ಮೂಲ: ಕಾಳೀಕೃಷ್ಣ ಗುಹ
ಗಾಳೀಮರದ ಬಗ್ಗೆ ಸ್ವಲ್ಪ ಹೇಳುತ್ತೇನೆ
ಸ್ಕೂಲಿನ ಬಳಿ ಹಾಯುವ ವಿಶಾಲ ರಸ್ತೆಯ ಬಗ್ಗೆ
ಎತ್ತರದ ದನಿಯಲ್ಲಿ ಒಟ್ಟಾಗಿ ಹಾಡುವ
ಪುಟ್ಟ ಮಕ್ಕಳ ಬಗ್ಗೆ
ಹಾಗೆಯೇ ಜೊತೆಗೆ
ಗಾಳೀಮರದ ಬಗ್ಗೆ.
ರಾತ್ರಿ ಗಾಳೀಮರ ಕತ್ತಲಲ್ಲಿ ಮುಳುಗುತ್ತದೆ
ಆಗ ಬೀಸುವ ಗಾಳಿ ಮರಕ್ಕೆ ಢಿಕ್ಕೀ ಹೊಡೆದು
ನಾದವೇಳುತ್ತದೆ.
ಅದರಿಂದ ಮರದ ಅಸ್ತಿತ್ವ ತಿಳಿಯುತ್ತದೆ.
ಮಾರನೆ ಬೆಳಿಗ್ಗೆ ಮತ್ತೆ ಎಂದಿನಂತೇ ಅವು
ಕಣ್ಣು ಸೆಳೆಯುತ್ತವೆ
ಹಕ್ಕಿಗಳೂ ಇವೆ ಜೊತೆಗೆ
ಎಷ್ಟು ತಾನೇ ಹೀಗೆ ಹೇಳಲಾದೀತು?
ಆ ದಾರಿಯನ್ನು ನಿಮಗೆ
ತೋರಿಸುವ ಆಸೆ ನನಗೆ,
ಹಾಗೇ ಆ ಸ್ಕೂಲನ್ನು
ಹಾಡುವ ಮಕ್ಕಳನ್ನು
ದಾರಿ ಬದಿ ನಿಂತ ಆ ಗಾಳೀಮರಗಳನ್ನು
ಆ ಮೌನವನ್ನು.
ನಮ್ಮ ಗೋಳಿನ ಕಥೆಯನ್ನೆಲ್ಲ ಹೇಳಿದ್ದಾಯ್ತು
ನಾವು ಸಾಗಿದ ದಾರಿಯನ್ನು ತಿಳಿಸಿದ್ದಾಯ್ತು
ಒಂದು ಅಧ್ಯಾಯ ಮುಗಿದದ್ದಾಯ್ತು ಈಗ,
ಎರಡನೆಯದು ಇನ್ನೇನು ಶುರುವಾಗಬೇಕು;
ತಾರೆಗಳು ತಲೆಮೇಲೆ ಫಳಫಳಿಸುತ್ತ ಇವೆ
ಮಾತು ಕೂಡಾ ಕತ್ತಲಾಗಿ ಹೋಗುತ್ತಿದೆ
ಮೌನದಲ್ಲಿ………
*****
















