Home / ಲೇಖನ / ವಿಜ್ಞಾನ / ಬೆಳಕು ಚೆಲ್ಲುವ ಜೀವಿಗಳು

ಬೆಳಕು ಚೆಲ್ಲುವ ಜೀವಿಗಳು

ನಸುಗತ್ತಲಿನ ಹೊತ್ತಿನಲ್ಲಿ ಬೆಳಕು ಚಿಮ್ಮಿಸಿ ಹಾರುವ ಮಿಣುಕು ಹುಳುಗಳನ್ನು ನೀವು ನೋಡಿರಬಹುದು.  ಅವು ಚೆಲ್ಲುವ ಬೆಳಕಿನ ಪರಿಯನ್ನು ಕಂಡು ಅಚ್ಚರಿಗೊಂಡಿರಬಹುದು.  ಮಿಣುಕು ಹುಳುಗಳಂತೆ ಬೆಳಕು ಚಿಮ್ಮಿಸುವ ಅದೆಷ್ಟೋ ಜೀವಿಗಳು ಈ ಭೂಮಂಡಲದ ಮೇಲಿವೆ ಎಂಬುದು ನಿಮಗೆ ಗೊತ್ತಿರಲಿಕ್ಕಿಲ್ಲ.

ಜೀವಿಗಳೂ ಬೆಳಕು ಚಿಮ್ಮುವ ವಿದ್ಯಮಾನವನ್ನು ಜೈವಿಕ ದೀಪ್ತಿ (ಬಯೋಲುಮಿನಿಸೆನ್ಸ್) ಎಂದು ಕರೆಯುತ್ತಾರೆ.

ಹಡಗು ಹಾಯುವಾಗ ಉಂಟಾಗುವ ಅಲೆಗಳಲ್ಲಿ ಬೆಳಕು ಮಿಂಚುವುದನ್ನು ಸಮುದ್ರಯಾನಿಗಳು ಸಾವಿರಾರು ವರ್ಷಗಳ ಹಿಂದೆಯೇ ತಿಳಿದಿದ್ದರು.  ಒಮ್ಮೆ ಬೆಂಜಮಿನ್ ಫ್ರಾಂಕ್ಲಿನ್ ಸಮುದ್ರ ದಂಡೆಗೆ ಹೋಗಿ ಸೀಸೆಯಲ್ಲಿ ನೀರು ಶೇಖರಿಸಿ ಅಲುಗಾಡಿಸಿದಾಗ ಅದರಲಲ್ಲಿ ಮಿಂಚನ್ನು ಕಂಡ.  ಕೆಲಕ್ಷಣಗಳ ನಂತರ ಮಿಂಚುವಿಕೆಯು ಮಾಯವಾಯಿತು.  ಸಮುದ್ರದಲ್ಲಿಯ ಅತಿ ಸೂಕ್ಷ್ಮ ಜೀವಿಗಳೇ ಅದಕ್ಕೆ ಕಾರಣ ಎಂಬ ತೀರ್ಮಾನಕ್ಕೆ ಬಂದ.  ಸಮುದ್ರದ ನೀರಿನಲ್ಲಿ ಕ್ಷೋಭೆಯುಂಟಾದಾಗ ದೀಪ್ತಜೀವಿಗಳು ಬೆಳಕನ್ನು ಸ್ಫುರಿಸುತ್ತವೆ.  ಇದರಿಂದ, ಕೆಲವೊಮ್ಮೆ ಹಡಗು ಬೆಂಕಿಯ ಮಧ್ಯೆ ಚಲಿಸುತ್ತಿದೆ ಎನ್ನುವಂತೆ ಕಾಣುತ್ತದೆ.

