ನಮ್ಮೂರ ಜೋಕುಮಾರ,
‘ಮೊಂಡಣ್ಣ’ ನೆಂಬ ಹೆಸರಿನ ಹನುಮಂತ
ಒಳ್ಳೆ, ತೇಗ, ತೇಗದ ಹಲಗೆಯಾಗಿದ್ದ.
ಎಲ್ಲರದೂ ಒಂದು ತಿಟ್ಟೆವಾದರೆ
ಅವನದೇ ಒಂದು ತಿಟ್ಟವಾಗಿತ್ತು.
ಒಂದೇ ಊರಿನವರಾದ ನಾವು
ಕಳೆ, ಮಳೆ, ಸೌದೆ, ಸೊಪ್ಪು, ನೀರು, ನಿಡಿಗೆಂದು ಅಡ್ಡಾಡುವಾಗ
ದಿನದಲ್ಲಿ ಹತ್ತಾರುಬಾರಿ
ದೂರದಿಂದ, ಹತ್ತಿರದಿಂದ ನೋಡುತ್ತಿದ್ದೆವು; ಮಾತಾಡುತ್ತಿದ್ದೆವು
ಹೀಗೆ ಬೆಳೆಯಿತು ಸಂಬಂಧ.
ಮುಂದೆ,
ಹಬ್ಬ, ಹರಿದಿನ, ಜಾತ್ರೆ, ಪರಿಷೆ ಅಂತ
ಆದರ, ಅಕ್ಕರೆ ಜಾಸ್ತಿಯಾಯಿತು
ದಂಪತಿಗಳಾದೆವು.
ನಮಗೆ, ಮದುವೆಯೆಂದರೆ
ಒಂದು ಹೆಣ್ಣು ಒಂದುಗಂಡು ಕೊಡುವುದಾಗಿತ್ತು
ಮಿಕ್ಕೇನೂ ಅದರ ಬಗ್ಗೆ ತಿಳಿದಿರಲಿಲ್ಲ.
ನನಗೆ,
ಎಲ್ಲಿಯೋ, ಯಾರ ನಡುವೆಯೋ ಬಾಳುವುದು
ತಪ್ಪಿದುದು ಖುಷಿಯ ತಂದಿತ್ತು.
ಎಲ್ಲಾ ನಾವೆಣಿಸಿದಂತೆ ನಡೆದದ್ದಾದರೆ
ನಮ್ಮನ್ನು ಹಿಡಿಯುವರಾರು?
ಎರಡು ಬಾಣಂತನ ಮುಗಿಸಿದೆ
ಮುದ್ದಾದ ಒಂದು ಹೆಣ್ಣು ಒಂದು ಗಂಡು ಮಗುವಿನ ತಾಯಿಯಾದೆ,
ಅಪ್ಪ, ಅಮ್ಮ, ಅಣ್ಣ ತಮ್ಮ ಎಲ್ಲರೂ ಹತ್ತಿರವಿದ್ದರು
ಮನೆಯೊಳಗಿದ್ದಂತೆಯೇ ಇದ್ದೆ.
‘ಇವರು’ ಬದಲಾಗಿ ಬಿಟ್ಟರು
ಅನುಬಂಧ ಮರೆತರು ಅಧಿಕಾರ ಒಪ್ಪಿಕೊಂಡರು
ಸದಾ ಒಂದಲ್ಲ ಒಂದು ತಪ್ಪು, ತೊಂಕು ಹಿಡಿಯುವುದು ಹೆಚ್ಚು
ಮಾಡಿದರು.
ಹೊರಗಿನದನ್ನೇ ಹಿತವಾಗಿ ಕಾಣತೊಡಗಿದರು
ಪೂರ್ತಿ, ಜೋಕುಮಾರನಾಗಿ ಬಿಟ್ಟರು.
ಇದೆಲ್ಲಾ ನೋಡಿದ ಹಿರಿಯರು
“ಪೆಗ್ಗೆ ನಡೆಸಬೇಡ,
ನಿನ್ನಂತ ವೀರಾಧಿ ವೀರರು ಈ ಜಗದಲಿ ಎಷ್ಟಾಗಿ ಹೋಗಿಹರೊ!
ಗೊತ್ತಿಲ್ಲವೇನಪ್ಪ! “ಮೆರೆದವಳಿಗೆ ಒಂದು ದಿನ ಉರಿದ ರಾಗಿ
ಹಿಟ್ಟು ಅಂತ.”
ಪರಿಪರಿಯಾಗಿ ಹೇಳುತ್ತಿದ್ದರು.
