ಬಂದೀತೆನ್ನು ಒಮ್ಮೆ ನೀ ನನ್ನ ತಪ್ಪನ್ನು
ಕಂಡು ಮುನಿಯುವ ಕಾಲ ; ನಿಯಮಕ್ಕೆ ಸರಿಯಾಗಿ
ನಿನ್ನ ಪ್ರೀತಿಗೆ ತಕ್ಕ ಭಾರಿ ರೆಕ್ಕೆಗಳನ್ನು
ಒಪ್ಪಿಸಬೇಕಾದ ಕಾಲ ; ದಾರಿಯಲಿ ಎದುರಾಗಿ
ಬಂದರೂ ನೀ ನನ್ನ ಕಂಡರೂ ಕಣ್ಣಲ್ಲಿ
ಕಿರಣ ಮಿಂಚದೆ ಗುರುತೆ ಹತ್ತದೆ ವಿಚಿತ್ರ ಸಾಗಿ,
ಪ್ರೀತಿ, ಹಿಂದಿದ್ದದ್ದು ಬದಲಾದ ಹೊತ್ತಲ್ಲಿ,
ಬಿರುಸಾಗಿ ವರ್ತಿಸಲು ನೆಪವ ಹುಡುಕುವ ಕಾಲ.
ಅಂಥ ಹೊತ್ತಲ್ಲಿ ಎದುರಾದ ಸತ್ಯವನೊಪ್ಪಿ
ನನ್ನ ತಪ್ಪಿನ ಮರಳುಗಾಡಲ್ಲಿ ನನ್ನನ್ನು
ಹೂಳುವೆನು. ನಿನ್ನ ನಡತೆಯ ನ್ಯಾಯವನ್ನೆತ್ತಿ
ಹಿಡಿದು ನನ್ನ ವಿರುದ್ದ ನಾನೆ ಕೈಯೆತ್ತುವೆನು.
ನಿನಗೆ ಬಡವನ ಬಿಡಲು ಕಾನೂನು ಬಲವಿದೆ
ನನ್ನನೊಲಿಯುವುದಕ್ಕೆ ಕಾರಣ ಅದೇನಿದೆ ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 49
Against that time (if ever that time come)