ತೆರೆದ ಮುಚ್ಚಿದ ಬಾಗಿಲುಗಳ
ಸಂದಿಯಲಿ ಜೇಡ ನೇಯ್ದ ಬಲೆ
ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು
ಕಳೆದು ಹೋದವು ದಿನಗಳ ನೇಯ್ಗೆಯ
ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ.

ನಾಡಿನ ದೇವರಿಗೆಲ್ಲಾ ಚೌಕಟ್ಟು
ಪಡೆದು ಕುಂತ ಮಾಡಿನ ಸಂದಿಯಲ್ಲೂ
ಮನಸ್ಸಿನ ಅಲೆ‌ಅಲೆಯ ಬಲೆ ಬಲೆಯ ಸಿಕ್ಕು
ಆದಿ ಅನಾದಿ ನಾಡಿಗೆ ನಿಜ ಬಯಲು
ಕಾವಲು ಹುಡುಕುತ ಹೊರಟಿದೆ ದೇಶಕಾಲ.

ವಾದವಿವಾದಲಿ ಕೌರ್ಯ ಹರಡಿ
ಸದ್ದಿರದೆ ನಡೆದ ಬೆಳಕು ಉಡುಗಿದ ಕತ್ತಲು
ಉರಿದ ಎದೆ ಹಾಲು ನಯದ ವಂಚನೆಯಲಿ
ನೊಂದ ಮಕ್ಕಳು ನೇಯ್ದ ನೇಯ್ಗೆ ಸೆರೆಮನೆ
ಬಿಡದೇ ಕಾಡಿದೆ ತುಸು ಸಿಟ್ಟು ನೂಕುನುಗ್ಗಲಿನಲಿ.

ಹಳ್ಳ ಅರಿಯದೇ ಬಳ್ಳ ತುಂಬದೇ
ಹಸುಗಳ ಹೆಜ್ಜೆ ಮೂಡಿದ ಗೋಧೂಳಿ
ಹರಳುಗಟ್ಟದ ಬೀಜ ಮೋಡಗಳು
ಸುರಿಸದೇ ಮಳೆ ಹಾರಿಹೋದವು
ಸುದ್ದಿಯಿಲ್ಲದೇ ಕಲ್ಲು ಗಂಟಾಗಿ ಕಾಡಿತು ಮನದಲಿ.
*****