ಏನೇ ಇರಲಿ ಏನೇ ಬರಲಿ
ಕನ್ನಡ ನನ್ನುಸಿರಾಗಿರಲಿ
ವಿಶ್ವದ ಯಾವುದೆ ನೆಲದಲ್ಲಿರಲಿ
ಎದೆಯಲಿ ಕನ್ನಡ ಬೆಳಗಿರಲಿ
ಕಣ್‌ಕುರುಡಾಗಲಿ ಬೆಳಕಿರುಳಾಗಲಿ
ಕನ್ನಡ ಕಣ್ಣಲಿ ತುಂಬಿರುವ
ಕಂಬನಿ ಸುರಿಯಲಿ ರಕುತವೆ ಹರಿಯಲಿ
ಹೃದಯವು ಕನ್ನಡ ಎನುತಿರಲಿ
ಬುವಿಯೇ ನಡುಗಲಿ ಸಮುದ್ರ ಉಕ್ಕಲಿ
ನನ್ನನು ಕೊಚ್ಚೀ ಹೋಗಿರಲಿ
ಹೋಗುವ ಉಸಿರಿನ ಏರಿಳಿತದಲಿ
ಕನ್ನಡ ಸ್ವರಗಳು ಮಿಡಿದಿರಲಿ
ಸಿರಿತನವೇನು? ಬಡತನ ಬಂದರೂ
ಕನ್ನಡತನವೊಂದೆನಗಿರಲಿ
ಅಂಜದೆ ಅಳುಕದೆ ಕುಗ್ಗದೆ ನುಗ್ಗುವೆ
ಕನ್ನಡ ವಿರೋಧಿ ಸಮರದಲಿ
ಅಳಿದರೆ ಏನು? ಮರುಜನುಮದಲೂ
ಕನ್ನಡ ತಾಯ್ನೆಲವಾಗಿರಲಿ
ಸ್ವರ್ಗವು ಹೋಗಲಿ ನರಕವೆ ಕಾಣಲಿ
ಕನ್ನಡವೇ ನ್ಮಡಿಯಾಗಿರಲಿ
*****