ಎಷ್ಟೊಂದು ಅಬ್ಬರ, ಎಷ್ಟೊಂದು ನೊರೆ ತೆರೆ

ಎಷ್ಟೊಂದು ಅಬ್ಬರ, ಎಷ್ಟೊಂದು ನೊರೆ ತೆರೆ

ವರ್‍ಷದಲ್ಲಿ ಲೆಕ್ಕಹಾಕಿ ನೋಡಿದರೆ ಕವನ ಸಂಕಲನಗಳ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಅಂದರೆ ಕಾವ್ಯ ಕಟ್ಟುವವರ ಸಂಖ್ಯೆ ಹೆಚ್ಚಾಗಿಯೇ ಕಾಣಿಸುತ್ತದೆ.

ಚಳವಳಿಯ ಹಿನ್ನೆಲೆಯಿಂದ, ತಾತ್ವಿಕ ಹಿನ್ನೆಲೆಯಿಂದ ವಿಪುಲವಾಗಿ ಸೃಷ್ಟಿಯಾದ ಕಾವ್ಯದ ಹುಲುಸಾದ ಬೆಳೆ ಬಹುತೇಕರಿಗೆ ನಿರಾಶೆ ತಂದಂತಾಗಿ, ಕಾವ್ಯ ಸ್ಥಗಿತಗೊಳ್ಳುತ್ತಿದೆ ಎಂಬ ಮಾತನ್ನು ಆಡತೊಡಗಿದರು. ಕಾವ್ಯಕ್ಕೆ ಇನ್ನು ಭವಿಷ್ಯವಿಲ್ಲ ಎಂಬ ನಿರಾಶಾದಾಯಕ ಮಾತುಗಳು ಅಲ್ಲಲ್ಲಿ ಕೇಳಿಬಂದವು. ನವ್ಯವಿಮರ್ಶಕರಲ್ಲಿ ಹಲವರು ಮತ್ತೆ ಬೇಂದ್ರಯಂತಹವರ ಪುನರನ್ವೇಷಣೆಗೆ ತಿರುಗತೊಡಗಿ, ಹೊಸ ಕಾವ್ಯವನ್ನು ನೋಡದೆ ಇರುವುದಕ್ಕೆ ಕಾರಣವಾಯಿತು. ಈ ಎಲ್ಲಾ ಬಿಕ್ಕಟ್ಟುಗಳ ನಡುವೆಯೇ ಕಾವ್ಯವು ಜೀವಂತವಾಗಿರುವ ಲಕ್ಷ್ಮಣಗಳನ್ನು ತೋರಿಸುತ್ತಿತ್ತು ಅನ್ನಿಸುತ್ತದೆ. ಹೊರಗೆ ಚಳವಳಿಗಳಲ್ಲಿ, ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ತಮ್ಮ ದನಿಯನ್ನು ಆ ಶೃತಿಗೆ ಹೊಂದಿಸಿಕೊಂಡು ಬರೆಯುತ್ತಿರುವವರಲ್ಲಿ ಅನೇಕರಿಗೆ ತತ್ವದ ಮುಂದಿನ ನೆಲೆಯನ್ನು ಹುಡುಕಲು ಒಂದು ದಾರಿಯನ್ನು ಕಂಡುಕೊಳ್ಳಬೇಕಾದ ತುರ್ತು ಉಂಟಾಯಿತು. ಅನೇಕ ಕವಿಗಳು ಅನುಭವದೆಡೆಗೆ ತಿರುಗಿ ನಿಂತರು. ದೇಶೀಯತೆಯ ಆರಿವಿನಿಂದೆಂಬಂತೆ ಸಮಗಾರ ಭೀಮವ್ವನ ನೆರಳಲ್ಲಿ, ನವಿಲಿನ ಹಿನ್ನೆಲೆಯಲ್ಲಿ (ಹಂಸಕ್ಕಿಂತ ನವಿಲು ಕಾಣಿಸಕೊಳ್ಳತೊಡಗಿದ್ದು ಒಂದು ಹೊಸ ಹೆಜ್ಜೆ) ಬರೆಯುವ ಕವಿಗಳನ್ನು ನೋಡಬಹುದಾದ ಸಂದರ್ಭದಲ್ಲಿಯೇ, ಹೊಸ ಓದುಗಳಿಗೆ ತೆರೆದುಕೊಂಡು, ‘ತಾನು ಒಲಿದಂತೆ ಹಾಡುವೆ’ನೆಂಬ ಭಾವದಲ್ಲಿ ಕವಿತೆಗಳನ್ನು ಬರೆಯುವ ಕವಿಗಳ ಸಂಖ್ಯೆ ಆಕಸ್ಮಿಕವೆಂಬಂತೆ ವೃದ್ಧಿಗೊಂಡಿದ್ದು ಕಾವ್ಯದ ಇರವಿನ ಬಗ್ಗೆ ಆಶಾಭಾವನೆಯನ್ನು ಉಂಟುಮಾಡುವಂತದ್ದೇ ಆಗಿದೆ. ಇತ್ತೀಚಿನ ಕೆಲವು ಕವನಸಂಕಲಗಳನ್ನು ನೋಡುತ್ತಿರುವಾಗ, ಕೆಲವು ಕವಿಗಳಿನ್ನೂ ಹಳೆಯ ಧಾಟಿಯನ್ನೇ ಅನುಕರಣೆ ಮಾಡುತ್ತ, ಪುನರಾವರ್ತನೆಯಾಗುವಂತೆ ಬರೆಯುತ್ತಿದ್ದರೆ ಕೆಲವರು ಕಾವ್ಯವನ್ನು ಗಂಭೀರವಾಗಿ ತೆಗೆದುಕೊಂಡು, ಅದರಲ್ಲಿ ಕ್ರಿಯಾಶೀಲರಾಗಿ, ತಮ್ಮದೇ ಆದ ಕೌಶಲ, ಪ್ರಯೋಗಗಳಿಂದ ಗಮನ ಸೆಳೆಯುವಂತೆ ಬರೆಯುವವರೂ ಇದ್ದಾರೆ. ಈ ಲೇಖನದಲ್ಲಿ ಇತ್ತೀಚಿನ ಕೆಲವು ಕವಿಗಳ ಸಂಕಲಗಳನ್ನು ಆರಿಸಿಕೊಂಡು ಅವರ ಬರವಣಿಗೆಯ ರೀತಿಯನ್ನು ರೀತಿಯನ್ನು ಗಮನಿಸುವ ಪ್ರಯತ್ನ ಮಾಡಲಾಗಿದೆ.

ಎನ್.ಕೆ. ಹನುಮಂತಯ್ಯ ಮತ್ತು ದು. ಸರಸ್ವತಿ ಇವರ ಇತ್ತೀಚಿನ ಸಂಕಲನಗಳು ಹೊಸ ಹಾದಿಯ ಹುಡುಕಾಟದಲ್ಲಿರುವ ಸಂಕಲನಗಳು. ಈ ಇಬ್ಬರ ಸಂಕಲನಗಳು ನನಗೆ ಮುಖ್ಯವಾಗುವುದೇಕೆಂದರೆ, ಇಬ್ಬರೂ ದಲಿತವರ್ಗಕ್ಕೆ ಸೇರಿದ ಕವಿಗಳೇ. ಇದರಲ್ಲಿ ಸರಸ್ವತಿ ಸ್ತ್ರೀ ಸಂಘಟನೆಗಳಲ್ಲಿ ತೊಡಗಿಕೊಂಡು, ಕಾವ್ಯವನ್ನೂ ತನ್ನೊಂದಿಗಿರುವ ಶಕ್ತಿ ಎಂದು ಬಳಸುತ್ತಿರುವವರು. ‘ಹನುಮಂತಯ್ಯ, ಸಿದ್ದಲಿಂಗಯ್ಯ ಅವರ ತಾತ್ವಿಕ ಚೌಕಟ್ಟಿನಲ್ಲಿ ಆಟವಾಡುವಂತೆ ಕಂಡರೂ, ಕಾವ್ಯದ ಶಕ್ತಿಯುಳ್ಳ ಧ್ವನಿಪೂರ್ಣ ಸಾಲುಗಳನ್ನು ಬರೆಯುವಲ್ಲಿ ಕ್ರಿಯಾಶೀಲರಾಗಿರುವವರು. ಈ ಇಬ್ಬರ ಹಿಂದೆಯೂ ತಾತ್ವಿಕತೆಯು ಬೆನ್ನುಕಟ್ಟಿದೆ. ಆದರೆ ಇವರು ಅದನ್ನು ಹೇಗೆ ಮುಂದಿನ ಹಂತಕ್ಕೆ ಕೊಂಡೊಯ್ಯ
ಬಹುದೆಂಬುದನ್ನು ಹುಡುಕುತ್ತಿದ್ದಾರೆ. ಹೀಗಾಗಿ ಅವರ ಕಾವ್ಯದಲ್ಲಿ ಹಳತು ಹೊಸತು ಎರಡೂ ಕಾಣಿಸಿಕೊಂಡಿವೆ.

