ಮುಸ್ಸಂಜೆಯ ಮಿಂಚು – ೧೮

ಮುಸ್ಸಂಜೆಯ ಮಿಂಚು – ೧೮

ಅಧ್ಯಾಯ ೧೮ ಜಸ್ವಂತ್ ಮತ್ತೆ ನಿರಾಸೆ

ಆಶ್ರಮದ ಕೆಲಸಗಳ ಮಧ್ಯೆ, ಮಿಂಚುವಿನ ಒಡನಾಟದಲ್ಲಿ ಹೆಚ್ಚು-ಕಡಿಮೆ ಜಸ್ವಂತ್ ಮರೆತೇಹೋಗಿದ್ದ. ಮೊದಮೊದಲು ಆಗೊಮ್ಮೆ ಈಗೊಮ್ಮೆ ನೆನಪಾಗಿ ಮನಸ್ಸು ಕದಡುತ್ತಿದ್ದರೂ ಇತ್ತೀಚೆಗೆ ನೆನಪೇ ಆಗುತ್ತಿರಲಿಲ್ಲ. ಅಂದಿನ ತಿಂಗಳ ಲೆಕ್ಕಾಚಾರದಲ್ಲಿ ಮುಳುಗಿಹೋಗಿದ್ದ ರಿತುವಿನ ಜಸ್ವಂತ್ ಧುತ್ತೆಂದು ಕಣ್ಮುಂದೆ ನಿಂತಾಗ ಕನಸೋ-ನನಸೋ ತಿಳಿಯದೇ ತಬ್ಬಿಬ್ಬಾಗಿದ್ದಳು. ಆ ಕ್ಷಣ ಅವನನ್ನು ಕಂಡಾಗ ಹೃದಯ ಬಿರಿದದ್ದಂತೂ ನಿಜವಾಗಿತ್ತು. ಹರ್ಷ ತಾಳಲಾರದೆ,

“ಜಸ್ಸು, ಏನೋ ಇದು? ನೀನಿಲ್ಲಿ? ನಂಗೆ ನಂಬೋಕೇ ಆಗ್ತಾ ಇಲ್ಲ. ಯಾವಾಗ ಬಂದೆ? ಹೇಗಿದ್ದೀಯಾ?” ಜೋರಾಗಿಯೇ ಕೇಳಿದಳು. ಅವಳ ಎದೆಬಡಿತ ಅವಳಿಗೇ ಕೇಳುವಂತಿತ್ತು. ಸೂರಜ್ ಕೂಡ ಆವಾಕ್ಕಾಗಿ ಕತ್ತೆತ್ತಿ ನೋಡಿದ್ದ. ಸಡಗರದಿಂದ ಮೇಲೆದ್ದ ರಿತು,

“ಸರ್, ಇವನು ನನ್ನ ಫ್ರೆಂಡ್ ಜಸ್ವಂತ್‌, ಅಮೆರಿಕಾದಲ್ಲಿದ್ದಾನೆ. ಜಸ್ಸು, ಇವರು ನಮ್ ಬಾಸ್ ಸೂರಜ್ ಅಂತ”
ಪರಿಚಯಿಸಿದಳು. ಸೂರಜ್ ಎದ್ದು ಬಂದು ಕೈಕುಲುಕಿ, “ನಿಮ್ಮಭೇಟಿ ಮಾಡಿದ್ದು ತುಂಬಾ ಸಂತೋಷ ಆಯ್ತು” ಎಂದ. ಜಸ್ಸು ಸುಮ್ಮನೆ ನಕ್ಕನು.

“ರಿತು, ಸ್ವಲ್ಪ ಫ್ರೀ ಮಾಡಿಕೊಂಡು ಹೊರಗಡೆ ಬರ್ತಿಯಾ? ಸರ್, ಸ್ವಲ್ಪ ರಿತುನಾ ಕಳುಹಿಸಿಕೊಡ್ತೀರಾ?” ಕೇಳಿದ ಸೂರಜ್ ಕಡೆ ತಿರುಗಿ.

“ಖಂಡಿತ, ಹೋಗಿ ಬನ್ನಿ ರಿತು, ಆಮೇಲೆ ಈ ಕೆಲಸ ಮಾಡಿದರಾಯಿತು” ಎಂದ.

ರಿತು ಜಸ್ವಂತ್‌ನೊಂದಿಗೆ ಹೊರಗೆ ಹೆಜ್ಜೆ ಹಾಕಿದಳು.

“ಇಲ್ಲೇ ತೋಟದಲ್ಲಿ ಕೂತ್ಕಳ್ಳೋಣ ಬಾ ಜಸ್ಸು ತಣ್ಣಗೆ ಗಾಳಿ ಬೀಸ್ತಾ ಇದೆ” ಎನ್ನುತ್ತ ಮರದ ಕೆಳಗೆ ಹಾಸಿದ್ದ ಕಲ್ಲುಬೆಂಚಿನ ಮೇಲೆ ಕುಳಿತುಕೊಂಡಳು.

“ಈಗ ಹೇಳು ಜಸ್ಸು, ಅಮೆರಿಕಾದಿಂದ ಯಾವಾಗ ಇಳಿದೆ? ಒಂದು ಪತ್ರ ಕೂಡ ಬರೀಲಿಲ್ಲ. ಹೋಗಲಿ, ಒಂದು ಫೋನ್ ಆದ್ರೂ ಮಾಡಬಾರದಿತ್ತೇ? ಮತ್ತೆ ನೋಡ್ತೀನಿ ಅಂತಾನೇ ಅಂದುಕೊಂಡಿರಲಿಲ್ಲ.” ನಂಗಂತೂ ನಿನ್ನ ನೋಡ್ತೀನಿ ಅಂತಾನೆ ಅಂದುಕೊಂಡಿರಲಿಲ್ಲ.”

“ನಾನು ಬಂದು ಒಂದು ವಾರ ಆಯ್ತು ರಿತು. ಅರ್ಜೆಂಟಾಗಿ ಬರಬೇಕಿತ್ತು” ಗಂಭೀರವಾಗಿತ್ತು ಸ್ವರ.

“ಓಹೋ! ಮದುಮಗ ಆಗ್ತಾ ಇದ್ದೀಯಾ, ಅಥವಾ ಆಗೇಬಿಟ್ಟಿದ್ಯಾ? ಮದ್ವೆ ಮಾಡ್ಕೊಂಡು ಹೋಗು ಅಂತ ಬಲವಂತ ಮಾಡಿದ್ರಾ?” ಲಘುವಾಗಿ ಕೇಳಿದಳು.

“ರಿತು, ಕೀಪ್ ಕ್ವಾಯ್ಟ್, ಯಾವಾಗ, ಏನು ಮಾತಾಡಬೇಕು ಅಂತ ಗೊತ್ತಾಗಲ್ವ ನಿಂಗೆ” ರೇಗಿದ. “ನಾನು ಯಾಕೆ ಇಲ್ಲಿಗೆ ಬಂದಿದ್ದೇನೆ ಗೊತ್ತಾ?”

“ಸ್ಸಾರಿ ಕಣೋ, ನೀನು ಹೇಳದೆ ನಂಗೆ ಹ್ಯಾಗೆ ಗೊತ್ತಾಗಬೇಕು ಹೇಳು.”

“ನಮ್ಮ ಅಪ್ಪ ಹೋಗಿಬಿಟ್ಟರು ರಿತು. ಅದಕ್ಕೆ ನಾನು ಬಂದಿರೋದು.”

“ಏನು, ಅಂಕಲ್ ಹೋಗಿಬಿಟ್ಟರಾ? ಏನಾಗಿತ್ತು?” ಮತ್ತೊಂದು ಶಾಕ್ ನ್ಯೂಸ್ ಅವಳಿಗೆ. ಜಸ್ಸುನ್ನ ನೋಡಿದ್ದೇ ಒಂದು ಶಾಕ್ ಆದರೆ, ಅವರಪ್ಪ ತೀರಿಕೊಂಡಿರುವುದು ಮತ್ತೊಂದು ಶಾಕ್. ದೇವರೇ, ಇದೇನಿದು ಸಾವಿನ ಸುದ್ದಿಗಳು, ಶಾರದಮ್ಮನ ಸಾವಿನ ಸುದ್ದಿಯಿಂದಲೇ ನಾನಿನ್ನೂ ಚೇತರಿಸಿಕೊಂಡಿಲ್ಲ. ಈಗ ಜಸ್ಸುವಿನ ಅಪ್ಪನ ಸಾವು, ನಂಬೋಕೆ ಆಗ್ತಾ ಇಲ್ಲ. ಅಷ್ಟು ಚೆನ್ನಾಗಿದ್ದರಲ್ಲ. ನಂಬಲೇ ಅಸಾಧ್ಯ. ವೇದನೆಯಿಂದ ಮುಖ ಕಿವುಚಿಕೊಂಡದ್ದವನ ಕಣ್ಣಲ್ಲಿ ನೀರು ಅಪ್ರಯತ್ನವಾಗಿ ಇಳಿಯಿತು.

ಅವನ ಎರಡೂ ಕೈಗಳನ್ನು ತನ್ನ ಹಸ್ತದಲ್ಲಿರಿಸಿಕೊಂಡು ಅದುಮಿದಳು. ಬಾಯಲ್ಲಿ ಹೇಳಲಾರದ ಸಾವಿರ ಮಾತುಗಳು, ಸಾವಿರ ಸಾಂತ್ವನಗಳು ಆ ಸ್ಪರ್ಶದಲ್ಲಿತ್ತು. ಅವಳಿಗೂ ಅಳು ಉಕ್ಕಿಬಂದಿತು. ಅವನ ಭುಜಕ್ಕೊರಗಿ ಬಿಕ್ಕಳಿಸಿದಳು.

“ರಿತು, ಏನಿದು? ನನ್ನನ್ನ ಸಮಾಧಾನ ಮಾಡಬೇಕಾದವಳು ನೀನೇ ಅಳ್ತಾ ಇದ್ದೀಯಾ?”