ಸಸ್ಯ ಪ್ರಪಂಚದಲ್ಲಿ ಪಾಚಿ, ಅಣಬೆಗಳು ಮತ್ತು ಬ್ಯಾಕ್ಟೀರಿಯಾಗಳಲ್ಲಿ ಕೆಲವು ಜಾತಿಗಳು ಮಾತ್ರ ಬೆಳಕು ಚೆಲ್ಲುತ್ತವೆ.  ಪ್ರಾಣಿಪ್ರಪಂಚದಲ್ಲಿ ಇಂಥ ಹೇರಳವಾದ ಉದಾಹರಣೆಗಳು ದೊರೆಯುತ್ತವೆ.  ಅತಿ ಸರಳ ಜೀವಿಗಳಾದ ಪ್ರೋಟೋಜೋವದಿಂದ ಹಿಡಿದು ಮೀನುಗಳವರೆಗೆ ಬಗೆಬಗೆಯ ಪ್ರಾಣಿಗಳು ಬೆಳಕು ಚೆಲ್ಲುತ್ತವೆ.  ಆದರೆ ಉಚ್ಚಕಶೇರುಕಗಳಾದ ಉಭಯ ಜೀವಿ, ಸರೀಸೃಪ, ಪಕ್ಷಿ ಮತ್ತು ಸಸ್ತನಿಗಳಲ್ಲಿ ಇಂತಹ ಒಂದು ಉದಾಹರಣೆಯೂ ಸಿಗುವುದಿಲ್ಲ.

ಜೀವಿಗಳಲ್ಲಿ ಬೆಳಕು ಚೆಲ್ಲುವ ಅಂಗಾಂಗಗಳು ಬೇರೆ ಬೇರೆಯಾಗಿವೆ.  ಬ್ಯಾಕ್ಟಿರಿಯಾ ಮತ್ತು ಕೆಲವು ಏಕಕೋಶ ಜೀವಿಗಳು ಇಡೀ ದೇಹದಿಂದ ಬೆಳಕು ಸೂಸುತ್ತವೆ.  ಮಿಂಚು ಹುಳುಗಳಂತಹ ತುಸು ದೊಡ್ಡ ಪ್ರಾಣಿಗಳಲ್ಲಿ ವಿಶೇಷವಾದ ಜೀವಕೋಶಗಳ ಗುಂಪಿನಿಂದ ಬೆಳಕು ಚಿಮ್ಮುತ್ತದೆ.  ಅಣಬೆಗಳಲ್ಲಿ ಕೆಲವು ತಮ್ಮ ಇಡೀ ದೇಹದಿಂದ ಬೆಳಕು ಚೆಲ್ಲುತ್ತವೆ.  ಛತ್ರಿಯ ಕೆಳಗಡೆ ಇರುವ ಪದರಗಳಿಂದ ಕೆಲವು ಬೆಳಕು ಸೂಸುತ್ತವೆ.

ದೀಪ್ತಶೀಲ ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರಗಳು ಸದಾ ಬೆಳಕು ಸೂಸುತ್ತವೆ.  ಕೆಲವು ಪ್ರಾಣಿಗಳು ಅವು ಉತ್ತೇಜನಗೊಂಡಾಗ ಮಾತ್ರ ಬೆಳಕು ಹೊಮ್ಮಿಸುತ್ತವೆ.

