ಪ್ರಿಯ ಸಖಿ,
ಅಸಹಜ ಸಾವನ್ನು ಕಂಡು ಮನಕರಗದವರುಂಟೇ? ಸಾವು ಎಲ್ಲ ಜೀವಿಗೂ ಸಹಜವೇ. ಬೇಕಾದುದೇ. ಕವಿ ಪೇಜಾವರ ಸದಾಶಿವರಾಯರು ತಮ್ಮ ‘ಸಾವು’ ಎಂಬ ಸುನೀತದಲ್ಲಿ
(ಸಾನೆಟ್)
ಸಾವು ಸಹಜವು ನಿಜವೆ. ಸಾವಿಲ್ಲದೊಡೆ ಬಾಳು
ನೋವಿನೋಲುಗ ಜೀವದಾಧಿಕ್ಯಗೋಳು
ಎನ್ನುತ್ತಾರೆ. ತುಂಬು ಬಾಳನು ಬಾಳಿ ಸಾವಿಗೀಡಾದ ವ್ಯಕ್ತಿಯ ಬಗೆಗೆ ನಮಗಾಗುವ ದುಃಖದ ನೂರರಷ್ಟು ಪಾಲು ದುಃಖ ಕೊಲೆಯಾದ, ವೀರಮರಣದ ಹೆಸರಲ್ಲಿ ಸತ್ತ, ಆತ್ಮಹತ್ಯೆಗೊಳಗಾದ, ಅಪಘಾತದಿಂದ ಸತ್ತ ವ್ಯಕ್ತಿಯ ಇಂತಹ ಅಸಹಜ ಸಾವಿಗಾಗಿ ಆಗುತ್ತದೆ. ಇಂತಹ ಸಾವಿಗಾಗಿ ಮರುಗುತ್ತಾ ಕವಿ,
ಯಾರ ಹಸಿವಿಂಗಿಸಲು, ಯಾರ ಮದ ಭಂಗಿಸಲು
ಕೂರಲಗ ಕತ್ತಿಯಲಿ ನೆತ್ತರಿನ ಭುಗಿಲು?
ಎಂದು ಪ್ರಶ್ನಿಸುತ್ತಾರೆ. ಇಂತಹ ಅಸಹಜ ಸಾವುಗಳಿಗೆ ಕಾರಣವಾದರೂ ಏನು? ಎನ್ನುತ್ತಾ,
ಕಾವ ಕರುಣೆಯ ನಯದ ತೋಳ ತೊಂಗಲಿನಲ್ಲಿ
ಜೀವ ದುಂಬಿಯ ಆಟ
ಎಂದು ವಿಷಾದಿಸುತ್ತಾರೆ. ಕಾಯುವ ಕರುಣೆಯನ್ನು ನಂಬಿ ನೆಮ್ಮದಿಯಾಗಿರುವಾಗ ಕೊಲ್ಲುವಾಟವ ಆಡುವ ಈ ಆಳ್ವಿಕೆಗೆ ಉತ್ತರವೆಲ್ಲಿದೆ ? ಎನ್ನುತ್ತಾ, ಪದ್ಯದ ಕೊನೆಯಲ್ಲಿ
ಕೊಲೆಯು ಜೀವದ ಕೊನೆಯೆ! ಬಾಳು ಸಾವಿನ ಆಳೆ!
ಜಗದ ಸೌಂದರ್ಯದಂತಕನ ಸೂಳೆ!
ಎಂದು ಮಾರ್ಮಿಕವಾಗಿ ನುಡಿಯುತ್ತಾರೆ. ವಿಶೇಷ ಮಾನವ ಜನ್ಮ ಪಡೆದು ತನ್ನ ಜೀವನದ ಅಲ್ಪ ಭಾಗವನ್ನು, ಅನುಭವಿಸಿರದಾಗ ಕೊಲೆಯೇ ಜೀವದ ಕೊನೆಯಾಗಬೇಕೆ? ಈ ಬಾಳೆಂಬುದು ಸಾವು ಹೇಳಿದಂತೆ ಕೇಳುವ ಆಳಾಗಬೇಕೆ? ಎನ್ನುತ್ತಾ ಜಗತ್ತಿನ ಸೌಂದರ್ಯವೆನ್ನುವುದು ಅಂತಕ ಬೇಕೆನ್ನುವಂತೆ ಕುಣಿಸುವ,
ಕೊನೆಗಾಣಿಸುವ ಸೂಳೆಯೆ? ಎಂದು ಪ್ರಶ್ನಿಸುತ್ತಾರೆ. ಹೌದು ಅಸಹಜ ಸಾವನ್ನು ತಡೆಯಲು ಇಲ್ಲಿ ಯಾರಿಗೂ ಸಾಧ್ಯವಿಲ್ಲ. ಇಂತಹ ಅಸಹಜ ಸಾವಿಗೆ ಆ ಅಂತಕ
ಉತ್ತರ ಕೊಡಬಲ್ಲನೇ ಸಖಿ?
*****
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೨ - January 12, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೧ - January 5, 2021
- ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೦ - December 29, 2020