ಮನಕೆ ಕನ್ನಡಿಯಾದರೆ……

ಪ್ರಿಯ ಸಖಿ,
ಪರಿಪೂರ್ಣ ಕವಿತೆಯೊಂದರ ನಿಜವಾದ ಸಾರ್ಥಕತೆ ಇರುವುದೆಲ್ಲಿ? ವಿಮರ್ಶಕನ ಟೀಕೆಯಲ್ಲೋ? ಸಹೃದಯನ ಮೆಚ್ಚುಗೆಯಲ್ಲೋ? ಕವಿಯ ಆತ್ಮ
ಸಂತೃಪ್ತಿಯಲ್ಲೋ?  ಎಲ್ಲಾ ಒಂದಕ್ಕಿಂತಾ ಒಂದು ಮಹತ್ವವಾದದ್ದೇ ! ಉತ್ತಮ ಕವನವೊಂದಕ್ಕೆ ವಿಮರ್ಶಕನ ಟೀಕೆಯೂ ಬೇಕು ಸಹೃದಯನ ಮೆಚ್ಚುಗೆಯೂ ಬೇಕು. ಕವಿ ಮನಕ್ಕೆ ಸಂತೃಪ್ತಿಯನ್ನೂ ನೀಡಬೇಕು. ಆದರೆ ಕವಿ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ಏನನ್ನುತ್ತಾರೆ ಗೊತ್ತೆ ?

ನನ್ನ ಹಾಡಿಗೆ ನಲಿವ ಜನರೇ
ನೀವೆ ನನ್ನ ಗುರಿ
ನಿಮ್ಮ ಚಿತ್ತವ ಕದಿಯುವ
ಮಾತೆ ನನ್ನ ಸಿರಿ
ಇದನು ಒಲ್ಲದ ಕೀಳು ಟೀಕೆಯ
ಪರಿವೆ ನನಗಿಲ್ಲ
ಮನಕೆ ಕನ್ನಡಿಯಾದರೆ
ನನಗೆ ಅದೆ ಎಲ್ಲಾ!

ಇಲ್ಲಿ ಕವಿ ಸಹೃದಯನ ಮೆಚ್ಚುಗೆಗೇ ಪ್ರಥಮ ಸ್ಥಾನ ನೀಡುತ್ತಾರೆ! ವಿಮರ್ಶಕನ ಮಾನದಂಡ ಹೇಗೂ ಇರಬಹುದು, ಅವನು ಕವನ ಹುಟ್ಟುವಾಗ ಇಲ್ಲದಿದ್ದ ಯಾವುದೋ ಸಿದ್ಧಾಂತ, ತರ್ಕಗಳ ಆಧಾರವನ್ನು ಇರಿಸಿ ಕವನವನ್ನು ಮೌಲ್ಯಮಾಪನ ಮಾಡುತ್ತಾನೆ.  ಆ ಚೌಕಟ್ಟಿಗೆ ಕವನ ಹೊಂದಿಕೊಳ್ಳದಿದ್ದಾಗ ನಿಜವಾದ ವಿಮರ್ಶೆ ಬರದೇ ಹೋಗಬಹುದು. ಆದರೆ ಸಹೃದಯ ಹಾಗಲ್ಲ. ಅವನಿಗೆ ರಸಾನುಭೂತಿಯೊಂದೇ ಉದ್ದೇಶ. ಅವನು ತನಗೆ ಸಂತೋಷ ಕೊಡುವ ಯಾವ ಕವನವನ್ನೇ ಆದರೂ ಮನಃಪೂರ್ತಿ ಆಸ್ವಾದಿಸುತ್ತಾನೆ. ಅವನ ಹತ್ತಿರ ತಕ್ಕಡಿಯಿಲ್ಲ! ಮನಸ್ಸಿದೆ! ಆದರೆ ಇದಕ್ಕೂ ಮುಖ್ಯವಾದುದು ಕವಿಯ ಆತ್ಮತೃಪ್ತಿ. ಕವನ ಹೊರಹೊಮ್ಮುವುದು ಲೆಕ್ಕಾಚಾರದಿಂದಲ್ಲ.  ಅದಕ್ಕೆ ಅಳತೆಗಳ ಪರಿಮಿತಿಯೂ ಇರುವುದಿಲ್ಲ. ಕವನ ಮನಸ್ಸಿನ ಅಂತರಾಳದ ವ್ಯವಹಾರ!  ಮನಸ್ಸಿನ ತುಮುಲ, ಒತ್ತಡ, ಭಾವಗಳ ಕನ್ನಡಿಯೇ ಕವನ. ಉಕ್ಕುವ ಭಾವಗಳು ಸಮರ್ಥವಾದ ಭಾಷೆಯ ರೂಪ ತೊಟ್ಟು ಹೊರಹೊಮ್ಮಿದಾಗ ಕವಿ ಅನುಭವಿಸುವ
ಧನ್ಯತೆಯ ಭಾವವೇ ಬಹುಶಃ ಎಲ್ಲಕ್ಕಿಂತಾ ಶ್ರೇಷ್ಟವಾದುದು!

ಅದಕ್ಕೆಂದೇ ಕವಿ ಶೆಲ್ಲಿ ಹೇಳುತ್ತಾನೆ. ‘A Poet is a nightingale who sits in darkness and sings to cheer its own solitude with sweet sounds’ ಒಬ್ಬ ಕವಿ ಕೋಗಿಲೆಯಂತೆ, ಅವನು ಕತ್ತಲಲ್ಲಿ ಕುಳಿತು ತನ್ನ ಅನಾಥ ಒಂಟಿತನ ನೀಗಲು ಸಿಹಿಯಾದ ದನಿಯಲ್ಲಿ ಹಾಡುತ್ತಾನೆ ಎನ್ನುತ್ತಾನೆ. ಎಷ್ಟು ನಿಜವಾದ ಮಾತಲ್ಲವೇ ಸಖಿ? ಆದ್ದರಿಂದಲೇ …….

ಸಹೃದಯನ ಮೆಚ್ಚುಗೆ, ವಿಮರ್ಶಕನ ಟೀಕೆ ಎಲ್ಲಾ ಬಾಹ್ಯ ಬದುಕಿಗೆ ಸಂಬಂಧಿಸಿದ್ದು, ಆದರೆ ಎಲ್ಲಕ್ಕೂ ಮುಖ್ಯವಾದುದು, ಪ್ರಥಮವಾದುದು ಕವಿಯ ಅಂತರಂಗದ ಆತ್ಮ ಸಂತೋಷ! ಕವಿಗೆ ಆತ್ಮ ಸಂತೃಪ್ತಿಯನ್ನು ನೀಡದ ಕವನ ಎಂದೂ ಗೆಲ್ಲುವುದಿಲ್ಲ ಅಲ್ಲವೇ ಸಖಿ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರಿಗೆ ಬಿದ್ದ ಹೆಣ್ಣು
Next post ಎನ್. ಎಸ್. ಎಫ್

ಸಣ್ಣ ಕತೆ

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys