ಜಾತ್ಯತೀತತೆ : ಒಂದು ನೋಟ

ಜಾತ್ಯತೀತತೆ : ಒಂದು ನೋಟ

‘ಜಾತ್ಯತೀತತೆ’ಯನ್ನು ಪ್ರತಿಪಾದಿಸುವ ಕೆಲವು ವಿಚಾರವಂತರನ್ನು ಸರಳವಾಗಿ, ಸುಲಭವಾಗಿ ಲೇವಡಿ ಮಾಡುವ ಮತ್ತೊಂದು ವರ್ಗದ ವಿಚಾರವಂತರೂ ನಮ್ಮಲ್ಲಿದ್ದಾರೆ. ಇಂಥವರು ಈ ದೇಶದ ಸಂಕೀರ್ಣ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆಯೆ ಎಂಬ ಅನುಮಾನವುಂಟಾಗುತ್ತದೆ. ಒಂದು ದೇಶದ ‘ಸಂಸ್ಕೃತಿ’ಯನ್ನು ಅಂಕಗಣಿತದ ಮಟ್ಟಕ್ಕೆ ತಂದು, ಕೂಡುವ ಕಳೆಯುವ ಲೆಕ್ಕ ಹೇಳಿಕೊಡುವ ಪ್ರವೃತ್ತಿಯೇ ಆಘಾತಕರವಾದುದು. ಜೊತೆಗೆ ಜಾತ್ಯಾತೀತತೆಯೆಂಬ ಪರಿಕಲ್ಪನೆಯನ್ನು ರಾಮಜನ್ಮಭೂಮಿಯ ವಿವಾದವೊಂದರಿಂದಲೇ ನೋಡುವ, ನಿರ್ಧರಿಸುವ, ದೃಷ್ಟಿಕೋನವೂ ಪಾರ್ಶ್ವವಾಯು ಪೀಡಿತವಾದದ್ದು. ಈ ದೇಶದಲ್ಲಿರುವ ಅಸಂಖ್ಯಾತ ಜಾತಿಗಳು, ವಿವಿಧ ಧರ್ಮಗಳು ಶ್ರೇಣೀಕೃತ ಸಮಾಜದ ಸ್ವರೂಪಕ್ಕೆ ಕಾರಣವಾಗಿವೆಯೆಂಬುದನ್ನು ಗಮನಿಸದೆ ‘ತೀರ್ಪು’ ನೀಡುವ ಮನೋಧರ್ಮದಲ್ಲಿ ಮನಸ್ಸು ಮತ್ತು ಧರ್ಮ ಇದೆಯೆ ಎಂಬ ಪ್ರಶ್ನೆ ತಾನಾಗೇ ಉದ್ಭವವಾಗುತ್ತದೆ.

‘ದೂರವೇ ಈ ದೇಶದ ಮಾನದಂಡ’ ಎಂದು ಹೇಳುವಷ್ಟರಮಟ್ಟಿಗೆ ಸಾಮಾಜಿಕ ಅಸಮಾನತೆ ಗಾಢವಾಗಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ ಎಷ್ಟು ದೂರ ನಿಂತಿದ್ದಾನೆ ಎಂಬುದನ್ನು ನೋಡಿದರೆ ಆತ ಯಾರು, ಈತ ಯಾರು ಎಂಬುದನ್ನು ಹೇಳಬಹುದಾಗಿದೆ. ಕೆಲವರನ್ನು ಹಟ್ಟಿಯಲ್ಲಿ ಕೆಲವರನ್ನು ಹಜಾರದ ಬಳಿ, ಕೆಲವರನ್ನು ಹಾಲಿನಲ್ಲಿ ನಿಲ್ಲಿಸುವ ಕ್ರಮದಲ್ಲಿಯೇ ನಮ್ಮ ಶ್ರೇಣಿಗಳು ಕಾಣಿಸಿಕೊಳ್ಳುತ್ತವೆ. ಕೆಲವರನ್ನು ಮಾತ್ರ ಅಡಿಗೆಮನೆಯವರೆಗೆ ಬಿಟ್ಟುಕೊಳ್ಳುವ ‘ಮನೋಧರ್ಮ’ದಲ್ಲಿರುವ ‘ಮೌಲ್ಯ’ ಯಾವುದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದ್ದರಿಂದ ‘ದೂರ’ ಎನ್ನುವುದು ಈ ದೇಶದ ಶ್ರೇಣೀಕರಣದ ಒಂದು ‘ಸಂಕೇತ’ ವಾಗಿದೆ. ಈ ದೇಶದಲ್ಲಿ – ಆರ್ಥಿಕ ಕಾರಣಕ್ಕಷ್ಟೇ ಅಲ್ಲ, ಜಾತಿಯ ಕಾರಣಕ್ಕೆ ಒಂದು ಸಾಮಾಜಿಕ ಸಮೂಹವು ಇನ್ನೊಂದು ಸಮೂಹದ ಮೇಲೆ ಸವಾರಿ ಮಾಡುತ್ತ ಬಂದಿದೆ. ಇದು ಯಾವುದೋ ಎರಡು ಜಾತಿಗಳ ನಡುವಿನ ಅಂತರವಲ್ಲ. ಒಂದರ ಮೇಲೊಂದರಂತೆ ಸವಾರಿ ಮಾಡುವ ಜಾತಿಯ ಶ್ರೇಣೀಕರಣವನ್ನು ನಮ್ಮಲ್ಲಿ ಕಾಣಬಹುದಾಗಿದೆ. ಜಾತಿಯ ಕಾರಣಕ್ಕೇ ಕೆಲವರಿಗೆ ಸಾಮಾಜಿಕ ಘನತೆ ಲಭ್ಯವಾಗಿದ್ದರೆ, ಜಾತಿಯ ಕಾರಣಕ್ಕೇ ಅನೇಕರು ಸಾಮಾಜಿಕ ಗೌರವದಿಂದ ವಂಚಿತರಾಗಿದ್ದಾರೆ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಸ್ವಲ್ಪ ಸುಧಾರಣೆ ಕಾಣುತ್ತಿದೆಯಾದರೂ ಅಸ್ಪೃಶ್ಯತೆ ಪೂರ್ಣವಾಗಿ ನಾಶವಾಗಿಲ್ಲ; ಹಿಂದುಳಿದ ವರ್ಗಗಳ ಸಂಕಷ್ಟ ಪರಿಹಾರವಾಗಿಲ್ಲ. ಎಲ್ಲ ಜಾತಿಗಳಲ್ಲೂ ಬಡವರಿರುತ್ತಾರೆ ಎಂಬುದನ್ನು ಒಪ್ಪುತ್ತಲೇ ಜಾತಿಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿರುವ ‘ಅಂತರ’ದ ಆಘಾತವನ್ನು ಮುಖ್ಯವಾಗಿ ಗಮನಿಸಬೇಕು. ಜಾತಿಯ ಕಾರಣಕ್ಕಾಗಿಯೇ ತುಳಿತಕ್ಕೊಳಗಾದವರ ಬಗ್ಗೆ ಜಾತಿಯನ್ನೇ ಮಾನದಂಡವಾಗಿಟ್ಟುಕೊಂಡು ಸುಧಾರಣೆಯ ಕ್ರಮಗಳನ್ನು ಕೈಗೊಳ್ಳುವುದು ಈ ದೇಶದಲ್ಲಿ ಅನಿವಾರ್ಯ ಹಾಗೂ ಅಗತ್ಯ. ಆದರೆ ಜಾತಿ ಗುರುತಿಸುವಿಕೆ ‘ಜಾತಿವಾದ’ವಾಗಬಾರದು. ಜಾತಿಯ ಹೆಸರಿನಲ್ಲಿ ಇತರರಲ್ಲಿರುವ ಬಡವರನ್ನು ನಿರ್ಲಕ್ಷಿಸಬಾರದು. ಅಂದರೆ ಸಾಮಾಜ ಬಡತನ ಮತ್ತು ಆರ್ಥಿಕ ಬಡತನಗಳೆರಡನ್ನೂ ಆಧಾರವಾಗಿಟ್ಟುಕೊಂಡು ಶ್ರೇಣೀಕೃತ ಸಮಾಜದ ವಿಷವನ್ನು ಹೋಗಲಾಡಿಸಬೇಕು. ಇಂತಹ ಸನ್ನಿವೇಶದಲ್ಲಿ ಮೇಲ್ ಜಾತಿ ಮತ್ತು ಮೇಲ್ ವರ್ಗಗಳು ಮಾಡಿದ ಅನ್ಯಾಯವನ್ನು ಒಂದು ‘ಚಾರಿತ್ರಿಕ ಸಂಭವ’ವನ್ನಾಗಿ ನೋಡಬೇಕೇ ಹೊರತು ಜಾತಿಯ ದ್ವೇಷಕ್ಕೆ ಕಾರಣವಾಗಬೇಕಿಲ್ಲ. ಅದೇ ರೀತಿ ಮೇಲ್ಜಾತಿ-ವರ್ಗಗಳ ಜನರು ತಮ್ಮ ಜಾತಿ ವರ್ಣ-ವರ್ಗಗಳ ಬಗೆಗಿನ ಚಾರಿತ್ರಿಕ ಟೀಕೆಯನ್ನು ವೈಯಕ್ತಿಕ ಮಟ್ಟದಲ್ಲಿ ಪರಿಭಾವಿಸಬೇಕಿಲ್ಲ. ವಾಸ್ತವವಾಗಿ ಇಂಥವರಿಗೆ ‘ಪಾಪಪ್ರಜ್ಞೆ’ ಕಾಡಿಸಬೇಕು. ತಾವು ಅಯಾಚಿತವಾಗಿ ಹುಟ್ಟಿದ ಜಾತಿ-ವರ್ಗಗಳು ಅಯಾಚಿತವಾಗಿ ಮತ್ತೊಂದು ಜಾತಿವರ್ಗದಲ್ಲಿ ಹುಟ್ಟಿದವರನ್ನು ಕೀಳಾಗಿ ಕಾಣುವ ಪರಿಸರವನ್ನು ನಿರ್ಲಿಪ್ತವಾಗಿ ನೋಡಿ ಪಾಪಪ್ರಜ್ಞೆಗೆ ಒಡ್ಡಿಕೊಂಡರೆ ಅದು ಸಾರ್ಥಕವಾದೀತು. ಇದು ಸಾರ್ಥಕ ‘ಜಾತ್ಯತೀತತೆ’ಯಾಗುತ್ತದೆ. ಅಂತೆಯೇ ಕೆಳಜಾತಿಗಳಲ್ಲಿ ಹುಟ್ಟಿದವರು ಜಾತಿಯ ಕಾರಣಕ್ಕೇ ಶೋಷಣೆಯ ಸಂಕಟವನ್ನು ಅನುಭವಿಸಿರುವುದರಿಂದ ಅದೇ ಆಧಾರದ ಮೇಲೆ ವಿಶೇಷ ಸುಧಾರಣ ಕ್ರಮಗಳಿಗೆ ಒತ್ತಾಯಿಸುವುದು ನೂರಕ್ಕೆ ನೂರು ಸರಿಯಾದರೂ, ಇದು ಜಾತಿ ದ್ವೇಷವಾಗದಂತೆ ಜಾತಿವಾದವಾಗದಂತೆ ಸೂಕ್ಷ್ಮಗೆರೆಯೊಂದನ್ನು ಗುರುತಿಸಿ ಕೊಳ್ಳಬೇಕಾಗುತ್ತದೆ. ಮೇಲ್ಜಾತಿಗಳು ಕೆಳಜಾತಿಗಳ ಸಲವತ್ತಿನ ಬಗ್ಗೆಯೇ ಬೊಬ್ಬೆ ಹೊಡೆಯುತ್ತ ಜಾತಿಯ ಆಧಾರದಲ್ಲಿ ಸಲವತ್ತುಗಳು ಯಾಕೆ ಎಂದು ಪ್ರಶ್ನಿಸುತ್ತಿರುವುದನ್ನು ಕಂಡಾಗ ಚರಿತ್ರೆಯನ್ನು ಅರ್ಥಮಾಡಿಕೊಳ್ಳದ ಕುರುಡುವಾದವನ್ನು ಕಂಡಂತಾಗುತ್ತದೆ. ನಾವು ಮೊದಲು ಒಪ್ಪಿಕೊಳ್ಳಬೇಕು: ಈ ದೇಶದಲ್ಲಿ ಜಾತಿಗಳಿವೆ; ವರ್ಗಗಳಿವೆ. ಜಾತಿಯ ಕಾರಣಕ್ಕೆ ಅನೇಕ ಜಾತಿ ಬಾಂಧವರು, ವರ್ಗದ ಕಾರಣಕ್ಕೆ ಅನೇಕ ಬಡವರು ತುಳಿತಕ್ಕೊಳಗಾಗಿದ್ದಾರೆ. – ಈ ಸತ್ಯದ ಆಧಾರದ ಮೇಲೆ ಕೆಳಜಾತಿ ಮತ್ತು ವರ್ಗಗಳ ಬಗ್ಗೆ ವಿಶೇಷ ಕಾಳಜಿ ವಹಿಸದಿದ್ದರೆ ಅದು ಮಾನವೀಯ ಸಮಾಜವೇ ಅಲ್ಲ, ಈ ವಿಶೇಷ ಕಾಳಜಿ ಮತ್ತು ಕಾರ್ಯಕ್ರಮಗಳ ಮೂಲಕ ಜಾತ್ಯತೀತ ವರ್ಗಾತೀತ ನೆಲೆಗೆ ಸಮಾಜವನ್ನು ಕೊಂಡೊಯ್ಯುವ ಬಗ್ಗೆ ಎಲ್ಲ ಜಾತಿ-ವರ್ಗದವರೂ ಕ್ರಿಯಾಶೀಲವಾಗಬೇಕು. ನಾನು ಮೊದಲೇ ಹೇಳಿದಂತೆ ಜಾತಿಯ ಗುರುತಿಸುವಿಕೆಯು ಆ ಗೆರೆಯನ್ನು ದಾಟಿ ಜಾತಿವಾದವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಜಾತಿ ಸಲವತ್ತುಗಳು ಜಾತಿ ಸಂಘರ್ಷವಲ್ಲವೆಂಬ ತಿಳುವಳಿಕೆ ಮೂಡಬೇಕಾಗಿದೆ. ಇಂತಹ ಸಂಕೀರ್ಣ ಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಸರಳವಾಗಿ ಇದು ಜಾತ್ಯತೀತ ರಾಷ್ಟ್ರವಾದ್ದರಿಂದ ಜಾತಿಯ ಹೆಸರು ಯಾಕೆ ಬೇಕು ಎಂದು ಕೇಳುವುದು ಸರಿಯಾದ ಚಿಂತನೆಯಿಲ್ಲ.