“ಜಸ್ಸು, ಅಂಕಲ್ ನಂಗೇನೂ ಅಲ್ವಾ? ನಾವಿಬ್ರೂ ಮದ್ವೆ ಆಗಿದ್ದಿದ್ರೆ ಅವರು ನನಗೂ ಹತ್ತಿರದವರಾಗಿರುತ್ತಿದ್ದರು ಅಲ್ವಾ ಜಸ್ಸು? ಈ ನೋವನ್ನ ಹೇಗೆ ತಡೆದುಕೊಂಡೆ? ಅಂಕಲ್ ಅಂದ್ರೆ ನಿಂಗೆಷ್ಟು ಪ್ರಾಣ ಅಂತ ನಂಗೊತ್ತು. ಹೇಗೆ ಇದ್ದಿಯೋ ಜಸ್ಸು?” ಅಳುತ್ತಲೇ ಕೇಳಿದಳು.

ಕಣ್ಣೀರು ಒರೆಸಿಕೊಂಡು ನಗುವ ಯತ್ನ ಮಾಡುತ್ತ, “ನೋಡು, ಹೇಗಿದ್ದೇನೆ? ಅಪ್ಪನ ಕೊನೆಗಳಿಗೇಲಿ ಹತ್ತಿರದಲ್ಲಿಲ್ಲದ ಪಾಪಿ ಮಗ ನಾನು. ನಾನು ಬರೋವರೆಗೆ ಬಾಡಿ ಇಟ್ಕೊಂಡಿದ್ದರು. ಆಮ್ಮನ್ನಂತೂ ನೋಡೋಕೆ ಸಾಧ್ಯ ಇಲ್ಲ ಕಣೆ ರಿತು. ಏನೇನೋ ಹೋಯಿತಲ್ಲೇ ಆಗಿ ಹೋಯಿತಲ್ಲೇ ನನ್ನ ಬಾಳಿನಲ್ಲಿ, ನಾನು ಅಂದುಕೊಂಡಿದ್ದೇನು ? ಈಗ ಆಗ್ತಾ ಇರೋದು ಏನು? ನನಗೆ ಯಾಕೆ ಹೀಗಾಗ್ತಾ ಇದೆ ರಿತು?” ವಿಷಾದಭರಿತವಾಗಿ ಹೇಳುತ್ತಿದ್ದರೆ ರಿತು ಹನಿಗಣ್ಣಾಗಿ ಅವನನ್ನು ನೋಡುತ್ತಿದ್ದಾಳೆ. ಯಾವ ರೀತೀಲಿ ಸಮಾಧಾನ ಮಾಡಬೇಕು ಅನ್ನೋದನ್ನ ತಿಳಿಯದೆ ಮಂಕಾಗಿದ್ದಾಳೆ. ಸತ್ತಿರುವವರು ಬೇರೆ ಯಾರೋ ಅಲ್ಲ, ತನ್ನ ಜಸ್ಸುವಿನ ತಂದೆ. ನನಗೂ ಅದೆಷ್ಟು ಹತ್ತಿರವಾಗಿದ್ದರು. ಈಗ ಇಲ್ಲ ಎಂದರೆ ನಂಬುವುದಾದರೂ ಹೇಗೆ?

“ರಿತು, ಯಾಕೆ ಹಾಗೆ ಕುಳಿತುಬಿಟ್ಟೆ? ನಾವು ಈಗ ಎಷ್ಟು ಅತ್ತರೂ ಅವರೇನು ವಾಪಸ್ಸು ಬರುವುದಿಲ್ಲ. ನಿನಗೂ ವಿಷಯ ತಿಳಿಸೋಕೆ ಆಗಲಿಲ್ಲ. ಪಾಪ, ಅಮ್ಮ ಒಬ್ಬರೇ ಅದು ಹೇಗೆ ಮ್ಯಾನೇಜ್ ಮಾಡಿದ್ರೂ? ಆ ದೇವರೇ ನಿಂತು ಎಲ್ಲಾ ನಡೆಸಿಕೊಟ್ಟಿದ್ದಾನೆ. ಮುಂದಿನ ವಾರವೇ ನಾನು ಹೋಗ್ತಾ ಇದ್ದೀನಿ. ಮತ್ತೆ ಇಲ್ಲಿಗೆ ಬರ್ತಿನೋ ಇಲ್ಲವೋ?” ರಿತುವನ್ನೇ ದಿಟ್ಟಿಸಿದ.

“ಆಂಟಿ?” ಕೇಳಿದಳು.

“ಅಮ್ಮನ್ನೂ ಕರ್ಕೊಂಡು ಹೋಗ್ತಾ ಇದ್ದೀನಿ” ಮತ್ತೆ ಮೌನಕ್ಕೆ ಶರಣಾದ.

