ಕಂಡೆಯಾ ಗೆಳೆಯಾ, ನೀನು ಕಂಡೆಯಾ
ಕೌರವನ ಕಗ್ಗತ್ತಲ ಕವಡೆ
ಕವಿಯುತ್ತ ತಿವಿಯುತ್ತ
ಸೀರೆ ಸೆಳೆಯುತ್ತ ಸಭಾಪರ್‍ವವಾದದ್ದು ಕಂಡೆಯಾ
ಶರೀರ ತುಂಬ ಸಿಂಹಾಸನ ತುಂಬಿ
ಮಧುಮತ್ತ ನಾದ ಬಿಂದು
ಎದೆಯನ್ನು ಸದೆ ಬಡಿದು
ಆದದ್ದು ಮತ್ತೇನೂ ಅಲ್ಲ ಗೆಳೆಯ-
ಅಧಿಕಾರ ಕೇಂದ್ರೀಕರಣ
ಮನಸ್ಸಿನ ಮರಣ.

ಹಸ್ತಿನಾಪುರದ ಹೊಟ್ಟೆಯೊಳಗೆ
ಕೌರವನ ಗದೆ ತಿರ್ರನೆ ತಿರುಗಿ
ಮೂರ್ಛೆಗೆ ಸಂದ ಸತ್ಯ
ಧರ್ಮಜನ ಬಾಯ ಬಿಳಿನೊರೆಯಾದದ್ದು
ಭೀಷ್ಮದ್ರೋಣಾದಿಗಳಲ್ಲಿ ಬಿಸಿ ತುಪ್ಪವಾದದ್ದು
ಫ್ಯೂಡಲ್ ರೆಕ್ಕೆ ಬಿಚ್ಚಿದ ರಣಹದ್ದು
ನರನಾಡಿಗಳಲ್ಲಿ ಹಾರಾಡುತ್ತ ಎದೆಗೆ ಎರಗಿದ್ದು
ಕಂಡೆಯಾ ಗೆಳೆಯಾ, ನೀನು ಕಂಡೆಯಾ
ಆಸ್ಥಾನದ ತುಂಬ ಅಲ್ಲೋಲ ಕಲ್ಲೋಲ ಕಂಡೆಯಾ.

ಕೊಟ್ಟ ಮಾತಿಗೆ ಕಟ್ಟೆ ಕಟ್ಟಿ ಕೈ ಕಟ್ಟಿಸಿಕೊಂಡು
ಧರ್‍ಮರಾಯನು ‘ಧರ್ಮಸ್ಥಿತಿಯನ್ನು ಕೊಂಡು’
ಸರಪಂಚರ ಎದುರೇ ಪಾಂಚಾಲಿ ಪೊರೆ
ಕಳಚಿ ಬೀಳುತ್ತಿದ್ದಾಗ ಭೀಮಾರ್‍ಜುನರು
ಹೊಟ್ಟೆಯೊಳಗೆ ರಟ್ಟೆ ಇಟ್ಟುಕೊಂಡ ಕಟ್ಟಾಳುಗಳು!

ರಣಹದ್ದು ಬಡಿದು, ಬಿದ್ದಿತು-
ಒಣಹದ್ದಿನ ಗುಬ್ಬಚ್ಚಿ ಗೋಣು,
ಗೆದ್ದ ಪ್ರಭುವಿನ ಎದುರು
ಸೋತ ಪ್ರಭುವಿನ ಶರಣು.

ಧೃತರಾಷ್ಟ್ರ ಕುರುಡಿಗೆ ಸದಾ ಸಂಜಯ
ಬೇಕೆಂದರೆ ಬದುಕಿಗೆ ಬೆಲೆ ಬಂದೀತು ಹೇಗೆ?