ಬಣ್ಣಗಳು:  ದೀಪ್ತಶೀಲ ಜೀವಿಗಳು ಒಂದೊಂದೂ ಒಂದೊಂದು ಬಗೆಯ ಬಣ್ಣವನ್ನು ಸೂಸುತ್ತವೆ.  ಸಾಧಾರಣವಾಗಿ ನೀಲಿಮಿಶ್ರಿತ ಬಣ್ಣವೇ ಹೆಚ್ಚು.  ಮಿಣುಕು ಹುಳುಗಳ ಬೆಳಕು ಹಳದಿ ಮಿಶ್ರಿತ ಹಸಿರು.  ದ. ಅಮೇರಿಕಾದಲ್ಲಿ ಕಾಣಸಿಗುವ ಒಂದು ಜಾತಿಯ ಜೀರುಂಡೆ ಮತ್ತು ಸಾಗರದ ಸ್ಕ್ವಿಡ್ ಮೀನು ಕೆಂಪು ಬಣ್ಣದ ಬೆಳಕು ಚಿಮ್ಮಿಸುತ್ತವೆ.  ಅಲ್ಲಿಯೇ ಕಾಣಸಿಗುವ `ರೇಲ್‌ರೋಡ್ ವರ್ಮ್’ ಹಳದಿಮಿಶ್ರಿತ ಹಸಿರು ಮತ್ತು ಕೆಂಪು – ಎರಡು ಬಗೆಯ ಬಣ್ಣಗಳನ್ನು ಚೆಲ್ಲುತ್ತದೆ.  ಸುಮಾರು ೫ ಸೆ.ಮೀ ಉದ್ದವಿರುವ ಈ ಹುಳದ ತಲೆಯ ಭಾಗದಲ್ಲಿ ಕಡುಗೆಂಪು ದೀಪ್ತಶೀಲ ಚುಕ್ಕೆಗಳಿರುತ್ತವೆ.  ಎಂಟು ವಲಯಗಳಿಂದ ಮಾಡಲ್ಪಟ್ಟ ಅದರ ಉದರದ ಎರಡು ಕಡೆಗಳಿಂದ ಹಳದಿಮಿಶ್ರಿತ ಹಸಿರು ಬಣ್ಣವು ಚಿಮ್ಮುತ್ತದೆ.  ಕತ್ತಲಲ್ಲಿ ಉದರದ ಎರಡು ಕಡೆಗಳಿಂದ ಹಳದಿಮಿಶ್ರಿತ ಹಸಿರು ಬಣ್ಣವು ಚಿಮ್ಮುತ್ತದೆ.  ಕತ್ತಲಲ್ಲಿ ಉದರದ ಬೆಳಕು ರೈಲಿನ ಕಿಟಕಿಗಳಂತೆ ಕಾಣಿಸುತ್ತದೆ.  ತಲೆಯ ಭಾಗದ ಕೆಂಪು ಬಣ್ಣ ರೈಲು ಇಂಜಿನ್‌ನಂತೆ ಕಾಣಿಸುತ್ತದೆ.  ಹುಳುವು ಮೆಲ್ಲಮೆಲ್ಲನೆ ತೆವಳುತ್ತ ಸಾಗಿದಂತೆ ಪುಟ್ಟ ದೀಪ್ತರೈಲು ನಿಧಾನವಾಗಿ ಸಾಗುತ್ತಿರುವಂತೆ ಭಾಸವಾಗುತ್ತದೆ.

ಜೀವಿಗಳು ಹೊರಚೆಲ್ಲುವ ಬಣ್ಣವು ಪರ್ಯಾಯ ಪರಿಸ್ಥಿತಿಯಲ್ಲಿ ಬದಲಾಗಬಹುದು.  ಈ ಬೆಳಕಿನಿಂದ ಅತ್ಯಲ್ಪ ಪ್ರಮಾಣದ ಅಂದರೆ ೦.೦೦೧೦ ಸೆ.ನಷ್ಟು ಕಡಿಮೆ ಉಷ್ಣತೆ ಉತ್ಪತ್ತಿಯಾಗುತ್ತದೆ.  ಹಾಗಾಗಿ ಜೈವಿಕ ದೀಪ್ತಿಯನ್ನು `ತಂಪು ದೀಪ’ ಎಂದೂ ಕರೆಯುತ್ತಾರೆ.

ಶೈತ್ಯದ ವ್ಯವಸ್ಥೆಯಿಲ್ಲದೆ ಮಾಂಸವನ್ನು ಹಾಗೆಯೇ ಇಟ್ಟರೆ ಕೆಲವು ಬಾರಿ ಅದರಿಂದ ನೀಲಿಬಣ್ಣದ ಬೆಳಕು ಹೊರಹೊಮ್ಮುತ್ತದೆ.  ಇದರರ್ಥ ಮಾಂಸ ಬೆಳಕು ಚೆಲ್ಲುತ್ತದೆ ಎಂದಲ್ಲ.  ಬೆಳಕು ಸೂಸುವ ಬ್ಯಾಕ್ಟಿರಿಯಾ ಅದರಲ್ಲಿ ಸೇರಕೊಳ್ಳುವುದರಿಂದ ಹೀಗಾಗುತ್ತದೆ.  ಕೆಲವು ಜಾತಿಯ ಮೀನುಗಳ ದೇಹದಲ್ಲಿ ಬೆಳಕು ಚೆಲ್ಲುವ ಬ್ಯಾಕ್ಟೀರಿಯಾಗಳು ಸದಾ ವಾಸವಾಗಿರುತ್ತವೆ.  ಬೆಳಕಿನ ಸಹಾಯದಿಂದ ಮೀನು ಪರಭಕ್ಷಕಗಳಿಂದ ಬಚಾವಾಗುತ್ತವೆ.  ಬ್ಯಾಕ್ಟೀರಿಯಾಗೆ ಮೀನಿನಿಂದ ಆಹಾರ ದೊರೆಯುತ್ತದೆ.  ಹೀಗೆ ಎರಡು ಜೀವಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುತ್ತವೆ.  ಇದು ಸಹಜೀವನದ ಒಂದು ಅತ್ಯುತ್ತಮ ಉದಾಹರಣೆ.

