ಇದು ಎಂಥಾ ಲೋಕವಯಯ್ಯ ?

ಮಜಾಮೆಯಿಂದ ಕ್ಯಾಸ್ತೆಲ್‌ನೂದರಿಗೆ ((CASTELNAUDARY)) ಸುಮಾರು 125 ಕಿ.ಮೀ. ದೂರ. ತುಲೋಸಿನಿಂದ ಮೆಡಿಟರೇನಿಯನ್‌ ವರೆಗಿನ ದ್ಯುಮಿದಿ ಕಾಲುವೆಯಲ್ಲಿ ಬಂದರೆ ಕ್ಯಾಸ್ತೆಲ್‌ನೂದರಿಗೆ ತುಲೋಸಿನಿಂದ ಸುಮಾರು 175 ಕಿ.ಮೀ. ದೂರ. ಕ್ಯಾಸ್ತೆಲ್‌ನೂದರಿ ಪುಟ್ಟ ಪಟ್ಟಣ. ಫ್ರಾನ್ಸ್‌ನ ಪುಟ್ಟ ಮ್ಯಾಪಿನಲ್ಲಿ ಪ್ರಾಯಶಃ ಕ್ಯಾಸ್ತೆಲ್‌ ನೂದರಿಯನ್ನು ಕಾಣಲು ಸಾಧ್ಯವಿಲ್ಲ. ಆದರೆ ಕ್ಯಾಸ್ತೆಲ್‌ನೂದರಿಯ ಖಾದ್ಯ ‘ಕ್ಯಾಸುಲೆ’ ಯುರೋಪು ಮತ್ತು ಅಮೇರಿಕಾಗಳಲ್ಲಿ ಪ್ರಸಿದ್ಧ. ಕನ್ನಡಿಗರಿಗೆ ಧಾರವಾಡ ಎಂದಾಗ ಪೇಡ ನೆನಪಾಗುವಂತೆ ಯುರೋಪಿಯನ್ನರಿಗೆ ಕ್ಯಾಸ್ತೆಲ್‌ನೂದರಿ ಎಂದಾಗ ಕ್ಯಾಸುಲೆ ನೆನಪಾಗುತ್ತದೆ.

ಕ್ಯಾಸ್ತಲ್‌ನೂದರಿಯ ‘ಕಂಸ’

ಕ್ಯಾಸ್ತಲ್‌ನೂದರಿಯಲ್ಲಿ ನಮ್ಮ ತಂಗುದಾಣ ಲೈಸೀ ಅಗ್ರಿಕೋಲ್‌. ಅದೊಂದು ಕೃಷಿ ಕಾಲೇಜು. ಅದರ ಪ್ರಾಂಶುಪಾಲ ರಾಬಟ್ರ್‌ ಜೆರಾರ್ಡಿಯನ್‌ ರೋಟರಿ ಅಧ್ಯಕ್ಷನೂ ಹೌದು. ಆಗ ರಜಾಕಾಲವಾದುದರಿಂದ ವಿದ್ಯಾರ್ಥಿಗಳ ತಂಟೆ ಇಲ್ಲದೆ ಹಾಯಾಗಿದ್ದ ಜೆರಾರ್ಡಿಯನ್‌. ಅತ್ಯಂತ ಅನುಕೂಲಕರ ಸಮಯದಲ್ಲಿ ನಾವು ಕ್ಯಾಸ್ತಲ್‌ನೂದರಿಗೆ ಹೋಗಿದ್ದೆವು.

ಜೆರಾರ್ಡಿಯನ್‌ನದ್ದು ಆರೂಕಾಲಡಿ ಎತ್ತರದ ದಪ್ಪ ಶರೀರ. ಕೆಂಪನೆಯ ಬಣ್ಣದ, ಭರ್ಜರಿ ಆಳಂಗದ, ದಪ್ಪ ಮೀಸೆ ಮತ್ತು ಫ್ರೆಂಚ್‌ ಗಡ್ಡದ ಜೆರಾರ್ಡಿಯನ್‌ನ ನಗು ಥೇಟ್‌ ಯಕಗಾನದ ಖಳನಾಯಕರದ್ದು. ನನಗೆ ಆತನ ನಗು ನೆನಪಿಗೆ ತಂದದ್ದು ಚಿಟ್ಟಾಣಿಯವರ ಕಂಸನ ಪಾತ್ರವನ್ನು. ಆದರೆ ದೈತ್ಯದೇಹಿ ಜೆರಾರ್ಡಿಯನ್‌ ಮೃದು ಹೃದಯಿ ಮತ್ತು ಸ್ನೇಹಶೀಲ. ಆಲ್ಜೀರಿಯನ್‌ ಮೂಲದ ಈತನಿಗೆ ಇಂಗ್ಲೀಷ್‌ ಅರ್ಥ ಆಗುತ್ತಿದ್ದರೂ ಮಾತಾಡಲು ಹಿಂಜರಿಯುತ್ತಿದ್ದ. ಪ್ರಿನ್ಸಿಪಾಲ್‌ ತಪ್ಪು ಇಂಗ್ಲೀಷ್‌ ಮಾತಾಡಬಾರದಲ್ಲಾ? ಅವನ ಹೆಂಡತಿ ಥೇಟ್‌ ಇಂದಿರಾಗಾಂಧಿಯ ಹಾಗೆ ಕಾಣುತ್ತಾಳೆ. ಜೆರಾರ್ಡಿಯನ್‌ ಮೂವರು ಮೊಮ್ಮಕ್ಕಳ ಅಜ್ಜ ಎಂದರೆ ನಂಬಲಿಕ್ಕೇ ಆಗುವುದಿಲ್ಲ.

ಜೆರಾರ್ಡಿಯನ್‌ನ ಅಳಿಯ ಒಬ್ಬ ಛಾಯಾಗ್ರಾಹಕ. ಪರಿಸರಕ್ಕೆ ಸಂಬಂಧಿಸಿದಂತೆ ಅವನು ಎರಡು ವೀಡಿಯೋ ಚಿತ್ರಗಳನ್ನು ಮಾಡಿದ್ದಾನೆ. ಅವನಿಗೆ ಮೂವರು ಮಕ್ಕಳು. ಕೊನೆಯದಕ್ಕೆ ಎರಡು ತಿಂಗಳಾಗಿತ್ತಷ್ಟೇ. ಮುದ್ದಾದ ಆ ಮಗುವನ್ನು ಎತ್ತಿಕೊಂಡು ಹೆಬ್ಬಾರರು ‘ಇದು ನನ್ನ ಸೊಸೆ ಮಮತಾಳ ಮಗುವಿಗಿಂತಲೂ ಸಣ್ಣದು’ ಎಂದು ಸಂಭ್ರಮಿಸಿದರು. ಜೆರಾರ್ಡಿಯನ್‌ನ ಇನ್ನಿಬ್ಬರು ಮೊಮ್ಮಕ್ಕಳು ಸ್ಕೂಲು ಓದುತ್ತಿದ್ದಾರೆ. ಅವರಲ್ಲಿ ಒಬ್ಬಳು ಹುಡುಗಿ. ಹತ್ತು ವರ್ಷದ ಆಕೆಯದು ಅಸಾಧ್ಯ ಚುರುಕುತನ. ಅವಳ ಹೆಸರು ಹೆಮ್ಮ. ನನ್ನ ಮಗನ ಪ್ರಾಯದ ಆಕೆಯನ್ನು ಆಕೆಯ ಚುರುಕುತನಕ್ಕಾಗಿ ಎತ್ತಿಕೊಳ್ಳದೆ ಇರಲು ನನಗೆ ಸಾಧ್ಯವಾಗಲಿಲ್ಲ. ಅವಳಿಗೆ ಭಾರತದ ಧ್ವಜವೊಂದನ್ನು ಕೊಟ್ಟು ‘ನಿನ್ನನ್ನು ನಾನು ಹೇಮಾ ಎಂದು ಕರೆಯುತ್ತೇನೆ. ಆಗದೆ?’ಎಂದೆ. ಅವಳಿಗೆ ಇಂಗ್ಲೀಷ್‌ ಅರ್ಥವಾಗು ತ್ತಿರಲಿಲ್ಲ. ಅವಳ ಅಜ್ಜಿ ಸಹಾಯಕ್ಕೆ ಬಂದಳು. ಈಗ ಹೆಮ್ಮ ‘ಹೇಮಾ ಅಂದರೇನು?’ ಎಂದು ಪ್ರಶ್ನಿಸಿದಳು. ‘ಭಾರತದಲ್ಲಿ ಹೇಮಾ ತೀರಾ ಸಾಮಾನ್ಯವಾದ ಹೆಸರು. ಹೇಮಾ ಅಂದರೆ ಚಿನ್ನ ಎಂದರ್ಥ. ನನಗೆ ನನಗಿಂತಲೂ ಚಿಕ್ಕವಳಾದ ಒಬ್ಬ ಚಿಕ್ಕಮ್ಮ ಇದ್ದಾಳೆ. ನಾವು ಎಳವೆಯಿಂದಲೇ ಒಟ್ಟಿಗೆ ಬೆಳೆದವರು. ಅವಳ ಹೆಸರು ಹೇಮಾ’ ಎಂದೆ. ಆ ಬಳಿಕ ಕ್ಯಾಸ್ತಲ್‌ನೂದರಿಯ ಹೆಮ್ಮ ಎಂಬ ಅಲ್ಜೀರಿಯನ್‌ ಹುಡುಗಿ ಎಲ್ಲರಿಗೂ ಹೇಮಾ ಆದಳು. ಕೆಲವರು ಅವಳನ್ನು ‘ಚಿನ್ನ’ ಎಂದೂ ಕರೆಯತೊಡಗಿದರು.

ಜೆರಾರ್ಡಿಯನ್ನನ ಕೃಷಿ ಕಾಲೇಜಿಗೆ ನಲ್ವತ್ತನಾಲ್ಕು ಹೆಕ್ಟೇರು ಸ್ವಂತಭೂಮಿಯಿದೆ. ಅದರಲ್ಲಿ ಐದು ಹೆಕ್ಟೇರು ಭೂಮಿಯಲ್ಲಿ ವೈನಿಗಾಗಿ ದ್ರಾಕ್ಷಿ ಬೆಳೆಯಲಾಗುತ್ತದೆ. ಕಾಲೇಜು ವೈನ್‌ ಉತ್ಪಾದನೆಯ ಘಟಕವೊಂದನ್ನು ಹೊಂದಿದೆ. ಅಲ್ಲಿ ವೈನು ಉತ್ಪಾದನೆಯ ಕ್ರಮವನ್ನು ಜೆರಾರ್ಡಿಯನ್‌ ನಮಗೆ ತೋರಿಸಿದ. ಉತ್ಪಾದನಾ ಹಂತದಲ್ಲಿರುವ ವೈನನ್ನು ಕುಡಿಯಲು ಕೊಟ್ಟ. ಅದಕ್ಕೆ ಯಾವುದೋ ಗಿಡಮೂಲಿಕೆಯ ಒಗರು ರುಚಿ. ನಮಗಂತೂ ಅದನ್ನು ಕುಡಿಯಲು ಸಾಧ್ಯವಾಗಲಿಲ್ಲ.

ಲೈಸೀ ಪ್ರೊಫೆಶನಲ್‌ ಅಗ್ರಿಕೋಲ್‌ ಎಂದು ಕರೆಯಲ್ಪಡುವ ಈ ಕೃಷಿ ಕಾಲೇಜಿನಲ್ಲಿ ಕಲಿಯುತ್ತಿರುವವರ ಸಂಖ್ಯೆ 25. ಕಾಲೇಜಲ್ಲಿ 28 ಮಂದಿ ಅಧ್ಯಾಪಕರು ಮತ್ತು 42 ಮಂದಿ ಸಿಬ್ಬಂದಿಗಳಿದ್ದಾರೆ. ಗಿಡಗಳ ಸಂಗ್ರಹ, ಪೋಷಣೆ, ನಿರ್ವಹಣೆ, ಕೃಷಿ ಯಾಂತ್ರೀಕರಣ, ಕುದುರೆ ಮತ್ತು ಕುರಿ ಸಾಕಣೆ, ವೈನ್‌ ಉತ್ಪಾದನೆ  ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಅಲ್ಲಿನ ಕುದುರೆ ಲಾಯದಲ್ಲಿ ಎಂಟು ಕುದುರೆಗಳಿವೆ. ಅಲ್ಲಿ ಕುದುರೆ ಸವಾರಿಯಲ್ಲೂ ತರಬೇತಿ ನೀಡಲಾಗುತ್ತದೆ. ಎರಡು ಎಕರೆ ಪ್ರದೇಶದಲ್ಲಿ ವಿಸ್ತಾರವಾದ ಕುರಿ ದೊಡ್ಡಿಯಿದೆ. ಈ ಕಾಲೇಜಲ್ಲಿ ಎರಡು ವರ್ಷಗಳಲ್ಲಿ ಕೃಷಿ ಪದವಿಯನ್ನು ಪಡೆದವರು, ಉನ್ನತ ಶಿಕಣಕ್ಕೆ ಬೇರೆಡೆಗೆ ಹೋಗಬೇಕಾಗುತ್ತದೆ. ಇಲ್ಲಿ ಕೃಷಿ ಪದವಿ ಗಳಿಸಿದವರು ಕೃಷಿ ಸಹಾಯಕರ ಹುದ್ದೆಗೆ ಅರ್ಹರಾಗುತ್ತಾರೆ. ಕೃಷಿ ಕಾಲೇಜಿಗೆ ಬರುವವರಲ್ಲಿ ಶೇ. 90 ಮಂದಿ ಕೃಷಿಕರ ಮಕ್ಕಳು. ಅವರು ಇಲ್ಲಿ ಗಳಿಸಿದ ಜ್ಞಾನವನ್ನು ಸ್ವಂತ ಕೇತ್ರದಲ್ಲಿ ಬಳಸಿಕೊಳ್ಳುತ್ತಾರೆಂದು ಜೆರಾರ್ಡಿಯನ್‌ ಹೇಳಿದ.

ಕಾಲೇಜಿನಿಂದ ಐನೂರು ಮೀಟರ್‌ ದೂರದಲ್ಲಿ ಹಾಸ್ಟೆಲ್‌ ಇದೆ. ಎರಡು ಮಹಡಿಗಳ ಸಕಲ ಅಂತಸ್ತುಗಳ ಕಟ್ಟಡವದು. ಅದರ ತಳಭಾಗದಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ಒಂದನೇ ಮಹಡಿಯಲ್ಲಿ ವಿದ್ಯಾರ್ಥಿಗಳ ಮತ್ತು ಎರಡನೇ ಮಹಡಿಯಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲುಗಳಿವೆ. ಅವುಗಳಿಗೆ ಹೋಗಲು ಬೇರೆ ಬೇರೆ ದಾರಿಗಳು. ಹುಡುಗರು ಎರಡನೇ ಮಹಡಿಗೆ ಏರುವಂತಿಲ್ಲ. ಹುಡುಗಿಯರು ಒಂದನೇ ಮಹಡಿಗೆ ಇಳಿಯುವಂತಿಲ್ಲ. ಎರಡು ಹಾಸ್ಟೆಲುಗಳಿಗೆ ಇಬ್ಬರು ವಾರ್ಡನರು. ಸ್ಟಡಿ ಸಮಯದಲ್ಲಿ ಯಾರಾದರೂ ರೂಮಿನಿಂದ ಹೊರ ಬಂದರೆ, ವಾರ್ಡನ್‌ ರೂಮಿನಲ್ಲಿ ಹೊರಬಂದವರ ರೂಮಿನ ಸಂಖ್ಯೆಗೆ ಜೋಡಿಸಿದ ಕೆಂಪು ದೀಪ ಹೊತ್ತಿಕೊಳ್ಳುತ್ತದೆ. ಸಂಜೆ ಆರಾಯಿತೆಂದರೆ ಹುಡುಗಿಯರ ಹಾಸ್ಟೆಲಿನ ಪ್ರವೇಶದ್ವಾರವನ್ನು ಮುಚ್ಚಿ ಲಾಕ್‌ ಮಾಡಲಾಗುತ್ತದೆ.’ಗಂಡು ಹೆಣ್ಣು ಇಷ್ಟೊಂದು ಫ್ರೀಯಾಗಿರುವ ನಿಮ್ಮ ಸೊಸೈಟಿಯಲ್ಲಿ ಇಷ್ಟೆಲ್ಲಾ ಭದ್ರತೆ ಯಾಕೆ’ ಎಂದು ಜೆರಾರ್ಡಿಯನ್‌ನನ್ನು ಕೇಳಿದಾಗ ಆತ ಅದೇ ಆ ಯಕ್ಷಗಾನದ ನಗೆ ನಕ್ಕ. ‘ಹೊರಗಡೆ ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕ್ಯಾಂಪಸ್ಸಿನಲ್ಲಿ ಅದಕ್ಕೆ ಅವಕಾಶವಿಲ್ಲ. ಇಲ್ಲಿಗೆ ಅವರು ಬಂದಿರುವುದು ಕಲಿಯುದಕ್ಕೆ ಮಾತ್ರ. ಅದಕ್ಕಾಗಿ ಈ ಭದ್ರತಾ ವ್ಯವಸ್ಥೆ’ ಎಂದ.