‘ಜಾತ್ಯತೀತತೆ’ ಎನ್ನುವುದು ನಾವು ತಲುಪಬೇಕಾದ ಆದರ್ಶದ ಪರಿಕಲ್ಪನೆ. ಈಗಾಗಲೇ ತಲುಪಿರುವ ಸ್ಥಿತಿಯಲ್ಲ. ಎರಡೇ ಜಾತಿಗಳೋ ಎರಡೇ ವರ್ಗಗಳೋ ಇದ್ದಾಗ ಸಮಾನತೆಯ ಮಾತು ಸುಲಭವಾದೀತು. ಆದರೆ ಬಹುಜಾತಿ, ಬಹುಧರ್ಮ, ಬಹುಸಂಸ್ಕೃತಿಗಳ ನಾಡಿನಲ್ಲಿ ಸಮಾನತೆಯ ಕಲ್ಪನೆ ಮತ್ತು ಸ್ಥಾಪನೆ ಸರಳವಲ್ಲ. ‘ಜಾತ್ಯತೀತತೆ’ ಎನ್ನುವುದು ಸಹಜವಾಗಿಯೇ ತುಳಿತಕ್ಕೊಳಗಾದ ಜಾತಿ-ಜನಾಂಗಗಳ ಪರವಾದ ಪರಿಕಲ್ಪನೆಯಾಗಿ ಪ್ರಕಟಗೊಳ್ಳುತ್ತ ಬಂದಿದ್ದರೂ ಅಂತಿಮವಾಗಿ ಜಾತಿ-ಧರ್ಮಗಳ ಸಮಾನತೆಯನ್ನು ಹೇಳುತ್ತದೆ. ‘ಜಾತ್ಯತೀತತೆ’ಯು ಸಮಾನತೆಯತ್ತ ಇಟ್ಟ ಒಂದು ಗಟ್ಟಿಹೆಜ್ಜೆ ಎಂಬುದನ್ನು ಮೇಲ್ ಜಾತಿ ವರ್ಗಗಳು ಮತ್ತು ಕೆಳಜಾತಿ ವರ್ಗಗಳು ಒಟ್ಟಿಗೇ ಅರ್ಥಮಾಡಿಕೊಂಡಾಗ ಅದಕ್ಕೊಂದು ಅರ್ಥಪೂರ್ಣತೆ ಬರುತ್ತದೆ. ಒಂದು ಜಾತಿಯ ಅವಹೇಳನವೇ ಜಾತ್ಯಾತೀತತೆಯಲ್ಲ, ಅದೊಂದು ಪ್ರಬುದ್ಧ ಪರಿಕಲ್ಪನೆ ಎಂಬುದನ್ನು ಎಲ್ಲರೂ ತಿಳಿಯಬೇಕಾಗಿದೆ. ಈ ರೀತಿಯ ತಿಳುವಳಿಕೆಯುಳ್ಳ ಕೆಳಜಾತಿಗಳಿಗೆ ಸಮಾನತೆಯ ಆಶಯದೊಂದಿಗೆ ಸಮಚಿತ್ತ ಲಭ್ಯವಾದರೆ ಮೇಲ್ ಜಾತಿಗಳಿಗೆ ಪಾಪಪ್ರಜ್ಞೆ ಕಾಡಿಸಿ ಕೆಳಜಾತಿ-ವರ್ಗಗಳ ಜೊತೆ ಗುರುತಿಸಿಕೊಳ್ಳುವ ಮನೋವೈಶಾಲ್ಯ ಬೆಳೆಯುತ್ತದೆ. ಬುದ್ಧ, ಬಸವಣ್ಣ, ಗಾಂಧಿ-ಇವರಿಗೆ ಕಾಡಿಸಿದ ಪಾಪಪ್ರಜ್ಞೆ ಇಂದು ಚಾರಿತ್ರಿಕ ಮಹತ್ವ ಪಡೆದಿರುವುದನ್ನು ಗಮನಿಸಬಹುದು.

ಜಾತಿಗೂ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳಿಗೂ ಈ ದೇಶದಲ್ಲಿ ಸಂಬಂಧವಿರುವುದರಿಂದ ಜಾತಿಯನ್ನು ಒಂದು ಸಾಮಾಜಿಕ ವಾಸ್ತವವೆಂದು ಗುರುತಿಸುತ್ತ, ಜಾತಿಯನ್ನು ಮೀರಿ ಜಾತ್ಯತೀತವಾಗುವ ಕ್ರಮಗಳನ್ನು ಚಿಂತಿಸುವುದೇ ಇಂದಿನ ಮುಖ್ಯ ಸಮಸ್ಯೆ ಹಾಗೂ ಸವಾಲು. ಇದು ವಿವೇಕ ಮತ್ತು ಔಚಿತ್ಯದ ಪ್ರಶ್ನೆ, ಸರಳರೇಖೆಯ ಪ್ರಶ್ನೆಯಲ್ಲ. ಯಾಕಾಗಿ ಮತ್ತು ಎಲ್ಲಿಯವರೆಗೆ ಜಾತಿಯ ಗುರುತಿಸುವಿಕೆ ಸಾಧುವಾದುದು ಎಂಬ ವಿವೇಕವನ್ನು ಕಂಡುಕೊಂಡು ಔಚಿತ್ಯದಿಂದ ಮುನ್ನಡೆಯುವ ಅಗತ್ಯವಿದೆ.

ಧರ್ಮ ನಿರಪೇಕ್ಷತೆಯನ್ನೂ ಜಾತ್ಯಾತೀತ ಪರಿಕಲ್ಪನೆಯ ಭಾಗವಾಗಿ ನೋಡಲಾಗುತ್ತಿದೆ. ಇದು ಸರಿಯಾದುದೂ ಹೌದು. ಧರ್ಮವೊಂದರಲ್ಲಿ ಗುರುತಿಸಿಕೊಂಡಿದ್ದರೂ ಧರ್ಮಾಂಧರಾಗದೇ ಇರುವುದು, ಇನ್ನೊಂದು ಧರ್ಮವನ್ನು ದ್ವೇಷಿಸದೆ ಇರುವುದು, ಧರ್ಮದ ಆಧಾರದ ಮೇಲೆ ಆಕ್ರಮಣಶೀಲರಾಗದೆ ಇರುವುದು ಅಂದರೆ ಧರ್ಮವನ್ನು ಒಳಗಿನ ಭಾಗವಾಗಿಸಿಕೊಂಡು ‘ನಿರಪೇಕ್ಷ’ ನೆಲೆಯಲ್ಲಿ ಬದುಕುವುದು – ಈ ‘ಧರ್ಮನಿರಪೇಕ್ಷತೆ’ ಅಥವಾ ಒಟ್ಟಾರೆ ‘ಜಾತ್ಯತೀತತೆ’ಯ ಅರ್ಥವಲಯವೆಂದು ನಾನು ಭಾವಿಸುತ್ತೇನೆ.

ಯಾವುದೇ ಜಾತಿಯಲ್ಲಿ ಅಥವಾ ಧರ್ಮದಲ್ಲಿ ಗುರುತಿಸಿಕೊಳ್ಳದೆ ಇರುವುದು ಅತ್ಯಂತ ಆದರ್ಶದ ಅಪೇಕ್ಷಣೀಯ ನೆಲೆ. ಇದು ಎಲ್ಲರಿಗೂ ಸಾಧ್ಯವಾಗದೆ ಇರುವ ಸಂಕೀರ್ಣ ಸನ್ನಿವೇಶದಲ್ಲಿ ನಾವಿರುವುದರಿಂದ ಜಾತಿಯಲ್ಲಿ ಹುಟ್ಟಿಯೂ ಜಾತಿವಾದಿಯಾಗದೆ, ಧರ್ಮವೊಂದರ ಭಾಗವಾಗಿಯೂ ಧರ್ಮಾಂಧರಾಗದೆ ಬದುಕುವುದನ್ನು ಜಾತ್ಯತೀತತೆ ಮತ್ತು ಧರ್ಮ ನಿರಪೇಕ್ಷ ನೆಲೆಗಳೆಂದು ಗುರುತಿಸಲಾಗುತ್ತಿದೆ. ಆದರೆ ನಾನು ವೈಯಕ್ತಿಕವಾಗಿ ಜಾತಿ ಮತ್ತು ಧರ್ಮಗಳನ್ನು ಮೀರಿದ ಮನುಷ್ಯ ಮಾತ್ರನಾಗಲು ಇಚ್ಛಿಸುತ್ತೇನೆ.

ಅದೇನೇ ಇರಲಿ; ಈಗ ಧರ್ಮಗಳ ವಿಷಯಕ್ಕೆ ಬಂದಾಗ ಕೇಳಿಬರುವ ಬಹುಸಂಖ್ಯಾತ ಧರ್ಮಿಯರ ಮಾತುಗಳನ್ನು ಗಮನಿಸೋಣ. ‘ಕೆಲವರು ಮಸೀದಿ, ಚರ್ಚುಗಳಿಗೆ ಧಕ್ಕೆಯಾದಾಗ ಮಾತ್ರ ಬೊಬ್ಬೆ ಹೊಡೆಯುತ್ತಾರೆ. ಮಂದಿರಕ್ಕೆ ಧಕ್ಕೆಯಾದಾಗ ಸುಮ್ಮನಿರುತ್ತಾರೆ. ಇವರು ಸೋಗಲಾಡಿ ಜಾತ್ಯತೀತರು’ ಎಂಬರ್ಥದ ಮಾತುಗಳನ್ನು ಅನೇಕರು ಅನೇಕ ವಿಧಗಳಲ್ಲಿ ಹೇಳುತ್ತ ಬಂದಿದ್ದಾರೆ. ಜಾತಿಗಳಲ್ಲಿ ಮೇಲ್ ಜಾತಿಯವರು, ವರ್ಗಗಳಲ್ಲಿ ಮೇಲ್ ವರ್ಗದವರು, ಧರ್ಮಗಳಲ್ಲಿ ಬಹುಸಂಖ್ಯಾತ ಧರ್ಮದವರು ಆಕ್ರಮಣಶೀಲರಾದಾಗ ಅಸಹನೆಯ ಆತುರ ತೋರಿದಾಗ ಇಂತಹ ವಿತಂಡವಾದಗಳು ಹುಟ್ಟುತ್ತವೆ. ಈ ರೀತಿಯ ಮಾತುಗಳು ಬುದ್ಧ ಬಸವಣ್ಣಾದಿಗಳ ಪಾಪಪ್ರಜ್ಞೆಯ ನೆಲೆಯನ್ನು ಅರ್ಥಮಾಡಿಕೊಳ್ಳದೆ ಜಾತ್ಯತೀತ ಹಾಗೂ ಧರ್ಮ ನಿರಪೇಕ್ಷ ಪರಿಕಲ್ಪನೆಯ ಪ್ರಬುದ್ಧತೆಯನ್ನು ಅಲ್ಲಗಳೆಯಲು ಹವಣಿಸುತ್ತವೆ. ನನ್ನ ಮುಂದಿನ ಮಾತುಗಳಿಗೆ ಮುಂಚೆಯೇ ಧಾರ್ಮಿಕ ಮೂಲಭೂತವಾದದ ಬಗ್ಗೆ ನನ್ನ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ನಾನು ಯಾವುದೇ ಧರ್ಮಿಯರ-ಅಂದರೆ ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಮೂಲಭೂತವಾದವನ್ನು ವಿರೋಧಿಸುತ್ತೇನೆ. ಆದರೆ ಲಾಡೆನ್‌ ಕಾರಣಕ್ಕೆ ಇಡೀ ಮುಸ್ಲಿಮರನ್ನು ವಿರೋಧಿಸುವುದಿಲ್ಲ. ಯಾಕೆಂದರೆ ‘ಲಾಡೆನ್‌ನ ಇಸ್ಲಾಂ’ ಬೇರೆ ‘ಪೈಗಂಬರ್ ಇಸ್ಲಾಂ’ ಬೇರೆ. ಅಂತೆಯೇ ಗಾಂಧೀಜಿಯವರ ಹಿಂದೂಧರ್ಮ ಬೇರೆ, ಗೋಡ್ಸೆ ಹಿಂದೂಧರ್ಮ ಬೇರೆ. ಇದನ್ನು ಅರ್ಥಮಾಡಿಕೊಳ್ಳದೆ ಧರ್ಮದ ಹೆಸರಿನಲ್ಲಿ ಯಾರೇ ಜನಾಂಗ ದ್ವೇಷವನ್ನು ಬಿತ್ತಿದರೂ ಅದು ವಿರೋಧಾರ್ಹವಾದುದು.

ಆದರೆ, ಬಹುಸಂಖ್ಯಾತ ಧರ್ಮಿಯರು ಮತ್ತು ಅಲ್ಪಸಂಖ್ಯಾತ ಧರ್ಮಿಯರ ಸಮಸ್ಯೆಗಳ ಸ್ವರೂಪ ಏಕರೀತಿಯದಾಗಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ದೇಶದಲ್ಲಿ ಹೇಗೆ ಕೆಳಜಾತಿಗಳು ಮತ್ತು ಕೆಳವರ್ಗಗಳು ಆತಂಕದ ನಡುಕದಲ್ಲಿ ಬದುಕುತ್ತಾರೊ ಹಾಗೆಯೇ ಅಲ್ಪಸಂಖ್ಯಾತ ಧರ್ಮಿಯರು ಅಭದ್ರತೆಯ ಅಳುಕಿನಲ್ಲಿ ಬದುಕುತ್ತಿರುತ್ತಾರೆ. ಬಹುಸಂಖ್ಯಾತ ಧರ್ಮಿಯರ ಆಕ್ರಮಣಶೀಲತೆ ಹೆಚ್ಚಾದಂತೆ ಅಲ್ಪಸಂಖ್ಯಾತ ಧರ್ಮಿಯರು ಒಗ್ಗಟ್ಟಾಗುತ್ತ ಅಳುಕಿನಿಂದ ಮತ್ತಷ್ಟು ಆಕ್ರಮಣಶೀಲರಾಗುತ್ತಾರೆ. ಇದೇ ಸಂದರ್ಭದಲ್ಲಿ ಎರಡೂ ಕಡೆ ಸಾಮರಸ್ಯ ಪ್ರೇಮಿಗಳು ಇದ್ದೇ ಇರುತ್ತಾರೆ. ಮೂಲಭೂತವಾದಿಗಳ ವಿಜೃಂಭಣೆಯಲ್ಲಿ ಅವರು ಹಿನ್ನೆಲೆಗೆ ಸರಿಸಲ್ಪಟ್ಟಿರುತ್ತಾರೆ. ಆದ್ದರಿಂದ ಇಲ್ಲಿ ವಿರೋಧ ಇರಬೇಕಾದ್ದು ಧಾರ್ಮಿಕ ಮೂಲಭೂತವಾದಿಗಳ ಬಗ್ಗೆ, ಮುಸ್ಲಿಮರ ಒಗ್ಗಟ್ಟಿನ ಬಗೆಗೆ ಮಾತನಾಡುತ್ತ ಇಡೀ ಹಿಂದೂಧರ್ಮಿಯರನ್ನು ಮೂಲಭೂತವಾದಿಗಳನ್ನಾಗಿಸುವ ಹುನ್ನಾರಗಳು ನಡೆಯುತ್ತಿರುವುದೇ ಇಂದಿನ ಆತಂಕಕಾರಿ ಬೆಳವಣಿಗೆಯಾಗಿದೆ. ಧಾರ್ಮಿಕ ಸಾಮರಸ್ಯದ ಪರಂಪರೆಯ ಪಠಣ ಮಾಡುತ್ತಲೇ ಅತ್ಯಂತ ಆವೇಶದ ವಿವೇಕರಹಿತ ಕಾರ್ಯಾಚರಣೆಗೆ ತೊಡಗುವುದು ಎಷ್ಟು ಉಚಿತವಾದುದು? ಮಸೀದಿಯನ್ನು ಕೆಡವಿ ಶ್ರೀರಾಮದೇವಾಲಯ ಕಟ್ಟುವುದು ಧರ್ಮವೆ? ಅಥವಾ ಧರ್ಮ ಎನ್ನುವುದು ಕೇವಲ ದೇವಾಲಯಗಳಲ್ಲಿದೆಯೆ ? ಸದಾ ಶ್ರೀರಾಮನನ್ನು ಸ್ಮರಿಸುತ್ತ ಬದುಕಿದ ಗಾಂಧೀಜಿ ಎಂದೂ ಇತರೆ ಧರ್ಮಿಯರಿಗೆ ಭಂಗ ತರಲಿಲ್ಲ. ‘ಉಳ್ಳವರು ಶಿವಾಲಯವ ಮಾಡುವರು’ ಎಂದು ಹೇಳಿದ ಬಸವಣ್ಣ ‘ದೇಹವೇ ದೇವಾಲಯ’ವೆಂದು ಸಾರಿದರು. ‘ಭಕ್ತಿಯೆಂಬುದು ತೋರುಂಬ ಲಾಭ’ವಾಗಿದೆಯೆಂದು ಅಂದೇ ಅಲ್ಲಮಪ್ರಭು ವ್ಯಾಖ್ಯಾನಿಸಿದರು. ದೇವರ ಬಗ್ಗೆ ಮೌನವಹಿಸಿದ ‘ಬುದ್ಧ’ ನಮ್ಮ ಪರಂಪರೆಯ ಭಾಗವಾಗಿ ಪ್ರಸ್ತುತವಾಗಿರುವುದು ಇಂದಿನ ವಾಸ್ತವ. ಇವರೆಲ್ಲರನ್ನು ಕಾಡಿದ ಪಾಪಪ್ರಜ್ಞೆಯೇ ನಮ್ಮ ದೇಶದ ದೊಡ್ಡ ಪರಂಪರೆ. ಇದನ್ನು ನಾವ್ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ?

ಶ್ರೀರಾಮ ದೇವಾಲಯದ ನಿರ್ಮಾಣವನ್ನು ರಾಷ್ಟ್ರೀಯತೆಯ ಸಂಕೇತವೆಂದು ಬಿಂಬಿಸುವುದೇ ಒಂದು ತತ್ವಹೀನತೆ. ಯಾಕೆಂದರೆ ನಮ್ಮ ‘ರಾಷ್ಟ್ರೀಯತೆ’ಯು ಒಂದು ದೇವಾಲಯವನ್ನು ಆಧರಿಸಿಲ್ಲ. ಬಹುರೂಪತೆಯೇ ನಮ್ಮ ರಾಷ್ಟ್ರೀಯತೆ. ಇದಕ್ಕೆ ಎಲ್ಲ ಧರ್ಮಿಯರೂ ಬದ್ಧವಾಗಿರಬೇಕು. ಬದ್ಧವಾಗಿಲ್ಲ ಎನ್ನಿಸಿದಾಗ ಬುದ್ಧಿ ಹೇಳಬೇಕು; ಸೇಡು ಮತ್ತು ಸಂಘರ್ಷಗಳ ನೆಲೆಯಲ್ಲಿ ರಾಷ್ಟ್ರೀಯತೆಯನ್ನು ಮೆರೆಯುತ್ತೇವೆನ್ನುವುದು ವಿವೇಕದ ಹಾದಿಯಲ್ಲ. ನಮ್ಮ ದೇಶದ ಬಹು ಪಾಲು ತಾತ್ವಿಕರು, ಸಂತರು ತೋರಿದ ಬೆಳಕು ಇದಲ್ಲ. ದೇವರು ಇದ್ದಾನೊ ಇಲ್ಲವೊ ಎಂಬ ಚರ್ಚೆಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ ದೇವರು ಹುಟ್ಟಿದ ಜಾಗಗಳನ್ನು ಹುಡುಕುತ್ತ ಹುಯಿಲೆಬ್ಬಿಸುವುದು ಧರ್ಮವೂ ಅಲ್ಲ. ಧಾರ್ಮಿಕತೆಯೂ ಅಲ್ಲ. ಇದೇ ಮಾದರಿಯನ್ನು ಮುಸ್ಲಿಮರು ಅನುಸರಿಸಿದರೂ ಅದು ತಪ್ಪು, ಧರ್ಮ ಮತ್ತು ಧಾರ್ಮಿಕತೆಯನ್ನು ‘ಭಕ್ತಿ’ಯ ವಿಷಯವಾಗಿಸುವ ಬದಲು ‘ಹುಸಿಪ್ರತಿಷ್ಠೆ’ಯ ವಿಷಯವನ್ನಾಗಿಸುವುದು ರಾಷ್ಟ್ರೀಯ ವಿರೋಧಿ ಕ್ರಮವಷ್ಟೇ ಅಲ್ಲ; ಅಧಾರ್ಮಿಕವೂ ಹೌದು.

ಮೇಲ್ಜಾತಿ, ಮೇಲ್ವರ್ಗ ಮತ್ತು ಬಹುಸಂಖ್ಯಾತ ಧರ್ಮಿಯರಿಗೆ ಅಹಂಕಾರ ಮತ್ತು ಆಕ್ರಮಣಶೀಲತೆಗಳು ಬಂದರೆ, ಅವು ಯಾವತ್ತೂ ಅಪಾಯಕಾರಿಯಾಗುತ್ತವೆ. ಸಮಾನತೆ ಮತ್ತು ಸಾಮರಸ್ಯದ ಚಿಂತನೆಗಳು ಮೇಲಂತಸ್ತಿನವರ ಒಳಿತಿನಲ್ಲಿ ಹುಟ್ಟುವುದಿಲ್ಲ: ಬಹುಸಂಖ್ಯಾತರ ಬುದ್ಧಿಗನುಗುಣವಾಗಿ ರೂಪುಗೊಳ್ಳುವುದಿಲ್ಲ. ಸಂಕೀರ್ಣ ಸ್ವರೂಪದ ನಮ್ಮ ದೇಶದಲ್ಲಿ ಸಮಾನತೆ ಮತ್ತು ಸಾಮರಸ್ಯದ ಕಲ್ಪನೆಗಳು ಕೆಳಜಾತಿ, ಕೆಳವರ್ಗ ಮತ್ತು ಅಲ್ಪಸಂಖ್ಯಾತರ ನೆಲೆಯಿಂದ ಅರ್ಥ ಪಡೆದುಕೊಳ್ಳುತ್ತ ಬೆಳೆಯುತ್ತವೆ. ಇದು ನಮ್ಮ ದೇಶದ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ ತಾನಾಗಿಯೇ ತಿಳಿಯುತ್ತದೆ. ಆದ್ದರಿಂದ ಮಸೀದಿ ಮತ್ತು ಚರ್ಚುಗಳಿಗೆ ಧಕ್ಕೆಯಾದಾಗ ಮಾತನಾಡುತ್ತಾರೆಂದು ಎಲ್ಲ ಜಾತ್ಯತೀತವಾದಿಗಳನ್ನು ಸಾರಾಸಗಟಾಗಿ ಹೀಗಳೆಯುತ್ತ ಬಹುಸಂಖ್ಯಾತ ಧರ್ಮೀಯರ ಆಕ್ರಮಣಶೀಲತೆಯನ್ನು ಸಮರ್ಥಿಸಲಾಗದು. ಮಂದಿರವಾಗಲಿ, ಮಸೀದಿಯಾಗಲಿ, ಚರ್ಚಾಗಲಿ ಹಾನಿಗೊಳಗಾದಾಗ ವಿರೋಧಿಸಬೇಕೆಂದು ನಿರೀಕ್ಷಿಸುವುದು ಸರಿಯಾದುದು. ಆದರೆ ಈ ನಿರೀಕ್ಷೆಯ ನೆಲೆಗಳನ್ನು ಮೀರಿ ಶ್ರೀರಾಮ ಜನ್ಮ ಭೂಮಿಯ ಸಮಸ್ಯೆ ಬೆಳೆದಿದೆ ಎಂಬುದನ್ನು ಮರೆಮಾಚಲಾಗದು.

ರಾಷ್ಟ್ರೀಯತೆ ಎಂದರೆ ಕೇವಲ ಹಿಂದೂಧರ್ಮದ ಪ್ರತಿಷ್ಠೆಯ ಪ್ರತಿಪಾದನೆಯಲ್ಲ. ಜಾತ್ಯತೀತತೆ ಎಂದರೆ ಯಾವೊಂದು ಜಾತಿಯ ಪ್ರಾಬಲ್ಯವೂ ಅಲ್ಲ. ಧರ್ಮನಿರಪೇಕ್ಷತೆ ಎಂದರೆ ಧರ್ಮಗಳ ಜಗಳವಲ್ಲ. ಜಾತಿ, ವರ್ಗ ಹಾಗೂ ಮತಧರ್ಮಗಳೇ ಇಲ್ಲದ ಸ್ಥಿತಿಯೊಂದು ಬಂದರೆ ನನ್ನಂಥವರಿಗೆ ಖಂಡಿತ ಸಂತೋಷವಾಗುತ್ತದೆ. ಆದರೆ ಅಂತಹ ಸನ್ನಿವೇಶದ ಸಾಧ್ಯತೆ ಇಲ್ಲದಿರುವಾಗ ನಾವು ಜಾತ್ಯತೀತತೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದೇ ನಮ್ಮೆದುರಿನ ಪ್ರಶ್ನೆ. ನಮ್ಮ ಸಂವಿಧಾನ ಸಹ ಜಾತಿ ಮತ್ತು ಧರ್ಮಗಳ ಸಮಾನತೆಯ ಆಶಯವನ್ನು ಸಾದರಪಡಿಸುತ್ತದೆ. ಮೇಲುಗೈ ವಾದವನ್ನು ನಿರಾಕರಿಸುತ್ತದೆ. ಪರಂಪರಾಗತ ಪ್ರತಿಷ್ಠೆ ಯಿಂದ ಅಸಮಾನತೆಯನ್ನು ವಿಸ್ತರಿಸುತ್ತ ಬಂದ ಜಾತಿ, ವರ್ಗ ಮತ್ತು ಮತಧರ್ಮಗಳ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಸಮತೋಲನ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಜಾತ್ಯತೀತ ಮತ್ತು ಧರ್ಮ ನಿರಪೇಕ್ಷತೆಯ ಪಾಠ ಪ್ರಾರಂಭವಾಗಬೇಕಾದ್ದು ಇಲ್ಲಿಂದಲೇ ಎಂದು ಅರ್ಥಮಾಡಿಕೊಳ್ಳಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೪
Next post ತ್ಯಾಗ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…