“ರಿತು, ನಾನು ಯಾಕೆ ಇಲ್ಲಿಗೆ ಬಂದಿದ್ದೀನಿ ಅಂತ ಗುತ್ತಾ ರಿತು? ನಿನ್ನ ಮರೆಯೋಕೆ ನನ್ನಿಂದ ಸಾಧ್ಯವಾಗ್ತಾ ಇಲ್ಲ ರಿತು. ನಾನು ಕಂಡಿದ್ದ ಕನಸುಗಳು ನನ್ನಿಂದ ಮರೆಯಾಗ್ತಾ ಇಲ್ಲ ರಿತು. ನಾನೊಂದು ಭರವಸೆ ಕಿರಣ ಹಿಡಿದು ಇಲ್ಲಿವರೆಗೂ ಓಡಿ ಬಂದಿದ್ದೀನಿ. ಆ ಕಿರಣ ಆರದಂತೆ ನನ್ನ ಹೃದಯದ ಪ್ರೇಮವನ್ನೆಲ್ಲ ಒತ್ತೆ ಇಟ್ಟಿದ್ದೇನೆ. ಹೇಳು ರಿತು, ಆ ಜ್ಯೋತಿಗೆ ತೈಲ ಎರೆಯುತ್ತೀಯಾ?” ಅವಳ ಭುಜಗಳನ್ನು ಹಿಡಿದು, ಕಣ್ಣಲ್ಲಿ ಕಣ್ಣಿಟ್ಟು ಭಾವೋದ್ವೇಗದಿಂದ ನುಡಿದ.

ಮೆಲ್ಲನೆ ಅವನ ಕೈಗಳನ್ನು ತನ್ನ ಭುಜಗಳಿಂದ ಸರಿಸಿದ ರಿತು, “ಜಸ್ಸು, ನೀನೀಗ ತುಂಬಾ ಉದ್ವೇಗದಲ್ಲಿದ್ದೀಯಾ, ಅಂಕಲ್ ಸತ್ತ ನೋವು ಇನ್ನೂ ನಿನ್ನಿಂದ ಮರೆಯಾಗಿಲ್ಲ. ಈಗ ಆ ವಿಷಯಗಳಿಗೆಲ್ಲ ಕಾಲ ಸೂಕ್ತ ಅಲ್ಲ ಜಸ್ಸು” ಮೆಲ್ಲನೆ ಹೇಳಿದಳು.

“ರಿತ್ತು, ಮಾತಿನ ಹಾದಿ ಬದಲಿಸಬೇಡ. ನನಗೆ ಅನ್ನಿಸಿದ ಭಾವನೆಗಳಾವುವೂ ನಿನ್ನ ಕಾಡುತ್ತಿಲ್ಲವೇ? ನಾವಿಷ್ಟು ವರ್ಷ ಒಬ್ಬರನ್ನೊಬ್ಬರು ಪ್ರೀತಿಸಿದ್ದೇ ಸುಳ್ಳೆ? ನನ್ನ ಪ್ರೇಮ ಪವಿತ್ರವಾಗಿರಲಿಲ್ಲವೇ?”

“ಜಸ್ಸು, ಜಸ್ಸು, ಏನಾಗಿದೆ ನಿಂಗೆ? ಯಾಕೆ ಹೀಗೆ ಎಕ್ಸೈಟ್ ಆಗ್ತೀಯಾ? ಈಗ್ಯಾಕೆ ಹಳೆಯ ವಿಷಯಗಳೆಲ್ಲ?”

ನಿಜವಾಗಿಯೂ ರಿತು‌ಏಗೆ ಅವೆಲ್ಲ ಬೇಕಾಗಿರಲಿಲ್ಲ. ಯಾವುದನ್ನು ಮರೆತು ನೆಮ್ಮದಿಯಾಗಿ ತನ್ನ ಗುರಿ ಸಾಧಿಸಲು ಹೆಜ್ಜೆ ಇಡುತ್ತಿದ್ದಳೋ ಆ ನೆನಪುಗಳು ಮತ್ತೆ ಅವಳಿಗೆ ಬೇಡವಾಗಿದ್ದವು. ಯಾವುದು ಮುಗಿದುಹೋದ ಅಧ್ಯಾಯ ಅಂದುಕೊಂಡಿದ್ದಳೋ ಆ ಪುಟಗಳನ್ನು ಮತ್ತೆ ತೆರೆಯುವುದೇ ಬೇಕಿರಲಿಲ್ಲ. ಆದರೆ ಅದನ್ನು ನೇರವಾಗಿ ಹೇಳಲಾರದೆ ತತ್ತರಿಸುತ್ತಿದ್ದಾಳೆ. ಅದು ಈ ಸಮಯದಲ್ಲಿ ಹೆತ್ತ ತಂದೆಯನ್ನು ಕಳೆದುಕೊಂಡು ಕತ್ತಲಲ್ಲಿ ಕಂಗೆಟ್ಟಿರುವ, ಮಗುವಿನ ಮನಸ್ಸು ಹೊಂದಿರುವ ಜಸ್ಸುವಿಗೆ ಈಗ ಹೇಗೆ ಹೇಳಬೇಕೆಂದು ತಿಳಿಯದೆ ಸಂಕಷ್ಟಕ್ಕೊಳಗಾಗಿದ್ದಾಳೆ. ಯಾಕೆ ಈ ಅಗ್ನಿಪರೀಕ್ಷೆ?

