ಕಾಲವೆಂದಿಗೂ ಕಾಯುವುದಿಲ್ಲ
ಕಾರ್‍ಯೋನ್ಮುಖನಾಗು|
ಕಾಲವ ಅರೆಸುತ ಕಾಲವ ಕಳೆಯದೆ
ಇಂದೇ ಪ್ರಾರಂಭಿತನಾಗು||
ಭ್ರಮೆಯಲಿ ಬದುಕದೆ
ಚಿಂತೆಯಲೇ ಮುಳುಗದೆ
ಸಾಧನೆ ಕಡೆಗೆ ನೀ ಮುಖಮಾಡು||

ಇಂದಿನ ದಿನವೇ ಶುಭದಿನವು
ಈಗಿನ ಘಳಿಗೆಯೇ ಶುಭಘಳಿಗೆಯು|
ಯಾವ ದಿನವೂ ಅಶುಭವಲ್ಲ
ಎಲ್ಲಾ ಸಮಯ ಶುಭಸಮಯ||

ದುಡಿದು ತಿನ್ನುವವರಿಗೆ
ಒಳ್ಳೆಯದನೇ ಮಾಡುವವರಿಗೆ
ಕಾಲವ ನೋಡುವ ಅವಶ್ಯಕತೆಯಿಲ್ಲ|
ಧರ್‍ಮದಿ ನಡೆದು
ನ್ಯಾಯದಿ ಜೀವಿಸಲು
ಕಾಲಕೆ ಹೆದರುವ ಅಂಜಿಕೆಯಿಲ್ಲ||
*****