೪೦ ಡಿಗ್ರಿ ಬಿಸಿಲಿನ ತಾಪಕ್ಕೂ
Fail  ಎನ್ನುವ ರಿಜಲ್ಟಕ್ಕೂ ಬೆವರದ ನಾನು
ನಿನ್ನೆ ಮೊದಲನೆಯ ಮುತ್ತಿಗೆ ಬೆವೆತಿದ್ದೆ
ನೋಡಲಿಕ್ಕೆ ಚಂದ್ರನಂತೆ ತಂಪಾಗಿ ಕಂಡರೂ
ಗೆಳೆಯಾ
ಸೂರ್ಯನಕ್ಕಿಂತಲೂ ಜೋರಾಗಿದ್ದೀಯಾ
ಕನಸುಗಳು ಮೆತ್ತನೆ ಸುರಿಯುವ ಮಂಜಿನಂತೆ
ಭಾವನೆಗಳು ಗುಂಪಾಗುವ ಚದುರುವ ಮೋಡಗಳಂತೆ
ವಿಚಾರಗಳೆಲ್ಲ ನೆಲೆಗಳಿಲ್ಲದ ಸಮುದ್ರದಲೆಗಳಂತೆ
ಅನಿಸಿಕೆಗಳೆಲ್ಲ ಕಾಮನಬಿಲ್ಲಿನ ಚೂರು ಹೂವುಗಳಂತೆ
ಎಂದು ಹೂವಾಡಗಿತ್ತಿಯು ಪೋಣಿಸುವ ಹೂವಿನ ಹಾಗೆ
ನಿನ್ನನ್ನೆಲ್ಲದರಲ್ಲಿಯೂ ಪೋಣಿಸಿಕೊಂಡು
ನಾನು ರಂಗಾಗುವಾಗ
ನಿನ್ನ ಮುತ್ತಿನ ಮತ್ತೆ ಮತ್ತೆ ಕಾವು ಮುತ್ತುಗಳು
ನನ್ನನ್ನು ಕರಗಿಸುತ್ತವೆ
ನಾನು ಹಗುರಾಗಿ ಅರಳೆಯಂತೆ ಹಾರಾಡುತ್ತಿರುವಾಗ
ನನ್ನ ಖುಷಿಯ ಕಣ್ಣೀರು ನನ್ನನ್ನೇ
ತೋಯ್ಸಿದಂತಾಗಿ ಚಳಿಸುತ್ತೇನೆ
ಆಗಲೇ ನಿನ್ನ ಮುತ್ತುಗಳು
ನನ್ನಲ್ಲಿ ಪೋಣಿಸುತ್ತ ಬಳಿಸುತ್ತಿ ಬಿಸಿ ಏರಿಸುತ್ತಿ-
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)