“ಜಸ್ಸು, ನಂಗೆ ಸ್ವಲ್ಪ ಸಮಯ ಕೊಡು. ನಿನ್ನ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುತ್ತೇನೆ. ನಿನ್ನ ಮನಸ್ಥಿತಿ ಈಗ ಸರಿ ಇಲ್ಲ. ಮೊದಲು ಆಂಟಿ ಕಡೆ ಗಮನ ಕೊಡು. ಅಷ್ಟು ವರ್ಷಗಳ ಸಹಚರ್ಯದ ಸಂಗಾತಿಯನ್ನು ಕಳೆದುಕೊಂಡು ಕಂಗಾಲಾಗಿರುವ ನಿನ್ನಮ್ಮನನ್ನು ಸಮಾಧಾನಿಸು. ಅಪ್ಪ ಸತ್ತರೇನು, ನಾನಿದ್ದೇನೆ ಎಂಬ ಭರವಸೆ ಕೊಡು. ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟ ಹಾಗೆ ಇದೆ ಅವರ ಸ್ಥಿತಿ. ಈ ವಯಸ್ಸಿನಲ್ಲಿ ಅವರಿಗೆ, ಈ ಪರಿಸ್ಥಿತಿಯಲ್ಲಿ ಸದಾ ನೀನಿರಬೇಕು ಅವರ ಜತೆ, ಮೊದಲು ಅತ್ತ ನಿನ್ನ ಗಮನ ಕೇಂದ್ರೀಕರಿಸು, ಈಗ ಮನೆಗೆ ಹೋಗೋಣ ನಡೆ” ಅವನ ಮನಸ್ಸನ್ನು ತಿರುಗಿಸುವಲ್ಲಿ ಯಶಸ್ವಿಯಾಗಿ ಜಸ್ಸುವನ್ನು ಹೊರಡಿಸಿದಳು.

“ಮನೆಗೆ ಬೇಡ ರಿತು, ಈ ಸ್ಥಿತಿಯಲ್ಲಿ ನಿಮ್ಮ ಮನೆಗೆ ಬರಲಾರೆ. ನಾನು ಸೀದಾ ಊರಿಗೆ ಹೋಗುತ್ತೇನೆ. ಮತ್ತೆ ಯಾವಾಗ ಬರಲಿ ಹೇಳು” ನಿರೀಕ್ಷೆ ತುಂಬಿದ ದನಿಯಲ್ಲಿ ಕೇಳಿದ.

“ನಾನೇ ಬರ್ತಿನಿ ಜಸ್ಸು, ಆಂಟಿನಾ ಮಾತನಾಡಿಸಬೇಕು. ನಾಡಿದ್ದು ಭಾನುವಾರ ಅಲ್ಲವೇ, ರಜಾ ಇರುತ್ತೆ, ನಿಮ್ಮೂರಿಗೆ ಬರ್ತಿನಿ.”

“ಸರಿ ಹಾಗಾದ್ರೆ, ನಾನು ಹೊರಡುತ್ತೇನೆ, ನಾನು ಬರಲಾ?” ಹೊರಡಲಾರದ ಮನಸ್ಸಿನಿಂದ ಹೊರಟು ನಿಂತ, ಅವನು ಹೋಗುವುದನ್ನೇ ನೋಡುತ್ತ ನಿಂತಳು ರಿತು. ಮನಸ್ಸಿಗೇನೋ ಶೂನ್ಯ ಆವರಿಸಿತು ಆ ಗಳಿಗೆಯಲ್ಲಿ. ಈ ಮನಸ್ಥಿತಿಯಲ್ಲಿ ಒಳಹೋಗಿ, ಕೆಲಸ ಮಾಡಲಾರೆ ಎನಿಸಿ ಅಲ್ಲಿಯೇ ಕುಸಿದು ಕುಳಿತಳು. ಜಸ್ಸು ಇಡೀ ಮನಸ್ಸಿನ ತುಂಬಾ ತುಂಬಿಕೊಂಡಿದ್ದ. ಅಂದೆಲ್ಲ ಮನಸ್ಸು ಅಸ್ತವ್ಯಸ್ತ. ಯಾವುದರ ಮೇಲೆಯೂ ಆಸಕ್ತಿ ಉಳಿದಿರಲಿಲ್ಲ. ಆಶ್ರಮದ ಯಾರೊಂದಿಗೂ ಸಹಜವಾಗಿ ಮಾತನಾಡಲಾರದಾದಳು. ಮಿಂಚು ಕೂಡ ಅವಳನ್ನು ಹಿಡಿದಿಡಲಾಗಲಿಲ್ಲ. ಮಿಂಚುವನ್ನು ಕಂಡದ್ದೇ ಅವಳ ಯೋಚನೆಗಳು ಮತ್ತೂ ಬಲವಾದವು. ಇನ್ನು ಕೆಲಸ ಮಾಡಲೇ ಅಸಾಧ್ಯವೆನಿಸಿ ತಲೆ ಸಿಡಿಯತೊಡಗಿತು.

“ರಿತು, ಯಾಕೆ ಡಲ್ಲಾಗಿದ್ದೀರಾ? ಹುಷಾರಿಲ್ವಾ?” ಕಳಕಳಿಯಿಂದ ಸೂರಜ್ ಪ್ರಶ್ನಿಸಿದ.