ನಲ್ವತ್ತನಾಲ್ಕು ಹೆಕ್ಟೇರು ಭೂಮಿಯ ಪೂರ್ತಿ ಮೇಲುಸ್ತುವಾರಿ ಜೆರಾರ್ಡಿಯನ್ನನದು. ಈ ಭೂಮಿಯಲ್ಲಿ ಏಳೆಂಟು ಕಟ್ಟಡಗಳಿವೆ. ಎಲ್ಲಾ ಕೋಣೆಗಳಿಗೆ ಪ್ರತ್ಯಪ್ರತ್ಯೇಕ ಲಾಕಿಂಗ್‌ ವ್ಯವಸ್ಥೆಯಿದೆ. ಎಲ್ಲಾ ಕೀಗಳು ಜೆರಾರ್ಡಿಯನ್ನನ ಸುಪರ್ದಿಯಲ್ಲೇ ಇರುತ್ತವೆ. ಅವನಿಗೆ ಯಾವ ಕಟ್ಟಡದ ಯಾವ ಬಾಗಿಲಿಗೆ ಯಾವ ಕೀ ಅನ್ನುವುದು ಅಷ್ಟು ನಿಖರವಾಗಿ ಗೊತ್ತು. ಕೀ ಗೊಂಚಲುಗಳನ್ನು ಹಿಡಿದು ನಮ್ಮನ್ನು ಸುತ್ತಾಡಿಸಲು ಆತ ಕರೆದೊಯ್ದಾಗ ಹೆಬ್ಬಾರರು ‘ಜೆರಾರ್ಡಿಯನ್‌ ಈಸ್‌ ದ ಕೀ ಪರ್ಸನ್‌ ಟುಡೇ’ ಎಂದು ಚಟಾಕಿ ಹಾರಿಸಿದರು. ನಿಜಕ್ಕೂ ಜೆರಾರ್ಡಿಯನ್‌ ತನ್ನ ಕ್ಯಾಂಪಸ್ಸಿನಲ್ಲೇ 24 ತಾಸು ಕಳೆವ ಓರ್ವ ಆದರ್ಶ ಪ್ರಾಂಶುಪಾಲ.

ಜೆರಾರ್ಡಿಯನ್‌ ನಮ್ಮನ್ನು ಕ್ಯಾಸ್ತಲ್‌ನೂದರಿಯ ಮೇಯರ್‌ ಬಳಿಗೆ ಕರೆದು ಕೊಂಡು ಹೋದ. ನಮಗೆ ಮೇಯರ್‌ ಮುಗಾ ಪ್ಯಾಟ್ರಿಕ್ಕನಿಂದ ಭರ್ಜರಿ ಟ್ರೀಟ್‌ ಸಿಕ್ಕಿತು. ಪ್ಯಾಟ್ರಿಕ್ಕ್‌ ಕೂಡಾ ಜೆರಾರ್ಡಿಯನಿನ್ನಷ್ಟೇ ಎತ್ತರಕ್ಕಿದ್ದ. ಆದರೆ ಪ್ಯಾಟ್ರಿಕ್‌ ತುಲನಾತ್ಮಕವಾಗಿ ತೆಳ್ಳನೆಯವನು. ಜೆರಾರ್ಡಿಯನ್ನನಂತೆ ಪ್ಯಾಟ್ರಿಕ್ಕನಿಗೂ ಇಂಗ್ಲೀಷ್‌ ಬರುತ್ತಿರಲಿಲ್ಲ. ನಮಗೆಲ್ಲರಿಗೂ ದುಭಾಷಿಯಾಗಿ ಮಾರ್ಟಿ ಎಂಬಾಕೆ ಸಹಕರಿಸಿದಳು. ಅವಳು ಕ್ಯಾಸ್ತಲ್‌ ನೂದರಿಯಲ್ಲಿ ನಾವಿದ್ದ ಎರಡೂ ದಿನ ನಮ್ಮೊಡನಿದ್ದಳು. ಹಾಗೆಯೇ ಹೆಮ್ಯಾ ಕೂಡಾ! ನಾವು ಮೇಯರ್‌ ಮುಗಾ ಪ್ಯಾಟ್ರಿಕ್ಕ್‌ನೊಡನೆ ಕಳೆದ ಸಂಜೆ, ಪತ್ರಿಕೆಗಳಿಗೆ ಸುದ್ದಿಯಾದವು. ಹಾಗೆಯೇ ಜೆರಾರ್ಡಿಯನ್‌ನ ಕಾಲೇಜಿಗೆ ಭೇಟಿ ಇತ್ತ ಸುದ್ದಿ ಕೂಡಾ ಪತ್ರಿಕೆಗಳಲ್ಲಿ ಬಂತು. ಲಾ ದಿ ಪೆಶ್‌ ಮತ್ತು ಇಂಡಿಪೆಂಡೆಂಟ್‌ ಪತ್ರಿಕೆಗಳಲ್ಲಿ ಫೋಟೋ ಸಹಿತ ಸುದ್ದಿ ಬಂದಾಗ ನನಗೆ ಸಂತೋಷವಾಯಿತು. ಮುಖ್ಯವಾಗಿ ನನ್ನ ನೆಹರೂ ಮೆಮೋರಿಯಲ್‌ ಕಾಲೇಜಿನ ಹೆಸರು ಫ್ರೆಂಚ್‌ ಪತ್ರಿಕೆಗಳಲ್ಲಿ ಬಂತಲ್ಲಾ!

ಎನಿತು ಸವಿಯೋ ಈ ಕ್ಯಾಸುಲೆ : ಕ್ಯಾಸ್ತಲ್‌ನೂದರಿಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಟ್ಟ ಖಾದ್ಯ ಕ್ಯಾಸುಲೆ. ಕ್ಯಾಸುಲೆ ಎಂದಾಗ ಬಾಯಲ್ಲಿ ನೀರೂರಿಸದ ಫ್ರೆಂಚರಿಲ್ಲ. ಕ್ಯಾಸುಲೆ ಅಂದರೆ ಬಾತುಕೋಳಿಯ ಮಾಂಸ, ಹಂದಿಯ ಸಾಸೇಜ್‌ ಮತ್ತು ಬೇಯಿಸಿದ ಬೀನ್ಸ್‌ ಬೀಜ ಸೇರಿಸಿ ಸಿದ್ಧಗೊಳಿಸಿದ ಒಂದು ಖಾದ್ಯ. ಕ್ಯಾಸ್ತಲ್‌ನೂದರಿಯಲ್ಲಿ ಆರು ಕ್ಯಾಸುಲೆ ಕಂಪೆನಿಗಳಿವೆ. ಅವುಗಳ ಪೈಕಿ ಎಪ್ರಿಲ್‌ ಹದಿನೇಳರಂದು ನಾವು ಭೇಟಿ ನೀಡಿದ್ದು ಸ್ಪೇಂಗೆರೋ ಕ್ಯಾಸುಲೇ ಕಂಪೆನಿಗೆ.

ಸ್ಪೇಂಗೆರೋ ಕುಟುಂಬ ಫ್ರಾನ್ಸಿನ ಕುಬೇರ ಕುಟುಂಬಗಳಲ್ಲಿ ಒಂದು. ರಗಿಪ ಫ್ರೆಂಚರ ಮೆಚ್ಚಿನ ಆಟ. ಸ್ಪೇಂಗೆರೋ ಕುಟುಂಬದ ಆರು ಮಂದಿ ಫ್ರಾನ್ಸ್‌ನ ರಾಷ್ಟ್ರೀಯ ಮಟ್ಟದ ರಗಿಪ್ ಆಟಗಾರರು. ಹಾಗಾಗಿ ಸ್ಪೇಂಗೆರೋ ಕುಟುಂಬವನ್ನು ಪ್ರೆಂಚರು ಗೌರವದಿಂದ ಕಾಣುತ್ತಾರೆ. ಅಂತಹ ಕುಟುಂಬ ತಯಾರಿಸುವ ಕ್ಯಾಸುಲೆಗೆ ಫ್ರಾನ್ಸಿನಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲೂ ಅಪಾರ ಬೇಡಿಕೆಯಿದೆ.

ಕ್ಯಾಸುಲೆ ತಯಾರಿಕಾ ಕ್ರಮವೆಂದರೆ ಅದೊಂದು ಯಾಂತ್ರಿಕ ವಿಸ್ಮಯ. ನಾವು ಕ್ಯಾಸುಲೇ ಕಂಪೆನಿಯ ಒಳಹೋಗುವ ಮುನ್ನ ನಮಗೆ ತಲೆಯಿಂದ ಕಾಲಿನವರೆಗೆ ಮುಚ್ಚುವ ಪ್ಲಾಸ್ಟಿಕ್‌ ತೊಡುಗೆ ತೊಡಿಸಲಾಯಿತು. ಕೈಗಳಿಗೆ ಪ್ಲಾಸ್ಟಿಕ್‌ ಗ್ಲೌಸ್‌ಗಳು. ಆ ಬಳಿಕ ನಮ್ಮನ್ನು ಸಾಲಾಗಿ ಮೊದಲನೆಯ ಕೋಣೆಗೆ ಕರೆದೊಯ್ದರು. ಅಲ್ಲಿ ಬಾತುಕೋಳಿಯ ಮಾಂಸವು ಬೃಹತ್‌ ಯಂತ್ರದಲ್ಲಿ 130 ಡಿಗ್ರಿ ಸೆಂಟಿಗ್ರೇಡ್‌ ಶಾಖದಲ್ಲಿ ಹದವಾಗಿ ಬೇಯುತ್ತದೆ. ಆ ಸುವಾಸನೆಯನ್ನು ಮಾತ್ರ ಸಹಿಸುವುದು ಸ್ವಲ್ಪ ಕಷ್ಟವೇ. ಎರಡನೆಯ ಕೋಣೆಯ ಬೃಹತ್‌ ಯಂತ್ರದಲ್ಲಿ ಅರ್ಜಂಟೈನಾದಿಂದ ಬಂದ ಬೀನ್ಸ್‌ ಬೀಜ 130 ಡಿಗ್ರಿ ಸೆಂಟಿಗ್ರೇಡ್‌ ಶಾಖ ಪ್ರಮಾಣದಲ್ಲಿ ಬೇಯುತ್ತದೆ. ಮೂರನೆಯ ಕೋಣೆಯಲ್ಲಿ ಬಾತಿನ ಮಾಂಸ, ಹಂದಿಯ ಸಾಸೇಜ್‌ ಮತ್ತು ಬೆಂದ ಬೀನ್ಸ್‌ ಬೀಜವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಟಿನಿನ್ನೊಳಗೆ ತುಂಬಲಾಗುತ್ತದೆ. ಕನ್ವೇಯರ್‌ ಬೆಲ್ಟುಗಳಲ್ಲಿ ಸಾಗಿ ಬರುವ ಟಿನ್ನುಗಳಲ್ಲಿ ಕ್ಯಾಸುಲೆಯನ್ನು ತುಂಬುವ ಕೆಲಸವನ್ನು ಮಾತ್ರ ಮನುಷ್ಯರೇ ಮಾಡಬೇಕಾಗುತ್ತದೆ. ಕ್ಯಾಸುಲೆ ತುಂಬಿದ ಟಿನ್ನು ಒಂದು ಮಾಪಕದತ್ತ ಸಾಗುತ್ತದೆ ಅದು ಮಾಂಸ, ಬೀಜ ಮತ್ತು ಸಾಸೇಜ್‌ನ ಪ್ರಮಾಣವನ್ನು ಮಾಪನ ಮಾಡುತ್ತದೆ. ನಿಗದಿತ ಪ್ರಮಾಣದಲ್ಲಿ ಕ್ಯಾಸುಲೆ ತುಂಬದ ಟಿನ್ನುಗಳು ಈ ಹಂತದಲ್ಲಿ ತಿರಸ್ಕರಿಸಲ್ಪಡುತ್ತವೆ. ಪ್ರಮಾಣ ಸರಿಯಾಗಿರುವ ಕ್ಯಾಸುಲೆ ಟಿನ್ನುಗಳು ಮುಂದಿನ ಹಂತಕ್ಕೆ ಸಾಗುತ್ತವೆ. ಅಲ್ಲಿ ಟಿನ್ನಿನ ಮುಚ್ಚಳವನ್ನು ಬಿಗಿಯಾಗಿ ಮುಚ್ಚಲಾಗುತ್ತದೆ. ಕೊನೆಗೆ ಎಲ್ಲಾ ಟಿನ್ನುಗಳು ವಿಶಾಲವಾದ ಕೋಣೆಯೊಂದಕ್ಕೆ ಕನ್ವೇಯರ್‌ ಬೆಲ್ಟ್‌ ಸಿಸ್ಟಂ ಮೂಲಕ ಬರುತ್ತವೆ. ಅಲ್ಲಿ ಅವುಗಳನ್ನು ಜೋಡಿಸಿಡುವ ವ್ಯವಸ್ಥೆಯಿದೆ. ಕೊನೆಯದು ದಪ್ಪ ರಟ್ಟಿನ ಪೆಟ್ಟಿಗೆಗಳಲ್ಲಿ ಅವನ್ನು ತುಂಬಿಸಿಡುವ ಹಂತ. ಇದೀಗ ಕ್ಯಾಸುಲೆ ಮಾರಾಟಕ್ಕೆ ಸಿದ್ಧಗೊಂಡಂತೆಯೆ.

ಕಂಪೆನಿಯಿಂದ ಹೊರಟಾಗ ಸ್ಪೇಂಗೆರೋ ಕುಟುಂಬದ ಒಬ್ಬಾತ ನಮಗೆಲ್ಲಿರಿಗೂ ಶುಭ ವಿದಾಯ ಹೇಳುವುದರೊಂದಿಗೆ, 750 ಗ್ರಾಂ ತೂಕದ ಒಂದೊಂದು ಕ್ಯಾಸುಲೆ ಟಿನ್ನುಗಳನ್ನು ಉಡುಗೊರೆಯಾಗಿ ನೀಡಿ ‘ನಿಮ್ಮ ದೇಶಕ್ಕೆ ಒಯ್ಯಿರಿ’ ಎಂದ. ಆದರೆ ನಾವು ಭಾರತಕ್ಕೆ ಬರಲು ಇನ್ನೂ ಮೂವತ್ತೆರಡು ದಿನಗಳಿವೆ. ಈಗಾಗಲೇ ಅತಿಭಾರದಿಂದ ಏದುಸಿರು ಬಿಡುತ್ತಿರುವ ನಮ್ಮ ಸೂಟುಕೇಸುಗಳಲ್ಲಿ ಇನ್ನೂ ಮುಕ್ಕಾಲು ಕಿಲೋ ತುಂಬಿಸುವ ಸಮಸ್ಯೆ ಒಂದೆಡೆಯಾದರೆ, ಒಂದು ತಿಂಗಳಲ್ಲಿ ಕ್ಯಾಸುಲೆಯ ಗತಿ ಏನಾಗುತ್ತದೋ ಎಂಬ ಸಂಶಯ ಇನ್ನೊಂದೆಡೆ. ಹಾಗಾಗಿ ನಾವ್ಯಾರೂ ಕ್ಯಾಸುಲೆಯನ್ನು ಭಾರತಕ್ಕೆ ತರಲಿಲ್ಲ. ನಾನದನ್ನು ಮಾಂಪಿಲಿಯೇ ಮಹಾನಗರದಲ್ಲಿ ನನ್ನ ಅತಿಥೇಯಳಾಗಿದ್ದ ಮದಾಂ ಜುವಾನಳಿಗೆ ನೀಡಿದೆ. ಕ್ಯಾಸುಲೆ ಅಂದರೆ ಆ ಅಜ್ಜಿಗೆ ಜೀವ. ‘ನನಗಾಗಿ ತಂದೆಯಾ?’ ಎಂದು ಕಣ್ಣರಳಿಸಿ ಗಂಡ ಜುವಾನನೊಡನೆ ತಿಂದು ಬಾಯಿ ಚಪ್ಪರಿಸಿದಳು. ಭಾರತಕ್ಕೆ ತಂದಿದ್ದರೆ ನನ್ನ ಹೆಂಡತಿ, ಮಕ್ಕಳಿಗೆ ಮತ್ತು ತುಂಡುಪ್ರಿಯ ಮಿತ್ರರಿಗೆ ಹೊಸತೊಂದು ರುಚಿ ತೋರಿಸಿಕೊಡಲು ಸಾಧ್ಯ ವಿತ್ತು ಎಂದು ನಾನು ಅಂದುಕೊಂಡೆ. ಆದರೆ ಎಲ್ಲವೂ ನಾವೆಣಿಸಿದಂತೆ ಆಗುವುದಿಲ್ಲವಲ್ಲಾ?

ಕ್ಯಾಸ್ತಲ್‌ನೂದರಿಯ ಸೈನಿಕ ಶಾಲೆ : ಕ್ಯಾಸ್ತಲ್‌ನೂದರಿಯಲ್ಲಿ ‘ಲೀಜಿಯನ್‌ ಇಂಟ್ರೇಂಜರ್‌’ ಎಂಬ ಬಹುರಾಷ್ಟ್ರೀಯ ಮಿಲಿಟರಿ ಶಾಲೆಯೊಂದಿದೆ. 1831ರಲ್ಲಿ ಲೂಯಿ ಫಿಲಿಪ್ಪ್‌ ಮಹಾರಾಜನಿಂದ ಸ್ಥಾಪನೆಗೊಂಡ ಈ ಮಿಲಿಟರಿ ಶಾಲೆಯಲ್ಲಿ 122 ದೇಶಗಳಿಗೆ ಸೇರಿದ 7000 ಸೈನಿಕರು, 100 ಕಿರಿಯ ಅಧಿಕಾರಿಗಳು ಮತ್ತು 360 ಹಿರಿಯ ಅಧಿಕಾರಿಗಳಿದ್ದಾರೆ. ಇವರಲ್ಲಿ ಶೇಕಡಾ 25ರಷ್ಟು ಮಂದಿ ಫ್ರೆಂಚರು. ಈ ಶಾಲೆಯ ಎರಡು ರೆಜಿಮೆಂಟುಗಳು ದಕ್ಷಿಣ ಅಫ್ರಿಕಾದಲ್ಲಿ ಮತ್ತು ಒಂದು ರೆಜಿಮೆಂಟ್‌ ದಕ್ಷಿಣ ಅಮೇರಿಕಾದಲ್ಲಿವೆ. ಫ್ರಾನ್ಸಿನಲ್ಲಿ ಕ್ಯಾಸ್ತಲ್‌ನೂದರಿಯಲ್ಲಿ ಮಾತ್ರವಲ್ಲದೆ ನೀಂ, ಒರಾಂಜ್‌, ಲ್ಯುದಾನ್‌, ಕಾರ್ವಿ ಮತ್ತು ಅಬಾನ್‌  ಹೀಗೆ ಒಟ್ಟು ಆರು ಕಡೆಗಳಲ್ಲಿ ರೆಜಿಮೆಂಟುಗಳಿವೆ. ಎಲ್ಲವಕ್ಕೂ ಕೇಂದ್ರ ಕ್ಯಾಸ್ತಲ್‌ನೂದರಿಯೇ.