ಇವರಿಗೆ ಸರಿಯಾಗಿ
ಗಂಡನನ್ನು ಕೊಯ್ಯು ಗುರಿ ಮಾಡಿಕೊಂಡು
ಅತ್ತೆಮಾವ ಎಲ್ಲರನ್ನೂ ಶಪ್ಪದ ಮೇಲಿಟ್ಟು ಕೊಂಡ
ಎಲ್ಲಾ ಬಿಟ್ಟವಳು
ಪೇಟೆಗೆ ಹತ್ತಿರದ ಊರಿನಿಂದ ಬಂದ
ಥಳಕು, ಬಳುಕಿನವಳು
ಎರಡು ಮಕ್ಕಳ ತಾಯಿಯಾಗಿದ್ದರೂ
ಸ್ವಲ್ಪ ಬಣ್ಣ ವಿದ್ದ ಮಿಂಡಗಾತಿ
ಜೋಡಿಯಾಗಿ ಸಿಕ್ಕು ಬಿಟ್ಟಳು.
ಕೇಳಿದರೆ ಸೋಜಿಗ ಪಡುವಿರಿ
‘ಇವರು’ ಏನೋ ಸರಿಯೆ ಸರಿ!
ಅವಳು!!
ಅತ್ತೆ, ಮಾವ ಗಂಡ ಎಲ್ಲರ ಸಮಕ್ಷಮವೇ
ಎಗ್ಗಿಲ್ಲದೆ, ರಾಜಾರಷ್ಟಿಯಾಗಿ
‘ಇವರ’ ಕೂಡುತ್ತಿದ್ದಳಂತೆ, ಚಕ್ಕಂದವಾಡುತ್ತಿದ್ದಳಂತೆ
ಊರಲ್ಲಿ ಎಲ್ಲರ ಬಾಯಲ್ಲೂ ಇದೇ ಸುದ್ದಿಯೇ!
‘ಕೆಟ್ಟವರು ಊರಿಗೇ ದೊಡ್ಡವರಂತೆ’ ಅಂದಹಾಗೆ
ಅತ್ತೆಮಾವನವರಾಗಲಿ ನನ್ನ ಕಡೆಯವರಾಗಲಿ ಯಾರಿಂದಲೂ
ಇವರಿಬ್ಬರಿಗೆ ಏನೂ ಮಾಡಲಾಗಲಿಲ್ಲ
ದಿನಕಿಷ್ಟು, ದಿನಕಿಷ್ಟು ಸಲೀಸಾಗಿ ಬಿಟ್ಟರು
ನಿಜವಾದ ಗಂಡ ಹೆಂಡತಿಗಿಂತ ಒಂದು ಕೈ ಮುಂದಾಗಿ
ನಡೆಯತೊಡಗಿದರು
ನನಗಿದು ವೈಯಕ್ತಿಕ ಸೋಲಾಯಿತು
ಸಹಿಸದಾದೆ-
ಯಾಕೆ ನನಗೂ ಆಸೆಯಿಲ್ಲವೆ?
ರಗಳೆ, ರಂಪಾಟ ಮಾಡಿದೆ
ಉಪಯೋಗವಾಗಲಿಲ್ಲ
ಬದಲಾಗಿ ಎಲ್ಲಾ ಕೆಟ್ಟು ಹೋಯಿತು
‘ಇವರು’ ರಕ್ಕಸ, ರಕ್ಕಸನಾಗಿಬಿಟ್ಟರು
ಹುಣ್ಣಿಗೆ ಕಾಸಿ, ಕಾಸಿ ಬರೆಹಾಕತೊಡಗಿದರು.
ಆ ಕೆಟ್ಟದಿನ,
ಮನೆಯಲ್ಲಿ ಯಾರೂ ಇರಲಿಲ್ಲ
ಹೊಲಗಾಲವಾದ್ದರಿಂದ ಕಳೆ ಮಳೆ ಅಂತ ಹೋಗಿದ್ದರು,
ನಾನು ಸರ ಸರ ಅಡಿಗೆ ಮಾಡಿದೆ
ಒಳಗಿನಿಂದ ಹೊರಕ್ಕೆ ಕಸ ಗುಡಿಸಿದೆ
ನೀರು ನಿಡಿ ತಂದೆ
ಮಕ್ಕಳಿಗೆ ಉಂಬಕಿಕ್ಕಿದೆ
ಬೀಗ, ಬೀಗದ ಕೈ ಹುಡುಕಿಟ್ಟೆ
ತಲೆ ಬಾಚಿ ಕೊಂಡೆ.
ಬೆಳಿಗ್ಗೆ ಯಾರೂ ಏನು ತಿಂದು ಹೋಗಿಲ್ಲ.
ಊಟಕ್ಕೆ ಕೂತರೆ ಹೊತ್ತಾಗುತ್ತೆ. ಇನ್ನೆಷ್ಟು ಹೊತ್ತಾಗುವುದು?
ಅಲ್ಲಿ ಒಟ್ಟಿಗೆ ಎಲ್ಲರೂ ಉಂಡರಾಯಿತೆಂದು
ಬುತ್ತಿ ತುಂಬಿ ಕೊಂಡು ಹೊರಡ ಬೇಕು
ಆಗ ‘ಇವರು’ ಬಂದರು
ಒಳ್ಳೆ ‘ಯಮ’ ‘ಯಮ’ ಬಂದ ಹಾಗೆ!
ಮನಸ್ಸು ಒಳಗೊಳಗೆ ಕುದಿಯುತ್ತಿದ್ದರೂ
ನೀರು ಕೊಟ್ಟೆ
ತೊಳೆದು ಕೊಂಡು ಬಂದರು
ಊಟಕ್ಕೆ ಬಡಿಸಿದೆ.
ಸಾರು ಬಿಡುವಾಗ ಒಂದಿಷ್ಟು ಸಿಡಿಯಿತಷ್ಟೆ!
ಒಮ್ಮೆಲೆ ಕೆರಳಿದರು
ಕಾದು ಕುಳಿತವರಂತೆ
ನನ್ನನ್ನು ಹುಣಸೆ ಮಂಡೆ ಮಾಡಿ ತುಳಿದರು
ಎಳೆದಾಡಿದರು.
ಸಿಕ್ಕಿದ್ದಕ್ಕೆ ತಲೆ ಫಟ್ಟಿಸಿದರು
ತೃಪ್ತಿಯಾಗಿ,
ಬಾಗಿಲು ಹಾಕಿಕೊಂಡು ಹೋದರು.
ರಕ್ಕಸನ ಅಕ್ಕಸದಲ್ಲಿ
ಅಡಿಗೆ ಮನೆಯಾದ ಅಡಿಗೆ ಮನೆಯೆಲ್ಲಾ ಓಲುಗುಡಿಸಿತ್ತು
ಪಾತ್ರೆ ಪಗಡಿ, ಚೊಂಬು, ಗಂಗಳ ಚೆಲ್ಲಾ ಪಿಲ್ಲಿಯಾಗಿ
ಕರಿಬಾನದ ಸಾಲುಗಳು ಉರುಳಿ ನುಚ್ಚು ನೂರಾಗಿ
ಅನ್ನ ಸಾರು ಮುದ್ದೆ ಇಟ್ಟಾಡಿ ಹೋಗಿ
ಅರವಿ, ಗಡಿಗೆ, ಎಡುಲಿ ಒಡೆದು
ನೀರು ಕೆರೆ ಕೆರೆಯಾಗಿ ಬಿಟ್ಟಿತ್ತು
ಅನ್ನ, ಸಾರು, ಮುದ್ದೆ ಕಲೆಸಿದಂತಾಗಿ, ನನ್ನ ರಕ್ತದ ಜೊತೆಗೆ
ಬೆರೆತು
ವಿಚಿತ್ರವಾದ ವಾಸನೆ, ಬಣ್ಣಕ್ಕೆ ತಿರುಗಿತ್ತು
ನನಗೆ ಸ್ಮೃತಿ ಮರಳಿದಾಗ
ನಾನು ನಾನಾಗಿರಲಿಲ್ಲ.
ಮೈ ಮನಸ್ಸು ದೀಪಾವಳಿಯ ಈಡು ಉರಿದಂಗೆ ಉರಿಯುತ್ತಿತ್ತು
ತೊಳೆದು ಕೊಳ್ಳುವ ಗೋಜಿಗೆ ಹೋಗಲಿಲ್ಲ.
ಬಯಸಿ ಮಾಡಿಕೊಂಡೆ
ಇಲ್ಲಿಗೆ ಎಲ್ಲಾ ಕಂಡೆ, ಉಂಡೆ
ಇನ್ನೇನೂ ಉಳಿದಿಲ್ಲ
ಬದುಕಿರುವುದರಲ್ಲಿ ಅರ್ಥವಿಲ್ಲ
ಮಕ್ಕಳೆಂದರೆ…
ಸತ್ತವರ ಮಕ್ಕಳು ಇದ್ದವರ ಮಡಿಲಿನಲ್ಲಿ
ಯಾರ ಗೊಡವೆಯೂ ಬೇಕಿಲ್ಲ
ಈಗಲೇ ಹೀಗೆ!
ಮುಂದೆ…!!
ಈ ಕೆಟ್ಟ ಕಣ್ಣಿನಲ್ಲಿ ಇನ್ನೇನೆಲ್ಲಾ ನೋಡ ಬೇಕಾಗುವುದೋ
ಇದ್ದು ಹೊಟ್ಟೆ ಸುಟ್ಟು ಕೊಳ್ಳುವುದರಲ್ಲಿ ಅರ್ಥವಿಲ್ಲ
ಕಣ್ಣು ಮುಚ್ಚಿ ಕೊಳ್ಳುವುದು ಲೇಸು
ಯಾವುದೂ ಇರುವುದಿಲ್ಲ.
ಹೇಗೆ ನೋಡಿದರೂ ಇದೇ ಸರಿಯೆನಿಸಿತು.
ಮನಸ್ಸು ಕಲ್ಲು ಮಾಡಿಕೊಂಡೆ
ಉರುಲು ಹಾಕಿಕೊಂಡರೆ, ವಿಷಕುಡಿದರೆ ಇಲ್ಲದ ನೋವು
ಬೇಡ!
ಯಾರ ಬಾವಿಗಾದರೂ ಬಿದ್ದು ಸತ್ತರೆ
ಸುಮ್ಮನೆ ಒಂದು ಮಾತು
ಯಾಕೆ ಬೇಕು?
ಹೇಗೂ ಇವರದೆ ಬಾವಿ ಇದೆಯಲ್ಲಾ!
ಎಲ್ಲರೂ ಹೇಗಾದರೂ ಮಾಡಿ ಜೀವ ಹಿಡಿದಿರ ಬೇಕೆಂದು
ಒದ್ದಾಡಿದರೆ
ನಾನು, ನನ್ನ ಜೀವನಾನೇ ತೆಗೆದುಕೊಳ್ಳಬೇಕಾಗಿದೆ
ನೋಡಿ ನನ್ನದೆಂತಹ ಹಣೆ ಬರಹ
ಇನ್ನು ಹುಟ್ಟುವುದು ಸಾಯುವುದು ಯಾವುದು ಬೇಡ
ಇದೇ ಕಡೆಯಾಗಿ ಬಿಡಲಿ
ಇನ್ನೊಂದರಲ್ಲಾದರೂ ಏನಿರುತ್ತೆ ಮಣ್ಣು
ಅದರೊಳಗೆ ಇನ್ನು ಹೇಗೆ ಇರುವುದೋ?
ಇದಕ್ಕಿಂತಲೂ ಕಡೆಯಾದರೆ!
ನಾನು ಕೇಳಿಕೊಂಡು ಬಂದಿದ್ದು ಇದೇ ಇದ್ದಾಗ
ಪಾಪ! ಆ ದೇವರಾಗಲಿ, ಇನ್ಯಾರೇ ಆಗಲಿ ಏನುಮಾಡುವುದಕ್ಕೆ ಸಾಧ್ಯ
ದೇವರೇ ನಿನಗಾಗಿ ಸಾಧ್ಯವಾಗುವದಾದರೆ ಆ ಮಕ್ಕಳನ್ನು ಸ್ವಲ್ಪ
ನೋಡಿಕೊ
‘ಇಂತಾದ್ದು ನನ್ನ ಶತ್ರುವಿಗೂ ಕೊಡಬೇಡ’ ಎಂದವಳೆ
ಅಚ್ಚರಿ ಯಾಗುವ ರೀತಿ ಭರ, ಭರ ನಡೆದಳು, ಗುರಿ ತಲುಪಿದಳು
ಅತ್ತಿತ್ತ ನೋಡಿದಳು
ಯಾರೂ ಇಲ್ಲದಿರುವುದ ಖಾತರಿ ಮಾಡಿಕೊಂಡಳು.
ದುಡುಂ ಎಂದು ಬಿದ್ದಳು.
ಬಿದ್ದ ರಭಸ ತೂಕಕ್ಕೆ ನೀರು ಮೇಲಕ್ಕೆ ಹಾರಿತು
ಗೋಡೆಗೆ ಬಡಿದು ಪರದಾಡಿತು.
ಕ್ಷಣಕಾಲ ಅಲ್ಲೋಲ ಕಲ್ಲೋಲವಾಗಿದ್ದ ಬಾವಿ
ಸರಿ ಹೋಯಿತು
ಆಮೇಲೆ ಆಗೊಂದು ಈಗೊಂದು ಗುಳುಗು ಗುಳುಗು
ಏಳತೊಡಗಿದವು.
*****