ಎನ್.ಕೆ. ಹನುಮಂತಯ್ಯನವರ ಸಂಕಲನ ‘ಚಿತ್ರದ ಬೆನ್ನು’ ಕಳೆದ ಸಾಲಿನ ಆಕಾಡೆಮಿ ಬಹುಮಾನವನ್ನು ಪಡೆದಿದೆ. ‘ಗೋವು ತಿಂದು ಗೋವಿನಂತಾದವನು’ ಎಂಬುದು ಈ ಸಂಕಲನದಲ್ಲಿ ಹೈಲೈಟ್ ಆಗಿರುವ ಕವಿತೆ. ಕನ್‍ಫೆಶನ್ ಮಾದರಿಯಲ್ಲಿ ಹುಟ್ಟುವ ದಲಿತ ಸಾಹಿತ್ಯ ಅದರ ಮೂಲಕವೇ ಸುತ್ತಣ ಜಗತ್ತಿನ ಹುಳುಕುಗಳನ್ನು ತೆರೆದಿಡುತ್ತಾ ಹೋಗುತ್ತದೆ. ಒಂದು ಸಾಮಾಜಿಕ ಮಾತೃಕೆ (Matrix)ನ್ನು ತೀವ್ರವಾಗಿ ಅನುಭವಿಸುವುದು ಆ ಸಂವೇದನೆಯ ಭಾಗ. ಅದರಂತೆ, ವ್ಯಂಗ್ಯ, ಛೇಡನೆಗಳನ್ನು ಧಾರಾಳವಾಗಿ ಬಳಸಿಯೂ ಒಬ್ಬ ಕವಿ ಅದನ್ನು ಕರುಣೆಗೆ ಬಗ್ಗಿಸಬಲ್ಲ ಸವಾಲು ಕವಿಗಿರುತ್ತದೆ. ಈ ಸಂಕಲನದಲ್ಲಿ ಹೆಣ್ಣು ಕವಿಗೆ ಕಾಡುವ ವಸ್ತು, ಜೊತೆಗೆ ಅವ್ವನೂ ಕಾಡುವ ವಸ್ತುವೇ. ವಾಸ್ತವದ ಕ್ರೂರಸತ್ಯಗಳನ್ನು ಬಿಚ್ಚಿಡುತ್ತಿರುವ ಸಂದರ್ಭದಲ್ಲಿಯೇ ತನಗೆ ಅನ್ಯಾಯವಾಗಿದೆಯೆಂಬ ಭಾವ ತೀವ್ರವಾಗಿದೆ. ಇದು ಸಹಜವೇ. ಆದರೆ ಈ ನಿಲುವು, ಕೊಂಚ ದಾರಿ ತಪ್ಪಿದರೆ ಕ್ರೌರ್ಯವನ್ನು ಮೆರೆಯುವ, ಇಲ್ಲ ಸ್ವನಿಂದಾತ್ಮಕ ಜಿಗುಪ್ಸೆಯತ್ತ ತಿರುಗಿಬಿಡಬಹುದು. ಕತ್ತಿಯಲುಗಿನ ದಾರಿಯಲ್ಲಿ ಪಯಣಿಸುವವರಿಗೆ ಅಲುಗಿನ ಚೂಪುತಟ್ಟದೇ ಇರದು. ಇಷ್ಟಾಗಿಯೂ ಹನುಮಂತಯ್ಯನವರ ಆಲೋಚನಾ ಧಾಟಿಯಲ್ಲಿ ವಿಚಾರಗಳನ್ನೂ, ಭಾವನೆಗಳನ್ನೂ ಕವಿತೆಯಾಗಿಸುವ ಹೊಸತನವಿದೆ. ‘ಬೆನ್ನು’ ಆವರು ಬಳಸುವಂತೆ ‘ಭಾರ ಹೊರುವ ಅಂಗ’, ಅದಕ್ಕೆ ಭಾರ ಹೊರಲು ಬಗ್ಗಲೇಬೇಕಾದ ಅನಿವಾರ್ಯತೆ. ಈ ಸಂಗತಿಯನ್ನು ಚೆನ್ನಾಗಿ ದುಡಿಸಿಕೊಳ್ಳುವ ಕವಿ ಇಲ್ಲಿದ್ದಾರೆ.

ನವಿಲು ಹನುಮಂತಯ್ಯನವರಲ್ಲಿ ಕಾಣಿಸಿಕೊಳ್ಳುವುದು ಹೀಗೆ :
‘ಕರಿಯನವಿಲು ಬಿಳಿಯನವಿಲು ನೀಲಿನವಿಲು ರಕ್ತನವಿಲು
ಇರುಳಲ್ಲಿ ಕಾಣಿಸಿ ಹಗಲಲ್ಲಿ ಕಾಣದ | ಜಾದುನವಿಲು

-ಎಂದು. ನವಿಲು ಕವಿಗೆ ನೆಲದ ಹೆಜ್ಜೆಗುರುತುಳ್ಳದ್ದು. ಇಲ್ಲಿ ಆಧ್ಯಾತ್ಮಿಕ ಧೋರಣೆಗಳನ್ನು ನಿರಾಕರಿಸಿ, ವಾಸ್ತವವನ್ನು ನಿರ್‍ವಚನ ಮಾಡಿಕೊಳ್ಳುವ ರೀತಿಯನ್ನು ತೋರಿಸಲಾಗುತ್ತಿದೆ. ಒಳಗುದಿ ಒಮ್ಮೊಮ್ಮೆ ನವಿಲ ನೆತ್ತರ ಬಯಸುತ್ತದೆ. ಕಲೆಗಾರಿಕೆಯ ಕಡೆಗೆ ಕೈಜಾಚುವ ಕೆಲವು ಪದ್ಯಗಳು ಅದ್ಭುತವೆನಿಸುವಷ್ಟು ಸುಲಲಿತವಾಗಿ ಓದಿಸಿಕೊಳ್ಳುತ್ತವೆ. ‘ಶಬ್ಬದ ಶಿರ ಹಿಡಿದು’ ಕವನ ಅಂಥದೊಂದು ಕವನ. ಅನುಭವಿಸಲೇ ಬೇಕೆನ್ನುವಂತಿರುವ ಈ ಸಾಲುಗಳನ್ನು ನೋಡಿ :

ಚೆನ್ನಮಲ್ಲಿಕಾರ್‍ಜುನನೆಂದುಕ್ಷಣಕ್ಷಣವೂ ಜಪಿಸಿ
ಹುಟ್ಟು ಕುಡಿಕೆಯು ಉಕ್ಕಿ| ಮಂಜು ಸುರಿದದ್ದೇಕೆ
ಶಬ್ಬದ ಶಿರ ಹಿಡಿದು ಕೇಳಿದೆ
ಮಂಜು ಪ್ರೇಮವೇ ಮಂಜು ಕಾಮವೇ ಮಂಜುದೇವರೇ
ನಕ್ಕು ಹಾರಿತು ಶಬ್ದ| ಮೌನದ ಮೊಟ್ಟೆಯಿಟ್ಟು-
(ಶಬ್ಬದ ಶಿರ ಹಿಡಿದು)

ದು. ಸರಸ್ವತಿಗೆ ದಲಿತತ್ವದ ಸಮಸ್ಯೆಯಷ್ಟೇ ಅಲ್ಲದೆ, ಸ್ತ್ರೀತ್ವದ ಸಮಸ್ಯೆಯೂ ಕಾಡಿದೆ. ಹೀಗಾಗಿ ಅವರ ದನಿ ಭಿನ್ನವೆನಿಸುತ್ತದೆ. ನೆಲದ ಪ್ರಜ್ಞೆಯನ್ನು ಇಟ್ಟುಕೊಂಡು ಹಠದಲ್ಲಿ ಬರೆಯುವವರಂತೆ ಕಾಣುವ ಅವರ ಕಾವ್ಯ ‘ಜೀವವಾಗೋ ಬಯಕೆ’ ಹೊತ್ತಂತವು. ಜೀವ ಚೈತನ್ಯವನ್ನು ಅವರು ಕಾಣುವುದು ಸ್ತ್ರೀತ್ವದಲ್ಲಿ. ಅವರ ಕವನಗಳಲ್ಲಿ ಬರುವವರೆಂದರೆ ಅವ್ವ, ಪುಟಾಣಿ ಹುಡುಗಿ, ಜೀವ ಸಂಪಿಗೆಯರು. ಈ ಹೆಣ್ತನದ ಆಶಯಗಳನ್ನು ಒತ್ತಟ್ಟಿಗಿಟ್ಟರೆ, ಸರಸ್ವತಿಯವರ ಕಾವ್ಯ ದ್ವಂದ್ವದಲ್ಲಿರುವಂತಿದೆ. ಆಧುನಿಕ ಸಮಾಜದ ದುಃಸ್ತಿತಿಯನ್ನು ಧಾತು ಸ್ವೀಕರಿಸುವ ಅವರ ಕಾವ್ಯಕ್ಕೆ ಅವರ ಹೋರಾಟದ ಹಿನ್ನಲೆ ಪೂರಕವಾಗಿ ಬಂದಿದೆ ಎನ್ನಬಹುದು. ತಾತ್ವಿಕತೆಯನ್ನು ಬೆನ್ನಿಗೆ ಕಟ್ಟಿಕೊಂಡು ಮನ್ನಡೆಯುವ ಸಮಯದಲ್ಲೇ ಜಾನಪದದ ರಮ್ಯತೆ ಅವರನ್ನು ಸೆಳೆಯುತ್ತದೆ. ಅವರ ಆಕರಗಳಲ್ಲಿ ಮುಖ್ಯರಾಗಿರುವ ಜಡೆಮಾದ ಜಡೆಮಾದಿಯರು, ಮೊಲ ಮತ್ತು ಆಮೆಗಳ ಕಥಾನಕಗಳೆಲ್ಲ ಬರುತ್ತವೆ. ಇಲ್ಲಿ ಸರಸ್ವತಿಯವರ ತೊಡಕೇನೆಂದರೆ, ಆಧುನಿಕತೆಯ ಸವಾಲುಗಳನ್ನು ಪ್ರಜ್ಞಾಪೂರ್‍ವಕವಾಗಿ ಎದುರಿಸಬೇಕೋ ಬೇಡವೋ ಎಂಬುದು. ಇದಲ್ಲದೆ, ಬೆಳಕು ಮತ್ತು ಕತ್ತಲೆಯೆಂಬ ವಾಸ್ತವಗಳನ್ನು ಗ್ರಹಿಸುವಾಗಲೂ ದ್ವಂದ್ವಭಾವ ಕಾಡುತ್ತದೆ. ‘ಎಲ್ಲವನ್ನು ನೀಗಿಸಬಹುದೆಂಬ’ ಬೆಳಕಿನ ಬಗ್ಗೆ ಭರವಸೆಗಳಿವೆ, ನಿಜ. ಆದರೆ ‘ಸೂಜಿಗಾತ್ರದ ಕತ್ತಲ ಸುರಂಗ ಸವಾಲೆಸೆದು ಕುಹಕವಾಡುವುದು’ ಬೆಳಕಿನ ಶಕ್ತಿಯ ಅನುಮಾನ ಹುಟ್ಟಿಸುವಂತಿದೆ. ಮತ್ತೊಮ್ಮೆ (ಸುಡುವ ಬೆಳಕಿಗಿಂತ ಬೆಚ್ಚನೆ ಕತ್ತಲೆ ಲೇಸೆಂದು’ ಅನ್ನಿಸುತ್ತದೆ. ಇದರೊಂದಿಗೆ ಅವರನ್ನು ಕಾಡುವ ಬೇರು ಬಿಳಿಲುಗಳು ಸಾಂಕೇತಿಕವಾಗಿ ಸಂಕಲನದ ಕವಿತೆಗಳಲ್ಲಿ ಬಳಕೆಯಾಗುತ್ತದೆ. ಮತ್ತೆ ಮತ್ತೆ ಅವರಲ್ಲಿ ಕಾಣಿಸಿಕೊಳ್ಳುವ ನವಿಲುಂಜ ದೇವನೂರರ ಕಲೆಗಾರಿಕೆಯ ನವಿಲಾಗಿ ಕಾಣಿಸುವ ಸೂಚನೆ ಕೊಡುತ್ತದೆ. ಹನುಮಂತಯ್ಯನವರಂತೆ ಸರಸ್ವತಿಯವರೂ ನವಿಲುಂಜದ ಕಡೆ ಮುಖ ಮಾಡಿದ್ದಾರೆ. ಆದರೆ ಅದನ್ನು ನೋಡುವ, ಸ್ವೀಕರಿಸುವ ದೃಷ್ಟಿಕೋನದಲ್ಲಿ ಇಬ್ಬರಿಗು ವ್ಯತ್ಯಾಸವಿದೆ. ಸರಸ್ವತಿಯವರ ಕಾವ್ಯ clumsy ಆಗಿ ಕಂಡರೆ ಹನುಮಂತಯ್ಯ ಗಾಢವಾಗಿ ಧ್ಯಾನಿಸಿ, ಚಿತ್ರವತ್ತಾಗಿ ಬರೆಯುವ ಕಾವ್ಯವಾಗಿದೆ.

‘ಉಳಿದ ಪ್ರತಿಮೆಗಳು’ ಮೂಲಕ ಪ್ರತಿಮಾತ್ಮಕ ರಚನೆಗಳಿಗೆ ತಿರುಗಿ ನಿಂತಿರುವ ಡಿ.ಎಸ್. ರಾಮಸ್ವಾಮಿಯವರಲ್ಲಿ ಸ್ಥಾಯಿಯಾಗಿ ನಿಂತಿರುವುದು ವರ್ತಮಾನದ ವಿಷಾದವೇ. ಈ ಕಾಲದ ಅನುಭವಗಳನ್ನು ನವ್ಯದ ಮುಂದುವರಿದ ಹಂತದಲ್ಲಿ ಮುರುಕು ಅನುಭವಗಳೆಂದೇ ನೋಡುವ ಪರಿಪಾಠ ಮತ್ತಷ್ಟು ಹೆಚ್ಚಿದೆ. ವಿಘಟನೆಯನ್ನು ಮೂಲ ಛೇದಬಿಂದುವಾಗಿಟ್ಟು ನೋಡುವ ಕ್ರಮವೂ ಅವರನ್ನು ನವ್ಯೋತ್ತರಕ್ಕಿಂತ ನವ್ಯಕ್ಕೇ ಹಿಂತಿರುಗುವಂತೆ ಮಾಡಿದೆಯೇನೋ ಎಂಬ ಆನುಮಾನ ನನಗೆ.

ಡಿ.ಎಸ್. ರಾಮಸ್ವಾಮಿಯವರ ಕಾವ್ಯ ಪ್ರಜ್ಞಾಪೂರ್ವಕ ಧಾಟಿ ಅನುಸರಿಸುವಂತೆ ಕಂಡರೆ, ಅದು ಅವರು ಕವಿತೆಯ ಸಂಯೋಜನೆ, ವಿನ್ಯಾಸಗಳ ಬಗೆಗೆ ಆಲೋಚಿಸಿದ ರೀತಿಯನ್ನು ಹೇಳುತ್ತದೆ. ಕಾವ್ಯದಲ್ಲಿ ಸಂಭವಿಸುವ ಧ್ಯಾನದ ಕ್ಷಣಗಳ ಕವಿ ಕಾತುರರಾಗಿದ್ದಾರೆ. ಅವರ ‘ಸಹಕವಿಗೆ’, ‘ಚುಕ್ಕೆ ಮತ್ತು ರಂಗವಲ್ಲಿ’, ‘ಶಬ್ದಾರ್‍ಥಗಳ ನಡುವೆ’ ಮುಂತಾದ ಕವಿತೆಗಳು ಅಕ್ಷರ ಸಂಯೋಜನೆ ರೂಪಾಂತರಗೊಂಡು ಕವನವಾಗುವ ಮಾಂತ್ರಿಕತೆಯನ್ನು ಕುರಿತು ಧ್ಯಾನಿಸಿದಂತಿವೆ. ರಾಮಸ್ವಾಮಿಯವರ ಸಮಸ್ಯೆ ಏನೆಂದರೆ, ಒಟ್ಟು ಕಾವ್ಯದ ಮಾಂತ್ರಿಕತೆಯನ್ನು ಉಳಿಸಿಕೊಂಡು ಅರ್ಥವನ್ನು ಹುಡುಕುವುದು ಹೇಗೆ ಎಂಬುದು:
ಶಬ್ಬ ಬೆಂಬಿಡದೆ, ಬೇತಾಳ ಅರಿತ ಕಿಡಿ
ಅರ್ಥವನ್ನು ಸುಡುವ ನದಿಯ ಬಯಲು
ಶಬ್ದದೇವರಿಗಾವ ಆಲಯವ ಕಟ್ಟುವುದು
ಅರ್ಥದಾರೋಗಣೆಗೆ ಮಿತಿಯು ಮುಗಿಲು
(ಶದ್ದಾರ್ಥಗಳ ನಡುವೆ)