ಲೀಜಿಯನ್‌ ಇಟ್ರೇಂಜರ್‌ ಒಂದು ಸ್ವಯಂಸೇವಾ ಮಿಲಿಟರಿ ಸಂಸ್ಥೆ. ವಿಶ್ವದ ಎಲ್ಲೆಡೆ ಶಾಂತಿಯನ್ನು ಕಾಪಾಡುವುದು ಇದರ ಉದ್ದೇಶ. ಇದು ವಿಶ್ವಸೇನೆಯ ಶಾಂತಿ ಪಡೆಗೆ ಅಪಾರ ದೇಣಿಗೆ ನೀಡಿದೆ. ಪ್ರಥಮ ಮತ್ತು ದ್ವಿತೀಯ ವಿಶ್ವ ಸಮರಗಳಲ್ಲಿ, ಮೆಕ್ಸಿಕೋ, ಮೊರಾಕ್ಕೋ, ಇಸ್ರೇಲ್‌  ಈಜಿಪ್ಟ್‌, ಇರಾನ್‌ಇರಾಕ್‌, ಭಾರತಚೀನಾ, ಭಾರತಪಾಕಿಸ್ತಾನ ಇತ್ಯಾದಿಯಾಗಿ ಯುದ್ಧಗಳು ನಡೆದಲ್ಲೆಲ್ಲಾ ಈ ಸಂಸ್ಥೆ ಕಾರ್ಯರಂಗಕ್ಕೆ ಇಳಿದಿದೆ. ಈ ಸಂಸ್ಥೆಗೆ ಸೇರಿದ 35000ಕ್ಕಿಂತಲೂ ಅಧಿಕ ಸೈನಿಕರು ಬೇರೆ ಬೇರೆ ಯುದ್ಧ ಸಂದರ್ಭಗಳಲ್ಲಿ ವೀರ ಸ್ವರ್ಗವನೆನ್ನೈದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಹದಿನೆಂಟರಿಂದ ನಲುವತ್ತು ವರ್ಷದ ವರೆಗಿನ ಗಂಡಸರು ಈ ಶಾಲೆಯಲ್ಲಿ ಸೈನಿಕರಾಗಿ ಪ್ರವೇಶಗಿಟ್ಟಿಸಬಹುದು. ಆದರೆ ಪ್ರವೇಶಪೂರ್ವದ ಪರೀಕೆಗಳನ್ನು ಪಾಸಾಗಿ ಸಂದರ್ಶನದಲ್ಲಿ ಯಶಸ್ವಿಯಾಗುವುದು ಅಷ್ಟು ಸುಲಭದ ವಿಷಯವಲ್ಲ. ಒಮ್ಮೆ ಆಯ್ಕೆಯಾಯಿತೆಂದರೆ ಕನಿಷ್ಠ ಐದು ವರ್ಷ ಅವರು ಕಡ್ಡಾಯವಾಗಿ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲೇ ಬೇಕು. ಆಯ್ಕೆಯಾದವರನ್ನು ಸಾಮಾನ್ಯ ಮತ್ತು ಪರಿಣತರ ವರ್ಗವೆಂದು ವಿಭಜಿಸಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಯುದ್ಧ ತರಬೇತಿ, ಫ್ರೆಂಚ್‌ ಭಾಷೆ, ದೈಹಿಕ ಸಾಮರ್ಥ್ಯ ವೃದ್ಧಿಯ ತಂತ್ರಗಳನ್ನು ಕಲಿಸಿಕೊಡಲಾಗುತ್ತದೆ. ಪರಿಣತರಲ್ಲಿ ಇವುಗಳೊಂದಿಗೆ ಆಡಳಿತ, ನಾಯಕತ್ವ, ನಿರ್ದೇಶಕತ್ವ, ರೇಡಿಯೋ ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತಿತರ ಕೌಶಲ್ಯಗಳನ್ನು ಬೆಳೆಸಲಾಗುತ್ತದೆ. ಇಲ್ಲಿ ಒಮ್ಮೆ ಆಯ್ಕೆಯಾಯಿತೆಂದರೆ ತಿಂಗಳಿಗೆ ಒಂದು ಸಾವಿರ ಡಾಲರ್‌ (ನಲ್ವತ್ತು ಸಾವಿರ ರೂಪಾಯಿ) ಸಂಬಳ ಸಿಗುತ್ತದೆ. ತರಬೇತಿಯ ಬಳಿಕ ತಿಂಗಳೊಂದರ ಕನಿಷ್ಠ ವೇತನ ಒಂದು ಸಾವಿರದ ಇನ್ನೂರು ಡಾಲರುಗಳು. (ನಲ್ವತ್ತೆಂಟು ಸಾವಿರ ರೂಪಾಯಿಗಳು) ಸೈನಿಕರಿಗೆ ಇಲ್ಲಿ ಹಾಸ್ಟೆಲು ವ್ಯವಸ್ಥೆಯಿದೆ. ಕ್ಯಾಂಟೀನು ಮತ್ತು ಡಿಪಾರ್ಟ್‌‌ಮೆಂಟಲ್‌ ಸ್ಟೋರುಗಳು ಕೂಡಾ ಇವೆ. ಸೈನಿಕರು ಯುದ್ಧರಂಗದಲ್ಲಿ ಸತ್ತು ಹೋದರೆ ಅವರ ವಯಸ್ಸು, ಸೇವಾ ಹಿರಿತನ, ಶ್ರೇಣಿ ಇತ್ಯಾದಿಗಳಿಗೆ ಅನುಗುಣವಾಗಿ ಬೃಹತ್‌ ಮೊತ್ತದ ಪರಿಹಾರಧನ ಲಭ್ಯವಾಗುತ್ತದೆ. ಆನೆ ಇದ್ದರೂ ಲಾಭ, ಸತ್ತರೂ ಲಾಭ!

ಕ್ಯಾಸ್ತಲ್‌ನೂದರಿಯ ‘ಕಂಸ’ ಜೆರಾರ್ಡಿಯನ್‌, ನಮ್ಮ ಮಿಲಿಟರಿ ಶಾಲಾ ಭೇಟಿಯನ್ನು ಸಾಕಷ್ಟು ಪೂರ್ವದಲ್ಲಿ ನಿಗದಿಗೊಳಿಸಿದ್ದ. ಹಾಗಾಗಿ ನಾವು ಶಾಲೆಯನ್ನು ಸಂದರ್ಶಿಸಿದಾಗ ನಮಗೆ ಹಿರಿಯ ಮಿಲಿಟರಿ ಅಧಿಕಾರಿಗಳಿಂದ ಭವ್ಯ ಸ್ವಾಗತ ಏರ್ಪಾಡಾಗಿತ್ತು. ಬೆಳಿಗ್ಗೆ ಲಘು ಉಪಹಾರ, ಮಧ್ಯಾಹ್ನ ಪೊಗದಸ್ತಾದ ಊಟ. ಊಟಕ್ಕೆ ಮೊದಲು ನಮ್ಮನ್ನು ಗುಂಡು ಹಾರಿಸುವಿಕೆಯ ತರಬೇತಿ ನೀಡುವಲ್ಲಿಗೆ ಕರೆದೊಯ್ಯಲಾಯಿತು. ಅಲ್ಲಿ 50 ಮೀಟರ್‌ ದೂರದಿಂದ ಚಲಿಸುತ್ತಿರುವ ಮಾನವಾಕೃತಿಯ ಎದೆಗೆ ಲೈಟ್‌ ಮೆಷಿನ್‌ಗನ್‌ನನಿಂದ ಗುಂಡು ಹಾರಿಸಬೇಕು. ಇಬ್ಬರು ಅಧಿಕಾರಿಗಳು ನೆಲದಲ್ಲಿ ಮಲಗಿ ಗುಂಡು ಹಾರಿಸುವ ಕ್ರಮವನ್ನು ನಮಗೆ ವಿವರಿಸಿದರು. ಎನ್‌.ಸಿ.ಸಿ. ಶಿಕಣ ಪಡೆದಿದ್ದ ನನಗದು ತುಂಬಾ ಇಷ್ಟವಾಯಿತು. ಆದರೆ ನಾವು ಯಾವ ಆಕೃತಿಗೆ ಗುಂಡು ಹಾರಿಸಬೇಕಿತ್ತೋ ಆ ಮಾನವಾಕೃತಿ ಜಪ್ಪೆಂದರೂ ಅತ್ತಿತ್ತ ಚಲಿಸಲಿಲ್ಲ. ನಮ್ಮ ದುರಾದೃಷ್ಟಕ್ಕೆ ಶೂಟಿಂಗ್‌ ಕೇಂದ್ರದ ಪ್ರಧಾನ ಆಪರೇಟರ್‌ ಒಂದು ವಾರದ ರಜಾದಲ್ಲಿದ್ದ. ನಮ್ಮೊಡನಿದ್ದ ಇಬ್ಬರು ಅಧಿಕಾರಿಗಳಿಗೆ ತುಂಬಾ ಬೇಸರವಾಯಿತು. ಅವರ ಮುಖ ನೋಡಿ ಎಲೈನ್‌ ‘ಪರವಾಗಿಲ್ಲ. ಕೋವಿ ಕೊಡಿ. ನಮ್ಮ ಗುರುವನ್ನೇ ಟಾರ್ಗೆಟ್‌ ಮಾಡಿ ಗುಂಡು ಹಾರಿಸುತ್ತೇವೆ!’ ಎಂದು ಹೇಳಿ ಅವರಿಬ್ಬರನ್ನು ಖುಷಿಪಡಿಸಿದಳು.

ಮಧ್ಯಾಹ್ನ ಊಟದ ಬಳಿಕ ವಿದಾಯ ಹೇಳುವಾಗ ಲೀಜಿಯನ್ಸ್‌ ಎಂಬ ಅಂಕಿತವುಳ್ಳ ಬಿಳೀ ಟೋಪಿಯನ್ನು ಮತ್ತು ‘ಲಿಜಿಯನೇರ್‌’ ಎಂಬ ದೊಡ್ಡ ಪುಸ್ತಕವನ್ನು ಹಿರಿಯ ಅಧಿಕಾರಿಯೊಬ್ಬ ನಮಗೆ ಸ್ಮರಣಿಕೆಯಾಗಿ ನೀಡಿದ. ಅದು ಫ್ರೆಂಚ್‌ ಭಾಷೆಯಲ್ಲಿರುವ ಪುಸ್ತಕ. ನಮ್ಮ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ! ನಾವು ಹೊರಡುವ ಹೊತ್ತಿನಲ್ಲಿ ಅದೇ ಅಧಿಕಾರಿ ‘ನಮ್ಮಲ್ಲಿ ಭಾರತೀಯ ಸೈನಿಕರೂ ಇದ್ದಾರೆ. ಅವರ ಧೈರ್ಯ ಅನುಪಮವಾದುದು’ ಎಂದ. ನಮ್ಮೆಲ್ಲರ ಮುಖ ಅರಳಿತು. ‘ಯಾವ ದೇಶದ ಸೈನಿಕರಾದರೇನು ? ನಾವು ಅವರನ್ನು ಗೌರವಿಸುತ್ತೇವೆ. ಅವರೇ ತಾನೇ ಸ್ವಾತಂತ್ರ್ಯದ ನಿಜವಾದ ರಕಕರು’ ಎಂದು ಹೆಬ್ಬಾರರು ಹೇಳಿದರು. ‘ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಬಂದಾಗ ಯುದ್ಧಗಳೇ ಇರಲಾರವು ಅಲ್ಲವೆ?’ ಎಂದು ನಾನು ಕೇಳಿದೆ. ‘ಸರಿಯಾಗಿ ಹೇಳಿದೆ. ಆದರೆ ಮನುಷ್ಯನಿಗೆ ತಾನು ಮನುಷ್ಯ ಎನ್ನುವುದು ತಿಳಿಯುವುದು ಯಾವಾಗಲೊ?’ ಎಂದು ಆ ಅಧಿಕಾರಿ ವಿಷಾದಿಸಿದ.

ಜೆರಾರ್ಡಿಯನ್ನನ ವ್ಯಾನ್‌ ಹತ್ತಿ ವಾಪಾಸಾಗುವಾಗ ಅಧಿಕಾರಿಗಳು ಮತ್ತು ಸೈನಿಕರು ಕೈಬೀಸಿ ನಮಗೆ ವಿದಾಯ ಹೇಳಿದರು. ನಾನು ಅಲ್ಲಿ ನಮಗಿತ್ತ ಬಿಳಿಟೋಪಿ ಇಟ್ಟುಕೊಂಡು ಎದ್ದುನಿಂತು ಮಿಲಿಟರಿ ಗತ್ತಿನಲ್ಲಿ ಅವರಿಗೆ ಸೆಲ್ಯೂಟು ಹೊಡೆದಾಗ ಅವರೆಲ್ಲರ ಮುಖದಲ್ಲಿ ನಗು ಲಾಸ್ಯವಾಡಿತು.

ರಾವತನೆಂಬ ಸರ್ಜನ : ಕ್ಯಾಸ್ತಲ್‌ನೂದರಿಯಲ್ಲಿ ನನ್ನ ಆತಿಥೇಯನಾಗಿದ್ದವ ರಾವತ್‌ ಎಂಬ ಓರ್ವ ಸರ್ಜನ್‌. ಆತ ಮನುಷ್ಯರ ದೇಹವನ್ನು ಆಪರೇಟ್‌ ಮಾಡುವುದರಲ್ಲಿ ಮಾತ್ರ ನಿಷ್ಣಾತನಲ್ಲ. ಮಾತಿನಲ್ಲೇ ನಮ್ಮನ್ನು ಆಪರೇಟ್‌ ಮಾಡಿ ಬಿಡುವ ಚಾಕಚಕ್ಯತೆ ಅವನದು. ಅವನು ಆಗಾಗ ಅಮೇರಿಕಾಕ್ಕೆ ತನ್ನ ವೃತ್ತಿನಿಮಿತ್ತವಾಗಿ ಹೋಗಿ ಬರುತ್ತಿದ್ದವನಾದುದರಿಂದ ಚೆನ್ನಾಗಿ ಇಂಗ್ಲೀಷ್‌ ಮಾತಾಡುತ್ತಿದ್ದ. ಅವನಿಗೆ ಮೂವರು ಮಕ್ಕಳು. ಹಿರಿಯಾಕೆ ಹದಿನೆಂಟರ ಡೆಲ್‌ಫೈನ್‌. ಕನ್ನಡಕ ಧಾರಿಣಿಯಾದ ಈ ಓತಿಕ್ಯಾತನ ಮುಖದವಳನ್ನು ನಾನು ಡಾಲಿನ್‌ ಎಂದೇ ಕರೆಯುತ್ತಿದ್ದೆ. ಎರಡನೆಯವಳು ಪರೈನ್‌. ಆಕೆಗೆ ಈಗ ಸರಿಯಾಗಿ ಹದಿನಾರರ ಹರೆಯ. ಈ ಪ್ರಾಯಕ್ಕೇ ಅವಳು ಆರಡಿ ಬೆಳೆದು ಬಿಟ್ಟಾಗಿದೆ. ಇನ್ನೂ ಅದೆಷ್ಟೆತ್ತರಕ್ಕೆ ಹೋಗುತ್ತಾಳೊ? ಹನ್ನೆರಡರ ಹರೆಯದ ಗಿಲಾಮೆ ಕೊನೆಯವನು. ಅವನ ಮೂಗಿನ ಎರಡೂ ಹೊಳ್ಳೆಗಳಲ್ಲಿ ಸದಾ ಬೆಳ್ಳನೆ ಹೊಳೆಯುತ್ತಿರುವ ಸಿಂಬಳ! ರಾವತನ ಹೆಂಡತಿ ಡೇನಿ ರಾವತನ ಹಾಗೆ ಕೃಶಶರೀರ ಪ್ರಕೃತಿಯವಳು. ಹಾಗೆ ನೋಡಿದರೆ ರಾವತನ ಹೆಣ್ಣುನಾಯಿ ಮೇವಾಳನ್ನು ಹೊರತುಪಡಿಸಿದರೆ ಎಲ್ಲರೂ ಕಡ್ಡಿಗಳೇ.

ರಾವತ್‌ ತುಂಬಾ ಶಿಸ್ತಿನ ಮನುಷ್ಯ. ಅವನು ಫ್ರೆಂಚರ ಮುಕ್ತತೆಯನ್ನು ಮೆಚ್ಚುತ್ತಿರಲಿಲ್ಲ. ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸಿದ್ದ. ನನಗೆ ಅವನದ್ದು ಒಂದು ಭಾರತೀಯ ಕುಟುಂಬದಂತೆ ಭಾಸವಾಯಿತು. ಅದೇ ಪ್ರೀತಿ ವಾತ್ಸಲ್ಯ, ಅದೇ ಕೌಟುಂಬಿಕ ವಾತಾವರಣ ಮತ್ತು ವಿಧೇಯರಾದ ಮಕ್ಕಳು. ಜೆರಾರ್ಡಿಯನ್ನನ ಕಾಲೇಜಿನಿಂದ ಮನೆಗೆ ನನ್ನನ್ನು ಕರದೊಯ್ಯಲು ಸ್ವತಃ ರಾವತನೇ ಬಂದಿದ್ದ. ಮನೆಯ ಗೇಟಿನ ಹತ್ತಿರ ಕಾರು ನಿಲ್ಲಿಸಿ ನನ್ನ ಸೂಟುಕೇಸನ್ನು ಬೇಡವೆಂದರೂ ಅವನೇ ಎತ್ತಿಕೊಂಡ. ಅದರ ಕೈ ಶೀಘ್ಘದಲ್ಲೇ ತುಂಡಾಗಲಿದೆ ಎಂಬ ನನ್ನ ಊಹೆ ಆ ಕಣದಲ್ಲಿ ನಿಜವಾಗಿ ಬಿಟ್ಟಿತು. ರಾವತ್‌ ಸೂಟ್‌ಕೇಸ್‌ ಎತ್ತಿಕೊಂಡು ನಡೆಯುವಾಗ ಅದು ಕೆಳಗೆ ಬಿತ್ತು. ಅದರ ಹಿಡಿ ರಾವತನ ಕೈಯಲ್ಲಿ. ಅವನಿಗೆ ತುಂಬಾ ಬೇಸರವಾಗಿ ‘ಸಾರಿ’ ಎಂದು ಮೂರು ಬಾರಿ ಹೇಳಿದ.

‘ಸಾರಿ ಹೇಳುವಷ್ಟರ ಮಟ್ಟಿಗೆ ನೀನು ವಿಷಾದಿಸಬೇಕಿಲ್ಲ. ಇದೊಂದು ಹಳೇ ಸೂಟುಕೇಸು. ನಾನದರಲ್ಲಿ ಭಾರ ಹಾಕಿದ್ದು ಜಾಸ್ತಿಯಾಯಿತು. ಸಂಜೆ ನನ್ನನ್ನು ಸೂಟುಕೇಸು ಸಿಗುವ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಲು ಮರೆಯಬೇಡ. ಇನ್ನೂ ಫ್ರಾನ್ಸ್‌ ಅರ್ಧ ಬಾಕಿಯಿದೆ. ಅದಾಗಿ ಮತ್ತೆ ಏಳು ದೇಶಗಳ ಪ್ರವಾಸ ಇದೆ. ಇದನ್ನು ಹೊತ್ತುಕೊಂಡು ಅಷ್ಟೆಲ್ಲಾ ಮಾಡಲು ಸಾಧ್ಯವಿಲ್ಲ’ ಅಂದೆ. ಆತ ಅದಕ್ಕೆ ಒಪ್ಪಿದ. ಆದರೆ ಅಂದು ರಾತ್ರಿ ಮೇಯರನ ಮನೆಯಿಂದ ನಾನು ವಾಪಾಸಾಗುವಾಗ ಎಂಟು ದಾಟಿತ್ತು. ಮರುದಿನ ಸಂಜೆ ರಾವತ್‌ ಡ್ಯೂಟಿ ಮುಗಿಸಿ ಬರುವಾಗ ಏಳು ದಾಟಿತ್ತು. ‘ಅಯ್ಯಯೋ ಮಾರಾಯ. ನಿನ್ನ ಸೂಟ್‌ಕೇಸ್‌ ವಿಷಯ ಮರೆತೇ ಹೋಯ್ತು. ಇಲ್ಲಿ ಅಂಗಡಿಗಳೆಲ್ಲಾ ಐದೂವರೆ  ಆರರೊಳಗೆ ಮುಚ್ಚಿ ಬಿಡುತ್ತವೆ. ಈಗ ಓಪನ್‌ ಇರೋದು ಬಾರುಗಳು ಮಾತ್ರ ಎಂದು ಯೋಚನಾ ಕ್ರಾಂತನಾದ. ಸ್ವಲ್ಪ ಹೊತ್ತಿನ ಬಳಿಕ ಆತ ‘ನೀನು ತಪ್ಪು ತಿಳಿಯದಿದ್ದರೆ ಒಂದು ಮಾತು. ಪ್ರತಿ ಬಾರಿ ಅಮೇರಿಕಾಕ್ಕೆ ಹೋಗುವಾಗ ಹೊಸದೊಂದು ಸೂಟುಕೇಸು ಕೊಳ್ಳುವುದು ನನ್ನ ಅಭ್ಯಾಸ. ನನ್ನಲ್ಲಿ ಏನಿಲ್ಲವೆಂದರೂ ಹತ್ತಕ್ಕಿಂತಲೂ ಹೆಚ್ಚು ಸೂಟುಕೇಸುಗಳಿವೆ. ಅವುಗಳಲ್ಲಿ ಅತ್ಯಂತ ಹೊಸದನ್ನು ನಿನಗೆ ಕೊಡುತ್ತೇನೆ. ನೀನು ದಯವಿಟ್ಟು ‘ಬೇಡ ಎನ್ನಲಾಗದು’ ಎಂದ.

ಒಪ್ಪದೆ ನನಗೆ ನಿರ್ವಾಹವಿರಲಿಲ್ಲ. ಆತ ನೀಡಿದ ಸೂಟುಕೇಸು ಹೊಸದಾಗಿತ್ತು. ಸದೃಢವಾಗಿತ್ತು. ಅವನು ನನಗಿತ್ತ ಸೂಟುಕೇಸಿಗೆ ಬದಲಾಗಿ ನನ್ನ ಹಳೆಯ ಸೂಟುಕೇಸು ಅವನ ಸಂಗ್ರಹಾಲಯವನ್ನು ಸೇರಿಕೊಂಡಿತು. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿಯಲ್ಲಿ ಹೀಗೊಂದು ವಿನಿಮಯ ನಡೆದೇ ಹೋಯಿತು!

ರಾವತನ ಮನೆಯಲ್ಲಿ ಮೂವರು ಮಕ್ಕಳಿಗೆ ಮೂರು ಬೆಡ್‌ರೂಮುಗಳಿವೆ. ಅವನ ಅಂತಃಪುರ ಬೇರೆಯೇ. ಅತಿಥಿಗಳಿಗಾಗಿ ಸುಸಜ್ಜಿತವಾದ ಬೆಡ್‌ರೂಂ ಮಹಡಿಯಲ್ಲಿದೆ. ಮನೆ ಸುತ್ತಿದ ಬಳಿಕ ‘ನಿನ್ನ ಮನೆ ಚನ್ನಾಗಿದೆ. ಮಕ್ಕಳಿಗೆಲ್ಲಾ ಪ್ರತ್ಯಪ್ರತ್ಯೇಕ ಬೆಡ್‌ರೂಮು ಇರುವುದು ಒಳ್ಳೆಯದು’ ಎಂದೆ.

ಅವನಿಗೆ ನನ್ನ ಮಾತಿನಿಂದ ಪರಮಾಶ್ಚರ್ಯವಾಯಿತು. ‘ಅದೇಕೆ ಹಾಗೆ ಹೇಳುತ್ತೀಯೆಲ ನಿನ್ನ ದೇಶದಲ್ಲಿ ಇಂತಹ ವ್ಯವಸ್ಥೆ ಇಲ್ಲವೇ?’ ಎಂದು ರಾವತ್‌ ಕೇಳಿದ.

‘ಅನುಕೂಲಸ್ಥರು ಮಾಡಿಸುತ್ತಾರೆ. ಆದರೆ ಅಂತಹ ಅನುಕೂಲಸ್ಥರ ಸಂಖ್ಯೆ ಕಡಿಮೆ’ ಎಂದು ಉತ್ತರಿಸಿದೆ.

‘ನಿನ್ನ ಮನೆಯಲ್ಲಿ ವ್ಯವಸ್ಥೆ ಹೇಗೆ?’ ಸರ್ಜನ್‌ ರಾವತ್‌ ನನ್ನ ಆಪರೇಶನ್ನಿಗೆ ತೊಡಗಿದ.

‘ನಾವು ಗಂಡ ಹೆಂಡಿರು ಮತ್ತು ನಮ್ಮಿಬ್ಬರು ಮಕ್ಕಳು ಒಂದೇ ಕೋಣೆಯಲ್ಲಿ ಮಲಗುವುದು. ನಮಗೆಲ್ಲರಿಗೂ ಇರುವುದು ಒಂದೇ ಬೆಡ್‌ರೂಂ’ ಎಂದೆ.

ಅವನಿಗೂ ಮತ್ತಷ್ಟು ಆಶ್ಚರ್ಯವಾಯಿತು.’ಮಕ್ಕಳು ನಿಮ್ಮ ಕೋಣೆಯಲ್ಲೇ ಮಲಗ್ತಾರಾ? ಹಾಗಾದರೆ ನೀನು ರಾತ್ರಿಯ ಸಂತೋಷಕ್ಕೆ ಏನು ಮಾಡುತ್ತಿ?’ ಎಂದು ಕೇಳಿದ.

‘ಪುಣ್ಯಕ್ಕೆ ಮಕ್ಕಳು ಬೇಗನೆ ನಿದ್ದೆ ಮಾಡಿ ಬಿಡುತ್ತಾರೆ’ ಅಂದೆ.

ರಾವತ್‌, ಅವನ ಹೆಂಡತಿ ಮತ್ತು ಮಕ್ಕಳ ನಗು ಅದೆಷ್ಟು ದೂರಕ್ಕೆ ಕೇಳಿಸಿರಬಹುದೊ?

ಕರ್ಕಸೋನೆಯ ಕರುಣ ಕತೆ

ಕ್ಯಾಸ್ತಲ್‌ನೂದರಿಯಿಂದ ನಾಬೋನಿನಗೆ ಹೋಗುವ ದಾರಿಯಲ್ಲಿ ಸಿಗುವ ಕರ್ಕಸೋನೆ ಒಂದು ಇತಿಹಾಸ ಪ್ರಸಿದ್ಧ ಪಟ್ಟಣ. ಕರ್ಕಸೋನೆಯಲ್ಲೊಂದು ಕೋಟೆಯಿದೆ. ಕೋಟೆಯ ಒಳಗೆ ಹಳೆಯ ಪಟ್ಟಣವಿದೆ. ಹೊರಗೆ ಆಧುನಿಕ ನಗರವೊಂದು ತಲೆ ಎತ್ತಿದೆ. ಆಧುನಿಕ ಕರ್ಕಸೋನೆ ವೈನ್‌ ಉತ್ಪಾದನೆಗಾಗಿ ಪ್ರಸಿದ್ಧಿ ಪಡೆದರೆ, ಕೋಟೆಯ ಒಳಗಿನ ಮಂದಿಗಳು ಇತಿಹಾಸವನ್ನು ಬಂಡವಾಳವಾಗಿಸಿ ಬದುಕುತ್ತಾರೆ. ಹಾಗೆ ನೋಡಿದರೆ ಕೋಟೆಯೊಂದು ಇಲ್ಲಿ ಇಲ್ಲದೆ ಇರುತ್ತಿದ್ದರೆ ಹೊಸನಗರ ತಲೆ ಎತ್ತುತ್ತಿರಲಿಲ್ಲ. ಈಗಲೂ ಕರ್ಕಸೋನೆ ಕೋಟೆ ಎಂದರೆ ಯುರೋಪಿನ ಪ್ರವಾಸಿಗರಿಗೆ ಇನ್ನಿಲ್ಲದ ಆಕರ್ಷಣೆ. ಕೋಟೆಯಿಂದ ಆವೃತ್ತವಾದ ಮಧ್ಯಯುಗೀನ ಪರಿಪೂರ್ಣ ನಗರವೊಂದಕ್ಕೆ ಪೂರ್ಣಪ್ರಮಾಣದ ದೃಷ್ಟಾಂತವಾಗಿ ಉಳಿದಿರುವ ಈ ಕೋಟೆಯನ್ನು ನೋಡಿದಾಗ ನನಗೆ ನೆನಪಾದದ್ದು, ಹನೆನರಡನೆಯ ಶತಮಾನದಲ್ಲಿ ಅದರೊಳಗೆ ಕ್ಯಾಥಲಿಕ್ಕರು ನಡೆಸಿದ 20000 ಮಂದಿ ಕಥಾರರ ನರಮೇಧ! ಪುಣ್ಯಕ್ಕೆ ಕ್ಯಾಥಲಿಕ್ಕರು ಕೋಟೆಯನ್ನು ಹಾಳುಗೆಡಹಲಿಲ್ಲ. ಹಾಗಾಗಿ ಇಂದಿಗೂ ಇದೊಂದು ಸ್ಮಾರಕವಾಗಿ ಉಳಿದುಕೊಂಡಿದೆ.

ಅವುದ್‌ (Aude) ನದಿಯ ದಂಡೆಯ ಮೇಲಿರುವ ಕರ್ಕಸೋನೆ ಎರಡು ಮಹತ್ವದ ದಾರಿಗಳ ಸಂಧಿಸ್ಥಳ. ಅಟ್ಲಾಂಟಿಕನ್ನು ಮೆಡಿಟರೇನಿಯನಿನ್ನೊಡನೆ ಸೇರಿಸುವ ಪೂರ್ವಪಶ್ಚಿಮ ಸಂಗಮದ ದಾರಿಯು ಕರ್ಕಸೋನೆ ಮೂಲಕ ಹಾದು ಹೋಗುತ್ತದೆ. ಹಾಗೆಯೇ ಪಿರನಿ ಪರ್ವತಗಳ ಮೂಲಕ ಅವುದ್‌ ಕಣಿವೆಯನ್ನು ಸ್ಪೈನ್‌ನೊಡನೆ ಸಂಪರ್ಕಿಸುವ ಉತ್ತರದಕ್ಷಿಣ ಸಂಗಮದ ದಾರಿಯು ಕೂಡಾ ಕರ್ಕಸೋನನ್ನು ಹಾದು ಹೋಗುತ್ತದೆ. ಈ ಅರ್ಥದಲ್ಲಿ ಕರ್ಕಸೋನೆ ಒಂದು ಕೇಂದ್ರಸ್ಥಳ.

ಇತಿಹಾಸಕಾರರ ಪ್ರಕಾರ ಇಲ್ಲಿ ಕ್ರಿ.ಪೂ. ಆರನೆಯ ಶತಮಾನದಲ್ಲಿ ಜನರು ವಾಸಿಸಲು ಆರಂಭಿಸಿದರು. ಕ್ರಿ.ಪೂ. 300ರಲ್ಲಿ ಇಲ್ಲಿಗೆ ಮಧ್ಯಯುರೋಪಿನಿಂದ ವಲಸೆ ಬಂದ ವೋಲ್ಕಾ ಟೆಕ್ಟಟೋಸೇಜಸ್‌ ಎಂಬ ಜರ್ಮನ್‌ ಜನಾಂಗ ಇಡೀ ಲ್ಯಾಂಗ್‌ಡಕ್ಕ್‌ ಪ್ರಾಂತ್ಯವನೆನಲ್ಲಾ ತನ್ನ ವಶಕ್ಕೆ ತೆಗೆದುಕೊಂಡಿತು. ಕ್ರಿ.ಪೂ. 122ರಲ್ಲಿ ರೋಮನನರು ಲ್ಯಾಂಗ್‌ಡಕ್ಕ್‌ ಪ್ರಾಂತ್ಯವನ್ನು ವಶಪಡಿಸಿಕೊಂಡು ಕೋಟೆ ಕೊತ್ತಲಗಳನ್ನು ನಿರ್ಮಿಸಿದರು. ಕರ್ಕಸೋನ್‌ನಲ್ಲಿ ಮೊದಲು ಕೋಟೆ ನಿರ್ಮಿಸಿದ ಅವರು ಈ ಪ್ರದೇಶವನ್ನು ಐದನೇ ಶತಮಾನದ ಪೂರ್ವಾರ್ಧದ ವರೆಗೂ ಆಳಿದರು. ಐದನೇ ಶತಮಾನದ ಮಧ್ಯಾವಧಿಯಲ್ಲಿ ಸ್ಪೈನ್‌ ಮತ್ತು ಲ್ಯಾಂಗ್‌ಡಕ್ಕ್‌ ಪ್ರಾಂತ್ಯವು, ದ್ಯಾನುಬೇ (Danube) ನದಿ ತೀರದಿಂದ ಬಂದ ವಿಸಿಗೋಥರ ವಶವಾಯಿತು. ಅವರು ಕ್ರಿ.ಶ. 460 ರಿಂದ 725 ರ ವರೆಗೆ ಈ ಪ್ರದೇಶವನ್ನು ಆಳಿದರು. ಕ್ರಿ.ಶ.725ರ ಹೇಮಂತ ಕಾಲದಲ್ಲಿ ಸರಾಸೆನ್ಸ್‌ ಎಂಬ ಜನಾಂಗ ಈ ಪ್ರದೇಶವನ್ನು ಆಕ್ರಮಿಸಿ ವಶಪಡಿಸಿಕೊಂಡು ಇಲ್ಲಿಗೆ ಕರ್ಕಸುನಾ ಎಂದು ಹೆಸರಿಟ್ಟಿತು. ಅದೇ ಈಗ ಅಪಭ್ರಂಶಗೊಂಡು ಕರ್ಕಸೋನ್‌ ಆಗಿದೆ.

ಕ್ರಿ.ಶ. 759ರಲ್ಲಿ ಫ್ರಾನ್ಸ್‌ನ ರಾಜನಾದ ಕುಳ್ಳ ಪೆಪಿನ್‌, ಕರ್ಕಸೋನನ್ನು ಆಕ್ರಮಿಸಿ ವಿಸಿಗೋಥರನ್ನು ಓಡಿಸಿದ. ಕ್ರಿ.ಶ.1082 ರಿಂದ 1209 ರ ವರೆಗಿನ ಅವಧಿಯಲ್ಲಿ ಬೇರೆ ಬೇರೆ ವೈಕೌಂಟುಗಳು ಕರ್ಕಸೋನನ್ನು ಆಳಿದರು. ಈ ಅವಧಿಯಲ್ಲಿ ಇಲ್ಲಿ ಕಥಾರ್‌ ಪಂಥವು ಜನಪ್ರಿಯವಾಯಿತು. ರೇಮೊಂಡ್‌ ರೋಜರ್‌ ಟ್ರೆಂಕಾವೆಲ್‌ (1194-1209) ಎಂಬ ಇಲ್ಲಿನ ಯುವ ವೈಕೌಂಟನು ಕಥಾರ್‌ ಪಂಥಕ್ಕೆ ರಾಜಾಶ್ರಯ ನೀಡಿ ತೃತೀಯ ಪೋಪ್‌ ಇನೋಸೆಂಟನ ಆಗ್ರಹಕ್ಕೆ ತುತ್ತಾದ. ಕರ್ಕಸೋನ್‌ ಕೋಟೆಯೊಳಗೆ ಕಟ್ಟಿಗೆ ರಾಶಿ ಹಾಕಿ ಬೆಂಕಿಕೊಟ್ಟು ಉರಿಯುವ ಬೆಂಕಿಗೆ 20000 ಕಥಾರರನ್ನು ಹೆಡೆಮುರಿ ಕಟ್ಟಿ ಎಸೆದು ಜೀವಂತ ದಹಿಸಲಾಯಿತು. ಹೀಗೆ ಧರ್ಮದ ಹೆಸರಲ್ಲಿ ಕರಾಳ ಅಧ್ಯಾಯವೊಂದರ ಸೃಷ್ಟಿಯಾಯಿತು.

ಈ ಹತ್ಯಾಕಾಂಡ ನಡೆಸಿದ ಕ್ಯಾಥಲಿಕ್ಕರ ನಾಯಕ ಸೈಮೋನ್‌ ಡಿ ಮೋಂಟ್‌ ಪೋರ್ಟ್ ಕೋಟೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ. ಕ್ರಿ.ಶ.1218ರಲ್ಲಿ ಆತ ಮಡಿದು ಅವನ ಮಗ ಆ್ಯಮುರಿ ಕ್ಯಾಥಲಿಕ್‌ ಪಡೆಯ ಮುಖ್ಯಸ್ಥನಾದ. ಆದರೆ ಆತನಿಗೆ ಅಪ್ಪ ಗೆದ್ದ ಪ್ರದೇಶಗಳ ಮೇಲೆ ನಿಯಂತ್ರಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 1224ರಲ್ಲಿ ಲ್ಯಾಂಗ್‌ಡಕ್ಕ್‌ ಪ್ರದೇಶದ ಮೇಲಣ ಸರ್ವಾಧಿಕಾರ ಫ್ರಾನ್ಸಿನ ರಾಜ ಎಂಟನೇ ಲೂಯಿಯ ಕೈಗೆ ಬಂತು. ಆ ಬಳಿಕ ಕರ್ಕಸೋನೆಗೆ ಮಹತ್ವ ಲಭ್ಯವಾಯಿತು. ಅದರ ಅಭಿವೃದ್ಧಿಯೂ ಆಯಿತು.

ಕ್ರಿ.ಶ.1262ರಲ್ಲಿ ಅವುದ್‌ ನದಿಯ ಪಶ್ಚಿಮ ದಂಡೆಯಲ್ಲಿ ಪೌರಾಡಳಿತ ವ್ಯವಸ್ಥೆಯನ್ನು ಹೊಂದಿದ ಊರೊಂದು ತಲೆ ಎತ್ತಿ ಪ್ರವರ್ಧಮಾನಕ್ಕೆ ಬರತೊಡಗಿತು. 1355ರಲ್ಲಿ ವೇಲ್ಸ್‌ನ ರಾಜಕುಮಾರ ಎಡ್ವರ್ಡ್ ‌ ಆ ಊರಿಗೆ ಬೆಂಕಿ ಕೊಟ್ಟು ಅದನ್ನು ಸುಟ್ಟುಬಿಟ್ಟ. ಆದರೆ ಜನರು ಮತ್ತೆ ಸಾಹಸದಿಂದ ಊರನ್ನು ಕಟ್ಟಿದರು. ಕೋಟೆಗೂ ಹೊಸ ಊರಿಗೂ ಸಂಪರ್ಕ ಕಲ್ಪಿಸಲು ಅವುದ್‌ ನದಿಗೆ ಅಡ್ಡವಾಗಿ ಸೇತುವೆಯೊಂದನ್ನು ಕಟ್ಟಲಾಯಿತು. ಆದರೆ ಹಳೆಯ ಕೋಟೆ ಮತ್ತು ಹೊಸ ಊರುಗಳ ನಡುವಣ ಅಂತರವನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಕೋಟೆ ಪ್ರಭುತ್ವದ ಅಧಿಕಾರ ಲಾಂಛನವಾಗಿ ಭೂತದಲ್ಲಿ ಬದುಕನ್ನು ಅರಸಿದರೆ, ಹೊಸ ಊರು ಚಟುವಟಿಕೆಗಳಿಂದ ಗಿಜಿಗುಟ್ಟುತ್ತಾ ಭವಿಷ್ಯದತ್ತ ಮುನ್ನಡೆಯತೊಡಗಿತು.

ಕ್ರಿ.ಶ.1659ರಲ್ಲಿ ಫ್ರಾನ್ಸ್‌ ಮತ್ತು ಸ್ಪೈನ್‌ಗಳ ನಡುವೆ ನಡೆದ ಪಿರನೀಸ್‌ ಒಪ್ಪಂದದ ಪ್ರಕಾರ ಕರ್ಕಸೋನೆಯ ಸಾಕಷ್ಟು ದಕ್ಷಿಣಕ್ಕೆ ಫ್ರಾನ್ಸ್‌-ಸ್ಪೈನ್‌ ಗಡಿಯನ್ನು ಗುರುತಿಸಲಾಯಿತು. ಇದರಿಂದ ಕರ್ಕಸೋನೆ ಫ್ರಾನ್ಸಿನಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಾಯಿತು. ಲ್ಯಾಂಗ್‌ಡಕ್ಕಿನ ಜನರಿಗೆ ಫ್ರೆಂಚ್‌ ಮತ್ತು ಸ್ಪಾನಿಷ್‌  ಎರಡೂ ಬರುತ್ತವೆ. ಪ್ಯಾರಿಸ್ಸಿಗಿಂತ ಇವರಿಗೆ ಬಾರ್ಸಿಲೋನಾ ಸಮೀಪದಲ್ಲಿರುವುದರಿಂದ ಇವರು ಸಾಂಸ್ಕೃತಿಕವಾಗಿ ಸ್ಪೈನಿಗೆ ಹತ್ತಿರದವರು. ಆದರೆ ರಾಜಕೀಯವಾಗಿ ಇವರು ಫ್ರಾನ್ಸಿನಲ್ಲಿ ಇರಬೇಕಾಯಿತು. ಕಾಸರಗೋಡಿನಂತೆ!

ಹದಿನೆಂಟನೇ ಶತಮಾನದಲ್ಲಿ ಕರ್ಕಸೋನೆ ನಗರದಲ್ಲಿ ವೈನ್‌ ಮತ್ತು ಲಿನನ್‌ ತಯಾರಿ ಸಮೃದ್ಧ ವಿಕಾಸವನ್ನು ಕಂಡಾಗ, ಕೋಟೆ ಕೇವಲ ಕೊಳಚೆಗೇರಿಯಾಗಿ ಪರಿವರ್ತಿತವಾಯಿತು. ಸಾಲದ್ದಕ್ಕೆ 1850ರಲ್ಲಿ ಹಳೆಯ ಕೋಟೆಗಳನ್ನು ನಾಶಪಡಿಸಬೇಕೆಂದು ಫ್ರಾನ್ಸಿನ ರಾಜ ಆಜ್ಞೆ ಹೊರಡಿಸಿದ. ಆದರೆ ಕರ್ಕಸೋನ್‌ನ ವಿದ್ವಾಂಸ ಜುವಾನ್‌ ಪಿಯರೆಕ್ರರೋಸ್‌ ಮೇರೆವಿಲ್ಲ್‌, ಲೇಖಕ ಪ್ರಾಸ್ಪೆರ್‌ಮೆರಿಮಾ ಮತ್ತು ಪ್ರಸಿದ್ಧ ವಾಸ್ತುಶಿಲ್ಪಿ ವಯೊಲೆಟ್‌ ಲೆಡಕ್‌ ಎಂಬ ತ್ರಿಮೂರ್ತಿಗಳು ಈ ಕೋಟೆಯನ್ನು ನಾಶಪಡಿಸುವುದರ ವಿರುದ್ಧ ಜನಾಭಿಪ್ರಾಯ ಮೂಡಿಸಿದರು. ಜನರ ಪ್ರತಿರೋಧಕ್ಕೆ ಹೆದರಿ ರಾಜ ಆಜ್ಞೆಯನ್ನು ಹಿಂದೆಗೆದುಕೊಂಡ. ಆದುದರಿಂದ ಈ ಮಹಾನ್‌ಕೋಟೆ ಹಾಗೆಯೇ ಉಳಿದುಕೊಂಡಿತು.

ನಮ್ಮನ್ನು ತನ್ನ ದೊಡ್ಡದಾದ ವ್ಯಾನಿನಲ್ಲಿ ಕರ್ಕಸೋನೆಗೆ ಜೆರಾರ್ಡಿಯನ್‌ ತಂದು ಬಿಟ್ಟದ್ದು ಎಪ್ರಿಲ್‌ ಹದಿನೇಳರ ಅಪರಾಹ್ನದಂದು. ಕರ್ಕಸೋನೆಯ ಹೋಟೇಲೊಂದರಲ್ಲಿ ಅಲ್ಲಿನ ರೋಟರಿ ತಂಡ ನಮಗಾಗಿ ಕಾದಿತ್ತು. ಮಿಡಿ ಲಿಬ್ರೆ ಮತ್ತು ಇಂಡಿಪೆಂಡೆಂಟ್‌ ಪತ್ರಿಕೆಗಳ ಬಾತ್ಮೀದಾರರು ನಮಗಾಗಿ ಕಾದಿದ್ದರು. ಮಿಡಿ ಲಿಬ್ರೆ ಪತ್ರಿಕೆಯವರು ಕರ್ನಾಟಕದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡಿದ ವೈಶಿಷ್ಟ್ಯಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು. ಅವುಗಳನ್ನು ಓದಿದವರು ಯಕ್ಷಗಾನ ಮತ್ತು ಕೋಣನ ಓಟ (ಕಂಬಳ) ಅಂದರೇನೆಂದು ಹೋದ ಹೋದ ಕಡೆಗಳನ್ನೆಲ್ಲಾ ನಮ್ಮನ್ನು ಕೇಳತೊಡಗಿದರು.

ನಾವು ಕರ್ಕಸೋನೆ ಕೋಟೆ ನೋಡಲು ಹೋದಾಗ ಹನಿಮಳೆ ಬೀಳತೊಡಗಿತು. ಅದರೊಂದಿಗೆ ಭರ್ರನೆ ಬೀಸುವ ಗಾಳಿ ಮತ್ತು ಗದಗುಟ್ಟಿಸಿ ನಡುಗಿಸುವ ಚಳಿ. ಆದರೂ ಕೋಟೆಯೊಳಗಡೆ ಜನವೋ ಜನ. ಫ್ರಾನ್ಸಲ್ಲಿ ಎಪ್ರಿಲ್‌ ತಿಂಗಳಲ್ಲಿ ಮಳೆ ಬರುವುದು ಸ್ವಾಭಾವಿಕ. ಆದರೆ ನಾವು ಹೋದಲೆಲ್ಲಾ ಬಿಸಿಲೇ ನಮ್ಮನ್ನು ಸ್ವಾಗತಿಸಿತ್ತು. ಹಾಗಾಗಿ ಫ್ರಾನ್ಸಿನಲ್ಲಿ ಪ್ರವಾಸ ಕಾಲ ಆರಂಭವಾಗಿತ್ತು. ಕೋಟೆಯೊಳಗಿನ ಜಾತ್ರೆಯ ವಾತಾವರಣಕ್ಕೆ ಕಾರಣ ಇದುವೇ. ಪ್ಲಾಸ್ಟಿಕ್ಕಿನ ಆನೇಕ ಆಯುಧಗಳು ಕೋಟೆಯೊಳಗಿನ ಅಂಗಡಿಗಳಲ್ಲಿ ಮಾರಾಟಕ್ಕೆ ಸಿಗುತ್ತವೆ. ಮಕ್ಕಳಿಗಾಗಿ ನಾನು ಪ್ಲಾಸ್ಟಿಕ್ಕಿನ ಎರಡು ಖಡ್ಗ ಮತ್ತು ಎರಡು ಕೊಡಲಿಗಳನ್ನು ತಂದೆ. ನಾನು ತಂದ ಕೊಡಲಿಗಳಲ್ಲಿ ಒಂದು ಪರಶುರಾಮನ ಕೈಯಲ್ಲಿ ಶೋಭಿಸುವಂತಹ ಕೊಡಲಿ. ಅದನ್ನು ಯಕ್ಷಗಾನದಲ್ಲಿ ಧಾರಾಳವಾಗಿ ಬಳಸಬಹುದು. ಉಳಿದವುಗಳು ನಿಷ್ಪ್ರಯೋಜಕ. ಈಗ ನನಗೆ ಅನಿಸುತ್ತದೆ. ನಾನು ಅಂತಹ ಪರಶುಗಳನ್ನು ಮಾತ್ರವೇ ತರಬೇಕಿತ್ತೆಂದು!

ನಾಬೋನ್‌  ಫ್ರೆಂಚರ ಹಂಪೆ

ಕರ್ಕಸೋನೆಯಿಂದ ನಾಬೋನಿಗೆ (NARBONNE) ಎರಡು ಗಂಟೆಗಳ ಪಯಣ. ಕರ್ಕ ಸೋನೆ ಮಳೆಯಿಂದ ಗದಗುಟ್ಟುವ ನಾವು ಕಾರೊಳಗೆ ಸೇರಿಕೊಂಡು ವಾರ್ಮಿಂಗ್‌ ಯಂತ್ರವನ್ನು ಚಾಲೂ ಮಾಡಿ ನಮಗೆ ಬೇಕಾದ ಉಷ್ಣತೆಗೆ ಇರಿಸಿಕೊಂಡೆವು. ಇದೀಗ ದೇಹಕ್ಕೆ ಹಿತವಾಯಿತು. ನಾವು ನಾಬೋನಿನ ಹೋಟೆಲ್‌ ಲೆ ಸೈಲೆನ್‌ಗೆ ಮುಟ್ಟುವಾಗ ಸಂಜೆ ನಾಲ್ಕೂವರೆ. ವಾಸ್ತವವಾಗಿ ಐದು ಗಂಟೆಗೆ ನಾವು ಅಲ್ಲಿರಬೇಕಾಗಿತ್ತು. ನಮ್ಮನ್ನು ಎದುರುಗೊಳ್ಳಲು ಆತಿಥೇಯರು ನಾಲ್ಕು ಮುಕ್ಕಾಲಿಗೆ ಬಂದಾಗ ಅವರಿಗೆ ಆಶ್ಚರ್ಯವಾಗಿ ‘ನಿಗದಿತ ಸಮಯಕ್ಕಿಂತ ಬೇಗ ಬಂದಿರಿ. ಕರ್ಕಸೋನೆಯನ್ನು ಸರಿಯಾಗಿ ನಿಮಗೆ ನೋಡಲಾಗಲಿಲ್ಲವೆಂದು ಕಾಣುತ್ತದೆ’ ಎಂದು ನಿಜ ಹೇಳಿ ನಮ್ಮನ್ನು ಆಶ್ಚರ್ಯಚಕಿತರಾಗುವಂತೆ ಮಾಡಿದರು.

ತುಲೋಸಿನಿಂದ ಪೂರ್ವಕ್ಕೆ ಮೆಡಿಟರೇನಿಯನ್ನಿಗೆ ಸಮೀಪವಿರುವ ನಾಬೋನ್‌ನ ಕ್ರಿ.ಪೂ. 118ರಲ್ಲಿ ನಾರ್ಬೋಮಾರ್ಟಿಯಸ್‌ ಎಂಬಾತನಿಂದ ನಿರ್ಮಾಣ ವಾಯಿತು. ರೋಮನ್ನರ ಕಾಲದಲ್ಲಿ ಲ್ಯಾಂಗ್‌ಡಕ್ಕಿನ ರಾಜಧಾನಿಯಾಗಿ ನಾಬೋನ್‌ನ ಪ್ರಖ್ಯಾತಿ ಪಡೆದಿತ್ತು. ಅದು ಇಟೆಲಿ ಮತ್ತು ಸ್ಪೈನ್‌ ನಡುವಣ ವಾಣಿಜ್ಯ ಮಹಾನಗರವಾಗಿ, ವಿಸಿಗೋಥ್‌ ಅರಸರ ತಾಣವಾಗಿ, ತುಲೋಸಿನ ಕೌಂಟ್‌ಗಳ ಜಹಗೀರಾಗಿ ಇತಿಹಾಸದುದ್ದಕ್ಕೂ ತನ್ನ ಮಹತ್ವವನ್ನು ಉಳಿಸಿಕೊಂಡಿತ್ತು. ಆದರೆ ಕಾಲಕ್ರಮೇಣ ನಾಬೋನ್‌ನ ಬಂದರಿನಲ್ಲಿ ಮೆಕ್ಕಲು ಮಣ್ಣು ತುಂಬಿ ಅದು ಸಂಚಾರಕ್ಕೆ ಅಯೋಗ್ಯವಾಯಿತು. ವ್ಯಾಪಾರ ವಹಿವಾಟುಗಳಿಗೆ ಹೋರ್ನ್ ಕಣಿವೆಯನ್ನು ಜನರು ಆಶ್ರಯಿಸಬೇಕಾಗಿ ಬಂದುದರಿಂದ ನಾಬೋನಿನ ಮಹತ್ವ ಕಡಿಮೆಯಾಯಿತು. ಹತ್ತೊಂಬತ್ತನೆ ಶತಮಾನದಲ್ಲಿ ನಾಬೋನಿನ ಜನರು ದ್ರಾಕ್ಷಿ ತೋಟಗಳತ್ತ ಆಕರ್ಷಿತರಾದರು. ಇದೀಗ ನಾಬೋನ್‌ ವೈನ್‌ ಉತ್ಪಾದನೆಯಿಂದ ಪ್ರಸಿದ್ಧಿಯೊಡನೆ ಸಂಪತ್ತನ್ನು ಗಳಿಸುತ್ತಿದೆ. ಪಶ್ಚಿಮದಿಂದ ನಾಬೋನನ್ನು ಪ್ರವೇಶಿಸುವ ಪ್ರಧಾನ ಚೌಕದ ಮಧ್ಯದಲ್ಲಿ ಬೃಹತ್‌ ಪಾತ್ರೆಯೊಂದರಿಂದ ವೈನ್‌ ಸುರಿಯುವಂತಹ ಶಿಲ್ಪವೊಂದನ್ನು ಕಡೆದಿರಿಸಲಾಗಿದೆ!

