ಕೆಳದಿ ಚೆನ್ನಮ್ಮಳ ಕವಲೇ ದುರ್ಗಕ್ಕೆ

‘ಕವಲೇ ದುರ್ಗಕ್ಕೆ ಬೈಸಿಕಲ್ಲು ಜಾಥಾ ಏರ್ಪಡಿಸುವ ಯೋಜನೆ ಕೈಗೂಡುತ್ತಿದೆ. ಯುಜಿಸಿ ಗ್ರಾಂಟು ಬಂದಿದೆ. ರಿಜಿಸ್ಟಡ್ರ್‌ ಆದ ಸಾಹಸ ಸಂಸ್ಥೆಯೊಂದರ ಆಶ್ರಯದಲ್ಲಿ ಜಾಥಾ ನಡೆಯಬೇಕಂತೆ. ‘

ನಮ್ಮ ಕಾಲೇಜು ಪೀಡಿ ಮಾಣಿಬೆಟ್ಟು ರಾಧಾಕೃಷ್ಣ ಹೇಳಿದ. ಸದಾ ಕಾಲ ಗಂಟಿಕ್ಕಿ ಕೊಂಡೇ ಇರುವ ಮುಖದ ಪೀಡಿಯನ್ನು ನಾನು ಛೇಡಿಸುತ್ತಿದ್ದುದುಂಟು ‘ನೀನು ದೇವೇಗೌಡರ ಹಾಗೆ ಮಾರಾಯ’

ಆಗ ಪೀಡಿ ನಗುತ್ತಿದ್ದ!

ತುಡುಗು ಹುಡುಗರ ಪಡೆಯೊಡನೆ ಜಲಪಾತ, ರಿಜ್ಜುವಾಕು ಮುಗಿಸಿ ಬಂದಾಗ ಪೀಡಿ ನನ್ನಲ್ಲಿ ಕೇಳಿದ್ದ.

‘ಉಡುಪಿಯಿಂದ ಕವಲೇದುರ್ಗಕ್ಕೆ ಬೈಸಿಕಲ್ಲು ಜಾಥಾ ಏರ್ಪಡಿಸಿದರೆ ನೀನು ಬರುತ್ತೀಯಾ?’

ದೂರ ಕೇವಲ 80 ಕಿ.ಮೀ.

‘ಅದೇನು ಮಹಾ! ಉಡುಪಿಯಿಂದ ಬೈಸಿಕಲ್ಲಲ್ಲಿ ಒಂದೇ ದಿನದಲ್ಲಿ ಶಿವಮೊಗ್ಗೆಗೂ ಹೋದೇನು.’
ಪೀಡಿ ತನನ ಅಮೂಲ್ಯ ಅಪರೂಪದ ನಗೆನಕ್ಕ.

‘ಹೋಗೋದು ಬರೋದು 160ಕಿ ಮೀ ಆಗುತ್ತದೆ. ಮಧ್ಯದಲ್ಲಿ ಆಗುಂಬೆ ಘಾಟಿ ಸಿಗುತ್ತದೆ.’

‘ಸಿಗ್ಲಿ ಪೀಡಿ. ನೀನಿರ್ತಿಯಲ್ಲಾ?’

‘ಇತರ್ತೀನಿ. ಎಳೆ ಪ್ರಾಯದಲ್ಲಾದರೆ ಓಕೆ. ತಾರುಣ್ಯದಲ್ಲಿ ನಾನು ಸಾಕಷ್ಟು ಸೈಕಲ್ಲು ಹತ್ತಿದವನೆ. ಈ ಪ್ರಾಯದಲ್ಲಿ ಬೇಡ ಮಾರಾಯ. ನಾನು ಬರೋದು ವ್ಯಾನಲ್ಲಿ.’

‘ಓಕೆ. ಹಿಂದಿರುವಾಗ ಆಗುಂಬೆ ಘಾಟಿಯ ಮೇಲಿಂದ ನಿನ್ನನ್ನು ಬೈಸಿಕಲ್ಲಲ್ಲಿ ಕೂರ್ಸಿ ತಳ್ಳಿ ಬಿಡ್ತೀನಿ. ಹತ್ತೋಕಾಗ್ದಿದ್ರೂ ಇಳಿಯೋಕಾಗ್ದಿದ್ರೂ ಚಿಂತಿಲ್ಲ.’

ಈಗ ಪೀಡಿ ಹೊ ಹೊ ಹ್ಹೋ ಎಂದು ಮಿನಿ ಅಟ್ಟಹಾಸಗೈದ.

ಉಡುಪಿ ಕೃಷ್ಣನ ಬಂಟರು

ಉಡುಪಿ ರಥ ಬೀದಿಯ ಬೃಹತ್‌ ಲಾಜ್‌ನಲ್ಲಿ ನಾವು ತಂಗಿದ್ದೆವು. ಅಂದು 2006 ಫೆಬ್ರವರಿ 23. ಉಡುಪಿ ಯುತ್‌ ಹಾಸ್ಟೆಲ್ಸ್‌ ಗ್ರೂಪಿನ ಲೀಡರು ಅಡಿಗರು ಆಕ್ರಿಕೆ ತಾಗಿದವ ರಂತೆ ಓಡಾಡುತ್ತಿದ್ದರು. ಅವರು ಮೊಬೈಲು ಕಳಕೊಂಡಿದ್ದರು.

ನನ್ನ ಹತ್ತಿರ ಕೂತಿದ್ದ ಮೇಜರ್‌ ಗಿರಿಧರ್‌ರೊಡನೆ ಪಿಸುಗುಟ್ಟಿದೆ.

‘ಈ ಅಡಿಗ್ರಿಗೆ ಎಪ್ಪತ್ತರ ಅಂದಾಜು. ಮೊಬೈಲು ಕಳಕೊಂಡರೇನಂತೆ ? ಅದ್ಯಾವ ತಲೆಕೆಟ್ಟ ಹುಡುಗಿ ಇವ್ರಿಗೆ ಎಸ್ಸೆಮ್ಮೆಸ್ಸ್‌ ಮಾಡಿಯಾಳು?’

ಗಿರಿಧರ್‌ ಕಿಸಕ್ಕನೆ ನಕ್ಕರು. ಅವರನ್ನು ನಾನು ಕರೆಯುತ್ತಿದ್ದುದು ಪಟೇಲರೆಂದು! ಹಳೇ ಪಟೇಲರುಗಳು ರಸಿಕತೆಗೊಂದು ರೂಪಕ!

ಗಿರಿಧರ್‌ರ ನಗು ಅಡಿಗರಿಗೆ ಕೇಳಿಸಿತು. ಅವರು ನನ್ನ ಹತ್ತಿರ ಬಂದು ವಿವರಿಸಿದರು.

‘ನಿಮ್ಮ ಬೈಸಿಕಲ್ಲು ಜಾಥಾಕ್ಕೆ ಒಂದು ತಿಂಗಳಿಂದ ಒದ್ದಾಡ್ತಿದ್ದೀನಿ. ಮನೆಯಲ್ಲಿ ಹೆಂಡತಿಗೆ ಮೈ ಹುಷಾರಿಲ್ಲ. ತುಂಬಾ ಟೆನ್‌ಷನ್‌ನಲ್ಲಿದ್ದೇನೆ. ‘

‘ಸಾರಿ ಸರ್‌. ನಿಮ್ಮ ಅಸಿಸ್ಟಂಟ್ಸ್‌ ಇದ್ದಾರಲ್ಲಾ? ಅವ್ರನ್ನು ಕಳಿಸಿ. ನಾವು ಅಡ್‌ಜಸ್ಟ್‌ ಮಾಡ್ಕೂತೀವಿ.’

ಆರಂಭದ ಎರಡು ಶಬ್ದ ಬಿಟ್ಟರೆ ನನ್ನ ಮೂರು ವಾಕ್ಯಗಳಲ್ಲಿ ಬೇರಾವುದೂ ಅಡಿಗರಿಗೆ ಹಿಡಿಸಿದಂತೆ ಕಾಣಲಿಲ್ಲ. ಅವರು ದುರ್ದಾನ ತೆಗೆದುಕೊಂಡವರಂತೆ ಎದ್ದು ಹೋದರು.
ಪೀಡಿ ಮತ್ತು ಗಿರಿಧರ್‌ ಸುಳ್ಯದಿಂದ ಸುಬ್ರಹ್ಮಣ್ಯ, ಧರ್ಮಸ್ಥಳ ಮಾರ್ಗವಾಗಿ ಬಂದ ಲಾರಿಯಲ್ಲಿದ್ದ 60 ಬೈಸಿಕಲ್ಲುಗಳನ್ನು ಇಳಿಸಲು ನಿರ್ದೇಶನ ನೀಡುತ್ತಿದ್ದರು.

ಅಡಿಗರಂತೆ ನಾವೂ ಕಳೆದ ಒಂದು ತಿಂಗಳಿಂದ ಟೆನ್‌ಶನ್‌ನಲ್ಲಿದ್ದೆವು.

ಬೈಸಿಕಲ್ಲು ಜಾಥಾಕ್ಕೆ ಬಿಡುಗಡೆಯಾದ ಹಣವನ್ನು ರಿಜಿಸ್ಟರ್‌ ಆದ ಸಾಹಸ ಸಂಸ್ಥೆಯ ಹೆಸರಲ್ಲಿ ಬಳಸಬೇಕಿತ್ತು.

ಒಂದು ಸಾವಿರ ವಿದ್ಯಾರ್ಥಿಗಳಲ್ಲಿ ಕೇವಲ ಅರುವತ್ತು ಮಂದಿಯನ್ನು ಆರಿಸಬೇಕಿತ್ತು.

ಬೈಸಿಕಲ್ಲುಗಳನ್ನು ಲಾರಿಯಲ್ಲಿ ಉಡುಪಿಗೆ ಸಾಗಿಸಬೇಕಿತ್ತು.

ಜಾಥಾದ ಅರುವತ್ತು ಮಂದಿಯನ್ನು ಕೂದಲೂ ಕೊಂಕದಂತೆ ಸುಳ್ಯಕ್ಕೆ ವಾಪಾಸು ಕರೆತಂದು ಮುಟ್ಟಿಸಬೇಕಿತ್ತು.