ಇದಲ್ಲದೆ ಅವರಲ್ಲಿ ವರ್ತಮಾನದ ಬಗ್ಗೆ ವಿಶಾದಗಳನ್ನು ಧ್ವನಿಸುವ ಸಾಲುಗಳಿವೆ. ಕಾವ್ಯವನ್ನು ಉತ್ಕಟವಾಗಿ ಪ್ರೀತಿಸುವ ಕವಿಗೆ ವರ್ತಮಾನದ ಬದುಕಿನ ಸ್ಪಂದನಕ್ಕೆ ತಕ್ಕ ಭಾಷೆ ಹಿಡಿದು ಸಂವೇದನೆಗಳನ್ನು ಶಕ್ತವಾಗಿ ಹೊಮ್ಮಿಸುವ ಕ್ರಿಯೆಯಲ್ಲಿ ಎದುರಾಗಬಹುದಾದ ಬಿಕ್ಕಟ್ಟುಗಳ ಅರಿವಿದೆ. ಆದ್ದರಿಂದಲೇ ಅವರ ವಿಷಾದಯೋಗ ಧ್ಯನಿಪೂರ್‍ಣ ಅನ್ನಿಸುವ ಮಟ್ಟಕ್ಕೆ ಬರುತ್ತವೆ. ‘ನಮ್ಮನಾವೆ ಅನ್ಯರಿಗೆ ತೆತ್ತುಕೊಳ್ಳದ ಹಂಗೆ| ಬಾಳಗಡಲಿನ ದಿಕ್ಸೂಚಿ ಕವಿತೆಯನುಳಿಸು’, (ವಿಪಾದ) ಎಂಬ ಅವರ ಸಾಲು ಅವರು ಕವಿತೆಯನ್ನು ತೀವ್ರವಾಗಿ ಸ್ವೀಕರಿಸುವ ಬಗ್ಗೆ ಅಧಿಕೃತತೆಯನ್ನು ನೀಡುತ್ತದೆ.

ತತ್ವಪದ, ಬೋದಿಲೇರ್, ದೇವನೂರು, ಡಿ.ಆರ್, ಲಂಕೇಶರೆಲ್ಲರನ್ನೂ ಆವಾಹಿಸಿಕೊಂಡು ಕವಿತೆ ಬರೆಯುವಂತೆ ಕಾಣುವ ಎಚ್.ಆರ್. ರಮೇಶ್, ಕವಿತೆಯ ದಾರಿ ನೇರವಲ್ಲದ್ದು ಎಂದು ತೀರ್ಮಾನಿಸಿಯೇ ಕವಿತೆ ಬರೆಯುವವರಂತೆ ಕಾಣುತ್ತಾರೆ. ಅವರ ‘ಎಡವಟ್ಟು’ ‘ಬದುಕಿನ ಲಯಗಳು’ ಸಂಕಲನದ ತುಂಬ ಆಧುನಿಕೋತ್ತರ ಛಾಯೆಯಿಂದ ಕೂಡಿರುವ ಕವಿತೆಗಳಿವೆ. ಒಂದು ಅನುಭವವನ್ನು ತೀವ್ರವಾಗಿ ಅನುಭವಿಸುವ ವ್ಯಾಮೋಹ ಕವಿತೆಗಳನ್ನು ರೂಪಿಸುವುದು ಎಂದು Passion ಅನ್ನು ನೆಚ್ಚಿ ಬರೆಯುವ ಕವಿ ಈತ. ಹದಿವಯಸ್ಸಿನ ಹುಡುಗರ ಕನಸು ಕನವರಿಕೆಗಳಲ್ಲಿ ವಲ್ಗಾರಿಟಿಯಿರುತ್ತದೆ. ಅದನ್ನು ಬೋದಿಲೇರನ ನರಕದ ನಾಕಕ್ಕೆ ಹೋಲಿಸಿ, ಅದನ್ನು upgrade ಮಾಡಲು ಯತ್ನಿಸುವ ರಮೇಶ ತಾವು ಓದಿದ್ದನ್ನೆಲ್ಲ ಕವನಗಳಲ್ಲಿ ತರುತ್ತಾರೆ. ಅದನ್ನು ತಮ್ಮ ಅರಿವಿನ ವಿಸ್ತಾರ ಎಂದು ನಂಬುತ್ತಾರೆ. ಇಲ್ಲಿ ಹುಡುಗಿಯರೆಡೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ E=mc2 ಬಗ್ಗೆಯೂ ಇದೆ. ಆರಂಭಿಕ ತೊಡರುಗಳನ್ನು ಬಿಟ್ಟರೆ, ‘ಅನಾಮಿಕನೊಬ್ಬನ ಸಾವು’ ಕವಿತೆಯಂತಹವನ್ನು ಬರೆದು ತಾತ್ವಿಕವಾಗಿ ವಿವರಿಸಬಲ್ಲ ಶಕ್ತಿಯೂ ಅವರಲ್ಲಿದೆ. ವಿಕ್ಷಿಪ್ತತೆ ಮತ್ತು ವಿಘಟನೆಯನ್ನು ಕಾಣುವ ಆಧುನಿಕೋತ್ತರ ಮನಸ್ಸು ಇಟ್ಟುಕೊಳೃದೇ, ಇರುವ ಪರಿಕರಗಳಲ್ಲೇ ಇರವಿನ ಒಂದು ತಾತ್ವಿಕ ನಿಲುವನ್ನು ತನ್ನಿಂತಾನೆ ರೂಪಿಸಿಕೊಳ್ಳುತ್ತಾ ಹೋಗುತ್ತದೆ. ಕಾಲ ಮತ್ತು ಸಾವಿನ ಬಗೆಗಿನ ಅನುಭವಗಳನ್ನು ಈಗ ತಾನೇ ಹೊಸಭಾಷೆಯಲ್ಲಿ ಸೃಷ್ಟಿಸುವೆನೆಂಬ ಆತ್ಮವಿಶ್ವಾಸ ಕವಿಗಿದೆ. ಆದರೆ ಅದಕ್ಕೆ ಇನ್ನೂ ಪರಿಷ್ಕಾರಗೊಂಡ ಮಾರ್ಗದ ಅವಶ್ಯಕತೆ ಇದೆ.

ಮಲ್ಲಿಕಾರ್ಜುನ ಗೌಡ ತೂಲಹಳ್ಳಿಯಪರ ‘ಶರೀಫನ ಬೊಗಸೆ’ ಸಂಕಲನದಲ್ಲಿಯೂ ರಮೇಶರ ಸಂಕಲನದಲ್ಲಿರುವ ಅಂಶಗಳು ಸಾಮಾನ್ಯವಾಗಿದ್ದು, ತಾಳೆಯಾಗುತ್ತವೆ. ಬದುಕಿನ ಬಗ್ಗೆ ತೀವ್ರ ವ್ಯಾಮೋಹ ಮತ್ತು ಅನುಭವದ ಆಕಾಂಕ್ಷೆಯನ್ನು ಹೊಂದಿದ ಅವರ ಕವಿತೆಗಳು ಅನುಭಾವ, ಅನುಭವ ಎರಡನ್ನೂ ಒಟ್ಟಿಗಿಟ್ಟು ನೋಡಬಯಸುತ್ತವೆ. ಅವರ ‘ಶರೀಫನ ಬೊಗಸೆ’ಯಲ್ಲಿ ಅಲ್ಲಮನ ಬಯಲಿಗೆ ತುಡಿವ ಕಾತುರ ಇದೆ; ಅಷ್ಟೇ ತೂಕದ ಕಾತುರವು ಹುಡುಗಿ ಮತ್ತವಳ ದೇಹದ ಬಗ್ಗೆಯೂ ಇದೆ. ಇಲ್ಲಿ ಬೋದಿಲೇರನ ನೆನಪಾದರೆ ಅದು ಕವಿಯ ತಪ್ಪಲ್ಲ, ಅವರ ವಯಸ್ಸಿನ, ಕಾಲದ Passionನ ತಪ್ಪು ಅದು! ಆಧುನಿಕೋತ್ತರ ಛಾಯೆಯಲ್ಲಿ ಅರಳೆತ್ನಿಸುವ ಈ ಸಂಕಲನದ ಕವಿತೆಗಳು ಹಸಿಬಿಸಿಗಳಿಂದಲೇ ಕೂಡಿವೆ.

ತೂಲಹಳ್ಳಿಯವರ ರೂಪಕ ಭಾಷೆ ಗಮನ ಸೆಳೆಯುತ್ತದೆ. ಹೊಚ್ಚ ಹೊಸ ಅನುಭವಕ್ಕೆ ಕಾತರಿಸುವ ಅವರು ಹೊಸ ಅಭಿವ್ಯಕ್ತಿಯನ್ನೂ ಕಂಡುಕೊಳ್ಳಬಯಸುತ್ತಾರೆ. ‘ಹುಣಸೆ ಮರ’ದ ಬಗ್ಗೆ ಅವರು ಕೊಡುವ ಚಿತ್ರಣ ಹೀಗಿದೆ:
‘ಊರ ಮುಂದೆ | ರಸ್ತೆ ಬದಿಗೆ | ಒಂದು ಮರ
ಅಂತರ್ಗಾಮಿ ಬೇರುಗಳು | ಭೂಪಟದ | ನದಿ, ರೈಲು, ರಸ್ತೆಗಳ ಹಾಗೆ

ಇಂದಿನ ದಿನಮಾನಕ್ಕೆ ಸ್ಪಂದಿಸುವ ಆಧುನಿಕೋತ್ತರ ಮನಃಸ್ಥಿತಿಗೆ ತಕ್ಕಂತೆ, ಮಿಡುಕಾಟಗಳಿವೆ. ‘ತಾಲ್‍ಸೆ ತಾಲ್ ಮಿಲಾ’ ಎಂದು ಕುಣಿಯುವ ಐಶ್ವರ್ಯಳ ಜೊತೆಗೆ ನವೋದಯದ ಕಿರಣಲೀಲೆಯೂ ಇರುತ್ತದೆ. ತಾಳಕುಟ್ಟುವ ರೆಹಮಾನ್ ಜೊತೆಗೆ ಅಲ್ಲಮ, ಶರೀಫರು ಬರುತ್ತಾರೆ. ‘ಶಾಪವಿರದಹಲ್ಯೆಯರು ಕುಣಿಯುವರು| ಪಬ್ಬೊಳಗೆ’- ಎನ್ನುವ ಸಾಲು ಆಧುನಿಕತೆಯ ದೇಹ ದಾಹವನ್ನು ಹೇಳಿದರೆ, ಇದಕ್ಕೆ ಎದುರಾಗಿ ಅನುಭಾವದ ಸೆಳವಿರುವುದನ್ನು ತೋರುವ ಸಾಲುಗಳಿವೆ. ಅಲ್ಲಮನ ಬೆಡಗು, ಬಯಲು, ನವಿಲು, ಹಂಸ ಇತ್ಯಾದಿಗಳೆಲ್ಲ ಮೇಲಿಂದ ಮೇಲೆ ಬರುತ್ತವೆ. ಇಂಥದನ್ನು ಮಾಡುವುದು ಮೊದಲು ಕುಸುರಿ ಕೆಲಸದಂತೆ ಕಂಡರೂ, ಇದು ತಂತ್ರ ಮಾತ್ರವಾಗಿ ಉಳಿಯುವ ಅಪಾಯವಿದೆ. ಸ್ವಂತ ಭಾಷೆ ಕಟ್ಟಿಕೊಳ್ಳಲು ಹಾತೊರೆವ ಕವಿ ಸ್ವಂತ ದರ್ಶನವನ್ನೂ ಕಟ್ಟಿಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಅವರ ಪ್ರತಿಮೆಗಳು ಬಲವಂತದಿಂದ ತಂದವು ಎನ್ನಿಸಿ ಬಿಡುತ್ತದೆ.

‘ಸಿಕಾಡ’, ಪ್ಯಾಂಜಿಯಾದಂತಹ ಸಂಕಲನಗಳಿಂದ ತಾವೊಬ್ಬ ಪ್ರಯೋಗಶೀಲ ಕವಿ ಎಂದು ನಿರೂಪಿಸಿದ ಜಿ.ಕೆ. ರವೀಂದ್ರಕುಮಾರರೀಗ ಇನ್ನೊಂದು ಹೊಸ ಸಂಕಲನ ತಂದಿದ್ದಾರೆ. ‘ಒಂದು ನೂಲಿನ ಜಾಡು’ ಅವರ ಹೊಸ ಕವಿತಾ ಸಂಕಲನ. ಕವಿಯೊಬ್ಬನ ಮೊದಲನೆಯ ಕವಿತಾ ಸಂಕಲನಕ್ಕೆ ಸಾಕಷ್ಟು ವಿನಾಯ್ತಿಗಳಿರುತ್ತವೆ, ಆದರೆ ಅದೇ ವಿನಾಯ್ತಿಗಳು ಮುಂದಿನ ಸಂಕಲನಗಳಿಗೆ ಸಿಗುತ್ತವೆಂದು ಹೇಳುವುದು ಕಷ್ಟ. ಸಂಕಲನದಿಂದ ಸಂಕಲನಕ್ಕೆ ಕವಿಯ ಮೇಲೆ ನಿರೀಕ್ಷೆಗಳು ಹೆಚ್ಚುತ್ತಲೇ ಹೋಗುತ್ತದೆ. ಇದರ ಹಿನ್ನೆಲೆಯಲ್ಲಿ ರವೀಂದ್ರಕುಮಾರರ ಹೊಸ ಸಂಕಲನ ನೋಡಿದಾಗ, ಅದರಲ್ಲಿ ಕವಿಯ ಹಳೆಯ ನಿಷ್ಠೆಗಳು ಅಷ್ಟಾಗಿ ಬದಲಾದಂತೆ ಕಾಣುವುದಿಲ್ಲ. ತತ್ವ ಮತ್ತು ತರ್‍ಕಗಳು ಅವರಿಗೆ ಪ್ರಿಯವಾದ ವಿಷಯ. ಅವನ್ನು ಬೆಳೆಸುವುದರಲ್ಲಿ ಅವರಿಗೆ ಖುಷಿಯಿದೆ. ನವ್ಯದ ಜಾಡಿನಲ್ಲಿ ಬರೆಯುತ್ತಿದ್ದು ಅರ್ಥಗಳಿಗಾಗಿ ವಿಪರೀತ ಹುಡುಕಾಟ ನಡೆಸಿದರೆ ಆಗುವ ಪರಿಣಾಮಗಳನ್ನು ಈಗಾಗಲೇ ಜಿ.ಕೆ. ರವೀಂದ್ರಕುಮಾರರ ಕಾವ್ಯ ಎದುರಿಸಿದೆ. ಈ ಸಂಕಲನದ ಕವಿತೆಗಳು ಬುದ್ದಿಪೂರ್ವಕವಾದ ಆಟವನ್ನೇ ಮುಂದುವರೆಸಿದರೂ, ಸ್ವಲ್ಪ ನಿರಾಳವಾದ ಶೈಲಿಯನ್ನು ಅನುಸರಿಸಿವೆಯಲ್ಲದೆ ಆಡು ಭಾಷೆ ಮತ್ತು ನಿತ್ಯದ ಆಗುಹೋಗುಗಳನ್ನು ಕಾವ್ಯದಲ್ಲಿ ಬಳಸಲು ಪ್ರಯತ್ನಿಸಿದ್ದಾರೆ ಎನ್ನಬಹುದು.