“ಮನಸ್ಸಿಗೆ ಹುಷಾರಿಲ್ಲ ಸಾರ್‌, ಜಸ್ಸು ತಂದೆ ಹೋಗಿಬಿಟ್ಟರಂತೆ. ಆ ವಿಷಯ ಕೇಳಿದಾಗಿನಿಂದ ಮನಸ್ಸೇ ಸರಿ ಇಲ್ಲ. ಜಸ್ಸು ತುಂಬಾ ಅಪ್‌ಸೆಟ್ ಆಗಿಬಿಟ್ಟಿದ್ದಾನೆ. ಅವನನ್ನು ಸಮಾಧಾನಿಸುವಲ್ಲಿ ನಂಗೆ ಸಾಕುಸಾಕಾಯಿತು. ಅವನನ್ನು ಸಮಾಧಾನಿಸುವುದಿರಲಿ, ನನ್ನನ್ನೇ ಅವನು ಸಮಾಧಾನಿಸಬೇಕಾಯಿತು. ಯಾಕೆ ಈ ಸಾವು ಹೀಗೆ ಕಾಡುತ್ತೋ?” ಭಾರವಾದ ಮನಸ್ಸಿನಿಂದ ನುಡಿದಳು.

“ಓಹ್! ಸ್ವಾರಿ ರಿತು. ನೀವಿನ್ನೂ ಶಾರದಮ್ಮಸತ್ತ ಸುದ್ದಿನೇ ಅರಗಿಸಿಕೊಂಡಿರಲಿಲ್ಲ. ಮತ್ತೆ ಮತ್ತೊಂದು ಸಾವಿನ ಸುದ್ದಿ. ವೆರಿ ಬ್ಯಾಡ್” ಸಂತಾಪದಿಂದ ಹೇಳಿದ.

“ನಿಮ್ಮ ಫ್ರೆಂಡ್‌ನ ತುಂಬಾ ನಿರಾಶೆಗೊಳಿಸಿ ಕಳುಹಿಸಿದಿರಾ?” ನೇರವಾಗಿ ಬಂದ ಪ್ರಶ್ನೆಗೆ ತಬ್ಬಿಬ್ಬಾಗಿ,

“ಏನ್ ಸರ್, ನೀವು ಹೇಳ್ತಾ ಇರೋದು?” ಅರ್ಥವಾಗದೆ ಪ್ರಶ್ನಿಸಿದಳು.

“ಜಸ್ಸು ಹೋಗುವಾಗ ನಂಗೆ ಸಿಕ್ಕಿದ್ದರು. ಬರುವಾಗ ಇದ್ದ ಸಂತೋಷ, ಖುಷಿ ಹೋಗುವಾಗ ಕಾಣಲಿಲ್ಲ. ಕಾಲೆಳೆದುಕೊಂಡು ಹೋಗುತ್ತಾ ಇದ್ದ ಅವರನ್ನು ನೋಡಿ ಪಾಪ ಅಂತ ಅನ್ನಿಸ್ತು. ನನ್ನ ಊಹೆ ಸರಿಯಾಗಿದೆ ತಾನೇ? ಜಸ್ಸು ನಿಮ್ಮೆ ಬರೀ ಫ್ರೆಂಡ್ ಮಾತ್ರ ಅಲ್ಲ ನಿಮ್ಮ ಖಾಸಗಿ ವಿಷಯಕ್ಕೆ ತಲೆ ಹಾಕ್ತಾ ಇದ್ದೀನಿ ಅಂತ ತಿಳ್ಕೊಬೇಡಿ.”

“ಖಂಡಿತ ಇಲ್ಲ ಸಾರ್. ಜಸ್ಸು ಈಗ ನಂಗೆ ಬರೀ ಫ್ರೆಂಡ್ ಅಷ್ಟೇ” ನಿರ್ಭಾವದಿಂದ ನುಡಿದಳು.

“ಅಂದ್ರೆ, ಮುಂಚೆ ಬರೀ ಫ್ರೆಂಡಾಗಿರಲಿಲ್ಲ ಅಂತನಾ?” ಹೌದೆನ್ನುವಂತೆ ತಲೆ ಆಡಿಸಿದಳು.

“ನನ್ನ ಹತ್ರ ಹೇಳ್ಕೊಬಹುದಲ್ಲವೇ? ನನ್ನ ನಿಮ್ಮ ಫ್ರೆಂಡ್ ಅಂತ ತಿಳ್ಕೊಳ್ಳಿ. ನಾನು ಬಂದಾಗಿನಿಂದ ನಿಮ್ಮನ್ನ ಗಮನಿಸ್ತಾ ಇದ್ದೀನಿ. ನೀವು ನಂಗೆ ದೂರ ಅಂತಾನೇ ಅನ್ನಿಸುತ್ತಾ ಇಲ್ಲ. ಆದ್ರೆ ನೀವೇ ನನ್ನ ಸರ್ ಸರ್ ಅಂತ ಬಾಸ್‌ನ ಸ್ಥಾನ ಕೊಟ್ಟುಬಿಟ್ಟಿದ್ದೀರಿ” ಸಂದರ್ಭವನ್ನು ತಿಳಿಗೊಳಿಸಲು ಆತ್ಮೀಯವಾಗಿ ಮಾತನಾಡಿದ.