ನಮ್ಮ ಕಾಲೇಜು ಪ್ರಾಚಾರ್ಯ ದಾಮೋದರ ಗೌಡರು ಜಾಥಾಕ್ಕೆ ಹೆಸರು ನೀಡುವ ಅಂತಿಮ ದಿನಾಂಕ ನಮೂದಿಸಿ ಪ್ರಕಟಣೆ ಹೊರಡಿಸಿದರು. ಮಕ್ಕಳ ಒಂದು ಸಭೆ ಕರೆದು ಜಾಥಾದ ಬಗ್ಗೆ ಸ್ಥಿತಪ್ರಜ್ಞನೂ ಉದ್ವೇಗಗೊಳ್ಳುವ ಹಾಗೆ ವಿವರಿಸಿಬಿಟ್ಟರು.

‘ಕೇವಲ 60 ಮಂದಿಗೆ ಅವಕಾಶ. ಫೆಬ್ರವರಿ 23ರಂದು ಸುಳ್ಯದಿಂದ ಹೊರಟು ಉಡುಪಿಯಲ್ಲಿ ತಂಗುವುದು. 24ರಂದು ಉಡುಪಿಯಿಂದ ಆಗುಂಬೆಗೆ. 25 ರಂದು ಆಗುಂಬೆ ಯಿಂದ ಕವಲೇದುರ್ಗಕ್ಕೆ ಹೋಗಿ ಹಾಲ್ಟ್‌. 26ಕ್ಕೆ ಕವಲೇದುರ್ಗದಿಂದ ನೇರ ಉಡುಪಿಗೆ. ಮಧ್ಯದಲ್ಲಿ ಹಾಲ್ಟ್‌ ಇಲ್ಲ. 27ರಂದು ಸುಳ್ಯಕ್ಕೆ. ಇದು ಯುಜಿಸಿ ಪ್ರಾಯೋಜಿತ ಕಾರ್ಯಕ್ರಮ. ಪುಷ್ಕಳ ಊಟ, ಕಾಫಿತಿಂಡಿ ಯಾವುದಕ್ಕೂ ಕಡಿಮೆಯಿರುವುದಿಲ್ಲ. ನಿಮ್ಮ ಹಿಂದೊಂದು ಮುಂದೊಂದು ಪೋಲೀಸು ವ್ಯಾನು ಇರುತ್ತದೆ. ಅಲ್ಲದೆ ನಮ್ಮ ಅಧ್ಯಾಪಕರಿಗಾಗಿ ಮತ್ತೊಂದು ವ್ಯಾನು. ಉಡುಪಿ ಯೂತ್‌ ಹಾಸ್ಟೆಲಿನವರು ಮೂರು ವಾಹನಗಳಲ್ಲಿರುತ್ತಾರೆ. ಒಬ್ಬರು ತಜ್ಞ ವೈದ್ಯರು, ಇಬ್ಬರು ಸುರಸುಂದರಿಯರಾದ ದಾದಿಯರು ಒಂದು ಅಂಬ್ಯುಲೆನ್ಸ್‌ನಲ್ಲಿ ನಿಮ್ಮ ಸೇವೆಗಾಗಿ ಕಾದಿರುತ್ತಾರೆ. ಪೀಡಿ ರಾಧಾಕೃಷ್ಣ ಮತ್ತು ಮೇಜರ್‌ ಗಿರಿದರ್‌ ಈ ಜಾಥಾದ ಪ್ರಧಾನ ಸಂಯೋಜಕರು. ಶಿಶಿಲ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಕೇವರ 60 ಮಂದಿ ಮಾತ್ರ. ನಯನ ಮನೋಹರ ಆಗುಂಬೆಯಲ್ಲಿ ಬೈಸಿಕಲ್ಲಲ್ಲಿ ಹೋಗೋದೇ ಒಂದು ಪುಣ್ಯ. ಕವಲೇ ದುರ್ಗ ಕೆಳದಿ ರಾಣಿ ಚೆನನಮ್ಮಳ ರಾಜಧಾನಿ. ಸಾಹಸದೊಡನೆ ಇತಿಹಾಸದ ಅಧ್ಯಯನಕ್ಕೆ ಅವಕಾಶ. ಮೊದಲು ಬಂದವರಿಗೆ ಆದ್ಯತೆ.

ನಾನು ಪೀಡಿ ಮುಖಮುಖ ನೋಡಿಕೊಂಡೆವು. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರಾಚಾರ್ಯರ ಮಡದಿ ಇತಿಹಾಸ ವಿಭಾಗ ಮುಖ್ಯಸ್ಥರು.

ನಾನೂ ತರಗತಿಗಳಲ್ಲಿ ಬೈಸಿಕಲ್ಲು ಜಾಥಾದ ಬಗ್ಗೆ ಉಪ್ಪು ಖಾರ ಸೇರಿಸಿ ಹೇಳುತ್ತಿದ್ದೆ. ಈಗಾಗಲೇ ಅಂತಿಮ ಬಿ.ಎ.ಯ ಪಡ್ಡೆಗಳ ಜತೆ ನಡೆಸಿದ ಜಾಥಾ ಮತ್ತು ಚಾರಣಗಳು ಎಲ್ಲಾ ಪತ್ರಿಕೆಗಳಲ್ಲಿ ಸುದ್ದಿಯಾಗಿ ಪಡ್ಡೆಗಳಿಗೆ ಸ್ಟಾರ್‌ ವ್ಯಾಲ್ಯೂ ಬಂದುಬಿಟ್ಟಿತ್ತು. ಆದರೆ ಬೈಸಿಕಲ್ಲು ಜಾಥಾಕ್ಕೆ ಯಾರೂ ಹೊರಡುತ್ತಿಲ್ಲ. ಗಾಬರಿಗೊಂಡ ಪೀಡಿ ‘ಗ್ರೌಂಡಿಗೆ ಮಕ್ಕಳು ನನ್ನ ಮುಖ ನೋಡಿ ಬರುತ್ತಿಲ್ಲ. ಜಾಥಾಕ್ಕೆ ನಿನ್ನ ಮುಖ ನೋಡಿಯಾದರೂ ಬರಬಾರದೇ’ ಎಂದು ಹಲುಬತೊಡಗಿದರು. ‘ನಿನ್ನಂತೆ ನಾನೂ ಔಟ್‌ಡೇಟೆಡ್‌ ಆಗ್ತಿದ್ದೇನೆ ಪೀಡಿ’ ಎಂದೆ.

ನೋಂದಣಿಯ ಅಂತಿಮ ದಿನ ಕಳೆಯಿತು. ನೋಂದಾಯಿಸಿದವರ ಒಟ್ಟು ಸಂಖ್ಯೆ ಮೂವತ್ತೆರಡು. ಪೀಡಿಗೆ ಗಾಬರಿಯಾಯಿತು. ಆದರೆ ಮರುದಿನ ಎಪ್ಪತ್ತರಷ್ಟು ಮಂದಿ ಹೆಸರು ನೋಂದಾವಣೆ ಮಾಡಿಸಿಕೊಂಡರು. ಒಟ್ಟು ಒಂದು ನೂರಾ ಎರಡು ಮಂದಿ. ಜಾಥಾದಲ್ಲಿ ಅವಕಾಶವಿದ್ದದ್ದು ಕೇವಲ ಅರುವತ್ತು ಮಂದಿಗೆ ಮಾತ್ರ. ಈಗ ಪೀಡಿಗೆ ಇನ್ನಷ್ಟು ಗಾಬರಿಯಾಯಿತು.

ಪ್ರಾಚಾರ್ಯದ ನೇತೃತ್ವದಲ್ಲಿ ಇಂಟರ್‌ವ್ಯೂ ಕಮಿಟಿ ಅರುವತ್ತು ಮಂದಿಯನ್ನು ಆಯ್ಕೆ ಮಾಡಿತು. ಅಂತಿಮ ಪದವಿಯವರಿಗೆ ಮೊದಲ ಆದ್ಯತೆ. ಆದರೂ ಇಪ್ಪತ್ತು ಮಂದಿ ಹೊರಗುಳಿಯ ಲೇಬೇಕಾಯಿತು. ಅವರ ಆಕ್ರರೋಶ ಮೊದಲು ಕಾಣಿಸಿಕೊಂಡದ್ದು ಪೀಡಿಯ ಮೇಲೆ. ಅವನೋ ಜಗಮೊಂಡ. ಪ್ರಿನ್ಸಿಪಾಲ್‌ ಈಸ್‌ದ ಫೈನಲ್‌ ಅಥಾರಿಟಿ ಎಂದು ಡೆಮಾಕ್ಲಸ್ಸನ ಖಡ್ಗದಿಂದ ಪಾರಾದ.

23ರಂದು ಬೆಳಿಗ್ಗೆ ಕುರುಂಜಿಯವರು ಫ್ಲ್ಯಾಗು ಬೀಸಿ ಶುಭ ಹಾರೈಸಿದರು. ಪ್ರಾಚಾರ್ಯರು ಎಚ್ಚರಿಕೆ ಮಾತುಗಳಿಂದ ಬೀಳ್ಕೊಟ್ಟರು. 60ಬೈಸಿಕಲ್ಲುಗಳನ್ನು ತುಂಬಿಕೊಂಡ ಶ್ರೀಕುರುಂಜಿ ಲಾರಿ ಸುಬ್ರಹ್ಮಣ್ಯದ ಹಾದಿ ಹಿಡಿಯಿತು. ಪೀಡಿ ಮತ್ತು ಗಿರಿಧರ್‌ ಮಕ್ಕಳೊಡನೆ ಪುಣ್ಯ ಕೇತ್ರಗಳನ್ನು ಸಂದರ್ಶಿಸಿ ಉಡುಪಿಗೆ ಬೈಸಿಕಲ್ಲುಗಳನ್ನು ಇಳಿಸಿ ನೋಡಿದರೆ ಕೆಲವು ಪಂಕ್ಚರ್‌, ಕೆಲವು ಚೈನ್‌ ಕಟ್ಟು, ಇನ್ನು ಕೆಲವು ಹ್ಯಾಂಡಲ್‌ ಬೆಂಡ್‌.

