ಉತ್ತರಣ – ೧

ಉತ್ತರಣ – ೧

ಕಥೆ ಓದುವ ಮುನ್ನ…..

‘ಉತ್ತರಣ’ ನನ್ನ ಮೂರನೆಯ ಕಾದಂಬರಿ, ಇದನ್ನೊಂದು ಕಾದಂಬರಿ ಎನ್ನುವುದಕ್ಕಿಂತ ಜೀವನವೆನ್ನುವ ಬೃಹತ್ ಗ್ರಂಥದ ಒಂದು ಅಧ್ಯಾಯವೆಂದರೂ ಆಗಬಹುದು.

ನಾನೀ ಕಾದಂಬರಿ ಮುಗಿಸಿ, ಪ್ರಕಟಣೆಗೆ ಮುಂಚೆ, ಕಾದಂಬರಿ ಓದುವ ಹವ್ಯಾಸವಿದ್ದವರ ಹತ್ತಿರ ಓದಲು ಕೊಟ್ಟಾಗ ಅವರು ಮೊದಲು ಕೇಳಿದ ಪ್ರಶ್ನೆ, ‘ಉತ್ತರಣ’ವೆಂದರೆ ಅರ್ಥವೇನು ಎಂದು. ಅದೇ ಪ್ರಶ್ನೆ ಓದುಗರಲ್ಲೂ ಉದ್ಭವಿಸಿದರೆ ಅದಕ್ಕೆ ಪರಿಹಾರ ಸೂಚಿಸುವ ಹೊಣೆ ನನ್ನದು. ಕನ್ನಡದಲ್ಲಿ ಹೇಳುವುದಾದರೆ “ದಾಟಿಹೋಗು”, ಇಂಗ್ಲಿಷ್‌ನಲ್ಲಿ ಹೇಳುವುದಾದರೆ “Crossing Over” ಎಂದು ಅರ್ಥ. ‘ದಾಟು’ ಎಂಬ ಆಡುಭಾಷೆಯ ಶಬ್ದವನ್ನೇ ಉಪಯೋಗಿಸಬಹುದಿತ್ತು. ಆದರೆ ಹೆಸರಾಂತ ಬರಹಗಾರ ಶ್ರೀ ಎಸ್. ಎಲ್. ಭೈರಪ್ಪನವರ ಒಂದು ಕಾದಂಬರಿ ಆ ಹೆಸರಿನಲ್ಲಿದೆಯಲ್ಲಾ ಎಂದು ಈ ಸಂಸ್ಕೃತ ಶಬ್ದದ ಮೊರೆ ಹೋಗಬೇಕಾಯಿತು. ಇಷ್ಟೇ ಅಲ್ಲದೇ ಅಪರೂಪದ ಶಬ್ದ ಉಪಯೋಗಿಸಿ ಓದುಗರನ್ನು ತಳಮಳ ಗೊಳಿಸಬೇಕೆಂದೇನೂ ಅಲ್ಲ. ಅಲ್ಲದೇ ಈ ಕಾದಂಬರಿಗೆ ಈ ಅರ್ಥಬರುವ ಹೆಸರಲ್ಲದೇ ಬೇರಾವ ಹೆಸರೂ ಸೂಕ್ತವಲ್ಲವೆಂದು ನನ್ನ ಅನಿಸಿಕೆಯೂ ಇತ್ತಾದುದರಿಂದ ‘ದಾಟು’ ಎಂಬುದನ್ನು ಬಿಟ್ಟು ‘ಉತ್ತರಣ’ ಎಂದು ಹೆಸರಿಸಿದೆ.

ನವಯುಗದ ಹೆಸರಾಂತ ಕಾದಂಬರಿಗಾರ ಶ್ರೀ ಕೆ. ಟಿ. ಗಟ್ಟಿಯವರು ಹೇಳಬೇಕಾದುದನ್ನು ಸ್ಪಷ್ಟವಾಗಿ ಮುನ್ನುಡಿಯಲ್ಲಿ ಹೇಳಿದ್ದಾರೆ. ಅವರ ಕಾದಂಬರಿಗಳನ್ನೋದಿ ತಲೆಕೆಡಿಸಿಕೊಂಡು, ಸಿಟ್ಟುಗೊಂಡು, ಸಂತಸಪಟ್ಟುಕೊಂಡು, ದುಃಖಿಸಿಕೊಂಡು, ಅವರ ತಲೆಯೊಳಗೆ ದೇವರು ಏನನ್ನೆಲ್ಲಾ ತುಂಬಿಸಿ ಕಳುಹಿಸಿದ್ದಾರಪ್ಪಾ ಎಂದು ಆಶ್ಚರ್ಯ ಪಟ್ಟುಕೊಂಡ ಓದುಗರಲ್ಲಿ ನಾನೂ ಒಬ್ಬಳು. ಹೆಸರುವಾಸಿಯಾದರೂ, ತಮ್ಮ ಬಿಡುವಿಲ್ಲದ ದಿನಚರಿಯಲ್ಲೂ ನನ್ನ ಈ ಕಾದಂಬರಿಯನ್ನು ಅವರ ಕೈಗಿತ್ತು ಒಂದು ಮುನ್ನುಡಿ ಬರೆದುಕೊಡಿ ಎಂದು ಕೇಳಿಕೊಂಡಾಗ, ಸಂತಸದಿಂದಲೇ ತಮ್ಮ ದೊಡ್ಡ ಮನಸ್ಸಿನಿಂದ ಸೊಗಸಾದ ಮುನ್ನುಡಿ ಬರೆದುಕೊಟ್ಟಾಗ ನನಗೆ ಆನಂದಕ್ಕಿಂತಲೂ ಜಾಸ್ತಿಯಾಗಿ ಆದುದು
ವಿಸ್ಮಯ! ಇಂದಿನ ದೊಡ್ಡ ದೊಡ್ಡ ಲೇಖಕರು ಉದಯೋನ್ಮುಖರಿಗೆ ಅಷ್ಟೇನೂ ಪ್ರೋತ್ಸಾಹ ಕೊಡುತ್ತಿಲ್ಲ; ಅದರಲ್ಲೂ ಲೇಖಕಿಯರಿಗೆ ಏನೇನೂ ಪ್ರೋತ್ಸಾಹವಿಲ್ಲ; ಇದರಲ್ಲಿ ಕಣ್ಣೀರು, ಪ್ರೇಮವಲ್ಲದೇ ಬೇರೇನೂ ಇಲ್ಲ ಎಂದು ಓದದೇ ಬದಿಗೆ ಸರಿಸುವವರೇ ಜಾಸ್ತಿ ಎನ್ನುವ ಈ ಕಾಲದಲ್ಲೂ ಇಷ್ಟೊಂದು ಒಳ್ಳೆಯ ಮುನ್ನುಡಿ ಬರೆದುಕೊಟ್ಟರಲ್ಲ ಎನ್ನುವ ವಿಸ್ಮಯ ಭರಿತ ಆನಂದ ನನಗಾಗಿತ್ತು. ಅವರು ಬರೆದು ಕೊಟ್ಟ ಈ ನಾಲ್ಕು ಮಾತು ಅವರ ದೊಡ್ಡಸ್ತಿಕೆಯನ್ನು ತೋರಿಸುವುದಲ್ಲದೇ ನನ್ನಲ್ಲಿ ಇನ್ನೊಂದು ಕಾದಂಬರಿಯನ್ನು ಬೇಗನೇ ಮುಗಿಸಬೇಕೆಂಬ ಹುಮ್ಮಸ್ಸನ್ನು ಹುಟ್ಟಿಸಿದೆ.

ಬಾಲ್ಯ, ಯೌವನ, ಮುಪ್ಪು ಇವು ಜೀವನದ ಮೂರು ಘಟ್ಟಗಳು, ಬಾಲ್ಯ, ಯೌವನದ ಮಧ್ಯೆ ಇರುವ “Teen age”, ಯೌವನ, ಮುಪ್ಪಿನ ಮಧ್ಯೆ ಇರುವ “middle age” ಜೀವನದ ಈ ಮೂರು ಘಟ್ಟಗಳಷ್ಟೇ ಮುಖ್ಯವೆಂದು ನನ್ನ ಅನಿಸಿಕೆ. ಈ ಎರಡು ಹಂತಗಳು ಮಾನಸಿಕ ಬದಲಾವಣೆಗಳ ಹಂತ. ಇಲ್ಲಿ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು. ಈ ಕಥೆ ಆ “middle age” ನ ಪರಿಸರದಲ್ಲಿ ಸುತ್ತುತ್ತದೆ, ಹಾಗಾಗಿ ಇದೊಂದು ಅಧ್ಯಾಯ ಮಾತ್ರ. ಜೀವನದಲ್ಲಿನ ಈ ಅಧ್ಯಾಯ ಅವನ ಸತ್ವ ಪರೀಕ್ಷೆಯ, ಸಹನೆಯ ಪರೀಕ್ಷೆಯ ಹಂತ. ಮಕ್ಕಳು ಅವರ ಕಾಲಲ್ಲಿ ಅವರು ನಿಲ್ಲಬೇಕು. ತಮ್ಮ ಮುಪ್ಪಿನ ಜೀವನದ ರೀತಿ ನಿರ್ಧಾರವಾಗಬೇಕು ಎಂಬೆಲ್ಲಾ ಅನಿರ್ಧಾರಿತ ಗತಿಯಲ್ಲಿ ಇರುವ ಕಾಲ, ಈ ಕಾಲದಲ್ಲಿ, ಈ ಕಥೆಯಲ್ಲಿ ಬರುವಂಥ ತೀವ್ರ ಏಟುಗಳು ಬಿದ್ದರೆ, ಮನುಷ್ಯ ಸಂಪೂರ್ಣ ಕುಸಿಯಬಹುದು, ಯಾ ಅದನ್ನು ತನ್ನ ಮನೋಬಲದಿಂದ ದಾಟಿ ಮುಂದೆ ಹೋಗಲೂಬಹುದು. ಕುಸಿವ ದುರ್ಬಲತೆ ಮೀರಿ ದಾಟಿ ಮುಂದೆ ಹೋಗುವ ಧೈರ್ಯ ತುಂಬುವ ಒಂದು ಚಿಕ್ಕ ಪ್ರಯತ್ನ ಈ ಕಾದಂಬರಿಯಲ್ಲಿ ಮಾಡಿದ್ದೇನೆ.