ಸೂರಜ್‌ನ ಸ್ನೇಹ ತುಂಬಿದ ಮಾತುಗಳು ಅವಳ ದುಗುಡವನ್ನು ಕೊಂಚ ದೂರಗೊಳಿಸಿದವು.

“ಅದು ಹಾಗಲ್ಲ ಸರ್” ಮುಂದೆ ಹೇಳುತ್ತಿದ್ದವಳನ್ನು ತಡೆಯುತ್ತ, “ಮತ್ತೆ ಸರ್ ಅಂತನಾ?”

“ಅಲ್ಲ ಸಾರ್, ನೀವು ಈ ಸಂಸ್ಥೆಯ ಒಡೆಯರು. ನಿಮ್ಮನ್ನ ಹಾಗೆ ಕರೀಬೇಕು ಸರ್”.

“ನಾನು ಬೇಡ ಅಂತ ಇದ್ದೀನಲ್ಲ ರಿತು. ನಾನೇನು ನಿಮ್ಮನ್ನ ಮೇಡಮ್ ಅಂತ ಕರೆದು ದೂರ ಇಟ್ಟಿದ್ದೀನಾ? ಅಪ್ಪ-ಅಮ್ಮನ್ನ ಬಿಟ್ಟು ಇಷ್ಟು ದೂರ ಬಂದಿದ್ದೀನಿ. ಆ ಗಿಲ್ಟ್ ನನ್ನ ಕಾಡ್ತಾ ಇದೆ. ತಾತ ಎಷ್ಟೇ ಹತ್ತಿರದಲ್ಲಿದ್ದರೂ ನನ್ನ ಮನಸ್ಸಿನ ದ್ವಂದ್ವ ಕಡಿಮೆ ಆಗ್ತಾ ಇಲ್ಲ. ಇಲ್ಲಿ ನಂಗೆ ಯಾರೂ ಆತ್ಮೀಯರು ಇಲ್ಲ. ನನ್ನ ನೋವು, ಬೇಸರ, ಸಂತೋಷ ಎಲ್ಲವನ್ನೂ ಹಂಚಿಕೊಳ್ಳೋ ಒಂದು ಒಳ್ಳೆಯ ಹೃದಯ ಬೇಕು. ಒಬ್ಬಳು ಒಳ್ಳೆಯ ಫ್ರೆಂಡ್ ಬೇಕು ಅಂತ ಬಯಸ್ತಾ ಇದ್ದ ನಂಗೆ ನೀವು ಸಿಕ್ಕಿದಿರಿ. ನಿಮ್ಮ ನಡೆ-ನುಡಿ-ಮನಸ್ಸು ನಂಗೆ ತುಂಬಾ ಇಷ್ಟವಾಯ್ತು. ಆದರೆ ನನ್ನನ್ನ ಎಲ್ಲಿ ನೀವು ಅಪಾರ್ಥ ಮಾಡಿಕೊಳ್ಳುತ್ತೀರೋ ಅಂತ ಅದನ್ನೆಲ್ಲ ಹೇಳೋಕೆ ಹಿಂಜರಿದೆ. ಇವತ್ತು ನೀವಾಗಿಯೇ ಆತ್ಮೀಯವಾಗಿ ಮಾತಾಡಿದ್ರಿ. ನಂಗೂ ಧೈರ್ಯ ಬಂತು. ಗೆಳೆಯರಿಲ್ಲದ ಬದುಕು ಬದುಕೇ ಅಲ್ಲ ಅಲ್ವಾ ರಿತು. ಈಗ ನೀವೇ ನೋಡಿ, ನಿಮ್ಮ ಗೆಳೆಯ ಬಂದು ಹೋದಾಗಿನಿಂದ ಎಷ್ಟು ಡಲ್ಲಾಗಿದ್ದೀರಾ?”

ಬೆರಗಿನಿಂದ ಅವನ ಮಾತುಗಳನ್ನು ಆಲಿಸಿದಳು. ಜಸ್ಸು ಹೋದ ಮೇಲೆ ಅವಳು ಯಾರನ್ನೂ ಫ್ರೆಂಡ್ ಮಾಡಿಕೊಂಡಿರಲಿಲ್ಲ. ಜಸ್ಸು ಇರುವಾಗಲೂ ಅವನನ್ನು ಬಿಟ್ಟು ಯಾರೊಂದಿಗಿನ ಸ್ನೇಹವೂ ಅವಳಿಗಿರಲಿಲ್ಲ. ತನ್ನೆಲ್ಲ ಭಾವನೆಗಳನ್ನು ಅವನೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದ್ದಳು. ಅವನು ದೂರವಾದ ಮೇಲೆ ಅಂಥ ಸ್ನೇಹ ಬೇಕೇ ಬೇಕು ಎನಿಸಿರಲಿಲ್ಲ. ಅಥವಾ ಅಂಥ ಸಂದರ್ಭಗಳೇ ಬಂದಿರಲಿಲ್ಲವೇನೋ? ಆದರೆ ಇವತ್ತು ಮಾತ್ರ ಹೃದಯವೆಲ್ಲ ಬರಿದಾಗಿ, ಮನಸ್ಸೆಲ್ಲ ಖಾಲಿ ಖಾಲಿ ಎನಿಸಿದ್ದು ಸುಳ್ಳಲ್ಲ. ತನ್ನೊಳಗಿನ ಶೂನ್ಯವನ್ನು ತುಂಬಲು ತನಗೊಬ್ಬ ಫ್ರೆಂಡ್ ಬೇಕೆನಿಸಿದ್ದು ಸುಳ್ಳಲ್ಲ. ಮನದೊಳಗಿನ ಹೋರಾಟವನ್ನು ಯಾರೊಂದಿಗಾದರೂ ಹೇಳಿಕೊಂಡು ಹಗುರಗೊಳ್ಳಬೇಕು. ಯಾರಾದರೂ ತನಗೆ ಒಂದಿಷ್ಟು ಸಲಹೆ ನೀಡಿ ಸಂತೈಸಬೇಕೆಂಬ ಅನಿಸಿಕೆ ಬಲವಾಗಿದ್ದು ಇಂದೇ. ಕಾಕತಾಳೀಯ್ ಎಂಬಂತೆ ಸೂರಜ್‌ಗೂ ಹಾಗೆ ಅನ್ನಿಸಬೇಕೇ? ಇಬ್ಬರ ಮನಸ್ಸಿನಲ್ಲಿಯೂ ಸ್ನೇಹದ ತುಡಿತ, ಆತ್ಮೀಯತೆಯ ಸೆಳೆತ, ಒಂಟಿತನ ಹೋಗಲಾಡಿಸುವ ತವಕ. ಅಬ್ಬಾ! ಇದೆಂಥ ವಿಚಿತ್ರ ?

“ಯಾಕೆ ರಿತು ಸುಮ್ಮನಾಗಿಬಿಟ್ಟಿರಿ. ನಾ ಹೇಳಿದ್ದು ಸರಿಯಲ್ವ?” ಸೂರಜ್ ಅವಳ ಮೌನ ಮುರಿಯುವ ಯತ್ನ ನಡೆಸಿದ.

“ಖಂಡಿತ ಸರಿ ಸೂರಜ್‌, ಇಂಥ ಸಮಯದಲ್ಲಿಯೇ ಗೆಳೆತನ ಬೇಕಾಗಿರುವುದು. ಮನಸಿನ ಭಾವನೆಗಳನ್ನು ಹಂಚಿಕೊಳ್ಳುವ ಹಿತವಾದ ಸ್ನೇಹ ಯಾರಿಗೆ ಬೇಡ ಹೇಳಿ” ಎದೆಯಾಳದಿಂದ ಮಾತುಗಳು ಹೊರಬಂದವು.

“ಹಾಗಾದ್ರೆ ಇವತ್ತಿನಿಂದ ನಾವಿಬ್ರೂ ಫ್ರೆಂಡ್ಸ್, ಅದನ್ನ ಪ್ರೂವ್ ಮಾಡಬೇಕು ಅಂದ್ರೆ ನಾವು-ನೀವು ಅನ್ನೋ ಈ ಬಹುವಚನ ಇವತ್ತಿಗೆ ಸ್ಟಾಪ್. ಏನಂತಿಯಾ ರಿತು?”

“ನಾನು ನಿಮ್ಮನ್ನ ಏಕವಚನದಲ್ಲಿ ಮಾತಾಡಿಸಿದರೆ ಸರಿ ಹೋಗಲ್ಲ ಸಾರ್, ನೀವು ಬೇಕಾದ್ರೆ ಹಾಗೆ ಕರೀರಿ” ಸಂಕೋಚಿಸುತ್ತ ಹೇಳಿದಳು, “ನೋ…. ನೋ. ಫ್ರೆಂಡ್‌ಶಿಪ್‌ನಲ್ಲಿ ಸಮಾನತೆ ಇರಬೇಕು. ಯಾರೂ ಏನೂ ಅಂದುಕೊಳ್ಳಲ್ಲ. ನೀನ್ಯಾಕೆ ಹಾಗಂತಿದೀಯಾ ಅಂತ ನಂಗೆ ಗೊತ್ತು. ತಾತ, ಈ ಆಶ್ರಮದವರು, ಏನಾದರೂ ಅಂದುಕೊಳುತ್ತಾರೆ ಅಂತ ತಾನೇ? ಅದಕೆಲ್ಲ ತಲೆಕೆಡಿಸಿಕೊಳ್ಳಬಾರದು. ತಾತ ಅಂತೂ ಇನ್ನೂ ಸಂತೋಷಪಡ್ತಾರೆ….” “ಸರಿ ಸೂರಜ್, ನೀನು ಹೇಳಿದಂತೆ ಆಗಲಿ.”

“ವರಿಗುಡ್. ನೀನೀಗ ಗುಡ್ ಗರ್ಲ್” ಎಂದಾಗ ಕಿಲಕಿಲನೆ ನಕ್ಕಳು ರಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಸಾವೇ!
Next post ಹೂವಿನ ಭಾಷೆ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…