ಬೆತ್ತಲಾಗುತ್ತಿದ್ದಾಗ ಕತ್ತಲ ಸೀಳಿದ
ಪಾಂಚಾಲಿ, ಪ್ರಜೆಯಾದಳು!
ಪ್ರಭುಗಳಿಗೆ ಸಜೆಯಾದಳು-
ನೊಂದ ನೆಲ ಬಿರಿದು ಬಾಯಾದಳು.
* * *

ಅಧಿಕಾರವೆಂದರೆ ಅದೆಂಥ ಅಧಿಕಾರ!
ಅಗಸ್ತ್ಯಾಪೋಶನವಾಯ್ತಲ್ಲ ಗೆಳೆಯ
ಗಟಗಟನೆ ಕುಡಿದ ಕಮಂಡಲ ಕೇಂದ್ರಿತ ಜಾಲ
‘ಬರಿದೊ ಬರಿದೊ ತುತ್ತಿನ ಚೀಲ’
ಬರಿಗೊಡಗಳಿಗೆ ಸಮಾಧಾನ ಹೇಳಲು ಭಗೀರಥ ಬೇಕೆ?
ಪರಾಕು ಪೈರು ಒಣಗಿದ್ದು, ಮೌಲ್ಯ ಮಾತಾಡಬೇಕೆ?
ಅದಕ್ಕೆ ಪಾಂಚಾಲಿ ಪ್ರಜ್ಞೆ ಬೇಕು
ಮಾನ ಮೂರುಕಾಸಾಗುವಾಗ
ಮೂಕವಾಗದ ಮಾತು ಬೇಕು.
* * *

ಅತ್ತ ನೋಡಿದೆಯಾ ಗೆಳೆಯಾ ಆ ಕರ್‍ಣನ ಪಾಡು
ಗೆಳೆಯಾ ಗೆಳೆಯಾ ಎನ್ನುತ್ತಲೇ
ನಾಯಕ ನಿಷ್ಠೆಯಲ್ಲಿ ನರಬಲಿ!
ಸೂತನಾದನೆಂದು ಸುತನೆನ್ನಲಿಲ್ಲಾ ತಾಯಿ
ಮಹಾಭಾರತ ಮಾತೆ ಸುಜನ ಸಂಪ್ರೀತೆ!
ಮೈ ಕುರು-ಕ್ಷೇತ್ರವಾದಾಗ ಮಗ ನೆನಪಿಗೆ ಬಂದ
ಎಲ್ಲಿರುವೆ ನನ ಕಂದ?

ಕೃಷ್ಣ ಕುಂತಿಯರ ಕರುಳ ಕಣ್ಣುಮುಚ್ಚಾಲೆಯಲ್ಲಿ
ತಮ್ಮಂದಿರ ತಾಯಿಗೆ ಮೀರದ ಮಾತು ಕೊಟ್ಟ.
ಎದೆಯಾಳದಲ್ಲಿ ಬಿರುಗಾಳಿಯ ಬೇಲಿ ಬಿತ್ತಿ
ನಡುವೆ ನಿಷ್ಟೆಯ ನಾಲಿಗೆ ನೆಟ್ಟ.

ನೂರು ನಷ್ಟದ ನಾಗರ ಕಚ್ಚಿದರೂ ನಾಲಗೆ ವಿಷವಾಗಲಿಲ್ಲ
ಅಧಿಕಾರ ಮಮಕಾರಗಳ ಜಗ್ಗಾಟದಲ್ಲೂ ಜಾರಲಿಲ್ಲ
ಅವಮಾನ ಅರಮನೆಯಲ್ಲಿ ಅರಳಿದ ಈ ಪರಿಯ
ಹೇಗೆ ಹೇಳಲಿ ಗೆಳೆಯಾ?

ಬವಣೆ ಬತ್ತಳಿಕೆ ತುಂಬಿತ್ತು ತವರಾಗಿ
ಸಂಕಟದ ಸರ್‍ಪಗಳು ಹೊರಬಂದವೊ
ಗೆಳೆಯ, ಬಾಣವಾಗಿ;
ಹೃದಯ ತುಂಬಿದ ಮಾತು ಹರಿದಿತ್ತು ಬೆವರಾಗಿ
ಪ್ರೀತಿ ನೀತಿಯ ಗೂಢ ಹೊರಬಿದ್ದಿತೊ
ಗೆಳೆಯ, ಪ್ರಾಣವಾಗಿ!
* * *

ಕರ್‍ಣನ ಮರಣ ಮಾತಾಡಿದ್ದು-
ಏಕಲವ್ಯನ ಕೊರಗು, ಕಂಡೆಯಾ!
ಹಾರಿಹೋಗುವ ಪ್ರಾಣ ಏಕಲವ್ಯನ ಬಾಣ
ಬಡಿದಿತ್ತು ನೀತಿ ಬಂಡೆಯ!

ಛಿದ್ರವಾಯಿತು ಚರಿತೆ
ಚೀರಿ ಎಗರಿತು ಚಿರತೆ
ಹಸಿರು ಕಾಡಿನ ತುಂಬ ಉಗುರು ಗುರುತು
ಏಕಲವ್ಯನ ಬೆರಳು
ಪಾರ್‍ಥ ವೀರನ ಉರುಳು
ನರಳುತ್ತ ಬರೆದಿತ್ತು ನೆಲದ ಕೊರಳು

ಹುಟ್ಟು ಬೇಡನ ಬೆಳಕು
ಕತ್ತರಿಸಿ ಬಿದ್ದಿತ್ತು
ಅರಮನೆಯ ಆಸೆಗೆ
ಕಾಡು ಕೊರಗಿತ್ತು

ರಾಜ ಮೂಲದ ಹುಟ್ಟು ಬೆಳೆದದ್ದು ಬೆಸ್ತ
ಅರಮನೆಯ ಅವಮಾನ ತಪ್ಪಲಿಲ್ಲ
ಕರ್‍ಣ ಕಷ್ಟದ ಕೊರಳು ಏಕಲವ್ಯನ ಬೆರಳು
ನೆಲದಾಳ ನರಳುವುದು ನಿಲ್ಲಲಿಲ್ಲ.
* * *

ಏನ ಹೇಳಲಿ ಗೆಳೆಯ ಯುದ್ಧದ ಕತೆಯ
ಎದೆಗೆ ಬಿದ್ದಿತು ಬಾಣ
ಚೀರಿ ಚಿಮ್ಮಿತ್ತು ರಕ್ತ
ಪಚ ಪಚನೆ ಕಾಲ್ತುಳಿತಕ್ಕೆ
ಭೂ ಸಂಬಂಧದ ಬಿರುಕು
‘ಉರಿಯ ಪೇಟೆಗಳಲಿ ಪತಂಗದ ಸರಕು’

ಎಲ್ಲಿ ಹೋಯಿತು ಆ ತಂತಿನಾದ?
ಮನುಜ ಕುಲ ಕಂಠ ಏಕನಾದ?
ಮುಡಿದು ಹೋಯಿತೇ ಮಿಡಿತ
ಈ ಕೂಲಿ ಕಾಳಗದಲ್ಲಿ?
ಹಾರಿ ಹೋಯಿತೇ ಹಸಿರು
ಬರದ ಬಿರುಗಾಳಿಯಲ್ಲಿ?

ಅಭಿಮನ್ಯು ಸಾವೊಂದು ಸಾಲದೆ
ಸತ್ತ ಸತ್ಯದ ಸಂಕೇತಕ್ಕೆ
ಎಳೆವಯಸಿನ ಬೆಳೆ ಕನಸಿಗೆ
ಕಿಚ್ಚಿಟ್ಟ ಯುದ್ಧೋನ್ಮಾದಕ್ಕೆ ?

ವ್ಯೂಹ ಹೊಕ್ಕ ಮೇಲೆ ಬದುಕು ಬಲೆ-
ಯಾದದ್ದು, ಜೀವಜೇಡ ಬಲಿ-
ಯಾದದ್ದು, ಗೆಳೆಯಾ ನೀನು ಕಂಡೆಯಾ
ಅಧಿಕಾರ ಹರಿದ ನರದಲ್ಲಿ ನರಸತ್ತ
ವೀರಾವೇಶದ ಕುರುಡು ಕಂಡೆಯಾ
ಕೇಂದ್ರ ಪ್ರಭು ಕೌರವನ ಕಣ್ಣಲ್ಲಿ
ನೆತ್ತರ ಕೇಕೆ ಕಂಡೆಯಾ

ಕೇಳು ಗೆಳೆಯ ಮನ ತೆರೆದು ಕೇಳು
ಜಯ ಮರೀಚಿಕೆ ಹೊಕ್ಕ ಹದ್ದಿನ ಕೊಕ್ಕು
ಕಣ್ಣ ಕಿತ್ತು ಗೋಲಿ ಹೊಡೆದು
ಕರುಳ ಕಿತ್ತು ಹಾರ ಧರಿಸಿ
ಎದೆಯಾಕಾಶದಲ್ಲಿ ಹಾರುತ್ತಿವೆ.

ಮಗ್ಗಲು ಮುರಿಸಿಕೊಂಡ ಮೋಡಗಳು
ತಲೆ ಮರೆಸಿಕೊಂಡಿವೆ
ಅಪ್ಪಳಿಸುವ ಅಟ್ಟಹಾಸಕ್ಕೆ
ನಕ್ಷತ್ರಗಳು ನಡುಗುತ್ತಿವೆ
ಬೆಳದಿಂಗಳು ಬೆವರೊಡೆದು
ಮರಗಿಡಗಳು ಮುಲುಕುತ್ತಿವೆ.
ಪುಟ ತುಂಬುವ ಫ್ಯೂಡಲ್ ಪ್ರತಿಷ್ಠೆಯಲ್ಲಿ
ಅಕ್ಷರಗಳು ಅಳುತ್ತಿವೆ.
* * *

ನೆತ್ತರ ಮಡುವಿನಲ್ಲಿ
ಮಾತು ನಿಲ್ಲಿಸಿದ ಕರ್‍ಣನ ಕಾಲ ಚಕ್ರ
ಮತ್ತೆ ಮಾತಾಡಲೇಬೇಕಲ್ಲ?
ಚೂರು ಚೂರಾದ ವರ್‍ತಮಾನದ ತುರ್‍ತಲ್ಲಿ
ಚರಿತ್ರೆ ಚಲಿಸಲೇಬೇಕಲ್ಲ?
ಬಂದಿತದೋ ಕೌರವನ ಕಾಲು-
ರಥವಿಲ್ಲದ ಚಕ್ರ!
ಹೆಣಗಳ ನಡುವೆ ರಣ ಹದ್ದು
ಕಂಡೀತೆಂದು ನಡಗುವ ಗದೆಗೆ
ದಾರಿ ಬಿಡಿಸುವ ದಾಸನ ಕೆಲಸ

ಆಳುತ್ತಿದ್ದಾನೆ ಆಳದಿಂದ
ನುಡಿಯುತ್ತಿದ್ದಾನೆ ನಿಜದಿಂದ
ಮನಸ್ಸು ಮರುಹುಟ್ಟು ಪಡೆದದ್ದು
ಸಾವಿರ ಸಾವಿನ ನಂತರ
ಸಭಾಪರ್‍ವದ ಕವಡೆ ಕಣ್ಣಿಗೂ
ಕುರುಕ್ಷೇತ್ರದ ಕೆಮ್ಮಣ್ಣಿಗೂ
ಎಷ್ಟೊಂದು ಅಂತರ!
* * *

ಭೂಮಿ ಭೋರ್‍ಗರೆದು
ಕಾಲು ಕೈ ಮುರಿದು
ಕುರ್‍ಚಿಯಾಯಿತು ಗೆಳೆಯ ಸಿಂಹಾಸನ!
ಕಿರೀಟದ ಕಣ್ಣು ಮಣ್ಣಾಗಿ
ಬಣ್ಣ ಬೆಡಗು ಹಣ್ಣಾಗಿ
ನಾಲಗೆ ನುಡಿಯಿತು ಗೆಳೆಯಾ ಬರೀ ನರ್‍ತನ!

ಹೆಜ್ಜೆ ಹೆಜ್ಜೆಯಲ್ಲಿ ಹೊಮ್ಮುತ್ತಿದೆ
ಪ್ರಜಾಪ್ರಭುತ್ವದ ಹಕ್ಕಿನ ನಾದ
ಆದರೂ ನಿನಗೆ ಗೊತ್ತಿದೆಯಲ್ಲ?
ಉಕ್ಕುವ ಹಕ್ಕಿನುತ್ತಾಹದಲ್ಲೂ
ಕಾಣದ ಕೊಕ್ಕಿನ ಕಾರುಬಾರು
ಧಿಕ್ಕಾರವೆಂದರೂ ದೇಶಾವರಿ ನಗೆಯಲ್ಲಿ
ಹೊಗೆ ಆವರಿಸಿ ಕಟ್ಟಿದ ಉಸಿರು.
ಕುರ್‍ಚಿಗೆ ಕ್ಷಯ
ಬಡಿದರೂ ಆಸ್ತಿ ಅಕ್ಷಯ
ಎಂಥ ಮಹಿಮೆ ಗೆಳೆಯ!

ಯುದ್ಧ ನಿಂತಿದೆ ಒಳಗೆ
ಎಲ್ಲ ಸರಳ ರೇಖೆ!
ಯುದ್ಧ ನಡೆದಿದೆ ಹೊರಗೆ
ಅಧಿಕಾರ ಬಯಕೆ.
ಕಾಡು ಬೆಳದಿದೆ ಒಳಗೆ
ನಾಶವಾಗಿದೆ ಹೊರಗೆ
ಒಳಕಾಡು ಹುಡುಕಾಡುತ್ತಿಲ್ಲ-
ಮಳೆಯ ಮೂಲ;
ಸಿಂಹ ಸಾಮ್ರಾಜ್ಯದಲ್ಲಿ ನರಿ ಸಿಂಹಾಸನ
ಒಣ ಮರಗಳ ಜಾಲ.

ದೇಶ ದೇಶದ ನಡುವೆ ವರ್‍ಗ ವರ್‍ಗದ ನಡುವೆ
ವರ್‍ಗದೊಳಗಿನ ಲಾಭೋನ್ಮಾದದ ನಡುವೆ
ನಡೆಯುತ್ತಲೇ ಇದೆ ಗೆಳೆಯ
ಸಾವ ತಿನ್ನುತ್ತ ಜೀವ ಉಳಿಸಿಕೊಳ್ಳುವ ಸಮರ
ಬಂಡವಾಳಿಗರ ಬ್ಯಾಂಕಿನಲ್ಲಿ ಭೂಮಾಲಿಕರ ಖಾತೆಯಲ್ಲಿ
ಪುರೋಹಿತರ ಪೀಠದಲ್ಲಿ ಬೆವರ ತಿನ್ನುವ ಕಾಟದಲ್ಲಿ
ಎಲ್ಲ ಕಟ್ಟಿದರಿಲ್ಲಿ ಪುಣ್ಯ ಸೌಧ-
ಜಾತಿ ವರ್ಗದ ಜೈಲು; ಸಮತೆ ಸ್ವಪ್ನ.

ಸೀರೆ ಸಳದು ಸೂರೆ ಮಾಡಿದ ಮೇಲೆ
ಸತ್ತ ಭೂಮಿಯ ಸುತ್ತ ಸಂತಾಪ ಸಭೆ
ನಮ್ಮ ವಿಧಾನ ಸಭೆ, ಲೋಕ ಸಭೆ!

ಕನ್ನೊಳಗೆ ಆಟಂಬಾಂಬು ತುಂಬಿ
ಕೊಂಡು ನೋಡಬೇಡ ಗೆಳೆಯಾ
ನಾಲಗೆ ನ್ಯೂಟ್ರಾನಾಗಿ ನುಡಿಯಬೇಡ
ಮೂಗೊಳಗೆ ತೂರಿ-ಬರುವ
ಭೂ ಪಾಲ
ಗ್ಯಾಸ್ ಗರಗಸಕ್ಕೆ ಕಿವಿ ಮುಚ್ಚಬೇಡ.

ಸ್ವಾತಂತ್ರ್ಯದ ಭ್ರಮೆ ಬಡಿದರೆ
ಸ್ವಾತಂತ್ರ್ಯವೇ ಗುಲಾಮ
ಹೋರಾಟಕ್ಕೆ ವಿರಾಮ.

ಕೇಳು ಗೆಳೆಯಾ ನಿನ್ನ ಒಳಗಿವಿ ತೆರೆದು
ಮೆದುಳು ಮನದಲ್ಲಿ ಖಚಿತ ಬರೆದು

ಬಾಳ ತೋಟದ ತುಂಬ
ಕೂಗಿ ಕರೆಯುವ ಕಂಪು
ಕಾಡ ಕತ್ತಲೆ ಅಳಿಸಿ
ಬೆಳಕು ಬಿತ್ತುವ ಕೆಂಪು
ಭೂಮಿ ಬೆಳೆಯಲ್ಲಿ ಕಳೆ ಕಿತ್ತು
ರಣಹದ್ದು ಒಣಗುತ್ತ ಬಂದಾಗ
ಬತ್ತೀತು ಗುಪ್ತ ಗುಲಾಮಗಿರಿಯ
ಆಪ್ತ ವಲಯ!
*****