ಚರಿತ್ರೆಯನ್ನು ಕೆದಕುವ ಕವಿ, ಅದನ್ನು ವರ್‍ತಮಾನಕ್ಕೆ ಸೇರಿಸುವ ನಿಟ್ಟಿನಲ್ಲಿ ವಿಷಯಗಳನ್ನು ಹೊಂದಿಸಲು ಯತ್ನಿಸುತ್ತಾರೆ. ಹಾಗೇ ‘ತಾನು ತಳೆದಾಗ ಅದು ಇನ್ನೂ ಹುಟ್ಟರಲಿಲ್ಲ| ತನ್ನ ಸೇರುವವರೆಗೂ ಹುಟ್ಟಿಕೊಳ್ಳುತ್ತಲೇ ಇರುಬೇಕು’ ಎಂಬಂತಹ ಸಾಲುಗಳನ್ನು ಧಾರಾಳವಾಗಿ ರವೀಂದ್ರಕುಮಾರ್ ಕಾವ್ಯದಲ್ಲಿ ಕಾಣಬಹುದು. ಆಧ್ಯಾತ್ಮಿಕ ನೆಲೆಯನ್ನು ವೈದಿಕ ಚಿಂತನೆಗಳ ಹಿನ್ನೆಲೆಯಲ್ಲಿ ಗುರುತಿಸಿಕೊಳ್ಳುವ ಕವಿ ಇವರು ಎನ್ನಿಸುವಂತೆ ಅವರ ಕವಿತೆಗಳು ತಾತ್ವಿಕ ಚೌಕಟ್ಟಿಗಾಗಿ ಆದ್ಯಾತ್ಮಿಕ ಸಂಗತಿಗಳನ್ನು ಆಶ್ರಯಿಸಿವೆ. ಕಾರ್ಯಕಾರಣದ ಜಿಜ್ಞಾಸೆಯನ್ನಂತೂ ಅವರಲ್ಲಿ ತಪ್ಪದೇ ಕಾಣಬಹುದು (‘ಕಾರಣವೆಂಬ ಹೂವು| ಕಾರ್ಯವೆಂಬ ಗಂಧ| ಇರವು ಅರಿವಿನ ಜಿಗುಟಿಗೆ ಹೂವೆಂಬ ಒಗಟು’ -ಎಂಬುದು ಈ ಸಂಕಲನದಲ್ಲಿ ಕಾಣುವ ಸಾಲು). ವೃತ್ತ ಬಿಂದುಗಳನ್ನೆಲ್ಲ ವಿಶೇಪಾರ್‍ಥದಲ್ಲಿ ಗುರುತಿಸುವ ಅವರಿಗೆ, ಪೂರ್ಣತೆ ಒಂದು ಕಲ್ಪನೆ. ವೃತ್ತವೆನ್ನುವುದು ಚರಿತ್ರೆಯ ಚಕ್ರಗತಿಗೆ, ಸೃಷ್ಟಿಲಯಗಳ ಗತಿಗೆ, ಕಾಲಸೂಚಕದಂತೆ ಬರಬಹುದು. ಕೊನೆಗೆ ಕವಿತೆಯೂ ಅವರಿಗೆ ವೃತ್ತದೊಂದು ಭಾಗ. -‘ಕವಿತೆಯ ಬೆರಳು ಹಿಡಿದಿರುವೆ| ಪೂರ್ಣಚಕ್ರದ ಒಂದು ಕವಲಾಗಿ’ (ಚಕ್ರ ೨)

ಇನ್ನು ದೇಶಭಕ್ತಿಯ ಬಗ್ಗೆ, ದೇಶದ ಬಗ್ಗೆ ತಮಾಷೆ, ತಲೆಹರಟೆ ಎನ್ನಿಸುವ ಸಾಲುಗಳನ್ನು ಬರೆಯುವಂತೆಯೇ ಭಿನ್ನರಾಶಿ, ಗಣಿತ, ಒಂದನೇ ತರಗತಿಯ ಪಾಠಗಳ ಮೂಲಕ ಹೊಸರೀತಿಯಲ್ಲಿ ವಿಶ್ಲೇಷಿಸುವುದನ್ನೂ ಕಾಣುತ್ತೇವೆ.

ಭಾಗವೆಂದರೆ ಏನು
ನೀರಾದರೆ ನಾಕನೇ ಮೂರು | ನೆಲವಾದರೆ ನಾಕನೇ ಒಂದು (ಭಿನ್ನರಾಶಿ).
ಅಲ್ಲೇ ಈ ಸಾಲು ಗಮನಿಸಬೇಕು; ದೇಶ ಲ ಸಾ ಅ | ವಿಶ್ವ ಮ ಸಾ ಅ (ಭಿನ್ನರಾಶಿ).

ಆಟದಂಥ ಪದ್ಯಗಳು, ನೋಮ್ಯಾನ್ಸ್ ಲ್ಯಾಂಡ್ ಪದ್ಯಗಳು, ಕೊನಾರ್‍ಕ್ ಪದ್ಯಗಳು ಅವರ ಸರಪಳಿ ಕವಿತೆಗಳು. ಆದರೆ ಈ ಸಂಕಲನದಲ್ಲಿ ಕಷ್ಟಪಟ್ಟು ಬರೆದ ಕವಿತೆಗಳೂ ಇವೆ. ಬರೆಯುವ ಭರದಲ್ಲಿ ‘ನೆತ್ತಿಸವರುವ ಕೈಗಳೆತ್ತ| ಆರಿ ಹೋದವು! ಬಾಡಿಹೋದವು’, ‘ತೆನೆಯೊಡೆದ ಬಳೆಯ ಚೂರುಗಳು| ಮಡಿಲ ಎದೆಗೆ ಹಾತೊರೆದಂತೆ’ -ಎಂದೆಲ್ಲಾ ಬರೆವಾಗ ವಸ್ತುಸಹಜ ಸಂಬಂಧವಾಗಲೀ, ಭಾಷಿಕ ನೆನಹುಗಳಾಗಲೀ ಇರುವಂತೆ ಕಾಣುವುದಿಲ್ಲ.

ಕಾವ್ಯವೆಂಬುದು ಬುದ್ಧಿಭಾವಗಳ ವಿದ್ಯುಲಿಂಗನವೆಂಬುದು ಸರಿ. ಆದರೆ ಕರವೀಂವ್ರಕುಮಾರರ ಕಾವ್ಯ ಯಾಕೆ ಭಾವಕ್ಕೆ ತಾಗದೇ ಉಳಿಯುತ್ತದೆ? ‘ತೆಕ್ಕೆ ತುಂಬಿ ಬರೆದರೂ| ಇರದ ಸಾಲಿನ ಕವಿತೆ’ ಎನ್ನುವ ಸಾಲು ಅವರದು. ತೆಕ್ಕೆಯ ಭೌತ ಸ್ವರ್ಶದೊಂದಿಗೆ ಜೀವ ತುಂಬುವ ಸ್ಪರ್ಶವೂ ಕವಿತೆಗಿದ್ದರೆ ಒಳ್ಳೆಯದಲ್ಲವೆ ಎಂದು ನನ್ನ ನಮ್ರ ಆನಿಸಿಕೆ.

‘ತತ್ರಾಣಿ’ಯ ಬಸವರಾಜು ಹೂಗಾರರದು ಇನ್ನೊಂದು ರೀತಿಯ ಪದ್ಯಗಳು. ತತ್ರಾಣಿಯೆನ್ನುವುದು ನೀರು ಕುಡಿಯಲು ಬಳಸುವ ಮಣ್ಣಿನ ಪಾತ್ರೆ. ಅದನ್ನು ಬಳಸುವವರು ಹಳ್ಳಿಗಾಡಿನ ಬಡವರು. ಅವರ ಜೀವನ ಶೈಲಿಯ ಕುರುಹಾಗಿ ತತ್ರಾಣಿಯನ್ನು ನೆನೆದಿರುವ ಕವಿ, ಆಧುನಿಕತೆಯ ಜೀವನಶೈಲಿಯಿಂದ ವಿಮುಖರಾಗುತ್ತಾರೇನೋ ಅನ್ನಿಸುವಷ್ಟು ಹಳೆಯ ನೆನಪುಗಳಿಂದ ತುಂಬಿದ್ದಾರೆ. ಅಕ್ಷರಸ್ಥರ ನಾಗರಿಕ ಬದುಕು ಹಾಗು ಹಳ್ಳಿಯ ಬಡತನದ ಜೀವನ ಶೈಲಿ ಇವನ್ನು ಪದೇ ಪದೇ ತುಲನೆ ಮಾಡಿ ನೋಡುತ್ತಾರೆ. ಬಾಲ್ಯದ ನೆನಪುಗಳು ಅವರಿಗೆ ಕಹಿಯಾಗಿಯೇ ಇದ್ದರೂ, ಅವರಿಗೆ ನಾಸ್ಟಾಲ್ಜಿಯಾ ಕಾಡುತ್ತದೆ. ‘ಎದೆತುಂಬ ಹಳೆನೂರ ನೆನಪು’ ತರುವುದು ಪ್ರೀತಿಯ ಬದುಕಿನ ನೆನಪುಗಳನ್ನು.

