ನೀ ನಗಲೇನು ಮನವೆ
ಅಳಲೇನು ಮೌನ ತಾಳಲೇನು
ಹಸಿವು ಕಾಡದೆ ಬಿಡುವುದೇ ||

ಊಟ ಬಟ್ಟೆ ತಳಕು ಬಳುಕು
ನೋವುಂಡ ಮನವು
ಹಸಿವ ಅಡಗಿ ನಿಲ್ಲ ಬಲ್ಲುದೇ ||

ಮಮತೆ ವಾತ್ಸಲ್ಯಗಳು
ಹೃದಯ ತುಂಬಿದರೇನು
ಹಸಿವು ಅದನು ಮೆಟ್ಟಲಹುದೇ ||

ಜ್ಞಾನಕ್ಕೆ ವಿದ್ಯೆಯ ಹಸಿವು
ಭಕ್ತನಿಗೆ ಭಕ್ತಿ ಭಾವದ ಹಸಿವು
ಯೋಗಿಗೆ ಮುಕ್ತಿಯ ಹಸಿವು ||

ಇಳೆಗೆ ಮಳೆ ತಣಿವ ಹಸಿವು
ಬಡತನ ಸಿರಿತನದ ಜೀವ
ಜೀವಿಗೆ ಹಸಿವೆಂಬುದೆ ಜೀವನವು ||

ಎಲ್ಲಾ ಬಲ್ಲವ ಪರಶಿವನಿರಲು
ನಗಲು ಅಳಲು ಹಸಿವಿಗೆ
ಅನ್ನದಗುಳೇ ಸಾಕಾರವು ನಿತ್ಯ
ನೂತನ ವಸಂತವು ||
*****