ಕರ್ಕೊಂಡ್ ಹೋಗು. ಅದೇ ಸರಿ. ಆಕೇಗೂ ಅನುಭವ ಆಗ್ಬೇಕು. ಅದ್ರಿಂದ ಇಲ್ಲ ಹೋರಾಟಕ್ಕೂ ಪ್ರಯೋಜನ ಇದೆ.” ಎಂದ.

ಗೌರಿ ಮತ್ತು ನವಾಬ ಪಟ್ಟಣಕ್ಕೆ ಹೂರಟ ಸುದ್ದಿ ಗೊತ್ತಾದಾಗ ಎಲ್ಲರೂ ಸಂಭ್ರಮಿಸಿದರು. ಹೂರಟು ನಿಂತ ದಿನ ಆರತಿ ಬೆಳಗಿ ಬೀಳ್ಕೊಟ್ಟರು. ಪೂಜಾರಪ್ಪ ಕಣ್ತುಂಬಿ ನಿಂತಿದ್ದ.

ಸೂರ್ಯ “ಬೇಗ ಬಂದ್ಬಿಡು ಗೆಳೆಯ” ಎಂದ.
ಶಬರಿ “ಅಲ್ಲೇ ಇದ್‍ಬಿಟ್ಟೀಯ ಗೌರಿ. ಬೇಗ ಬಂದ್ಬಿಡು” ಎಂದು ತಮಾಷೆ ಮಾಡಿದಳು.

ಗೌರಿಯಂತೂ ಹೊಸಲೋಕಕ್ಕೆ ಹೊರಟ ಸಂಭ್ರಮದಲ್ಲಿದ್ದಳು. ಹಟ್ಟಿ ದಾಟುವಾಗ ಸೂರ್ಯ ನವಾಬನಿಗೆ “ಹುಷಾರು. ಗೌರಿ ಜೋಪಾನ” ಎಂದು ಮೆಲುದನಿಯಲ್ಲಿ ಎಚ್ಚರಿಸಿದ.

ನವಾಬ್ “ಬರ್‍ತೀನಿ ಬ್ರದರ್‍” ಎಂದು ಹೇಳಿ ಹೂರಟಾಗ, ಹಟ್ಟಿಯ ಜನರೆಲ್ಲ ಗಂಡನ ಮನೆಗೆ ಹೆಣ್ಣನ್ನು ಕಳಿಸುವಂತೆ ಬೀಳ್ಕೊಟ್ಟರು.

“ಮದಲ್‍ಸಾರಿ ವೊರ್‍ಗಡೀಕ್‍ ವೋಗ್ತಾ ಅವ್ಳೆ ನಮ್ಮೆಣ್‍ ಮಗಳು. ದೃಷ್ಟಿ ಗಿಷ್ಟಿ ಆದಾತು. ಪರ್‍ಕೆ ತರ್ರಿ” ಎಂದು ಒಬ್ಬಾಕೆ ಪೊರಕೆಯನ್ನು ನೀವಳಿಸಿ ಅದನ್ನು ಸುಟ್ಟಳು. ಪೊರಕೆಯು ನಿಟಿನಿಟಿಯೆಂದು ಸದ್ದು ಮಾಡುತ್ತ ಸುಟ್ಟು ಹೋಯಿತು. ಹೆಂಗಸರೆಲ್ಲ ಸಂತೋಷಪಟ್ಟರು.

ನವಾಬನನ್ನು ಕಳಿಸಿದ್ದಾದ ಮೇಲೆ ಸೂರ್ಯ ಇವರನ್ನೆಲ್ಲ ಹುರಿದುಂಬಿಸುವ ಕೆಲಸದಲ್ಲಿ ನಿರತನಾದ. “ನೀವು ಧೈರ್ಯ ಮಾಡಿ. ನಾನೂ ನನ್ನ ಗೆಳಯರು ನಿಮ್ ಜೊತೆ ಸೇರಿ ಹೋರಾಟ ಮಾಡ್ತೀವಿ” ಎಂದು ಸ್ಪಷ್ಟಪಡಿಸಿದಾಗ ಅವರಲ್ಲಿ ಧೈರ್ಯ ಮೂಡತೊಡಗಿತು. ಅವರಿಗೆ ಇದ್ದ ಅಧೈರ್ಯವೆಂದರೆ ಮುಂದಿನ ಹೊಟ್ಟೆಪಾಡಿನ ಸಮಸ್ಯೆಯಷ್ಟೇ. “ಯಾವಾಗ್ಲೂ ವೂಟ್ಟೆಪಾಡು ಅಂದ್ಕಂಡ್ರಾಯ್ತದ? ಭೂಮಿ ಸಿಗಾದಾದ್ರೆ ವೊಟ್ಟೆ ಬಟ್ಟೆ ಕಟ್ಟಾಕ್‍ ಇಂದೆ ಮುಂದೆ ನೋಡ್‍ಬಾರ್‍ದು” ಎಂದು ಶಬರಿ ದೃಢವಾಗಿ ಮತ್ತೆ ಮತ್ತೆ ಹೇಳಿದಳು. ಆಗ ಸಣ್ಣೀರ, “ಯಣ್ ಮಗಳೀಗೇ ಈಟೊಂದ್‍ ರೋಸ ಇರ್‍ಬೇಕಾರೆ ನಾವ್‍ ಸುಮ್ಕಿರಾದ್‍ ಸರ್‍ಯಾಗಕಿಲ್ಲ” ಎಂದು ನಿರ್ಧಾರಕವಾಗಿ ನುಡಿದ. ಊರಿನ ರಾಮಣ್ಣನಂತೂ “ನಾವು ಹಿಂದೆ ಮುಂದೆ ನೋಡಾಕಿಲ್ಲಪ್ಪ” ಎಂದ. ಹೊಸ ಹುರುಪು ಮೂಡತೊಡಗಿತ್ತು. ಅಂತಿಮ ರೂಪಕ್ಕಾಗಿ ಕಾಯುತ್ತಿತ್ತು.

ಈ ಕಡ ನರಸಿಂಹರಾಯಪ್ಪ ಸುಮ್ಮನಿರಲಿಲ್ಲ. ನಡೆದದ್ದನ್ನು ಜೋಯಿಸರಿಗೆ ವಿವರಿಸಿದ. ಅವರು ಎಂ.ಎಲ್‍.ಎ. ಧರ್ಮಯ್ಯನಿಗೆ ಎಲ್ಲ ತಿಳಿಸುವುದು ಲೇಸೆಂದು ಸಲಹೆ ನೀಡಿದರು. “ನಮ್ ಕೈ ತೊಳ್ಕೊಂಡು ಎಲ್ಲಾ ಅವ್ರ್ ಮೇಲೆ ಹಾಕ್‍ಬಿಡೋಣ” ಎಂದು ಜೋಯಿಸರು ಹೇಳಿದಾಗ ಒಡಯನಿಗೋ ಸರಿಯೆನ್ನಿಸಿತು. ತಕ್ಷಣ ಪಟ್ಟಣಕ್ಕೆ ಹೊರಟ.

ಪಟ್ಟಣದಲ್ಲಿ ಎಂ.ಎಲ್‍.ಎ. ಧರ್ಮಯ್ಯನವರನ್ನು ಭೇಟಿಯಾಗಿ ಬೆಳವಣಿಗೆಗಳನ್ನು ವಿವರಿಸಿದ. ಧರ್ಮಯ್ಯ “ಏನೂ ಹೆದರಬೇಡಿ. ಧರ್ಮ ಕರ್ಮ ಇಲ್ದೆ ಇರೋ ಜನ ಗಲಾಟೆ ಮಾಡಿದ್ರೆ ಏನೂ ಆಗೋದಿಲ್ಲ. ಒಂದೆರಡು ದಿನ್ದಲ್ಲೇ ಎಲ್ಲಾ ತೀರ್ಮಾನ ಆಗುತ್ತೆ. ವಿದೇಶಿ ಬಂಡವಾಳ ಬರುತ್ತೆ ಅಂದ್ರೆ ಸರ್ಕಾರ ಏನ್‍ ಮಾಡೋಕೂ ಸಿದ್ಧ ಇದೆ. ಈ ಸಮಯದಲ್ಲಿ ನಾವೂ ಅಷ್ಟಿಷ್ಟು ಮಾಡ್ಕೊಂಡ್ರಾಯ್ತು” ಎಂದು ಧೈರ್‍ಯ ತುಂಬಿದ. ನರಸಿಂಹರಾಯಪ್ಪ “ನನ್ ಮರೀಬ್ಯಾಡ್ರಿ ಬುದ್ದಿ” ಎಂದು ಕೈ ಮುಗಿದು ಹೂರಟು ನಿಂತಾಗ “ಇನ್ ಎರಡುದಿನ. ಮೊದಲು ನಿಮಿಗ್‍ ಸಲ್‍ಬೇಕಾದ್ದೆಲ್ಲ ಸಲ್ಸಿ ಆಮೇಲೆ ನಮ್‍ ಕೆಲ್ಸ. ಆರಾಮವಾಗಿರಿ. ಎಲ್ಲಾ ನನಿಗ್‍ ಬಿಟ್‍ ಬಿಡಿ.” ಎಂದು ಧರ್ಮಯ್ಯ ಮತ್ತೊಮ್ಮೆ ಭರವಸೆ ನೀಡಿದ. ನರಸಿಂಹರಾಯಪ್ಪ “ನಮ್‍ ಜೋಯಿಸ್ರನ್ನೂ ಮರೀಬ್ಯಾಡ್ರಿ. ಖಾತೆ ಗೀತೆ ಎಲ್ಲಾ ಅವ್ರೆ ಮಾಡ್ದಾರು.” ಎಂದು ಕೇಳಿಕೊಂಡ. ಧರ್ಮಯ್ಯ ನಗುತ್ತ “ನಿಮ್ಮನ್‍ ಮರುತ್ರೂ ಅವ್ರನ್‍ ಮರ್‍ಯೋಲ್ಲ” ಎಂದ. ನರಸಿಂಂಹರಾಯಪ್ಪ ಬೆಪ್ಪಾಗಿ ನೋಡಿದಾಗ “ನಿಮ್ಮುನ್ನೂ ಮರೆಯೊಲ್ಲ. ಅವ್ರನ್ನೂ ಮರೆಯೊಲ್ಲ. ಹದ್ರಬೇಡಿ” ಎಂದು ನಗುತ್ತಾ ಒಳಹೋಗಿ ಒಂದು ನೋಟಿನ ಕಟ್ಟು ತಂದು ನರಸಿಂಹರಾಯಪ್ಪನ ಕೈಗೆ ಕೊಟ್ಟು “ಇದ್ರಲ್ಲಿ ಒಂದು ಲಕ್ಷ ರೂಪಾಯಿ ಇದೆ. ಇದು ಸುಮ್ನೆ ಕೊಡ್ತಿರಾ ಹಣ. ಜಮೀನ್ಗೆ ತೋಪ್ಗೆ ಸೈನ್‍ ಮಾಡಿಸ್ಕೊಂಡು ಎರಡು ದಿನಕ್ಕೆ ಪೈಸಲ್ ಮಾಡುಸ್ತೀನಿ.” ಎಂದು ಹೇಳಿದ.

ನರಸಿಂಹರಾಯಪ್ಪನ ಸಂತೋಷಕ್ಕೆ ಪಾರವೇ ಇಲ್ಲ. “ಈ ದುಡ್‍ ಕೊಟ್ಟಿದ್ನ ಜೋಯ್ಸಪ್ಪಂಗ್‍ ಯೇಳ್‍ಬ್ಯಾಡ್ರಿ ಬುದ್ದಿ” ಎಂದು ಮೆತ್ತಗೆ ಕೇಳಿಕೂಂಡ. “ಬಲಗೈಯ್ಯಲ್‍ ಕೊಟ್ಟಿದ್ದು ಎಡಗೈಗೆ ಗೊತ್ತಾಗ್‍ಬಾರ್‍ದು ಅಂತಾರಲ್ಲ ಹಾಗೆ ನನ್ ವ್ಯವಹಾರ. ನೀವ್‍ ಆರಾಮವಾಗಿರಿ ಅಂತ ಎಷ್ಟು ಸಾರಿ ಹೇಳೋದು ನಿಮ್ಗೆ” ಎಂದು ಧರ್ಮಯ್ಯ ಒತ್ತಿ ಹೇಳಿದಾಗ ನರಸಿಂಹರಾಯಪ್ಪ “ಗೊತ್ತಾತು ಗೊತ್ತಾತು” ಎಂದು ನೋಟಿನ ಕಟ್ಟನ್ನು ಕಣ್ಣಿಗೆ ಒತ್ತಿಕೊಂಡ.

ಧರ್ಮಯ್ಯ “ಬಸ್‍ಗಿಸ್ನಾಗೆಲ್ಲ ಹೋಗ್‍ಬೇಡಿ ಇಷ್ಟು ದುಡ್‍ ಇಟ್ಕೊಂಡು. ನಾನೇ ಒಂದ್‍ ಕಾರ್ ಕಳುಸ್ತೀನಿ, ಅದ್ರಲ್‍ ಹೋಗಿ” ಎಂದು ನರಸಿಂಹರಾಯಪ್ಪನಿಗೆ ಹೇಳಿ, ಡ್ರೈವರ್ ಕರೆದು “ಇವ್ರ್‌ನ ಊರಿಗೆ ಬಿಟ್‍ಬಾ” ಎಂದು ಸೂಚಿಸಿದ.

ನರಸಿಂಹರಾಯಪ್ಪ ಧರ್ಮಯ್ಯನಿಗೆ ಕೈಮುಗಿದ. ಆಗ ಧರ್ಮಯ್ಯ- “ದೇವ್ರಿಗ್ ಕೈಮುಗೀರಿ” ಎಂದು ವಿನಯ ತೋರಿಸಿದ. ನರಸಿಂಹರಾಯಪ್ಪ “ನೀವೇ ನನ್‍ ಬಾಗಕ್‍ ದ್ಯಾವ್ರ್‍ ತರಾ ಆಗಿವ್ರಿ” ಎಂದು ಕೈಮುಗಿದೇ ನಿಂತಿದ್ದ.

ಅಷ್ಟರಲ್ಲಿ ಕಾರು ಸಿದ್ಧವಾಗಿ ಬಂತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗತ್ತು @ ೨೦೩೦
Next post ಎಲ್ಲ ಹುಡುಗಿಯರ ಕನಸು

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys