ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕರಿಬಿಳಿ ಮಿಶ್ರಣದ ಚೀಲ, ನಾಲ್ಕನೇಯದು ಬೂದು ಬಣ್ಣದ ಚೀಲಗಳನ್ನು ಇತ್ತು ಬೀಳ್ಕೊಡುತ್ತಿದ್ದರು.

ಶಿಷ್ಯರು “ಬರಿಯ ಚೀಲಗಳು ಏಕೆ ಗುರುಗಳೇ?” ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಗುರುಗಳು ಹೇಳಿದರು “ಬಿಳಿಯ ಚೀಲ ನಿಮ್ಮ ಪುಣ್ಯ ಸಂಪಾದನೆಯಿಂದ ತುಂಬುತ್ತದೆ. ಕರಿಯ ಚೀಲ ಪಾಪದಿಂದ, ಇನ್ನು ನಿಮ್ಮ ಕರಿಬಿಳಿಚೀಲ ಪಾಪ ಪುಣ್ಯ ಎರಡರಿಂದ.” ಎಂದರು.

“ಹಾಗಾದರೆ ಈಬೂದೂ ಬಣ್ಣದ ಚೀಲ ಏಕೆ ಗುರುಗಳೇ?” ಎಂದು ಕೇಳಲು ಗುರುಗಳು ಹೇಳಿದರು- ಅದು ಸ್ವಚ್ಚ ಬಾಳ್ವೆಯ ನಿಶ್ಚಲತೆ, ಸಮನ್ವಯತೆಯ, ಮುಕ್ತ ಸ್ಥಿತಿಯಿಂದ ತುಂಬುತ್ತದೆ.”

“ಈ ಚೀಲಗಳು ಸಾಂಕೇತಿಕ ಮಾತ್ರ” ಎಂದು ಹೇಳಿ,

“ಈಗ ಚೀಲಗಳನ್ನು ಇಲ್ಲಿ ಇಟ್ಟುಬಿಡಿ” ಎಂದರು. ನಿಮ್ಮ ಬಲಗೈಯಲ್ಲಿ ಬಿಳಿಚೀಲವಿದೆ ಎಂದು ಭಾವಿಸಿ. ನಿಮ್ಮ ಎಡಗೈಯಲ್ಲಿ ಕರಿ ಚೀಲವಿದೆ ಎಂದು ಭಾವಿಸಿ, ನಿಮ್ಮ ಬೆನ್ನ ಮೇಲೆ ಪಾಪಪುಣ್ಯದ ಕರಿಬಿಳಿ ಚೀಲವಿದೆ ಎಂದು ಭಾವಿಸಿ ನಿಮ್ಮ ದೇಹದ ಹೃದಯ ವೃಕ್ಷದಲ್ಲಿ ತೂಗು ಹಾಕಿ ಈ ಬೂದು ಬಣ್ಣದ ಚೀಲ. ಇದು ತುಂಬುವುದಿಲ್ಲ, ತುಳುಕುವುದಿಲ್ಲ, ಬರಿದಾಗುವುದು ಇಲ್ಲ. ಆ ಸ್ಥಿತಿ ಮುಕ್ತದ ಪರಮಾನಂದ ಸ್ಥಿತಿ.” ಎಂದಾಗ ಶಿಷ್ಯರ ಘಟಿಕೋತ್ಸವದ ಸ್ವತಿವಾಚನ ಮುಗಿಯಿತು. ನಿಜವಾದ ಪಟ್ಟಗಳೇನೆಂದು ಅರಿತು ಬಾಳ್ವೆಯಲ್ಲಿ ಪಟ್ಟ ಏರಲು ಸಿದ್ಧರಾದರು ಶಿಷ್ಯರು.
*****