ಕಾನೂನು ಮತ್ತು ಧರ್ಮ

ಕಾನೂನು ಮತ್ತು ಧರ್ಮ

ಚಿತ್ರ: ಎಡ್ವರ್ಡ್ ಲಿಚ್
ಚಿತ್ರ: ಎಡ್ವರ್ಡ್ ಲಿಚ್

ಪೀಠಿಕೆ

ಕಾನೂನು ಮತ್ತು ಧರ್ಮಗಳು ಸಂಕುಚಿತ ಅರ್ಥದಲ್ಲಿ ಬೇರೆ ಬೇರೆ ಎಂದು ಕಂಡುಬಂದರೂ, ಅವು ವಿಶಾಲ ಅರ್ಥದಲ್ಲಿ ಒಂದರೊಡನೊಂದು ಸೇರಿ ಪರಸ್ಪರ ಪೂರಕವಾಗಿವೆ.

ಸ್ವರೂಪ: ಕಾನೂನು ಮತ್ತು ಧರ್ಮ ಎರಡು ಸ್ವರೂಪಗಳಲ್ಲಿ ಕ್ರಿಯಾತ್ಮಕವಾಗಿವೆ. ೧) ನಿಸರ್ಗದತ್ತವಾಗಿ ೨) ಮಾನವ ನಿರ್ಮಿತವಾಗಿ.

ನಿಸರ್ಗದತ್ತ ಕಾನೂನು ವಿಧಿ, ನಿಯಮಗಳು ನಿಸರ್ಗದತ್ತವಾದುವುಗಳು. ಉದಾ: ಉಸಿರಾಟ ಹಾಗೂ ವಿಕಾಸಕ್ರಿಯೆ. ಈ ನಿಸರ್ಗದತ್ತವಾದ ನಿಯಮಬದ್ಧ ವಿಧಿಗಳಿಗೆ ಒಳಪಡದೆ ಅನ್ಯ ಮಾರ್ಗವಿಲ್ಲ. ಹಾಗೆಯೇ ಗುರುತ್ವಾಕರ್ಷಣೆ ನಿಯಮ. ವಿಶ್ವದ ಪ್ರತಿಯೊಂದು ಚಲನೆಯೂ ಈ ನಿಯಮಕ್ಕೆ ಒಳಪಟ್ಟದೆ. ಮಾನವ ನಿರ್ಮಿತ ಕಾನೂನುಗಳನ್ನು ಬವಲಾಯಿಸುವಂತೆ ಇವುಗಳನ್ನು ಬದಲಾಯಿಸಲು ಸಾದ್ಯವಿಲ್ಲ.

ಮಾನವ ನಿರ್ಮಿತ ಕಾನೂನು: ಇವುಗಳೆಂದರೆ ಶಾಸನ, ಕಾಯಿದೆ, ಕಟ್ಟಳೆ, ಆಜ್ಞೆ ಆದೇಶ ಮುಂತಾದವುಗಳು. ಎಲ್ಲ ಸಮಾಜಗಳಲ್ಲೂ ಅದರ ಸದಸ್ಯರಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ವಿಧಿಸಲಾಗಿದೆ. ಈ ಹಕ್ಕು ಮತ್ತು ಕರ್ತವ್ಯಗಳನ್ನು ಚಾಲನೆಗೊಳಿಸುವ ಸಂದರ್ಭಗಳಲ್ಲಿ ಇರಬಹುದಾದ ಸಹಕಾರ, ಘರ್ಷಣೆಗಳ ಹಾಗೂ ನಿಗದಿತ ಗುರಿಯ ಈಡೇರಿಕೆಯ ಹಿನ್ನೆಲೆಯಲ್ಲಿ ನಿರ್ಮಿತವಾದವು ಇವೇ ಮಾನವ ನಿರ್ಮಿತ ಕಾನೂನು.

ಮಾನವ ನಿರ್ಮಿತ ಧರ್ಮ: ತನ್ನನ್ನು ಮೀರಿದ ಶಕ್ತಿಯೊಂದನ್ನು ಅದನ್ನು ದೇವರು ಎಂದು ಕರೆಯಲಾಗಿದೆ- ಅರಿತು, ಅದರ ಅಣತಿಯಂತೆ ಬದುಕನ್ನು ನಡೆಸಬೇಕಾದ ಹಿನ್ನೆಲೆಯಲ್ಲಿ ಪ್ರಪಂಚದ ವಿವಿಧ ಜನಾಂಗಗಳು ವಿವಿಧ ರೀತಿಯಲ್ಲಿ ಹುಟ್ಟು ಹಾಕಿ ಅನುಸರಿಸಿಕೊಂಡು ಬಂದಿರುವ ಧರ್ಮ, ಮತ, ಸಂಪ್ರದಾಯ, ಆಚರಣೆಗಳು ಮಾನವ ನಿರ್ಮಿತ ಧರ್ಮ.

ಇತಿಹಾಸವನ್ನು ಗಮನಿಸಿದರೆ, ಮಾನವ ನಿರ್ಮಿತ ಕಾನೂನು ಮತ್ತು ಧರ್ಮಗಳು, ಆರಂಭದ ದಿಸೆಯಲ್ಲಿ ಬೇರ್ಪಡಿಸದಾಗದಷ್ಟು ನಿಕಟವಾಗಿ ಬೆಸೆದುಕೊಂಡಿರುವುದು ಕಂಡು ಬರುತ್ತದೆ. ಸಮಾಜದಲ್ಲಿ ಕಾನೂನನ್ನು ಚಲಾಯಿಸುವ ಅಧಿಕಾರ ಸ್ಥಾನದಲ್ಲಿ ಧಾರ್ಮಿಕ ಸಂಸ್ಥೆಗಳು ಇದ್ದವು ಹಿಂದಿನಷ್ಟು ಅಲ್ಲದಿದ್ದರೂ ಇಂದೂಕೂಡ ಆ  ಅಧಿಕಾರವನ್ನು ಅವು ಚಲಾಯಿಸುತ್ತ ಇವೆ.

ಕಾನೂನಿನ ವ್ಯಾಖ್ಯೆ: ಕಾನೂನನ್ನು ಕುರಿತು ವಿದ್ವಾಂಸರು ಬಗೆಬಗೆಯಾಗಿ ವ್ಯಾಖ್ಯಾನಿಸಿದ್ದಾರೆ. ‘ನ್ಯಾಯವನ್ನು ದೊರಕಿಸಿಕೊಡಲು ಸರ್ಕಾರವು ರಚಿಸಿ ಅನ್ವಯಿಸುವ ನಿಯಮಗಳೇ ಕಾನೂನುಗಳು’ ಎಂದು ನ್ಯಾಯಶಾಸ್ತ್ರಜ್ಞ ಸಾಲ್ಮಂಡ್‌ ವಾಖ್ಯಾನಿಸಿದರೆ, “ಅಧಿಕೃತ ಅಧಿಕಾರದಲ್ಲಿರುವವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೊಡುವ ಆದೇಶಗಳೇ ಕಾನೂನುಗಳು” ಎಂದು ಗೆಟಿಲ್ ವಾಖ್ಯಾನಿಸಿದ್ದಾನೆ. ಆಸ್ಟಿನ್ ಪ್ರಕಾರ “ಸರ್ಕಾರದ ಆಜ್ಞೆಗಳೇ ಕಾನೂನುಗಳು” ಟಿ. ಇ. ಹಾಲೆಂಡ್‌ “ಮಾನವನ ಬಾಹ್ಯ ನಡವಳಿಕೆಗಳಿಗೆ ಸಂಬಂಧಿಸಿದ ಹಾಗೆ, ರಾಜಕೀಯ ಪರಮಾಧಿಕಾರವು ಬಳಕೆಗೆ ತರುವ ನಿಯಮಗಳೇ ಕಾನೂನುಗಳು” ಎಂದು ಹೇಳಿದರೆ, “ನ್ಯಾಯಾಲಯಗಳು ತೀರ್ಪು ನೀಡುವಾಗ ಅವಲಂಬಸುವ ನಿಯಮಗಳೇ ಕಾನೂನುಗಳು” ಎಂದು ಪೌಂಡ್ ಅರ್ಥೈಸಿದ್ದಾನೆ. ಈ ವಾಖ್ಯಾನಗಳಿಂದ ಸ್ಪಷ್ಟವಾಗುವ ಅಂಶವೆಂದರೆ, ಇವು ಮಾನವನ ಬಾಹ್ಯ ಚಟುವಟಿಕೆಗಳಿಗೆ ಮಾತ್ರ ಅನ್ವಯಿಸುವಂಥವು ಅಲ್ಲದೆ ಈ ವಾಖ್ಯೆಗಳೆಲ್ಲವೂ ಆಧುನಿಕ ಕಾನೂನಿನ ವ್ಯಾಪ್ತಿಗೆ ಒಳಪಟ್ಟವುಗಳು.

ಪ್ರಾಚೀನ ಕಲ್ಪನೆಯಲ್ಲಿ ಕಾನೂನು ಮತ್ತು ನೈತಿಕತೆ ಬೇರೆ ಬೇರೆ ಎಂದು ಪರಿಗಣಿಸಲ್ಪಡದೆ ಒಂದೇ ಎಂದು ಪರಿಭಾವಿಸಲ್ಪಟ್ಟಿದ್ದವು. ಹಾಗೆಯೆ ಎಲ್ಲ ಪ್ರಾಚೀನ ಸಮಾಜದಲ್ಲಿಯೂ ಧರ್ಮ ಮತ್ತು ಕಾನೂನು ಒಂದೇ ಆಗಿದ್ದವು.

ಸಾಮಾನ್ಯ ಜನರಿಗಿಂತ ಕಾನೂನು ನಿರ್ಮಾಪಕ ದೇವರ ಜೊತೆ ಹೆಚ್ಚು ಸಾಮಿಪ್ಯ ಹೊಂದಿರುತ್ತಾನೆಂಬ ನಂಬಿಕೆ ಅನೇಕ ರಾಷ್ಟ್ರಗಳ ಪ್ರಾಚೀನ ಪರಂಪರೆಗಳಲ್ಲಿ ಇದೆ. ಹರ್ಮಿಸ್ ದೇವತೆಯಿಂದ ತಮ್ಮ ಕಾನೂನುಗಳು ಲಭ್ಯವಾಗಿವೆಯೆಂದು ಈಜಿಪ್ಟರು ನಂಬಿದ್ದರು; ಜ್ಯೂಸ್‌ನಿಂದ ತನ್ನ ಕಾನೂನುಗಳನ್ನು ಮೈನಸ್ ಸ್ವೀಕರಿಸಿದನೆಂದು ಕ್ರೀಟರೂ, ಅಪಾಲೋವಿಂದ ತನ್ನ ಕಾನೂನುಗಳನ್ನು ಲೈಕರ್ ಗುಸ್ ಪಡೆದನೆಂದು ಲ್ಯಾಕಿಡೋಮಿನಿಯನ್ನರೂ ಭಾವಿಸಿದ್ದರು. ಅರಿಯನ್ನರ ಪ್ರಕಾರ ಸತ್‌ಶಕ್ತಿಯಿಂದ ಕಾನೂನುಗಳನ್ನು ಕಾನೂನು ನಿರ್ಮಾಪಕ ಜರತುಷ್ಟ ಸ್ವೀಕರಿಸಿದನು. ಸ್ತೋಯಿ ಪ್ರಕಾರ ಹೆಸ್ಟಿಯ ದೇವತೆಯಿಂದ ತನ್ನ ಕಾನೂನುಗಳನ್ನು ಜಾಮೋಲಿಕ್ಸಿಸ್ ಸ್ವೀಕರಿಸಿದನು. ಯಹೂದಿಗಳ ಪ್ರಕಾರ ಇಯಾಸ್ ದೇವರಿಂದ ಮೋಸಸ್ ತನ್ನ ಕಾನೂನುಗಳನ್ನು ಸ್ವೀಕರಿಸಿದನು.

ವಾಲ್ಟರ್ ಬಗಟ್ “ಧಾರ್ಮಿಕ ಕ್ರಿಯೆಗಳಿಂದ ಪ್ರಾರಂಭಿಕ ಕಾನೂನುಗಳನ್ನು ಬೇರ್ಪಡಿಸುವುದು ಬಹು ಕಷ್ಟ” ಎಂದು ಅಭಿಪ್ರಾಯ ಪಡುತ್ತಾನೆ. ಆಡಳಿತ ನಡೆಸುವ ರಾಜನು ಎರಡನ್ನೂ ಪರಿಗಣನೆಗೆ ತೆಗೆದುಕೊಂಡೇ ತೀರ್ಪು ನೀಡಬೇಕಾಗಿದ್ದಿತು. ಏಕೆಂದರೆ ಕಾನೂನು ನೈತಿಕತೆಯ ಮೇಲೆ ನಿಂತಿದ್ದರೆ, ನೈತಿಕತೆ ಧರ್ಮದ ಮೇಲೆ ನಿಂತಿದೆ. ನೈತಿಕತೆಗೆ ಧರ್ಮವೇ ನೆಲೆಗೆಟ್ಟು ಎನ್ನುವ ನಂಬಿಕೆ ಪ್ರಬಲವಾಗಿತ್ತು. ಗ್ರೀಸ್‌ನ ರಾಜ್ಯಶಾಸ್ತ್ರಜ್ಞರಾಗಲಿ ಪ್ರಾಚೀನ ಭಾರತದ ದಾರ್ಶನಿಕರಾಗಲಿ  “ನೀತಿ ಮತ್ತು ಕಾನೂನುಗಳ ಸಂಯೋಗದಲ್ಲಿ ಧರ್ಮವನ್ನು ಎತ್ತಿ ಹಿಡಿಯುವುದು ಸಾಮಾನ್ಯವಾಗಿತ್ತು. ಆದ ಕಾರಣವೇ ಪ್ಲೇಟೋ ಮತ್ತು ಅರಿಸ್ಟಾಟಲ್ ನೈತಿಕತೆ ಮತ್ತು ಕಾನೂನು ಎರಡೂ ಒಂದೇ ಎಂದು ಹೇಳಿದರು. ಮನು  “ಆಚಾರವೇ ಧರ್ಮ, ಅನಾಚಾರವೇ ಅಧರ್ಮ” ಎಂದು ಹೇಳಿದ್ದಾನೆ. ಪ್ರಾಚೀನ ಭಾರತದಲ್ಲಿ, ಧರ್ಮವೇ ಕಾನೂನು ಅಥವಾ ನ್ಯಾಯ ಆಗಿತ್ತು.

ಧರ್ಮದ ವ್ಯಾಪ್ತಿಯೊಳಗೆ ಇರುವ ಕಾನೂನು ನ್ಯಾಯಶಾಸ್ತ್ರದ ನಾಲ್ಕು, ಮೂಲಗಳಿಂದ ಮೈಪಡೆದಿದೆ.

೧. ರೂಢಿ ಅಥವಾ ಸಂಪ್ರದಾಯ: ಎಂದರೆ ಕಾನೂನಿನ ಉದ್ದೇಶವನ್ನು ಗುರಿಯನ್ನು ಗುರುತಿಸುವ ಸಾಂಪ್ರದಾಯಿಕ ಅಥವಾ ರೂಢಿಗತ ಪ್ರಕ್ರಿಯೆಗಳು.

೨. ಪರಂಪರೆ ಕಾಲದಿಂದ ಕಾಲಕ್ಕೆ ಕಾನೂನು ಮುಂದುವರೆಯಲು ಕಾರಣವಾದ ಹಿರಿಯರಿಂದ ಬಂದ ಆಚರಣೆಗಳು ಅಥವಾ ಪದ್ಧತಿಗಳು.

೩. ಅಧಿಕಾರ ಅಥವಾ ರಾಜದಂಡ: ಅಧಿಕಾರದ ನೆಲೆಯಿಂದ ನಿರ್ಣಯಾತ್ಮಕ ಎಂದು ಪರಿಗಣಿಸಿದ ಲಿಖಿತ ಅಥವಾ ಅಲಿಖಿತ ತೀರ್ಪಿನ ಮೂಲಗಳು.

೪. ಸಾರ್ವತ್ರಿಕತೆ ನೈತಿಕವಾಗಿ ಅಪ್ಪಿಕೊಳ್ಳಬಹುದಾದ ಹಾಗೂ ಸಾರ್ವತ್ರಿಕವಾಗಿ ಒಪ್ಪಿಕೊಳ್ಳಬಹುದಾದ ಮೌಲಿಕ ವಿಚಾರಗಳು ಅಥವಾ ಒಳನೋಟಗಳು.

ಯಾವ ಅನಾಗರಿಕ ಸಮಾಜದಲ್ಲಿ ನ್ಯಾಯಮೂರ್ತಿಗಳಾಗಲಿ ಅಥವಾ ಕಾನೂನು ರಚನಾಕಾರರಾಗಲಿ ಇರಲಿಲ್ಲವೋ, ಅಲ್ಲಿ ಧಾರ್ಮಿಕ ವ್ಯಕ್ತಿಗಳು ಕಾನೂನು ರಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ಅಂಥಹ ಅನೇಕ ಸಮಾಜಗಳಲ್ಲಿ ಮಂತ್ರವಾದಿಗಳು, ಪವಾಡ ಪುರುಷರು ತಪ್ಪಿತಸ್ಥರನ್ನು ಕಠಿಣ ಪರೀಕ್ಷೆ ಹಾಗೂ ಧಾರ್ಮಿಕ ಪ್ರತಿಜ್ಞೆಗಳ ಮೂಲಕ ಶಿಕ್ಷಿಸಿ ವ್ಯಾಜ್ಯವನ್ನು ತೀರ್ಮಾನಿಸುತ್ತಿದ್ದರು. ರೋಮ್‌ನಲ್ಲಿ ಕಾನೂನು ರಚನೆಯಾಗುವ ಮುನ್ನ ಅಲ್ಲಿಯ ಪುರೋಹಿತರು ಪ್ರಮುಖ ಪಾತ್ರ ವಹಿಸುತ್ತಿದ್ದರು. ಗ್ರೀಕ್ ಕಾನೂನಿನ ಆರಂಭದ ದೆಸೆಯಲ್ಲಿ ತೀರ್ಪುಗಳು, ಸಂಪ್ರದಾಯಗಳು, ಪ್ರತೀಕಾರ, ನಷ್ಟ ದ ವಿಂಗಡಣೆ ಎಲ್ಲವನ್ನೂ ಒಲಂಪಿಯನ್ ದೇವತೆಯ ದಿವ್ಯವಾಣಿ ಎಂದು ನಂಬಲಾಗುತ್ತಿತ್ತು.

ಪವಿತ್ರ ಬರಹಗಳಾದ ತೋರಾ ಮತ್ತು ಕುರಾನ್‌ನಲ್ಲಿ ತಾರ್ಕಿಕ ಕ್ರಮದ ಕಾನೂನು ಇದೆ. ಇವನ್ನು ನಂಬುವ ಆ ಹಿಬ್ರೂ ಹಾಗೂ ಇಸ್ಲಾಂ ನಾಗರಿಕತೆಯಲ್ಲಿ ಕಾನೂನು ಮತ್ತು ಧರ್ಮದ ನಡುವೆ ಒಂದು ವಿಶಿಷ್ಟ ಆಂತರಿಕ ಸಂಬಂಧ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಧಾರ್ಮಿಕ ಆಚಾರ ವಿಧಿಗಳನ್ನು ಕ್ರಮಬದ್ಧಗೊಳಿಸುವಲ್ಲಿ ಗ್ರೀಕ್ ಮತ್ತು ರೋಮನ್ ಕಾನೂನುಗಳು ಮಹತ್ವದ ಪಾತ್ರ ವಹಿಸಿವೆ.

ಕಾನೂನು ಅಥವಾ ನ್ಯಾಯ, ಧಾರ್ಮಿಕ ನಂಬಿಕೆಗಳಿಂದ ಬೇರೆಯಾದುದು ಎಂದು ಪರಿಗಣಿತವಾದ ಅನೇಕ ಸಂಸ್ಕೃತಿಗಳಲ್ಲಿ, ಹೆಚ್ಚಾಗಿ ಧಾರ್ಮಿಕತೆಗೆ ಪ್ರಾಮುಖ್ಯತೆ ಕೊಟ್ಟಿರುವುದು ಕಂಡು ಬರುತ್ತದೆ. ಚೀನಾದಲ್ಲಿ ಸಾಂಪ್ರದಾಯಿಕ ಕಾನೂನುಗಳು ಇದ್ದಾಗ್ಯೂ ಅವು ನಿಸರ್ಗ ನಿಯಮದ ಆಧಾರದ ಮೇಲೆ ಮಾತ್ರ ಪ್ರಾಮುಖ್ಯತೆ ಪಡೆದುಕೊಂಡಿವೆ. ಅಂತಿಮವಾಗಿ ಸ್ವರ್ಗೀಯ ಸೂತ್ರಗಳೇ ನಿರ್ದೇಶಿಸುತ್ತವೆ ಎಂದು ಪರಿಗಣಿಸಲಾಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾನೂನು ಮತ್ತು ಧರ್ಮಗಳ ಪರಸ್ಪರ ಅವಲಂಬನೆ ಮಧ್ಯಯುಗದಲ್ಲಿ ಪ್ರಮುಖ ತಿರುವನ್ನು ಪಡೆದುಕೊಂಡಿತು. ರೊಮನ್ ಕ್ಯಾಥೋಲಿಕ್ ಚರ್ಚಿನ ಕೆನನ್ ಕಾನೂನುಗಳಾಗಲೀ ಅನೇಕ ವ್ಯವಸ್ಠೆಗಳಲ್ಲಿರುವ ಧರ್ಮ ನಿರಪೇಕ್ಷ ಕಾನೂನುಗಳಾಗಲೀ ಪರಸ್ಪರ ಪೂರಕವಾಗಿ ಮಾನವ ಬದುಕಿನ ಔನ್ನತ್ಯಕ್ಕೆ ಒತ್ತು ಕೊಟ್ಟಿವೆ. ಕೆನನ್ ಕಾನೂನುಗಳು ಮನುಷ್ಯ ದೇವರೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳಲು, ದೇವರನ್ನು ಕುರಿತು ಅಂತರಂಗದಲ್ಲಿ ಆಲೋಚಿಸಲು, ಧ್ಯಾನಿಸಲು ಅವಕಾಶ ಮಾಡುವಂತೆ ಉನ್ನತ ಉದ್ದೇಶವನ್ನೊಳಗೊಂಡಿವೆ. ಚರ್ಚಿನ ಈ ಅಧ್ಯಾತ್ಮ ಕಾನೂನುಗಳನ್ನು ಮಾರ್ಟಿನ್ ಲೂಥರ್ ಹಾಗೂ ಕ್ಯಾಲ್ಟಿನ್ ಅವರು ತಿರಸ್ಕರಿಸಿದರು ಅವರ ಅನುಯಾಯಿಗಳು ಐಹಿಕ ರಾಜ್ಯದ ಪಾಪ ಮತ್ತು ಸಾವುಗಳಿಗಾಗಿ ಎಲ್ಲ ಕಾನೂನುಗಳನ್ನು ತೆಗೆದು ಹಾಕಿದರು. ಪಾಪ ಮಾಡದಿರುವುದು ಮತ್ತು ಸಾವನ್ನು ಗೆಲ್ಲುವುದು ಅವರ ಮುಖ್ಯ ಉದ್ದೇಶವಾಗಿತ್ತು.

ಮೂಲ ಪ್ರೊಟೆಸ್ಟಂಟರ ದೃಷ್ಟಿಯಲ್ಲಿ ಸ್ವಾಮಿನಿಷ್ಟ ಕ್ರಿಶ್ಚಿಯನ್ನರು ಅದರಲ್ಲೂ ಮುಖ್ಯವಾಗಿ ಆಳುವ ಕ್ರಿಶ್ಚಿಯನ್ನರು, ಕಾನೂನನ್ನು ನ್ಯಾಯ ಒದಗಿಸುವ ಹಾಗೂ ಸಮಾಜ ಸುಧಾರಣೆಗೊಳಿಸುವ ಉದ್ದೇಶದಿಂದ ಬಳಸಬೇಕೆಂಬ ಒತ್ತಾಸೆಯಿತ್ತು. ಆದಕಾರಣ ಕಾನೂನು ನಿಷ್ಠೆಯೊಂದಿಗೆ ಒಂದಾಗಿತ್ತು. ಕಾನೂನಿಲ್ಲದೆ ಕೇವಲ ಕೃಪೆಯಿಂದ ಕ್ರಿಶ್ಚಿಯನ್ನರು ಬದುಕಬಹುದೆಂಬ ನೈತಿಕ ನಿಯಮಕ್ಕೆ ಬದ್ಧವಾಗಿರದ ದೃಷ್ಟಿಯನ್ನು ಲೂಥರ್ ಹಾಗೂ ಕ್ಯಾಲ್ಟಿನ್ ಒಪ್ಪಲಿಲ್ಲ. ೨೦ನೇ ಶತಮಾನದ ಬ್ರಹ್ಮವಾದಿಗಳು ಮಾಡಿದಂತೆ ಲೂಥರ್ ಹಾಗೂ ಕ್ಯಾಲ್ಟಿನ್ ಅವರ ಅನುಯಾಯಿಗಳು ಕಾನೂನು ಮತ್ತು ಪ್ರೀತಿಯ ನಡುವೆ ವೈದೃಶ್ಯವನ್ನುಂಟು ಮಾಡಲಿಲ್ಲ. ಏಕೆಂದರೆ ನೈತಿಕ ನ್ಯಾಯ ಹಾಗೂ ವ್ಯಾವಹಾರಿಕ ನ್ಯಾಯ ಇವರೆಡು ಸಾಮಾಜಿಕ ಸಂಬಂಧಗಳ ಅರಿವಿನತ್ತ ಕೊಂಡೊಯ್ಯುತ್ತವೆ ಎಂಬುದು ಅವರಿಗೆ ತಿಳಿದಿತ್ತು.

ಐರೋಪ್ಯ ರಾಷ್ಟ್ರಗಳಲ್ಲಿ ಹಾಗೂ ಅಮೆರಿಕದಲ್ಲಿ ಕಾನೂನಿನ ವ್ಯವಸ್ಥೆಯ ಮೇಲೆ ಧಾರ್ಮಿಕ ಪ್ರಭಾವ ಬೀರುವುದು ೨೦ನೇ ಶತಮಾನದಲ್ಲಿ ಇಳಿ ಮುಖವಾಗಿತ್ತು. ಇದರಿಂದ ಧರ್ಮಗಳು ಖಾಸಗಿ ಅಸ್ತಿತ್ವ ಪಡೆದುಕೊಂಡವು. ಸಂಫರ್ಷ ಪ್ರಾರಂಭವಾಯ್ತು. ಧರ್ಮವು ದೇವರ ಮತ್ತು ಮನುಷ್ಯನ ನಡುವಿನ ವೈಯಕ್ತಿಕ ಸಂಬಂಧವಾಗಿ ಮಾರ್ಪಟ್ಟು ಕಾನೂನು ಸಾಮಾಜಿಕ ನ್ಯಾಯ ಒದಗಿಸುವ ಒಂದು ಕ್ರಿಯಾ ಸಂಸ್ಥೆಯಾಗಿ ಪರಿಗಣಿಸಲ್ಪಟ್ಟಿತು. ಕಾನೂನಿಗೆ ಧರ್ಮದ ನೆಲೆಗಟ್ಟಿರಬೇಕೆಂಬುದು ನಿಜವಾದರೂ ಈ ಎರಡರ ಅಸ್ತಿತ್ವವನ್ನು ಒಪ್ಪಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಎರಡನ್ನೂ ಪ್ರತ್ಯೇಕಿಸಿ ನೋಡಬೇಕು. ಆಗ ಕಾನೂನಿನ ಹಿಡಿತದಿಂದ ಧಾರ್ಮಿಕ ಸ್ವಾತಂತ್ರ್ಯವನ್ನೂ ಹಾಗೆಯೇ ಧಾರ್ಮಿಕ ಹಿಡಿತದಿಂದ ಕಾನೂನಿನ ಸ್ವಾತಂತ್ರ್ಯವನ್ನೂ ನೆಲೆಗೊಳಿಸಲು ಸಾಧ್ಯವಾಗುತ್ತದೆ ಎಂಬುದು ಸ್ಥಿರವಾಯಿತು. ಸಾಂಪ್ರದಾಯಿಕ ಧರ್ಮಗಳ ಖಾಸಗೀಕರಣದಿಂದಾಗಿ ಅನೇಕವಾದಗಳು ಪ್ರಾರಂಭವಾದುವು. ಕಮ್ಯುನಿಸ್ಟ್ ದೇಶಗಳಲ್ಲಿ ಧರ್ಮವನ್ನು ರಾಜಕೀಯದಿಂದ ದೂರ ಇರಿಸಲಾಯ್ತು. ಚರ್ಚು ಹಾಗೂ ಸರ್ಕಾರ ದೂರ ಆದವು. ಧಾರ್ಮಿಕ ನಂಬಿಕೆಯುಳ್ಳವರನ್ನು ರಾಜಕೀಯ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಹಾಗೂ ರಾಜಕೀಯದಲ್ಲಿರುವವರಿಗೆ ಚರ್ಚಿನ ವ್ಯವಹಾರಕ್ಕೆ ಪ್ರವೇಶಿಸುವ ಅವಕಾಶವಿಲ್ಲದಂತೆ ಮಾಡಲಾಯಿತು.

ಹೀಗೆ ೨೧ನೇ ಶತಮಾನಕ್ಕೆ ಪ್ರವೇಶಿಸುವ ಈ ಸಮಯದಲ್ಲಿ, ಪ್ರಪಂಚದಾದ್ಯಂತ ಕಾನೂನು ಮತ್ತು ಧರ್ಮಗಳು ಪ್ರತ್ಯೇಕ ಅಸ್ತಿತ್ವವನ್ನು ಹೊಂದಿ, ಸಮಾಜದಲ್ಲಿ ತಮ್ಮ ಪ್ರತ್ಯೇಕ ಪ್ರಭಾವವನ್ನು ಬೀರುತ್ತಿವೆ. ಒಂದು ಮತ್ತೊಂದರ ಮೇಲೆ ಪ್ರಭಾವ ಬೀರುವ ಶಕ್ತಿಯನ್ನು ಎರಡೂ ಆಂತರಿಕವಾಗಿ ಉಳಿಸಿಕೊಂಡಿವೆ. ಪ್ಯಾಲಿಸ್ಟೈನ್, ಜರೂಸೆಲಂ ಸಮಸ್ಯೆಗಳಾಗಲೀ ಇವು ಕಾನೂನು ಮತ್ತು ಧರ್ಮಗಳ ನೆಲೆಗಟ್ಟಿನಲ್ಲಿ ಮಾರ್ಗ ಕಂಡುಕೊಳ್ಳುವ ಪ್ರಕ್ರಿಯೆಗೆ ಒಳಗಾಗಿವೆ. ಶತಮಾನಗಳಿಂದ ಬಂದ ಜನರ ನಂಬಿಕೆಗಳಿಗೆ ನೆಲೆಗಟ್ಟನ್ನು ಒದಗಿಸುವಲ್ಲಿ ಒಂದು ಕಡೆ ಧರ್ಮ ಶ್ರಮಿಸುತ್ತಿದ್ದರೆ, ಮತ್ತೊಂದು ಕಡೆ ಕಾನೂನು ನೆರವಾಗುತ್ತಿದೆ.

ವೈದಿಕ ಹಿಂದೂ ಕಾನೂನು ವೈದಿಕ ಹಿಂದೂಗಳ ಚಿಂತನೆಯಲ್ಲಿ ಕಾನೂನು ಮತ್ತು ಧರ್ಮ ಎಂಬ ವಿಂಗಡಣೆ ಇಲ್ಲ. ಈ ಎರಡೂ ಧರ್ಮ ಎನ್ನುವ ಪದದಲ್ಲಿಯೇ ಅಡಕವಾಗಿವೆ. ನ್ಯಾಯಕ್ಕೆ ಧರ್ಮವೇ ಆಧಾರ. ನೈಸರ್ಗಿಕ ನ್ಯಾಯವನ್ನು ಆದರ್ಶ, ನೈತಿಕತೆ ಹಾಗೂ ವಿಶ್ವದ ಅಲೌಕಿಕ ನಿಯಮಗಳಿಂದ ಪಡೆದುಕೊಳ್ಳಲಾಗಿದೆ. ಈ ಅಲೌಕಿಕ ಶಕ್ತಿಯೇ ಧರ್ಮದ ಮೂಲಾಧಾರ. ಈ ಧರ್ಮಕ್ಕೆ ಬದ್ಧರಾಗುವಂತೆ ನೋಡಿಕೊಳ್ಳುವ ಅಧಿಕಾರವನ್ನು ರಾಜನಿಗೆ ಕೊಡಲಾಗಿತ್ತು. ಈ ಅಧಿಕಾರ ಕೂಡ ರಾಜಧರ್ಮದ ಒಂದಂಶವಾಗಿತ್ತು. ಆದಕಾರಣ ದಕ್ಷಿಣ ಏಷ್ಯಾದ ನ್ಯಾಯ ಅಥವಾ ಕಾನೂನು ಪದ್ದತಿಯನ್ನು ರಾಜಕೀಯ, ನ್ಯಾಯ ಮತ್ತು ಧರ್ಮಗಳಿಂದ ಬೇರ್ಪಡಿಸಿ ನೋಡುವುದು ಕಷ್ಟ.

ಧರ್ಮ ತನ್ನ ಪೂರ್ಣಾರ್ಥದಲ್ಲಿ ಹಿಂದೂ ಜೀವನದ ಎಲ್ಲ ದೃಷ್ಟಿಯಿಂದಲೂ ಹೊಂದಿದೆ. ಇದು ನೈಸರ್ಗಿಕ ಹಾಗೂ ನೈತಿಕ ನಿಯಮ. ಅದರ ಉಲ್ಲಂಘನೆ ವ್ಯಕ್ತಿ ಹಾಗೂ ಸಮಾಜದ ಮೇಲೆ ತೀವ್ರ ಪರಿಣಾಮವನ್ನುಂಟುಮಾಡುತ್ತದೆ.

ನ್ಯಾಯಶಾಸ್ತ್ರದಲ್ಲಿ ಧರ್ಮದ ಉಗಮಕ್ಕೆ ಮುಖ್ಯವಾಗಿ ನಾಲ್ಕು ಮೂಲಗಳನ್ನು ಗುರುತಿಸಲಾಗಿದೆ. ೧) ವೇದ. ೨)ಸ್ಮೃತಿ. ೩) ಸಂಪ್ರದಾಯ ಅಥವಾ ಸದಾಚಾರ. ೪) ಆತ್ಮ ಸಾಕ್ಷಿ. (ಮನುಸ್ಮೃತಿ ೧- ೧೦೮, ೨-೧೨) ಎಲ್ಲಕ್ಕೂ ವೇದವೇ ಆಧಾರ. ಧರ್ಮಕ್ಕೆ ಸಂಬಂಧಪಟ್ಟಂತೆ ಹೇಳುವ ಮತ್ತಾವುದೇ ಸಾಹಿತ್ಯದ ಗುರುತು ವೇದದಲ್ಲಿ ಸಿಗುವಂಥದ್ದೆ. ಸ್ಮೃತಿ ಮತ್ತು ಸಂಪ್ರದಾಯ ವೇದಗಳ ಮೇಲೆ ನಿಂತಿದೆ. ಆತ್ಮಸಾಕ್ಷಿ: ಅವರವರ ಅಂತಃಸಾಕ್ಷಿಗೆ ಸರಿಯೆಂದು ತೋರುವಂತೆ ಎಂಬುದು ಸಂದಿಗ್ಧವಾದುದು ಅಲ್ಲದೆ ಅದು ಹೆಚ್ಚಿನ ಚರ್ಚೆಗೆ ಒಳಗಾಗಿಲ್ಲ. ಆದರೆ ಎಲ್ಲಿ ನಿಯಮಗಳನ್ನು ಹೇಳಿಲ್ಲವೋ ಅಂಥಹ ಸಂದರ್ಭಗಳಲ್ಲಿ ಈ ಆತ್ಮಸಾಕ್ಷಿಯನ್ನು ಧರ್ಮದ ಉಗಮಕ್ಕೆ ಕಾರಣವಾದ ಈ ನಾಲ್ಕು ಮೂಲಗಳಿಗೆ ವೇದದೊಂದಿಗೆ ಇರುವ ಸಂಬಂಧವೇ ಅದಕ್ಕೆ ಪ್ರಮಾಣವಾಗಿದೆ.

ಸ್ಮೃತಿ ಸಾಹಿತ್ಯದ ಮುಖ್ಯಭಾಗ ಧರ್ಮಶಾಸ್ತ್ರ. ಇದರ ಗುರಿ ವೈದಿಕ ಹಿಂದುಗಳಿಗೆ ವೇದದಲ್ಲಿರುವ ಲೌಕಿಕ ಮತ್ತು ಅಲೌಕಿಕ ಧರ್ಮವನ್ನು ತಿಳಿಯ ಹೇಳುವುದು ಹಾಗೂ ವಿಶ್ವದಲ್ಲಿ ಅವರ ಅಸ್ತಿತ್ವವನ್ನು ಅರಿವು ಮಾಡಿಕೊಡುವುದಾಗಿದೆ.

ಸ್ಮೃತಿಗಳಲ್ಲಿ ಮುಖ್ಯವಾದದ್ದು ಮನುಸ್ಮೃತಿ. ಒಂದು ಲೆಕ್ಕದ ಪ್ರಕಾರ ಯಾಜ್ಞವಲ್ಕ ಸ್ಮೃತಿಯನ್ನೊಳಗೊಂಡಂತೆ ಸ್ಮೃತಿಗಳ ಸಂಖ್ಯೆ ೧೦೮. ಅಸಂಖ್ಯ ಸ್ಮೃತಿಗಳಿದ್ದರೂ ಅವು ಸತ್ವದಲ್ಲಿ ಒಂದೇ. ಅವು ಒಂದೇ ಸಾಮಾನ್ಯ ಮೂಲದಿಂದ ಬಂದಿವೆ. ಅವುಗಳಿಗೆ ಆಧಾರ ಧರ್ಮಶಾಸ್ತ್ರ ಎಂದು ಪರಿಗಣಿತವಾಗಿರುವ ಮನುಸ್ಮೃತಿ. ಪುನರಾವರ್ತನೆ ಎನ್ನುವಷ್ಟರ ಮಟ್ಟಿಗೆ ಉಳಿದ ಸ್ಮೃತಿಗಳು ಮನುಸ್ಮೃತಿಗೆ ಋಣಿಯಾಗಿವೆ. ಬ್ರಾಹ್ಮಣ ಹಿಂದೂ ಧರ್ಮದ ನೈತಿಕ ಹಾಗೂ ಧಾರ್ಮಿಕ ಭಾವನೆಯ ಸ್ವರೂಪವನ್ನು ತಿಳಿಯಲು ಈ ಮನುಸ್ಮೃತಿಯ ಅಧ್ಯಯನ ಸಹಕಾರಿಯಾಗುತ್ತದೆ. ಮನುಸ್ಮೃತಿಯನ್ನು ಕುರಿತು ಡಾ. ಅಂಬೇಡ್ಕರ್ ಅವರು “ಮನುಸ್ಮೃತಿ ಕಾನೂನು ಶಾಸ್ತ್ರ, ಧರ್ಮಶಾಸ್ತ್ರ ಮತ್ತು ನೀತಿತಾಸ್ತ್ರ ಎಲ್ಲಾ ಒಟ್ಟಿಗೆ ಸೇರಿರುವ ಗ್ರಂಥವಾಗಿದೆ. ಅದು ನೀತಿಶಾಸ್ತ್ರ, ಏಕೆಂದರೆ ಅದು ಮನುಷ್ಯನ ಕರ್ತವ್ಯಗಳನ್ನು ಹೇಳುತ್ತದೆ; ಅದು ಧರ್ಮಶಾಸ್ತ್ರ, ಏಕೆಂದರೆ ಅದು ಹಿಂದೂ ಧರ್ಮದ ಜೀವವಾದ ಜಾತಿಯ ಬಗ್ಗೆ ಹೇಳುತ್ತದೆ; ಅದು ಕಾನೂನುಶಾಸ್ತ್ರ ಏಕೆಂದರೆ, ಕರ್ತವ್ಯ ಭ್ರಷ್ಟತೆಗೆ ಶಿಕ್ಷೆ ವಿಧಿಸುತ್ತದೆ” ಎಂದು ವಿಶ್ಲೇಷಿಸುತ್ತಾರೆ.

ಧರ್ಮಸೂತ್ರಗಳು ಮತ್ತು ಮನುಸ್ಮೃತಿ ಧರ್ಮ ಕುರಿತು ಗರಿಷ್ಠ ಪ್ರಮಾಣದಲ್ಲಿ ಬೋಧಿಸಿವೆ. ಬ್ರಾಹ್ಮಣ ಹಿಂದೂ ಧರ್ಮಕ್ಕೆ ಆಧಾರ ಸ್ವರೂಪದ ಕಾನೂನು ಎಂದರೆ ಮನುಸ್ಮೃತಿ. ಈ ಮನುಸ್ಮೃತಿಯ ವಿಶ್ಲೇಷಣೆಗೆ ಮುನ್ನ ಹಿಂದೂ ಧರ್ಮವನ್ನು ಕುರಿತು ವ್ಯಾಖ್ಯೆಯನ್ನು ತಿಳಿಯವುದು ಸೂಕ್ತ.

“ಹಿಂದೂ ಎಂಬ ಶಬ್ದ ಸಂಪೂರ್ಣವಾಗಿ ಧಾರ್ಮಿಕ ಶಬ್ದವಲ್ಲ; ಅದು ಒಂದು ದೇಶವನ್ನು, ಬಹುಪಾಲು ಒಂದು ಜನಾಂಗವನ್ನು ಸೂಚಿಸುತ್ತದೆ. ಜನಾಂಗ ಅಥವಾ ಸ್ಥಳದ ಭಿನ್ನತೆಯಿಲ್ಲದೆ ವಿಶಾಲವಾದ ಅರ್ಥದಲ್ಲಿ ಕ್ರೈಸ್ತರು, ಮಹ್ಮದೀಯರು ಅಥವಾ ಬೌದ್ಧರು ಎಂದು ನಾವು ಹೇಳುವಾಗ ಒಂದು ವಿಶಿಷ್ಟ ಧಾರ್ಮಿಕ ಸಮುದಾಯವನ್ನು ಸೂಚಿಸುತ್ತೇವೆ. ರಷ್ಯಿಯನ್ನರು ಅಥವಾ ಪರ್ಷಿಯನ್ನರ ಬಗ್ಗೆ ನಾವು ಹೇಳುವಾಗ ಯಾವುದೇ ಧಾರ್ಮಿಕ ಪಂಥದ ಭೇದ ಭಾವವಿಲ್ಲದೆ ನಾವು ದೇಶ ಅಥವಾ ಕುಲವನ್ನು ಸೂಚಿಸುತ್ತೇವೆ. ಆದರೆ ಒಬ್ಬ ವ್ಯಕ್ತಿ ತಾನು ಹಿಂದೂ ಎಂದು ಹೇಳಿದಾಗ, ಅವನು ಧರ್ಮ ಕುಲ ಮತ್ತು ದೇಶ ಇವು ಮೂರನ್ನೂ ಒಟ್ಟಿಗೆ ಹೇಳುತ್ತಾನೆ ಎಂದು ನಾನು ತಿಳಿಯುತ್ತೇನೆ. ಹಿಂದೂ ಧರ್ಮವೆಂದರೆ ಗೊಂದಲಮಯ ಮೂಢನಂಬಿಕೆಗಳ, ಹಕ್ಕುಗಳ ಕ್ರೋಢೀಕರಣದ, ಆರಾಧನೆಗಳ, ನಂಬಿಕೆಗಳ, ಸಂಪ್ರದಾಯ ಮತ್ತು ಪುರಾಣಗಳ ಅಸ್ತವ್ಯಸ್ತ ಕಗ್ಗಂಟು; ಇವುಗಳಿಗೆ ಬ್ರಾಹ್ಮಣರ ಧರ್ಮಗ್ರಂಥಗಳು ಮತ್ತು ಶಾಸನಗಳು ಅಧಿಕಾರ ಮುದ್ರೆಯೊತ್ತಿವೆ ಮತ್ತು ಇವುಗಳನ್ನು ಬ್ರಾಹ್ಮಣರ ಉಪದೇಶಗಳಿಂದ ಪ್ರಚಾರಪಡಿಸಲಾಗಿದೆ” ಎಂದು ಸರ್. ಎ. ಲ್ಯಾಲ್ ವಿವರಣೆ ನೀಡಿದ್ದಾರೆ.

ಇದನ್ನು ವಿಶ್ಲೇಷಿಸುತ್ತಾ ಡಾ.ಅಂಬೇಡ್ಕರ್‌ರವರು ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಅದರ ಸಾರಭೂತ ಅಂಶವೇನು ಎಂಬ ಬಗ್ಗೆ ಭಿನ್ನಾಭಿಪ್ರಾಯವಿರಬಹುದು. ಆದರೆ ಜಾತಿ ಹಿಂದೂ ಧರ್ಮದ ಒಂದು ಏಕೈಕ ಸಾರಭೂತವಾದ ಅವಿಭಾಜ್ಯ ಅಂಗವೆನ್ನುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಜಾತಿ ಸಿದ್ಧಾಂತವನ್ನು ಮನು ಪ್ರತಿಪಾದಿಸುವಷ್ಟರ ಮಟ್ಟಿಗೆ ಹಾಗೂ ಜಾತಿ ಸಿದ್ಧಾಂತವೇ ಹಿಂದೂ ಧರ್ಮದ ತಿರುಳಾಗಿರುವಷ್ಟರ ಮಟ್ಟಿಗೆ ಮನುಸ್ಮೃತಿಯನ್ನು ಗ್ರಂಥವೆಂದು ಒಪ್ಪಿಕೊಳ್ಳಬೇಕಾಗುತ್ತದೆ.

ಮನುಸ್ಮೃತಿ ಸಾಮಾಜಿಕ ರೀತಿನೀತಿಗಳು, ವ್ಯವಹಾರಗಳ, ಕರ್ತವ್ಯಗಳು ಹೇಗಿರಬೇಕೆಂಬುದನ್ನು ಸ್ಪಷ್ಟವಾಗಿ ನಾಲ್ಕು ವರ್ಣಗಳಾಗಿ ವಿಂಗಡಿಸಿ ಆ ಆಧಾರದ ಮೇಲೆ ವಿವರಿಸುತ್ತದೆ. ನಾಲ್ಕು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬಿವು ಮನುಸ್ಮೃತಿಯ ನಾಲ್ಕು ಆಧಾರಸ್ಥಂಭಗಳು. ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಬ್ರಾಹ್ಮಣ ಶ್ರೇಷ್ಠ; ಶೂದ್ರ ಹಾಗೂ ಸ್ತ್ರೀ ಕನಿಷ್ಠ.

‘ಅಗ್ನಿಯನ್ನು ಯಜ್ಞಕ್ಕೆ ಉಪಯೋಗಿಸಲಿ ಅಥವಾ ಉಪಯೋಗಿಸದಿರಲಿ, ಅದು ಹೇಗೆ ಮಹತ್ವವಾದುದೋ ಅಂತೆಯೇ ಬ್ರಾಹ್ಮಣರು ವಿದ್ಯಾವಂತನಾಗಿರಲಿ ಅಥವಾ ಅವಿದ್ಯಾವಂತನಾಗಿರಲಿ ಅವನು ದೇವರಿಗೆ ಸಮಾನ’ (ಮ. ಸ್ಮೃತಿ. ೯-೩೧೭). ಈ ಕಾರಣಗಳಿಂದ ಅಂದರೆ ಬ್ರಾಹ್ಮಣ ದೇವನಾಗಿರುವುದರಿಂವ ಅವನು ರಾಜನಿಗೂ ಅತೀತನಾಗಿದ್ದಾನೆ ಎಂದು ಮನು ತಿಳಿಸುತ್ತಾನೆ. ಆದಕಾರಣ ಸಾಮಾಜಿಕ ಹಾಗೂ ಧಾರ್ಮಿಕ ನ್ಯಾಯಾನ್ಯಾಯಗಳ ನಿರ್ಣಯವನ್ನು ವರ್ಣಗಳ ಆಧಾರದ ಮೇಲೆ ಮನು ನಿರ್ದೇಶಿಸಿದ್ದಾನೆ.

ಧರ್ಮಶಾಸ್ತ್ರ ಹಾಗೂ ಧರ್ಮಸೂತ್ರಗಳು ವೈದಿಕ ಹಿಂದೂ ಧರ್ಮದ ನ್ಯಾಯದ ನೆಲೆಗಟ್ಟುಗಳು. ಇವುಗಳು ಇದ್ದಾಗ್ಯೂ ಸ್ಥಳೀಯ ಸಂಪ್ರದಾಯ, ರೂಢಿ ಅಥವಾ ಪದ್ದತಿಗಳು ಇವುಗಳನ್ನು ಮೀರಿ ಆಚರಣೆಯಲ್ಲಿದ್ದವು. ಈ ಹಿನ್ನೆಲೆಯಲ್ಲಿ ನೋಡಿದಾಗ ಧರ್ಮಶಾಸ್ತ್ರ ಹಾಗೂ ಧರ್ಮಸೂತ್ರಗಳು ಧರ್ಮಾಚರಣೆಯಲ್ಲಿ ಮಾರ್ಗಸೂಚಿಗಳಾಗಿದ್ದರೂ ಸ್ಥಳೀಯ ಸಂಪ್ರದಾಯಗಳೆ ಆಯಾಯಜಾತಿ ಸಮುದಾಯಗಳ ಧರ್ಮಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿವೆ.

ವೈದಿಕ ಹಿಂದೂ ಧರ್ಮದಲ್ಲಿ ಒಂದು ಕೇಂದ್ರಿಕೃತ ನ್ಯಾಯವ್ಯವಸ್ಥೆ ಇದ್ದುದು ಕಂಡು ಬರುವುದಿಲ್ಲ. ನ್ಯಾಯದ ಪೂರ್ಣಾಧಿಕಾರ ರಾಜನದಾಗಿತ್ತು. ಜೊತೆಯಲ್ಲಿಯೆ ಬುಡಕಟ್ಟುಗಳಲ್ಲಿ ಬುಡಕಟ್ಟು ನ್ಯಾಯಗಳು ಆಚರಣೆಯಲ್ಲಿದ್ದವು. ರಾಷ್ಟ್ರದಲ್ಲಿ ಅನೇಕ ರಾಜರುಗಳಿದ್ದರು. ವಾದಿ ಅಥವಾ ಫಿರ್ಯಾದುದಾರ ದೂರನ್ನು ನೀಡಿದಾಗ, ಅವುಗಳ ವಿಚಾರಣೆಯನ್ನು ರಾಜ ಮಾಡುತ್ತಿದ್ದನು. ದೂರು ಇಲ್ಲದೇ ಪ್ರಕರಣ ತನ್ನ ಗಮನಕ್ಕೆ ಬಂದಾಗ ನೇರವಾಗಿ ರಾಜನೇ ತನ್ನ ಅಧಿಕಾರದ ಮೂಲಕ ನ್ಯಾಯ ನೀಡುತ್ತಿದ್ದನು. ನ್ಯಾಯ ನೀಡುವುದು ರಾಜಕೀಯ ವಿಷಯವಾಗಿರದೆ ಧರ್ಮವಮ್ನ ಎತ್ತಿ ಹಿಡಿಯುವ ಧಾರ್ಮಿಕ ಕ್ರಿಯೆಯಾಗಿತ್ತು. ಮೊದಲೆ ಹೇಳಿದಂತೆ ಒಂದು ಕೇಂದ್ರೀಕೃತ ನ್ಯಾಯ ವ್ಯವಸ್ಥೆ ಇರದ ಕಾರಣ ಸಾಂಪ್ರದಾಯಿಕ ನ್ಯಾಯವ್ಯವಸ್ಥೆಯಲ್ಲಿ ಆಯಾಯ ಸಂಪ್ರದಾಯಗಳಲ್ಲಿ ಧರ್ಮವನ್ನು ಕಾಪಾಡುವ ಹೊಣೆಗಾರಿಕೆ ಇತ್ತು.

ಈ ಪದ್ಧತಿಯಲ್ಲಿ ಕಾನೂನಿಗೆ ಮಾನ್ಯತೆ ಸಿಗಲು ಕಾರಣ, ಧರ್ಮದ ನೈತಿಕ ಹಾಗೂ ನ್ಶೆಸರ್ಗಿಕ ಆಧಾರದ ಮೇಲೆ ವಿಶ್ವ ನಿಂತಿದೆ ಎಂಬ ಧಾರ್ಮಿಕ ನಂಬಿಕೆ. ಈ ಕಾನೂನುಗಳನ್ನು ಜಾರಿಗೊಳಿಸುವುದು ರಾಜನ ಕರ್ತವ್ಯವಾಗಿತ್ತು. ಆತನನ್ನು ದೇವಾಂಶ ಸಂಭೂತನೆಂದು ಪರಿಗಣಿಸಲಾಗುತ್ತಿತ್ತು. (ಮನುಸ್ಮೃತಿ:೭:೪-೫) ತನ್ನ ಪ್ರಜೆಗಳಿಗೆ ನ್ಯಾಯ ಒದಗಿಸುವುದು ಆತನ ಹೊಣೆ, ಆದ ಕಾರಣ ಅಧರ್ಮಿಗಳನ್ನು ಶಿಕ್ಷಿಸುವ ಜವಾಬ್ದಾರಿ ರಾಜನದಾಗಿತ್ತು. ಮಹಾಭಾರತದ ಹಲವೆಡೆಗಳಲ್ಲಿ ರಾಜಧರ್ಮ ಮತ್ತೆಲ್ಲ  ಧರ್ಮಗಳನ್ನು ಒಳಗೊಂಡಂತೆ ಶ್ರೇಷ್ಠ ಧರ್ಮವಾಗಿತ್ತು ಎಂದು ಉಲ್ಲೇಖಿತವಾಗಿದೆ. ರಾಜನ ತೀರ್ಪು ಅಂತಿಮವಾದುದು. ರಾಜತೀರ್ಪಿನ ವಿರುದ್ಧ ಮೇಲ್ಮನವಿ ಇರಲಿಲ್ಲ. ರಾಜನೇ ಸಮಯ ಬಂದಾಗ ಇತರ ನ್ಯಾಯಾಧೀಶರನ್ನು ಸಾಮಾನ್ಯವಾಗಿ ಬ್ರಾಹ್ಮಣರನ್ನು ನ್ಯಾಯ ನೀಡುವ ಸಂದರ್ಭಗಳಲ್ಲಿ ನೇಮಿಸಿಕೊಳ್ಳುತ್ತಿದ್ದ. ರಾಜ ಇಲ್ಲದಿದ್ದ ಸಂದರ್ಭಗಳಲ್ಲಿ ಅವರಲ್ಲಿ ಒಬ್ಬ ಮುಖ್ಯನ್ಯಾಯಾಧೀಶನಾಗಿ ತೀರ್ಪು ನೀಡುತ್ತಿದ್ದನು. ಆದರೂ ಧರ್ಮವನ್ನು ಎತ್ತಿ ಹಿಡಿಯುವ ಹೊಣೆ ರಾಜನದಾಗಿತ್ತು. ನ್ಯಾಯಾಧೀಶರು ತೀರ್ಪು ನೀಡುವಾಗ ತಪ್ಪು ಮಾಡಿದ್ದರೆ ರಾಜ ಅವರನ್ನು ಶಿಕ್ಷಿಸಬಹುದಾಗಿತ್ತು. ಅಂತೆ ರಾಜ ತಪ್ಪು ಮಾಡಿದ್ದರೆ ಅವನನ್ನೂ ಸಿಂಹಾಸನದಿಂದ ಕೆಳಗಿಳಿಸುತ್ತಿದ್ದರು. ಇದನ್ನು  ಸ್ಮೃತಿಗಳು ಎತ್ತಿ ಹಿಡಿದಿವೆ.

ಶಿಕ್ಷೆಯ ಉದ್ದೇಶ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು. ಅಧರ್ಮಗೈದವನು ಪಾಪ ಮುಕ್ತನಾಗಲು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿತ್ತು. ಆದಕಾರಣ ಕೊಡುತ್ತಿದ್ದ ಶಿಕ್ಷೆಯನ್ನು ಪಾಪ ವಿಮೋಚನೆ ಎಂದು ಪರಿಗಣಿಸಲಾಗುತಿತ್ತು. ಆಘಾತ ಹಾಗೂ ವ್ಯವಹಾರ ನ್ಯಾಯಗಳಿಗೆ ಶಿಕ್ಷೆಯ ಸ್ವರೂಪ ಪರಿಹಾರ ರೂಪದ್ದಾಗಿರುತ್ತಿತ್ತು.

ಹೀಗಾಗಿ ಧರ್ಮಶಾಸ್ತ್ರ ಮತ್ತು ಧರ್ಮಸೂತ್ರಗಳನ್ನು ಮೂರು ಮುಖ್ಯ ವಿಭಾಗಗಳನ್ನಾಗಿ ವಿಂಗಡಿಸಬಹುದು.
೧. ಆಚಾರ (ಒಳ್ಳೆಯ ನಡತೆ)
೨. ವ್ಯವಹಾರ (ನ್ಯಾಯಪ್ರಕ್ರಿಯೆ) ಹಾಗೂ
೩. ಪ್ರಾಯಶ್ಚಿತ್ತ.
ಪ್ರತಿಯೊಬ್ಬ ಪ್ರಜೆಯೂ ಧರ್ಮದ ನೆಲೆಗಟ್ಟಿನಲ್ಲಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಪೂರಕವಾದ ಎಲ್ಲವನ್ನೂ ಈ ಧರ್ಮಶಾಸ್ತ್ರ ಮತ್ತು ಧರ್ಮಸೂತ್ರಗಳು ಒಳಗೊಂಡಿವೆ. ಸಮಾಜ ಬೆಳೆದಂತೆ ಆ ಕಾಲ ಸಮಾಜಗಳಿಗೆ ಅನುಗುಣವಾಗಿ ಧರ್ಮಶಾಸ್ತ್ರಕಾರರು ಹಾಗೂ ಸೂತ್ರಕಾರರು ಅವುಗಳನ್ನು ಅರ್ಥೈಸಿ, ಧರ್ಮದ ನೆಲೆಗಟ್ಟಿನಲ್ಲಿ ಬದಲಾವಣೆಗಳನ್ನು ವಾಖ್ಯಾನ, ಟೀಕೆಗಳ ಮೂಲಕ ನೀಡುತ್ತಿದ್ದರು. ತನ್ಮೂಲಕ ಹಿಂದೂ ಧರ್ಮದ (ನ್ಯಾಯ) ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಿದ್ದರು.

ಹಿಂದೂ ಸಮಾಜದಲ್ಲಿ ಅವರವರ ಸ್ಥಾನಮಾನಗಳನ್ನು ಅವರ ಅಂತಸ್ಥಿಗೆ ಅನುಗುಣವಾಗಿ ವಿಂಗಡಿಸಲಾಗುತ್ತಿತ್ತು. ಸ್ತ್ರೀಯರಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ಎಲ್ಲ ಧರ್ಮಶಾಸ್ತ್ರ ಹಾಗೂ ಧರ್ಮಸೂತ್ರಗಳನ್ನು ಬರೆದವರು ಪುರುಷರು. ಅಲ್ಲದೆ ಮಿಕ್ಕವರ ಸ್ಥಾನಮಾನಗಳನ್ನು ಅವರವರ ವರ್ಣ ಮತ್ತು ಜಾತಿಗಳ ಆಧಾರದ ಮೇಲೆ ನಿರ್ಣಯಿಸಲಾಗುತ್ತಿತ್ತು. ಇದನ್ನು ಒಳಜಾತಿ ಪಂಗಡಗಳನ್ನೊಳಗೊಂಡಂತೆ ವರ್ಣಾಶ್ರಮ ಧರ್ಮ ಎಂದು ಕರೆಯಲಾಗುತ್ತಿತ್ತು. ಅವರವರ ವೃತ್ತಿಗನುಗುಣವಾಗಿ ವರ್ಣಗಳ ವಿಂಗಡನೆ ಮಾಡಲಾಗಿತ್ತು. ಅವನ್ನು ಸ್ವಧರ್ಮ ಎಂದು ಪರಿಗಣಿಸಲಾಗುತ್ತಿತ್ತು. ಈ ಸ್ವಧರ್ಮವಮ್ನ ಹುಟ್ಟಿನ ಮೇಲೆ ನಿರ್ಧರಿಸಲಾಗುತ್ತಿತ್ತು. ಆದ ಕಾರಣ ಬ್ರಾಹ್ಮಣ ಮತ್ತು ಶೂದ್ರ ಗುಣಾತ್ಮಕವಾಗಿ ಬೇರೆ ಬೇರೆ ವ್ಯಕ್ತಿಗಳಾಗುತ್ತಿದ್ದರು. ಇದರಿಂದಾಗಿ ಸಾಮಾಜಿಕ, ಧಾರ್ಮಿಕ ಹಾಗೂ ನ್ಯಾಯಿಕವಾಗಿ ಬ್ರಾಹ್ಮಣ ಮತ್ತು ಶೂದ್ರರ ಸ್ಥಾನಮಾನಗಳು ಅವರವರ ಯೋಗ್ಯತೆಗೆ ಅನುಗುಣವಾಗಿ ಇರುತ್ತಿತ್ತು. ಬ್ರಾಹ್ಮಣನನ್ನು ಕೊಂದರೆ ೧೨ ವರ್ಷ- ಶಿಕ್ಷೆ ಇದ್ದರೆ ಶೂದ್ರನನ್ನು ಕೊಂದರೆ ಶಿಕ್ಷೆ ಕೇವಲ ೬ ತಿಂಗಳು ಮಾತ್ರ. ಈ ತಾರತಮ್ಯವನ್ನು ಮನುಸ್ಮೃತಿಯಲ್ಲಿ ಗುರುತಿಸಬಹುದಾಗಿದೆ.

“ಶೂದ್ರನು ರಕ್ಷಣೆಗೆ ಒಳಪಟ್ಟ ಅಥವಾ ಅನಾಥ ಬ್ರಾಹ್ಮಣ ಸ್ತ್ರೀಯನ್ನು ಪ್ರೀತಿಸಿದರೆ ಅಂಗಹೀನತೆಯ ದಂಡಕ್ಕೆ ಅರ್ಹ” (೮-೩೭೪) “ವೈಶ್ಯನು ಬ್ರಾಹ್ಮಣ ಸ್ತ್ರೀಯನ್ನು ದೂಷಿಸಿದರೆ ಒಂದು ವರ್ಷ ಬಂಧನದಲ್ಲಿಟ್ಟು ಬಳಿಕ ಅವನ ಸರ್ವಸ್ವತ್ತನ್ನು ರಾಜನು ವಶಪಡಿಸಿಕೊಳ್ಳಬೇಕು. ಕ್ಷತ್ರಿಯನು ಬ್ರಾಹ್ಮಣಿಯನ್ನು ದೂಷಿಸಿದರೆ ಅವನ ತಲೆಯನ್ನು ಕತ್ತೆ ಮೂತ್ರದಿಂದ ನೆನೆಯಿಸಿ ಬೋಳಿಸಬೇಕು’ (೮-೩೭೫) ಯಾವ ತಪ್ಪಿಗೂ ಬ್ರಾಹ್ಮಣನಿಗೆ ಮರಣ ದಂಡನೆ ಇಲ್ಲ. ಅವನನ್ನು ಧನ ಸಹಿತವಾಗಿ ದೇಹವನ್ನು ಪೀಡಿಸದೆ ಓಡಿಸಿ ಬಿಡುವುದು ಪರಮಾವಧಿ ದಂಡವು’ (ಮನುಸ್ಮೃತಿ ೮-೩೮೦).

ಧರ್ಮದ ಹೆಸರಿನಲ್ಲಿ ವರ್ಣ ಮತ್ತು ಜಾತಿಗಳ ಮೇಲುಗೈ ಕಂಡು ಬ್ರಿಟೀಷರು ೧೭೭೨ರಲ್ಲಿ, ತಮ್ಮ ಅಧೀನದಲ್ಲಿದ್ದ ಪ್ರಾಂತ್ಯಗಳಲ್ಲಿ ಹೊಸ ಕಾನೂನುಗಳನ್ನು ಜಾರಿಗೊಳಿಸಿ ತಾರತಮ್ಯಗಳನ್ನು ತಹಬಂದಿಗೆ ತರಲು ಯತ್ನಿಸಿದರು. ಮದುವೆ, ದತ್ತು ಹಾಗೂ ವಾರಸುದಾರಿಕೆ ಕಾನೂನುಗಳನ್ನು ಜಾರಿಗೊಳಿಸಿದಾಗ ಅವರಿಗೆ ಗೊತ್ತಾಯಿತು, ಧರ್ಮ ಎಂಬುದೆ ಬೇರೆ ಹಾಗೂ ಸಮಾನ ನ್ಯಾಯವೇ ಬೇರೆ ಎಂದು. ಈ ಹಿನ್ನೆಲೆಯಲ್ಲಿ ಕೇವಲ ಸ್ಮೃತಿಗಳ ಆಧಾರದ ಮೇಲೆ ನ್ಯಾಯ ನಿರ್ಣಯಿಸುತ್ತಿದ್ದ ಹಿಂದೂ ಸಮಾಜಕ್ಕೆ, ಬ್ರಿಟೀಷರು ೧೭೭೬ರಲ್ಲಿ ತಂದ “ಹಿಂದೂ ಲಾ” ಒಂದು ವರವಾಗಿ ಬಂದಿತು. ಅದು ಸ್ವತಂತ್ರ ಭಾರತದಲ್ಲಿ ಅನೇಕ ಬದಲಾವಣೆಗಳೊಂದಿಗೆ ಇಂದೂ ಜಾರಿಯಲ್ಲಿದೆ. ವಿವಾಹ ವಿಚ್ಛೇಧನಕ್ಕೆ ಸಂಬಂಧ ಪಟ್ಟಂತೆ, ಸ್ತ್ರೀಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಇರುವಂತೆ ಅನೇಕ ಮಾರ್ಪಾಡುಗಳನ್ನು ಜಾರಿಗೆ ತಂದಿದೆ. ಮೂಢ ನಂಬಿಕೆಗಳಿಂದ ಸಮಾಜದಲ್ಲಿ ಆಚರಣೆಯಲ್ಲಿರುವ ಸತಿ, ದೇವದಾಸಿ, ಅಸ್ಪೃಶ್ಯತೆ ಮುಂತಾದ ಪದ್ಧತಿಗಳಿಗೆ ಸುಧಾರಣೆ ತಂದಿದೆ.

ಧಾರ್ಮಿಕ ಮತ್ತು ತಾತ್ವಿಕ ನೆಲೆಗಟ್ಟಿನಲ್ಲಿ ಭಾರತೀಯ ನ್ಯಾಯ ಪದ್ಧತಿ ನಿಂತಿರುವುದರಿಂದ ಇದು ದಕ್ಷಿಣಪೂರ್ವ ಏಷ್ಯಾಗಳಲ್ಲಿ ಹರಡಲು ಕಾರಣವಾಯಿತು. ದಕ್ಷಿಣಪೂರ್ವ ಏಷ್ಯಾ ರಾಜ್ಯಗಳು ಹಿಂದೂ ಮತ್ತು ಬೌದ್ಧ ಧರ್ಮಗಳನ್ನು ಅಳವಡಿಸಿಕೊಂಡವು ಬೌದ್ಧಧರ್ಮ, ರಾಮಾಯಣ; ಸಂಸ್ಕೃತ ಭಾಷೆ ಹಾಗೂ ಪುರಾಣ ಅಲ್ಲಿ ಹರಡಿಕೊಂಡವು. ಅಲ್ಲದೆ ರಾಜತ್ವದ ಕಲ್ಪನೆ ಆ ರಾಷ್ಟ್ರಗಳಲ್ಲಿ ಪ್ರಬಲವಾಗಿ ಮೂಡಿ ಬಂದವು. ಹೀಗಾಗಿ ಈ ರೀತಿ ಅಳವಡಿಸಿಕೊಂಡ ಕಾರಣ ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳ ನ್ಯಾಯ ಪದ್ಧತಿಗಳಲ್ಲಿ “ಧರ್ಮ” ಕೇಂದ್ರ ಸ್ಥಾನವನ್ನು ಪಡೆಯಿತು. ಬರ್ಮಾ, ಥಾಯ್ಲೆಂಡ್, ಕಾಂಬೋಡಿಯಾ, ಜಾವಾ, ರಾಷ್ಟ್ರಗಳು ಅಳವಡಿಸಿಕೊಂಡವು ಬುದ್ಧನಿಂದ ಪ್ರೇರಿತವಾದ ಮಾನವ ಧರ್ಮಶಾಸ್ತ್ರ ಈ ಎಲ್ಲ ರಾಷ್ಟ್ರಗಳಲ್ಲಿ ಪ್ರಬಲವಾಗಿ ಪ್ರಭಾವ ಬೀರಿತು. ಇದರಿಂದ ಜಪಾನ್ ರಾಷ್ಟ್ರ ಕೂಡ ಹಿಂದಾಗಿಲ್ಲ. ಆದರೆ ಭಾರತದಲ್ಲಿ ಮಾನ್ಯ ಮಾಡುವಂತೆ ಸಂಪ್ರದಾಯಗಳನ್ನು ಈ ರಾಷ್ಟ್ರಗಳಲ್ಲಿ ಕಾನೂನುಗಳೆಂದು ಪರಿಗಣಿಸುವುದಿಲ್ಲ.

ಈ ಎಲ್ಲ ರಾಷ್ಟ್ರಗಳು ಸ್ವಲ್ಪ ವ್ಯತ್ಯಾಸದೊಂದಿಗೆ ಭಾರತದ ನ್ಯಾಯಪದ್ಧತಿಗಳನ್ನು ಅಳವಡಿಸಿಕೂಂಡಿವೆ. ಅದಕ್ಕೆ ಮೂಲ ಪ್ರೇರಣೆಯೆಂದರೆ ಭಾರತದ ನ್ಯಾಯ ಪದ್ಧತಿಯಲ್ಲಿರುವ “ಧರ್ಮ”ವೇ ಆಗಿದೆ.

ಚೀನಾದಲ್ಲಿ
ಚೀನಾದ ಪ್ರಾರಂಭಿಕ ಹಂತದಲ್ಲಿ ಕಾನೂನು (“ಫ”) ಧಾರ್ಮಿಕ ನಂಬಿಕೆಗಳಿಂದ ಮುಕ್ತವಾಗಿತ್ತು. ಅಪರಾಧ ಮಂಜೂರಾತಿ (“ಫಿಂಗ್”)ಗಳು ಆರಂಭದಲ್ಲಿ ಸಮಾಜದ ಕೆಳವರ್ಗಗಳಿಗೆ ಅನ್ವಯಿಸಲಾಗುತ್ತಿತ್ತು. ಮೇಲ್ವರ್ಗದವರು ಸಾಮಾಜಿಕ ಆಚಾರಗಳು ಮತ್ತು ನೀತಿಶಾಸ್ತ್ರಗಳಿಗೆ (“ಲಿ”) ಒಳಪಟ್ಟಿದ್ದರು. ಕಾನೂನನ್ನು ನ್ಯಾಯಕರ್ತರಿಂದ ತೆಗೆದುಕೊಂಡಿದ್ದರೆ, ಸಾಮಾಜಿಕ ಆಚಾರ ಮತ್ತು ನೀತಿ ಶಾಸ್ತ್ರಗಳನ್ನು ಕನ್‌ಫ್ಯೂಶಿಯಸ್ ರಿಂದ ತೆಗೆದುಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.

ಅಪರಾಧ ಕಾನೂನು ಕ್ರಿಸ್ತ ಪೂರ್ವ ೧೦ನೇ ಶತಮಾನದಲ್ಲಿದ್ದಿತು ಎಂದು ಚೀನಾ ಗ್ರಂಥಗಳಿಂದ ತಿಳಿದು ಬರುತ್ತದೆ. ರಾಜ ಅಪರಾಧವನ್ನು ತೀರ್ಮಾನಿಸುತ್ತಿದ್ದನು. ಕಾನೂನುಗಳು ಶಾಶ್ವತವಾಗಿರಲೆಂದು ಅವುಗಳನ್ನು ಕಂಚಿನ ಹಲಗೆಗಳ ಮೇಲೆ ಕೊರೆಯುತ್ತಿದ್ದರು. ಕಾನೂನುಗಳನ್ನು ವಿವರವಾಗಿ ಮೊದಲಿಗೆ ಕಾಯಿದೆ ಮಾಡಿದ್ದು ಕ್ರಿ. ಪೂ. ೫ನೇ ಶತಮಾನದಲ್ಲಿ. ಕ್ರಿ. ಪೂ. ೪ ಮತ್ತು ೩ನೇ ಶತಮಾನಗಳಲ್ಲಿ ಕಾನೂನು ಶಾಖೆಯವರು ಸಮರ್ಥ ವ್ಯಾಖ್ಯಾನಗಳೊಂದಿಗೆ ಸರ್ವರಿಗೂ ಅನ್ವಯಿಸುವ ಕಾನೂನುಗಳನ್ನು ರಚಿಸಿದರು. ಇವುಗಳ ಗುರಿ ರಾಜ್ಯದ ಅಧಿಕಾರವನ್ನು ಬಲಪಡಿಸುಪುದು, ಸುವ್ಯವಸ್ಥೆ ಕಾಪಾಡುವುದು ಹಾಗೂ ಶಿಸ್ತಿನ ಸಮಾಜವನ್ನು ನೆಲೆಗೊಳಿಸುವುದು ಆಗಿತ್ತು.

ಕಾಲಕ್ರಮೇಣ ಕಾನೂನು, ಸಾಮಾಜಿಕ ಅಚಾರ ಹಾಗೂ ನೀತಿಶಾಸ್ತ್ರಗಳಿಗೆ ಇದ್ದ ವ್ಯತ್ಯಾಸಗಳು ಇಲ್ಲವಾದುವು. ಅನಂತರ ಮೂಡಿಬಂದ ಚೀನಾ ದೇಶದ ಕಾನೂನು ಮತ್ತು ಧರ್ಮಶಾಸ್ತ್ರಗಳನ್ನು ಜಪಾನ್ ಕ್ರಿ. ಶ. ೮೦೦ರ ಆರಂಭದಲ್ಲಿ ಅಳವಡಿಸಿಕೊಂಡಿತು. ದಂಡಸಂಹಿತೆ ಪೂರ್ಣವಾಗಿ ಸಾಮಾಜಿಕ ಆಚಾರಗಳು ಮತ್ತು ನೀತಿಶಾಸ್ತ್ರಗಳ ಹಿನ್ನೆಲೆಯಲ್ಲಿ ವ್ಯಾಪಿಸಿರುವಂಥವು. ಇದು ಪಾರಂಪರ್ಯವಾಗಿ ಬಂದಿದ್ದ ವರ್ಗಭೇದಗಳನ್ನು ತೊಡೆದು ಹಾಕಿ ಅಪರಾಧಕ್ಕೆ ಶಿಕ್ಷೆಯನ್ನು ನೀಡುವ ವ್ಯಾಖ್ಯಾನ ನೀಡಿತು. ಅಪರಾಧಗಳಲ್ಲಿ ಉಚ್ಛ-ನೀಚ, ತಂದೆ-ಮಕ್ಕಳು, ಗಂಡ-ಹೆಂಡತಿ ಎಂಬ ಭೇದ ಭಾವವಿಲ್ಲದೆ ನಿರ್ಣಾಯಕ ಸ್ಥಿತಿ ನೆಲೆಗೊಂಡಿತು. ಈ ಸಾಮಾಜಿಕ ಆಚಾರಗಳು ಮತ್ತು ನೀತಿ ಶಾಸ್ತ್ರದ ಪರಿಣಾಮವಾಗಿ ಮತಪದ್ಧತಿಗಳು, ಧಾರ್ಮಿಕ ಹಬ್ಬ ಆಚರಣೆಗಳು, ವಿವಿಧ ಸ್ತರದ ಜೀವನ ಕ್ರಮಗಳು ನಿಯಂತ್ರಣಕ್ಕೆ ಒಳಪಟ್ಟವು.

ಚೀನಾದಲ್ಲಿ ಕಾನೂನು ತನ್ನ ಬೆಳವಣಿಗೆಯಲ್ಲಿ ಮೂಲಭೂತ ಆಂಶಗಳನ್ನು ಸಾಮಾಜಿಕ ಆಚಾರ ಹಾಗೂ ನೀತಿಶಾಸ್ತ್ರಗಳಿಂದ ಪಡೆದುಕೊಂಡಿರುವುದು ಅಷ್ಟೇ ಅಲ್ಲ,  ಮನುಷ್ಯ ಮತ್ತು ವಿಶ್ವಕ್ಕೆ ಸಂಬಂಧಪಟ್ಟಂತೆ ಧರ್ಮಗಳಲ್ಲಿ ಬಿಂಬಿತವಾಗಿರುವ ಧಾರ್ಮಿಕ ನಂಬಿಕೆಗಳನ್ನು ಪ್ರತಿಫಲಿಸಿದೆ. ೩ ಮತ್ತು ೪ನೇ ಶತಮಾನಗಳಿಲ್ಲಿ ಇದ್ದ ಕಾನೂನಿನ ಕಾಠಿಣ್ಯತೆಗೆ ಕಾರಣ ಅಪರಾಧಗಳಿಗೆ ಶಿಕ್ಷೆ ವಿಧಿಸುವ ಮೂಲಕ ಸಮತ್ವವನ್ನು ಕಾಪಾಡಬೇಕೆಂಬುದು. ಈ ಅಂಶ ೯ನೇ ಶತಮಾನದ ಆರಂಭದ ಗ್ರಂಥಗಳಲ್ಲಿ ಕಂಡುಬರುತ್ತದೆ. ಆದರೆ ಆ ವಿಧಿಗಳು ದೇವರು ಅಥವಾ ರಾಜನಿಂದ ವಿಧಿಸಲ್ಪಡುತ್ತಿದ್ದವು. ಅನಂತರ ಬಂದ ಬೆಳವಣಿಗೆಯಲ್ಲಿ ಕಾನೂನನ್ನು ಹಾಗೂ ಸಾಮಾಜಿಕ ಸಮಾನತೆಯನ್ನು ಜಾರಿಗೊಳಿಸುವ ಹೊಣೆ, ರಾಜ್ಯದ ಕಾರ್ಯ ಎಂದು ಅವನ್ನು ದೈವಶಕ್ತಿಯಿಂದ ಬೇರ್ಪಡಿಸಲಾಯಿತು.

ಚೈನಾದ ಕಾನೂನು ರೂಪ ಪಡೆಯುವ ಆರಂಭದ ಶತಮಾನಗಳಲ್ಲಿ ಅನೇಕ ಧಾರ್ಮಿಕ ನಂಬಿಕೆ ಹಾಗೂ ತಾತ್ವಿಕ ಸಂಸ್ಥೆಗಳು ಇದ್ದುವು. ಆದರೆ ಯಾವುದೇ ಸಾಂಫಿಕ ಚರ್ಚುಗಳು, ಧರ್ಮಗಳು ರಾಜ್ಯದಿಂದ ಹೊರತಾಗಿರಲಿಲ್ಲ. ಆದರೆ ಈ ಸಾಂಘಿಕ ಧರ್ಮಗಳ ಹಾಗೂ ರಾಜ್ಯದ ಕಾನೂನಿನ ನಡುವೆ ಮೊದಲ ಸಂಘರ್ಷ ಪ್ರಾರಂಭವಾದದ್ದು ೧ ಮತ್ತು ೨ನೇ ಶತಮಾನಗಳಲ್ಲಿ. ೨ನೇ ಶತಮಾನದ ಅಂತ್ಯಭಾಗದಲ್ಲಿ ಉದ್ಧಾರಕನು ಅವತರಿಸುವನೆಂಬ ಚಳವಳಿ ಹ್ಯಾನ್ ಸಾಮ್ರಾಜ್ಯವನ್ನು ಅಲುಗಿಸಿತು. ಟಾವೊ ಮತದ ನಂಬಿಕೆಯ ಮೇಲೆ ಟಾಯ್‌ಪಿಂಗ್ ಧಾರ್ಮಿಕ ಸಂಸ್ಥೆಯ ಉದಯವಾಯಿತು. ಈ ಒಳಪಂಗಡಗಳು ಪ್ರಾಂತಸಭೆಗಳಾಗಿ ಹಾಗೂ ಸ್ಥಳೀಯ ಗುಂಪುಗಳಾಗಿ ರೂಪುಗೊಂಡು, ಅದಕ್ಕಾಗಿಯೆ ತರಬೇತಿ ಪಡೆದ ಕುಲಾಧಿಪತಿಗಳಿಂದ ಮುನ್ನಡೆಸಲ್ಪಟ್ಟವು. ಇದರಿಂದ ಅನೇಕ ವ್ಯವಸ್ಥಿತವಾದ ಶಕ್ತಿಯುತ  ಪಂಗಡಗಳು ಹುಟ್ಟಿಕೊಂಡವು.

ಒಂದನೆ ಶತಮಾನಕ್ಕೆ ಸ್ವಲ್ಪ ಮುಂಚೆ ಬೌದ್ಧಧರ್ಮ ಭಾರತದಿಂದ ಮಧ್ಯ ಏಷ್ಯಾದ ಮೂಲಕ ಚೈನಾವನ್ನು ಪ್ರವೇಶಿಸಿತು. ಆರಂಭದಲ್ಲಿ ಮೇಲ್ವರ್ಗದವರ ಮೇಲೆ ಪ್ರಭಾವ ಹೊಂದಿದ್ದ ಬೌದ್ಧ ಧರ್ಮವು, ಹೊಸ ಆಂಶಗಳನ್ನು ಪರಿಚಯಿಸಿತು. ಅವು ರಾಜ್ಯ ಆಸಕ್ತಿಯೊಂದಿಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾದುವು. ಇದರಲ್ಲಿ ಮುಖ್ಯವಾದದು ಸನ್ಯಾಸತ್ವ. ಬೌದ್ಧರಿಗೆ ಸಂಘ ಒಂದು ಸ್ವತಂತ್ರ ಸಂಸ್ಥೆ ಹಾಗೂ ಬ್ರಹ್ಮಚರ್ಯದ ಧಾರ್ಮಿಕ ಪಾಲಿಕೆಯಾಗಿತ್ತು. ಪ್ರತಿಯೊಂದು ಸನ್ಯಾಸಿ ಸಂಘವು   ತನ್ನದೇ ಆದ ಆಡಳಿತವನ್ನು, ಸ್ಥಾನವನ್ನು ಹೊಂದಿತ್ತು. ಅದು ಆಸ್ತಿಯನ್ನು, ಅನುಯಾಯಿಗಳನ್ನು ಹೊಂದಿತ್ತು. ಇಂತಹ ನಿರಂತರ ಪಾಲಿಕೆಗಳ ದೃಷ್ಟಾಂತ ಚೀನಾ ಕಾನೂನಿನಲ್ಲಿಲ್ಲ.

ರಾಜ್ಯ ಮತ್ತು ಕುಟುಂಬವನ್ನೊಳಗೊಂಡಂತೆ ಲೌಕಿಕ ಸಮಾಜದೊಂದಿಗೆ ಬೌದ್ಧ ಸನ್ಯಾಸಿ ಎಲ್ಲ ಸಂಬಂದವನ್ನು ಕಡಿಡುಕೊಳ್ಳಬೇಕಾಗಿತ್ತು. ಸ್ವತಂತ್ರ ಅಸ್ತಿತ್ವವನ್ನು ಪಡೆದುಕೊಂಡಿದ್ದ ಈ ಬೌದ್ಧ ಧರ್ಮವನ್ನು ತನ್ನ ಹಿಡಿತಕ್ಕೆ ತಂದುಕೊಳ್ಳುವ ಕ್ರಮವನ್ನು ರಾಜ್ಯ ಅನೇಕ ವೇಳೆ ಜರುಗಿಸಿತ್ತು. ಅಲ್ಲದೆ ಅದನ್ನು ಬಹಿಷ್ಕರಿಸುವ ಕ್ರಮವನ್ನು ಕೂಡ. ಹಾಗೆ ಬಹಿಷ್ಕರಿಸಿದ್ದು ಎರಡು ಬಾರಿ. ಮೊದಲು ಕ್ರಿ. ಶ. ೫೭೪ ರಿಂದ ೫೭೭ ಹಾಗೂ ನಂತರ ಕ್ರಿ. ಶ. ೮೪೩ ರಿಂದ ೮೪೫ ರವರೆಗೆ. ಈ ಎರಡು ಸಂದರ್ಭಗಳಲ್ಲಿ ಹೆಚ್ಚಿನ ಬೌದ್ಧ ಭಿಕ್ಷುಗಳು ಸಾಮಾನ್ಯ ಜೀವನಕ್ಕೆ ಹಿಂದುರಿಗಿದರು. ಸಾವಿರಾರು ಬೌದ್ಧ ಚೈತ್ಯಾಲಯಗಳನ್ನು ನೆಲಸಮಗೊಳಿಸಲಾಯಿತು. ಅನಂತರ ತಕ್ಷಣ ಪುನರ್ ಸ್ಥಾಪಿಸಲಾಯಿತು. ಬೌದ್ಧಧರ್ಮ ಮೊದಲಿಗಿಂತಲೂ ಪ್ರಬಲವಾಗಿ ಬೇರೂರಿತು.

ಕಾಲಕಳೆದಂತೆ ರಾಜ್ಯ ಮತ್ತು ಬೌದ್ಧ ಸಂಘಗಳ ನಡುವೆ ಸಂಘರ್ಷ ಉಂಟಾದ ಕಡೆಗಳಲ್ಲಿ ಶಾಸನಬದ್ಧ ಕಾನೂನುಗಳನ್ನು ಜಾರಿಗೆ ತರಲಾಯಿತು. ೧೮ ನೇ ಶತಮಾನದ ಪ್ರಾರಂಭದಲ್ಲಿ ಬೌದ್ಧರಿಗೆ ವಿಶೇಷವಾದ ‘ಟಾವೊ-ಸಿಂಗ್ ಕೊ’ ಕಾನೂನುಗಳನ್ನು ಜಾರಿಗೊಳಿಸಲಾಯ್ತು. ಧಾರ್ಮಿಕ ಶಿಸ್ತನ್ನು ಅಳವಡಿಸುವಲ್ಲಿ, ತಪ್ಪಿತಸ್ಥರಿಗೆ ವಿಧಿಸುವ ಶಿಕ್ಷೆಗಳನ್ನು, ಸಂಘದ ಕಾರ್ಯವ್ಯಾಪ್ತಿಯನ್ನು ಇದರಲ್ಲಿ ನಿರ್ದೇಶಿಸಲಾಯ್ತು. ಸನ್ಯಾಸಿ ಮತ್ತು ಸನ್ಯಾಸಿನಿಯರ ಖಾಸಗಿ ಆಸ್ತಿಗಳನ್ನು, ರಾಜ್ಯದೊಂದಿಗೆ ಅವರ ಹಾಗೂ ಅವರ ಮಠಗಳ ಸಂಬಂಧ ಹೇಗಿರಬೇಕೆಂಬುದನ್ನು ವಿಧಿಗಳಲ್ಲಿ ನಮೂದಿಸಲಾಯಿತು.

‘ಟಿಯಾಂಗ್’ ಕಾನೂನನ್ನು ಇಡಿಯಾಗಿ ಅಳವಡಿಸಿಕೊಂಡ ಜಪಾನಿನಲ್ಲಿ-ಅಂದರೆ ಎಲ್ಲಿ ಮಠಗಳು ಹೆಚ್ಚು ಪ್ರಾಬಲ್ಯ ಹೊಂದಿದ್ದವೋ ಅಲ್ಲಿ-ಬೌದ್ಧ ಸನ್ಯಾಸಿಗಳು ಶಿಸ್ತಿನ ಉಲ್ಲಂಘನೆ ಮಾಡಿದರೆ, ವಿಧಿಸಬೇಕಾದ ದಂಡನೆಗಳನ್ನು ಶಾಸನದಲ್ಲಿ ಮುಖ್ಯ ಅಂಗವಾಗಿ ಅಳವಡಿಸಲಾಯಿತು. ಚೈನಾ ದೇಶದಲ್ಲಿ ಸನ್ಯಾಸಿಗಳ ಪ್ರತ್ಯೇಕ ಪಟ್ಟಿಯನ್ನಿಡುವ ಹಾಗೂ ಸನ್ಯಾಸಿ ಮತ್ತು ಸನ್ಯಾಸಿನಿಯರ ಧರ್ಮಾಧಿಕಾರಿ ದೀಕ್ಷೆ ಕೊಡುವುದನ್ನು ಹಿಡಿತಕ್ಕೆ ತಂದುಕೊಳ್ಳುವ ಪರಿ ೮ನೇ ಶತಮಾನದಲ್ಲಿ ಪ್ರಾರಂಭವಾಯ್ತು. ಹೊಸ ದೇವಸ್ಥಾನ ಕಟ್ಟುವುದಕ್ಕೆ ರಾಜ್ಯದಿಂದ ಅನುಮತಿ ಪಡೆದುಕೊಳ್ಳಬೇಕೆಂದು ವಿಧಿಸಲಾಯಿತು. ಜೊತೆಗೆ ಭಾರತದಲ್ಲಿ ಆಚರಣೆಯಲ್ಲಿದ್ದ ಬಹುಮುಖ್ಯ ಗುಣಗಳಲ್ಲಿ ಒಂದಾದ “ವಿನಯ”ವನ್ನು ಚೈನಾ ದೇಶದಲ್ಲಿ ಬೌದ್ಧ ಬಿಕ್ಕುಗಳು ತಮ್ಮ ದಿನಚರಿಯ ನಡವಳಿಕೆಗಳಲ್ಲಿ ಅಳವಡಿಸಿಕೊಳ್ಳಬೇಕಾಗಿತ್ತು. ಇದನ್ನು ಜಾರಿಗೆ ತರುತ್ತಿದ್ದುದು ರಾಜ್ಯವಲ್ಲ, ಬೌದ್ಧ ಸಂಘಗಳು.

ಬೌದ್ಧ ಸನ್ಯಾಸಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ ರಾಜ್ಯ ಕಾಲಕಾಲಕ್ಕೆ ಅಗತ್ಯವೆನಿಸಿದ ಕ್ರಮ ಕೈಗೊಂಡು ಅಧಿಕಾರಿಗಳನ್ನು ನೇಮಿಸುತ್ತಿತ್ತು. ಬೌದ್ಧ ಧರ್ಮ ಹೊರದೇಶದಿಂದ ಬಂದ ಧರ್ಮವಾದ್ದರಿಂದ, ‘ಟಿಯುಂಗ್’ ಕಾಲದಲ್ಲಿ ಅದನ್ನು ನೋಡಿಕೊಳ್ಳಲು ಪ್ರತ್ಯೇಕ ವಿದೇಶಾಂಗ ಸಚಿವಾಲಯವನ್ನೇ ತೆರೆಯಲಾಗಿತ್ತು. ಯಾವುದೇ ಕಾಲದಲ್ಲಿ ಚೈನಾ ಸರ್ಕಾರ ಬೌದ್ಧ ಧರ್ಮದ ಮೇಲೆ ತನ್ನ ಹಿಡಿತವನ್ನು ಪೂರ್ಣವಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗೆಯೇ ಬೌದ್ಧ ಸನ್ಯಾಸಿಗಳಾಗಲೀ ಅಥವಾ ಟೋಯಿಸ್ಟ್ ಪಾದ್ರಿಗಳಾಗಲೀ ರಾಜ್ಯ ನಿಯಂತ್ರಣದಿಂದ ತಪ್ಪಿಸಿಕೊಂಡು ಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲು ಆಗಿಲ್ಲ.

ಪಶ್ಚಿಮ ದೇಶಗಳಲ್ಲಿ
ಕಾನೂನು ಮತ್ತು ಧರ್ಮಗಳ ಆಂತರಿಕ ಸಂಬಂಧಗಳು ತನ್ನ ಬೆಳವಣಿಗೆಯ ಹಂತದಲ್ಲಿ ಚರ್ಚುಗಳ ಪ್ರಭಾವಕ್ಕೆ ಒಳಗಾಗಿವೆ. ಅಲ್ಲದೆ ಮನುಷ್ಯನ -ಅಗತ್ಯಗಳನ್ನು ಪೂರೈಸುವ ಸಲುವಾಗಿ ಕಾನೂನಿನ ನಿಯಮಗಳಿಗೆ ಹೊಸ ರೂಪ ಕೊಡುವಲ್ಲಿ, ಹೊಸ ಚಿಂತನೆ ಒದಗಿಸುವಲ್ಲಿ ಹಾಗೂ ಕಾರ್ಯ ವಿಧಾನಗಳನ್ನು ರೂಪಿಸುವಲ್ಲಿ ಅನೇಕ ಸವಾಲುಗಳನ್ನು ಎದುರಿಸಿವೆ. ಲೌಕಿಕ ಸಾರ್ಥಕತೆಯ ದೃಷ್ಟಿಯನ್ನೊಳಗೊಂಡ ಕ್ರೈಸ್ತ ಧರ್ಮದ ಹಿನ್ನೆಲೆಯಲ್ಲಿ, ಇದು ಕಳೆದ ೨ ಶತಮಾನಗಳಲ್ಲಿ ವ್ಯಾಪಕವಾಗಿ ಆಗಿದೆ.

ಆಗಲೇ ಸ್ಥಾಪನೆಗೊಂಡಿರುವ ಧಾರ್ಮಿಕ ಮತ್ತು ಲೌಕಿಕ ಹಾಗೂ ಚರ್ಚು ಮತ್ತು ರಾಜ್ಯ ಸಂಸ್ಥೆಗಳಲ್ಲಿ, ಮಾನವನ ಮಹತ್ವಾಕಾಂಕ್ಷೆಗಳು ನೆಲೆಗೊಂಡಿವೆ. ಕಾನೂನಿಗೆ ಒಂದು ಪಾವಿತ್ರ್ಯ ಹಾಗೂ ಸ್ವತಂತ್ರ ಅಸ್ತಿತ್ವವನ್ನು ಕೊಡುವುದರ ಮೂಲಕ, ಅಂತಿಮ ಗುರಿಮುಟ್ಟುವ ಉದ್ದೇಶದಿಂದ, ಪರಸ್ಪರ ಸಹಕಾರದ ಹಿನ್ನೆಲೆಯಲ್ಲಿ ಈ ಸಂಸ್ಥೆಗಳನ್ನು ರೂಪಿಸಿಕೊಳ್ಳಲಾಗಿದೆ. ಇದಕ್ಕೆ ಬೈಬಲ್ಲಿನ ಬೆಂಬಲವೂ ಇದೆ. ಕಾನೂನನ್ನು ಪಾಲಿಸಬೇಕೆಂದು ಪಾಲ್ ಕ್ರಿಶ್ಚಿಯನ್ನರಿಗೆ ನಿರ್ಬಂಧ ಹೇರಲು ಕಾರಣ “ಕಾನೂನುಗಳು ದೇವರಿಂದ ವಿಧಿಸಲ್ಪಟ್ಟಿವೆ; ದೇವರನ್ನುಳಿದು ಬೇರೆ ಪ್ರಭುವಿಲ್ಲ” ಎನ್ನುವುದೆ ಆಗಿದೆ.

ಆರಂಭದ ಕ್ರೈಸ್ತ ಧರ್ಮ
ಕಾನೂನಿನ ಬಗ್ಗೆ ಕ್ರೈಸ್ತ ಧರ್ಮ ಹೊಂದಿದ್ದ ಮಹತ್ವಾಕಾಂಕ್ಷೆ ರೋಮ್ ಚಕ್ರಾಧಿಪತ್ಯ ಕ್ರೈಸ್ತ ಪೂಜೆಯನ್ನು ನಿರ್ಬಂಧಿಸಿದಾಗ ಉಗ್ರ ಪರೀಕ್ಷೆಗೆ ಒಳಗಾಯಿತು. ಅಸಹಕಾರ ಚಳುವಳಿ ಕ್ರೈಸ್ತ ನ್ಯಾಯಶಾಸ್ತ್ರದ ಮೊದಲ ನಿಯಮವಾಯಿತು. ಚರ್ಚಿನ ಹೆಸರಿನಲ್ಲಿ ಕ್ರೈಸ್ತ ರಾಜರು ಆಗಾಗ್ಗೆ ತಂದ ಕಾನೂನುಗಳನ್ನು ಎದುರಿಸಲು ಹಾಗೂ ಕ್ರಿಶ್ಚಿಯನ್ನರಲ್ಲಿ ಸಂಘರ್ಷವನ್ನುಂಟು ಮಾಡಲು ಇದು ಪ್ರೇರಣೆಯಾಯ್ತು. ದೇವರ ಇಚ್ಛೆಗೆ ವಿರುದ್ಧವಾದ ಕಾನೂನುಗಳನ್ನು ವಿರೋಧಿಸುವುದು ಹಕ್ಕು ಹಾಗೂ ಕರ್ತವ್ಯ ಎಂಬ ಪ್ರತಿರೋಧ ಪ್ರಾರಂಭವಾಯ್ತು. ಹೀಗಾಗಿ ೧೨ನೇ ಶತಮಾನದ ಪಶ್ಚಿಮ ಯೂರೋಪಿನಲ್ಲಿ ಮೊಟ್ಟ ಮೊದಲಿಗೆ ಪ್ರಜಾಪೀಡಕರ ಕರ್ತವ್ಯ ಮತ್ತು ಹಕ್ಕುಗಳನ್ನು ಜಾನ್ ಭೇದಿಸಿದರೆ, ೧೬ನೇ ಶತಮಾನದಲ್ಲಿ ಪ್ರಜಾಪೀಡಕರ ದಬ್ಬಾಳಿಕೆಯನ್ನು ಕಿತ್ತೊಗೆಯುವ ಕರ್ತವ್ಯವನ್ನು ಸಮುದಾಯದ ನಾಯಕರಿಗೆ ಜಾನ್ ಕಾಲ್ವಿನ್ ಬೋಧಿಸಿದ.

ರೋಮ್ ಚಕ್ರಾಧಿಪತಿಗಳು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಕಾರಣ, ಅಸ್ತಿತ್ವದಲ್ಲಿದ್ದ ಕಾನೂನಿನ ವ್ಯಾಪ್ತಿಯೊಳಗೆ ಚರ್ಚುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದವು. ಆಗ ರಾಜರು ಮಾನವೀಯ ದೃಷ್ಟಿಯಿಂದ ಕಾನೂನುಗಳನ್ನು ಪುನರ್ ಪರಿಶೀಲಿಸಲು ಘೋಷಿಸಿದರು. ಇತರ ಸುಧಾರಣೆಗಳೊಂದಿಗೆ ಹೆಂಡತಿ ಮಕ್ಕಳಿಗೆ ಹಾಗೂ ಗುಲಾಮರಿಗೆ ಹೆಚ್ಚಿನ ಹಕ್ಕು ನೀಡಲಾಯ್ತು. ಹೀಗಾಗಿ ಕ್ರೈಸ್ತ ಧರ್ಮ ಹೆಚ್ಚು ಮಾನವೀಯಗೊಳ್ಳುವ ದಿಕ್ಕಿನಲ್ಲಿ ಕ್ರಮಿಸಲು ಪ್ರಾರಂಭಿಸಿತು.

ಮಧ್ಯಯುಗದಲ್ಲಿ ಸ್ಕಾಟ್, ಐರಿಷ್, ವೆಲ್ಸ್, ಕಾರ್ನಿಷ್ ಮತ್ತು ಜರ್ಮನ್ ಹಾಗೂ ಪಶ್ಚಿಮ ಯೂರೋಪಿನ ಇತರ ಜನರಲ್ಲಿ, ೧೧ನೇ ಶತಮಾನದ ಅಂತ್ಯದ ಮುಂಚೆ ಆಧುನಿಕ ಅರ್ಥದ ಸ್ವಾಯತ್ತ ಕಾನೂನು ವ್ಯವಸ್ಥೆ ಇರಲಿಲ್ಲ. ವೃತ್ತಿನಿರತ ನ್ಯಾಯವಾದಿಗಳಾಗಲಿ ನ್ಯಾಯಾಧೀಶರಾಗಲಿ, ಕಾನೂನು ಗ್ರಂಥಗಳಾಗಲೀ, ಕಾನೂನು ಬೋಧಿಸುವ ಸಂಸ್ಥೆಗಳಾಗಲಿ ಇರಲಿಲ್ಲ. ಬಹುತೇಕ ಕಡೆಗಳಲ್ಲಿ ಕಾನೂನು ಸಂಪ್ರದಾಯದೊಂದಿಗೆ ಒಂದಾಗಿತ್ತು. ಬುಡಕಟ್ಟಿನ ನಾಯಕರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ ಬುಡಕಟ್ಟು ಕಾನೂನುಗಳನ್ನು ಸಂಗ್ರಹಿಸಿ ಜಾರಿಗೆ ತಂದರು. ಅವು ಸಾಂಸಾರಿಕ ಸಂಬಂಧಗಳು, ಗುಲಾಮಗಿರಿ, ತುಳಿತಕ್ಕೊಳಗಾದವರ, ಬಡವರ ರಕ್ಷಣೆ ಹಾಗೂ ಚರ್ಚಿನ ಆಸ್ತಿಯ ಹಕ್ಕುಗಳನ್ನು ಕಾಪಾಡುವುದಕ್ಕೆ ಸಂಬಂಧ ಪಟ್ಟಿದ್ದವು. ಉದಾಹರಣೆಗೆ ಆಲ್‌ಫ್ರೆಡ್‌ನ ಕಾನೂನುಗಳು “ಟೆನ್‌ಕಮಾಂಡ್ ಮೆಂಟ್‌ನ” ಹಾಗೂ “ಮೋಸಸ್”ನ ಕಾನೂನುಗಳ ಉಚ್ಚಾರಣೆಯಿಂದ ಪ್ರಾರಂಭವಾಗುತ್ತವೆ. ಸ್ಥಳೀಯ ಆಂಗ್ಲೋ ಸ್ಯಾಕ್ಸನ್ ಸಂಪ್ರದಾಯಗಳನ್ನು ಪುನರುಚ್ಚರಿಸಲು ಹಾಗೂ ಪರಿಷ್ಕರಿಸಲು ಆಲ್‌ಫ್ರೆಡ್ “ಸಮಾನವಾಗಿ ಪರೀಕ್ಷಿಸಿ; ಬಡವನಿಗೆ ಒಂದು ರೀತಿ, ಶ್ರೀಮಂತನಿಗೆ ಒಂದು ರೀತಿ ಪರೀಕ್ಷಿಸಬೇಡಿ; ಸ್ನೇಹಿತನಿಗೆ ಒಂದು ರೀತಿ, ಶಶ್ರುವಿಗೆ ಒಂದು ರೀತಿ ಪರೀಕ್ಷಿಸಬೇಡಿ” ಎಂಬ ಮಹತ್ವದ ನಿಯಮಗಳನ್ನು ಪ್ರಕಟಿಸಿದ. ಈ ಕಾಲದಲ್ಲಿ ಪಶ್ಚಿಮದಲ್ಲಿ ಸನ್ಯಾಸಿ ಮಠಗಳು ದೇವರ ಇಚ್ಛೆಗೆ ವಿರುದ್ಧದ ಅಪರಾಧಗಳಿಗೆ ವಿಸ್ತೃತವಾದ ಶಿಕ್ಷೆಗಳನ್ನು ವಿಧಿಸಿದರು. ಈ ಅಪರಾಧ ಶಿಕ್ಷೆಗಳ ವಿವರಣೆಗಳನ್ನೊಳಗೊಂಡ ಗ್ರಂಥಗಳು ಸಮಕಾಲೀನ ಬುಡಕಟ್ಟು ನ್ಯಾಯದ ಒಂದು ಪ್ರಮುಖ ಅಂಗವೆಂದು ವ್ಯಾಖ್ಯಾನಿಸಲಾಗಿದೆ.

ಹಿಂಸೆಯನ್ನು ನಿಯಂತ್ರಿಸಿ ರಕ್ತಪಾತವನ್ನು ತಹಬಂದಿಗೆ ತರಲು ಚಕ್ರಾಧಿಪತಿಗಳಿಗೆ, ರಾಜರುಗಳಿಗೆ, ಒಡೆಯರಿಗೆ ಅಧೀನವಾಗಿದ್ದ ಮಧ್ಯಕಾಲೀನ ಚರ್ಚುಗಳು ನಿಯಮಗಳನ್ನು ರೂಪಿಸಿದವು. ಪಶ್ಚಿಮ ಯುರೋಪಿನಲ್ಲಿ ೧೦೫೦ರಲ್ಲಿ ಆಂದೋಲನವನ್ನು ಆರಂಭಿಸಲಾಯ್ತು. ಅದರ ಉದ್ದೇಶ ರೋಮ್‌ನ ಚರ್ಚುಗಳನ್ನು ಅರಸರು ಮತ್ತು ಬಿರುದಾಂಕಿತ ವ್ಯಕ್ತಿಗಳಿಂದ ಬದಲಿಸಿ, ಪೋಪರ ಕೈಕೆಳಗೆ ಕಾನೂನಿನ ಅಸ್ತಿತ್ವವನ್ನೊಳಗೊಂಡ ಒಂದು ಸ್ವತಂತ್ರ ಸಂಸ್ಥೆಯನ್ನಾಗಿ ಮಾಡುವುದಾಗಿತ್ತು. ಅಧ್ಯಾತ್ಮಿಕ ವಲಯವನ್ನು ಪ್ರತ್ಯೇಕಿಸಲು ಹಾಗೂ ವಿಸ್ತರಿಸಲು ಚರ್ಚಿನಲ್ಲಿ ಹೊಸ ಕಾನೂನುಗಳ ಅಗತ್ಯ ಕಂಡು ಬಂತು. ಅದರ ಪರಿಣಾಮವಾಗಿ ವ್ಯವಸ್ಥಿತವಾದ ಹಾಗೂ ಪ್ರಗತಿಪರವಾದ ಕಾನೂನುಗಳು ರೂಪುಗೊಂಡವು. ಪೋಪರ ಹಿಡಿತಕ್ಕೆ ಒಳಪಟ್ಟ ಚರ್ಚುಗಳು ಅಸ್ತಿತ್ವಕ್ಕೆ ಬಂದುವು. ಅಲ್ಲದೆ ಚರ್ಚುಗಳ ಅಸ್ತಿತ್ವ ರಾಜಾಧಿಪತ್ಯದೊಂದಿಗೆ ಅವುಗಳ ಸಂಬಂಧ ಸ್ವತಂತ್ರವಾಗಿರಬೇಕೆಂಬುದರ ಹಾಗೂ ಅವು ಪರಸ್ಪರ ಸಹಕಾರದಿಂದ ನಡೆದುಕೊಂಡು ಹೋಗಬೇಕೆಂಬುದರ ಅವಶ್ಯಕತೆಯನ್ನು ಕಂಡುಕೊಳ್ಳಲಾಯಿತು.

ಧರ್ಮನಿರಪೇಕ್ಷ ಕಾನೂನಿನ ಉದಯ
ಮಧ್ಯಕಾಲದ ಅಂತ್ಯದಲ್ಲಿ ಬಂದ ಚಿಂತನಕಾರರು, ವಾಸ್ತವ ಹಾಗೂ ರಾಜಕೀಯ ದೃಷ್ಟಿಯಿಂದಷ್ಟೇ ಅಲ್ಲ, ನೈತಿಕ ಹಾಗೂ ಬೌದ್ಧಿಕ ಹಿನ್ನೆಲೆಯಿಂದಲೂ ಕಾನೂನು ಪದ್ಧತಿಯ ಅಗತ್ಯವನ್ನು ಮನಗಂಡರು. “ದೇವರೇ ಕಾನೂನಾಗಿದ್ದಾನೆ; ಆದ್ದರಿಂದ ಕಾನೂನು ದೇವರಿಗೆ ಪ್ರಿಯ” ಎಂದು ಜರ್ಮನಿಯ ಮೊದಲ ಕಾನೂನು ಗ್ರಂಥ ರಚನಾಕಾರ ಸುಮಾರು ಕ್ರಿ. ಶ. ೧೨೨೦ ರಲ್ಲಿ ಉದ್ಗರಿಸಿದ. “ಭೂಮಿಯ ಮೇಲೆ ದೇವರ ಸಾಮ್ರಾಜ್ಯವನ್ನು ಕಾಣುವ ಹಂಬಲಕ್ಕೆ ಕಾನೂನು ಪೂರಕವಾದುದು” ಎಂದು ರೋಮ್ ಚರ್ಚಿನ ನೇತೃತ್ವದಲ್ಲಿ ಹೊರಟ ಕ್ರಿಶ್ಚಿಯನ್ನರು ಭಾವಿಸಿದರು. ಆಧ್ಯಾತ್ಮಿಕ ಖಡ್ಗದ ಮೂಲಕ ಪ್ರಜ್ಞಾಪೂರ್ವಕವಾಗಿ ಕ್ಯಾನನ್ ಕಾನೂನುಗಳಿಗೆ ಒಂದು ಸ್ವರೂಪವನ್ನು ಕೊಡಲಾಯಿತು. ಕ್ರೈಸ್ತ ಮಠದ ಒಳಗೆ ಒಂದು ಕಾನೂನಿನ ಶಿಸ್ತನ್ನು ತರುವ ಹಿನ್ನೆಲೆಯಲ್ಲಿ ೧೨ ಮತ್ತು ೧೩ನೇ ಶತಮಾನಗಳಲ್ಲಿ ನ್ಯಾಯವಾದಿಗಳು ಹಾಗೂ ಪೋಪರು ಸೇರಿ, ಚರ್ಚಿನ ವ್ಯಾಪ್ತಿಯಲ್ಲಿ ನ್ಯಾಯಾಂಗ, ಖಜಾನೆ, ಧರ್ಮಸೂಕ್ಷ್ಮ ನ್ಯಾಯಸ್ಥಾನ, ಸಾರ್ವಜನಿಕ ಪತ್ರಾಗಾರ ಒಂದರ್ಥದಲ್ಲಿ ಸರ್ಕಾರದ ಎಲ್ಲ ಅಂಗವ್ಯೂಹಗಳನ್ನು ಒಳಗೊಂಡಂತೆ ರಚಿಸಿದರು. ಇದು ಪಶ್ಚಿಮ ದೇಶಗಳ ಮೊದಲ ಸರ್ಕಾರ ಮತ್ತು ಕಾನೂನುಗಳ ರಚನೆಗೆ ಆದಿಯಾಯ್ತು. ಅಲ್ಲದೆ ಧರ್ಮನಿರಪೇಕ್ಷ ರಾಜಕೀಯ ಯುರೋಪಿನಾದ್ಯಂತ ರೂಪ ಪಡೆಯಲು ಮೂಲ ಪ್ರೇರಣೆಯೂ ಆಯಿತು.

ಮಾನವ ನಿರ್ಮಿತ ಕಾನೂನು ನಿಸರ್ಗ ಕಾನೂನಿನಿಂದ ಬಂದುದು. ಅದು ದೇವರ ಕಾನೂನನ್ನು ಪ್ರತಿಫಲಿಸುತ್ತದೆ; ಇಚ್ಛೆ ಮತ್ತು ವಿವೇಚನೆಯ ಮೂಲಕ ಮನುಷ್ಯ ನ್ಯಾಯವನ್ನು ದೊರಕಿಸಿಕೊಳ್ಳಬಹುದು. ಆತ ಒಳ್ಳೆಯ ನಡತೆ ಮತ್ತು ನಂಬಿಕೆಯನ್ನೊಳಗೊಂಡರೆ ಮುಕ್ತಿಯನ್ನೇ ಪಡೆಯಬಹುದು, ಹಾಗಿಲ್ಲದಿದ್ದರೆ ಅವನ ಪಾಪಗಳಿಂದಾಗಿ ಅವನು ಈ ಜನ್ಮ ಹಾಗೂ ಮುಂದಿನ ಜನ್ಮದಲ್ಲಿ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ ಎಂದು ೧೬ನೇ ಶತಮಾನಕ್ಕೆ ಮುಂಚೆ ಚರ್ಚುಗಳು ಬೋಧಿಸಿದವು.

ಈ ಎಲ್ಲ ಬೋಧನೆಗಳನ್ನು ತಿರಸ್ಕರಿಸುವ ಒಂದು ಕ್ರಾಂತಿಕಾರಿ ಚಳುವಳಿ ೧೫೧೭ರಲ್ಲಿ ಮಾರ್ಟಿನ್ ಲೂಥರ್ ಪ್ರಾರಂಭಿಸಿದ. ಆತ ಹಿಂದೆ ಇದ್ದ ಇಹ ಪ್ರಪಂಚದ ಪಾಪ ಮತ್ತು ಸಾವಿನ ಸಾಮ್ರಾಜ್ಯವನ್ನು, ನಂಬಿಕೆ ಮತ್ತು ಆಶೀರ್ವಾದದ ಸ್ವರ್ಗೀಯ ಸಾಮ್ರಾಜ್ಯಕ್ಕೆ ಬದಲಾಯಿಸಿದ; ಅಲ್ಲದೆ ನೈತಿಕ ಹಾಗೂ ವ್ಯಾವಹಾರಿಕ ಕಾನೂನುಗಳು ಸೇರಿದಂತೆ ಲೌಕಿಕ ಸಾಮ್ರಾಜ್ಯದ ಎಲ್ಲ ಕಾನೂನುಗಳನ್ನೂ ಧರ್ಮದಿಂದ ಪ್ರತ್ಯೇಕಿಸಿದ. ಲೂಥರನ ದೃಷ್ಟಿಯಲ್ಲಿ ಈ ಚರ್ಚು ಎಂದರೆ, ನ್ಯಾಯ ಗುಣಗಳಿಂದ ದೂರವಾದ ಕೇವಲ ಅವ್ಯಕ್ತ ನಂಬಿಕೆಯ ಸಮೂಹವಾಗಿತ್ತು. ಆಗ ಇದ್ದ ತೊಡಕೆಂದರೆ, ಚರ್ಚುಗಳನ್ನು ಒಳಗೊಂಡಂತೆ ಶಾಸನ ಮತ್ತು ನ್ಯಾಯಾಂಗ ಶಕ್ತಿ ಧರ್ಮನಿರಪೇಕ್ಷರ ಕೈಯಲ್ಲಿ ಇತ್ತು.

ಕಾನೂನು ಮತ್ತು ರಾಜಕೀಯ ದೇವರ ಸಾಮ್ರಾಜ್ಯಕ್ಕೆ ದಾರಿಗಳಲ್ಲ; ನಂಬಿಕೆಯೊಂದೇ ಮನುಷ್ಯನನ್ನು ಸಮರ್ಥಿಸಿಕೊಳ್ಳುವಂಥದ್ದು. ಯಾರು ನಂಬಿಕೆಯನ್ನು ಹೊಂದಿರುವರೋ ಅವರು ಒಳ್ಳೆಯ ಕೆಲಸ ಮಾಡಲು ಇಚ್ಛೆ ಮತ್ತು ವಿವೇಚನೆಯನ್ನು ಬಳಸಿಕೊಳ್ಳುವರು ಎಂದು ಲೂಥರ್ ಬೋಧಿಸಿದ. ಈ ರೀತಿ ಹೇಳುವುದರ ಮೂಲಕ ಹಿಂದೆ ಕೇವಲ ಚರ್ಚುಗಳಿಗಿದ್ದ ಕ್ರೈಸ್ತ ಧರ್ಮದ ತತ್ವಗಳನ್ನು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವಂತೆ ವಿಸ್ತಿರಿಸಿದ. ಆಡಳಿತ ನಡೆಸುವ ಕ್ರೈಸ್ತ ದೊರೆ ಕಾನೂನು ಮಾಡುವಾಗ ಮುಖ್ಯವಾಗಿ ನ್ಯಾಯ ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದು ಲೂಥರನ ದೃಷ್ಟಿಯಾಗಿತ್ತು.

ಮುಖ್ಯವಾಗಿ ಲೂಥರ್ ಮಾಡಿದ್ದೆಂದರೆ, ನೈತಿಕ ಕಾನೂನುಗಳ ಮತ್ತು ವ್ಯವಹಾರಿಕ ಕಾನೂನುಗಳ ಬಳಕೆ ಕುರಿತ ಹೊಸ ವಿಶ್ಲೇಷಣೆ. ಕಾನೂನು ಎಂದರೆ ರಾಜಕೀಯ ಬಳಕೆಗಾಗಿ (ಉದಾ: ಶಿಕ್ಷೆಯ ಹಿನ್ನೆಲೆಯಲ್ಲಿ ಅವಿಧೇಯರು ತಪ್ಪು ಮಾಡದಂತೆ ತಡೆಯುವುದು); ಕಾನೂನನ್ನು “ಧರ್ಮಶಾಸ್ತ್ರ”ವನ್ನಾಗಿಯೂ ಬಳಸಬಹುದು. (ಉದಾ: ಜನರು ಅವರು ಮಾಡಬೇಕಾದ ಕರ್ತವ್ಯಗಳ ಜಾಗೃತಿಯನ್ನುಂಟು ಮಾಡುವುದು) ಎಂದು ಬರೆದ. ಈ ಹಿನ್ನೆಲೆಯಲ್ಲಿ ಲೂಥರ್ ಹಾಗೂ ಕ್ಯಾಲ್ವಿನ್‌ನ ಅನುಯಾಯಿಗಳು ಕಾನೂನನ್ನು “ಶಿಕ್ಷಣದ ಬಳಕೆ”ಯಾಗಿ ಸ್ವೀಕರಿಸಿ ಅದರ ಮೂಲಕ ಜನರನ್ನು ಶ್ರೇಷ್ಠ ಜೀವನ ನಡೆಸಲು ಅನುವಾಗುವಂತೆ ಮಾಡಿದ.

ಲೂಥರನ ಸುಧಾರಣೆಯಿಂದಾದ ಪರಿಣಾಮವೆಂದರೆ, ಕ್ರೈಸ್ತ ಮತೀಯರು ಹೊಂದಿದ್ದ ಕಾನೂನಿನ ಅಧಿಕಾರ, ಧರ್ಮನಿರಪೇಕ್ಷರ ಕೈಗೆ ಬಂದದ್ದು. ಲೂಥರ್ ಸುಧಾರಣೆಯ ಪರಿಣಾಮದ ಮತ್ತೊಂದು ಮುಖ್ಯ ಅಂಶವೆಂದರೆ, ಧರ್ಮ ನಿರಪೇಕ್ಷ ಕಾನೂನಿನಲ್ಲಿ ಮೌಲ್ಯ ಮತ್ತು ದೃಷ್ಟಿಕೋನಗಳು ತ್ವರಿತವಾಗಿ ಬದಲಾವಣೆಗೊಂಡುದು. ಇದು ಜರ್ಮನಿಯ ದಂಡಕಾಯ್ದೆಗೆ ಮಾನವೀಯ ದೃಷ್ಟಿಯನ್ನು ತಂದು ಕೊಡುವುದರ ಮೂಲಕ ಒಂದು ಸುವ್ಯವಸ್ಥೆ ನೀಡಿತು. ಶಾಸನಗಳು ಹಾಗೂ ಕಾನೂನು ಗ್ರಂಥಗಳು ತಾಯ್ನುಡಿಯಲ್ಲಿ ಪ್ರಕಟವಾದುವಲ್ಲದೆ ನ್ಯಾಯಾಂಗ ವ್ಯವಹಾರವೂ ಕೂಡ ತಾಯ್ನುಡಿಯಲ್ಲಿಯೇ ನಡೆಯುವಂತಾಯ್ತು.

ಲೂಥರ್ ಆದಮೇಲೆ ಒಂದು ಶತಮಾನದ ನಂತರ ಬಂದ ಇಂಗ್ಲೀಷ್ ಸುಧಾರಕರು, ಸ್ಟೂವರ್ಟ್‌ನ ಪ್ರಭುತ್ವವನ್ನು ಕಿತ್ತೊಗೆದು ಸಂಸತ್ತಿನ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಧರ್ಮಶಾಸ್ತ್ರದ ಸಿದ್ಧಾಂತವಮ್ನ ಹುಟ್ಟುಹಾಕಿದರು. ಕ್ಯಾಲ್ವಿನ್‌ನ ಪ್ರಭಾವದಿಂದಾಗಿ ಪ್ರಪಂಚದ ಸುಧಾರಣೆಗೋಸ್ಕರ ಕಾನೂನಿನ ಮಹತ್ವಕ್ಕೆ ಹೆಚ್ಚು ಒತ್ತು ಕೊಟ್ಟರು. ಇದು ಕ್ರೈಸ್ತ ಮತೀಯ ತತ್ವದೊಂದಿಗೆ ಸೇರಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಸ್ಥಳೀಯ ಚರ್ಚುಗಳು ರಾಜಕೀಯ ಹಾಗೂ ಕಾನೂನಿನ ನಿಗಮಗಳಾದವು. ಅದರಲ್ಲಿ ಆಯ್ಕೆಯಾದ ಸಚಿವರುಗಳು, ಹಿರಿಯರು ಆಡಳಿತ ನೋಡಿಕೊಳ್ಳುತ್ತಿದ್ದರು. ಇವು ಸ್ಥಳೀಯ ನಾಗರಿಕ ಸಮಿತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿತ್ತು. ಲೂಥರನ ಅನುಯಾಯಗಳಿಗಿಂತ ಹೆಚ್ಚಾಗಿ ಕ್ಯಾಲ್ವಿನ್‌ನ ಅನುಯಾಯಿಗಳು ದೇವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವಂತೆ ಮನುಷ್ಯನಿಗೆ ವ್ಯವಹಾರಿಕ ಹಾಗೂ ನೈತಿಕ ಕಾನೂನುಗಳ ಒಳಿತನ್ನು ಕುರಿತು ಒತ್ತಿ ಹೇಳಿದರು. ಈ ಇಂಗ್ಲೀಷ್ ಸುಧಾರಕರು ೧೬೪೦ರಲ್ಲಿ ಅಧಿಕಾರಕ್ಕೆ ಬಂದಾಗ, ಸಂವಿಧಾನಕ್ಕೆ ಅಷ್ಟೇ ಅಲ್ಲ, ದಂಡ ಕಾಯ್ದೆಗೆ, ವ್ಯವಹಾರಿಕ ಕಾಯ್ದೆಗೆ ಹಾಗೂ ಕಾನೂನಿನ ಇತರ ವಿಭಾಗಗಳಿಗೂ ಮಹತ್ತರ ಸುಧಾರಣೆಗಳನ್ನು ಸೂಚಿಸಿದರು. ಪ್ರಭುತ್ವದ ಮೇಲೆ ಹಿಡಿತವನ್ನು ವಿಧಿಸಿ ಸಂಸತ್ತಿಗೆ ಸ್ವಾತಂತ್ರ ನೀಡುವುದನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ರಾಜಮನೆತನದ ನ್ಯಾಯಾಲಯಗಳನ್ನು ರದ್ದುಗೊಳಿಸಿ ಸರ್ವರಿಗೂ ಸಮಾನವಾದ ಕಾನೂನನ್ನು ರಾಜ್ಯದ ಕಾನೂನನ್ನಾಗಿ ಸ್ಥಾಪಿಸಲಾಯಿತು. ಸುಧಾರಕರು ಮೊದಲು ಒತ್ತಾಯಿಸಿದ್ದ ಪ್ರಾಯಶ್ಚಿತ್ತದ ಪ್ರಾಮುಖ್ಯತೆ, ವ್ಯಕ್ತಿ ಹಾಜರಿಯ ಆಜ್ಞಾಪತ್ರ, ಜಾಮೀನು, ನ್ಯಾಯಾಂಗದ ಪ್ರಭಾವದಿಂದ ನ್ಯಾಯಾಧೀಶನ ಸ್ವಾತಂತ್ರ-ಇವು ಇಂಗ್ಲೀಷ್ ಕಾನೂನಿನ ಸ್ವೀಕೃತ ತತ್ವಗಳಾದವು. ಸಾಮಾನ್ಯ ಕಾನೂನಿಗೆ ಪ್ರಗತಿಪರ ವಿಚಾರಗಳನ್ನು ಅಳವಡಿಸಲಾಯಿತು.

ಈ ಕಾಲದಲ್ಲಿ ಸುಧಾರೀಕರಣದ ಜತೆಗೆ ಆಂಗ್ಲೀಕರಣವೂ ಇಂಗ್ಲೀಷ್ ಕಾನೂನಿನ ಬೆಳವಣಿಗೆಯ ಮೇಲೆ ಪರಿಣಾಮ ಮಾಡಿತು. ಪಾಶ್ಚಿಮಾತ್ಯ ಕಾನೂನುಗಳು ತಮ್ಮ ಮೂಲಭೂತ ಅರ್ಥದಲ್ಲಿ ಬೆಳವಣಿಗೆ ಹೊಂದಲು ಚರ್ಚುಗಳ ಮೂಲಕ ಒಂದು ದೊಡ್ಡ ಆಂದೋಲನವನ್ನು ಕ್ಯಾಲ್ವಿನ್ ತತ್ವ ಇಂಗ್ಲೆಂಡ್, ಅಮೇರಿಕಾ ಹಾಗೂ ಯುರೋಪಿನ ಇತರ ಭಾಗಗಳಲ್ಲಿ ನಡೆಸಿತು. ಪ್ರವಾದಿ ಕ್ರೈಸ್ತಧರ್ಮ ಕಾನೂನಿನಲ್ಲಿ ಮುಖ್ಯ ಸುಧಾರಣೆ ತರುವಲ್ಲಿ ಪ್ರಮುಖ ಪಾತ್ರವಹಿಸಿ ಮುಂದುವರೆಯಿತು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅದು ಮುಖ್ಯವಾಗಿ ಗುಲಾಮಗಿರಿಯನ್ನು ರದ್ದು ಪಡಿಸುವುದು, ಸ್ತ್ರೀ ಸಮಾನತೆಯ ಹೋರಾಟ ಹಾಗೂ ಸಮಾಜ ಕಲ್ಯಾಣ ಅಭಿವೃದ್ಧಿ ಇತ್ಯಾದಿಗಳಿಗೆ ಉತ್ತೇಜನ ನೀಡಿತು. ಸಾಂಪ್ರದಾಯಿಕ ಧರ್ಮಾಚರಣೆಗಳು ಕ್ಷೀಣಿಸಿ ಹೊಸ ಧರ್ಮನಿರಪೇಕ್ಷ ಕಾನೂನುಗಳು ಬೆಳೆದು ಪ್ರಾಬಲ್ಯ ಪಡೆದವು.

ಅಮೆರಿಕ ಮತ್ತು ಫ್ರೆಂಚ್ ಮಹಾಕ್ರಾಂತಿಗಳು ಧರ್ಮನಿರಪೇಕ್ಷ, ರಾಜಕೀಯ ಹಾಗೂ ಸಾಮಾಜಿಕ ಅಂದೋಲನಗಳಿಗೆ, ಹಾಗೂ ಅನೇಕ ಧಾರ್ಮಿಕ ಭಾವನೆಗಳಿಗೆ ವೇದಿಕೆಯನ್ನೊದಗಿಸಿದವು. ೧೮ನೇ ಶತಮಾನದಲ್ಲಿ ಹೊಸ ಬೆಳಕನ್ನಿತ್ತ ನಾಯಕರಾದ ವಾಲ್ಟೈರ್, ರೂಸೋ, ಪ್ರಾಂಕ್ಲಿನ್ ಹಾಗೂ ಜೆಫರ್‌ಸನ್ ಅವರು, ಈ ವಿಶ್ವ ಒಬ್ಬ “ಸರ್ವಶಕ್ತ ಶಿಲ್ಪಿ”ಯ ಇರುವಿಕೆಯಿಂದ ಆಗಿದೆ, ಆತನೆ ಮತ್ತೆಂದೂ ಬದಲಾಗದಂತೆ ನಿಸರ್ಗಕ್ಕೆ ನಿರ್ದೇಶನ ನೀಡಿದ್ದಾನೆ ಎಂಬ ಸಾಧ್ಯತೆ ಅಂಗೀಕಾರವನ್ನು ಪ್ರಚಾರಪಡಿಸಿದರು.

ವ್ಯಕ್ತಿವಾದ, ವಿಚಾರವಾದ ಹಾಗೂ ಪ್ರಕೃತಿವಾದಗಳು ಕಾನೂನಿಗೆ ಮುಖ್ಯವಾಗಿ ತೊಡರಿಕೊಂಡವು. ಜ್ಞಾನವಂತರಾದ ತತ್ವಜ್ಞಾನಿಗಳು ಪ್ರಭುತ್ವಕ್ಕೆ ಕೊಡುವ ವಿಶೇಷ ಮನ್ನಣೆಯನ್ನು ವಿರೋಧಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ, ಸರ್ಕಾರದ ಶಾಸನ ಸಭೆಯ, ನ್ಯಾಯಾಂಗದ ಹಾಗೂ ಕಾರ್ಯಾಂಗದ ಪ್ರತ್ಯೇಕತೆಯನ್ನು ಪ್ರತಿಪಾದಿಸಿದರು. ಅಲ್ಲದೆ ಜಾರಿಯಲ್ಲಿರುವ ದಂಡ ಕಾಯ್ದೆಯ ಅನಾಗರಿಕ ಪದ್ಧತಿ ಹಾಗೂ ಅವೈಚಾರಿಕವಾದ ಕಾನೂನು ವ್ಯವಸ್ಥೆಯನ್ನು ಪೂರ್ಣವಾಗಿ ನಿರಾಕರಿಸಿದರು. ಇದರ ಪರಿಣಾಮವಾಗಿ ಪ್ರಜಾ ಪ್ರಭುತ್ವ ಸಂಸ್ಥೆಗಳು, ಖಾಸಗಿ ಆಸ್ತಿಗಳ ಹಕ್ಕು ನೀಡುವ ಶಾಸನಗಳು, ಒಪ್ಪಂದಗಳು ಹಾಗೂ ವಿಚಾರಣೆಯಲ್ಲಿ ವೈಚಾರಿಕ ಪ್ರಕ್ರಿಯೆಗಳು ಮುಂತಾದವುಗಳು ಸಂವಿಧಾನದಲ್ಲಿ ಬರೆಯಲ್ಪಟ್ಟವು.

ರಾಷ್ಟ್ರೀಯತೆ ಮತ್ತು ಸಮಾಜವಾದ
ಅಮೆರಿಕಾದ ಮತ್ತು ಫ್ರೆಂಚ್ ಕ್ರಾಂತಿಗಳು ಜೊತೆಗೆ ಅಧ್ಯಾತ್ಮಿಕ ತತ್ವಗಳು “ರಾಷ್ಟ್ರ”ದಲ್ಲಿ ನಂಬಿಕೆಯನ್ನುಂಟುಮಾಡಿದವು. ಪ್ರತಿಯೊಬ್ಬನು ಒಬ್ಬ ನಾಗರಿಕ; ಸಾರ್ವಜನಿಕ ಅಭಿಪ್ರಾಯ ಮನುಕುಲದ ಅಭಿಪ್ರಾಯವಲ್ಲ, ಆದರೆ ಅದು ಫ್ರೆಂಚರ ಅಮೆರಿಕನ್ನರ, ಜರ್ಮನರ ಅಭಿಪ್ರಾಯ ಮಾತ್ರವಾಗಿತ್ತು. ಇದು ಅಲ್ಪಕಾಲದಲ್ಲಿ ಕ್ರಾಂತಿಕಾರಿ ಸಮಾಜದೊಂದಿಗೆ ಸಂಘರ್ಷಕ್ಕೊಳಗಾಯಿತು. ಯೂರೋಪಿನಾದ್ಯಂತ ಒಂದು ಶತಮಾನದವರೆಗೆ ನಡೆದ ಕ್ರಾಂತಿಕಾರಕ ಚಟುವಟಿಕೆಯಿಂದ ೧೯೧೭ರಲ್ಲಿ ರಷ್ಯದಲ್ಲಿ ಕಮ್ಯುನಿಸಂ ಅಧಿಕಾರಕ್ಕೆ ಬಂದಿತು. ಸೋವಿಯತ್‌ನ ಕಾನೂನಿನ ತತ್ವಕ್ಕೆ ಬುನಾದಿಯಾಗಿ ಕಮ್ಯುನಿಸಂ ಅನ್ನು ಕಟ್ಟಿ ಬೆಳೆಸಬೇಕೆಂಬ ನೈತಿಕ ಸಂಹಿತೆ “ಒಳ್ಳೆಯ ಸಮಾಜಕ್ಕೆ ಆತ್ಮ ಸಾಕ್ಷಿಯ ಶ್ರಮ”, “ಬೆವರಿಗೆ ಮಾತ್ರ ಬ್ರೆಡ್ಡು”, “ಸಾರ್ವಜನಿಕ ಸಂಪತ್ತನ್ನು ಉಳಿಸಿ ಬೆಳೆಸಲು ಸರ್ವರ ಸಹಕಾರ”; “ಸಾಂಘಿಕ ಮತ್ತು ಸಂಗಡಿಗರ ಪರಸ್ಪರ ಸಹಾಯ-ಎಲ್ಲರಿಗಾಗಿ ಪ್ರತಿಯೊಬ್ಬರು, ಪ್ರತಿಯೊಬ್ಬರಿಗಾಗಿ ಎಲ್ಲರೂ” ; “ಸಾರ್ವಜನಿಕ ಹಾಗೂ ಖಾಸಗಿ ಜೀವನದಲ್ಲಿ ಪ್ರಾಮಾಣಿಕತೆ, ಸತ್ಯಸಂಧತೆ, ನೈತಿಕ ಪಾವಿತ್ರ್ಯ, ವಿನಯಶೀಲತೆ ಹಾಗೂ ನಿರಾಡಂಬರ”; ಅನ್ಯಾಯ ಅಪ್ರಾಮಾಣಿಕತೆ ಸ್ವಾರ್ಥದ, ಪರಾವಲಂಬನ ಜೀವನ ಹಾಗೂ ಹಣದ ದಾಹ ಇವುಗಳೊಂದಿಗೆ ಎಂದೂ ಹೊಂದಾಣಿಕೆ ಮಾಡಿಕೊಳ್ಳದ ನಿಯಮಗಳನ್ನೊಳಗೊಂಡಿತ್ತು. ಜೊತೆಗೆ ಕಾನೂನು ವಿದ್ಯೆಯ ಮಹತ್ವವನ್ನು ಕುರಿತು, ನ್ಯಾಯಾಂಗದ ನಡವಳಿಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಕುರಿತು, ಕಾನೂನನ್ನು ಜಾರಿಗೊಳಿಸುವಲ್ಲಿ ಸಂಗಡಿಗರ ಪಾತ್ರವನ್ನು ಕುರಿತು ಹೆಚ್ಚಿನ ಮಹತ್ವವನ್ನು ಕೊಡಲಾಯಿತು. ಪಶ್ಚಿಮದ ಅನೇಕ ಕಮ್ಯುನಿಸ್ಟ್ ರಾಷ್ಟಗಳಲ್ಲಿ ಪ್ರಾಚೀನ ರೋಮನ್ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟಂಟರ ಪ್ರಮುಖವಾಗಿ ಕಾಲ್ವಿನಿಸ್ಟರ ಕಾನೂನಿನ ವಿಚಾರಗಳನ್ನು ಪುನರ್ ಪರಿಶೀಲಿಸಿದುದನ್ನು ಅಲ್ಲದೆ ಪಾಶ್ಚಿಮಾತ್ಯ ಕಾನೂನು ಪದ್ಧತಿಯಲ್ಲಿ ಧಾರ್ಮಿಕ ಬೇರುಗಳನ್ನು ಪುನಃ ಕಂಡುಕೊಳ್ಳಲು ನ್ಯಾಯವಾದಿಗಳು ಹಾಗೂ ಕಾನೂನು ತಜ್ಞರು ಪ್ರಯತ್ನಿಸಿರುವುದನ್ನು ಈ ೨೦ನೇ ಶತಮಾನ ಕಂಡುಕೊಂಡಿದೆ. ಇದರ ಜೊತೆಗೆ ವ್ಯಾಪಕವಾಗಿ ಬೆಳೆಯುತ್ತಿರುವ ಮೂಲಭೂತವಾದಿ ಗುಂಪುಗಳು ಬೈಬಲ್ಲಿನ ಆಧಾರದ ಮೇಲೆ ಗರ್ಭಪಾತ ನಿಷೇಧ, ಪ್ರಾಥಮಿಕ ಶಾಲೆಗಳಲ್ಲಿ ಪ್ರಾರ್ಥನೆ ಮಾಡುವುದಕ್ಕೆ ಅಧಿಕಾರ ಹಾಗೂ ಕೆಲವು ಪ್ರಕಟಣೆಗಳನ್ನು ರದ್ದುಗೊಳಿಸಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಡೆಸಿದ ವ್ಯಾಪಕ ಚಳುವಳಿಗಳು, ಸಂಯುಕ್ತ ರಾಷ್ಟ್ರಗಳ ಅನುಭವಕ್ಕೆ ಬಂದಿದೆ. ಈ ಚಳುವಳಿಗಳು ಕಾಲ್ವಿನಿಸ್ಟನ ಉಪದೇಶಗಳನ್ನು ಆಹ್ವಾನ ಮಾಡಿದವು ನಿಜ. ಆದರೆ ವಿಶಾಲ ಅರ್ಥದಲ್ಲಿ ೧೭ನೇ ಶತಮಾನದಲ್ಲಿ ಸುಧಾರಣಾವಾದಿಗಳು ತಂದ ಕಾನೂನು ಮತ್ತು ಧರ್ಮಗಳ ಆಂತರಿಕ ಸಂಘರ್ಷದ ಕೊರತೆಯನ್ನು ಇವು ಒಳಗೊಂಡಿದ್ದವು.

ಮುಂದಿನ ಬೆಳವಣಿಗೆಯಲ್ಲಿ ಸರ್ಕಾರ ಮತ್ತು ಧಾರ್ಮಿಕ ಸಂಸ್ಥೆಗಳು ಪ್ರತ್ಯೇಕವಾಗಿ ತಮ್ಮ ಕಾರ್ಯ ನಿರ್ವಹಿಸಬೇಕೆನ್ನುವ ಭಾವನೆ ಬೇರೂರಿತು. ಸೈನಿಕರು ಧಾರ್ಮಿಕ ಸೇವೆಗಳಲ್ಲಿ ಭಾಗವಹಿಸಕೂಡದು ಎಂದು ವಿಧಿಸಲಾಯ್ತು. ನಾಸ್ತಿಕ ಎನ್ನುವ ಒಂದೇ ಕಾರಣಕ್ಕೆ ನ್ಯಾಯಾಂಗದಲ್ಲಿ ಅವನ ಸಾಕ್ಷಿಯನ್ನು ನಿರಾಕರಿಸುವುದಾಗಲಿ ಅಥವಾ ಆತ ನ್ಯಾಯಾಂಗದಲ್ಲಿ ಕಾರ್ಯನಿರ್ವಹಿಸಲು ಅನರ್ಹ ಎಂದು ತೀರ್ಮಾನಿಸುವುದಾಗಲಿ ಕೂಡದು; ನ್ಯಾಯಾಧೀಶನ ಕಾರ್ಯವ್ಯಾಪ್ತಿ ಸಾಮಾಜಿಕ ವ್ಯವಹಾರಗಳನ್ನು ಕುರಿತು ತೀರ್ಮಾನಿಸುವುದೇ ಹೊರತು ಆತ್ಮೋದ್ಧಾರದ ಕಾರ್ಯವಲ್ಲ ಎಂಬ ಗಮನಾರ್ಹ ವಿಚಾರಗಳು ಮೂಡಿಬಂದವು. ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ರಾಜ್ಯ ಮತ್ತು ಚರ್ಚುಗಳನ್ನು ಪ್ರತ್ಯೇಕಿಸದೆ ಇದ್ದರೂ, ಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ್ದವು. ಸರ್ಕಾರ ಧಾರ್ಮಿಕ ಆಚರಣೆಗಳಿಗೆ ಹಣ ಒದಗಿಸುವುದು ಸೂಕ್ತವಲ್ಲ ಎಂಬ ನಿಲುವನ್ನು ತಾಳಲಾಯಿತು. ಸರ್ಕಾರಗಳು ಚರ್ಚುಗಳನ್ನು ನಿರ್ಮಿಸಕೂಡದು, ಚರ್ಚುಗಳಿಗೆ ಹೋಗಬೇಕೆಂಬ ಅಥವಾ ಚರ್ಚುಗಳಿಂದ ದೂರವಿರಬೇಕೆಂಬ ನಿಬಂಧನೆಗಳನ್ನು ಮಾಡಕೂಡದು, ಅದಕ್ಕಾಗಿ ಶಿಕ್ಷೆ ವಿಧಿಸುವುದು, ಸಾರ್ವಜನಿಕರ ತೆರಿಗೆ ಹಣದಿಂದ ಧಾರ್ಮಿಕ ಸಂಸ್ಥೆಗಳಿಗೆ ವಂತಿಗೆ ಕೊಡುವುದು, ಧಾರ್ಮಿಕ ಆಚರಣೆಗಳಲ್ಲಿ ಸರ್ಕಾರವಾಗಲಿ ಅಥವಾ ಸರ್ಕಾರದ ವ್ಯವಹಾರಗಳಲ್ಲಿ ಧಾರ್ಮಿಕ ಸಂಸ್ಥೆಗಳು ಭಾಗಿಯಾಗುವುದಾಗಲಿ ಕೂಡದು ಎಂದು ನಿರ್ಧರಿಸಲಾಯಿತು.

ಹೀಗೆ ಪ್ರಪಂಚದಾದ್ಯಂತ ಕಾನೂನು ಮತ್ತು ಧರ್ಮಗಳ ಕಾರ್ಯಕ್ಷೇತ್ರಗಳು ಸ್ವತಂತ್ರ ಅಸ್ತಿತ್ವದ ಮೇಲೆ ಕಾರ್ಯ ನಿರ್ವಹಿಸುವ ವ್ಯವಸ್ಥೆ ಪ್ರಾಪ್ತವಾಗಿದೆ. ಆದರೆ ಅವರವರ ಧರ್ಮಕ್ಕೆ ಅನುಗುಣವಾಗಿ ಕೆಲವು ವಿಷಯಗಳಲ್ಲಿ ನ್ಯಾಯಾಲಯಗಳು ತೀರ್ಮಾನಿಸುತ್ತವೆ. ಹಾಗಾಗಿ ಹಿಂದೂಗಳಿಗೆ “ಹಿಂದೂ ಲಾ”, ಕ್ರಿಶ್ಚಿಯನ್ನರಿಗೆ “ಇಂಡಿಯನ್ ಸಕ್ಸೆಶನ್ ಆಕ್ಟ್”, ಮುಸಲ್ಮಾನರಿಗೆ “ಮಹಮಡನ್ ಲಾ”ಗಳು ಅನ್ವಯವಾಗುತ್ತವೆ. ಪ್ರಪಂಚದ ಇನ್ನಿತರ ಭಾಗಗಳಲ್ಲಿ ಅವರವರಿಗೆ ಅನ್ವಯಿಸುವ ಧಾರ್ಮಿಕ ಕಾನೂನುಗಳು ಜಾರಿಯಲ್ಲಿವೆ. ನ್ಯಾಯಾಲಯಗಳಂತೆ ಧಾರ್ಮಿಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ.

ಬಹುದೇವೋಪಾಸನೆಯಿಂದ (ಶಿರ್ಕ್) ಏಕದೇವೋಪಾಸನೆಗೆ ಪರಿವರ್ತನೆಗೊಂಡು ಬಹು ವ್ಯಾಪಕವಾಗಿ ಹರಡಿದ ಮತ್ತೊಂದು ಧರ್ಮವೆಂದರೆ “ಇಸ್ಲಾಂ”. “ಇಸ್ಲಾಂ” ಎಂದರೆ ಶರಣು; ಎಂದರೆ ಜಗತ್ತಿಗೆ ಒಬ್ಬನೇ ದೇವರಾದ “ಅಲ್ಲಾ” ಹನಿಗೆ ಶರಣು ಹೋಗುವುದು, ವಿನಮ್ರನಾಗಿರುವುದು ಎಂದರ್ಥ. “ಇಸ್ಲಾಂ”ನ ಶಾಸನಕ್ಕೆ ಶರೀಯತ್ ಎಂದು ಕರೆಯುತ್ತಾರೆ. ಇದು ಯಾವುದು ಧರ್ಮಬದ್ಧ ಹಾಗೂ ನಿಷಿದ್ಧ ಎಂಬುದನ್ನು ವಿಶದಪಡಿಸುತ್ತದೆ. ಇದರಲ್ಲಿ ಎರಡು ಹಕ್ಕುಗಳನ್ನು ಕುರಿತು ವಿವರವಾಗಿ ಪ್ರಸ್ತಾಪಿಸಲಾಗಿದೆ. ಒಂದು ಭಗವಂತನಿಗೆ ಸೇರಿದ್ದು ಮತ್ತೊಂದು ವ್ಯಕ್ತಿಗೆ ಸೇರಿದ್ದು. ಶ್ರದ್ಧೆ ಅಥವಾ ಇಮಾನ್, ಐದು ಹೊತ್ತು ಪ್ರಾರ್ಥನೆ, ಉಪವಾಸ, ಜಕಾತ್ ಅಂದರೆ ಯಾತ್ರೆ, ಕೊಲೆ ಮಾಡದಿರುವುದು, ಮಾದಕ ಪಾನೀಯ ವಸ್ತುಗಳನ್ನು ಸೇವಿಸದಿರುವುದು, ವ್ಯಭಿಚಾರ ಜೂಜುಗಳಲ್ಲಿ ತೊಡಗದಿರುವುದು ಇವು ಭಗವಂತನ ಸಂಪೂರ್ಣ ಹಕ್ಕಿಗೆ ಸೇರಿವೆ. ಹಾಗೆಯೇ ವ್ಯಕ್ತಿಯ ಕ್ಷೇಮ, ವ್ಯಕ್ತಿತ್ವದ ಕ್ಷೇಮ, ಆಸ್ತಿಯ ಕ್ಷೇಮ, ವಿವಾಹ ಸಂಬಂಧ ಕ್ಷೇಮ, ಪೋಷಕತ್ವ ಕ್ಷೇಮ, ಅನುವಂಶಿಕ ಹಕ್ಕುಗಳ ಕ್ಷೇಮ, ಸ್ವಾತಂತ್ರ್ಯದ ಕ್ಷೇಮ ಇವು ವ್ಯಕ್ತಿಗತ ಹಕ್ಕುಗಳಲ್ಲಿ ಸೇರಿವೆ.

ದೇವರ ಎದುರು ಎಲ್ಲರೂ ಸಮಾನರು, ಮೇಲು ಕೀಳು, ಬಡವ ಬಲ್ಲಿದ ಎಂಬುದು ನಿಷಿದ್ಧ. ಧಾರ್ಮಿಕ ಆಚರಣೆಗಳಲ್ಲಿ ಶ್ರೇಷ್ಠ ಕನಿಷ್ಠ ಎಂಬ ಭೇದ ಭಾವ ಇರಕೂಡದು ಎಂಬುದನ್ನು ಇಸ್ಲಾಂ ಎತ್ತಿ ಹಿಡಿಯುತ್ತದೆ. ಮಾನವಕುಲ ಒಂದು ಎಂಬುದನ್ನು ಈ ಧರ್ಮ ಪ್ರತಿಪಾದಿಸಿ ಆಚರಣೆಗೆ ತಂದಷ್ಟು ಮತ್ತಾವ ಧರ್ಮವೂ ತಂದಿಲ್ಲ.

ಅಪರಾಧ ಮತ್ತು ಶಿಕ್ಷೆ
ಅಪರಾಧ ಮತ್ತು ಶಿಕ್ಷೆಗಳನ್ನು ಕಾನೂನು ಮತ್ತು ಧರ್ಮಗಳು ತಮ್ಮದೇ ರೀತಿಯಲ್ಲಿ ನಿಯಂತ್ರಿಸುತ್ತಾ ಬಂದಿವೆ. ಅಪರಾಧಗಳಿಗೆ ಕಾನೂನು ಅಪರಾಧಿ ಜೀವಂತವಿದ್ದಾಗಲೆ ಶಿಕ್ಷೆ ವಿಧಿಸಿ ತನ್ಮೂಲಕ ಅದರ ನಿವಾರಣೆಗೆ ಯತ್ನಿಸಿದರೆ, ಧರ್ಮ ಸ್ವರ್ಗ ನರಕಗಳ ಕಲ್ಪನೆಯ ಹಿನ್ನೆಲೆಯಲ್ಲಿ ಒಳ್ಳೆಯ ಬದುಕಿಗೆ ಪ್ರೇರಣೆ ನೀಡುವ ಯತ್ನ ಮಾಡಿವೆ. ಒಳ್ಳೆಯ ಗುಣಗಳಿಂದ ಕೂಡಿ ಉತ್ತಮ ಜೀವನ ನಡೆಸಿದರೆ ಸ್ವರ್ಗ ಸಿಗುವುದೆಂದೂ, ದುಷ್ಟನಾಗಿ ಅಪರಾಧಗಳನ್ನು ಎಸಗಿದರೆ ನರಕ ಪ್ರಾಪ್ತಿಯೆಂದು ವಿಧಿಸಲಾಗಿದೆ.

ಕಾನೂನು ಮತ್ತು ಧರ್ಮಗಳು ಮನುಷ್ಯರ ಮೇಲೆ ತಮ್ಮ ಪೂರ್ಣ ಹಿಡಿತ ಸಾಧಿಸಿರುವುದು ಸರ್ವವಿದಿತ. ಬಹುತೇಕ ಧರ್ಮಗಳಲ್ಲಿ ಮನುಷ್ಯರು ಸತ್ತಮೇಲೆ ದೇವರ ಮುಂದೆ ತಾನು ಭೂಮಿಯ ಮೇಲೆ ಮಾಡಿದ ಪಾಪ ಪುಣ್ಯಗಳಿಗೆ ಲೆಕ್ಕ ಒಪ್ಪಿಸಬೇಕೆಂಬ ನಂಬಿಕೆ ಇದ್ದರೆ, ಒಳಿತು ಕೆಡುಕಿನ ಫಲವನ್ನು ಮನುಷ್ಯರು ಭೂಮಿಯ ಮೇಲೆ ಜೀವಂತವಿದ್ದಾಗಲೆ ಅನುಭವಿಸುತ್ತಾರೆ ಎನ್ನುವ ಭಾವನೆಯು ಬೇರೂರುತ್ತಿದೆ.

ಅಪರಾಧಗಳನ್ನು ಸಾಮಾನ್ಯವಾಗಿ ದೇವರ ವಿರುದ್ಧದ, ರಾಜ್ಯದ ವಿರುದ್ಧ ಹಾಗೂ ವ್ಯಕ್ತಿಯ ವಿರುದ್ಧದ ಅಪರಾಧಗಳು ಎಂದು ವಿಂಗಡಿಸಿ ಅವುಗಳಲ್ಲಿ ವ್ಯವಹಾರಕ್ಕೆ ಸಂಬಂಧಪಟ್ಟ (ಸಿವಿಲ್) ಹಾಗೂ ದಂಡಾರ್ಹ (ಕ್ರಿಮಿನಲ್) ಎಂದು ವಿಭಾಗಿಸಲಾಗಿದೆ.

ನ್ಯಾಯವನ್ನು ಒದಗಿಸಲು ಪ್ರಾಚೀನ ಕಾಲದಿಂದಲೂ ಪ್ರಯತ್ನಗಳು ನಡೆಯುತ್ತ ಬಂದಿವೆ; ಅವು ಆಯಾಯ ದೇಶದ ಜನರ ನಂಬಿಕೆ, ಬದುಕಿನ ರೀತಿ ವಿಧಾನಗಳನ್ನು ಅವಲಂಬಿಸಿಕೊಂಡು ಬಂದಿವೆ. ತೀವ್ರವಾದ ಅಪರಾಧಗಳಿಗೆ ಮೆಸಪಟೋಮಿಯಾ ಹಾಗೂ ಈಜಿಪ್ಟ್ ನ್ಯಾಯಾಲಯಗಳು ಅಂಗಹೀನಗೊಳಿಸುವುದು, ನೀರಲ್ಲಿ ಮುಳುಗಿಸಿ ಸಾಯಿಸುವುದು, ಶೂಲಕ್ಕೇರಿಸುವುದು, ಸುಡುವುದು ಮುಂತಾದ ಶಿಕ್ಷೆ ವಿಧಿಸುತ್ತಿದ್ದವು; ಹಮ್ಮುರಬಿಯ ಕಾನೂನುಗಳು ಮರಣದಂಡನೆ ವಿಧಿಸುತ್ತವೆ. ಮೋಸಸ್ ನ ಸಂಹಿತೆ (ಮೊಸಾಯಿಕ್ ಕೋಡ್) ಅಪರಾಧ ಮಾಡಿದವನಿಗೆ ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ಎಂಬ ಪ್ರತೀಕಾರ ವಿಧಿಸುತ್ತದೆ. ಸೇಡು ತೀರಿಸಿಕೊಂಡವನನ್ನು ಅಪರಾಧಿಯೆಂದು ಪರಿಗಣಿಸುತ್ತಿರಲಿಲ್ಲ.

ಬುಡಕಟ್ಟು ಸಂಸ್ಕೃತಿಯಲ್ಲಿ ಲೈಂಗಿಕ ಅಪರಾಧಗಳು ಮತ್ತು ಅವುಗಳಿಗೆ ನೀಡುವ ಶಿಕ್ಷೆ ವಿಚಿತ್ರವಾಗಿವೆ. ಉತ್ತರ ಮಲಯ ಪರ್ಯಾಯ ದ್ವೀಪದ ಬುಡಕಟ್ಟು ಜನರು ಒಪ್ಪಿಕೊಂಡಿರುವ ಪದ್ಧತಿಯಂತೆ ಅಣ್ಣ ಊರಲ್ಲಿ ಇಲ್ಲದಿದ್ದಾಗ ಅಣ್ಣನ ಹೆಂಡತಿಯ ಜೊತೆ ಮಲಗಬಹುದು. ವ್ಯಭಿಚಾರ ಶಿಕ್ಷಾರ್ಹವಾದರೂ ಬೈಗಾ ಬುಡಕಟ್ಟಿನಲ್ಲಿ ಇದು ಬುಡಕಟ್ಟಿನ ಹೊರಗಿನವರಿಗೆ ಸಂಬಂಧಿಸಿದ್ದರೆ ತಪ್ಪಲ್ಲ. ತನ್ನ ಹೆಂಡತಿಯನ್ನು ಹೊಡೆಯಲು ಬಿಟ್ಟವನನ್ನು ಸಾಮಾಜಿಕವಾಗಿ ಗಡಿಪಾರು ಮಾಡಲಾಗುತ್ತದೆ. ಸ್ತ್ರೀಯು ಸಂಭೋಗದಲ್ಲಿ ಮೇಲ್ಪಂಕ್ತಿಯನ್ನು ಪಡೆಯಲು ಅನುಮತಿ ನೀಡಿದರೆ ಅಥವಾ ಒತ್ತಾಯಪಡಿಸಿದರೆ ಇದೇ ಶಿಕ್ಷೆಯನ್ನು ಕೊಡಲಾಗುವುದು. ಅವಳು ತನ್ನ ಗಂಡನ ಮೇಲೆ ಸವಾರಿ ಮಾಡಬಾರದು. ಆಕೆಯ ಸ್ಥಾನ ಕೆಳಗೆ. ತಾಯಿಯ ಜೊತೆ ಸಂಭೋಗ ನಡೆಸಿದ ಮಗನಿಗೆ ದಂಡ ಎಂದರೆ ಆತ ನಾಲ್ಕು ದಿನದ ಊಟ ಮತ್ತು ಐದು ರೂಪಾಯಿಯ ಮದ್ಯ ಕುಡಿಸಬೇಕು. ಬೈಹಾರ್‌ನಲ್ಲಿ ಅಣ್ಣ ತಂಗಿಯರ ಅನೈತಿಕ ಸಂಬಂಧಕ್ಕೆ ಮದ್ಯಕ್ಕಾಗಿ ಕೇವಲ ಐದು ರೂಪಾಯಿ ದಂಡ ವಿಧಿಸುವರು. ಆದರೆ ಆದೇ ಆಪರಾಧಕ್ಕೆ ಧರ್ಮಗರ್‌ನಲ್ಲಿ ನಾಲ್ಕು ದಿನದ ಊಟ, ಐದು ರೂಪಾಯಿ ಮದ್ಯವಿಧಿಸುವರು.

ಹಿಂದೆ ಹಿಂದೂ ಸಮಾಜದಲ್ಲಿ ದಂಡನೆಯ ತಾರತಮ್ಯ ಜಾತಿಯನ್ನಾಧರಿಸಿ ನಡೆಯುತ್ತಿತ್ತು. ಮನುಸ್ಮೃತಿಗೆ ಜಾತಿವರ್ಣಗಳೆ ನೆಲೆಗಟ್ಟು. ಶೂದ್ರನು ಶ್ರೇಷ್ಠನನ್ನು ತನ್ನ ಯಾವ ಅವಯವದಿಂದ ಹಿಂಸಿಸುತ್ತಾನೋ ಅವನ ಅದೇ ಅಂಗವನ್ನು ಕತ್ತರಿಸುವುದು ಮನುಸಮ್ಮತ ದಂಡನೆಯು. (೮- ೨೭೯) ದೊಣ್ಣೆಯಿಂದ ಹೊಡೆಯಲು ಕೈ ಎತ್ತಿದರೆ ಕೈಯನ್ನು ಕಡಿಯಬೇಕು. ಕಾಲಿನಿಂದ ತುಳಿದರೆ ಕಾಲನ್ನು ಕತ್ತರಿಸಬೇಕು (೮-೨೮೦) ಎದುರಾಗಿ ಉಗುಳಿದರೆ ತುಟಿ ಕೊಯ್ಯುವುದು. (ಮ. ಸ್ಮೃ. ೮-೨೮೨)

ಮೋಸಸನ ಸಂಹಿತೆಯಂತೆ ಮನುಸ್ಮೃತಿಯೂ ಕೂಡ ‘ಕಳ್ಳನು ಯಾವ ಯಾವ ತನ್ನ ಅಂಗ ಕೌಶಲದಿ೦ದ ಕಳ್ಳತನ ಮಾಡುತ್ತಾನೋ ಆಯಾ ಅಂಗಗಳನ್ನು ಕಡಿಯುವುದು ಪುನಃ ಮಾಡದಿರಲು ಉತ್ತಮ ದಂಡನೆಯಾಗುವುದು (ಮ.ಸ್ಮೃ.  ೮-೩೩೪) ಎಂದು ಅಭಿಪ್ರಾಯಪಡುತ್ತದೆ. ಇಸ್ಲಾಂ ಧರ್ಮ ಕೂಡ ಇದನ್ನು ಹೇಳುತ್ತದೆ. ದಿವ್ಯ ಕುರಾನಿನಲ್ಲಿ, ಇದನ್ನು ನಮೂದಿಸಲಾಗಿದೆ. “ವಿಶ್ವಾಸಿಗಳೇ ವಿಧಿಸಲ್ಪಟ್ಟವರ ಪರವಾಗಿ ಪ್ರತಿಹಿಂಸೆ ನಿಮಗೆ ಶಾಸನ ಬದ್ಧಗೊಳಿಸಲಾಗಿದೆ. ಸ್ವತಂತ್ರನಿಗೆ ಬದಲು (ಘಾತುಕನಾದ) ಸ್ವತಂತ್ರನೂ, ಗುಲಾಮನಿಗೆ ಬದಲು (ಘಾತುಕನಾದ) ಗುಲಾಮನೂ, ಸ್ತ್ರೀಗೆ ಬದಲು (ಘಾತುಕಿಯಾದ) ಸ್ತ್ರೀಯೂ ವಧಿಸಲ್ಪಡಲಿ. (ದಿವ್ಯಕುರಾನ್‌ : ೨- ೧೭೮) ಕಳ್ಳತನ ಮಾಡಿದ ಸ್ತ್ರೀಪುರುಷರ ಕೈಗಳನ್ನು ಕಡಿಯಿರಿ. (೫-೩೮) ಜೀವಕ್ಕೆ (ಪ್ರತಿ) ಜೀವ, ಕಣ್ಣಿಗೆ ಕಣ್ಣು, ಮೂಗಿಗೆ ಮೂಗು, ಕಿವಿಗೆ ಕಿವಿ, ಹಲ್ಲಿಗೆ ಹಲ್ಲು, ಹಾಗೂ ಗಾಯಗಳಿಗೆ ತಕ್ಕ ಪ್ರತೀಕಾರ (೫-೪೫) ವ್ಯಭಿಚಾರಿಣಿ ಮತ್ತು ವ್ಯಭಿಚಾರಿ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ನೂರು ಬಾರೇಟು (ಛಡಿ ಏಟು)ಗಳನ್ನು ಕೊಡಿರಿ. (೨೪-೨) ಇಸ್ಲಾಂಧರ್ಮ ಪ್ರತೀಕಾರಕ್ಕೆ ಸಂಬಂಧಿಸಿದಂತೆ ಹೇಳುವ ಶಿಕ್ಷೆಯಿದು. ಆದರೆ ಅದು ಮಾನವೀಯತೆಯನ್ನು ಗೌರವಿಸುವ ಔನ್ನತ್ಯ ಶ್ರೇಷ್ಠವಾದುದು. ಉದಾ: (ಮುಯ್ಯಿಗೆ ಹೊರತು) ಒಂದು ಜೀವವನ್ನು ಯಾವನಾದರೂ ಕೊಂದರೆ, ಅಖಂಡ ಮಾನವ ಜನಾಂಗವನ್ನೇ ಅವನು ಕೊಂದಂತೆ; ಅಥವಾ ಒಂದು ಜೀವವನ್ನು ಯಾವನಾದರೂ ಉಳಿಸಿದರೆ ಆದು ಅಖಂಡ ಮಾನವ ಜನಾಂಗ ಉಳಿಸಿದಂತೆ (೫-೩೨).

ಹೀಗೆ ತಪ್ಪಿಗೆ ಶಿಕ್ಷೆ ಒಳಿತಿಗೆ ಪುರಸ್ಕಾರ ನೀಡುವ ದೃಷ್ಟಿ ಮನುಕುಲದ ಚಿಂತನೆಯಲ್ಲಿ ಆದಿಯಿಂದ ನಡೆದು ಬಂದಿರುವುದು ಕಂಡುಬರುತ್ತದೆ. ರಾಷ್ಟ್ರಗಳು ತಮ್ಮ ಚಿಂತನಾಶಕ್ತಿಗೆ ಅನುಗುಣವಾಗಿ ಶಿಕ್ಷೆಯ ಸ್ವರೂಪಗಳನ್ನು ಅಳವಡಿಸಿಕೊಂಡು ಬರುತ್ತಿವೆ. ರಾಷ್ಟ್ರೀಯ ಕಾನೂನುಗಳ ಜೊತೆ ಜೊತೆಯಲ್ಲಿ ಅಂತರ ರಾಷ್ಟ್ರೀಯ ಕಾನೂನುಗಳು ಜಾರಿಯಲ್ಲಿದ್ದು ಶಿಕ್ಷೆಯ ಸ್ವರೂಪಗಳಲ್ಲಿ ವ್ಯಾಪಕತೆ ಕಂಡುಬರುತ್ತದೆ. ಸತ್ಯದ ನೆಲೆಗಟ್ಟಿನಲ್ಲಿ ನಿಜವನ್ನು ನುಡಿಸಿ ಅಪರಾಧಗಳನ್ನು ಸಾಬೀತು ಪಡಿಸಲು ಕಾನೂನು ಮತ್ತು ಧರ್ಮಗಳ ಮೂಲಕ ಆನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. -೨೦೦೦
*****
ಗ್ರಂಥಸೂಚಿ

೧. ಅಂಬೇಡ್ಕರ್ ಬಿ. ಆರ್ ., ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೯೪.

೨. ಕುವೆಂಪು, ತಪೋನಂದನ, ೧೯೮೬, ಉದಯರವಿ ಪ್ರಕಾಶನ, ಮೈಸೂರು.

೩. ದಿವ್ಯ ಕುರಾನ್; ಇಸ್ಲಾಮಿ ಸಾಹಿತ್ಯ ಪ್ರಕಾಶನ, ಬೆಂಗಳೂರು, ೧೯೮೧.

೪. ಮನುಸ್ಮೃತಿ: ಅನು: ಚಿತ್ರಕೋಡಿ ಈಶ್ವರ ಶಾಸ್ತ್ರಿ ಸಮಾಜ ಪುಸ್ತಕಾಲಯ, ಧಾರವಾಡ, ೧೯೬೭.

೫. ಮಹದೇವ ಬಣಕಾರ, ಆಂಗ್ಲರ ಆಡಳಿತದಲ್ಲಿ ಕನ್ನಡ, ೧೯೮೬, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.

೬. ರಾಫವಯ್ಯ ವಿ., ಬುಡಕಟ್ಟು ನ್ಯಾಯ, ಅನು: ಅಕ್ಕಮಹಾದೇವಿ, ಮೈಸೂರು ವಿಶ್ವವಿದ್ಯಾನಿಲಯ, ೧೯೮೪.

೭. ಸ್ವಾಮಿವಿವೇಕಾನಂದ, ವಿವೇಕಾನಂದರ ಕೃತಿ ಶ್ರೇಣಿಗಳು, ಶ್ರೀರಾಮಕೃಷ್ಣಾಶ್ರಮ, ಮೈಸೂರು, ೧೯೭೦.

8.Callins, The Code or Canon Law, Bangalore .

9. Denis Twitchett, Law of Religion in East Asia

10. Gour H. S., The Penal Law of India, Vol-I, 1917

11. Harold J. Berman, Law of Religion in the West Asia

12. Nietzsche F., Twilight of the Idols/The Anti-Christ, Penguin, London. 1968

13. Richard W. Lariviere, Law Religion in South Asia

14. Salmond, Jurisprudence

15. Sir Henry Summer Maine, Ancient Law, George Routledge & Sons Ltd., London

16. Swamy Ranganathananda, 1984, Eternal Values for a Changing Society, Bharatiya Vidya Bhavan, Bombay

17. The Indian Oath Act, 1969

18. The Old and New Testament, Karnataka Regional Catholic Bishops Conference, Bangalore, 1996.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿನಿ ಕವನ
Next post ಚಟ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys