ತಿರುಗಿ ಬಾ! ಹೃದಯವೇ! ಹುಲ್ಲುಮಾನವರೊಡನೆ
ದಂದುಗವು ಸರಿಬರದು. ನಿನ್ನ ಪಲ್ಲವನೇತ್ರ
ಬೆಳಗುಜಾವವಿದೆಂದು ಮೋಹಗೊಂಡಿತು ಮಾತ್ರ.
ಅಲ್ಲಿಹುದು ಕತ್ತಲೆಯ ಮೊನೆ, ಹೇಯವಿಹ ನಟನೆ!
ತಿರುಗಿ ಬಾ: ತ್ಯಜಿಸಿಬಿಡು ರಜನಿಯನು, ಆ ಮೃಡನೆ
ಮುಟ್ಟದಿಹ ಬೂದಿಯನು. ಇನ್ನು ಮೌನವೆ ಸೂತ್ರ-
ವಾಗಿರಲಿ. ಅಂತಿರಲು ಈಶಕರುಣೆಗೆ ಪಾತ್ರ-
ವಾಗುವುದು ದಿಟ. ಹೃದಯವೇ! ಇನ್ನು ನೆನೆಯಿದನೆ!
ಮೌನವದು ಗಾನವನು ಹೊಂಬಸಿರಿನಲಿ ಹೊತ್ತು
ವಿಶ್ವವನೆ ರಚಿಸುವ ಮಹಾಶಕ್ತಿ; ಉರವಣಿಸಿ
ಕೊನೆಗೊಮ್ಮೆ ಭುವನವನೆ ಬೆಳಗಿಸುವ ಚಿನ್ಮಾಯೆ.
ಒಮ್ಮೆ ಕೊನರಲದಿಂತು ಆದಿಮೌನದ ಬಿತ್ತು,-
ಬಿಡಬಹುದು ಹದಿನಾಲ್ಕು ಲೋಕದವರನು ತಣಿಸಿ.
ಈ ದೇವಗರ್‍ಭ ಮೊಳೆವಂತೆ ಕರುಣಿಸು ತಾಯೆ !
*****



















