ಕಲ್ಲು ತಂದು ರೂಪುಮಾಡಿ
ದೇವನೆಂದು ಕರೆದು ನಿನ್ನ
ಎಲ್ಲ ಜಗದ ಒಡೆಯನಾಗಿ
ಕಾವುದೆಂದೆನು.

ಮೆಯ್ಯ ತೊಳೆದು ಹಾಲನೆರೆದು
ಹೂವು ಮುಡಿಸಿ ಗಂಧವಿಕ್ಕಿ
ತುಯ್ಯಲಿಟ್ಟು ದೀಪವಿಟ್ಟು
“ದೇವ” ಎಂದೆನು.

ನಾನು ಮಾಡೆ ನೀನು ಆದೆ
ನಾನು ಕಟ್ಟೆ ನಿನಗೆ ಗುಡಿಯು
ನಾನು ಒರೆಯೆ ನಿನಗೆ ತುತಿಯು
ನಾನೆ ಹಿರಿಯನು.

ಮರುಳನಂತೆ ಹಾಡಿ ಹಿಂದೆ
ಹಿರಿಯತನವ ಹೇರಿ ನಿನಗೆ
ಗರುವದೇವನೆಂದು ಕರೆದು
ಬಿರುದ ಹೊರಿಸಿದೆ.

ಇನಿತು ಕೃತಿಗಳೆನ್ನದಿರಲು
ಪುಣ್ಯ ಪಾಪ ಎಂಬ ಭಾರ
ಕರ್ಮ ಗಿರ್ಮ ಎಂಬ ಬಲೆಯ
ನೀನು ಹಾಕಿದೆ.

ನಾನು ತಗ್ಗಿ ತಗ್ಗಿ ನಡೆಯೆ
ನೀನು ಬೀಗಿ ಬೀಗಿ ಮೆರೆವೆ
ಮಾನವಿಲ್ಲ ನಿನಗೆ, ನೀನೆ
ಜಗದಿ ಭಂಡನು.

ದೇವನೆಂದು ನಿನ್ನ ಮಾಡಿ
ಜೀವದುಸಿರು ನಿನಗೆ ಕೊಟ್ಟು
ಸಾವದಾಯ್ತು, ಎನ್ನ ಭೂತ
ಎನ್ನ ತಿಂದಿತು.

ನಿನ್ನ ಗುಡಿಯು ನಿನ್ನ ಮೂರ್ತಿ
ಕಲ್ಲು ಗುಡಿಯು ಕಲ್ಲು ಮೂರ್ತಿ
ಭಿನ್ನವಾಗೆ ನೊಂದು ನಾನು
ಅತ್ತು ಮರುಗುವೆ.

ಎಲ್ಲ ಜನರ ಹೃದಯದಲ್ಲಿ
ನೆಲಸಿಯವರ ಕಷ್ಟ ದುಃಖ
ನೋಡಿ ನೋಡಿ ಕರಗದಿರುವೆ
ಕಟುಕನಲ್ಲವೆ?

ಮಾಯೆಯೆಂಬ ಬಲೆಯ ಬೀಸಿ
ಮನುಜ ಮೀನ ಹಿಡಿದು ತಿಂಬ
ಜಾಲಗಾರ ನಿನಗದೆಂತು
ದಯೆಯದಿಪ್ಪುದು.

ಹೊಲ್ಲೆತನವ ಪೆರ್ಮೆಯೆಂದು
ಎಲ್ಲ ಗುಣವ ಹೇಳಿಕೊಂಡು
ಕಳ್ಳನಂತೆ ಅಡಗಿಕೊಂಡು
ಕೈಗೆ ಸಿಕ್ಕದೆ,

ನೀಚತನಕೆ ನೀನೆ ಹೇಸಿ
ನಾಚಿಕೊಳುತ ಮುಖವ ಮರೆಸಿ
ಗೋಚರಿಸದೆ ತಿರುಗುತಿರುವೆ
ಲೋಕವರಿಯಲು.

ನಾಡನಾಳ್ವ ಸಾರ್ವಭೌಮ
ಬಿರುದು ಪಡೆದ ಚಕ್ರವರ್ತಿ
ಕಣ್ಗೆ ಕಾಂಬ ತೆರದಿ ನೀನು
ಕಾಣ ಬೇಡವೆ?

ರೂಪು ದೇಹ ಏನುಮಿಲ್ಲ
ಸೈಪು ಪಾಪ ಏನುಮಿಲ್ಲ
ಕಷ್ಟ ದುಃಖ ಅಂಟಲಿಲ್ಲ
ದೇವನೇತಕೆ ?

ಸಹಜನೆಂದು ಹಿರಿಯನೆಂದು
ಪರಮನೆಂದು ದೇವನೆಂದು
ಕಹಳೆ ಕೊಂಬು ಇಡಿಸಿಕೊಂಬೆ
ತೋರು ನೀನೆಲೆ!
*****