ದ್ರೋಣ ಕೆನ್ನೆಗೆ ಕೈಹೊತ್ತು ಕುಳಿತ
ದೇವತೆಗಳು ಬಂದು ಕರೆದರೂ
ದೇವ ಸಭೆಯಲ್ಲಿ ತನ್ನ
ಕರ್ಮ ವಿಮರ್ಶೆಯಾಗಲಿದೆ ಎಂದು
ಹೊಳೆದರೂ, ಕಡಿಮೆಯಾಗಲಿಲ್ಲ
ಯೋಚನೆಗಳ ಏರಿಳಿತ
ಕೃಷ್ಣ ಬಂದಿದ್ದಾಗ ಮಣಿದು, ಕೈ ಮುಗಿದು
‘ನಿನ್ನ ಸಖರೈವರನು ನೋಯಿಸಿ’ನೆಂದು
ಮನದಲ್ಲಿ ಮಾಡಿದ್ದ ದೃಢ
ಉಪಕೃತಿಯಾಗಿ ಇಲ್ಲಿ ಬರಿಸಿದೆ
ಸ್ವರ್ಗ ಪದವಿಯ ಭಾಗ್ಯ ತರಿಸಿದೆ
ಒಂದಲ್ಲ, ಹಲವು ಸಲ
ನೊಂದು ಕುಲಜಾತಿಗಳ ಮಾತೆತ್ತಿ
ವೀರನನು ಒಡೆಯನ ಸ್ನೇಹಿಯನು ದಾನಶೂರನನು
ನೋಯಿಸಿದ, ಘಾಸಿಗೊಳಿಸಿದ ಛಲ,
ದಲಿತ, ಬಡಪಾಯಿ, ಕಲಿಸದೆಯೆ
ಕಲಿತ ವಿದ್ಯೆಯನ್ನು ಬೇಡಿ
ಕಸಿದುಕೊಂಡ ಖಳ, ನಾನು –
ಮಗನ ಮೋಹವೆ ಮುಂದು
ಪತಿಯವಸರ ಹಿಂದು, ಹಿಂದಾಗಿ
ಹೋರುವುದ ಮರೆತು
ತೊರೆದ ಹರಣಕೆ ಇಂದು ಮಾನ – ಸನ್ಮಾನ
ಇದು ಅವಮಾನ!
ಅರ್ಹನಲ್ಲ ನಾನಿದಕೆ
ನನ್ನ ಓಝತ್ವಕ್ಕಿಲ್ಲ ಸಾತ್ವಿಕೆ
ಭೇದಭಾವದ ಶಿಕ್ಷಣವ ಒರೆದಾತ
ತನ್ನ ಬಡತನದ ಸಿಟ್ಟಿನಲ್ಲಿ ಹುಟ್ಟಿದ
ಮಾನಹಾನಿಯ ಸೇಡಿಗೆ ಬಲಿಕೊಟ್ಟ
ಬಂಧುಗಳೆ ಬಡಿದಾಡಿ
ಒಂದು ಕುಲದ, ಒಂದು ಬಲದ
ಒಂದು ತತ್ವದ ಕೊಲೆಗೆ
ಹೇತುವಾದಾತ ಒಲ್ಲ
ಸಗ್ಗಸುಖ ನನಗೆ ಸಲ್ಲ.
*****