ಕವಿತೆಯಂದರೇನು?
ಕಣ್ಣು, ಕಿವಿ, ಮೂಗು,
ಅಗಲವಾದ ಬಾಯಿ!
ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ!
ಸುಗಂಧ, ಪರಿಮಳ ದ್ರವ್ಯ!
ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ!
ಕಾಮನ ಬಿಲ್ಲಿನ ಸೊಬಗಿನಂತೆ!


ಕವಿತೆಯೆಂದರೇನು?
ಕೈ, ಕಾಲು ಸಣ್ಣ,
ಹೊಟ್ಟೆ ಡುಬ್ಬಾನಲ್ಲ!
ತಗಡು ಡಬ್ಬವಲ್ಲ!
ಕಹಳೆ ಪಾಂಗಿನಂತೆ,
ಶಬ್ದ ದ್ರವ್ಯದಂತೆ,
ಅಭ್ಯಂಜನ ಸ್ನಾನದಂತೆ!
ಮದುವೆ ದಿಬ್ಬಣದಂತೆ!
ವಧು, ವರರ, ಗಂಭೀರ ಹಂಸ ನಡಿಗೆಯಂತೆ.
ಮಂಗಳ ವಾದ್ಯದಂತೆ,
ಗಟ್ಟಿ ಮೇಳದಂತೆ,
ಗುಡಿಯೊಳಗಿನ ಘಂಟೆ ನಾದದಂತೆ,
ಆರತಿ, ಧೂಪದಂತೆ,
ತೀರ್ಥಪ್ರಸಾದ, ಭೋರಿ ಭೋಜನದಂತೆ!
ತಾಂಬೂಲ ಜಗಿದು, ನಾಲಿಗೆ, ತುಟಿ, ಕೆಂಪಾದ ಕಂಪಿನಂತೆ!


ಕವಿತೆಯೆಂದರೇನು?
ಬಡವ ಧನಿಕನ ಅಂತರವಲ್ಲ!
ಊರುಕೇರಿಯ ಅನುಬಂಧದಂತೆ.
ಆಕಾಶ, ಭೂಮಿಯ, ಗುರುತ್ವಾಕರ್ಷಣೆಯಂತೆ.
ಗುಡಿಸಲು ಮಹಡಿಯ ಅಂತರವಲ್ಲ!
ಹೃದಯ ಶ್ರೀಮಂತಿಕೆಯ ಬಾಣ.
ಮಾರಿಗುಡಿಯ ಕೋಣ!
ಜಾಣ ಕವಿಯ ತಾಣ!
ಒಮ್ಮೆ ಬಿಟ್ಟು ಮತ್ತೊಮ್ಮೆ…
ಓದಿ, ಓದಿಸಿ, ಹಾಡಿ, ನಲಿ ನಲಿವ, ಕಾಜಾಣ!
ಸ್ವರ್ಗ ಸುಖದ ತಾಣ!


ಕವಿತೆಯೆಂದರೇನು?
ಹೆಣ್ಣು: ಹೆಣ್ಣಿಗೆ ಎಲ್ಲೆಲ್ಲಿ… ಹೇಗೇಗೆ… ಏನೇನು…
ಎಶ್ಟೆಷ್ಟು… ಇರಬೇಕೋ??…
ಅಶ್ಟೆಷ್ಟಿದ್ದರೆ… ಸಾಲಂಕೃತ ಅಲಂಕಾರ!
ಉಳಿದದ್ದು ಅಹಂಕಾರ!
ಪ್ರತಿಭೆ, ಉತ್ಪತ್ತಿ, ವ್ಯಾಕರಣ, ಛಂದಸ್ಸು, ಲಯ!
ಲಘು, ಗುರು, ಅನುಪ್ರಾಸ, ಅಂತ್ಯಪ್ರಾಸಗಳ ಮೋಡಿ…
ಕೋಡಿ ಬಿದ್ದ ಕೆರೆ, ಕುಂಟೆ, ಜಲಾಶಯಗಳಂತೆ…
ಕೇಶಿರಾಜ, ದಂಡಿ, ವ್ಯಾಸ, ದಾಸ, ಭಾಸರ ಲಾಸ್ಯ ಹಾಸ್ಯದಂತೆ…
ಬ್ರಹ್ಮ ಮೆಚ್ಚಿ, ಜೊಲ್ಲು ಸುರಿಸಿ, ಲಗ್ನವಾದ ಗುಂಗಿನಂತೆ!
ಅಳೆದು, ತೂಗಿ, ಹಾವ, ಭಾವ, ವೈಯಾರ ಹಂಸ ನಡಿಗೆಯಂತೆ!


ಕವಿತೆಯೆಂದರೇನು?
ನವರಸ ಉಕ್ಕಿ, ಮದಗಜ ಸೊಕ್ಕಿ, ಹಕ್ಕಿಯ ಎರಡು ರೆಕ್ಕೆಗಳು!
ನೆರೆ ಹಾವಳಿ ಹೆಚ್ಚಿ, ವೀರ, ಶೂರ, ಧೀರ, ಸೈನಿಕನಂತೆ!!
ನವಗ್ರಹಗಳ ಶಾಂತಿ, ಮಂತ್ರದಂತೆ…
ವ್ಯಾಘ್ರನ ತೀಕ್ಷಣಮತಿ
ಭರದಿ ಪರಿಹಾರ ಕಾರ್‍ಯದಂತೆ…


ಕವಿತೆಯೆಂದರೇನು?
ಮಕ್ಕಳ ಹಾಲು ಹಲ್ಲಿನ ಸಾಲು…
ಪುಟ್ಟ ಕಂದಮ್ಮನ ಕಾಲು!
ಮಗುವಿನ, ಗೋಲಿಯಾಕಾರದ ಕಣ್ಣು!!
ಫಲವತ್ತಾದ ಮಣ್ಣು,
ಮಾಗಿದ ರಸಪುರಿ ಹಣ್ಣು,
ಗಜನಿಂಬೆ ಹೆಣ್ಣು, ಬೆರಗು ಬಿನ್ನಾಣಾಗಿತ್ತಿ!
ಕವಿತೆ, ಕವಿಯ ಕಣ್ಣು! ಕಣ್ಣೀರು! ಪನ್ನೀರು!
ಜಗದ ಹುಣ್ಣು! ವಿಸ್ಮಯದ ಅಭಿವ್ಯಕ್ತಿ…
*****