ತನ್ನ ತಾನರಿಯದೆ ಅನ್ಯರಿಗೆ ಬೋಧೆಯ
ಹೇಳುವ ಕುನ್ನಿಗಳೇ ನೀವು ಕೇಳಿರೋ.
ಅವರ ಬಾಳುವೆ ಎಂತೆಂದರೆ,
ಕುರುಡ ಕನ್ನಡಿಯ ಹಿಡಿದಂತೆ,
ತನ್ನೊಳಗೆ ಮರೆದು,
ಇದಿರಿಂಗೆ ಬೋಧೆಯ ಹೇಳಿ,
ಉದರವ ಹೊರೆವ ಛೀಮಾರಿಗಳೆಲ್ಲರು ಹಿರಿಯರೆ?
ಆಲ್ಲಲ್ಲ. ಇದ ಮೆಚ್ಚುವರು ನಮ್ಮ ಶರಣರು?
ಅವರ ನಡೆ ಎಂತೆಂದರೆ,
ಒಳಗನರಿದು ಹೊರಗೆ ಮರೆದು,
ತನುವಿನೊಳಗಣ ಅನುವು ಹಸುಗೆಯ ಮಾಡಿದರು.
ಪೃಥ್ವಿಗೆ ಅಪ್ಪುವಿನ ಅಧಿಕವ ಮಾಡಿದರು.
ಅಗ್ನಿಯ ಹುದುಗಿದರು.
ವಾಯವ ಬೀರಿದರು.
ಆಕಾಶದಲ್ಲಿ ನಿಂದರು. ಓಂಕಾರವನೆತ್ತಿದರು.
ಅದರೊಡಗೂಡಿದರು. ಪ್ರಾಣದ ನೆಲೆಯನರಿದರು.
ಪ್ರಮಾಣವನೊಂದುಗೂಡಿದರು. ಮಹಾಬೆಳಗಿನಲ್ಲಿ
ಓಲಾಡುವ ಶರಣರ ವಾಗ್ಜಾಲವ ಕಲಿತುಕೊಂಡು,
ನುಡಿವ ಕಾಕುಮನುಜರೆತ್ತ ಬಲ್ಲರು ನಿಮ್ಮ ನೆಲೆಯ
ಅಪ್ಪಣಪ್ರಿಯ ಚನ್ನಬಸವಣ್ಣಾ?
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