ಅದಾಗಲೇ ರಾತ್ರಿ 9 ಆಗಿತ್ತು. ಬೈಸಿಕಲ್ಲು ಈಗ ಮೋಸ್ಟ್‌ ಅವುಟ್‌ಡೇಟೆಡ್‌ ಮತ್ತು ಅನ್‌ವಾಂಟೆಡ್‌ ವೆಹಿಕಲ್ಲು. ಅವುಗಳನ್ನು ಮಾರುವ ಅಂಗಡಿಗಳು ಅಪರೂಪಕ್ಕೆ ಸಿಗಬಹುದು. ರಿಪೇರಿಯವರು.
ಅಡಿಗರು ನೆರವಿಗೆ ಬಂದರು.

‘ಇದು ಶ್ರೀಕೃಷ್ಣನ ನಾಡು. ನಾವು ಅವನ ಬಂಟರು. ಇಲ್ಲಿ ಇಲ್ಲ ಎಂಬ ಪದ ಅರ್ಥ ಕಳಕೊಂಡಿದೆ. ನೀವು ನಿಶ್ಚಿಂತೆಯಿಂದಿರಿ. ಬೆಳಿಗ್ಗೆ ಎಲ್ಲಾ ಬೈಸಿಕಲ್ಲುಗಳು ರಿಪೇರಿಯಾಗಿರುತ್ತವೆ.’ ಊಟವಾಯಿತು. ಅಡಿಗರ ಪಟಾಲಂ ಬಂತು. ದೀಪಕ್‌, ವಿವೇಕ ಕಿಣಿ ಜಗದೀಶ್‌ ಕಾಮತ್‌, ಸುಹಾಸ ಕಿಣಿ, ಉಪೇಂದ್ರ, ಚಿತ್ರಗ್ರಾಹಕ ಗುರುದತ್ತ ಕಾಮತ್‌, ಲೆಕ್ಕ ಪರಿಶೋಧಕ ಉಮಾನಾಥ್‌, ಸ್ವರ್ಣಾ ಜುವೆಲ್ಲರ್ಸ್‌ನ ಮಾಲೀಕ ಗುಜ್ಜಾಡಿ ರಾಜೇಶ ನಾಯಕ್‌, ಪರಿಚಯ ಮಾಡುವಾಗ ನಮ್ಮ ಮಕ್ಕಳಿಗಿಂತ ಹೆಚ್ಚು ತಬ್ಬಿಬ್ಬಾದವನು ಪೀಡಿ. ಪಿಸುಮಾತಿನಲ್ಲಿ ಅವನೆಂದ ‘ಅಲ್ಲ ಮಾರಾಯ, ಇವರೆಲ್ಲಾ ಹುಲಿಗಳು. ನಮ್ಮನ್ನು ಇವರು ಕ್ಯಾರೇ ಮಾಡಲಿಕ್ಕಿಲ್ಲ. ಇಂಥವರೆಲ್ಲಾ ಚಾರಣ ಹೋಗ್ತಾರಾ? ನಾವು ಸುಳ್ಯದವರು ಮದುವೆ, ಮನೆ ಒಕ್ಲು, ಬೊಜ್ಜಗಳಲ್ಲೇ ಆಯಸ್ಸು ಸವೆಸುತ್ತಿದ್ದೇವಲ್ಲಾ!’

ನೀವು ನಕ್ಸಲೈಟುಗಳಾ ?

ಉಡುಪಿ ರಥಬೀದಿಯಲ್ಲಿ ನಾವು ಸಾಲಾಗಿ ಬೈಸಿಕಲ್ಲು ನಿಲ್ಲಿಸಿ ಫ್ಲ್ಯಾಗೋಫಿಗೆ ಕಾದೆವು. ಹಿಂದಿನ ರಾತ್ರಿ ಈ ಟೀವಿಯ ರವಿರಾಜ ವಳಲಂಬೆ ನನ್ನನ್ನು ಭೇಟಿಯಾಗಿ ಎಲ್ಲ ವಿವರ ಸಂಗ್ರಹಿಸಿದ್ದ. ಬೆಳಿಗ್ಗೆ ಅವನು ಉದ್ಛಾಟಕಿ ಆರ್ಟೀವೋ ಓಂಕಾರೇಶ್ವರಿಯೊಡನೆ ಸ್ಥಳದಲ್ಲಿ ನಮಗಿಂತ ಮೊದಲೇ ಹಾಜರಿದ್ದ.

ನನ್ನಲ್ಲಿ ಬೈಸಿಕಲ್ಲಿರಲಿಲ್ಲ. ಕವಲೇದುರ್ಗಕ್ಕೆ ಬೈಸಿಕಲ್ಲಲ್ಲಿ ಹೋಗುವುದು ತನ್ನ ಜೀವಿತದ ಮಹತ್ತರ ಮೈಲಿಗಲ್ಲು ಎಂದು ಭಾವಿಸಿದ್ದ ಆದಿಮಾನವ ಶಿವಪ್ರಸಾದ ದಮ್ಮಯ್ಯ ಗುಡ್ಡೆ ಹಾಕಿದ್ದಕ್ಕೆ ನನ್ನ ಅತಿನಂಬುಗೆಯ ಸಂಗಾತಿ ಬೈಸಿಕಲ್ಲನ್ನು ಅವನಿಗೆ ಕೊಟ್ಟಿದ್ದೆ. ಅಗತ್ಯಕ್ಕೆ ಬೇಕಿದ್ದರೆ ಇರಲೆಂದು ಎರಡು ಹೆಚ್ಚುವರಿ ಬೈಸಿಕಲ್ಲುಗಳನ್ನು ಅಡಿಗರು ಸಿದ್ಧಪಡಿಸಿಟ್ಟಿದ್ದರು. ಆದರೆ ಅದನ್ನು ಅವರು ನನಗೆ ಕೊಡಲು ಒಪ್ಪಲಿಲ್ಲ. ‘ಬೈಸಿಕಲ್ಲು ಜಾಥಾ ಮಕ್ಕಳಿಗಾಗಿ. ನಿಮಗಲ್ಲ’ ಎಂದು ಬಿಟ್ಟರು. ನಾನು ಆದಿ ಮಾನವನನ್ನು ಮನದಲ್ಲೇ ಶಪಿಸಿದೆ.

ಜಾಥಾ ಹೊರಟಿತು. ಬೈಸಿಕಲ್ಲು ಶೂರರು ಮುಂದುಗಡೆ ಅವರಿಗೆ ಪಥ ದರ್ಶಕರಾಗಿ ಉಡುಪಿ ಶ್ರೀಕೃಷ್ಣನ ಬಂಟರು ಮೂವರು ಬೈಕಲ್ಲಿ, ನಾಲ್ವರು ಕಾರಲ್ಲಿ. ಹಿಂದುಗಡೆಯಿಂದ ಎರಡು ವ್ಯಾನುಗಳು. ಅದರಲ್ಲಿ ಪೀಡಿ, ಗಿರಿಧರ್‌ ಜತೆ, ಟಾಡಾ ಕೈದಿಯಂತೆ ಕುಳಿತು ಪಯಣಿಸಿದೆ. ನಾನು ಆದಿ ಮಾನವನಿಗೆ ಬೈಸಿಕಲ್ಲು ಕೊಟ್ಟು ಒಂದು ರೋಚಕ ಅನುಭವ ದಿಂದ ವಂಚಿತನಾದೆ ಎಂದು ಕೈ ಕೈ ಹಿಸುಕಿಕೊಳ್ಳುತ್ತಾ ಪೀಡಿಯೊಡನೆ ವೇದನೆ ತೋಡಿಕೊಂಡೆ. ಅವನಿಗೆ ಒಂದಿಷ್ಟು ಕರುಣೆ ಬರಲಿಲ್ಲ. ಸೈಕಲ್ಲು ಹತ್ತಲಾಗದವ!

ಮಧ್ಯಾಹ್ನ ನಮ್ಮ ಊಟ ಸೋಮೇಶ್ವರದಲ್ಲಿ. ಅದಕ್ಕೆ ಮೊದಲು ಬಾಯಾರಿಕೆ ಯಾದಾಗಲೆಲ್ಲಾ ಹಾದಿಯುದ್ದಕ್ಕೂ ಶ್ರೀಕೃಷ್ಣನ ಭಂಟರು ಶರಬತ್ತು ಕೊಡುತ್ತಿದ್ದರು. ಅವರಲ್ಲಿ ಸೇವಾ ಮನೋಭಾವವಿದ್ದರೂ ನಮ್ಮಿಂದ ಒಂದು ಅಂತರ ಕಾಯ್ದುಕೊಂಡಿದ್ದನ್ನು ಪೀಡಿ ನನ್ನ ಗಮನಕ್ಕೆ ತಂದಿದ್ದ. ಹಿಂದಿನ ರಾತ್ರಿ ಅಡಿಗರು ತಮ್ಮ ತಂಡವನ್ನು ಪರಿಚಯ ಮಾಡಿಕೊಡುವಾಗ ಇವರು ಹಿಮಾಲಯ ಹತ್ತಿದವರು, ಇವರು ಥಾರ್‌ ಮರುಭೂಮಿ ಯಲ್ಲಿ ಚಾರಣ ಮಾಡಿದವರು, ಇವರು ರಾಕ್‌ ಕ್ಲೈಂಬಿಂಗ್‌ ನಿಪುಣರು ಎಂದೆಲ್ಲಾ ವಿಶೇಷಣ ಸೇರಿಸಿದ್ದರು. ಪೀಡೀ ನಿನ್ನ ಚಾರಣದ ಬಗ್ಗೆ ಹೇಳು. ಯುರೋಪು ನೋಡಿದ್ದನ್ನು ವಿವರಿಸು’ ಎಂದು ಅದನ್ನು ಸುಳ್ಯದ ಅಭಿಮಾನದ ಪ್ರಶ್ನೆಯನಾನಗಿಸಿದ್ದ. ಅಡಿಗರಿಗೆ ಅವರ ತಂಡದ ಕೆಲವರಿಗೆ ನಮ್ಮ ಬಗ್ಗೆ ಒಂದು ಬಗೆಯ ತಾತ್ಸಾರವಿದ್ದದ್ದನ್ನು ನಾನು ಗಮನಿಸಿದ್ದೆ. ಆದರೆ ಅದನ್ನೊಂದು ಇಶ್ಯೂ ಮಾಡಬೇಕೆಂದು ನನಗೆ ಅನ್ನಿಸಿರಲಿಲ್ಲ.

