ನಿನ್ನ ಕೊರಗಲಿ ನೀನು ಹಾಡಿದಾ ಹಾಡುಗಳು
ನನ್ನ ಹೃದಯದೊಳಿಂದು ಕ್ರಾಂತಿಯನು ಹೊತ್ತಿಸಿವೆ.
ಕ್ರಾಂತಿರಸಋಷಿ ಶೆಲ್ಲಿ!  ಆದರ್ಶವೊಂದೊಲಿದು
ಜಗದ ರೂಢಿಯನೆತ್ತಿ ಬದಿಗೆಸೆದು ಮುನ್ನಡೆದೆ.
ಅದಕಾಗಿ ಜಗ ನಿನ್ನ ದೂರಿ ದೂರಿಟ್ಟಾಯ್ತು-
ಬಗೆಬಗೆಯ ಚಿಂತೆಗಳ, ನೂರಾರು ಎಡರುಗಳ
ನಿನ್ನ ದಾರಿಯಲೆಸೆದು ಜಗವೆಲ್ಲ ಮುಳ್ಳಾಯ್ತು!
ಅದರ ಮೇಲ್ನೀಬೀಳೆ ಚಿಮ್ಮಿ ಹೊಮ್ಮಿತು ರಕ್ತ!

ಸುಖ ಬಂದರೂ ಬರಲಿ, ದುಃಖ ಬಂದರು ಸರಿಯೆ
ಸುಖದುಃಖಗಳ ಪ್ರೇಮ ಬೆಳಗಿಸುವ ದೀಪಗಳು
ಎನುವ ನಿನ್ನಯ ಕೆಚ್ಚು ಹೃದಯವನು ಬೆಳಗಿಸಿರೆ
ಎನಿತಾದರೂ ಬರಲಿ, ಕಷ್ಟಗಳು ಕನಸುಗಳು!
ಅದಕಾಗಿ ನೀನೆನಗೆ ಬಲು ಮೆಚ್ಚು ಕವಿಗಳಲಿ
ವಿಶ್ವಪ್ರೇಮದ ಕ್ರಾಂತಿ ಕಲಿತೆ ನಾ ನಿನ್ನ ಬಳಿ!
*****