ಈ ಕಥೆಯ ಒಂದು ಘಟನೆ ನೂರಕ್ಕೆ ನೂರರಷ್ಟು ಸತ್ಯ ಘಟನೆ! ಅಚಲನ ಸಾವು ನನಗೆ ತಿಳಿದವರೊಬ್ಬರ ಜೀವನದಲ್ಲಿ ನಡೆದ ನೈಜ ಘಟನೆ, ಆ ತಾಯಿ ಇಂದು ಧೈರ್ಯದಿಂದ ಜೀವಿಸುತ್ತಿರುವಳಾದರೂ, ಕಣ್ಣೀರು ತುಂಬಿ ಅವರು ಹೇಳಿದ ಆ ಸಾವಿನ ಘಟನೆ ನನ್ನ ಮನವನ್ನು ಕಲಕಿ, ಕೂತಲ್ಲಿ, ನಿಂತಲ್ಲಿ, ಮಲಗಿದಲ್ಲಿ ನನ್ನನ್ನು ನಾಲ್ಕು ಐದು ವರುಷ ಕಾಡಿದ ನಂತರ ಹೀಗೆ ಒಂದು ಕಿರುಗತೆಯಾಗಿ ಮೂಡಿ ಬಂತು. ಆ ತಾಯಿ ಕನ್ನಡವವಳಲ್ಲ. ಅವಳು ಇದನ್ನು ಓದುವ ಹಾಗಿಲ್ಲ. ಆದರೆ ಅಂಥಾ ಹಲವಾರು ತಾಯಿಯರಿರಬಹುದು, ಅವರು ಕನ್ನಡ ಓದಬಲ್ಲವರು ಆಗಿರಬಹುದು. ಅವರಾದರೂ ಓದಿದರೆ ನನ್ನ ಪ್ರಯತ್ನ ಸಾರ್ಥಕ.

ಇದಕ್ಕೆ ಆಕರ್ಷಕವಾದ ಮುನ್ನುಡಿಯನ್ನು ಬರೆದುಕೊಟ್ಟ ಆತ್ಮೀಯರಾದ ಶ್ರೀ ಕೆ. ಟಿ. ಗಟ್ಟಿಯವರಿಗೆ ನನ್ನ ಹೃತೂರ್ವಕ ವಂದನೆಗಳು. ಅಂದವಾಗಿ ಮುದ್ರಿಸಿ ಕೊಟ್ಟ ನವಯುಗ ಪುಸ್ತಕ ಪ್ರಕಾಶನವದವರಿಗೂ ಮನಮೆಚ್ಚುವ ಮುಖಪುಟ ಚಿತ್ರಿಸಿ ಕೊಟ್ಟ ಶ್ರೀ ರಾಜೇಂದ್ರಕುಮಾರ ಶೆಟ್ಟಿಯವರಿಗೂ ನನ್ನ ವಂದನೆಗಳು.

ಸಹೃದಯ ಓದುಗರ ಮುಂದಿಡುತ್ತಿದ್ದೇನೆ. ಈ ಕಾದಂಬರಿಯನ್ನು ಸ್ವೀಕರಿಸಿ ಪ್ರೋತ್ಸಾಹ ನೀಡುವಿರೆಂಬ ಭರವಸೆ ನನಗಿದೆ. ನಿಮ್ಮ ಅನಿಸಿಕೆಗಳಿಗೆ ಸದಾ ಸ್ವಾಗತವಿದೆ.

೧೯೮೫
ಮರುಮುದ್ರಣ ೨೦೧೫
*****

ನಿವೃತ್ತಿ ಜೀವನದ ಪ್ರಾರಂಭ…

ರಾಮಕೃಷ್ಣಯ್ಯನವರ ಮನೆಯಲ್ಲಿ ತುಂಬಾ ಸಡಗರ. ಅವರ ಮೊದಲ ಮಗಳು ಅನುರಾಧಾಳ ಮದುವೆಯ ನಿಶ್ಚಿತಾರ್ಥ, ಸುಶೀಲಮ್ಮ ಉತ್ಸಾಹದಿಂದ ಓಡಿಯಾಡುತ್ತಿದ್ದರು. ಅಚಲನ ಕಾಲಿಗೆ ಚಕ್ರ ಕಟ್ಟಿತ್ತು. ಒಳಗೆ ಹೋಗಿ ಅಕ್ಕನಿಗೆ ತಮಾಷೆ ಮಾಡಿ ಬಂದರೆ ಹೊರಬಂದು ಭಾವೀ ಭಾವನ ಕಿವಿಯಲ್ಲಿ ಏನೇನೋ ಉಸುರಿ ನಗಿಸುತ್ತಿದ್ದ. ಪೂರ್ಣಿಮಾ, ಅನುಪಮಾ, ಹೊರಗಡೆ ತುಂಬಾ ಓಡಿಯಾಡದಿದ್ದರೂ ಅಕ್ಕನನ್ನು ಮನದಣಿಯೆ ಗೋಳು ಹುಯ್ದು ಕೊಳ್ಳುತ್ತಿದ್ದರು.

ಈ ಎಲ್ಲಾ ಸಡಗರಗಳ ಮೌನ ಪ್ರೇಕ್ಷಣೆ ರಾಮಕೃಷ್ಣಯ್ಯನವರ ಹಿರಿಯ ಮಗ ಆನಂದನದ್ದು, ಅವನು ಯಾವಾಗಲೂ ಅಷ್ಟೇ, ಮನದ ನೋವು ನಲಿವುಗಳನ್ನಾಗಲೀ ಬೇರಾವ ಭಾವನೆಗಳನ್ನಾಗಲೀ ಬಹಿರಂಗವಾಗಿ ವ್ಯಕ್ತಪಡಿಸೋ ಜಾಯಮಾನದವನಲ್ಲ. ತುಂಬ ಸೀರಿಯಸ್ ಎನ್ನುವ ಹಣೆಪಟ್ಟಿ ಧರಿಸಿಕೊಂಡವನು.

ಹುಡುಗನ ಕಡೆಯಿಂದ ಬಂದವರು ಹುಡುಗನ ತಂದೆ, ತಾಯಿ, ತಮ್ಮ, ಸ್ನೇಹಿತ ಹಾಗೂ ಸೋದರ ಮಾವನ ಸಂಸಾರ.

ಹುಡುಗ ಶಂಕರ ನೋಡಲು ಲಕ್ಷಣವಂತ, ಅನುರಾಧಳೇನೂ ಕಳಪೆಯಲ್ಲ. ಯಾರಾದರೂ ಮೆಚ್ಚಿ ಕೈಹಿಡಿಯುವಂಥಾ ಹುಡುಗಿಯೇ. ಎಂ. ಎ. (ಲಿಟರೇಚರ್) ಮುಗಿಸಿದ್ದಾಳೆ. ನಯನಾಜೂಕಿನ ಹುಡುಗಿ, ಹಾಗಾಗಿ ನೋಡಿದ ಮೊದಲ ಹುಡುಗನೇ ಅವಳನ್ನು ಮೆಚ್ಚಿ ಮದುವೆಯ ನಿಶ್ಚಿತಾರ್ಥವೂ ಆಯಿತು. ಎರಡು ತಿಂಗಳಲ್ಲೇ ಮದುವೆಯೆಂದೂ ನಿರ್ಧಾರವೂ ಆಯಿತು.

ಶಂಕರ ಬ್ಯಾಂಕೊಂದರಲ್ಲಿ ಆಫೀಸರ್. ಆ ಹುದ್ದೆಗೆ ಈಗಿನ ಪ್ರಚಲಿತ ಬೆಲೆ (ವರದಕ್ಷಿಣೆ) ಒಂದರಿಂದ ಒಂದೂ ಕಾಲು ಲಕ್ಷದಷ್ಟು ಅಷ್ಟು ಕೊಡಲು ಸಾಧ್ಯವಿದ್ದರೆ, ಹುಡುಗಿಯ ವಿದ್ಯೆ, ಬುದ್ಧಿ, ರೂಪು, ಯಾವುದಕ್ಕೂ ಬೆಲೆಯಿಲ್ಲ. ಆದರೆ ಶಂಕರ ಬರೇ ಹಣದ ಮುಖವನ್ನಷ್ಟೇ ನೋಡಿ ಮದುವೆಯಾಗೋ ಇಚ್ಛೆಯವನಲ್ಲ. ಅಷ್ಟು ವರದಕ್ಷಿಣೆ ಕೊಡುವ ತಾಕತ್ತು ತನಗಿಲ್ಲವೆಂದು ರಾಮಕೃಷ್ಣಯ್ಯನವರು ಮೊದಲೇ ತಿಳಿಸಿದ್ದರು, ಮಗನೇನಾದರೂ ಸಹಾಯ ಮಾಡಿದರೆ ಒಂದು ಎಪ್ಪತ್ತು-ಎಂಭತ್ತು ಸಾವಿರ ಕೊಡಬಹುದೆನ್ನುವ ಧೈರ್ಯ ಅವರದ್ದು. ಅವನೂ ಸಹಾಯ ಮಾಡುವುದೆಂದರೆ ತಾನು ಮದುವೆಯಾಗೋ ಹುಡುಗಿಯಿಂದ ವರದಕ್ಷಿಣೆ ಪಡೆಯಬೇಕಷ್ಟೇ, ಕೊಂಡು ಕೊಡುವ ವ್ಯಾಪಾರ!