ಮಣಿಪಾಲ ದಾಟಿ ನಾಲ್ಕೈದು ಕಿ. ಮೀ. ಮುಂದುವರಿದಾಗ ನಮ್ಮೊಬ್ಬ ಬೈಸಿಕಲ್ಲು ಹೀರೋ ತನಗೆ ವಿಪರೀತ ಕಾಲು ನೋವೆಂದೂ ತನ್ನಿಂದ ಬೈಸಿಕಲ್ಲಲ್ಲಿ ಹೋಗಲು ಸಾಧ್ಯವೇ ಇಲ್ಲವೆಂದೂ ಹೇಳಿಬಿಟ್ಟ. ತಕ್ಷಣ ಅವನನ್ನು ವ್ಯಾನಿಗೆ ಹತ್ತಿಸಿ ನಾನು ಬೈಸಿಕಲ್ಲು ಏರಿದೆ. ಅಡಿಗರು ವಾದಕ್ಕಿಳಿದರು.’ಇದು ಮಕ್ಕಳ ಬೈಸಿಕಲ್ಲು ಜಾಥಾ. ನೀವು ಬೈಸಿಕಲ್ಲು ತುಳಿಯುವುದು ಸರಿಯಲ್ಲ.’

‘ವ್ಯಾನಲ್ಲಿ ಮಲಗಿರುವ ಮಗುವಿನ ಆರೋಗ್ಯ ಸರಿಯಾದ ಮೇಲೆ ಕೊಟ್ಟು ಬಿಡುತ್ತೇನೆ. ಬೈಸಿಕಲ್ಲನ್ನು ವ್ಯಾನಿನ ಟಾಪಲ್ಲಿ ಹಾಕಿಕೊಂಡು ಹೋಗುವುದು ಸರಿಯಾ ಅಡಿಗರೆ?’

ಅಡಿಗರು ಮುಖ ದಪ್ಪ ಮಾಡಿಕೊಂಡರು.

ಟಾಡಾ ಕೈದಿಯ ಅವಸ್ಥೆಯಿಂದ ಬೈಸಿಕಲ್ಲು ಏರಿದ್ದು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿತು. ನಾವು ಹಿರಿಯಡಕ, ಸೀತಾನದಿ, ಹೆಬ್ರಿ ದಾಟಿ ಮುಂದುವರಿದೆವು. ಅಲ್ಲಲ್ಲಿ ಮಂಗಗಳು ನಮ್ಮನ್ನು ಅಣಕಿಸುತ್ತಿದ್ದವು. ಸಮೃದ್ಧಿ ಪನ್ನೇರಲೆ ಹಣ್ಣುಗಳು ನಮ್ಮ ಸಂಯಮಕ್ಕೆ ಸವಾಲೊಡ್ಡಿದವು. ಅಕರಶಃ ಎಲಿಮೆಂಟರಿ ಶಾಲಾ ಬಾಲಕರಂತೆ ನಾವು ಮರವೇರಿ ಹಣ್ಣು ಕೊಯಿದು ಅಂಗಿಚಡ್ಡಿ ಜೇಬಲ್ಲಿ ತುಂಬಿಕೊಂಡು, ಆಗಾಗ ಬಾಯಿಗೆ ರವಾನಿಸಿ ಚಪ್ಪರಿಸಿ ಕೊಂಡು ಮುಂದೆ ಸಾಗಿದೆವು.

ಸೋಮೇಶ್ವರದಲ್ಲಿ ಭರ್ಜರಿ ಊಟವಾಯಿತು. ಅಲ್ಲಿಂದ ಮುಂದೆ ಆಗುಂಬೆ ಘಾಟಿ ಆರಂಭ. ಮಿನಿಬಸ್ಸಲ್ಲಿ ಕಾಣುವ ಆಗುಂಬೆಯ ಅನುಭವಕ್ಕಿಂತ ತೀರಾ ಭಿನ್ನವಾದದ್ದು ಬೈಸಿಕಲ್ಲು ಚಾರಣದ ಅನುಭವ. ಹೌದು! ಅದು ಬೈಸಿಕಲ್ಲು ಚಾರಣ. ಹೆಚ್ಚಿನ ಕಡೆ ಬೈಸಿಕಲ್ಲು ದೂಡಿಕೊಂಡೇ ಹೋಗಬೇಕು. ಹೇರ್‌ಪಿನ್ನು ಬೆಂಡು ತಿರುವುಗಳಲ್ಲಿ ಎದುರಾಗುವ ಮತ್ತು ನಮ್ಮ ಹಿಂದಿನಿಂದ ಬರುವ ವಾಹನಗಳ ಜನರು ಇಷ್ಟೊಂದು ಮಂದಿ ಬೈಸಿಕಲ್ಲು ವೀರರನ್ನು ಕಂಡು ಖುಷಿಯಿಂದ ಕೈ ಬೀಸುತ್ತಿದ್ದರು. ಗೇರಿನ ಬೈಸಿಕಲ್ಲಿನ ಸುದರ್ಶನ ಎಲ್ಲೂ ಇಳಿಯದೆ ಘಾಟಿ ಹತ್ತಿಸಿಬಿಟ್ಟ.

ಆಗುಂಬೆ ಘಾಟಿ ಹತ್ತುವಾಗ ನನ್ನ ಮೊಬೈಲು ರಿಂಗಾಯಿತು. ‘ಇಷ್ಟು ಹೊತ್ತಿಗೆ ಫೋನು ಮಾಡುವುದು ಹೃದಯಕ್ಕೆ ಹತ್ತಿರವಿರುವವರು ಮಾತ್ರ’ ಎಂದು ಅಡಿಗರು ಪರಿಹಾಸ್ಯ ಮಾಡಿದರು. ಮೊಬೈಲು ಆಗ ನನ್ನ ಎಡಜೇಬಿನಲ್ಲಿ ಹೃದಯದ ಮೇಲೆಯೇ ಇತ್ತು!

ನಾವು ನಾಲ್ಕೂವರೆಗೆ ಆಗುಂಬೆ ಪಟ್ಟಣ ಮುಟ್ಟಿ ಅಲ್ಲಿ ಸಾವುಕಾರ್‌ ಮನೆಯಲ್ಲಿ ಉಳಕೊಂಡವು. ಅದು ಏನಿಲ್ಲವೆಂದರೂ ಐದಾರು ಶತಮಾನಗಳ ಭವ್ಯ ಇತಿಹಾಸವುಳ್ಳ ಕುಟುಂಬಕ್ಕೆ ಸೇರಿದ್ದು. ಅದರ ಹೊರಾಂಗಣ, ಒಳಾಂಗಣವೆಲ್ಲಾ ಒಂದು ಮಿನಿ ಅರಮನೆಯಂತಿದೆ. ಮೇಲೆ ಮಹಡಿಯಲ್ಲಿ ವಿಶಾಲ ಹಜಾರ, ಆರು ಮಲಗುವ ದೊಡ್ಡ ಕೋಣೆಗಳಿವೆ. ಕೆಳ ಅಂತಸ್ತಿನಲ್ಲೂ ಹಾಗೆಯೇ. ಕೆಳ ಅಂತಸ್ತಿನ ಕೆಳಗೆ ಆ ಮನೆಯಲ್ಲಿ ಎರಡು ನಿಗೂಢ ನೆಲ ಮಾಳಿಗೆಗಳಿವೆ. ಮನೆಯ ಯಜಮಾನಿತಿ 60ರ ಹರೆಯದ ಕಸ್ತೂರಮ್ಮ. 500 ಮಂದಿ ಧಾರಾಳವಾಗಿ ಉಳಕೊಳ್ಳಬಲ್ಲ ಆ ಬೃಹತ್‌ ಮನೆಯ ಗತ ಇತಿಹಾಸದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ದಿವಾನ ವಿಶ್ವೇಶ್ವರಯ್ಯನವರು ಅದೆಷ್ಟೋ ಬಾರಿ ಅಲ್ಲಿ ತಂಗಿದ್ದರಂತೆ. ಶಿವರಾಮ ಕಾರಂತರಿಗೆ ಆ ಮನೆಯ ವಿನ್ಯಾಸ ಅಚ್ಚುಮೆಚ್ಚಂತೆ. ಅಲ್ಲಿ ಅನೇಕ ಸಿನಿಮಾಗಳ ಚಿತ್ರೀಕರಣವಾಗಿದೆಯಂತೆ. ರಾಜ್‌ಕುಮಾರ್‌ ಎರಡು ಬಾರಿ ಅಲ್ಲಿ ತಂಗಿ ಕಸ್ತೂರಮ್ಮನವರ ಕೈಯ ರಸಗವಳ ಮೆದ್ದು ಆಗುಂಬೆಯಾ ಈ ಸಂಜೆಯಾ ಹಾಡು ಹೇಳಿದ್ದರಂತೆ. ಆ ದೊಡ್ಡ ಸಾಹುಕಾರ್‌ರ ಕುಟುಂಬ 50 ವರ್ಷಗಳ ಹಿಂದೆ ಸರ್ಕಾರಕ್ಕೆ ಪ್ರತಿ ವರ್ಷ ರೂ 50 000 ತೆರಿಗೆ ಕಟ್ಟುತ್ತಿತ್ತಂತೆ. ಭೂ ಸುಧಾರಣಾ ಕಾನೂನು ಬಂದ ಮೇಲೆ ಸಾಹುಕಾರರ ಜಮೀನು ಕೈಬಿಟ್ಟರೂ ಮನೆ ಉಳಕೊಂಡಿದೆ. ಚಿತ್ರೀಕರಣದ ತಂಡಕ್ಕೆ, ಪ್ರವಾಸಿಗಳು ನಿಲ್ಲಲು ನೆಲೆ, ಹೊಟ್ಟೆಗೆ ಹಿಟ್ಟು ನೀಡಿ ಕಸ್ತೂರಮ್ಮನ ಕುಟುಂಬ ಗತವೈಭವದ ದಿನಗಳನ್ನು ಮೆಲುಕು ಹಾಕಿಕೊಂಡು ದಿನಗಳೆಯುತ್ತಿದೆ.

ಐದೂವರೆಯಾದಾಗ ನಾವು ತಿರುಗಿ ಆಗುಂಬೆ ಘಾಟಿಗೆ ಸೂರ್ಯಾಸ್ತದ ಚೆಲುವನ್ನುನೋಡಲು ಬೈಸಿಕಲಲ್ಲಿ ಬಂದೆವು. ಕಾಲು ನೋವು ಸಹಿಸಲು ಸಾದ್ಯವಾಗದವರಿಗಾಗಿ ವ್ಯಾನೊಂದು ಆಗುಂಬೆ ಪಟ್ಟಣದಿಂದ ಘಾಟಿಯವರೆಗೆ ಓಡಿತು. ಸೂರ್ಯಾಸ್ತ ವೀಕಣಾಸ್ಥಳ ಪ್ರಕೃತಿ ಆರಾಧಕ ರಿಂದ ತುಂಬಿ ತುಳುಕುತ್ತಿತ್ತು. ಹುರಿಗಡಲೆ, ನೆಲಗಡಲೆ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ವಡೆ, ಸೌತೆಕಾಯಿ, ಅನ್ನಾಸು, ಸೇಬು, ಮಂಡಕ್ಕಿ ವ್ಯಾಪಾರ ಭರ್ಜರಿಯಾಗಿ ನಡೆದಿತ್ತು. ಜನರಷ್ಟೇ ಅಲ್ಲ ಮಂಗಗಳೂ ಇದ್ದವು. ತಿಂಡಿಪೋತ ಪ್ರವಾಸಿಗರು ಕೊಂಡದ್ದರಲ್ಲಿ ಅರ್ಧಾಂಶ ಅವರ ಪೂರ್ವಜರಿಗೆ ಸಂದಾಯವಾಗುತ್ತಿತ್ತು. ಮಂಗಗಳು ಎಳೆಯ ಮಕ್ಕಳ ಕೈಯಿಂದ ಐಸ್‌ಕ್ಯಾಂಡಿ ಕಿತ್ತುಕೊಂಡು ಓಡುವುದು, ಅವುಗಳನ್ನು ಹೊಡೆಯಲು ಕೈಎತ್ತಿದವರಿಗೆ ಅವು ಕ್ಯಾರೇ ಇಲ್ಲದೆ ತಮ್ಮ ಕೈಗಳಿಂದ ಹೊಡೆಯುವುದು ತುಂಬಾ ಅಪರೂಪದ ದೃಶ್ಯಗಳಾಗಿ ದ್ದವು. ಮಂಗಗಳನ್ನು ಕೆಣಕ ಹೋಗಿ ರಾಘವ ಮತ್ತು ರಂಜನ್‌ ಅವುಗಳಿಂದ ಸರೀ ಏಟು ತಿಂದರು. ರಸ್ತೆಯಂಚಿನಲ್ಲಿದ್ದ ಕಲ್ಲಿನ ಗೋಡೆಯಲ್ಲಿ ಕೂತು ನಾನು ಕೈಯಲ್ಲಿ ನೆಲಗಡಲೆ ಇಟ್ಟುಕೊಂಡು ಮಂಗವೊಂದಕ್ಕೆ ತೋರಿಸಿದೆ. ಅದು ಆಸೆಯಿಂದ ನನ್ನೆಡೆಗೆ ಬಂದು ಕೈಯಿಂದ ಒಂದೊಂದೇ ಹೆಕ್ಕಿ ತಿನ್ನತೊಡಗಿತು. ಆಗ ಧುತ್ತನೆ ಮರದಿಂದ ಜಿಗಿದ ದಡಿಯ ಮಂಗವೊಂದು ಆ ಮಂಗದ ಮುಖಕ್ಕೊಂದು ಏಟು ಬಿಗಿದು ದೂಡಿ ಕೆಳಗೆ ಹಾಕಿ ನನ್ನ ಕೈಯ ಕಡಲೆಯನ್ನು ಸ್ವಾಹಾ ಮಾಡತೊಡಗಿತು. ನಾನು ಇಡೀ ಪೊಟ್ಟಣವನ್ನೇ ಅದಕ್ಕೆ ಕೊಟ್ಟು ಬಿಟ್ಟು ಜಾಗ ಖಾಲಿಮಾಡಿದೆ!

ನಾವು ಮುಳುಗುತ್ತಿದ್ದ ಸೂರ್ಯನ ಚೆಲುವನ್ನು ಚೆಲುವಿನ ಆಗರವಾದ ಆಗುಂಬೆ ಘಾಟಿಯಿಂದ ನೋಡಿದವು. ಒಂದೊಂದು ಸ್ಥಳದಲ್ಲಿ ಒಂದೊಂದು ಅನುಭೂತಿ ಹುಟ್ಟಿಸಲು ಸೂರ್ಯನಿಂದ ಮಾತ್ರ ಸಾಧ್ಯ. ನಾನು ನೋಡಿದ್ದ ಕನ್ಯಾಕುಮಾರಿಯ ಸೂರ್ಯಾಸ್ತದ ಚೆಲುವು ಒಂದು ಬಗೆಯದಾದರೆ, ರಾಜಸ್ಥಾನದ ಅಬು ಪರ್ವತದ ಮೇಲಿಂದ ನೋಡಿದ ಸೂರ್ಯಾಸ್ತದ ಸೊಬಗು ತೀರಾ ಭಿನ್ನ ಬಗೆಯದು. ನಮ್ಮ ಮನೆಯ ಹಿಂದಿನ ತಿಮ್ಮನ ಗುಡ್ಡದ ಮೇಲಿನಿಂದ ಸೂರ್ಯಾಸ್ತ ನೋಡಿ ಸಂಭ್ರಮಿಸುವುದು ನನ್ನ ಹವ್ಯಾಸವಾಗಿತ್ತು. ಅದೊಂದು ಹುಚ್ಚನ್ನು ಶೈಲಿಗೆ, ಅಕ್ಕ ಪಕ್ಕದ ಮನೆಯ ಚೆಡ್ಡಿ, ಲಂಗೋಟಿ ಶೂರರಿಗೆ, ಗೊಣ್ಣೆ ಬುರುಕರಿಗೆ ಹಿಡಿಸಿದ್ದೆ. ಸೂರ್ಯಾಸ್ತ ಸಮಯದಲ್ಲಿ ಪಶ್ಚಿಮದ ಕಡೆಯಿಂದ ಬೀಸುವ ತಂಗಾಳಿಯನ್ನು, ಆಗ ಸಾಲಾಗಿ ಬಾನಲ್ಲಿ ಹಾರುವ ಬೆಳ್ಳಕ್ಕಿ ಸಾಲನ್ನು, ಗೂಡಿಗೆ ಮರಳುವ ಹಕ್ಕಿಗಳ ಸಪ್ತ ಸ್ವರವನ್ನು ಅನುಭವಿಸುವ ಭಾಗ್ಯ ಎಷ್ಟು ಮಂದಿಗಿದೆ! ತಿಮ್ಮನ ಗುಡ್ಡೆಗೆ ಯಾರೋ ಅಕ್ರಮ ಬೇಲಿ ಹಾಕಿಕೊಂಡರು. ಅಕ್ರಮ ಸಕ್ರಮವಾಯಿತು. ಕಾಂತಮಂಗಲದ ಪ್ರಕೃತಿ ಪ್ರಿಯರಿಗೆ ಸೂರ್ಯಾಸ್ತದ ಸೊಗಸಿನ ಅನುಭೂತಿ ಇಲ್ಲದಾಗಿ ಹೋಯಿತು.

ನಾವು ಸೂರ್ಯಾಸ್ತದ ಚೆಲುವಿನಲ್ಲಿ ಮೈಮರೆತಿರುವಾಗ ರೊಂಯ್ಯನೆ ವಾಯುವೇಗದಲ್ಲಿ ಬಂದ ಎರಡು ವ್ಯಾನುಗಳು ನಮ್ಮ ಬಳಿ ಗಕ್ಕನೆ ಬ್ರೇಕು ಹಾಕಿ ನಿಂತವು. ಗೂಡುಗಳಿಂದ ತುಪತುಪನೆ ಉದುರುವ ಇರುವೆಗಳಂತೆ ಅವುಗಳಿಂದ ಸ್ಟೆನ್‌ಗನ್‌ಧಾರಿಗಳು ಇಳಿಯ ತೊಡಗಿದರು. ನಮ್ಮನ್ನೆಲ್ಲಾ ಪರೀಕ್ಷಾರ್ಥಕ ದೃಷ್ಟಿಯಿಂದ ನೋಡುತ್ತಾ ಒಂದು ರವುಂಡು ಹಾಕಿದರು. ಅವರು ನಕ್ಸಲ್‌ ನಿಗ್ರಹ ದಳದವರು. ನಮ್ಮನ್ನು ನಕ್ಸಲರು ಅಪಹರಿಸದಂತೆ ಕಾಪಾಡಲು ಬಂದವರೆಂದು ಒಬ್ಬ ಗನ್ನುಧಾರಿಯಲ್ಲಿ ಮಾತಾಡಿದಾಗ ತಿಳಿಯಿತು. ಕತ್ತಲು ಕವಿಯುವಾಗ ನಾವು ಆಗುಂಬೆಯ ಸಾವುಕಾರ್‌ ಮನೆಗೆ ಹೊರಟೆವು. ಬರುವಾಗ ಹಾದಿಯಲ್ಲಿ ಉಬರಡ್ಕದ ದಿನೇಶನಲ್ಲಿ ಹೇಳಿದೆ, ‘ಅವರು ನಮ್ಮನ್ನೇ ನಕ್ಸಲೈಟು ಎಂದು ತಿಳಿದಂತಿದೆ.’

ಅವನು ಗಾಬರಿ ಬಿದ್ದು ‘ಹೌದು ಸರ್‌. ನಕ್ಸಲೈಟುಗಳು ದೇಶದ ಶತ್ರುಗಳೆಂದು ನಮಗೆ ಒಬ್ಬ ಸಂಘಟಕರು ಪ್ರತಿದಿನ ಬೋಧನೆ ಮಾಡುತ್ತಿದ್ದಾರೆ. ಅದು ನಿಜವಾ ಸರ್‌’ ಎಂದು ಕೇಳಿದ. ಯಾವುದೋ ಕೋಮು ಸಂಘಟನೆಯ ವ್ಯಕ್ತಿಯಿಂದ ದಿನಾ ತಲೆ ಹಿಡಿಸಿ ಕೊಳ್ಳುವ ಇವನಲ್ಲಿ ಏನು ಹೇಳುವುದು ಎಂದು ಗೊತ್ತಾಗದೆ ‘ಸದ್ಯಕ್ಕೆ ಆ ಮಾತು ಬಿಡುವ ದಿನೇಶ. ತರಗತಿಯಲ್ಲಿ ಒಂದು ದಿನ ಇದನ್ನು ಕೇಳು. ಅಲ್ಲಿ ಉತ್ತರಿಸುತ್ತೇನೆ’ ಎಂದೆ.

ಜೀವಮಾನದಲ್ಲಿ ತರಗತಿಯಲ್ಲಿ ಎದ್ದು ನಿಂತು ಒಂದೇ ಒಂದು ಪ್ರಶ್ನೆ ಕೇಳದ ದಿನೇಶನಿಗೆ ಅಂದು ಕೇಳಿದ ಪ್ರಶ್ನೆ ಮರುದಿನ ಬೆಳಿಗ್ಗೆ ಎದ್ದಾಗ ನೆನಪಿನಲ್ಲಿ ಉಳಿದಿರಲಿಲ್ಲ.

ಆಗುಂಬೆಯ ಪುಟ್ಟ ತೋಡೊಂದು ನಮ್ಮ ತಂಡಕ್ಕೆ ತೀರ್ಥಕೇತ್ರವಾಯಿತು. ಅದು ಫೆಬ್ರವರಿ ತಿಂಗಳ ಕೊನೆ. ಕರ್ನಾಟಕದ ಚಿರಾಪುಂಜಿಯಾದ ಆಗುಂಬೆಯಲ್ಲಿ ಅಸಾಧ್ಯ ಚಳಿಯಿತ್ತು. ಬೈಸಿಕಲ್ಲು ತುಳಿದು ಬೆವರಿದ ಮೈಗೆ ತೋಡಿನ ತಣ್ಣೀರು ಹಿತದಾಯಕವಾಗಿತ್ತು. ಅದಾಗಿ ಸಾವುಕಾರ್‌ ಮನೆಯಲ್ಲಿ ಭರ್ಜರಿ ಊಟ. ಆಮೇಲೆ ಅಡಿಗರು ನಮ್ಮನ್ನು ಮನೆಯ ಅಟ್ಟದಲ್ಲಿ ಸೇರಿಸಿ ನಾಳಿನ ಕಾರ್ಯಕ್ರಮದ ರೂಪು ರೇಷೆ ನೀಡಿದರು. ತಾವು ರಾಜಸ್ಥಾನದ ಥಾರ್‌ ಮರುಭೂಮಿಯಲ್ಲಿ ಚಾರಣ ಮಾಡುವಾಗ ನೀರು ಮುಗಿದು ಹೋಗಿ ಡಿ ಹೈಡ್ರೇಷನ್ನಿ ನಿಂದ ಬಚಾವಾಗಲು ತಮ್ಮ ತೋಳು, ಕೈಗಳ ಬೆವರನ್ನು ನೆಕ್ಕಿದ್ದನ್ನು ಜ್ಞಾಪಿಸಿಕೊಂಡರು. ‘ಮೊರಾರ್ಜಿ ಟಾನಿಕ್ಕ್‌ ಬಿಟ್ಟರೇಕೆ’ ಎಂದು ನಾನು ಪೀಡಿಯಲ್ಲಿ ಪಿಸುಗುಟ್ಟಿದೆ. ಅಷ್ಟು ಹೊತ್ತಿಗೆ ಕೆಳಗೆ ಬೈಕೊಂದು ಬಂದು ನಿಂತ ಸದ್ದು, ಅಲ್ಲಿ ಅಡಿಗರ ಗಂಭೀರ ಪ್ರಭಾಷಣ ದಿಂದ ಪಾರಾಗಲು ನಿಂತಿದ್ದ ಇಬ್ಬರು ಬೈಸಿಕಲ್ಲು ಶೂರರನ್ನು ಯಾರೋ ಗದರಿದ ಸದ್ದು, ಬೂಟುಗಾಲಲ್ಲಿ ಪಾವಟಿಗೆ ಹತ್ತುವ ಸಪ್ಪಳ ಕೇಳಿ ಅಡಿಗರ ಉಪನ್ಯಾಸ ನಿಂತಿತು. ಬಂದವನು ಒಬ್ಬ ಎಸ್ಸೈ. ‘ಇದು ನಕ್ಸಲ್‌ ಪೀಡಿತ ಪ್ರದೇಶ. ಇಷ್ಟು ಜನ ಒಂದೇ ಕಡೆ ನೀವು ಸೇರಿದ್ದೇಕೆ’ ಎಂದು ಜಬರದಸ್ತಿನಿಂದ ಪ್ರಶ್ನಿಸಿದ. ಕಕ್ಕಾಬಿಕ್ಕಿಯಾಗಿದ್ದ ಅಡಿಗರು ಸಾವರಿಸಿಕೊಳ್ಳುತ್ತಿರುವಾಗ ನಾನು ಎದ್ದು ಆತನ ಬಳಿಗೆ ಹೋಗಿ ಕೈ ಕುಲುಕಿ ಪರಿಚಯ ಹೇಳಿಕೊಂಡು ನಮ್ಮ ಉದ್ದೇಶ ತಿಳಿಸಿದೆ. ‘ನಿಮ್ಮ ಹೆಸರನ್ನು ಎಲ್ಲೋ ಯಾವುದೋ ಪುಸ್ತಕದಲ್ಲಿ ನೋಡಿದ್ದೇನೆ. ಇರ್ಲಿ ಸರ್‌. ನೀವು ಲೈಟಾರಿಸಿ ಮಲಗಿ. ಇಲ್ಲದಿದ್ರೆ ಇಲ್ಲಿ ನೈಟ್ ‘ಡ್ಯೂಟಿ ಪೋಲೀಸ್‌ ತಂಡ ಬಂದು ನಿಮ್ಮನ್ನು ವಿಚಾರಿಸಿ ಬಿಡುತ್ತದೆ’

ಈಗ ಅಡಿಗರು ಪೂರ್ತಿ ಸಾವರಿಸಿಕೊಂಡು ತಮ್ಮ ಹಿಂದಿನ ಕವಲೇ ದುರ್ಗದ ಅನುಭವಗಳನ್ನು ಎಸ್ಸೈಗೆ ವಿವರಿಸ ಹೊರಟರು. ಅವನು ಅವರ ಕೈಕುಲುಕಿ ‘ಗುಡ್‌ ನೈಟ್‌ ಸರ್‌’ ಎಂದು ಟಕಟಕಿಸುತ್ತಾ ಕೆಳಗಿಳಿದು ಬೈಕು ಸ್ಟಾರ್ಟು ಮಾಡಿ ಢರ್ರೆಂದು ಹೊರಟು ಹೋದ.

ನಾವು ಅಲ್ಲಲ್ಲಿ ಉರುಳಿಕೊಂಡು ಗಾಢ ನಿದ್ದೆಗೆ ಜಾರಿದೆವು.

ಗಂಡು ಮೆಟ್ಟಿನ ಕವಲೇ ದುರ್ಗ

ಬೆಳಿಗ್ಗೆ ಎಂದಿನಂತೆ ಐದಕ್ಕೆ ಎಚ್ಚರವಾಯಿತು. ನಮಗೆ ಪ್ರಾಧ್ಯಾಪಕರಿಗೆ ಸಾವುಕಾರ್‌ ಮನೆಯಲ್ಲಿ ನಿತ್ಯಾಹಿನಕ ವ್ಯವಸ್ಥೆಯಿತ್ತು. ಬೀಸಿನೀರಿನ ಲಕ್ಸುರಿಯೂ! ಅಂದು ಬೆಳಗ್ಗೆ ಕೊರೆಯುವ ಚಳಿಗೆ ತೋಡಿನ ನೀರಲ್ಲಿ ಯಾರೂ ಸ್ನಾನ ಮಾಡಲು ಸಿದ್ಧರಿರಲಿಲ್ಲ. ಸ್ನಾನಕ್ಕೆ ಮೊದಲು ನಾನು ಒಂದಷ್ಟು ಯೋಗಾಸನ ಮಾಡಿ ಯಕಗಾನದ ಕೆಲವು ಹೆಜ್ಜೆ ಹಾಕಿದೆ. ಕೊನೆಗೆ ಧೀಂಗಿಣ ಕುಣಿದೆ. ಪುರಾತನ ಸಾವುಕಾರ್‌ ಮನೆ ಮಹಡಿಯಲಗಿದ್ದು ಮಾತ್ರವಲ್ಲ ಕೆಳಗೆ ಅಡುಗೆ ಮನೆಯಲ್ಲಿ ನಮ್ಮ ಬೆಳಗ್ಗಿನ ಉಪಾಹಾರ ಸಿದ್ಧಪಡಿಸುತ್ತಿದ್ದವರು ಇದೇನು ಭೂಕಂಪವೆಂದು ಗಾಬರಿ ಬಿದ್ದು ಮಹಡಿ ಹತ್ತಿ ಬಂದರು. ಅಡಿಗರ ನೋಟದಲ್ಲಿ ಪ್ರಶ್ನಾರ್ಥಕ ಚಿಹ್ನೆಯಿತ್ತು!

ಆಗುಂಬೆಯಿಂದ ಕವಲೇ ದುರ್ಗ ತೀರಾ ಸಮೀಪ. ಬೆಳಿಗ್ಗೆ ಹೊಟ್ಟೆ ಗಟ್ಟಿ ಮಾಡಿ ಆಗುಂಬೆ ಬಿಟ್ಟವರು ಮಧ್ಯಾಹ್ನದ ಊಟಕ್ಕಾಗುವಾಗ ಕವಲೇ ದುರ್ಗದಲ್ಲಿದ್ದೆವು. ಅಡಿಗರ ‘ಶ್ರೀ ಕೃಷ್ಣನ ಬಂಟರು’ ಅದಾಗಲೇ ಕವಲೇ ದುರ್ಗಕ್ಕೆ ಮುಟ್ಟಿ ನಮ್ಮ ಊಟಕ್ಕೆ ಏರ್ಪಾಡು ಮಾಡಿ ಹಾದಿ ಕಾಯುತ್ತಿದ್ದರು. ಊಟ ಮುಗಿಸಿ ರವಷ್ಟೂ ವಿಶ್ರಾಂತಿ ಪಡೆಯದೆ ನಮ್ಮನ್ನು ಕೋಟೆಗೆ ಅಡಿಗರು ಹೊರಡಿಸಿ ಬಿಟ್ಟರು.

ಎಂಬತ್ತು ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಆ ವಿಶಾಲವಾದ ಕೋಟೆ ಕರ್ನಾಟಕದ್ದು ಮಾತ್ರವಲ್ಲ. ಭಾರತದ ಪಾರಂಪರಿಕ ಅಮೂಲ್ಯ ಆಸ್ತಿ. ಅದೀಗ ಕೇಂದ್ರ ಸರಕಾರದ ಪುರಾತತ್ವ ಇಲಾಖೆಯ ವಶದಲ್ಲಿದೆ. ಕೋಟೆಯನ್ನು ಸಮಗ್ರವಾಗಿ ವೀಕಿಸಲು ಎರಡು ದಿನಗಳಾದರೂ ಬೇಕು. ಕೋಟೆಯೊಳಗಿನ ಪ್ರತಿ ಕಲ್ಲಿಗೊಂದು ಕಥೆಯಿದೆ. ಕೋಟೆ ಯಲ್ಲಿರುವ ಮಾಸ್ತಿ ಕಲ್ಲುಗಳು ಪಾತಿವ್ರತ್ಯವನ್ನು ಸಂರಕಿಸಿಕೊಂಡ ಹೆಣ್ಣುಗಳ ಕಣ್ಣೀರ ಕಥೆಯನ್ನು ಹೇಳುತ್ತವೆ. ಕೋಟೆಯೊಳಗೆ ನಾಗತೀರ್ಥ ಕೆರೆಯಿದೆ. ಎಣ್ಣೆ ಬಾವಿತುಪ್ಪದ ಬಾವಿಗಳಿವೆ. ಏಳು ಹೆಡೆಗಳ ಆದಿಶೇಷನೂ ಸೇರಿದಂತೆ ಅನೇಕ ಸುಂದರ ಅಪೂರ್ವ ಶಿಲ್ಪಗಳಿವೆ. ವಾತ್ಸಾಯನನ ಕಾಮಸೂತ್ರವನ್ನು ಕಲಾತ್ಮಕವಾಗಿ ಕಲ್ಲುಗಳಲ್ಲಿ ಕಡೆದಿರಿಸಲಾಗಿದೆ. ಒಂದೆಡೆ ಸುಬ್ರಹ್ಮಣ್ಯ ದೇವಾಲಯವಿದ್ದರೆ ಎತ್ತರದಲ್ಲಿ ಕಾಶೀ ವಿಶ್ವನಾಥನ ದೇಗುಲವಿದೆ. ದುರ್ಗದ ದೊರೆಯಾಗಿದ್ದ ಸಂಕಣ್ಣನಾಯಕ ಆ ವಿಗ್ರಹವನ್ನು ಕಾಶಿಯಿಂದ ತಂದಿದ್ದ. ದೊರೆ ವೆಂಕಟಪ್ಪ ನಾಯಕ ದೇವಾಲಯ ಕಟ್ಟಿದ. ಇದೇ ವೆಂಕಟಪ್ಪನಾಯಕ ಕಾಂತಮಂಗಲ ಮತ್ತು ಬೆಳ್ಳಾರೆ ಕೋಟೆಗಳನ್ನು ನಿರ್ಮಿಸಿದವ. ಕೆಳದಿಯ ಅಷ್ಟೂ ಇತಿಹಾಸ ಕವಲೇ ದುರ್ಗದೊಂದಿಗೆ ಹೆಣೆದು ಕೊಂಡಿದೆ. ರಾಣಿ ಚೆನ್ನಮ್ಮಾಜಿ ಶಿವಾಜಿಯ ಮೊಮ್ಮಗ ಶಂಭಾಜಿಗೆ ಆಶ್ರಯ ನೀಡಿದ್ದು ಇಲ್ಲೇ. ಅವಳು ಔರಂಗಜೇಬನ ಸೈನ್ಯವನ್ನು ಸೋಲಿಸಿ ಓಡಿಸಿ ಕನ್ನಡಿಗರು ಆಶ್ರಯ ಬೇಡಿದವರನ್ನು ಯಾವ ಬೆಲೆ ತೆತ್ತಾದರೂ ರಕಿಸುವವರು ಎಂಬುದನ್ನು ಅನ್ಯ ದೇಶಗಳಿಗೆ ತೋರಿಸಿಕೊಟ್ಟ ಧೀರೆ. ಅದು ಚೆನ್ನಮ್ಮಳ ಕಾವಲು ದುರ್ಗವಾಗಿದ್ದದ್ದು ಜನರ ಬಾಯಲ್ಲಿ ಅಪಭ್ರಂಶವಾಗಿ ಕವಲೇ ದುರ್ಗವಾಯಿತು. ಕೆಳದಿ ಅರಸರುಗಳ ಕೊನೆಯ ರಾಜಧಾನಿಯಾಗಿ ಇತಿಹಾಸದಲ್ಲಿ ಸ್ಥಾನ ಪಡೆಯಿತು.

ಕವಲೇ ದುರ್ಗ ಏಳು ಸುತ್ತಿನ ಕೋಟೆ. ಅಲ್ಲಿಗೆ ತಲುಪುವ ಮುನ್ನ ಸುಮಾರು ಎರಡು ಕಿ.ಮೀ. ಮೊದಲೇ ಬೃಹತ್‌ ಕೆರೆಯೊಂದು ಸಿಗುತ್ತದೆ. ಅದು ತಿಮ್ಮಾ ನಾಯ್ಕನ  ಕೆರೆ. ಈ ತಿಮ್ಮಾ ನಾಯ್ಕ ಬೇಕಲದವನು. ಕೆಳದಿ ಅರಸರು ಕಾಸರಗೋಡಿನ ಬಳಿಯ ಬೇಕಲಕೋಟೆಯನ್ನು ವಶಪಡಿಸಿಕೊಂಡ ಮೇಲೆ ದ ಕ ಜಿಲ್ಲೆಗೂ ಕೆಳದಿಗೂ ಬೆಳೆದ ಸಂಬಂಧದ ಪ್ರತೀಕ ಅವನು. ತಿಮ್ಮಾ ನಾಯ್ಕನ ಕೆರೆ ದಂಡೆ ಮೇಲಿರುವುದು ಸ್ಮಶಾನ. ಇಂದ್ರ ನೀಲ ಮಣಿಯಂತೆ ಕಂಗೊಳಿಸುವ ಕೆರೆಯ ಶುಭ್ರ ಸೇಟಿಕ ಜಲದಲ್ಲಿ ಆಚೆ ದಂಡೆಯ ಬೆಟ್ಟ ಮತ್ತು ಬೆಟ್ಟವನ್ನು ಹೊದ್ದ ಹಚ್ಚ ಹಸಿರು ಪ್ರತಿ ಫಲಿಸುತ್ತಿರುತ್ತದೆ.

ಕವಲೇ ದುರ್ಗದ ಇತಿಹಾಸದ ಬಗ್ಗೆ ಜನರಿಗೆ ತಿಳಿಯಪಡಿಸುವ ಕೆಲಸವನ್ನು ಊರಿನ ರಾಜಗುರು ಬೃಹನ್ಮಠ ಮಾಡುತ್ತದೆ. ಈ ಪುಟ್ಟ ಊರನಲ್ಲಿ ಪ್ರವಾಸಿಗರಿಗೆ ಯಾವ ಸೌಕರ್ಯವೂ ಇಲ್ಲ. ಅಸಲು ಅಲ್ಲೊಂದು ಅದ್ಭುತ ಐತಿಹಾಸಿಕ ಅಪೂರ್ವ ಕೋಟೆಯೊಂದಿದೆಯೆಂದು ಹೊರ ಪ್ರದೇಶಗಳವರಿಗೆ ಗೊತ್ತು ಪಡಿಸುವವರೇ ಇಲ್ಲ. ಕವಲೇ ದುರ್ಗದ ತುದಿಯಿಂದ ನಾವು ಕಂಡ ತುಂಗಾನದಿ, ದಟ್ಟ ಅರಣ್ಯ ಮತ್ತು ಸೂರ್ಯಾಸ್ತ ಅನುಪಮವಾದದ್ದು. ಆದರೆ ಅದನ್ನು ಸವಿಯುವ ಭಾಗ್ಯ ಎಲ್ಲರಿಗಿಲ್ಲ ಅನ್ನುವುದೇ ವಿಷಾದಕರವಾದದ್ದು.

ಉಳ್ಳವರು ಶಿವಾಲಯವ

ಅಂದು ರಾತ್ರಿ ಕವಲೇ ದುರ್ಗದಲ್ಲಿ ಊಟಕ್ಕೆ ಮುನ್ನ ಶಿಬಿರಾಗ್ನಿ ನರ್ತನ. ನಾವು ಹಾಡಿ ಕುಣಿದು ಅಗ್ನಿಗೆ ಸುತ್ತು ಬರುವುದನ್ನು ನೋಡಲು ಊರು ಅಲ್ಲಿ ನೆರೆದಿತ್ತು. ಪೀಡಿ ಕೆಂಪು ತೋರ್ತು ತಲೆಗೆ ಸುತ್ತಿ ಸಾಕ್ಷಾತ್‌ ವಿಷ್ಣುಮೂರ್ತಿ ದೈವದ ಬೆಲ್ಚಪ್ಪಾಡನ ಗೆಟಪ್ಪಿನಲ್ಲಿ ಕಂಗೊಳಿಸುತ್ತಿದ್ದ! ನಮ್ಮ ನರ್ತನ ತಾರಕಕ್ಕೇರುವಾಗ ಕಾರೊಂದು ಬಂದು ಸ್ವಲ್ಪ ದೂರದಲ್ಲಿ ನಿಂತಿತು. ಬೃಹನ್ಮಠದ ಸ್ವಾಮೀಜಿಗಳ ಕಾರದು. ಅವರ ಪರಿಚಯವಿದ್ದ ಅಡಿಗರು ಓಡಿ ಹೋಗಿ ಅವರನ್ನು ಸ್ವಾಗತಿಸಿ ಶಿಬಿರಾಗಿನ ಬಳಿಗೆ ಕರೆತಂದರು. ನಮ್ಮ ನರ್ತನ ನಿಂತಿತು.

ಅಡಿಗರು ಒಂದಷ್ಟು ಹೊತ್ತು ಗಟ್ಟಿ ಸ್ವರದಲ್ಲಿ ಮಾತಾಡಿ ಸ್ವಾಮೀಜಿಯಲ್ಲಿ ಆಶೀರ್ವಚನ ನೀಡಲು ಕೇಳಿಕೊಂಡರು. ಅವರು ತುಂಬ ಅರ್ಥಪೂರ್ಣವಾಗಿ ಮಾತಾಡಿ ಶ್ರಮ ಸಂಸ್ಕೃತಿ ನಾಶವಾದದ್ದು ನಮ್ಮೆಲ್ಲಾ ಸಂಕಷ್ಟಗಳಿಗೆ ಕಾರಣ ಎಂದರು. ನಮ್ಮ ಕಾಲೇಜಿನ ಪರವಾಗಿ ನಾನು ಮಾತಾಡಲೇ ಬೇಕಾಯಿತು. ಬಸವಣ್ಣನ ಉಳ್ಳವರು ಶಿವಾಲಯದಿಂದ ಆರಂಭಿಸಿ ಈ ದೇಶದಲ್ಲಿ ಜಾತಿ ವಿನಾಶವಾಗಬೇಕಾದರೆ ಬಸವತತ್ವದ ಪ್ರಾಮಾಣಿಕ ಅನುಷ್ಠಾನ ವಾಗಬೇಕೆಂದು ಇನ್ನೂ ನಾಲ್ಕು ವಚನಗಳ ಮೂಲಕ ಪ್ರತಿಪಾದಿಸಿದ್ದು ಸ್ವಾಮೀಜಿಗೆ ಹಿಡಿಸಲಾರದಷ್ಟು ಹಿಗ್ಗುಂಟು ಮಾಡಿತು. ನನ್ನ ಭಾಷಣ ಮುಗಿದ ತಕಣ ಅದಕ್ಕೆ ಪ್ರತಿಕ್ರಿಯೆ ಯಾಗಿ ಮತ್ತೆ ಐದು ನಿಮಿಷ ಮಾತಾಡಿದ ಸ್ವಾಮೀಜಿ ತಮ್ಮ ಸಂತಸವನ್ನು ಪ್ರಕಟಪಡಿಸಿ ಬಿಟ್ಟರು. ಪೀಡೀ ‘ಅಡಿಗರ ಮುಖ ನೋಡು’ ಎಂದ. ಬೆಂಕಿ ನಂದಿತ್ತು!

ಊಟದ ಬಳಿಕ ನಾನು, ಪೀಡಿ, ಗಿರಿಧರ್‌ ಕವಲೇ ದುರ್ಗದ ಮಾರಿ ದೇವಾಲಯದ ಪೂಜಾರಿಯ ಮನವೊಲಿಸಿ ಅಲ್ಲೇ ಮಲಗಿಕೊಂಡೆವು. ಬೈಸಿಕಲ್ಲು ಶೂರರಿಗೆ ಭದ್ರವಾದ ಗೋಡೌನ್‌ ಅಂತಃಪುರವಾಯಿತು. ಅಡಿಗರ ತಂಡದವರು ಪರ್ವತಾ ರೋಹಿಗಳಂತೆ ಡೇರೆ ರಚಿಸಿ ಅದರ ಒಳ ಹೊಕ್ಕು ಕವಲೇ ದುರ್ಗದ ಅಸಹನೀಯ ಚಳಿಯಿಂದ ರಕ್ಷಿಸಿಕೊಂಡರು.

ಮರು ಬೆಳಿಗ್ಗೆ ಬೇಗನೆ ಕವಲೇ ದುರ್ಗದಿಂದ ಹೊರಟಾಗ ಹೊಟ್ಟೆ ಕೆಟ್ಟು ಸಮಸ್ಯೆ ಎದುರಿಸುತ್ತಿದ್ದ ಒಬ್ಬ ಧೀರನ ಬೈಸಿಕಲ್ಲು ನನಗೆ ಸಿಕ್ಕಿತು. ಅಡಿಗರು ಮುಖ ಸಿಂಡರಿಸಿ ಕ್ಯಾತೆ ತೆಗೆದಾಗ ‘ಅವನಿಂದ ಆಗದ್ದಕ್ಕೆ ನಾನು ಇದನ್ನು ಬಳಸುತ್ತಿದ್ದೇನೆ. ನಾನೀಗ 53ರ ಹರೆಯದವ. ಇನ್ನೊಮ್ಮೆ ಹೀಗೆ ಇಲ್ಲಿಂದ ಉಡುಪಿಗೆ ಬೈಸಿಕಲ್ಲಲ್ಲಿ ಹೋಗುವ ಯೋಗ ನನಗೆ ಸಿಗಲು ಸಾಧ್ಯವಿಲ್ಲ. ನೀವೇ ಬೈಸಿಕಲ್ಲು ತುಳಿಯುತ್ತೀರಿ ಎಂದಾದರೆ ತಗೊಳ್ಳಿ’ ಅಂದೆ. ಅಡಿಗರು ನನ್ನ ಸವಾಲನ್ನು ಸ್ವೀಕರಿಸಲಿಲ್ಲ.

ಅಂದು ನಾವು ಏಳು ಗಂಟೆಗೆ ಉಡುಪಿಗೆ ಮುಟ್ಟಿದೆವು. ಅಷ್ಟು ಹೊತ್ತಿಗೆ ಪ್ರಾಚಾರ್ಯ ದಾಮೋದರ ಗೌಡರು ಸುಳ್ಯದಿಂದ ಬಂದವರು ನಮ್ಮನ್ನು ಸೇರಿಕೊಂಡರು. ಅವರು ಶ್ರೀ ಕೃಷ್ಣನ ಬಂಟರಿಗೆ ನೀಡಲೆಂದು ನನ್ನ ಜಲಲ ಜಲಲ ಜಲಧಾರೆ ಪರಿಸರ ಪ್ರವಾಸ ಕಥನದ 10ಪ್ರತಿ ತಂದಿದ್ದರು. ರಾತ್ರಿ ಊಟದ ಬಳಿಕ ವಿದಾಯ ಸಭೆ ಏರ್ಪಟ್ಟಿತು. ಶ್ರೀ ಕೃಷ್ಣನ ಬಂಟರಿಗೆ ಪುಸ್ತಕ ನೀಡಿದೆ. ಅವರ ಮುಖಭಾವದಲ್ಲಿ ಅಪೂರ್ವ ಬದಲಾವಣೆ ಇತ್ತು!

ಪೀಡಿಯ ಒತ್ತಾಯಕ್ಕೆ ಮಣಿದು ನಾನು ಫ್ರಾನ್ಸಲ್ಲಿ ಪಿರನಿ ಪರ್ವತಕ್ಕೆ ಚಾರಣ ಮತ್ತು ಮಡಿಕೇರಿಗೆ ರಿಜ್ಜು ವಾಕು ಮಾಡಿದ್ದನ್ನು ಹೇಳಿದೆ. ಶ್ರೀ ಕೃಷ್ಣನ ಬಂಟರ ಮುಖದಲ್ಲಿ ಪರಮಾಶ್ಚರ್ಯವಿತ್ತು.

ಬೆಳಿಗ್ಗೆ ಉಡುಪಿಯಿಂದ ಹೊರಟಾಗ ಅಡಿಗರು ನನ್ನನ್ನು ಅಪ್ಪಿಕೊಂಡು ‘ನಾವು ಸಮಾನ ವ್ಯಸನಿಗಳು’ ಎಂದರು.

ಎಲ್ಲರಿಗಿಂತ ಹೆಚ್ಚು ಇದರಿಂದ ಸಂತೋಷಪಟ್ಟದ್ದು ನಮ್ಮ ಪೀಡಿ. ‘ಬದುಕು ಅರ್ಥಪೂರ್ಣವಾಗುವುದು ಇಂತಹ ಹವ್ಯಾಸಗಳಿಂದು ಎಂದು ಮೊದಲ ಬಾರಿಗೆ ಪೀಡಿ ಅನುಭಾವಿಯಂತೆ ನುಡಿದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಗೆ ಇಲ್ಲದ ವಿದ್ಯುತ್ ಕಾರು ರೆವಾ
Next post ಯುರೋಪ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…