ಎಲ್ಲ ಹುಡುಗಿಯರ ಕನಸು

ಅವ್ವ ಕೇಳೇ ನಾನೊಂದ ಕನಸ ಕಂಡೇ….
ಅವ್ವ ಕೇಳೇ ಕನಸೊಂದ ಕಂಡೆನೆ….
ಮುಂಗೋಳಿ ಕೂಗಿತ್ತು ಮೂಡಲ್ಲಿ ಕೆಂಪಿತ್ತು
ಬೆಳ್ಳಿಯೂ ಮರಳಿತ್ತು ಹಕ್ಕಿಯೂ ಹಾಡಿತ್ತು
ಮಲ್ಲಿಗೆ ಸಂಪಿಗೆ ಘಮ್ಮೆಂದು ಬಿರಿದಿತ್ತು
ಹಾದಿಲಿ ಇಬ್ಬನಿಯು ಮುತ್ತಾಗಿ ಸುರಿದಿತ್ತು. ||ಅವ್ವ||

ಕಣ್ಣರೆಪ್ಪೆ ಬಿಗಿಯೆ ಕದ ತಟ್ಟಿ ಒಳಬಂದ
ಕಾರಿರುಳ ಕೆಂಜೆಡೆಗೆ ಚಂದಿರನ ಮುಡಿದಿದ್ದ
ಕಾಲ್ಗಜ್ಜೆ ಕುಣಿಸುತ್ತ ಶರಣು ಶರಣು ಅಂದ
ಮುಕ್ಕಣ್ಣ ತಾನೆಂದು ಮುಂಗೈಗೆ ಮುತ್ತಿಟ್ಟ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ….
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ ||ಅವ್ವ||

ತುಂಬೆಯ ಹೂ ಬಿಡಿಸಿ ತುರುಬಿಗೆ ಮುಡಿಸಿದ
ಒಂದೊಂದು ಕಿವಿಯಲ್ಲೂ ದುಂಬಿಯ ಇರಿಸಿದ
ಮಿಂಚಿನ ಹುಳೂವಲ್ಲೇ ಮೂಗುತಿಯ ಮಾಡಿದ
ನೇರಳೆ ಹಣ್ಣಿನ ಹಾರವ ತೊಡಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ…..
ಮುದ್ದಾಗಿ ಮಾತಾಡಿ ಮರುಳು ಮಾಡಿದನವ್ವ ||ಅವ್ವ||

ಹುಲಿಚರ್‍ಮ ಹೊದ್ದರೂ ಹಾಲುಮನಸಿನ ಹುಡುಗ
ಡೊಳ್ಳ ಬಾರಿಸಿ, ಢಕ್ಕೆಯ ಬಡಿದು, ಡಮರುಗ ನುಡಿಸಿದ
ನವಿಲ ಹಾಗೆ ಕುಣಿದು ಮಿಂಚು ಮಳೆ ಕರೆದ
ಹಕ್ಕಿಪಿಕ್ಕಿಯಂಗೆ ಕೂಗಿ ನಕ್ಕು ನಗಿಸಿದ
ಕೀಟಲೆ ನಗೆ ನಕ್ಕು ಕಪ್ಪರವ ಮುಂದಿಟ್ಟ
ಒಲ್ಲೆ ಎಂದರೂ ಬಿಡದೆ ಒಲವು ಬೇಡಿದನವ್ವ….
ಮುದ್ದಾಗಿ ಮಾತಾಡಿ ಮರಳು ಮಾಡಿದನವ್ವ ||ಅವ್ವ||

ಚಪ್ಪರ ತೋರಣ ಒಡವೆ ಓಲಗವಿಲ್ಲ
ಮಂಟಪ ಮಂಡಿಗೆ ಧಾರೆ ದಿಬ್ಬಣವಿಲ್ಲ
ಆರತಿ ಎತ್ತಲು ಮುತ್ತೈದೆಯರಿಲ್ಲ
ಮಂತ್ರಗಳಿಲ್ಲ ಶಾಸ್ತ್ರಗಳಿಲ್ಲ….
ಮಸಣದೊಳಗೆ ಮದುವಣಗಿತ್ತಿ ನಾನದೆವನವ್ವ….
ಬೂದಿಬಡುಕನ ಬಾಳ ಬೆಳಗಿದನವ್ವ ||ಅವ್ವ||

ಕದಳಿಯ ಬನದೊಳಗೆ ಕಾದಿಹನವ್ವ….
ಕಣಗಿಲೆ ಹೂ ಹಾಸಿ ಕಾದಿಹನವ್ವ….
ಕಣ್ಣ ಬತ್ತಿಯ ಉರಿಸಿ ಕಾದಿಹನವ್ವ….
ಜನುಮ ಜನುಮದ ಒಲವು ಫಲಗೂಡಿತವ್ವ….
ಹುಟ್ಟು-ಸಾವಿನಾಚೆಯ ದಡದಿ ಮನೆ ಮಾಡಿಹನವ್ವ
ತಪ್ಪೋ ಒಪ್ಪೋ ಮನ್ನಿಸಿ ಹರಸವ್ವ
ತಪ್ಪೊ ಒಪ್ಪೋ ಹರಸಿ ನೀ ಕಳಿಸವ್ವ. ||ಅವ್ವ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬರಿ – ೧೪
Next post ಕನ್ನಡಕ

ಸಣ್ಣ ಕತೆ

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಕಂಬದಹಳ್ಳಿಗೆ ಭೇಟಿ

  ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…