ವರದಕ್ಷಿಣೆಯ ಪಿಡುಗು ಹೆಣ್ಣು ಹೆತ್ತ ಮಧ್ಯಮವರ್ಗದವರಿಗೊಂದು ನಿವಾರಣೆಯಿಲ್ಲದ ಶಾಪ! ಅವರ ಜೀವನದ ಗೋಳು! ವರದಕ್ಷಿಣೆ ನೀತಿಬಾಹಿರ, ನ್ಯಾಯಬಾಹಿರವೆಂಬ ಘೋಷಣೆಗಳು ಮೊಳಗುತ್ತಿವೆಯಾದರೂ, ಕೊಳ್ಳುವವರು, ಕೊಡುವವರು ಸಮಾಜದಲ್ಲೆಲ್ಲಾ ತುಂಬಿಯೇ ಇದ್ದಾರೆ. ಅಲ್ಲೋ ಇಲ್ಲೋ ಒಬ್ಬಿಬ್ಬರು ವರದಕ್ಷಿಣೆಯಿಲ್ಲದೇ ಮದುವೆಯಾಗುತ್ತಾರೆ, ಅಷ್ಟೇ. ಮಾಡುವ ಘೋಷಣೆಗಳೆಲ್ಲಾ ಟೊಳ್ಳು ಗಲಾಟೆಗಳು! ವರದಕ್ಷಿಣೆ ಕೊಡಲಾಗದ ತಂದೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಹುಡುಗಿಯರನೇಕರು ಮದುವೆಯಿಲ್ಲದೇ ಮುಪ್ಪು ಪಡೆಯುತ್ತಿದ್ದಾರೆ. ಆ ಹುಡುಗಿಯರ, ಅವರ ಹೆತ್ತವರ ನಿಟ್ಟುಸಿರು ಯಾರ ಕಿವಿಯನ್ನೂ ತಟ್ಟುತ್ತಿಲ್ಲ.

ರಾಮಕೃಷ್ಣಯ್ಯನವರಿಗೆ ತಮ್ಮ ಮಗಳು ಈ ಸಾಲಿಗೆ ಸೇರುವುದು ಇಷ್ಟವಿಲ್ಲ. ಹಾಗಾಗಿ ತಮಗೆ ಸಾಧ್ಯವಾದಷ್ಟು ವರದಕ್ಷಿಣೆ ಕೊಡಲು ಒಪ್ಪಿಕೊಂಡಿದ್ದರು.

ಆದರೆ ಅನುರಾಧಳಿಗೆ ತಂದೆ ಜೀವಮಾನವಿಡೀ ದುಡಿದು ಉಳಿಸಿದ ಅಲ್ಪ ಸ್ವಲ್ಪ ಹಣವನ್ನು ತನ್ನ ಮದುವೆಗಾಗಿಯೇ ಖರ್ಚುಮಾಡಿ ಕೈ ಖಾಲಿ ಮಾಡಿ ಕುಳಿತುಕೊಳ್ಳುವುದು ಮನಸ್ಸಿಲ್ಲ. ಅದೂ ಒಂದು ವರುಷದ ಹಿಂದೆ ನಿವೃತ್ತರಾದ ತಂದೆಗೆ ಮುಂದಿನ ಜೀವನಕ್ಕೆ ಊರುಗೋಲು ಅದೇ ಗಂಟು. ಪ್ರೊವಿಡೆಂಟ್ ಫಂಡ್, ಇನ್ಸೂರೆನ್ಸ್ ಎಂದು ಒಂದು ಲಕ್ಷದ ಹತ್ತಿರ ಹತ್ತಿರಕ್ಕೆ ಬಂದಿದ್ದರೂ ಅದೇನೂ ದೊಡ್ಡ ಮೊತ್ತವಲ್ಲ. ಅದರಕ್ಕಿಂತ ಹೆಚ್ಚಿನ ಉಳಿಕೆ ಅವರ ಸಂಬಳದಲ್ಲಿ ಅಸಾಧ್ಯವಿತ್ತು! ಅದೂ ದೊಡ್ಡದೇ ಅನ್ನಬಹುದಾದಂಥಾ ಸಂಸಾರ, ಈಗ ಸಿಗುತ್ತಿರುವ ಪಿಂಚಿನಿ ಯಾವುದಕ್ಕೂ ಸಾಲದು. ತಂದೆ ಮನೆಯಲ್ಲಿರುವಂತಾದ ಮೇಲೆ ಸಂಸಾರದ ಹೆಚ್ಚಿನ ಭಾರವೆಲ್ಲಾ ಆನಂದನ ಮೇಲೆಯೇ ಬಿದ್ದಿದೆ. ಈ ಗಂಟೊಂದು ಉಳಿದರೆ ಅವರ ಮುಂದಿನ ಜೀವನ ಕಷ್ಟವಾಗಲಾರದು ಎಂದವಳ ಯೋಚನೆ. ಇದೇ ಯೋಚನೆಯನ್ನು ಮುಂದೊಡ್ಡಿ ಮದುವೆಯೇ ಬೇಡವೆಂದರೆ ಹಲವಾರು ಗಲಾಟೆಗಳನ್ನು ಎದುರಿಸಬೇಕು. ತನಗೊಂದು ಕೆಲಸವಾದರೂ ಇದ್ದಿದ್ದರೆ ಧೈರ್ಯದಿಂದ ಹೋರಾಡಬಹುದಿತ್ತು. ಆದರೆ ಈಗ ಹಾಗಿಲ್ಲ. ಲೆಕ್ಚರರ್ ಕೆಲಸ ಸಿಗುವದೇನೂ ಕಷ್ಟವಿಲ್ಲ. ಆದರೆ ಕಲಿತಾದ ಕೂಡಲೇ ಮದುವೆ ಮಾಡುವ ಅವಸರ ಹೆತ್ತವರಿಗೆ.

ಅನುರಾಧಾ ತನ್ನ ವಿದ್ಯೆ ಮುಗಿಸಿದ ಕೂಡಲೇ ಕೆಲಸಕ್ಕೆ ಸೇರುವ ಇಚ್ಛೆ ವ್ಯಕ್ತ ಪಡಿಸಿದ್ದಳು. ಆದರೆ ಸುಶೀಲಮ್ಮನಿಗೆ ಅದು ಇಷ್ಟವಾಗದ ಸಂಗತಿ. ಅವರ ಯೋಚನೆಯ ಗತಿಯೇ ಬೇರೆ, ಹಳೆಯ ಕಾಲದವರು! “ಹುಡುಗಿಯರಿಗೆ ಮನೆಯ ಹೊರಗಿನ ದುಡಿಮೆ ಯಾಕೆ? ಮನೆಯಲ್ಲೇನು ಕೆಲಸ ಕಡಿಮೆಯೇ? ಮೊದಲು ಅದರಲ್ಲಿ ಪರಿಣತಿ ಪಡೆಯಬೇಕು. ಉಂಡು, ಉಡಲು ತಾಕತ್ತಿರುವವನಿಗೇ ಅವಳನ್ನು ಕೊಟ್ಟರಾಯಿತು.” ಎನ್ನುವ ವಾದ ಅವರದ್ದು.

“ನಮ್ಮ ಕಾಲದಲ್ಲಿಯೇ ಒಂದು ಸಂಸಾರಕ್ಕೆ ಉಂಡು ಉಡುವಷ್ಟು ಪೂರೈಸುವುದು ಒಬ್ಬನ ಸಂಪಾದನೆಯಿಂದ ಕಷ್ಟ! ಇನ್ನು ಮಕ್ಕಳ ಕಾಲದಲ್ಲಿ ಏನೋ? ದಿನದಿನಕ್ಕೂ ದಿನ ಬಳಕೆ ವಸ್ತುಗಳ ಬೆಲೆಗಳು ಗಗನದ ಕಡೆಗೇರುತ್ತಿವೆ. ಸಂಪಾದಿಸಿದಷ್ಟೂ ಖರ್ಚಿಗೆ ದಾರಿಗಳು ತೆರೆದಿವೆ. ಹಾಗಿದ್ದಾಗ ಮಗಳು ಕೆಲಸ ಮಾಡಿದರೇನು?” ಎಂಬ ಪ್ರತಿವಾದ ರಾಮಕೃಷ್ಣಯ್ಯನವರದ್ದು.

ಹಾಗೆಂದು ತಾಯಿಯನ್ನು ವಿರೋಧಿಸಿ ಕೆಲಸಕ್ಕೆ ಸೇರಲೇಬೇಕೆಂಬ ಹಟ ಅನುರಾಧಳಿಗಿರಲಿಲ್ಲ. ಇದ್ದಷ್ಟೇ ಕಾಲು ಚಾಚೋ ಪರಿಣತಿ ಅವಳಿಗೆ ತಾಯಿಯಿಂದ ಬಳುವಳಿಯಾಗಿ ಬಂದ ವಿದ್ಯೆ. ಎಷ್ಟಿದೆಯೋ ಅದರಲ್ಲೇ ತೃಪ್ತಿ ಪಡೋ ರೀತಿ ಸುಶೀಲಮ್ಮನದ್ದು. ಅವರು ಯಾವಾಗಲೂ ಹೇಳುವುದು, ‘ಸುಖ ಒಂದು ಕಲೆ ಕೈಗೆ ಸಿಗುವ ಹೂಗಳಿಂದಷ್ಟೇ ರಚಿಸ ಬಹುದಾದಂಥಾ ಸುಂದರವಾದ ಹೂಗುಚ್ಚದಂತೆ! ಎಟಕದುದರ ಆಸೆಗೆ ಬಲಿಯಾಗದೇ ಕೈಗೆಟುವಷ್ಟರಲ್ಲೇ ತೃಪ್ತಿ ಪಡುವ ನಿರ್ವಿಕಾರ ಕಾಮನೆಯಂತೆ!’ ಅವರ ಈ ಸಿದ್ಧಾಂತದಿಂದ ಸುಶೀಲಮ್ಮನ ಮುಖದಲ್ಲಿ ಸಂತಸದ ತೃಪ್ತಿಯ ಗೆರೆಗಳಿಗೆ ಬರವಿರಲಿಲ್ಲ. ಅನುರಾಧ ತಾಯಿಯ ಈ ಸಿದ್ಧಾಂತವನ್ನು ಚೆನ್ನಾಗಿ ಅರಿತುಕೊಂಡಿದ್ದಳು. ಆದರೆ ಆ ಮಾತು ಇಂದಿನ ಕಾಲಕ್ಕೆ ಎಷ್ಟು ಸರಿಹೋಗಬಹುದು ಎಂದು ಯೋಚಿಸಲು ಅವಳು ಇಳಿದಿರಲಿಲ್ಲ. ಜೀವನದ ಬಿಸಿಗಳು ಅವಳನ್ನು ತಟ್ಟಿರಲಿಲ್ಲ.

ಆದರೂ ಸರಿಯಾದ ಕೆಲಸ ಸಿಕ್ಕಿದರೆ ಸೇರಬೇಕೆಂಬ ಹಂಬಲ ಅವಳಲ್ಲಿ ಸದಾ ಇತ್ತು. ಎಣಿಸಿದ ಕೂಡಲೇ ಕೆಲಸ ಸಿಗುವ ಕಾಲವೂ ಇದಲ್ಲವಾದುದರಿಂದ, ಮನೆಯಲ್ಲೇ ಕೆಲವು ಮಕ್ಕಳಿಗೆ ಪಾಠ ಹೇಳುತ್ತಿದ್ದಳು. ಅದರಿಂದ ಬಂದ ಸಂಪಾದನೆಯನ್ನೆಲ್ಲಾ ತಾಯಿಯ ಕೈಗೆ ಹಾಕಿ ಬಿಡುತ್ತಿದ್ದಳು.

ಈಗ ಈ ನೆಂಟಸ್ತಿಕೆಯೂ ಕೂಡಿ ಬಂತು. ಕೆಲಸ ಮಾಡುವ ಹಂಬಲ ಹಂಬಲವಾಗಿಯೇ ಉಳಿಯಿತು.

ಮಗಳಿಗೆ ಮದುವೆಯಾಗುವಾಗ ಮಗನಿಗೂ ಮದುವೆ ಮಾಡಿಬಿಡಬೇಕೆಂಬ ಯೋಚನೆ ರಾಮಕೃಷ್ಣಯ್ಯನವರದ್ದು. ಅವನಿಗೆ ದೊರಕುವ ವರದಕ್ಷಿಣೆಯಿಂದ ಮಗಳ ಮದುವೆ ಮುಗಿಸಬಹುದು ಎನ್ನುವ ಆಲೋಚನೆ ಅವರದು.

ಆನಂದ ಮದ್ದಿನ ಕಂಪನಿಯೊಂದರಲ್ಲಿ ಏರಿಯಾ ಮೆನೇಜರ್, ಕೈ ತುಂಬಾ ಸಂಬಳ ಬರುತ್ತಿದೆ. ಯಾರಾದರೂ ಕಣ್ಣೆತ್ತಿ ನೋಡುವಂಥಾ ಹುಡುಗ, ಮಗನಿಗೆ ಇಂಥಾ ಹುಡುಗಿಯೇ ಆಗಬೇಕೆಂದು ತಂದೆ ತಾಯಿ ಇಬ್ಬರೂ ಜತೆಗೂಡಿ ಲೆಕ್ಕ ಹಾಕಿದ್ದರು. ಕಡಿಮೆಯೆಂದರೆ ಹತ್ತು ಹದಿನೈದು ನೆಂಟಸ್ತಿಕೆ ಈಗಾಗಲೇ ಬಂದಿದೆ. ಅವರೆಲ್ಲಾ ರಾಮಕೃಷ್ಣಯ್ಯನವರ ನಿರ್ಧಾರಕ್ಕೆ ಕಾಯುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ರಾಮಕೃಷ್ಣಯ್ಯನವರು ಹೆಂಡತಿಯೊಡನೆ ತಮಾಷೆಯಾಗಿ, “ಏನೇ ನಿನ್ನ ರಾಜಕುಮಾರನಿಗೆ ಸ್ವಯಂವರದ ಏರ್ಪಾಡು, ಮಾಡೋಣವೇ” ಎಂದು ಅಭಿಮಾನದ ನಗೆಯಾಡಿದ್ದು ಉಂಟು. ಇಂಥಾ ಮಗ ಕೈಯಲ್ಲಿರುವಾಗ ಮಗಳಿಗೆ ಎಪ್ಪತ್ತು ಎಂಬತ್ತು ಸಾವಿರ ವರದಕ್ಷಿಣೆ ಕೊಡುವುದು ಅಷ್ಟೇನೂ ಕಷ್ಟದ ಸಂಗತಿಯೆಂದು ಅವರಿಗೆ ಅನಿಸಿರಲಿಲ್ಲ. ಅನುರಾಧಳ ಮದುವೆಯೊಂದು ಹೀಗೆ ಮುಗಿದರೆ ತನ್ನ ಉಳಿಕೆ ಪೂರ್ಣಿಮಾಳ ಮದುವೆಗಾಗುತ್ತದೆ. ನಿರೂಪಮಾಳ ಮದುವೆಯಾಗುವಾಗ ಅಚಲ ಆಧಾರಕ್ಕಿದ್ದಾನೆ. ತಲೆ ಬಿಸಿ ಮಾಡೋ ಅಗತ್ಯವೇ ಇಲ್ಲ. ಒಂದೊಂದೇ ಭಾರ ಕಳಚಿಕೊಂಡರೆ, ಯಾವ ಕಷ್ಟವೂ ಆಗಲಾರದು ಎನ್ನುವ ಧೈರ್ಯ ಅವರದ್ದು.

ತಾನೇನೂ ಯಾರಿಗೂ, ಎಂದೂ ಹಾಳುಮಾಡಿಲ್ಲ. ನೋವು ತಂದಿಲ್ಲ. ಎಲ್ಲರ ಪ್ರೀತಿಪಾತ್ರನಾಗಿಯೇ ತನ್ನ ಜೀವನ ಕಳೆದಿದೆ. ಇನ್ನೂ ಹಾಗೇ ಮುಂದುವರಿಯಬಹುದು. ತಾನಿನ್ನು ಈ ಭೂಮಿಯ ಮೇಲೆ ಬದುಕಿದ್ದರೂ ಎಷ್ಟು ದಿನ ಇರಬಹುದು? ಜೀವನದ ಕೊನೆಯ ದಿನಗಳು ಶಾಂತಿಯಿಂದ ಕಳೆದರೆ ಸಾಕು ಎನ್ನೋ ಆಶಯ ಅವರದ್ದು.

ಕನ್ಯಾಪಿತೃಗಳಿಗೆ ಉತ್ತರ ಕೊಡುವ ಮೊದಲು ಮಗನೊಡನೆ ಪ್ರಸ್ತಾಪಿಸಿ ಅವನ ಒಪ್ಪಿಗೆ ಪಡೆದು ಅವನಿಗೆ ಮೆಚ್ಚಿಕೆಯಾದುದನ್ನು ಆರಿಸಬೇಕೆನ್ನುವ ಯೋಚನೆಯಿಂದ ರಾಮಕೃಷ್ಣಯ್ಯನವರು ಒಂದು ದಿನ ಮಗನನ್ನು ಕರೆದು ವಿಷಯ ಪ್ರಸ್ತಾಪಿಸುತ್ತಾರೆ.

“ನೋಡಪ್ಪಾ ಆನಂದ, ಅನುರಾಧಾಳ ಮದುವೆ ಹೇಗೂ ನಿಶ್ಚಯವಾಯಿತು. ಅದರ ಜತೆ ನಿನ್ನದೂ ಆಗಿಬಿಡಲಿ, ಕೆಲವು ನೆಂಟಸ್ತಿಕೆ ಬಂದಿದೆ. ಅದರಲ್ಲಿ ಮೂರು ನಾಲ್ಕು ನಮಗೂ ಒಪ್ಪಿಗೆಯಾಗಿವೆ. ನೀನು ಹೂಂ ಅಂದರೆ ಯಾವುದಾದರೂ ಒಂದನ್ನು ನೋಡಿ ನಿಶ್ಚಯಿಸಿ ಬಿಡುವಾ.”

ತಂದೆಯ ಮಾತಿನಿಂದ ಆನಂದ ಜಾಗೃತನಾಗಿದ್ದ. ಇಂಥ ಸಂದರ್ಭವನ್ನು ನಿರೀಕ್ಷಿಸಿಯೇ ಇದ್ದಂತೆ ಅದಕ್ಕೆ ಉತ್ತರ ಮೊದಲೇ ಸಿದ್ಧಪಡಿಸಿ ಕೊಂಡಿದ್ದಂತೆ ಕೂಡಲೇ ನುಡಿಯುತ್ತಾನೆ.

“ಅಪ್ಪಾ, ನಾನಾವಾಗಲೇ ಹುಡುಗಿಯನ್ನು ಆರಿಸಿಕೊಂಡಾಗಿದೆ. ಅನುರಾಧಾಳ ಜತೆಗೆ ಮದುವೆಯಾಗಲು ನನ್ನದೇನೂ ಅಭ್ಯಂತರವಿಲ್ಲ.”

ಈಗ ಪೆಚ್ಚಾಗುವ ಸರದಿ ರಾಮಕೃಷ್ಣಯ್ಯನವರದ್ದು. ಅಲ್ಲೇ ಇದ್ದ ಸುಶೀಲಮ್ಮನವರು ಮಗನ ಮಾತು ಕೇಳಿ ಏಟು ತಿಂದವರಂತೆ ಎದ್ದು ಬಂದು ಗಂಡನ ಬಳಿ ನಿಂತುಕೊಂಡು ಮಗನ ಮುಖವನ್ನೇ ಪಿಳಿಪಿಳಿ ನೋಡುತ್ತಾರೆ. ನಿರೀಕ್ಷಿಸಿಯೇ ಇರದ ಮಾತನ್ನು ಮಗ ಆಡುತ್ತಿದ್ದಾನೆ.

ಒಮ್ಮೆಲೇ ಆದ ಆಘಾತದಿಂದ ಚೇತರಿಸಿಕೊಂಡು ರಾಮಕೃಷ್ಣಯ್ಯನವರು ಪ್ರಶ್ನಿಸುತ್ತಾರೆ.

“ಎಲ್ಲಿಯ ಹುಡುಗಿ?” ಸತ್ವ ಕಳಕೊಂಡ ಸ್ವರ ಆನಂದನ ಹೃದಯ ತಟ್ಟುತ್ತದೆ.

ಒಂದು ಕ್ಷಣ ಸುಮ್ಮನಿದ್ದ ಆನಂದ, ಶಬ್ದಗಳನ್ನು ಹೆಕ್ಕಿ ಹೆಕ್ಕಿ ನುಡಿದಂತೆ ನುಡಿಯುತ್ತಾನೆ. “ಹುಡುಗಿ ಟ್ರಾವೆಲ್ ಎಜನ್ಸಿ ಒಂದರಲ್ಲಿ ರಿಸೆಪ್ಶನಿಸ್ಟ್ ಆಂಗ್ಲೋ ಇಂಡಿಯನ್, ನೋಡಲು ಚೆನ್ನಾಗಿದ್ದಾಳೆ. ಒಳ್ಳೆಯ ಹುಡುಗಿ. ನಾನು ಅವಳನ್ನು ಮದುವೆಯಾಗೋ ನಿರ್ಧಾರ ಮಾಡಿ ಆರು ಏಳು ತಿಂಗಳೇ ಆಯಿತು.”

ಆನಂದನ ಮಾತು ಸುಶೀಲಮ್ಮನಲ್ಲಿ ಉದ್ವೇಗ ಹುಟ್ಟಿಸುತ್ತದೆ. “ನಿರ್ಧಾರ ಮಾಡೋ ಮೊದಲು ಹೆತ್ತವರನ್ನೊಮ್ಮೆ ಕೇಳುವ ಎಂದು ಅನಿಸಲಿಲ್ಲವೆ ನಿನಗೆ? ನಾವೇನು ಸತ್ತಿರುವೆವೆಂದು ಯೋಚಿಸಿರುವೆಯಾ?”

ಆನಂದ ಮೌನಿ! ರಾಮಕೃಷ್ಣಯ್ಯನವರ ಮನದಲ್ಲಿ ಕೋಲಾಹಲ! ಏನೇನೋ ಆಸೆ ಕಟ್ಟಿಕೊಂಡಿದ್ದರು. ಕೈತುಂಬಾ ಸಂಪಾದಿಸುವ ಮಗನಿರುವಾಗ ನಿವೃತ್ತ ಜೀವನವೇನೂ ಕಷ್ಟವಾಗಲಾರದು ಎನ್ನುವ ನಂಬುಗೆಯಲ್ಲಿದ್ದರು. ಆದರೆ ಮೊದಲನೇ ಕಾರ್ಯದಲ್ಲೇ ವಿಘ್ನ! ಮಗ ಜಾತಿ ಬಿಟ್ಟು ಮದುವೆಯಾಗುತ್ತಿದ್ದಾನೆ. ಅವನಿಂದ ಮಗಳ ಮದುವೆಗೆ ಯಾವೊಂದು ರೀತಿಯ ಸಹಾಯವೂ ಅಸಾಧ್ಯ, ಅಸಂಭವ! ಈಚೆ ಕಡೆಯಿಂದ ಎಪ್ಪತ್ತು ಸಾವಿರ ವರದಕ್ಷಿಣೆ ಕೊಟ್ಟು ಮದುವೆ ಮಾಡುವ ಒಪ್ಪಂದಕ್ಕೆ ಬಂದಾಗಿದೆ. ತಮ್ಮ ಮರ್ಯಾದೆಯ ಪ್ರಶ್ನೆ. ಅನುರಾದಳ ಜೀವನದ ಪ್ರಶ್ನೆ.

ಗಂಡನ ಮೌನ ಸುಶೀಲಮ್ಮನ ಸಿಟ್ಟನ್ನು ಕೆರಳಿಸುತ್ತದೆ. “ಎಲ್ಲಾ ಬಿಟ್ಟು ನಿನಗೆ ಸಿಕ್ಕಿದ್ದು ಆ ಹುಡುಗಿಯೇ? ನಮ್ಮ ಜಾತಿಯಲ್ಲಿ ಯಾರೂ ಹುಡುಗಿಯರಿಲ್ಲವೆಂದು ಎಣಿಸಿದ್ದೀಯಾ? ಒಡಹುಟ್ಟಿದವರ ಯೋಚನೆಯನ್ನೂ ಮಾಡದೇ ಹೇಗೆ ನಿರ್ಧಾರ ತೆಗೆದುಕೊಂಡೆ?”

“ಪ್ರೀತಿ ಹುಟ್ಟಿದಾಗ ಜಾತಿ ಮತ ಎಂದು ನೋಡುವುದು ಮೂರ್ಖತನ ಎಂದು ನನ್ನ ಅಭಿಪ್ರಾಯ. ಅಲ್ಲದೆ ನನ್ನ ನಿರ್ಧಾರದಿಂದ ನನ್ನ ಒಡಹುಟ್ಟಿದವರ ಜೀವನಕ್ಕೆ ಯಾವ ರೀತಿಯಲ್ಲಿ ತೊಂದರೆಯಾಗುತ್ತದೆ?”

ತಾಯಿಯ ಪ್ರಶ್ನೆಗೆ ಮಗನೇ ಸವಾಲೆಸೆಯುತ್ತಾನೆ. ರಾಮಕೃಷ್ಣಯ್ಯನವರು ಸಮಾಧಾನ ತಂದುಕೊಂಡು ನುಡಿಯುತ್ತಾರೆ. ಆನಂದ್, ಎರಡು ವಿರುದ್ಧ ಧರ್ಮಗಳು ಒಂದಾಗೋದು ತುಂಬಾ ಕಷ್ಟ ಜಾತಿಮತ ಬಿಟ್ಟು ಮದುವೆಯಾಗೋದು ಸುಲಭ, ಆದರೆ ಮುಂದಿನ ಜೀವನದಲ್ಲಿ ಇದರಿಂದಾಗಿ ಬರುವ ಸಮಸ್ಯೆಗಳನ್ನು ಎದುರಿಸುವುದು ಕಷ್ಟ. ಅದರ ಯೋಚನೆ ಮಾಡಿದ್ದೀಯಾ? ಎಷ್ಟು ಜಾತಿ ಬೇಡವೆಂದರೂ ಮದುವೆಯ ವಿಚಾರದಲ್ಲಿ ಜಾತಿ ಬಿಟ್ಟು ಬೇರೆ ಮದುವೆಯಾಗಿ ಜೀವನ ನಡೆಸುವುದು ಅಷ್ಟು ಸುಲಭವಲ್ಲ. ಅದರ ಕೆಡುಕುಗಳು ಈಗಲ್ಲ ತಿಳಿಯೋದು. ನಾಳೆ ಮಕ್ಕಳು ಬೆಳೆದು ನಮ್ಮ ಮುಂದೆ ಸವಾಲೆಸೆದಾಗ!”

“ಜಾತಿ, ಜಾತಿ, ಜಾತಿ! ನಿಮ್ಮಿಬ್ಬರಿಗೂ ಅದೊಂದೇ ಸಮಸ್ಯೆಯಾಗಿ ಕಾಡುವುದೇ? ಜಾತಿ ಅಂದರೇನು? ನನ್ನ ಪ್ರಕಾರ ಇರುವುದು ಎರಡೇ ಜಾತಿ ಗಂಡು ಮತ್ತು ಹೆಣ್ಣು. ಬೇರೇನಾದರೂ ಇದ್ದರೆ ಅದು ಕೆಲಸಕ್ಕೆ ಬಾರದ ಜನರು ಅನುಕೂಲಕ್ಕೆ ತಕ್ಕಂತೆ ನಿರ್ಮಿಸಿಕೊಂಡ ರೀತಿ. ಅದನ್ನು ತಿಳಿದಿರುವ ನಾವೇ ತೆಗೆದರೇನು ತಪ್ಪು? ಜನರೊಳಗೆ ಈ ರೀತಿಯ ಬೇಲಿ ಯಾಕೆ? ನನಗೆ ಜಾತಿ ಮುಖ್ಯವಲ್ಲ. ನೆಮ್ಮದಿಯ ಜೀವನ ಮುಖ್ಯ. ನಾನು ಮದುವೆಯಾಗುವುದಾದರೆ ಅವಳನ್ನೇ.”

ದೃಢವಾಗಿ ನುಡಿದ ಆನಂದ್, ದೊಡ್ಡ ಬಾಂಬ್ ಎಸೆದು ತನಗಿನ್ನು ಆ ವಿಚಾರದಲ್ಲಿ ಮಾತಾಡುವ ಇಚ್ಚೆಯೇ ಇಲ್ಲವೆಂಬಂತೆ ಅಲ್ಲಿಂದ್ದ ಎದ್ದು ಹೋಗಿದ್ದ. ತಂಗಿ ಮದುವೆಯ ವಿಚಾರ ಹಾಗೂ ತಂದೆಯ ಅಸಹಾಯಕತೆಯ ಬಗ್ಗೆ ಅವನಿಗೆ ಎಳ್ಳಷ್ಟೂ ಕಾಳಜಿಯಿಲ್ಲ! ಮಗನ ಕರ್ತವ್ಯದ ನೆನಪೂ ಇಲ್ಲ.

ಜಾತಿಯ ಬಗ್ಗೆ ಮಗನ ವೇದಾಂತ ಕೇಳಿದ ರಾಮಕೃಷ್ಣಯ್ಯನವರು ಅವರಷ್ಟಕ್ಕೆ ಯೋಚಿಸುತ್ತಾರೆ. ನೆಮ್ಮದಿಯ ಜೀವನಕ್ಕೆ ಪ್ರೇಮವಿವಾಹವೇ ಬೇಕೆ? ತಾನಂತೂ ಕನಸಲ್ಲೂ ನೋಡದವಳನ್ನು ತಂದೆ ತಾಯಿಯ ಆಯ್ಕೆಯಲ್ಲೇ ಮದುವೆಯಾದೆ. ಅಂದಿನಿಂದ ಇಂದಿನವರೆಗೂ ಶಾಂತಿ ನೆಮ್ಮದಿಯಿಂದ ದಿನ ಕಳೆದಿಲ್ಲವೇ? ನನ್ನದು ಮೂವತ್ತು ವರುಷದ ಹಿಂದಿನ ಕಥೆ, ಸಾಯಲಿ! ಅದನ್ನೇ ನೆನೆದು ಹಾಗೇ ಇವತ್ತೂ ಆಗಲಿ ಎನ್ನುವುದು ಸರಿಯಲ್ಲ. ಕಳೆದ ಮೂವತ್ತು ವರುಷದಲ್ಲಿ ಈ ಲೋಕದಲ್ಲಿ ಹಲವಾರು ಬದಲಾವಣೆಗಳಾಗಿವೆ. ಇದು ನ್ಯೂಕ್ಲಿಯರ್, ರಾಕೆಟ್, ಸೆಟೆಲೈಟ್ ಯುಗ! ಗಗನಯಾನದ ಯುಗ! ಲೋಕದ ಒಂದು ಮೂಲೆಯಲ್ಲಿ ನಡೆದುದನ್ನು ಕಣ್ಣಿಗೆ ಕಟ್ಟಿದಂತೆ ನೋಡುವುದಿಂದು ಸಾಧ್ಯ. ಯಾರೂ ಯಾವ ಮೂಲೆಯಿಂದಲಾದರೂ ಇನ್ನೊಂದು ಮೂಲೆಯ ಸಂಪರ್ಕ ಇಟ್ಟುಕೊಳ್ಳಬಹುದು. ಬೇಕೆಂದಾಗ ಮಾತಾಡಲೂಬಹುದು. ಯಾವುದು ದೂರ ಈಗ? ಈ ವೈಜ್ಞಾನಿಕ ಬೆಳವಣಿಗೆಗಳೊಡನೆ ಸಮಾಜದ ರೀತಿ ನೀತಿಗಳೂ ತುಂಬಾ ಬದಲಾಗಿವೆ. ಈ ಬದಲಾವಣೆಗಳೊಂದಿಗೆ ಮಾನವನ ಭಾವನೆಗಳೂ ಜೀವನದ ಮೌಲ್ಯಗಳೂ ಬದಲಾಗದಿರುತ್ತದೆಯೇ? ಇವತ್ತು ಜಾತಿಯೇ ಬೇಡವೆನಿಸಬಹುದು. ನಾಳೆ ಮದುವೆಯೇ ಬೇಡ ಎನ್ನುವ ಕಾಲವೂ ಬರಬಹುದೇನೋ? ಹಾಗಾದರೆ ಉಳಿಯುವುದೇನು? ಎಲ್ಲರೂ ಚರಿತ್ರಹೀನರಾಗಿ ಬಾಳಲು ಶುರುಮಾಡಿದರೆ ಮುಂಬರುವ ಜನಾಂಗವೇ ಅನಾಥವಾದೀತು. ಹಾಗಾಗದಿದ್ದರೆ ಸಾಕು. ತನಗೂ ಹತ್ತುವರುಷದ ಹಿಂದೆ ತಪ್ಪೆಂದು ಕಂಡ ನಡವಳಿಕೆಗಳು, ಆಚಾರಗಳು, ವಿಚಾರಗಳು ಇಂದು ತಪ್ಪಾಗಿ ಕಾಣುತ್ತಿಲ್ಲ. ನಾನೂ ಬದಲಾಗಿದ್ದೇನೆ ನಿಜ. ಆದರೆ ಮೌಲ್ಯಗಳನ್ನು ಬಲಿಕೊಟ್ಟು ಬದಲಾಗೋದು ತನಗಿಷ್ಟವಿಲ್ಲ. ಬದಲಾವಣೆ ಬೇಕು. ಆದರೆ ನಮ್ಮ ಜೀವನದ ಬಲವಾದ ತಳಪಾಯವನ್ನು ಉರುಳಿಸಿ ತರುವ ಬದಲಾವಣೆ ಯಾವತ್ತಿಗೂ ಅಪಾಯಕಾರಿ.

ಈಗಿನ ಕಾಲದಲ್ಲಿ ಜಾತಿ, ಮತ, ಗಂಡು, ಹೆಣ್ಣು ಎಂಬ ಬೇಧವೇ ಇಲ್ಲ. ಎಲ್ಲರೂ ಎಲ್ಲಾ ರಂಗದಲ್ಲೂ ಸಮಾನವಾಗಿ ಹೊಂದಿಕೊಂಡು ದುಡಿಯುತ್ತಿದ್ದಾರೆ. ಇದನ್ನೂ ತಾನೂ ಬೆಂಬಲಿಸುತ್ತಿದ್ದೇನೆ. ಆದರೂ ಕೆಲವೊಂದು ಆಚಾರಗಳನ್ನು ಪರಂಪರಾಗತವಾಗಿ ಬಂದ ಸಂಸ್ಕೃತಿಯನ್ನು ಹೊಸ ಅಲೆಗೆ ಬಲಿ ಕೊಡಲು ತಾನಿನ್ನೂ ಸಿದ್ಧನಾಗಿಲ್ಲ. ಹಾಗಾಗಿ ಮಗನವಾದ ತನಗೆ ವಿಚಿತ್ರವಾಗಿ ಕಾಣಿಸುತ್ತಿದೆಯೇನೋ?

ಮಕ್ಕಳು ಬೆಳೆದಂತೆಲ್ಲಾ ನಾವು ಕಟ್ಟಿಕೊಳ್ಳುವ ಆಸೆ ಹಲವಾರು, ಭವಿಷ್ಯ ತಿಳಿಯದೇ ಏನೇನೋ ಯೋಚನೆಗಳನ್ನು ಮಾಡಿಕೊಳ್ಳುತ್ತೇನೆ. ಕನಸಿನ ಸೌಧಗಳನ್ನು ಕಟ್ಟಿಕೊಳ್ಳುತ್ತೇವೆ. ಆದರೆ ನಡೆಯುವುದು ಬೇರೆಯೇ ಏನೋ ಒಂದು, ನಾವು ನಿರೀಕ್ಷಿಸದೇ ಇರುವುದು.

ಮಗನ ಆಯ್ಕೆಗೆ ತಾವು ಒಪ್ಪಿಗೆ ಕೊಡದೇ ಹೋದರೆ ಈ ಮಗ ಮನೆ ಬಿಟ್ಟುಹೋಗಲೂ ಹಿಂದೇಟು ಹಾಕುವವನಲ್ಲ ಎಂಬುದು ರಾಮಕೃಷ್ಣಯ್ಯನವರಿಗೆ ತಿಳಿಯುತ್ತದೆ. ಮಗ ತಾವು ಆಶಿಸಿದಂತೆ ಸ್ವಯಂವರವನ್ನೇ ಮಾಡಿಕೊಂಡ; ಆದರೆ ಅವನೇ ನೋಡಿ ಮೆಚ್ಚಿದ ಹುಡುಗಿಯನ್ನು! ಮಗನ ದೃಢನಿರ್ಧಾರ ರಾಮಕೃಷ್ಣಯ್ಯ ಸುಶೀಲಮ್ಮನ ಮನಸ್ಸಿನ ಸ್ವಾಸ್ಥ್ಯ ಕೆಡಿಸುತ್ತದೆ. ಮಗಳ ಮದುವೆಯನ್ನು ಸಮಸ್ಯೆಯಾಗಿಸುತ್ತದೆ. ಆದರೆ ಇಂಥಾ ಸಂದರ್ಭಗಳಲ್ಲೂ ರಾಮಕೃಷ್ಣಯ್ಯನವರದ್ದು ಯಾವಾಗಿನಂತೆ ಹೆಂಡತಿಗೆ ಸಮಾಧಾನ ಕೊಡುವ ಮಾತೇ.

“ಸುಶೀ, ನೀನು ಈಗ ಗಲಾಟೆ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಸಮಾಧಾನ ತಂದುಕೋ. ದೇವರಿಚ್ಛೆಯಂತೇ ಆಗುತ್ತದೆ. ಏನಾಗುವುದೆಂದು ಕಾದು ನೋಡೋಣ.”

ಆಗಲಿಕ್ಕೆ ಏನೂ ಇಲ್ಲವೆಂದು ಗೊತ್ತಿದ್ದರೂ ಸುಶೀಲಮ್ಮನವರದ್ದು ಒಂದೇ ಕೊರಗು. “ಹೇಗೂ ಅವನದ್ದೇ ಆಯ್ಕೆ ಮಾಡಿಕೊಂಡ. ಪುಣ್ಯಾತ್ಮ ಕ್ರಿಶ್ಚಿಯನ್ ಹುಡುಗಿಯನ್ನು ಕಟ್ಟಿಕೊಳ್ಳಬೇಕೆ? ಹಿಂದೂ ಧರ್ಮದ ಸೋಂಕೇ ಇಲ್ಲದವಳಿಗೆ ಹೇಗೆ ಮನಸೋತ? ಯಾರಾದರೂ ಬೇರೆ ಜಾತಿಯವಳಾದರೂ ಚಿಂತಿಲ್ಲವಿತ್ತು, ಹಿಂದೂ ಧರ್ಮದವಳನ್ನು ಆಗುತ್ತಿದ್ದರೆ ಆಗಿತ್ತು.”

ಸುಶೀಲಮ್ಮನವರ ಈ ಮಾತಿಗೂ ರಾಮಕೃಷ್ಣಯ್ಯನವರದ್ದು ತೂಕದ ಉತ್ತರ. “ಅಂತೂ ಜಾತಿ ಬಿಟ್ಟ, ಹಾಗಿದ್ದಾಗ ಯಾರಾದರೇನು? ಕ್ರಿಶ್ಚಿಯನ್ ಆದ್ರೂ ಅವಳಲ್ಲೂ ರಕ್ತಮಾಂಸದಿಂದ ಮಾಡಿದ ಹೃದಯವೇ ಇರೋದಲ್ಲವೇ? ಇಷ್ಟೆಲ್ಲ ಓದಿ ಅರಿತುಕೊಂಡ ನೀನೂ ಹೀಗೆಲ್ಲಾ ಮಾತಾಡುವುದೇ?

ಗಂಡನ ಈ ಪ್ರಶ್ನೆಗೆ ಸುಶೀಲಮ್ಮನಲ್ಲಿ ಉತ್ತರವಿರಲಿಲ್ಲ. ಗಂಡನಷ್ಟು ನಿರ್ವಿಕಾರಳಾಗಿರಲು ತನ್ನಿಂದ ಸಾಧ್ಯವಿಲ್ಲ.

ಮಗನ ಹಟಕ್ಕೆ ತಾಯಿ, ತಂದೆ ತಲೆಬಾಗಲೇ ಬೇಕಾಯ್ತು. ಮಗ ತಮ್ಮಿಂದ ದೂರಾಗದಿರಲಿ ಎನ್ನುವ ಒಂದೇ ಒಂದು ಆಸೆಯಿಂದ ಈ ಮದುವೆಗೆ ಒಪ್ಪಿಗೆ ಕೊಡುತ್ತಾರೆ. ಗಂಡನ ಬುದ್ಧಿವಾದದ ಮಾತಿಗೆ ಬೆಲೆ ಕೊಟ್ಟ ಸುಶೀಲಮ್ಮನವರು ಸೊಸೆಯನ್ನು ಯಾವ ಗಲಾಟೆಯೂ ಇಲ್ಲದೇ ಮನೆ ತುಂಬಿಸಿಕೊಳ್ಳಲು ತಯಾರಾಗುತ್ತಾರೆ.

“ಯಾರಾದರೇನು? ಮಗನ ಜೀವನ ಅವನಿಗೆ ಒಪ್ಪಿಗೆಯಾದರೆ ಸರಿ! ಇನ್ನು ತಮ್ಮದಾದರೂ ಏನಿದೆ?” ಎಂಬ ಧೋರಣೆಯನ್ನು ಇಬ್ಬರೂ ಒಪ್ಪಿಕೊಳ್ಳುತ್ತಾರೆ.

ಹೊಸ ಚಿಗುರು ಒಡೆವಾಗ ಹಳೆ ಎಲೆ ಉದುರಲು ತಯಾರಾಗಲೇ ಬೇಕು. ಈ ಲೋಕ ನಿಯಮಕ್ಕೆ ಅವರೇನೂ ಹೊರತಲ್ಲ.

ಅಣ್ಣನ ನಿರ್ಧಾರ ಕೇಳಿದ ಅನುರಾಧ ಮದುವೆಯಲ್ಲಿನ ಆಸಕ್ತಿಯನ್ನೆ ಕಳಕೊಳ್ಳುತ್ತಾಳೆ. “ಇನ್ನು ತನ್ನ ಮದುವೆಗಾಗಿ ಅಪ್ಪನ ಗಂಟು ಕರಗುತ್ತದೆ. ಹಾಗಾದರೆ ಅವರ ಮುಂದಿನ ಜೀವನ? ಇಲ್ಲ. ತಾನೆಂದೂ ಮದುವೆಯಾಗಬಾರದು. ಆ ಗಂಟು ಕರಗಿ ಈ ಸಂಸಾರದ ಅವನತಿಗೆ ತಾನು ಕಾರಣಳಾಗಬಾರದು ಎನ್ನುವ ನಿರ್ಧಾರ ತೆಗೆದುಕೊಂಡು ತಂದೆಯೊಡನೆ ಹೇಳುತ್ತಾಳೆ.

“ಅಪ್ಪಾ, ಇಲ್ಲ ನನಗೆ ಈ ಮದುವೆ ಖಂಡಿತಾ ಬೇಡ. ನೀವು ನಿಮ್ಮ ಉಳಿಕೆಯ ಹಣವನ್ನು ನನ್ನ ಮದುವೆಗಾಗಿ ಖರ್ಚುಮಾಡುವುದು ನನಗೆ ಸಮ್ಮತವಿಲ್ಲ. ನಾನು ಕೆಲಸ ಮಾಡುತ್ತೇನೆ.”

ಮೊದಲೇ ನೊಂದ ಆ ಪಿತೃಹೃದಯ ಮಗಳ ಮಾತುಕೇಳಿ ಬಿರಿಯುತ್ತದೆ. “ಅವನಾರೀತಿ ನನ್ನ ಮರ್ಯಾದೆ ಕಳೆದ. ನೀನು ನನ್ನ ಮಾತನ್ನು ನಿರ್ಜೀವಗೊಳಿಸಲು ನೋಡುತ್ತೀಯಾ ಮಗಳೇ? ಎಲ್ಲಾ ಆಗಿ ನಿಶ್ಚಯವಾಗಿರುವ ಈ ಸಂಬಂಧ ಮುರಿಯುವುದು ನನ್ನನ್ನು ಕೊಲೆ ಮಾಡಿದಷ್ಟೇ ಕಠಿಣವಾದುದು. ಆ ಅಘಾತವನ್ನು ನಾನು ಸಹಿಸಲಾರೆ ನಾನು ಹುಡುಗನ ಕಡೆಯವರಿಗೆ ಕೊಟ್ಟ ಮಾತನ್ನು ಉಳಿಸಲೇಬೇಕು!”

“ಮಾತು ಕೊಟ್ಟರೇನಾಯ್ತು? ಏನಾದರೂ ನೆವದಿಂದ ಅದನ್ನು ಮುರಿಯುವುದೇನೂ ಕಷ್ಟವಲ್ಲ. ನನಗೆ ಈ ಮದುವೆ ಬೇಡವೇ ಬೇಡ!”

“ಎಲ್ಲಾ ನಿಶ್ಚಯವಾಗಿರೋ ಮದುವೆ ಮುರಿದರೆ ನಿನ್ನ ಭವಿಷ್ಯಕ್ಕೆ ಯಾವ ರೀತಿಯ ಪೆಟ್ಟುಬೀಳುವುದೆನ್ನುವ ಅರಿವು ನಿನಗಿದೆಯೇ ಅನು? ಎಂದಿಗೂ ನಿನ್ನ ಮದುವೆಯಾಗದು!”

“ಎಂದಿಗೂ ಆಗದಿದ್ದರೂ ಚಿಂತಿಲ್ಲ. ಮದುವೆಯೊಂದೇ ಜೀವನದ ಅಂತಿಮ ಗುರಿಯೂ ಅಲ್ಲ. ನಿಮ್ಮ ಉಳಿಕೆಯ ಗಂಟು ಮಾತ್ರ ನನಗಾಗಿ ಖಾಲಿಯಾಗಲು ನಾನು ಖಂಡಿತಾ ಬಿಡುವುದಿಲ್ಲ.”

ಮಗಳ ಮಾತು ಕೇಳಿ ರಾಮಕೃಷ್ಣಯ್ಯನವರ ಎದುರು ನಿಂತ ಸಮಸ್ಯೆ ಮಗನ ಸಮಸ್ಯೆಗಿಂತಲೂ ಬೃಹದಾಕಾರವಾಗಿ ಕಂಡಿತು. ಈ ಹುಡುಗಿಗೆ ತಿಳಿಹೇಳುವುದು ಹೇಗೆ? ಅವಳು ಈ ನಿರ್ಧಾರ ತಗೊಂಡು ಈ ಮದುವೆ ನಿಂತುಹೋದರೆ ಮತ್ತೆ ಇವಳಿಗೆ ಮದುವೆ ಸುಲಭ ಸಾಧ್ಯವೇ? ಮೊದಲನೆ ಹುಡುಗಿಯೇ ಹೀಗೆ ಉಳಿದು ಹೋದರೆ ಉಳಿದವರ ಗತಿ? ಈ ಮಕ್ಕಳು ನನ್ನನ್ನು ಹೀಗೇಕೆ ಕಾಡಿಸುತ್ತಾರೆ? ಇಲ್ಲ ಈ ಮದುವೆ ಎಂದಿಗೂ ನಿಲ್ಲಬಾರದು ನಮ್ಮ ಜೀವನಕ್ಕೆ ಆ ದೇವರು ಏನಾದರೂ ದಾರಿತೋರಿಯಾನು, ಅನುರಾಧಾಳ ಮದುವೆ ಈಗ ನಿಂತುಹೋದರೆ ನಮ್ಮ ಸಂಸಾರದ ಕಥೆ ನಿಂತುಹೋದಂತೆ!

“ಅನು! ಕೊನೆಗಳಿಗೆಯಲ್ಲಿ ನಿನ್ನ ಈ ನಿರ್ಧಾರಕ್ಕೆ ನಾನು ಒಪ್ಪುವುದು ಸಾಧ್ಯವಾಗದ ಮಾತು. ನಾನು ಎಪ್ಪತ್ತು ಸಾವಿರ ಕೊಡುವೆನೆಂದು ಒಪ್ಪಿ ಎಲ್ಲಾ ನಿಶ್ಚಯವಾಗಿದೆ. ಈಗ ಅದರಿಂದ ಹಿಂತೆಗೆಯುವ ಇಚ್ಚೆ ನನಗಿಲ್ಲ. ಈ ಮದುವೆ ನಡೆದೇ ನಡೆಯುತ್ತದೆ. ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಿನ್ನ ಜೀವನ ಸ್ತಬ್ಧವಾಗಿ, ನಿಂತ ನೀರಾಗಿ ನಿನ್ನ ಒಡಹುಟ್ಟಿದ ತಂಗಿಯರೂ ಆ ನೀರಲ್ಲಿ ಕೊಳೆಯುವುದನ್ನು ನಾನು ಆಗಗೊಡಲಾರೆ, ಅವನು ನಿನ್ನ ಮದುವೆಗೆ ಸಹಾಯ ಮಾಡಲಿಲ್ಲವೆಂದು ನಮ್ಮನ್ನು ಸಾಕಲು ನಿರಾಕರಿಸಿಲ್ಲವಲ್ಲ? ಕೈ ತುಂಬಾ ಸಂಪಾದಿಸುವ ಮಗನಿರುವಾಗ ನಮಗೆ ಅಂಥಾ ಕಷ್ಟ ಏನು ಬರಲು ಸಾಧ್ಯ? ಈ ಹಣ ಇಟ್ಟುಕೊಂಡು ಪೂಜೆ ಮಾಡಿ ನಿನ್ನ ಜೀವನಕ್ಕೆ ಬೆಂಕಿ ಕೊಡುವಂತೆ ಮಾತ್ರ ಹೇಳಬೇಡಮ್ಮಾ. ನಮ್ಮ ಸ್ವಾರ್ಥಕ್ಕಾಗಿ ನಿನ್ನ ಜೀವನದ ಬಲಿಕೊಡುವಂತೆ ನನ್ನನ್ನು ಒತ್ತಾಯಿಸಿದರೆ ನನ್ನ ಆತ್ಮಾಭಿಮಾನದ ಕೊಲೆಯೇ ಆದಂತೆ. ನಾನು ನೆಮ್ಮದಿಯಿಂದ ಇರುವುದು ನಿನಗೆ ಬೇಕಾದರೆ, ನೀನು ಹೀಗೆ ಹುಚ್ಚುತನದ ಮಾತಾಡಿ ಎಲ್ಲಾ ನೆಮ್ಮದಿಗೆ ಕೊಳ್ಳಿಯಿಡಬೇಡ, ಮಗು, ನೀನು ತಿಳುವಳಿಕೆಯುಳ್ಳವಳು. ಈ ಸಮಾಜದಲ್ಲಿ ಇರುವ ಈ ವರದಕ್ಷಿಣೆಯ ಪಿಡುಗು ಇಂದು ನಿನ್ನೆಯದಲ್ಲ. ನಾಳೇನೇ ಹೋಗುವಂಥಾದ್ದೂ ಅಲ್ಲ. ಆ ಶಾಪವನ್ನು ಅಳಿಸಲು ಒಂದು ಗಂಡು ಪೀಳಿಗೆಯೇ ಹುಟ್ಟಿ ಬರಬೇಕು. ನಿನ್ನಂಥಾ ಒಬ್ಬಿಬ್ಬರು ಹುಡುಗಿಯರಿಂದ ಈ ವರದಕ್ಷಿಣೆಯ ಭೂತ ಸಾಯೋದಿಲ್ಲ. ಅವನು ಒಳ್ಳೆಯ ಹುಡುಗ, ಅವನ ತಂಗಿಯರ ಮದುವೆಗೆ ಅವನೇ ಹಣ ಒದಗಿಸಬೇಕು. ಅವನಾದರೂ ಹಣ ಎಲ್ಲಿಂದ ತರಲಿ? ಇಲ್ಲಿಂದ ತೆಗೆದುಕೊಂಡು ಅಲ್ಲಿ ಕೊಡ್ತಾನೆ ಅಷ್ಟೇ. ನಾನು ಕೊಡುವೆನೆಂದು ಒಪ್ಪಿದ ಮೇಲೆ ಕೊಡಲೇಬೇಕಲ್ಲ?”

ತಂದೆಯ ದೀರ್ಘ ಭಾಷಣ ಆ ಕ್ಷಣದಲ್ಲಿ ಅನುರಾಧಾಳ ಬಾಯಿ ಕಟ್ಟಿಸುತ್ತದೆ. ತಂದೆಯ ಮಾತನ್ನು ಸಂಪೂರ್ಣ ವಿರೋಧಿಸಿ ನಿಲ್ಲುವ ಗಟ್ಟಿಯಾದ ತಳಪಾಯದ ಮೇಲೆ ಅವಳು ನಿಂತಿರಲೂ ಇಲ್ಲ.

ಮಾತು ಆಡಲಾಗದೇ ಹೃದಯದ ನೋವು ಹೇಳಲಾಗದೇ ಅವಳು ಮದುವೆಗೆ ಸಿದ್ಧಳಾಗಬೇಕಾಯ್ತು. ಆದರೆ ಅವಳ ಮನದಲ್ಲಿ ತುಂಬಿ ಕಾಡಿದ ನೋವು ಅವಳನ್ನು ತುಂಬಾ ಸಪ್ಪೆಯಾಗಿಸಿತ್ತು. ಯಾರೊಡನೆಯೂ ಹೇಳಲಾಗದೇ ತನ್ನಲ್ಲೇ ಕೊರಗುವುದೊಂದೇ ಅವಳ ಕಥೆಯಾಯಿತು.

ಏನಾದರೂ, ಮದುವೆ ಅದ್ದೂರಿಯಾಗಿಯೇ ನಡೆಯಿತೆಂದು ಹೇಳಬೇಕು. ಅನುರಾಧಾಳ ಮನದ ನೋವು ಹೊರಗಿನವರಿಗೆ ಗೊತ್ತಿಲ್ಲ. ಮಗನ ಮದುವೆಯಲ್ಲಿ ತಮಗಿರುವ ಅಸಮಾಧಾನದ ಬಗ್ಗೆ ಯಾರಿಗೂ ತಿಳಿಯದಂತೆ ಇಬ್ಬರೂ ಕಾಳಜಿ ವಹಿಸಿದ್ದರು.

ಮದುವೆಯ ಖರ್ಚಿಗೆಂದು ಆನಂದ ಹತ್ತು ಸಾವಿರ ತಂದು ತಂದೆಯ ಕೈಗಿತ್ತಿದ್ದ! ಅನುರಾಧಾಳ ವರದಕ್ಷಿಣೆಗೆ ರಾಯರ ಗಂಟು ಕರಗಿತ್ತು.

ಗೌಜಿಗದ್ದಲವಿಲ್ಲದ ಮದುವೆ ನಮ್ಮಲ್ಲಿನ್ನೂ ರೂಢಿಯಾಗಿಲ್ಲ. ಎಷ್ಟು ಕೈ ಚಿಕ್ಕದು ಮಾಡಿದರೂ ನಡೆವ ಕ್ರಮಗಳೆಲ್ಲಾ ನಡೆಯಲೇ ಬೇಕಾಗಿತ್ತು. ಅನುರಾಧ ಬೇಡವೆಂದರೂ ಯಾರೂ ಕಿವಿಗೂ ಹಾಕಿಕೊಳ್ಳಲಿಲ್ಲ.

ಮದುವೆಯ ಗೌಜಿ ಗದ್ದಲವೆಲ್ಲಾ ಮುಗಿದ ಮೇಲೆ ರಾಮಕೃಷ್ಣಯ್ಯನವರ ಬ್ಯಾಂಕ್ ಖಾತೆಯಲ್ಲಿ ಉಳಿದಿದ್ದ ಹಣ ಏಳೆಂಟು ಸಾವಿರಕ್ಕೆ ಮೀರಿರಲಿಲ್ಲ. ಅದನ್ನು ತಿಳಿದು ಅನುರಾಧಾಳ ಮನಕ್ಕೆ ಆದ ಆಘಾತದ ಅರಿವು ಯಾರಿಗೂ ಆಗಲೂ ಇಲ್ಲ. ಹೆಣ್ಣಾಗಿ ಹುಟ್ಟಿದ ತನ್ನ ಕರ್ಮಕ್ಕೆ ಅನುರಾಧ ಆ ಘಳಿಗೆಯಲ್ಲಿ ನೊಂದಷ್ಟು ಯಾವತ್ತೂ ನೊಂದಿರಲಿಲ್ಲ. ಹುಡುಗಿಯಾದರೇನು? ತಂದೆ ತಾಯಿಗೆ ಎಲ್ಲಾ ರೀತಿಯಿಂದಲೂ ಗಂಡು ಮಗನಷ್ಟೇ ಸಹಾಯವಾಗಿದ್ದರೆ ಸಾಕು. ಹೆಣ್ಣು ಗಂಡೆಂಬ ಬೇಧವಿರಲೇಬಾರದು ಎಂದು ಎಷ್ಟೋ ಬಾರಿ ಅನುರಾಧ ಚರ್ಚಾಕೂಟಗಳಲ್ಲಿ ಮಾತಾಡಿ ಚಪ್ಪಾಳೆ ಹೊಡಿಸಿ ಕೊಂಡಿದ್ದವಳೇ. ಆದರೆ ಅವಳಿಗೆ ಈಗ ತನ್ನ ಅಂದಿನ ಮಾತೆಲ್ಲ ಎಷ್ಟೊಂದು ಜೊಳ್ಳು ಎಂದು ಅರ್ಥವಾಗಿತ್ತು. ಮಾತು, ವಿಚಾರವಾದ ಎಲ್ಲಾ ಚರ್ಚಾಕೂಟಕ್ಕೆ; ವಾಸ್ತವ್ಯ ಬೇರೆಯೇ. ಅದಕ್ಕೆ ಇರಬೇಕು ಎಲ್ಲರೂ ಹೇಳುವುದೊಂದು ಮಾಡುವುದೊಂದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಮರಸ್ಯ
Next post ಬಂದೀತೆನ್ನು ಒಮ್ಮೆ ನೀ ನನ್ನ ತಪ್ಪನ್ನು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys