ಮೂಲ: ಆರ್ ಕೆ ನಾರಾಯಣ್
ಸಂಗೀತ ಕಚೇರಿ ಆಗತಾನೆ ಮುಗಿದಿತ್ತು. ನಾವು ಮನೆಗೆ ಹಿಂದಿರುಗುತ್ತಿದ್ದೆವು. ಸಂಗೀತ ಬಹಳ ಇಂಪಾಗಿತ್ತು. ನಮ್ಮ ಗುಂಪಿನಲ್ಲಿ ಹರಟೆ ಹರಿಯಪ್ಪನೂ ಇದ್ದನೆಂಬುದು ಕಾಣಿಸುವವರೆಗೂ ನನಗೆ ಅದೇ ಭಾವನೆ ಇತ್ತು. ಪಾತಾಳಲೋಕದ ಚಿತ್ರಹಿಂಸೆಯಿಂದ ತಪ್ಪಿಸಿಕೊಂಡು ಬಂದವನಂತೆ ಒದ್ದಾಡುತ್ತಿದ್ದ ಅವನು ; ನಾವು ಹುಬ್ಬು ಗಂಟುಹಾಕಿಕೊಂಡು ಅವನ ಕಡೆ ನೋಡಿ, ” ಓಹೋ, ಕರ್ನಾಟಕ ಸಂಗೀತ ನೂರು ವರ್‍ಷಗಳ ಹಿಂದೆಯೇ ಸತ್ತು ಹೋಗಿಬಿಟ್ಟಿತೆಂದು ಭಾವಿಸುವ ದೊಡ್ಡ ಮನುಷ್ಯರಲ್ಲಿ ನೀವೂ ಒಬ್ಬರೋ! ಅಥವಾ ತ್ಯಾಗರಾಜರು, ದೀಕ್ಷಿತರು, ಶಾಮಾಶಾಸ್ತ್ರಿಗಳು ಮುಂತಾದ ಮಾಘಟಗಳೊಡನೆಯೇ ಸದಾ ಓಡಾಡುತ್ತಿದ್ದು ಬಿಟ್ಟುದರಿಂದ ನಮ್ಮ ಕಾಲದ ಸಂಗೀತವೆಲ್ಲ ನಿಮ್ಮ ಪಾಲಿಗೆ ವಿಷದ ಹಾಗೆ ಕಾಣುತದೆಯೋ? ಇಲ್ಲದೆ ಹೋದರೆ, ಒಂದು ಹಾಡನ್ನು ಕೇಳಿದೊಡನೆ ಅದನ್ನು ಛಿದ್ರಛಿದ್ರವಾಗಿ ಹರಿದು ಬಿಸಾಟು ಟೀಕೆ ಬೋಕೆಗಳಿಂದ ಅದನ್ನು ಹೂತು ಹಾಕುವವರೆಗೂ ತೃಪ್ತಿಯುಂಟಾಗದಂಥ ಪಂಡಿತಮಂಡಲಿಗೆ ಸೇರಿದವರೋ?” ಎಂದು ಮೂದಲಿಸಿದೆವು.
“ಅಯ್ಯೋ ದೇವರೂ, ನಾನು ಇದೊಂದೂ ಅಲ್ಲ. ನಾನೊಬ್ಬ ಬಡಪ್ರಾಣಿ. ಆದರೆ ನಾನೇನು ಮಾತನಾಡುತ್ತಿದ್ದೆನೆಂಬುದು ನನಗೆ ಚೆನ್ನಾಗಿ ಗೊತ್ತುಂಟು. ನನಗೂ ಒಂದಿಷ್ಟು ಸಂಗೀತದ ಗಂಧ ಇದೆ. ನಿಜ ಹೇಳಬೇಕಾದರೆ ನಿಮ್ಮೆಲ್ಲರಿಗಿಂತಲೂ ಒಂದು ಪಟ್ಟು ಹೆಚ್ಚಾಗಿಯೇ ಇದೆ. ಅದರಿಂದಲೇ ನನಗೆ ಸಂಕಟವಾಗುವುದು; ನಮ್ಮ ಸಂಗೀತ ಈ ಮಟ್ಟಕ್ಕಿಳಿದು ಹೋಗಿದೆಯಲ್ಲಾ ಎಂದು.” ಎಂದ ಹರಟೆ ಹರಿಯಪ್ಪ.
ಅವನು ಆಡಿದ ಮಾತನ್ನು ಕಿವಿಯ ಮೇಲೆಯೇ ಹಾಕಿಕೊಳ್ಳದೆ ನಮ್ಮ ನಮ್ಮಲ್ಲೇ ಮಾತಾಡಿಕೊಂಡು ಅವನ ಬಾಯನ್ನು ಅಡಗಿಸೋಣವೆಂದು ಪ್ರಯತ್ನಿಸಿದೆವು. ಆದರೆ ಅವನು ಬಿಟ್ಟಾನೆಯೇ ? ನಮ್ಮ ಬೆನ್ನುಹತ್ತಿ ಬಂದೇ ಬಿಟ್ಟ. ನನ್ನ ಕಿವಿಗೆ ಬಿಡುವೇ ಕೊಡಲಿಲ್ಲ. ನಾವು ಕೇಳಲೇ ಬೇಕಾಯಿತು.
ಈಗ ನನ್ನನ್ನು ನೋಡಿದರೆ, (ಎಂದು ಹರಟೆ ಹರಿಯಪ್ಪ ಹೇಳಿದ) ಹಳ್ಳಿಗಾಡಿನ ರೈತರಿಗೆ ಸೀಮೆಯ ಗೊಬ್ಬರ ಮಾರುವುದಕ್ಕಿಂತ ಹೆಚ್ಚಿನ ಕಲೆಗಾರಿಕೆ ಕಲಾಭಿಮಾನ ನನ್ನಲ್ಲಿ ಇಲ್ಲವೆಂದೇ ನೀವೆಲ್ಲರೂ ಭಾವಿಸಬಹುದು. ಆದರೆ ಹಿಂದೊಂದು ಕಾಲದಲ್ಲಿ ಸಂಗೀತ ಕಲಿತು ಮಹಾ ವಿದ್ವಾಂಸನಾಗಬೇಕೆಂಬ ಆಸೆ ಬಹಳ ಇತ್ತು ನನಗೆ, ಇನ್ನೇನು ಆಗಿಯೂ ಬಿಡುತ್ತಿದೆ……… ವರ್‍ಷಗಟ್ಟಲೆ ಹಿಂದಿನ ಮಾತು. ಆಗ ನಾನು ಕಂಬಂ ಎನ್ನುವ ಹಳ್ಳಿಯಲ್ಲಿದ್ದೆ. ಸಣ್ಣ ಹಳ್ಳಿ, ಮಾಲ್ಗುಡಿಯಿಂದ ಎಂಬತ್ತು ಮೈಲಿ ದೂರ. ಆ ಊರಿನಲ್ಲಿ ಒಬ್ಬ ಮಹಾ ಪುರುಷರಿದ್ದರು. ಸರಸ್ವತಿಯೇ ಅವರಲ್ಲಿ ಅವತರಿಸಿರಬಹುದು. ಸಂಗೀತದಲ್ಲಿ ಅವರದು ಅಂತಹ ಪ್ರತಿಭೆ. ಅವರು ಕೊಳಲನ್ನು ಬಾರಿಸಿದರೆಂದರೆ ಹಳ್ಳಿಯ ಹಸುಗಳು ಅವರ ಹಿಂದೆಯೇ ಹಿಂಡುಕಟ್ಟಿಕೊಂಡು ಓಡುತ್ತಿದ್ದು ಎಂದು ನೋಡಿದವರು ಹೇಳುತ್ತಿದ್ದರು. ಬಹುಶಃ ಕಳೆದ ಶತಮಾನದಲ್ಲಿ ಅವರಿಗಿಂತ ಪ್ರೌಢಿಮೆ ಇದ್ದವರು ಇಲ್ಲವೆಂದೇ ಹೇಳಬಹುದು. ಆದರೆ ಅವರು ಹೆಸರುಗಿಸರಿಗೆ ಆಸೆಪಟ್ಟವರಲ್ಲ. ಖ್ಯಾತಿಯನ್ನು ಅರಸಿದವರಲ್ಲ. ಹಳ್ಳಿಯ ಹಲವು ಜನರ ಹೊರತು ಬೇರೆ ಯಾರಿಗೂ ಅವರ ಹೆಸರೇ ತಿಳಿಯದು. ಅಪರೂಪಕ್ಕೊಂದು ಸಲ ಹಳ್ಳಿಯ ಗಡಿಯಲ್ಲಿ ಕಚೇರಿ ಮಾಡುತ್ತಿದ್ದುದುಂಟು. ಪಿತ್ರಾರ್‍ಜಿತ ನಾದ ಭೂಮಿಕಾಣಿಯಿಂದ ಬರುತ್ತಿದ್ದ ಅಷ್ಟಿಷ್ಟು ಪುಡಿಕಾಸಿನಿಂದಲೇ ಅವರು ತೃಪ್ತರಾಗಿದ್ದರು. ನಾನು ಅವರ ಬಟ್ಟೆಗಳನ್ನೊಗೆದು, ಅವರ ಮನೆಯನ್ನು ಗುಡಿಸಿ, ಅವರ ಮನೆ ಲೆಕ್ಕವನ್ನು ಬರೆದಿಟ್ಟು, ಅವರಿಗಾಗಿ ಪರಿಚಾರಿಕೆಯನ್ನು ಮಾಡುತ್ತಿದ್ದೆ. ಮನಸ್ಸು ತಿರುಗಿದಾಗ ಅವರು ಈ ಕುಚೇಲನನ್ನು ಕರೆದು ಒಂದೆರಡು ಹಾಡುಗಳನ್ನು ಧಾರೆಯೆರೆಯುತ್ತಿದ್ದರು. ಆದರೆ ಅವರ ಸಾಮಿಪ್ಯ, ಅವರ ವ್ಯಕ್ತಿತ್ವ ಅವುಗಳಿಗೆ ಬೆಲೆ ಕಟ್ಟಲಾದೀತೆ? ಬೇರೆಯವರ ಕೈಯ್ಯಲ್ಲಿ ಒಂದು ವರ್‍ಷ ಕಲಿಯುವುದೂ ಒಂದೇ, ನಮ್ಮ ಗುರುಗಳ ಹತ್ತಿರ ಒಂದು ಗಂಟೆ ಕಲಿಯುವುದೂ ಒಂದೇ.
ಮೂರು ವರ್‍ಷಗಳ ಕಾಲ ಉಳಿ ಸುತ್ತಿಗೆಗಳನ್ನು ಹಿಡಿದು ಕಡೆದ ಮೇಲೆ ನನಗೂ ಒಂದು ಆಕಾರ ಬರುತ್ತಿದೆಯೆಂದು ನಮ್ಮ ಗುರುಗಳಿಗೆ ಭರವಸೆಯಾಯಿತು. “ಇನ್ನೊಂದು ವರ್‍ಷ. ಆಮೇಲೆ ನೀನು ಪಟ್ಟಣಕ್ಕೆ ಹೋಗಿ, ಎಂಥ ಕಚೇರಿಯನ್ನಾದರೂ ಮಾಡಬಲ್ಲೆ ಬಿಡು. ಅದರೆ ಖ್ಯಾತಿಗೆ ನೀನು ಬೆಲೆ ಕಟ್ಟಿದ್ದೀಯೋ ಇಲ್ಲವೋ ನನಗೇನು ಗೊತ್ತು?” ಎಂದರು ಒಂದು ದಿನ. ನನಗೆ ಖ್ಯಾತಿಯ ಮೇಲೆ ಆಸೆಯಿರಲಿಲ್ಲವೆ? ಅನಾಮಧೇಯತ್ವದ ಮಹಿಮೆಯನ್ನು ನಾನೊಲ್ಲೆನಪ್ಪ, ನನಗೆ ಹೆಸರು ಬೇಕಾಗಿತ್ತು. ಐಶ್ವರ್‍ಯ ಬೇಕಾಗಿತ್ತು. ಮಾರನೆಯ ವರ್‍ಷ ಮದರಾಸಿಗೆ ಹೋಗಿ ಅಲ್ಲಿನ ಸಂಗೀತೋತ್ಸವದಲ್ಲಿ ಭಾಗವಹಿಸಬೇಕು ಆಮೇಲೆ ನನ್ನ ಹೆಸರು ಯಾರಬಾಯಿನಲ್ಲಿ ಪ್ರತಿ ಧ್ವನಿತವಾಗುವಂತೆ ಮಾಡಬೇಕು ಎಂದು ನಾನು ಕನಸು ಕಂಡದ್ದೂ ಕಂಡದ್ದೇ. ಹೊಸ ಜಗತ್ತುಗಳ ಬಾಗಿಲುಗಳನ್ನು ತೆರೆಯುವಂತೆ ಮಾಯಗಾರನ ಯಕ್ಷಿಣಿ ಕೋಲೇನೋ ಎಂಬಂತೆ ನನ್ನ ಕೊಳಲನ್ನು ಪ್ರೀತಿಸುತ್ತಿದ್ದೆ ನಾನು. ಆಗ ನಾನು ಬೀದಿಯ ಕೊನೆಯಲ್ಲಿದ್ದ ಒಂದು ಸಣ್ಣ ಗುಡಿಸಲಲ್ಲಿ ವಾಸಮಾಡುತ್ತಿದ್ದೆ. ರಾತ್ರಿ ಬಹಳ ಹೊತ್ತು ಎದ್ದು ಕುಳಿತಿದ್ದು ಇರುಳಿನ ಬಹು ಭಾಗ ಕಳೆಯುವವರೆಗೂ ವೇಣುವಾದನದ ಅಭ್ಯಾಸ ಮಾಡಿಕೊಳ್ಳುತ್ತಿರುವುದು ನನ್ನ ವಾಡಿಕೆ. ಅದೇ ರೀತಿಯಲ್ಲಿ ಒಂದು ರಾತ್ರಿ ನಾನು ಭೈರವೀ ರಾಗದಲ್ಲಿ ಮೈ ಮರೆತಿದ್ದೆ. ಆ ವೇಳೆಗೆ ಬಾಗಿಲನ್ನು ಯಾರೋ ತಟ್ಟಿದರು. ನನಗೆ ರೇಗಿತು.
“ಯಾರದು” ಎಂದೆ.
“ಒಬ್ಬ ಸಾಧು; ಅವನಿಗೊಂದು ಹಿಡಿ ಅನ್ನ ಬೇಕು ”
“ಇಷ್ಟು ಹೊತ್ತಿನಲ್ಲೇ ? ಲಕ್ಷಣವಾಯಿತು! ನಡೆ ನಡೆ ಕಂಡ ಕಂಡಾಗಲೆಲ್ಲ ಬಂದು ಗೋಳು ಹುಯ್ಯ ಬೇಡ.”
ಹಸಿವಿಗೆ ಹೊತ್ತೇನು ಗೊತ್ತೇನು ?
“ನಡೆ. ಇಲ್ಲೇನೂ ಇಲ್ಲ ನನ್ನ ಹತ್ತಿರ. ನಾನೇ ನನ್ನ ಗುರು ಕೊಟ್ಟದನ್ನು ಉಂಡುಕೊಂಡಿರುವವನು.”
“ಹ್ಹು. ಒಂದು ಸಣ್ಣ ಕಾಸು, ಕಡೆಗೆ ಒಂದು ಒಳ್ಳೆಯ ಮಾತು-ಅಷ್ಟನ್ನಾದರೂ ಕೊಡಬೇಡವೇ ಸಾಧುವಿಗೆ? ಕಾಶಿ, ರಾಮೇಶ್ವರ ಎಲ್ಲ ಕಡೆಗಳಲ್ಲೂ ಸುತ್ತಿ ಬಂದಿದ್ದಾನೆ.”
“ಮುಚ್ಚು ಬಾಯಿ” ಎಂದು ಕೂಗಿಕೊಂಡು ನಾನು ಭೈರವಿ ರಾಗಕ್ಕೆ ಮತ್ತೆ ಇಳಿದೆ.
ಹದಿನೈದು ನಿಮಿಷಗಳಾದ ಮೇಲೆ ಮತ್ತೆ ಬಾಗಿಲ ಬಡಿತ ಮೊದಲಾಯಿತು. ನನಗೆ ಮಿತಿಮೀರಿದ ಕೋಪ ಬಂತು. “ನಿನಗೇನು ಬುದ್ದಿ ಗಿದ್ದಿ ಇದೆಯೋ ಇಲ್ಲವೋ? ಬೇಡ ಬೇಡ ಎಂದರೂ ಬಂದು ಬಂದು ತೊಂದರೆ ಮಾಡುತ್ತೀಯಲ್ಲ?”
“ನೀನು ದಿವ್ಯವಾಗಿ ಕೊಳಲನೂದುತ್ತೀಯೆ. ಬಾಗಿಲು ತೆಗೆ, ನನ್ನ ಕಿವಿಗೂ ಬೀಳಲಿ, ಹೊಟ್ಟೆಗೆ ಅನ್ನ ಕೊಡುವುದಿಲ್ಲವೆಂದೆ, ಸಂಗೀತವನ್ನಾದರೂ ಇಲ್ಲವೆನ್ನಬೇಡ.”
ನಾನು ಅಭ್ಯಾಸ ಮಾಡಿಕೊಳ್ಳುವಾಗ ಬೇರೆಯಾರಾದರೂ ಬಂದರೆ ನನಗೆ ಸರಿಬೀಳುತ್ತಿರಲಿಲ್ಲ. ಈ ಭಿಕ್ಷದವನು ಅಡ್ಡಿ ಮಾಡುತ್ತಿರುವುದರಿಂದಲಂತೂ ವಿಪರೀತ ಕೋಪ ಬಂತು. “ಅಲ್ಲಿ ನಿಂತುಕೊಂಡು ವಾಗ್ವಾದ ಮಾಡಬೇಡ. ನೀನು ಈಗಲೇ ಹೊರಡದೆ ಹೋದರೆ, ಹೊರಗೆ ಬಂದು, ನಿನ್ನನ್ನು ಕತ್ತು ಹಿಡಿದು ದಬ್ಬಿ ಬಿಟ್ಟೇನು”
“ಅಹಾ. ಕೆಟ್ಟ ಮಾತುಗಳು, ನೀನು ನನ್ನನ್ನೇನೂ ದಬ್ಬ ಬೇಕಾದುದಿಲ್ಲ. ನಾನೇ ಹೋಗುತ್ತೇನೆ. ಆದರೆ ಒಂದನ್ನು ನೆನಪಿನಲ್ಲಿಡು. ನಿನ್ನ ಸಂಗೀತಕ್ಕೆ ಇದೇ ಕೊನೆಯ ದಿನ. ನಾಳೆಯ ದಿನ ನಿನ್ನ ಕೊಳಲಿಗೆ ಒಂದು ಹಿಡಿಯಷ್ಟು ಮಣ್ಣು ಕೂಡ ಹುಟ್ಟುವುದಿಲ್ಲ.”
ಮರದ ಪಾದರಕ್ಷೆಗಳ ಸದ್ದಾಯಿತು. ಮನೆಯ ಮೆಟ್ಟಲನ್ನಿಳಿದು ಅವನು ಹೊರಟುಹೋದ. ಶನಿ ತೋಲಗಿತಲ್ಲ ಎಂದುಕೊಂಡು ಹತ್ತು ನಿಮಿಷಗಳ ಕಾಲ ಬಾರಿಸಿದೆ. ಆದರೆ ಮನಸ್ಸೇಕೋ ಕೊರೆಯುತ್ತಿತ್ತು. ಅವನು ಹೊರಡುವಾಗ ಹೇಳಿದ ಮಾತು…… ಅದರ ಅರ್‍ಥವೇನು? ಏಕೆ ಹಾಗೆಂದ ಅವನು? ಎದ್ದೆ. ಲಾಂದ್ರ ತೆಗೆದುಕೊಂಡು ಹೊರಗೆ ಹೊರಟೆ. ಕಡೆಯ ಮೆಟ್ಟಲ ಮೇಲೆ ನಿಂತುಕೊಂಡು, ಲಾಂದ್ರವನ್ನು ಎತ್ತಿ ಹಿಡಿದು, ಕತ್ತಲು ತುಂಬಿದ ಬೀದಿಯನ್ನು ದಿಟ್ಟಿಸಿ ನೋಡಿದೆ. ಹಿಂದಿರುಗಿದೆ. ಮತ್ತೆ ಅವನು ಬರಬಹುದೆಂಬ ದೂರದ ಆಸೆಯಿಂದ ಬಾಗಿಲನ್ನು ಅರ್ಧ ತೆರೆದಿದ್ದೆ. ಲಾಂದ್ರವನ್ನು ಗೋಡೆಗೆ ನೇತುಹಾಕಿ ಕುಳಿತೆ. ಗೋಡೆಯ ಮೇಲಿದ್ದ ದೇವರುಗಳ ಪಟಗಳಿಗೆಲ್ಲ ಕೈ ಮುಗಿದು, ಈ ಕಾಣದ ಸಾಧುವಿನಿಂದ ಏನೂ ಹಾನಿಯಾಗ ದಂತೆ ಕಾಪಾಡಬೇಕೆಂದು ಬೇಡಿಕೊಂಡೆ. ಮತ್ತು ನಾನಾಯಿತು, ಸಂಗೀತವಾಯಿತು.
ನನ್ನ ಕೊಳಲಿಂದ ಹಾಡಾದಮೇಲೆ ಹಾಡು ಧಾರಾಕಾರವಾಗಿ ಹರಿದು ಬರುತ್ತಿತ್ತು. ಆ ಸಂಗೀತವು ಈ ಮರ್ತ್ಯಲೋಕವನ್ನು ಅಮರಲೋಕವನ್ನಾಗಿ ಪರಿವರ್‍ತಿಸಿತು. ಬಿದಿರಿನ ತುಂಡಿನಲ್ಲಿ ಉಸಿರನ್ನು ಊದುತ್ತಿದ್ದ ಹುಲು ಮನುಷ್ಯನಾಗಿರಲಿಲ್ಲ. ನಾನು ದೇವತೆಗಳಲ್ಲೊಬ್ಬನಾಗಿದ್ದೆ. ಗೋಡೆಗೆ ನೇತುಹಾಕಿದ್ದ ದೀಪವು ಸ್ವರ್ಗಲೋಕದ ದಿವ್ಯ ಸಭೆಯಲ್ಲಿ ರಾರಾಜಿಸುತ್ತಿದ್ದ ತಾರಗೆಯಾಗಿತ್ತು……… ನಾನು ಪುನ್ನಾಗ ವರಾಳಿ ರಾಗಕ್ಕೆ ಬಂದೆ. ಹಾವಿನಹಾಡು ಅದು. ಸರ್‍ಪವು ಸರ್‍ವವೈಭವದಲ್ಲೂ ನನಗೆ ಕಾಣಿಸುತ್ತಿತ್ತು. ಅದರ ಗಂಟಲಲ್ಲಿ ಅಡಗಿದ್ದ ವಿಷಕ್ಕೆ ಒಂದು ನವೀನ ಕಳೆಯೇರಿತ್ತು. ಈಗ ಅದು ಶಿವನ ತಲೆಯನ್ನು ಅಲಂಕರಿಸುತ್ತ ತನ್ನ ದೈವತ್ವವನ್ನು ಮೆರೆಯುತ್ತಿತ್ತು: ಪಾರ್‍ವತಿಯದನ್ನು ಕಂಕಣವಾಗಿ ತೊಟ್ಟಿದ್ದಳು : ಸುಬ್ರಹ್ಮಣ್ಯನು ಅದರೊಡನೆ ಆಟವಾಡುತ್ತಿದ್ದನು: ಈಗದು ವಿಷ್ಣುವಿನ ಸುಪ್ಪತ್ತಿಗೆಯಾಗಿತ್ತು. ರಾಗದ ಎಳೆಯೆಳೆಯೂ ಸರ್‍ಪರಾಜನಿಗೆ ಅಪೂರ್‍ವವಾದ ಗಾಂಭೀರವನ್ನು ಕೊಟ್ಟಿತು. ಕಂಡವರು ಭಯಭಕ್ತಿಗಳಿಂದ ವೈಮರೆಯಬೇಕು.
ಇದೇನಿದು? ಏನು ಕಾಣಿಸುತ್ತದೆ! ನನಗೂ ಬಾಗಿಲಿಗೂ ನಡುವೆ ಒಂದು ಕಾಳನಾಗ! ಘಟಸರ್‍ಪವು ತನ್ನ ಭಾರಿಯ ಹೆಡೆಯನ್ನು ಬಿಚ್ಚಿ ಆನಂದಪರವಶತೆಯಿಂದ ಅದನ್ನು ಬೀಸುತ್ತಿದೆ. ನಾನು ಹಾಡನ್ನು ನಿಲ್ಲಿಸಿ, ಇದೇನು ದಿಟವೋಸಟೆಯೋ, ನಾನು ಎಚ್ಚರದಿಂದಿದ್ದೇನೋ ಇಲ್ಲವೋ ಕಂಡುಕೊಳ್ಳಲು ಕಣ್ಣುಗಳನ್ನು ಉಜ್ಜಿಕೊಂಡೆ. ಆದರೆ ನಾನು ಹಾಡನ್ನು ನಿಲ್ಲಿಸಿದ ತಕ್ಷಣವೇ, ಹಾವು ನನ್ನ ಕಡೆ ತಿರುಗಿ ರೋಷ ಪೂರಿತದೃಷ್ಟಿಯನ್ನು ಬೀರಿ, ಮುಂದಕ್ಕೆ ನುಗ್ಗಿ ಬಂತು. ಅಷ್ಟು ಕಪ್ಪಗೂ ಅಷ್ಟು ಉದ್ದವಾಗೂ ಇರುವ ಹಾವನ್ನು ನಾನು ನನ್ನ ಜೀವಮಾನದಲ್ಲೇ ಕಂಡಿಲ್ಲ. ನನ್ನ ಪ್ರಾಣವನ್ನು ರಕ್ಷಿಸಬೇಕೆಂದಿದ್ದ ಯಾವುದೋ ಒಂದು ಅಂತರಾತ್ಮ ನುಡಿಯಿತು : “ಬಾರಿಸು, ಬಾರಿಸು, ನಿಲ್ಲಿಸಬೇಡ” ಎಂದು. ಸರಕ್ಕೆಂದು ನಾನು ಕೊಳಲನ್ನು ಕಚ್ಚಿಕೊಂಡು ಹಾಡನ್ನು ಮುಂದುವರಿಸಿದೆ. ಹಾವು ನನ್ನಿಂದ ಮೂರೇಮೂರು ಗಜಗಳ ದೂರದಲ್ಲಿತ್ತು. ನಾನು ಹಾಡನ್ನು ಆರಂಭಿಸಿದೊಡನೆ ನಿಂತಿತು, ನಿಂತಲ್ಲಿಯೇ ತನ್ನ ಉದ್ದವಾದ ದೇಹದ ಕಾಲುಭಾಗವನ್ನು ಎತ್ತಿಕೊಂಡು, ಒಂದುಸಲ ಹೆಡೆಯನ್ನು ಎಂಟು ದಿಕ್ಕುಗಳಿಗೂ ತೋರಿಸಿ, ತನ್ನ ಗುಂಡು ಕಣ್ಣುಗಳನ್ನು ನನ್ನ ಮೇಲೆಯೇ ನೆಟ್ಟು, ಸ್ವಲ್ಪವಾದರೂ ಚಲಿಸದೆ, ನನ್ನ ಸಂಗೀತವನ್ನು ಆಲಿಸುತ್ತಿತ್ತು. ಕರಿಯಕಲ್ಲಿನಿಂದ ಕಡೆದಿದ್ದರೇನೋ ಎನ್ನುವಷ್ಟು ನಿಶ್ಚಲವಾಗಿ ನಿಂತಿತ್ತು.
ನಾನು ಕೊಳಲೂದುತ್ತ ಊದುತ್ತ ಹಾವಿನ ಕಡೆಯೇ ನೋಡುತ್ತಿದ್ದೆ. ಅದರ ದರ್ಪ, ಅದರ ಗತ್ತು ಇವುಗಳನ್ನೆಲ್ಲ ಕಂಡು, “ಯಾವ ದೇವರು ತಾನೇ ಇಂತಹ ಸುಂದರವಾದ ವಸ್ತುವನ್ನು ತನ್ನ ಶಿರಾಭರಣವಾಗಿ ಮಾಡಿ ಕೊಳ್ಳಲು ಇಚ್ಚಿಸುವುದಿಲ್ಲ?” ಎನಿಸಿತು ನನಗೆ. ಆ ಹಾಡನ್ನು ಮೂರುಸಲ ಬಾರಿಸಿದಮೇಲೆ ಇನ್ನೊಂದು ಹಾಡನ್ನು ಆರಂಭಿಸಿದೆ. ಹಾವು ಸರ್ರನೆ ತಿರುಗಿ “ಇದೇನಿದು?” ಎನ್ನುವಂತೆ ನನ್ನ ಕಡೆ ನೋಡಿ, ಭಾರಿಯಾಗಿ ಬುಸುಗುಟ್ಟಿತು. ಇನ್ನಷ್ಟು ಮುಂದೆ ಸರಿಯುವಂತೆ ಚಲಿಸಿತು. ನಾನು ಕೂಡಲೆ ಹಾವಿನಹಾಡನ್ನು ಮತ್ತೆ ಆರಂಭಿಸಿದೆ; ಮತ್ತೆ ಹಾವು ಪ್ರತಿಮೆಯ ಮುದ್ರೆಯನ್ನು ತಾಳಿತು.
ಹೀಗೆ ಆ ಹಾಡನ್ನು ಎಷ್ಟು ಸಲ ಬಾರಿಸಿದೆನೋ ಲೆಕ್ಕವೇ ಇಲ್ಲ. ಯಾವ ಹಾಡೇ ಆಗಲಿ, ಅದೆಷ್ಟೇ ಘನವಾದ ಕೀರ್ತನೆಯಾಗಿರಲಿ, ಹತ್ತು ಹನ್ನೆರಡು ಸಲ ಒಂದೇಸಮನೆ ಬಾರಿಸಿದರೆ ತಲೆಚಿಟ್ಟು ಹಿಡಿದುಬಿಡುತ್ತದೆ: ಹಾಡನ್ನು ಬದಲಾಯಿಸೋಣವೆಂದು ಒಂದೆರಡು ಸಲ ಪ್ರಯತ್ನಿಸಿ ನೋಡಿದೆ. ಆದರೆ ಹಾವು ಭಯಹುಟ್ಟಿಸುವ ರೀತಿಯಲ್ಲಿ ಚಲಿಸಿತು. ಒಂದು ಸಲವಂತೂ, ಆದದ್ದಾಗಲೆಂದು ನಾನು ಕೊಳಲನ್ನೆಸೆದು ಕಾಲಿಗೆ ಬುದ್ದಿ ಹೇಳುವುದರಲ್ಲಿದ್ದೆ. ಆದರೆ ಸರ್‍ಪವು ಸಂಪೂರ್‍ಣವಾಗಿ ಎದ್ದು ನಿಂತು ಒಂದೇಟಿನಲ್ಲಿ ನನ್ನ ಗತಿಯನ್ನು ಪೂರಯಿಸುವಂತೆ ಬೆದರಿಸಿತು. ಬಾಲ ಮುದುರಿಕೊಂಡು ನಾನು ಮತ್ತೆ ಅದೇ ಹಾಡನ್ನು ಬಾರಿಸಿದೆ. ರಾತ್ರಿಯೆಲ್ಲ ಅದೇ ಹಾಡನ್ನು ಬಾರಿಸಿದೆ. ಶ್ರಾವಕಮಹಾಶಯ ನನ್ನನ್ನು ಬಿಡುವ ಸೂಚನೆಯೇ ತೋರಲಿಲ್ಲ. ಬರಬರುತ್ತ ನನ್ನ ಪ್ರಾಣ ಉಡುಗಿತು. ತಲೆ ತಿರುಗಿತು. ಉಸಿರನ್ನು ಊದಿ ಊದಿ ಕೆನ್ನೆಗಳೂ ದವಡೆಗಳೂ ವಿಪರೀತವಾಗಿ ನೋಯತೊಡಗಿದುವು. ನನ್ನ ಎದೆಯ ಚೀಲದಿಂದ ಕೊನೆಯ ಗಾಳಿಯ ಅಣುವನ್ನು ಬರಿದುಮಾಡಿದಂತಾಗಿ ಹೋಯಿತು. ಇನ್ನೆಲ್ಲ ಒಂದೆರಡು ಗಳಿಗೆ, ಅನಂತರ ಸತ್ತು ಬಿದ್ದು ಬಿಡುತ್ತೇನೆ ಎನ್ನಿಸಿಬಿಟ್ಟಿತು. ಹಾವು ನನ್ನ ಮೇಲೆ ಬಿದ್ದು ತನ್ನ ಮೈಯನ್ನು ನನ್ನ ಸುತ್ತಲೂ ಸುತ್ತಿ ಮೂಳೆ ಮೂಳೆಯನ್ನೂ ಪುಡಿ ಪುಡಿ ಮಾಡಿ ತನ್ನ ದವಡೆಯಲ್ಲಿದ್ದ ವಿಷವನೆಲ್ಲ ನನ್ನ ಮೈ ಯೊಳಕ್ಕೆ ಸುರಿದರೂ ಪರವಾ ಇಲ್ಲ ಎನಿಸುವ ಸ್ಥಿತಿಗೆ ಬಂದುಬಿಟ್ಟಿದ್ದೆ. ನಾನು ಕೊಳಲನ್ನು ಒಗೆದು, ಹಾವಿನ ಮುಂದೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡುತ್ತ “ಓ ನಾಗರಾಜ, ನೀನು ದೇವೆರು. ನಿನಗೆ ಪ್ರೀತಿಯಾದರೆ ನನ್ನನ್ನು ಕೊಂದುಬಿಡು. ನಾನಿನ್ನು ಬಾರಿಸಲಾರೆ….” ಎಂದು ಮೊರೆಯಿಟ್ಟು ಕೊಂಡೆ……..
ನಾನು ಮತ್ತೆ ಕಣ್ಣು ಬಿಟ್ಟಾಗ ಹಾವು ಹೊರಟು ಹೋಗಿತ್ತು. ಗೋಡೆಯ ಮೇಲಿದ್ದ ದೀಪವು ಮುಂಜಾನೆಯ ಬೆಳಕಿನ ನಡುವೆ ಕಂಡೂ ಕಾಣದಂತೆ ಉರಿಯುತ್ತಿತ್ತು. ನನ್ನ ಕೊಳಲು ಹೊಸಿಲ ಬಳಿ ಬಿದ್ದಿತ್ತು.
ಮಾರನೆಯ ದಿನ ನಾನು ಎಲ್ಲವನ್ನೂ ನಮ್ಮ ಗುರುಗಳಿಗೆ ನಿವೇದಿಸಿ ಕೊಂಡೆ. “ರಾತ್ರಿವೇಳೆ ಪುನ್ನಾಗವ ರಾಳಿಯನ್ನು ಹಾಡಬಾರದೆಂದು ನಿನಗೆ ತಿಳಿಸಿರಲಿಲ್ಲವೆ? ಅದು ಹೋಗಲಿ, ಇನ್ನು ಮುಂದೆ ನೀನೇನಾದರೂ ಕೊಳಲನ್ನು ಮುಟ್ಟಿದೆಯಾದರೆ ಮತ್ತೆ ನಾಗರಾಜನು ತಪ್ಪದೆ ಬರುತ್ತಾನೆ. ನೀನು ಮತ್ತೆ ಅದೇ ರಾಗವನ್ನೆ ಮರಳಿ ಮರಳಿ ಬಾರಿಸಿದ ಹೊರತು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಅದಕ್ಕೆ ನೀನು ಸಿದ್ದವಾಗಿದ್ದೀಯೋ?” ಎಂದು ಕೇಳಿದರು ಅವರು.
“ಅಯ್ಯೋ, ಅಯ್ಯೋ, ನನ್ನ ಜನ್ಮ ಜನ್ಮಾಂತರಕ್ಕೂ ನಾನೊಲ್ಲೆ.” ಎಂದು ನಾನು ಕೂಗಿಕೊಂಡೆ. ಆ ಹಾಡೆಂದರೆ ನನ್ನ ಮೈಯೆಲ್ಲ ಉರಿಯುತಿತ್ತು. ಸಾಯುವವರೆಗೆ ಹೇಳಬೇಕಾದಷ್ಟನ್ನು ಆ ದಿನವೊಂದರಲ್ಲೇ ಹೇಳಿಬಿಟ್ಟಿದ್ದೆ.
“ಹಾಗಾದರೆ, ನಿನ್ನ ಕೊಳಲನ್ನೆಸೆದು ನೀನು ಇದುವರೆಗೆ ಕಲಿತ ಸಂಗೀತವನ್ನೆಲ್ಲ ಮರೆತುಬಿಡು, ಹಾವಿನೊಡನೆ ಆಟ ಸಲ್ಲದು. ಅದು ದೇವ ದೇವತೆಗಳ ಆಟಕೆ, ನಿನ್ನ ಬಿದಿರಿನ ಕೊಳವೆಯನ್ನು ಒಲೆಗೆ ಹಾಕು. ಇನ್ನು ನಿನಗೂ ಅದಕ್ಕೂ ನಂಟತನವಿಲ್ಲ…….” ಎಂದರು ಗುರುಗಳು. ಈ ಅಗಲಿಕೆಯನ್ನು ಸಹಿಸಲಾರದೆ ಕಣ್ಣೀರಿನ ಕೋಡಿ ಹರಿಸಿದೆ ನಾನು. ಆದರೇನಂತೆ? ಎಲ್ಲವೂ ನಿರರ್‍ಥಕ. ಗುರುಗಳು ನನ್ನ ಮೇಲೆ ಕರುಣೆ ಗೊಂಡು, “ಮತ್ತೆ ಆ ಭಿಕ್ಷುವನ್ನು ಕಂಡು ಆತನ ಕ್ಷಮೆ ಬೇಡಿದರೆ ಎಲ್ಲವೂ ಸರಿಹೋಗಬಹುದು. ಅವನನ್ನು ಹುಡುಕಬಲ್ಲೆಯೇನು?” ಎಂದರು.
ಕೊಳಲನ್ನು ತ್ಯಜಿಸಿದುದಾಯಿತು. ಕಂಡೂ ಕಾಣದ ಆ ಭಿಕ್ಷುಕರನ್ನು ಅಂದಿನಿಂದ ನಾನು ಅರಸುತ್ತಲೇ ಇದ್ದೇನೆ. ಇಂದೂ ಸರಿಯೆ, ಆತನೇನಾದರೂ ಈ ಭೂಮಿಯಲ್ಲಿ ನನಗೆ ಕಾಣಿಸಿಕೊಂಡನೆಂದರೆ ಆತನ ಪಾದದ ಬಳಿ ಬಿದ್ದು, ಅವನ ಕ್ಷಮೆಯನ್ನು ಬೇಡಿ, ಮತ್ತೆ ನನ್ನ ಕೊಳನ್ನು ಹಿಡಿಯುತ್ತೇನೆ.
*****