ರಾಸಾಯನಿಕ ಕ್ರಿಯೆ

ಶಿಲೀಂಧ್ರಗಳು ಬೆಳಕು ಹೊರಸೂಸುವುದನ್ನು ೧೬೭೭ರಲ್ಲಿ ಮೊತ್ತ ಮೊದಲಿಗೆ ಪ್ರಚುರಪಡಿಸಿದವನು ರಾಬರ್ಟ್ ಬಾಯ್ಲ್.  ಅದೇ ರೀತಿ ರೀಮುರ್‍ ಮತ್ತು ಸ್ವಾಲಂಜನಿ, ಜೆಲ್ಲಿ ಮೀನು ಬೆಳಕು ಹೊಮ್ಮಿಸುವುದನ್ನು ಕುರಿತು ವಿವರಿಸಿದರು.  ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ಜೈವಿಕ ದೀಪ್ತಿಗೆ ಆಕ್ಸಿಜನ್ ಅವಶ್ಯಕ ಎಂದು ರಾಬರ್ಟ್ ಬಾಯ್ಲ್ ತೋರಿಸಿಕೊಟ್ಟ.  ಬೆಳಕು ಚೆಲ್ಲಲು ನೀರು ಅವಶ್ಯಕ ಎಂದು ರೀಮರ್‍ ಮತ್ತು ಸ್ವಾಲಂಜನಿ ೧೯೯೪ರಲ್ಲಿ ಪ್ರತಿಪಾದಿಸಿದರು.

ಜೈವಿಕ ದೀಪ್ತಿಯ ರಸಾಯನ ವೃತ್ತಾಂತವನ್ನು ಕುರಿತು ಅಧ್ಯಯನ ನಡೆಸಿದವರಲ್ಲಿ ರಫೇಲ್ ಡುಬೋಸ್ (೧೮೮೭) ಪ್ರಮುಖನಾದವನು.  ಅವನು ಬೆಳಕು ಚೆಲ್ಲುವ ಮೃದ್ವಂಗಿ `ಫೋಲಸ್ ಡಾಕ್ಟೈಲಸ್‌’ನಲ್ಲಿ ಅಧ್ಯಯನ ನಡೆಸುತ್ತಿದ್ದ.  ಮೃದ್ವಂಗಿಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಪೇಸ್ಟ್ ಆಗುವವರೆಗೆ ಅರೆದಾಗ ಅವನಿಗೆ ಎರಡು ಪ್ರಮುಖ ವಸ್ತುಗಳನ್ನು ಬೇರ್ಪಡಿಸಲು ಸಾಧ್ಯವಾಯಿತು.  ಒಂದು `ಲೂಸಿಫರೇಸ್’ ಎಂಬ ಎನ್‌ಜೈಮು, ಮತ್ತೊಂದು `ಲುಸಿಫೆರಿನ್’.  ಲುಸಿಫೆರಿನ್ ಎಂದರೆ `ಬೆಳಕು ಉತ್ಪಾದಿಸುವ’ ಎಂದರ್ಥವಾಗುತ್ತದೆ.  ಲುಸಿಫೆರೇಸ್ ಸಮ್ಮುಖದಲ್ಲಿ ಲುಸಿಫೆರಿನ್ ಆಕ್ಸಿಜನ್‌ದೊಡನೆ ಬೆರೆತಾಗ, ಬೆಳಕು ಉಂಟಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ದೀಪ್ತಬ್ಯಾಕ್ಟಿರಿಯಾ, ಮಿಂಚುಹುಳು ಮತ್ತು ಸಿಪ್ರಿಡಿನಾಗಳನ್ನು ಕುರಿತು ಆಳವಾದ ಸಂಶೋಧನೆ ಕೈಗೊಂದು ಅವುಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯನ್ನು ವಿವರಿಸಿದ್ದಾರೆ.

ದೀಪ್ತ ಬ್ಯಾಕ್ಟಿರಿಯಾದಲ್ಲಿನ ಲುಸಿಫೆರಿನ್ ಸಂಕೀರ್ಣವಾದ ಕಾರ್ಬನಿಕ ಸಂಯುಕ್ತ.  ಅದು ಅಪಕರ್ಷಿತ ಫ್ಲ್ಯಾವಿನ್ ಮನೋನ್ಯುಕ್ಲಿಯೋಟೈಡ್ ಮತ್ತು ಆಲ್ಡಿಹೈಡ್‌ಗಳಿಂದ ಮಾಡಲ್ಪಟ್ಟಿದೆ.  ಈ ಸಂಯುಕ್ತಗಳು ಮತ್ತು ಲುಸಿಫೆರೇಸ್ ದ್ರಾವಣ ರೂಪದಲ್ಲಿ ಜೊತೆಗೂಡಿದಾಗ ಆಕ್ಸಿಜನ್ ಉಪಸ್ಥಿತಿಯಲ್ಲಿ ಬೆಳಕು ಹೊತ್ತಿಕೊಳ್ಳುತ್ತದೆ.  ಲುಸಿಫೆರೇಸ್ ಘಟಕ ಇರುವವರೆಗೆ ಅದು ಉರಿಯುತ್ತದೆ.  ಈ ಆಕ್ಸಿಡೀಕರಣದಿಂದ ಉಳಿಯುವ ಉತ್ಪನ್ನವು ಮತ್ತೊಂದು ಸಂಯುಕ್ತವಾದ ಅಪಕರ್ಷಿತ ಡೈಫಾಸ್ಫೋಪೈರಿಡಿನ್ ನ್ಯೂಕ್ಲಿಯೋಟೈಡ್‌ನೊಂದಿಗೆ ವರ್ತಿಸಿದಾಗ ಲುಸಿಫೆರಿನ್ ಮತ್ತೆ ರೂಪ ತಾಳುತ್ತದೆ!  ಹೀಗೆ ಈ ಎರಡು ಕ್ರಿಯೆಗಳು ಒಂದಾದನಂತರ ಒಂದರಂತೆ ನಡೆದು ಬೆಳಕು ಹೊತ್ತಿಕೊಳ್ಳುತ್ತದೆ.

ಮಿಂಚು ಹುಳುವಿನಲ್ಲಿ ಬೆಳಕು ಚಿಮ್ಮಲು ಲುಸಿಫೆರಿನ್, ಆಕ್ಸಿಜನ್, ಲುಸಿಫೆರೇಸ್, ಎಟಿಪಿ (ಅಡಿನೋಸಿನ್ ಟ್ರೈ ಫಾಸ್ಟೇಟ್) ಮತ್ತು ಮ್ಯಾಗ್ನಿಸಿಯಂ ಅಯಾನುಗಳು ಅತ್ಯಾವಶ್ಯಕ.  ಈ ಎಲ್ಲ ಘಟಕಗಳನ್ನೂ ಪ್ರನಾಳದಲ್ಲಿ ಮಿಶ್ರ ಮಾಡಿದರೆ ಬೆಳಕು ಹೊತ್ತಿಕೊಳ್ಳುತ್ತದೆ.  ಇವುಗಳಲ್ಲಿ ಯಾವುದಾದರೂ ಒಂದು ಘಟಕಾಂಶ ತಪ್ಪಿದಲ್ಲಿ ಬೆಳಕು ಚಿಮ್ಮುವುದಿಲ್ಲ.

ಸಮುದ್ರದ ಮೈಲ್ಮೈ ಮೇಲೆ ಬೆಳಕು ಕಾಣಿಸುವುದು ಬಹುಪಾಲು ಸಿಪ್ರಿಡಿನಾದಿಂದ.  ಅದರಲ್ಲಿ ಲುಸಿಫೆರಿನ್ ಮತ್ತು ಲುಸಿಫೆರೇಸ್‌ಗಳು ಬೇರೆ ಬೇರೆ ಗ್ರಂಥಿಕೋಶಗಳಲ್ಲಿ ತಯಾರಾಗಿ ಪ್ರಾಣಿಯ ಬಾಯಿಯ ಹತ್ತಿರದ ರಂಧ್ರಗಳಿಂದ ಹೊರಬಿದ್ದು, ನೀರಿನಲ್ಲಿ ಕಲೆತಾಗ ದೀಪ್ತಿ ಹತ್ತಿಕೊಳ್ಳೂತ್ತದೆ!  ಅದರಿಂದ ನೀರಿಗೇ ಬೆಂಕಿ ಬಿದ್ದಂತೆ ಭ್ರಮೆಯಾಗುತ್ತದೆ.

ಪ್ರಾಮುಖ್ಯ

ಜೀವಿಗಳು ಜೈವಿಕ ದೀಪ್ತಿಯನ್ನು ಮೂರು ವಿಧಗಳಲ್ಲಿ ಉಪಯೋಗಿಸಿಕೊಳ್ಳುತ್ತವೆ:  ಭಕ್ಷಣೆಗೆ ಜೀವಿಗಳನ್ನು ಆಕರ್ಷಿಸಲು, ಪರಭಕ್ಷಕಗಳಿಂದ ಬಚಾವಾಗಲು ಮತ್ತು ಸಂಪರ್ಕ ಏರ್ಪಡಿಸಲು.  ಕೆಂಪು ಸಮುದ್ರ, ಫೆಸಿಪಿಕ್ ಮತ್ತು ಹಿಂದೂಹಾಸಾಗರಗಳಲ್ಲಿ ಕಾಣಸಿಗುವ ಫೋಟೋಬ್ಲಾಫರನ್ ಮೀನಿನ ಕಣ್ಣಿನ ಕೆಳಗಡೆಯ ತೇಪೆಗಳಲ್ಲಿ ಬೆಳಕು ಚಿಮ್ಮಿಸುವ ಬ್ಯಾಕ್ಟೀರಿಯಾ ಸದಾ ವಾಸವಾಗಿರುತ್ತವೆ.  (`ಫೋಟೋ ಬ್ಲಾಪರಾನ್’ ಎಂದರೆ ಗ್ರೀಕ್ ಭಾಷೆಯಲ್ಲಿ `ಬೆಳಕಿನ ಕಣ್ಣುರೆಪ್ಪೆಗಳು’ ಎಂದರ್ಥ!).  ಈ ತೇಪೆಯು ಒಂದು ತೆಳುವಾದ ಪೊರೆಯಿಂದ ಆವೃತ್ತವಾಗಿದ್ದು, ಅದನ್ನು ತೇಪೆಯ ಮೇಲೆಳೆದುಕೊಂಡು ಬೆಳಕು ಹೊರಸೂಸದಂತೆ ನಿಯಂತ್ರಿಸಬಲ್ಲದು.  ಸಮುದ್ರದಲ್ಲಿ ದಿಬ್ಬದ ಸುತ್ತಲೂ ಅಸಂಖ್ಯ ಮೀನಿಗಳ ಸಮಷ್ಟಿಯು ದೀಪ್ತ ಸೆಲೆಯ ಸೆಳೆತದಿಂದ ಪ್ರಾಣಿಗಳನ್ನು ಆಕರ್ಷಿಸಿ ಆಹಾರ ಪಡೆಯುತ್ತವೆ.  ಗಂಡು-ಹೆಣ್ಣು ಮೀನುಗಳ ನಡುವೆ ಸಂಪರ್ಕವೂ ಏರ್ಪಡುತ್ತದೆ.  ಈ ಮೀನನ್ನು ವೈರಿಯು ಬೆನ್ನಟ್ಟಿದಾಗ ಅದು ಅಂಕುಡೊಂಕಾಗಿ ಈಜುತ್ತದೆ.  ಹೀಗೆ ಚಲಿಸುವಾಗ ಬೆಳಕು ಒಮ್ಮೊಮ್ಮೆ ಹೊತ್ತಿಕೊಂಡು ಆರುತ್ತಿರುತ್ತದೆ.  ಹೀಗೆ ಪರಭಕ್ಷಕಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ.

ನ್ಯೂಜಿಲೆಂಡ್‌ನ ಹಲವು ಗವಿಗಳ ಚಾವಣಿಯನ್ನು ಹಲವಾರು ಮಿಂಚುಹುಳುಗಳು ಆವರಿಸಿರುತ್ತವೆ.  ಇವು ದೀಪ್ತಶೀಲ ದಾರಗಳನ್ನು ಹೆಣೆದು ಒಂದು ರೀತಿಯ ಅಂಟು ಪದಾರ್ಥವನ್ನು ಒಸರುತ್ತವೆ.  ಉಜ್ಜಲವಾದ ದೀಪ್ತಿಯಿಂದ ಕೀಟಗಳು ಆಕರ್ಷಿತವಾಗಿ ಜಾಲದಲ್ಲಿ ಸಿಕ್ಕಿಕೊಳ್ಳುತ್ತವೆ.

ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ವಾಸಿಸುವ ಆದಿವಾಸಿಗಳು ಇರುಳಿನಲ್ಲಿಯೂ ಕಾಡುಗಳಲ್ಲಿ ಸುತ್ತಾಡುತ್ತಾರೆ.  ಅವರು ತಮ್ಮ ಕಾಲಿನ ಹೆಬ್ಬೆರಳುಗಳಿಗೆ ಮಿಂಚು ಹುಳುಗಳನ್ನು ಕಟ್ಟಿಕೊಂಡು ನಡೆಯುತ್ತಾರಂತೆ.

ಬ್ರೆಜಿಲ್ ದೇಶದ ಸ್ತ್ರೀಯರು ಮಿಂಚುಹುಳುಗಳನ್ನು ತಮ್ಮ ಕೇಶದಲ್ಲಿ ಅಡಗಿಸಿಕೊಳ್ಳುವರಂತೆ.  ಕಿರಣಗಳನ್ನು ಸ್ಫುರಿಸುವ ಈ ಮಿಂಚುಹುಳುಗಳು ಸೌಂದರ್ಯವನ್ನು ಹೆಚ್ಚಿಸುವುವಂತೆ!

ಮಿಂಚುಹುಳುಗಳಿಂದ ತುಂಬಿಸಿದ ಲಾಂದ್ರವನ್ನು ಹಲವು ದೇಶಗಳಲ್ಲಿ ಉಪಯೋಗಿಸುತ್ತಾರೆ.

ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಳಕು ಚಲ್ಲುವ ಜೀವಿಗಳ ದೇಹದಿಂದ ಬೇರ್ಪಡಿಸಿದ `ಜೀನ್‌’ಅನ್ನು ಬೆಳೆಗಳಲ್ಲಿ ಸೇರಿಸುವ ಯೋಜನೆಯಲ್ಲಿದ್ದಾರೆ.  ನೀರು ಅಥವಾ ಗೊಬ್ಬರದ ಕೊರತೆಯಾದಾಗ ಬೆಳೆಗಳು ಬೆಳಕು ಚೆಲ್ಲುವಂತಾದರೆ ರೈತರು ತಮ್ಮ ಹೊಲಕ್ಕೆ ಅಗತ್ಯವಿರುವಾಗ ಮಾತ್ರ ನೀರು ಅಥವಾ ಗೊಬ್ಬರ ಉಣಿಸುವ ಕಾಲ ಬರಬಹುದು!

೧೯೯೮
*****

ಕೀಲಿಕರಣ:

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...