ಹೂಗಾರರು ಕವಿಯಾಗಿ ಕಂಡ ನೆನಪುಗಳು ಬರಿಯ ನೆನಪುಗಳಾಗದೆ, ಒಂದು ಸಾಮಾಜಿಕ ಬದಲಾವಣೆಯನ್ನು ಹೇಳುತ್ತವೆ ಎಂಬುದೇ ವಿಶೇಷ.

ಕಾಣುತ್ತಿಲ್ಲ ಯಾವ | ಪುಸ್ತಕದ ಪುಟದಲ್ಲೂ | ಅವ್ವನ ಜೋಗುಳದ ಪದ
ಅಪ್ಪನ ರುಮಾಲು ಚಿತ್ರ | ಈ ಬಡಾವಣೆಯಲ್ಲಿ | ಕಳೆದುಕೊಂಡಿದ್ದೇನೆ
ನಾನು | ನನ್ನ ವಿಳಾಸ.

ಇಂತಹ ಸಾಲುಗಳಲ್ಲಿ ಹಳೆನೆನಪು ಮತ್ತು ನಗರದ ಬದುಕಿನ ತಬ್ಬಲಿತನ ಅವರನ್ನು ಕಾಡಿರುವುದು ತಿಳಿಯುತ್ತದೆ. ಕವಿ ನಾಗರಿಕ ಪ್ರಪಂಚಕ್ಕೆ ವಿಮುಖನಾಗಲು ಬಯಸುವುದಕ್ಕೆ ಅವರು ಕಾಣುವ ಜಗತ್ತು. ಅಲ್ಲಿ ‘ವೇಶ್ಯೆಯವರ ಸ್ವಗತಗಳಿವೆ’, ಜಾತೀಯತೆ ಇದೆ, ಅಧಿಕಾರಶಾಹಿ ಇದೆ, ಕೋಮುವಾದಿಗಳಾದ ಕೇಸರಿ ಪಡೆಗಳು, ತಾಲಿಬಾನಿಗಳೆಲ್ಲ ಇದ್ದಾರೆ. ಈ ಎಲ್ಲಾ ಸಂಗತಿಗಳು ಅವರನ್ನು ಜೀವಪರ ಮೌಲ್ಯಗಳ ಕುರಿತಾಗಿ ಮಾತಾಡುವಂತೆ ಮಾಡಿವೆ. ‘ಒಂದೇ ಗೋಡೆಯ ಆಚೆ ಈಚೆ ದೇವಸ್ಥಾನ ಮತ್ತು ಮಸೀದಿ, ದೇವರ ಮುಂದೆ ಭಕ್ತರು ಹಾಕಿದ ಕಾಳು’ ಕಂಡ ಬಾಲ್ಯದ ಅನುಭವಕ್ಕೂ ಇಂದು ತ್ರಿಶೂಲ ಹಿಡಿದು ಹೊಡೆದಾಡುವ ಸಮಾಜದ ಚಿತ್ರಕ್ಕು ಅಂತರವಿದೆ. ಅವರ ‘ಸೇನೆ ಬೇಕಿಲ್ಲ’, ‘ದೇವರ ಧರ್ಮದ ಹಂಗು ತೊರೆದು’, ಇತ್ಯಾದಿ ಕವಿತೆಗಳಲ್ಲಿ ಇದನ್ನು ಗುರುತಿಸಬಹುದು.

ಹೂಗಾರರ ಸಂಕಲನದಲ್ಲಿ ನೆನಪುಗಳಿವೆ, ಮಾಯದ ವಿಶಾದಗಳಿವೆ, ಆಶಯಗಳಿವೆ. ಇಷ್ಟಾದರೂ ಅವರು ಇವುಗಳನ್ನು ಗ್ರಹಿಸುವ ರೀತಿಯು ವಾಚ್ಯಾರ್‍ಥದ ನೆಲೆಯಲ್ಲಿಯೇ ಇರುವುದು ನಿರಾಶೆಯುಂಟು ಮಾಡುತ್ತದೆ. ಪದ್ಯ ಕಟ್ಟುವಾಗಿನ ಕವಿಯ ಸಾಮಾಜಿಕ ಪ್ರಜ್ಞೆ ಜಾನಪದೀಯ ವಿವರಗಳು ಅರ್ಥಪೂರ್‍ಣವೆನಿಸುವುದು ಅವರು ಏಕಕಾಲಕ್ಕೆ ಲೋಕಾಂತವನ್ನೂ ಏಕಾಂತವನ್ನೂ ಭಾವಿಸಿಕೊಂಡು ಬರೆಯುವಂತಾದಾಗ. ಹೀಗಾದಲ್ಲಿ ಅವರ ಕಾವ್ಯದಲ್ಲಿ ಒಳಾರ್‍ಥಗಳು ಹೊಳೆಯುವ ಭರವಸೆವುಳಿಯುತ್ತದೆ.

‘ನೂರುಗೋರಿಯ ದೀಪ’ ವಿನಯಾ ಅವರ ಎರಡನೆಯ ಸಂಕಲನವಾಗಿದ್ದು, ಇದರಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಾಣುತ್ತೇವೆಂದು ಎಚ್‌ಎಸ್‌ಆರ್ ಮುನ್ನುಡಿಯಲ್ಲಿ ಭರವಸೆಯ ನುಡಿಗಳನ್ನಾಡಿದ್ದಾರೆ. ಆದರೆ ವಿನಯಾರ ಸಮಸ್ಯೆಯೆಂದರೆ ಬೌದ್ಧಿಕತೆ. ಓದಿನ ಹಿನ್ನೆಲೆ ಅವರ ಕವಿತೆಗಳಿನ್ನು ನಿರ್ದೇಶಿಸುವ ಅಂಶಗಳಾಗಿ ಬಿಡುತ್ತದೆ. ಇದರೊಂದಿಗೆ ಸಾಮಾಜಿಕ ತಿಳಿವಳಿಕೆಯು ಸ್ವಲ್ಪ ಹೆಚ್ಚನ್ನುವಂತೆ ಕಾವ್ಯದೊಳಗೆ ಇಳಿದುಬಿಟ್ಟಿದೆ. ‘ಕವಿತೆ ಬರೆಯುವುದೆಂದರೆ, ಮನದ ಮಾತುಗಳನ್ನು ಅದರೆಲ್ಲ ರಕ್ತ, ಮಾಂಸ, ವಾಸನೆ, ಒಚ್ಚೆಗಳೊಂದಿಗೆ ಕಾದಿಡುವುದು’ ಎಂದು ವಿನಯಾ ಬರೆಯುವುದರಲ್ಲೇ ಅವರ ಕವಿತೆಗಳಿಗಿರುವ ಹಸಿಹಸಿಭಾವವನ್ನು ತೆರೆದಿಡುವಂತಿದೆ. ‘ನೂರು ಗೋರಿಯ
ದೀಪ’ ಹೆಸರಿನ ಕವಿತೆಯು ಕೆಲವು ವೈಯಕ್ತಿಕ ವಿವರಗಳನ್ನು ತರುತ್ತದೆ. ಆದರೆ ಅವು ಬುದ್ದೀಪೂರ್ವಕವೆನಿಸುವಂತೆ ಭಾವಪೂರ್ವಕ ಎನ್ನಿಸುವುದಿಲ್ಲ. ವಿಷಾದದ ಭಾವದಲ್ಲಿ, ಕೊರಗುವ ಸಾಲುಗಳಲ್ಲಿ ಜೀವಕ್ಕಾಗಿ ಆಶಿಸುವುದು ವಿನಯಾ ಕಾವ್ಯದ ರೀತಿ:
ಇದು ಸೋಲಿನ ಕಾಲ | ಮಾತು ನಾಲಿಗೆಯಲ್ಲೇ ಹುಳಿವ ಕಾಲ
ಕಣ್ಣ ಬೆಳಕಿಗೆ ಬೆದರಿ ಬೆಪ್ಪಾದ ಕಾಲ
(ಮೂರನೆಯ ಪ್ರಹಾರ).

‘ಮಗುವಿದ್ದಮನೆ’, ‘ತಾಯಿಗೆ ಕಾಯಿಲೆಗಳಿರುವುದು’- ಮುಂತಾದ ಕವಿತೆಗಳು ಸ್ತ್ರೀಲೋಕದ ವಿವರಗಳೊಂದಿಗೆ ಬರೆದ ಕವಿತೆಗಳು. ಸ್ತ್ರೀವಾದವೂ ಸೇರಿದಂತೆ ಎಲ್ಲಾ ವಾದಗಳಿಗೂ ಒಂದು ಹಂತ ದಾಟಿ ಮುಂದಿನ ಹಂತವನ್ನು ಹೋಗುವಾಗ ಬಿಕ್ಕಟ್ಟುಗಳಿವೆ. ವಿಕಾಸದ ಹಂತವನ್ನು ಅದು ಗುರುತಿಸಿಕೊಳ್ಳಬೇಕಾಗುತ್ತದೆ. ವಾದವೇ ಆತ್ಯಂತಿಕವಲ್ಲ. ‘ಮೊರೆಬಿಡುವ ಹೊತ್ತಾಯ್ತು, ಏಳು ಮಗವೆ’ ಎನ್ನುವ ಕವಿತೆಯಲ್ಲಿ ಅವರು ಕೇಳುವಂತೆ;
ಯಾಕೆ ಕಂಗಾಲಾಗಿ ಕನವರಿಸಿ ಅಳುತಿರುವೆ?
ಮೊಲೆಯೊಂದಿಗಿನ ನಂಟು ಅನುಕಾಲವೇ?

ಈ ಪ್ರಶ್ನೆಯನ್ನು ಸ್ತ್ರೀವಾದ ಹಾಗೂ ಇನ್ನಿತರ ವಾದಗಳಿಗೆ ಅನ್ವಯಿಸಿ ಕೇಳಬಹುದಲ್ಲವೇ? ಈ ಸೂಕ್ಷ್ಮಗಳು ವಿನಯಾ ಅವರಿಗೆ ಬಾಧಿಸಿದರೆ ಚೆನ್ನಾಗಿತ್ತು ಎನ್ನಿಸುತ್ತದೆ. ‘ದೇವರೇ ಒಂದೇ ಒಂದು ದಿನ ಪುಟ್ಟಮಗುವಿಗಾಗಿ ದಿಟ್ಟಕಂಗಳಲಿ ಜಗವ ನಿಟ್ಟಿಸಬಲ್ಲೆನಾದರೆ| ಆಮೇಲಿನ ಎಲ್ಲ ಸೌಖ್ಯವನ್ನು ನಿನಗೇ ಮರಳಿಸುವೆ ನಿನ್ನಾಣೆ’(ಅಪೀಲು) ಎಂದು ಪ್ರಾರ್‍ಥಿಸುವ ವಿನಯಾಗೆ ಜರೂರಾಗಿ ಬೇಕಾದ್ದು ಮಗುವಿನಂತಹ ಮನಸು, ಮುಗ್ಧತೆ.

‘ಬಯಲು ಮತ್ತು ಏಕಾಂತ’ದ ಹುಡುಕಾಟದಲ್ಲಿರುವವರು ಕವಯಿತ್ರಿ ಬಿ.ಸಿ. ಶ್ವೇತಾ ನಾಗರಾಜ್ ಅವರು. ಇವರ ಕವಿತೆಗಳು ಹುಟ್ಟುವುದು ಬದ್ದತೆಯ ನಿಲುವಿನಿಂದಲೇ. ‘ನನ್ನ ಹುಡುಕಾಟ | ಚಳವಳಿಯಾಗಿದೆ | ಕವನ ಕಂಗೆಟ್ಟಿದೆ’ ಎಂದು ಒಳಗಿನ ಆಲಿಸುವ ಧೈರ್ಯವು ಅವರಿಗಿದೆ. ಬುದ್ಧ, ಬಸವರೂಪಿಗಳ ಬೆಳಕಲ್ಲಿ ಬಯಲಾಗುವ ಆಸೆ. ಆದರೆ ಅವು ಆಶಯದ ಮಟ್ಟಮೀರಿ ಬೆಳೆಯುವುದಿಲ್ಲ. ತಾಯ್ತತನದ ಪ್ರಜ್ಞೆಯನ್ನು ಇಟ್ಟುಕೊಂಡು ಬರೆಯುವ ಕವಯಿತ್ರಿ ಅದನ್ನು ಮೇಲ್ಪದರಕ್ಕೆ ಸೀಮಿತಗೊಳಿಸುವುದು ನಿರಾಶಯುಂಟು ಮಾಡುತ್ತದೆ. ಬಹುತೇಕ ಕವಯಿತ್ರಿಯರ ಕಾವ್ಯದ ವಸ್ತುಗಳಾದ ಅಮ್ಮ ಮತ್ತು ಅಕ್ಕಮಹಾದೇವಿಯರು ಶೈಲಾ ಅವರಲ್ಲಿಯೂ ಬರುತ್ತಾರೆ. ಇದರಾಚೆ ಶೈಲಾ ತಮ್ಮದೇ ವಲಯ ಸೃಷ್ಟಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ. ಭಾಷೆಯನ್ನು ಮುರಿದು ಕಟ್ಟಿಕೊಳ್ಳುವ ಹಂಬಲ ತೋರುವುದಿಲ್ಲ. ಆದರೆ ‘ಒಂದೇ ಜಾವಕ್ಕೆ ಬೆಳಕಾಗುವುದಿಲ್ಲ ಕಾಯಬೇಕು’ ಎಂಬ ವಿನಯ ಅವರಲ್ಲಿರುವುದು ಅವರ ಸಂಕಲನಕ್ಕೆ ರಕ್ಷೆಯಂತೆ ಒದಗಿದೆ.

ಇಲ್ಲಿ ವಿಶ್ಲೇಷಣೆಗೆಂದು ತೆಗೆದುಕೊಂಡಿರುವ ಕೆಲವು ಸಂಕಲನಗಳು ಕಳೆದ ವರ್ಷದ ಕಾವ್ಯದ ಬೆಳೆಯಲ್ಲಿ ಕಂಡಂತವು. ಕೆಲವು ಬರೆಯುವ ಹುಮ್ಮಸನ್ನೇ ಕಳೆದುಕೊಂಡಂತೆ ನಿರ್ಜೀವವಾಗುತ್ತಿರುವ ಭಾಷೆ, ಬವಣೆಗಳನ್ನು ಕಟ್ಟಿಕೊಡಲು ಹುಸಿ ಪ್ರಯತ್ನ ಮಾಡಿದಂತಿದ್ದರೆ, ಇನ್ನು ಹಲವು ನಿಜವಾದ ಉತ್ತರದಿಕ್ಕಿನ ನಕ್ಷತ್ರ ಹುಡುಕಿ ಹೊರಟಂತವು. ಇವುಗಳನ್ನು ಯಾದೃಚ್ಛಿಕಮಾದರಿ ಎಂದು ತೆಗೆದುಕೊಂಡು ಅಭ್ಯಾಸ ಮಾಡುವಾಗ ಅನ್ನಿಸಿದ್ದೇನೆಂದರೆ, ಒಳ್ಳೆಯ ಕಾವ್ಯ ಹುಟ್ಟವ ಮುನ್ನ ಎಷ್ಟೊಂದು ಹಾಲಾಹಲ, ಎಷ್ಟೊಂದು, ನೊರೆತೊರೆ, ಎಷ್ಟೊಂದು ಅಬ್ಬರ ಎಂದು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಂಪ್ಯುಟರ್
Next post ಹೊಸ ಹೊತ್ತು

ಸಣ್ಣ ಕತೆ

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys