ಸುಂದರ ಸಂಜೆ
ಸಂತಸದ ತಂಗಾಳಿ
ಸೊಗಸಾದ ಆಗಸ
ಗಗನದ ತುಂಬಮುಗಿಲುಗಳು
ಸಣ್ಣವು ದೊಡ್ಡವು ಬಿಳಿಯವು ಕರಿಯವು
ಬಾನಿನ ಹಾಲ್ಗಡದಲ್ಲಿ ತೇಲುವ ಬೆಣ್ಣೆಗಳು
ಅಂತರಿಕ್ಷದ ಅರಮನೆಯಲ್ಲಿ
ಭಾರಿ ಔತಣಕೂಟ
ಮೋಡಗಳ ಓಡಾಟ, ಮಿಂಚಿನ ದೀಪಾಲಂಕಾರ
ಗುಡುಗಿನ ಅಬ್ಬರದ ಸಂಗೀತ
ಸುಖದ ಪರಮಾವಧಿ!
ಗುಡುಗು, ಮಿಂಚು, ಸಿಡಿಲು
ಸಂಭ್ರಮವೋ ಸಂಭ್ರಮ
ಒಮ್ಮೆಲೇ ಸ್ತಬ್ಧ! ಒಡನೆಯೇ ಶಬ್ದ!
ಧೋ ಎಂದು ಮಳೆ
ರಾತ್ರಿ ಎಲ್ಲ ಎಡೆಬಿಡದೆ ಸುರಿದು,
ಬೀದಿಗಳಲ್ಲಿ ಹರಿದು,
ಎಲ್ಲಿಯೋ ಕಣ್ಮರೆ.
ಬೆಳಗಾದಾಗ ಗಗನದಲಿ ಯಾರಿಲ್ಲ
ಮೋಡವಿಲ್ಲ,
ಮಳೆಯಿಲ್ಲ,
ಮಿಂಚಿಲ್ಲ,
ಗುಡುಗಿಲ್ಲ!
ನೀರಸ ವಾತಾವರಣ ತುಂಬಿದ ಆವರಣ
ರಾತ್ರಿ ಔತಣ ನಡೆಯಲೇ ಇಲ್ಲವೆ
ಎನಿಸುವ ನಿರ್ಮಲ ಆಕಾಶ!
*****
೨೮-೦೩-೧೯೭೫