ನಿಲುವು

ಪ್ರಿಯ ಸಖಿ,
ಇದು ಕಂಪ್ಯೂಟರ್ ಯುಗ. ಬಟನ್ ಒತ್ತಿದರೆ ಸಾಕು ಬೇಕೆಂದ ಮಾಹಿತಿ ನಿಮಿಷಾರ್ಧದಲ್ಲಿ ಕಣ್ಮುಂದೆ ಬರುತ್ತದೆ. ಇದು ಮಾಹಿತಿಯ ವಿಷಯಕ್ಕಾಯ್ತು. ಆದರೆ, ವ್ಯಕ್ತಿಯೊಬ್ಬನ ಭಾವನೆಗಳನ್ನು ಹೀಗೆ ಇಷ್ಟೇ ಸಲೀಸಾಗಿ ಅರ್ಧೈಸಲಾದೀತೇ? ವ್ಯಕ್ತಿಯ ಭಾವನೆಗಳನೇಕ ಇಂದಿಗೂ ನಿಗೂಢವಾಗಿಯೇ ಉಳಿದಿವೆ. ಎಷ್ಟೇ ಸರಳ ವ್ಯಕ್ತಿಯನ್ನೂ ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟದ ಮಾತೇ. ಅದಕ್ಕೆಂದೇ ವ್ಯಕ್ತಿ ಗುಂಪಿನಲ್ಲಿದ್ದಾಗಲೂ ಒಬ್ಬಂಟಿಯೇ! ಅವನ ಮನದ ಭಾವನೆಗಳು ಅವನಿಗಷ್ಟೇ ಪರಿಪೂರ್ಣವಾಗಿ ಅರ್ಥವಾದೀತು. ಎಷ್ಟೆಲ್ಲಾ ಸೃಷ್ಟಿಸಿರುವ ಮಾನವನಿಗೆ, ಮನಸ್ಸಿಗೊಂದು ಸಮರ್ಥ ಕನ್ನಡಿಯನ್ನು, ವ್ಯಕ್ತಿಯ ಮನಸ್ಸನ್ನೋದುವ ಕಂಪ್ಯೂಟರ್ ಒಂದನ್ನು ಇಂದಿಗೂ ಸೃಷ್ಟಿಸಲಾಗಿಲ್ಲ.

ವ್ಯಕ್ತಿಯೊಬ್ಬ ಅರ್ಥವಾಗದಿರುವುದಕ್ಕೆ ಒಂದು ಕಾರಣ ಅವನು ಹಾಕಿಕೊಂಡಿರುವ ಮುಖವಾಡಗಳು. ಸಮಯಕ್ಕೆ ತಕ್ಕಂತೆ, ಎದುರಿನ ವ್ಯಕ್ತಿಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಮುಖವಾಡಗಳನ್ನು ಹಾಕಿಕೊಳ್ಳುವ ಕಲೆ ಮನುಷ್ಯನಿಗೆ ಚೆನ್ನಾಗಿ ಕರಗತವಾಗಿದೆ. ಕೆಲವೊಮ್ಮೆ ತಾನು ತೊಟ್ಟುಕೊಂಡ ಮುಖವಾಡವೇ ನಿಜಮುಖವೆಂದು ಅವನ ಮುಖವಾಡ ಸಮರ್ಥವಾಗಿ ನಟನೆಯಾಡುತ್ತದೆ.

ಹಾಗೆಂದು ವ್ಯಕ್ತಿಯೊಬ್ಬನಿಗೆ ಖಾಸಗಿ ಬದುಕೊಂದು ಇರಲೇಬಾರದೆಂದು ಇದರರ್ಥವಲ್ಲ. ಆದರೆ ತನ್ನ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡು ಬದುಕುವ ವ್ಯಕ್ತಿ ಪೊಳ್ಳು ಸ್ವಾರ್ಥಕ್ಕೆ ಬಲಿಯಾಗಿ ಹೇಗೆಂದರೆ ಹಾಗೆ ವ್ಯಕ್ತಿತ್ವ ಬದಲಿಸುವ ಊಸರವಳ್ಳಿಯಾಗಬಾರದಲ್ಲವೇ ಸಖಿ? ಜಿ. ಎಸ್. ಶಿವರುದ್ರಪ್ಪನವರ ‘ನಿಲುವು’ ಎಂಬ ಈ ಕವನದ ಸಾಲುಗಳು ಇದನ್ನೇ ಸಮರ್ಥಿಸುತ್ತವೆ.

ಬಚ್ಚಿಟ್ಟುಕೊಂಡು ಬದುಕುವುದು ನನಗಿಷ್ಟವಿಲ್ಲ
ಹಾಗಂತ ಎಲ್ಲವನ್ನೂ ಬಿಚ್ಚಿ ಹರಾಜಿಗಿಡುತ್ತೇನೆಂದು
ಇದರರ್ಥವಲ್ಲ
ಬಹುದೊಡ್ಡ ಮಾತನಾಡುತ್ತ
ದಿನದಿನದ ಸರಳ ಸಾಧಾರಣದ ಬದುಕಿ –
ಗವಮಾನ ಮಾಡುವವರನ್ನು ಕಂಡರೆ
ನನಗೆ ಆಗುವುದಿಲ್ಲ
ತೂಗಾಡುವ ಕಿರೀಟಗಳಿಗೆ ತಕ್ಕಂತೆ
ತಲೆಯ ಆಕಾರಗಳನ್ನು ಬದಲಾಯಿಸುತ್ತ
ಪರದಾಡುವುದು ನನಗೆ ಅಭ್ಯಾಸವಿಲ್ಲ

ಎನ್ನುತ್ತಾರೆ. ವ್ಯಕ್ತಿಯೊಬ್ಬ ಪ್ರಾಮಾಣಿಕನಾದಾಗ ಮುಖವಾಡಗಳಿಲ್ಲದೇ ಕಿರೀಟವಿದೆಯೆಂದು ಅದರ ಆಕಾರಕ್ಕೆ ತಕ್ಕಂತೆ ತನ್ನ ತಲೆಯನ್ನು ಬದಲಿಸದೇ ತನ್ನ ನಿಲುವನ್ನು, ತನ್ನ ವ್ಯಕ್ತಿತ್ವವನ್ನು ಸಮರ್ಥಿಸುವಂತೆ ಪಾರದರ್ಶಕವಾಗಿ ಬದುಕಿದರೆ ಅದಕ್ಕಿಂತಾ ದೊಡ್ಡ ಬದುಕು ಬೇರಾವುದಿದೆ? ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾಳ ಒಳ್ಳೇವ್ರ್‍ ನಮ್ ಮಿಸ್ಸು
Next post ಶೆಲ್ಲಿಗೆ

ಸಣ್ಣ ಕತೆ

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ರಾಜಕೀಯ ಮುಖಂಡರು

  ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ತಿಮ್ಮರಯಪ್ಪನ ಕಥೆ

  ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…