ರೋಮನನರ ಕಾಲದಲ್ಲಿ ಪ್ರಮುಖ ಪಟ್ಟಣವಾಗಿದ್ದ ನಾಬೋನ್‌ನಲ್ಲಿ ಹಳೆಯ ರೋಮನ್‌ ಕಟ್ಟಡಗಳು ಕಾಣಸಿಗುವುದು ಕಷ್ಟ. ಆದರೆ ರೋಮನ್‌ ಅವಶೇಷಗಳು ಅಲ್ಲಲ್ಲಿ ಕಂಡುಬರುತ್ತವೆ. ಒಂದು ವರ್ಷದ ಹಿಂದೆ ವ್ಯಾಪಾರಿಯೊಬ್ಬ ನಾಬೋನ್‌ ನಗರದ ಮಧ್ಯದ ಜಾಗವೊಂದನ್ನು ಮುನಿಸಿಪಾಲಿಟಿಯಿಂದ ಕೊಂಡುಕೊಂಡ. ಅಲ್ಲಿ ಭರ್ಜರಿಯಾದ ವಾಣಿಜ್ಯ ಸಂಕೀರ್ಣವೊಂದನ್ನು ನಿರ್ಮಿಸುವ ಉದ್ದೇಶದಿಂದ ತಳಪಾಯಕ್ಕಾಗಿ ಭೂಮಿಯನ್ನು ಅಗೆಯಿಸಿದ. ಆಗ ಅವನೆದುರು ಪುರಾತನ ಕಟ್ಟಡವೊಂದರ ಭಗ್ನಾವಶೇಷಗಳು ಪ್ರತ್ಯಕ್ಷವಾದವು. ಆತ ಪುರಾತತ್ವಶಾಸ್ತ್ರಜ್ಞರನ್ನು ಕರೆದುಕೊಂಡು ಬಂದಾಗ ಅವು ರೋಮನನರ ಕಟ್ಟಡವೊಂದರ ಪಳೆಯುಳಿಕೆಗಳು ಎಂದು ಗೊತ್ತಾಯಿತು. ನಗರಸಭೆ ಅದನ್ನು ವಾಪಸ್‌ ಪಡೆದುಕೊಂಡಿತು. ಈಗ ಇತಿಹಾಸವನ್ನು ಮರು ರೂಪೀಕರಿಸುವ ಕೆಲಸ ಕಾರ್ಯಗಳು ಅಲ್ಲಿ ಭರದಿಂದ ಸಾಗಿವೆ.

ಹಾಗೆ ನೋಡಿದರೆ ಹಳೆಯ ನಾಬೋನ್‌ನಾದ್ಯಂತ ರೋಮನ್‌ ಇತಿಹಾಸ ಅಲ್ಲಲ್ಲಿ ಕಂಡುಬರುತ್ತದೆ. ರಸ್ತೆಗೆ ತಾಗಿಕೊಂಡಿರುವ ಕಟ್ಟಡಗಳು, ರಸ್ತೆಯ ಮಧ್ಯದಲ್ಲೇ ನೀರು ಹರಿಯ ಹೋಗುವ ವ್ಯವಸ್ಥೆ (ಬದಿಗಳಲ್ಲಿ ಚರಂಡಿಗಳಿಲ್ಲ) ಕುದುರೆ ಮತ್ತು ರಥಗಳ ಸಂಚಾರಕ್ಕೆ ಯೋಗ್ಯವಾದಂತಹ ಕಲ್ಲು ಚಪ್ಪಡಿಗಳಿಂದ ನಿರ್ಮಾಣಗೊಂಡ ರಸ್ತೆ  ಇವೆಲ್ಲವೂ ರೋಮನನರ ಕೊಡುಗೆಗಳು. ಇಟೆಲಿಯಿಂದ ಹೊರಕ್ಕೆ ಮೆಡಿಟರೆನಿಯನ್‌ ಪ್ರದೇಶದಲ್ಲಿ ರೋಮನ್‌ ವೀರರು ಬೆಳೆಸಿದ ಮೊದಲ ನಗರವಿದು. ರೋಮನ್ನರ ಕಾಲದ ಸಂಚಾರ ನಾಲೆಗಳು ಈಗಲೂ ಸುರಕಿತ ಸ್ಥತಿಯಲ್ಲಿದ್ದು ಆಧುನಿಕ ಎಂಜಿನಿಯರಿಂಗ್‌ ವ್ಯವಸ್ಥೆಗೆ ಸವಾಲೆಸೆಯುತ್ತಿವೆ.

ಹಳೆಯ ನಾಬೋನಿನ್ನ ಮಧ್ಯದಲ್ಲಿ ಎರಡು ದೇಗುಲಗಳಿವೆ. ಮೊದಲನೆಯ ದೇಗುಲ ಒಂದನೆಯ ಶತಮಾನಕ್ಕೆ ಸೇರಿದ್ದು. ಎಂಟನೆಯ ಶತಮಾನದಲ್ಲಿ ಅದನ್ನು ದಾಳಿಕೋರ ಅರಬರು ಭಾಗಶಃ ನಾಶ ಮಾಡಿದರು. ಹಳೆಯ ಒಂದು ಕಲ್ಲಿನ ತುಂಡನ್ನೂ ಇತಿಹಾಸದ ಅಮೂಲ್ಯ ನಿಧಿಯೆಂದು ರಕ್ಷಿಸುವ ನಾಬೋನಿನ ಜನತೆ ಆ ಹಳೆಯ ದೇಗುಲವನ್ನು ಸಂರಕಿಸಿಕೊಂಡು ಬಂದಿದ್ದಾರೆ. ಅದರ ಸಮೀಪದಲ್ಲಿ ಒಂಬತ್ತನೇ ಶತಮಾನದಲ್ಲಿ ಫ್ಲೆಮೆಂಗ್‌ ಗೋಥಿಕ್‌ ಎಂಬ ಹೆಸರಿನ ಇನ್ನೊಂದು ದೇಗುಲವನ್ನು ನಿರ್ಮಿಸಲಾಯಿತು. ಹಣದ ಅಡಚಣೆ ಇಲ್ಲದೆ, ಆ ದೇಗುಲವನ್ನು ಪೂರ್ಣಗೊಳಿಸಲು ಸಾದ್ಯವಾಗಿರುತ್ತಿದ್ದರೆ, ಅದು ಫ್ರಾನ್ಸಿನಲ್ಲೇ ಅತ್ಯಂತ ಎತ್ತರದ ದೇಗುಲವಾಗಿ ಬಿಡುತ್ತಿತ್ತು. 123 ಅಡಿ ಎತ್ತರದ ಈ ದೇಗುಲ ಈಗ ಬುವೆ, ಸಾತ್ರಾ ಮತ್ತು ನಾತ್ರೆದಾಂ ದೇಗುಲಗಳ ಬಳಿಕ ಫ್ರಾನ್ಸಿನ ಎತ್ತರದ ದೇಗುಲಗಳ ಪೈಕಿ ನಾಲ್ಕನೆಯ ಸ್ಥಾನವನ್ನು ಪಡೆದಿದೆ. ಈ ದೇಗುಲದಲ್ಲಿ ಬೆತ್ಲಹ್ಯಾಮಿನಿಂದ ತಂದ ಮೇರಿಯ ಮತ್ತು ಯೇಸುವಿನ ಎರಡು ಸುಂದರ ವಿಗ್ರಹಗಳಿವೆ. ಫ್ರಾನ್ಸಿನ ಮಹಾಕ್ರಾಂತಿಯ ಸಂದರ್ಭದಲ್ಲಿ ಈ ಚರ್ಚನ್ನು ದೋಚಲಾಯಿತು. ವಿಗ್ರಹಗಳಿಗೆ ಹಾನಿ ಮಾಡಲಾಯಿತು. ಆದರೆ ಅದಾರೋ ಪುಣ್ಯಾತ್ಮರು ಇವೆರಡು ವಿಗ್ರಹಗಳನ್ನು ಮುಚ್ಚಿಟ್ಟ ಕಾರಣ ಈ ಸುಂದರ ಶಿಲ್ಪಗಳು ಹಾಗೆಯೇ ಉಳಿದುಕೊಂಡಿವೆ.

ಹದಿಮೂರನೇ ಶತಮಾನದಲ್ಲಿ ನಾಬೋನಿನ್ನ ಅರ್ಚ್ ಬಿಷಪ್ಪನಾಗಿದ್ದಾತ ದೊಡ್ಡ ಕುಬೇರನಾಗಿದ್ದ. ಅವನಿಗೆ ಫ್ಲೆಮಿಂಗ್‌ ಗೋಥಿಕ್‌ನ ಬಳಿ ಇನ್ನೊಂದು ದೇಗುಲವನ್ನು ನಿರ್ಮಿಸುವ ಮನಸ್ಸಾಯಿತು. ಹಾಗೆ ಕ್ರಿ.ಶ.1272ರಲ್ಲಿ ಸೇಂಟ್‌ ಜಸ್ಟ್‌ ಕ್ಯಾಥೆಡ್ರಲ್ಲಿನ ನಿರ್ಮಾಣ ಕಾರ್ಯ ಆರಂಭವಾಯಿತು. ಅದರ ನಿರ್ಮಾಣ ಕಾರ್ಯ ಸಾಗುತ್ತಿದ್ದಂತೆ ಅರ್ಚ್‌ ಬಿಷಪ್ಪ್‌, ಫ್ಲೆಮಿಂಗ್‌ ಗೋಥಿಕ್ಕಿನ ಅಳುವೇರಿ ಕಟ್ಟಡವನ್ನು ಕೆಡಹಲು ನಿರ್ಧರಿಸಿದ. ಆಗ ಪಟ್ಟಣದ ಕೌನ್ಸಿಲರುಗಳು ಅದನ್ನು ವಿರೋಧಿಸದೆ ಇರುತ್ತಿದ್ದರೆ ಸೇಂಟ್‌ ಜಸ್ಟ್‌, ಜಗತ್ತಿನ ಅತ್ಯಂತ ವಿಶಾಲವಾದ ಕ್ಯಾಥೆಡ್ರಲ್‌ ಆಗಿ ಬಿಡುತ್ತಿತ್ತು.

ಲ್ಯಾಂಗ್‌ಡಕ್ಕ್‌ ಪ್ರಾಂತ್ಯ ಅನುಭವಿಸಿದ ಎಲ್ಲಾ ನೈಸರ್ಗಿಕ ಮತ್ತು ಮಾನವ ನಿರ್ಮಿತ ಅನಾಹುತಗಳು ನಾಬೋನನ್ನು ಬಿಟ್ಟಿಲ್ಲ. ರೋಬಿನ್‌ ನದಿಯ ದಂಡೆಯ ಮೇಲೆ ಸಂಪದ್ಭರಿತವಾಗಿ ಬೆಳೆದು ನಿಂತಿದ್ದ ಪಟ್ಟಣವನ್ನು ಒಂದು ರಾತ್ರಿ ಇದ್ದಕ್ಕಿದ್ದ ಹಾಗೆ ಹರಿವಿನ ಗತಿಯನ್ನು ಬದಲಿಸಿದ ನದಿ, ತನ್ನ ಒಡಲಿಗೆ ಎಳೆದುಕೊಂಡಿತು. ಅಪಾರ ಸಿರಿಸಂಪತ್ತು ಮತ್ತು ಜನ ಸಂಪತ್ತು ಜಲಸಮಾಧಿಯಾಯಿತು. ಆಯುಸ್ಸು ಗಟ್ಟಿ ಇದ್ದವರು ದೇಗುಲದಲ್ಲಿ ಆಶ್ರಯ ಪಡೆದು, ಪಟ್ಟಣವನ್ನು ಹೊಸದಾಗಿ ಕಟ್ಟಿ ಬೆಳೆಸಿದರು. ನದಿಗೆ ಸೇತುವೆ ಕಟ್ಟಿ ಅದಕ್ಕೆ ಸೇಂಟ್‌ ಕ್ಯಾಥರಿನ್‌ ಸೇತುವೆ ಎಂದು ಹೆಸರಿಟ್ಟರು. ಅದರ ಬಲಬದಿಯಲ್ಲಿ ದೊರೆತ ಮೇರಿಯ ಸುಂದರ ವಿಗ್ರಹವೊಂದನ್ನು 1889ರಲ್ಲಿ ಕ್ಯಾಥೆಡ್ರಲ್ಲಿಗೆ ತಂದು ಪ್ರತಿಷ್ಠಾಪಿಸಿದರು. ನೈಸರ್ಗಿಕ ಬೆಳಕಿನಲ್ಲಿ ಅದರದೊಂದು ವಿಶಿಷ್ಠ ಸೌಂದರ್ಯ. ಮುಖದ ಮೇಲ್ಭಾಗದಿಂದ ಬೆಳಕು ಹಾಯಿಸಿದರೆ ವಿಗ್ರಹದ ಮುಖದಲ್ಲಿ ದುಃಖದ ಛಾಯೆ ಕಂಡುಬರುತ್ತದೆ. ಕೆಳಭಾಗದಿಂದ ಬೆಳಕು ಹಾಯಿಸಿದಾಗ ಮುಖದಲ್ಲಿ ನಗು ಕಾಣಿಸುತ್ತದೆ. ಅನಾಮಿಕ ಶಿಲ್ಪಿಯೊಬ್ಬನ ಅಸಾಧಾರಣ ಪ್ರತಿಭೆ!

ಕ್ಯಾಥೆಡ್ರಲ್ಲಿನ ಬಲಬದಿಯ ಚಾವಣಿಯು ಅದನ್ನು ಅರ್ಚ್ ಬಿಷಪ್ಪನ ಅರಮನೆಗಳೊಂದಿಗೆ ಜೋಡಿಸುತ್ತದೆ. ಹನ್ನೆರಡನೆಯ ಮತ್ತು ಹದಿನಾಲ್ಕನೆಯ ಶತಮಾನ ಗಳಲ್ಲಿ ಕಟ್ಟಲಾದ ಇವೆರಡು ಅರಮನೆಗಳು ಅರ್ಚ ಬಿಷಪ್ಪರುಗಳ ಕಲಾಪ್ರೇಮಕ್ಕೂ, ವೈಭೋಗ ಜೀವನಕ್ಕೂ ಸಾಕ್ಷಿಯಾಗಿವೆ. ಈಗ ಈ ಅರಮನೆಗಳು ಮ್ಯೂಸಿಯಮ್ಮುಗಳಾಗಿ ಪರಿವರ್ತನೆಗೊಂಡಿವೆ.

ನಾಬೋನಿನ್ನಲ್ಲಿ ಒಂದು ಕ್ರೈಸ್ತ ಸನ್ಯಾಸ ಮಠವಿದೆ. ಅದರ ಹೆಸರು ಅಬೆ ಡಿ ಫೋಂಟ್‌ ಫೋಐಡ್‌. ವಿಶಾಲವಾದ ಈ ಸನ್ಯಾಸಿ ಮಠದಲ್ಲಿ ಆರಂಭದಲ್ಲಿ ಬೆನೆಡಿಕ್ಟಿಯನ್‌ ಪಂಥೀಯರಿದ್ದರು. ಆ ಬಳಿಕ ಅದು ಸಿಸ್ಟೆರಿಕನ್‌ ಪಂಥೀಯ ಸನ್ಯಾಸಿಗಳ ಮಠವಾಗಿ ಪರಿವರ್ತನೆಗೊಂಡಿತು. 1791ರ ವರೆಗೂ ಅಲ್ಲಿ ಸನ್ಯಾಸಿಗಳಿದ್ದರು. ಸನ್ಯಾಸಿ ಮಠ ಬೆಟ್ಟದ ತಪ್ಪಲಲ್ಲಿ, ನಾಬೋನಿನಿಂದ 8 ಕಿ.ಮೀ. ದೂರದ ಪ್ರಶಾಂತ ಪರಿಸರದಲ್ಲಿದ್ದು ಈಗ ಖಾಸಗಿ ಒಡೆತನಕ್ಕೆ ಸೇರಿದೆ. ಈ ಮಠದ ಬಗ್ಗೆ ಪುಟಗಟ್ಟಲೆ ಮಾಹಿತಿ ನೀಡುವ ವರ್ಣರಂಜಿತ ಚಿತ್ರ ಪುಸ್ತಕಗಳಿವೆ. ಮಠದೊಳಕ್ಕೆ ಹೋಗಲು 10 ಫ್ರಾಂಕು (70ರೂಪಾಯಿ) ಪ್ರವೇಶಧನ ನೀಡಬೇಕು. ಐತಿಹಾಸಿಕ ಮಹತ್ವವುಳ್ಳ ಈ ಮಠ ವಾಸ್ತುಶಿಲ್ಪದ ದೃಷ್ಟಿಯಿಂದಲೂ ಅಧ್ಯಯನ ಯೋಗ್ಯವಾದುದು. ಹಾಗೆ ನೋಡಿದರೆ ಎನ್‌ಕಲ್ಕದಲ್ಲಿರುವ ಸನ್ಯಾಸಿ ಮಠವು ಇದರ ಮುಂದೆ ಏನೇನೂ ಅಲ್ಲ!

ಕಸದಿಂದ ರಸ : ಫ್ರಾನ್ಸಿನಲ್ಲಿ ಕಸಗಳ (Wastes) ನಿಭಾವಣೆ ಹೇಗೆ ಮಾಡುತ್ತಾರೆ ಎನ್ನುವುದು ನಮಗೆ ಗೊತ್ತಾದದ್ದು ‘ಸ್ಟಾನ್‌’ ಕಸಕಡ್ಡಿ ಶುದ್ಧೀಕರಣ ಘಟಕಕ್ಕೆ ಭೇಟಿ ಕೊಟ್ಟ ಬಳಿಕ. ನಾಬೋನಿನ್ನ ಹೊರವಲಯದಲ್ಲಿ ಗುಡ್ಡವೊಂದರ ತುದಿಯಲ್ಲಿದೆ ಈ ಘಟಕ. ಗುಡ್ಡದ ಮೇಲಿನಿಂದ ಕಾಣುವ ಮೆಡಿಟರೇನಿಯನ್‌ ಸಮುದ್ರದ ಸೌಂದರ್ಯ ನಿಜಕ್ಕೂ ವರ್ಣನಾತೀತ. ಮುಖ್ಯರಸ್ತೆಯಿಂದ ಗುಡ್ಡದ ತುದಿಯವರೆಗೆ ವಾಹನಗಳ ಸಂಚಾರವನ್ನು ‘ಸ್ಟಾನ್‌’ನ ಕಛೇರಿಯಲ್ಲಿ ಕೂತು ಟಿ.ವಿ. ಮಾನಿಟರ್‌ನಲ್ಲಿ ನೋಡಬಹುದು. ಸ್ವಿಚ್‌ ಬದಲಾಯಿಸಿದರೆ ಫ್ಯಾಕ್ಟರಿಯ ಒಳಗಿನ ಕೆಲಸ ಕಾರ್ಯಗಳು ಕಂಡು ಬರುತ್ತವೆ.

ಫ್ರಾನ್ಸಿನಾದ್ಯಂತ ಕಸಗಳ ನಿಭಾವಣೆ ಬಹು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ‘ಉಪಯೋಗಿಸಿ ಎಸೆಯಿರಿ’ ಎಂಬ ಬರಹದೊಂದಿಗೆ ಉತ್ಪಾದಿತವಾಗುವ ಸರಕುಗಳ ಪ್ರಮಾಣ ಹೆಚ್ಚಿದಷ್ಟೂ, ಕಸಗಳ ಪ್ರಮಾಣ ಅಧಿಕವಾಗುತ್ತಾ ಹೋಗುತ್ತದೆ. ಸ್ಟಾನ್‌ನ ಮುಖ್ಯಸ್ಥ ಜಾಕ್ಪಿಸ್‌ ಸ್ಟಾನ್‌ ಹೇಳುವಂತೆ ನಾಬೋನಿನ್ನಂತಹ ಪುಟ್ಟ ಪಟ್ಟಣದಲ್ಲಿ ಪ್ರತಿ ಕುಟುಂಬ ದಿನಕ್ಕೆ ಸರಾಸರಿ ಎರಡು ಕೆ.ಜಿ.ಗಳಷ್ಟು ಕಸದ ಸೃಷ್ಟಿಗೆ ಕಾರಣವಾಗುತ್ತದೆ. ನಾಬೋನ್‌ನ ಪಟ್ಟಣದಲ್ಲಿ ವರ್ಷಕ್ಕೆ 38000 ಟನ್ನು ಕಸ ಸೃಷ್ಟಿಯಾಗುತ್ತದೆ. ಫ್ರಾನ್ಸಿನಾದ್ಯಂತ ಕಸಸೃಷ್ಟಿ ತೀವ್ರ ಸಮಸ್ಯೆಯನ್ನು ಒಡ್ಡತೊಡಗಿದಾಗ ಸರಕಾರ ಕಸ ನಿರ್ಮೂಲನಕ್ಕೆ ಯೋಜನೆಯೊಂದನ್ನು ರೂಪಿಸಿತು. ಈ ಯೋಜನೆಯನ್ವಯ ಕಸಶುದ್ಧೀಕರಣ ಸ್ಥಾವರ ಸ್ಥಾಪಿಸುವ ಉದ್ಯಮ ಸಾಹಸಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡುವ ಕ್ರಮ ಜಾರಿಗೆ ಬಂತು. ಆಗ ರೂಪುಗೊಂಡವುಗಳಲ್ಲಿ ಸ್ಟಾನ್‌ ಸ್ಥಾವರವೂ ಒಂದು.

ಸ್ಟಾನ್‌ ಸ್ಥಾವರ 20 ಹೆಕ್ಟೇರು ಸ್ವಂತ ಭೂಮಿಯನ್ನು ಹೊಂದಿದೆ. ಕಾರ್ಖಾನೆಯ ಕೆಲಸಗಾರರ ಸಂಖ್ಯೆ 22. ಇವರಲ್ಲಿ 150 ಮಂದಿ ಕಸ ಸಂಗ್ರಹಣಾ ವಿಭಾಗದಲ್ಲಿ ಮತ್ತು 70 ಮಂದಿ ಕಸ ಶುದ್ಧೀಕರಣ ವಿಭಾಗದಲ್ಲಿ ದುಡಿಯುತ್ತಾರೆ. ಒಂದು  ಟನ್ನು ಕಸವನ್ನು ನಿರ್ಮೂಲನಗೊಳಿಸಿದರೆ ಕಂಪೆನಿಗೆ 240 ಫ್ರಾಂಕ(ರೂ. 2100) ನೀಡಬೇಕು. ಸ್ಟಾನ್‌ ಸ್ಥಾವರದ ಸಾಮರ್ಥ್ಯ ಅಧಿಕವಿರುವುದರಿಂದ ಅದಕ್ಕೆ ನಾಬೋನಿನ್ನ ಕಸವಷ್ಟೇ ಸಾಕಾಗುವುದಿಲ್ಲ. ಹಾಗಾಗಿ ಅಕ್ಕಪಕ್ಕದ ಊರುಗಳಿಂದ ಕಸಹೊತ್ತ ಕಂಪೆನಿಯ  ಲಾರಿಗಳು ಗುಡ್ಡೆ ಹತ್ತಿ ಬರುತ್ತವೆ. ಸ್ಟಾನ್‌ ಕಂಪೆನಿಯ ಯಜಮಾನತ್ವದಲ್ಲಿ 105 ಲಾರಿಗಳಿವೆ. ಕಂಪೆನಿಯ ಹೂಡಿಕೆ 50ದಶಲಕ್ಷ ಫ್ರಾಂಕುಗಳು (ರೂ. 350ದಶಲಕ್ಷ) ಕಂಪೆನಿಯ ವಿಸ್ತರಣ ಕಾರ್ಯ ಕ್ರಿ.ಶ.2007 ರಲ್ಲಿ ಪೂರ್ಣಗೊಳ್ಳುತ್ತದೆ.

ಸ್ಟಾನ್‌ ಕಂಪೆನಿಯ ಒಳಗೆ ಸಂಚರಿಸುವಾಗ ಮೂಗನ್ನು ಮರೆತು ಬಿಡುವುದು ವಾಸಿ. ಅಸಹ್ಯವಾಸನೆಯನ್ನು ಸಹಿಸುವುದು ಇಲ್ಲಿ ಅನಿವಾರ್ಯ. ಕೈಗೆ ಗ್ಲೌವ್ಸ್‌, ಮೂಗಿಗೆ ಕವರ್‌ ಮತ್ತು ಕಣ್ಣಿಗೆ ಕನ್ನಡಿಕ ಹಾಕಿ 70 ಮಂದಿ ಸಿಬ್ಬಂದಿಗಳು ವರ್ಷಪೂರ್ತಿ ಅಲ್ಲಿ ದುಡಿಯುವಾಗ ಕೇವಲ ಒಂದು ಗಂಟೆಯ ಸಂದರ್ಶನಕ್ಕಾಗಿ ಹೋದ ನಾವು ಮೂಗು ಮುಚ್ಚಿಕೊಳ್ಳುವುದಾದರೂ ಹೇಗೆ? ಮುಚ್ಚಿಕೊಂಡರೂ ಅದೆಷ್ಟು ಹೊತ್ತು? ಕೊನೆಗೆ ಬಾಯಲ್ಲಿ ಉಸಿರಾಡಬೇಕು. ಅದಕ್ಕಿಂತ ಮೂಗಲ್ಲಿ ಉಸಿರಾಡುವುದೇ ಕ್ಷೇಮಕರ!

ಕಸದ ಲೋಡಿನೊಡನೆ ಗುಡ್ಡೆ ಹತ್ತಿದ ಲಾರಿಗಳು ಸ್ಥಾವರದ ಒಳಕ್ಕೆ ಸಾಗಿ ಬರುತ್ತವೆ. ಅಲ್ಲಿ ಕ್ರೇನುಗಳು ಕಸವನ್ನು ತಮ್ಮ ಯಂತ್ರ ಬಾಹುಗಳ ಮೂಲಕ ಎತ್ತಿ ಬೃಹತ್‌ ಯಂತ್ರವೊಂದರ ಬಾಯಿಗೆ ತುರುಕುತ್ತವೆ. ಅಲ್ಲಿಂದ ಕಸ ಬೆಲ್ಟ್‌ ಮೂಲಕ ಮುಂದಕ್ಕೆ ಸಾಗಿ ಮೂರು ಹಂತಗಳಲ್ಲಿ ಪರಿಷ್ಕರಣಗೊಳ್ಳುತ್ತದೆ. ಮೊದಲ ಹಂತದಲ್ಲಿ ಮರುಬಳಕೆಗೆ ಸಾಧ್ಯವಿರುವ ಪ್ಲಾಸ್ಟಿಕ್ಕನ್ನು ಪ್ರತ್ಯೇಕಿಸುವ ಕಾರ್ಯ ನಡೆಯುತ್ತದೆ. ಎರಡನೇ ಹಂತದಲ್ಲಿ ಗಾಜನ್ನು ಮತ್ತು ಪ್ಲಾಸ್ಟಿಕ್ಕನ್ನು ಪ್ರತ್ಯೇಕಿಸಲಾಗುತ್ತದೆ. ಮರುಬಳಕೆಗೆ ಸಾಧ್ಯವಿಲ್ಲದ ಕಸ ಮೂರನೆಯ ಹಂತದಲ್ಲಿ ಬೃಹತ್‌ ಯಂತ್ರವೊಂದರ ಹೊಟ್ಟೆಯನ್ನು ಸೇರಿ ಅಲ್ಲಿ ನಜ್ಜು ಗುಜ್ಜಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೂರು ಉತ್ಪನ್ನಗಳು ದೊರೆಯುತ್ತವೆ. ಮೊದಲನೆ ಯದು ಇಂಧನವಾಗಿ ಬಳಕೆಯಾಗುವ ಗ್ಯಾಸು. ಎರಡನೆಯದು ಕೃಷಿ ಭೂಮಿಯ ಸಾರ ಹೆಚ್ಚಿಸುವ ಸಹಜ ಗೊಬ್ಬರ. ಮೂರನೆಯದು ಏನೂ ಉಪಯೋಗವಿಲ್ಲದ ಕಸ. ಅದನ್ನು ಸುಡಬೇಕಾಗುತ್ತದೆ. ಸುಟ್ಟ ಬಳಿಕ ಅದರ ಬೂದಿಯನ್ನು ಕೃಷಿಗೆ ಬಳಸಬಹುದು. ಕಸದಿಂದ ರಸ ಎನ್ನುವ ಮಾತು ಹೀಗೆ ಸ್ಟಾನ್‌ ಸ್ಥಾವರದಲ್ಲಿ ಅಕರಶಃ ಪ್ರಮಾಣೀಕರಿಸಲ್ಪಡುತ್ತದೆ.

ಸ್ಟಾನ್‌ ಕಂಪೆನಿಯು ತನ್ನ ಕೊಳಚೆ ನೀರನ್ನು ಏನು ಮಾಡುತ್ತದೆ? ನಮ್ಮ ಪ್ರಶ್ನೆಗೆ ಉತ್ತರಿಸುವ ಬದಲು ಸ್ಟಾನ್‌ ನಮ್ಮನ್ನು ಸ್ಥಾವರದ ಬಲಬದಿಯ ತಗ್ಗು ಪ್ರದೇಶಕ್ಕೆ ಕರೆದೊಯ್ದ. ಅಲ್ಲಿನ ಕಟ್ಟಡವೊಂದರಲ್ಲಿ ದೈತ್ಯಾಕಾರದ ಯಂತ್ರವೊಂದು ಕಂಪ್ಯುಟರ್‌ ಹೇಳಿದಂತೆ ಕಾರ್ಯ ನಿರ್ವಹಿಸುತ್ತಿತ್ತು. ‘ಇದು ಕೊಳಚೆ ನೀರನ್ನು ಶುದ್ಧೀಕರಿಸುವ ಯಂತ್ರ. ಇದುವೇ ಸ್ಥಾವರ ನಿರ್ಮಾಣದ ಪ್ರಥಮ ಹಂತ. ಕೊಳಚೆ ನೀರನ್ನು ಶುದ್ಧೀಕರಿಸದೆ ಕೆರೆ, ತೋಡು, ನದಿ, ಸಮುದ್ರಗಳಿಗೆ ಫ್ರಾನ್ಸಲ್ಲಿ ಯಾರೂ ಬಿಡುವುದಿಲ್ಲ. ಅದು ಕಾನೂನಿನ ದೃಷ್ಟಿಯಿಂದ ಅಪರಾಧ. ಹಾಗೆ ಬಿಟ್ಟರೆ ಜೀವ ಸಂಕುಲಗಳ ಬದುಕಿನ ಹಕ್ಕನ್ನು ನಾವು ಕಸಿದು ಕೊಂಡಂತಾಗುತ್ತದೆ. ಅದು ತಪ್ಪು. ನಮಗೆ ಪರಿಸರ ಸಂರಕಣೆಯ ಮೂಲಪಾಠ ಯಾವತ್ತೂ ನೆನಪಿರುತ್ತದೆ’ ಎಂದು ಆತ ನಕ್ಕ.

ಅಷ್ಟರಲ್ಲಿ ಗುರುವಿಗೆ ವಿಪರೀತ ಬಾಯಾರಿಕೆಯಾಗಿ ಆತ ನೀರು ಕೇಳಿದ. ಸ್ಟಾನ್‌ ದೊಡ್ಡ ಗಾಜಿನ ಜಾರ್‌ನಲ್ಲಿ ಶುದ್ಧವಾಗಿ ಕಾಣುವ ನೀರನ್ನು ತಂದು ಗುರುವಿಗೆ ಕೊಟ್ಟ. ಗುರು ಅದನ್ನೆತ್ತಿ ಕುಡಿಯಬೇಕು ಅನುನವಷ್ಟರಲ್ಲಿ ‘ನಿಲ್ಲು, ನಿಲ್ಲು’ ಎಂದು ಗುರುವನ್ನು ತಡೆದು ಒಳಗೆ ಹೋಗಿ ಇನ್ನೊಂದು ಜಾರ್‌ ತಂದ. ಅದರಲ್ಲಿ ಹಳದಿ ಬಣ್ಣದ ನೀರಿತ್ತು.

‘ಇದು ಫ್ಯಾಕ್ಟರಿಯಿಂದ ಇಲ್ಲಿಗೆ ಬರುವ ನೀರು. ಗುರುವಿನ ಕೈಯಲ್ಲಿರುವುದು ಇಲ್ಲಿ ಶುದ್ಧೀಕರಣಗೊಂಡು ಮೆಡಿಟರೇನಿಯನ್ನಿಗೆ ಸೇರುವ ನೀರು. ಈಗ ಸಾಧ್ಯವಾದರೆ ಆ ನೀರನ್ನು ಕುಡಿಯಬಹುದು’ ಎಂದ. ಗೊತ್ತಾದ ಮೇಲೆ ಅದನ್ನು ಕುಡಿಯಲು ಹೇಗೆ ಮನಸ್ಸು ಬಂದೀತು? ಕೊನೆಗೆ ನಮಗೆ ಕುಡಿಯಲು ತಣ್ಣನೆಯ ಪೆಪ್ಸಿ ಸಿಕ್ಕಿತು ಅನ್ನಿ. ಆದರೆ ಆತ ಎಲ್ಲಾದರೂ ನಿಜವಾಗಿಯೂ ಕುಡಿಯುವ ನೀರನ್ನೇ ನಮಗೆ ಕೊಡುತ್ತಿದ್ದರೆ ಆಗ ನಮ್ಮಿಂದ ಕುಡಿಯಲಾಗುತ್ತಿರಲಿಲ್ಲ !

ಕಾರ್ಖಾನೆಯಿಂದ ಹೊರಡುವ ಹೊತ್ತಿಗೆ ಆತ ‘2007ನೇ ಇಸವಿ ಈ ಕಾರ್ಖಾನೆಯ ಕನಸು ಪೂರ್ಣ ನನಸಾಗುವ ವರ್ಷ. ಆಗ ನೀವೆಲ್ಲಾ ಬಂದು ನನ್ನ ಸಾಧನೆಯನ್ನು ನೋಡುವಂತಾದರೆ ಎಷ್ಟು ಚೆನ್ನ!’ ಎಂದು ಭಾವಪರವಶನಾದ. ಗುಡ್ಡವಿಳಿದು ಮೆಡಿಟರೇನಿಯನಿನ್ನತ್ತ ನಮ್ಮ ಕಾರು ಧಾವಿಸುವಾಗ ರಾಜೀವಗಾಂಧಿ ಕಾಲದಲ್ಲಿ ಆರಂಭವಾಗಿ ಇನ್ನೂ ನಿಜವಾದ ಪರಿಹಾರ ಕಾಣದ ಗಂಗಾನದಿ ಶುದ್ಧೀಕರಣ ಯೋಜನೆ ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿತ್ತು.

ನವಿಲೇ ಬಂದರು : ಸ್ಟಾನ್‌ ಸ್ಥಾವರದಿಂದ 25 ಕಿ.ಮೀ.ದೂರದಲ್ಲಿರುವ ನವಿಲೆ(LA NOUVELLE) ಮೆಡಿಟರೇನಿಯನ್‌ ಸಮುದ್ರದ ಸುಂದರ ಬಂದರುಗಳಲ್ಲಿ ಒಂದು. ನಾಬೋನ್‌ನಿಂದ ಪರ್ಪಿನ್ಯಾಕ್ಕೆ, ಅಲ್ಲಿಂದಾಚೆ ಸ್ಪೈನಿಗೆ ಹೋಗುವ ದಾರಿಯಲ್ಲಿರುವ ನವಿಲೆ ಒಂದು ಪ್ರಮುಖ ಮೀನುಗಾರಿಕಾ ಬಂದರು. ಇಲ್ಲಿ 14 ಸೀಬೆಕ್‌ ಟ್ರಾಲರ್‌ಗಳು, ಆರು ತೇಲುಬಲೆ ಟ್ರಾಲರ್‌ಗಳು ಮತ್ತು 32 ಸಣ್ಣ ಯಾಂತ್ರೀಕೃತ ಮೀನುಗಾರಿಕಾ ಹಡಗುಗಳಿವೆ. ಬಂದರಲ್ಲಿ ಮೀನು ಹರಾಜು ಮಾಡುವ ಹಾಲು, ದೊಡ್ಡ ಸಿನಿಮಾ ಮಂದಿರದಂತಿದೆ. ವಿಶೇಷ ಸಂದರ್ಭಗಳಲ್ಲಿ ಹಾಲಿನಲ್ಲಿ ಗಾಯನ ಮತ್ತು ನರ್ತನಗಳಾಗುತ್ತವೆ. ಮೀನು ಹರಾಜಾದಾಗ ಹರಾಜು ಬೆಲೆಯಲ್ಲಿ ಶೇ. 5ರಷ್ಟನ್ನು ಬಂದರ ಪ್ರಾಧಿಕಾರಕ್ಕೆ ಮೀನುಗಾರರು ನೀಡಬೇಕು. ಬಂದರ ಪ್ರಾಧಿಕಾರವು ಮೀನುಗಾರರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುತ್ತದೆ. ಸುಸಜ್ಜಿತವಾದ ನವಿಲೆ, ಮೆಡಿಟರೇನಿಯನ್‌ ತೀರದಲ್ಲಿ ಸ್ಪೈನಿನ ಬಾರ್ಸಿಲೋನಾದ ಬಳಿಕಿನ ಎರಡನೆಯ ಅತಿ ದೊಡ್ಡ ಮೀನುಗಾರಿಕಾ ಬಂದರಾಗಿದೆ.

ನವಿಲೆ ಬಂದರಿನಿಂದ ವಾಪಾಸಾಗುವಾಗ ನಾವು ಲಗೂನ್‌ ಒಂದನ್ನು ನೋಡಿದೆವು. ಅಲ್ಲಿ ಸಾಹಸಿಗರು ನಾನಾ ಬಗೆಯ ಜಲಕ್ರೀಡೆಗಳಲ್ಲಿ ತೊಡಗಿದ್ದರು. ಅಂತಹ ಕ್ರೀಡೆಗಳಲ್ಲಿ ನುರಿತವನಾದ ಗುರುವಿಗೆ ಸ್ವಲ್ಪ ಹೊತ್ತು ಅಲ್ಲೇ ನಿಲ್ಲುವ ಮನಸ್ಸಾಯಿತು. ನಾಬೋನಿನ್ನ ಹಾದಿಯಲ್ಲಿ ನಮಗೆ ಮೆಡಿಟರೇನಿಯನಿನ್ನ ದರ್ಶನವಾಯಿತು. ವಿಶ್ವದ ಅತಿಸುಂದರ ಸಮುದ್ರವೆಂಬ ಖ್ಯಾತಿಯನ್ನು ಹೊತ್ತ ಮೆಡಿಟರೇನಿಯನ್ನನ್ನು ಸ್ಪರ್ಶಿಸುವ ತವಕದಿಂದ ನಾವು ಕಾರಿನಿಂದ ಇಳಿದೆವು. ತಣ್ಣನೆಯ ಗಾಳಿಯಲ್ಲಿ ಹೆಬ್ಬಾರರು, ನಾನು ಮತ್ತು ಗುರು ಮೆಡಿಟರೇನಿಯನ್‌ ತೀರದಲ್ಲಿ ಉದ್ದಕ್ಕೂ ಓಡಿದೆವು. ಶೂ ಕಳಚಿ ಸಮುದ್ರಕ್ಕಿಳಿದು ನೀರಾಟ ಆಡಿದೆವು. ದಂಡೆಯಲ್ಲಿ ಭಾರತದ ಹೆಸರನ್ನು, ನಮ್ಮ ಆಪ್ತರ ಹೆಸರುಗಳನ್ನು ಬರೆದೆವು. ಕತ್ತಲಾಗುತ್ತಿದ್ದಂತೆ ಒಲ್ಲದ ಮನಸ್ಸಿನಿಂದ ನಾಬೋನಿನತ್ತ ಹೊರಟೆವು.

ಪೇಜಸ್‌ ಜುವಾನನಿಗೊಂದು ಸನ್ಮಾನ : ನಾಬೋನಿನ್ನಲ್ಲಿ ನನ್ನ ಆತಿಥೇಯನಾಗಿದ್ದವ ಅರುವತ್ತು ದಾಟಿದ ಪೇಜಸ್‌ ಜುವಾನ್‌. ಈತ ನಾಬೋನ್‌ನ ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ. ನಾಬೋನ್‌ ಸುತ್ತಲು ಈತನೇ ನಮಗೆ ಮಾರ್ಗದರ್ಶಿ. ಜುವಾನ್‌ ಬುಯೋನ ತಂಡದ ಸದಸ್ಯೆಯಾಗಿ ಭಾರತಕ್ಕೆ ಬಂದಿದ್ದ ಎಲಿಜಾಬೆತ್ತಳ ಊರು ನಾಬೋನ್‌. ಸ್ವಂತ ದ್ರಾಕ್ಷಾರಸ ಉತ್ಪಾದನಾ ಘಟಕವೊಂದನ್ನು ನಡೆಸುತ್ತಿರುವ ಎಲಿಜಾಬೆತ್‌, ನಾಬೋನ್‌ ಸುತ್ತಾಟ ಸಂದರ್ಭದಲ್ಲಿ ನಮ್ಮೊಡನಿದ್ದಳು. ನಮ್ಮೈವರಿಗೆ ಆಲಿವ್‌ ಎಣ್ಣೆಯ ಬಾಟಲಿಗಳನ್ನು ಕೊಟ್ಟು ಸತ್ಕರಿಸಿದಳು ಕೂಡಾ.

ಫಾರ್ಮಾಸಿಸ್ಟ್‌ ಆಗಿದ್ದ ಪೇಜಸ್‌ ಜುವಾನನಿಗೆ ಇಬ್ಬರು ಮಕ್ಕಳು. ಫ್ರೆಂಚ್‌ ಸಂಪ್ರದಾಯದಂತೆ ಅವರಿಬ್ಬರೂ ಹೆತ್ತವರಿಂದ ದೂರವಾಗಿ ಸ್ವತಂತ್ರ ಜೀವನ ಸಾಗಿಸುತ್ತಿದ್ದಾರೆ. ಆದುದರಿಂದ ದೊಡ್ಡದಾದ ಮನೆಯಲ್ಲಿ ಪೇಜಸ್‌ ಜುವಾನ್‌ ತನ್ನ ಮಡದಿಯೊಂದಿಗೆ ದಿನ ನೂಕುತ್ತಿದ್ದಾನೆ. ಅವನ ಮನೆಗೆ ಎಪ್ರಿಲ್‌ ಹದಿನೇಳರಂದು ನಾನು ಹೋದದ್ದು. ನನಗೆ ಮಹಡಿಯ ದೊಡ್ಡ ರೂಮೊಂದನ್ನು ಪೇಜಸ್‌ ಬಿಟ್ಟು ಕೊಟ್ಟಿದ್ದ. ಅದರ ಬಳಿಯಲ್ಲೇ ದೊಡ್ಡದಾದ ಬಾತ್‌ರೂಂ ಮತ್ತು ಟೈಲೆಟ್ಟು. ರೂಮು ಸೇರಿದ ತಕಣ ಸೂಟ್‌ಕೇಸ್‌ ತೆರೆದು ಯಕಗಾನ ಮುಖವರ್ಣಿಕೆಯ ಆಕೃತಿಯನ್ನು ಅವನಿಗಿತ್ತು ಅದರ ಬಗ್ಗೆ ವಿವರಿಸಿದೆ. ಅವನು ಒಳಹೋಗಿ ಪ್ಯಾಕೊಂದನ್ನು ತಂದಿತ್ತು ‘ನೀನು ನಂಬಲಿಕ್ಕಿಲ್ಲ. ನೀನೊಬ್ಬ ಕಲಾವಿದ ಎಂದು ಗೊತ್ತಾದ ಕೂಡಲೇ ನಿನಗೆಂದು ಇದನ್ನು ತಂದಿಟ್ಟುಕೊಂಡೆ. ಬಿಚ್ಚಿ ನೋಡು’ ಎಂದ. ಅದು ಫ್ರಾನ್ಸಿನ ಎರಡು ಪುಟ್ಟ ಕಲಾತ್ಮಕ ಮುಖವಾಡಗಳು. ಈಗ ಅವನ ಹೆಂಡತಿ ಬಂದು ನಮ್ಮನ್ನು ಸೇರಿಕೊಂಡಳು. ಅವರಿಗೆ ಯಕ್ಷಗಾನದ ಬಗ್ಗೆ ಭಾರತದ ಬಗ್ಗೆ, ನನ್ನ ಕುಟುಂಬದ ಬಗ್ಗೆ ವಿವರಿಸಿದೆ. ಅವರ ಬಾಳಿನ ಕತೆಯನ್ನು ಕೇಳಿದೆ. ಅಂದು ರಾತ್ರೆ ಹೋಟೆಲ್‌ ಲೆ ಸೈಲೆನ್‌ನಲ್ಲಿ ನಮ್ಮ ಗೌರವಾರ್ಥ ಭೋಜನ ಕೂಟ ಏರ್ಪಾಡಾಗಿತ್ತು. ಹಾಗಾಗಿ ಪೇಜಸ್‌ ಜುವಾನ್‌ ಆಗಲೀ, ಅವನ ಮಡದಿಯಾಗಲೀ ರಾತ್ರೆಗೇನು ಮಾಡಿಕೊಡೋದು ಈ ಭಾರತೀಯನಿಗೆ ಎಂದು ಚಿಂತಿಸಬೇಕಾದ ಅಗತ್ಯವಿರಲಿಲ್ಲ.

ಎಪ್ರಿಲ್‌ 18ರಂದು ನಾವು ಸ್ಟಾನ್‌ ಫ್ಯಾಕ್ಟರಿ ನೋಡಿ, ಮೆಡಿಟರೇನಿಯನ್‌ ನಲ್ಲಿ ನೀರಾಟವಾಡಿ ನಾಬೋನಿನಗೆ ವಾಪಾಸಾಗುವಾಗ ಸಂಜೆಯ ಹೊತ್ತು. ಪೇಜಸ್‌ ಜುವಾನನ ಇಪ್ಪತ್ತೆಂಟರ ಹರೆಯದ ಮಗ ತಾಯಿಯೊಡನೆ ತನ್ನ ಅಪ್ಪನನ್ನು ಕಾಯುತಿದ್ದ. ಅವನಿಗೆ ನನ್ನನ್ನು ಕಾಣುವ ಕುತೂಹಲವಿತ್ತು. ಇಂಗ್ಲೀಷ್‌ ಬಾರದ ಅವನು ಅಪ್ಪನ ಮೂಲಕ ನನ್ನಲ್ಲಿ ಮಾತಾಡಬೇಕಿತ್ತು. ಮಾತು ಕೊನೆಗೆ ಯೋಗ  ಪ್ರಾಣಾಯಾಮಗಳತ್ತ ತಿರುಗಿತು. ಪೇಜಸ್‌ ಜುವಾನನ ಮಗ ಯೋಗಾಸನ ನೋಡಬಯಸಿದ. ‘ಪೇಜಸ್‌ ಜುವಾನ್‌ ಯೋಗಾಸನ ಕಲಿಯುವುದಾದರೆ ಮಾತ್ರ ಮಾಡಿ ತೋರಿಸುವುದು’ ಎಂದು ನಾನು ಶರತ್ತು ಹಾಕಿದೆ. ‘ನಾನು ವಯಸ್ಸಾದವ. ನನಗ್ಯಾಕೆ ಯೋಗ?’ ಎಂದು ಪೇಜಸ್‌ ಜುವಾನ್‌ ಕೇಳಿದ.’ಯೋಗಾಸನಕ್ಕೆ ವಯಸ್ಸಿನ ಮಿತಿಯಲ್ಲ. ಆರೋಗ್ಯಕ್ಕಿಂತ ಮಿಕ್ಕ ಭಾಗ್ಯವೇನಿದೆ? ದೇಹಕ್ಕೆ ವಯಸ್ಸಾಗುವುದು ಸಹಜ. ಮನಸ್ಸಿಗೆ ಮಾತ್ರ ಎಂದಿಗೂ ವಯಸ್ಸಾಗಕೂಡದು’ ಎಂದೆ.

ನನ್ನ ಮಾತಿಗೆ ತಲೆದೂಗಿದ ಪೇಜಸ್‌ ಜುವಾನ್‌ ಒಳಗೆ ಹೋಗಿ ಬಿಸಿನೀರಲ್ಲಿ ಮಿಂದು ರಾತ್ರಿಯ ನಿಲುವಂಗಿ ತೊಟ್ಟು ಬಂದ. ಅವನೀಗ ಪಾದ್ರಿಯಂತೆ ಕಾಣುತ್ತಿದ್ದ. ಹೊರಗಡೆ ಹನಿಮಳೆ ಸುರಿಯುತ್ತಿತ್ತು. ಚಳಿಯಿಂದ ಪಾರಾಗಲು ಪೇಜಸ್‌ ಜುವಾನನ ಹೆಂಡತಿ ಅಗ್ಗಿಷ್ಟಗೆ ಉರಿಸಿದ್ದಳು. ಆ ಅಗ್ಗಿಷ್ಟಗೆಯ ಎದುರು ಅವರಿಗೆ ಯೋಗಾಸನ ಮತ್ತು ಪ್ರಾಣಾಯಾಮ ಹೇಳಿಕೊಟ್ಟೆ. ಶೀತದಿಂದ ಕಟ್ಟಿಕೊಂಡಿದ್ದ ತನ್ನ ಮೂಗು ಪ್ರಾಣಾಯಾಮದಿಂದ ಬಿಟ್ಟುಕೊಂಡುದನ್ನು ಜುವಾನನ ಹೆಂಡತಿ ಹೆಮ್ಮೆಯಿಂದ ಹೇಳಿಕೊಂಡಳು.

ಜುವಾನ್‌ ಧ್ಯಾನ ಮಾಡುವುದು ಹೇಗೆಂದು ಕೇಳಿದ. ನಾನು ಅಗ್ಗಿಷ್ಟಗೆಯ ಬೆಂಕಿಯ ಮೇಲೆ ಗಮನ ಕೇಂದ್ರೀಕರಿಸಿ ನಿಧಾನವಾಗಿ ಕಣ್ಣುಮುಚ್ಚಿ ಬೆಂಕಿಯನ್ನು ಮಾತ್ರವೇ ಧ್ಯಾನಿಸಲು ಹೇಳಿದೆ. ಉರಿಯುವ ಅಗ್ಗಿಷ್ಟಗೆಯೆದುರು ನಾನು, ಜುವಾನ್‌ ಮತ್ತು ಅವನ ಮಗ ಕಣ್ಣು ಮುಚ್ಚಿ ಧ್ಯಾನಾಸಕ್ತರಾದೆವು. ಸ್ವಲ್ಪ ಕಾಲದ ಬಳಿಕ ಕಣ್ಣು ತೆರೆದವು. ಅಲ್ಲಿನ ಸನ್ನಿವೇಶ ನನಗೆ ವೇದಕಾಲದ ಅಗ್ನಿಯ ಆರಾಧನೆಯನ್ನು ನೆನಪಿಗೆ ತಂದಿತು.

ಅಂದು ರಾತ್ರೆ ನಾಬೋನ್‌ನ ರೋಟರಿ ಅಧ್ಯಕ್ಷ ಜುವಾನ್‌ ಪೌಲ್‌ ಫೋರ್ನಿಯೋನ ಮನೆಯಲ್ಲಿ ನಮಗೆ ಭೋಜನ ಕೂಟ ಏರ್ಪಾಡಾಗಿತ್ತು. ನಾನು ಪಂಚೆ, ಜುಬ್ಬ ಮತ್ತು ಶಾಲು ಹಾಕಿ ಭೋಜನ ಕೂಟಕ್ಕೆ ಹೊರಟಾಗ ಪೇಜಸ್‌ ಜುವಾನ್‌ ಮತ್ತು ಅವನ ಹೆಂಡತಿ ಕಣ್ಣರಳಿಸಿದರು. ನನ್ನ ಶಾಲು ನಸುಹಳದಿ ಬಣ್ಣದ್ದು. ಅದರ ಎರಡು ಅಂಚುಗಳ ಕುಸುರಿ ಕೆಲಸಕ್ಕೆ ಅನೇಕ ಫ್ರೆಂಚರು ಮನಸೋತಿದ್ದರು. ಇನ್ನು ಬಡಪಾಯಿ ಮುದುಕ ಪೇಜಸ್‌ ಜುವಾನನ ಪಾಡೇನು? ತಕ್ಷಣ ಅವನು ಹೆಂಡತಿಯನ್ನು ಕರೆದು, ನನ್ನನ್ನು ಒತ್ತಿಗೆ ನಿಲ್ಲಿಸಿಕೊಂಡು ಮಗನಿಂದ ಪೋಟೋ ಹೊಡೆಯಿಸಿಕೊಂಡ.

ಫೋರ್ನಿಯೋನ ಮನೆಗೆ ಊಟಕ್ಕೆ ಹೋಗುವಾಗ ನಾನು ಶಾಲನ್ನು ಪೇಜಸ್‌ ಜುವಾನನ ಹೆಗಲಿಗೆ ಇಳಿಬಿಟ್ಟೆ. ಅವನ ನೀಲಿಕೋಟಿನ ಮೇಲೆ ಶಾಲಿನ ನಸುಹಳದಿ ಬಣ್ಣ ಎದ್ದು ಕಂಡು ಅವನ ಮುಖಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟಿತು. ಭೋಜನ ಕೂಟಕ್ಕೆ ಬಂದಿದ್ದವರು ಜುವಾನನ ಸೌಂದರ್ಯವನ್ನು ಭಾರತದ ಶಾಲು ಹೆಚ್ಚಿಸಿದೆಯೆಂದು ಹೇಳಿದಾಗ ಅವನು ಹಿಗ್ಗಿ ಹೀರೇಕಾಯಿಯಾದ. ವಾಪಾಸು ಬರುವಾಗಲೂ ಜುವಾನನ ಬಾಯಲ್ಲಿ ಶಾಲಿನದ್ದೇ ಮಾತು. ‘ಇದೆಂಥಾ ಶಾಲು? ನೀನು ಭಾರತಕ್ಕೆ ಬಾ. ಇದರ ಅಪ್ಪನಂಥಾ ಶಾಲನ್ನು ತೆಗೆದುಕೊಡುತ್ತೇನೆ ‘ ಎಂದೆ. ಅದಾಗಲೇ ಅರುವತ್ತು ದಾಟಿದ್ದ ಜುವಾನ್‌ ನಿರಾಶೆಯ ದನಿಯಲ್ಲಿ ಹೇಳಿದ. ‘ಈವರೆಗೆ ನನಗೆ ಭಾರತಕ್ಕೆ ಬರಲಾಗಲಿಲ್ಲ. ಇನ್ನು ಬರುವುದು ಅಷ್ಟರಲ್ಲೇ ಇದೆ!’ ನನಗೆ ಎಲ್ಲಿಲ್ಲದ ಕಸಿವಿಸಿಯಾಗಿ ‘ಆ ಶಾಲು ನೀನೇ ಇಟ್ಟುಕೋ’ ಅಂದೆ. ಇವನಿಗೆ ಅದು ಒಪ್ಪಿಗೆಯಾಗಲಿಲ್ಲ. ‘ಬೇಡ ಬೇಡ. ನಿನ್ನ ಶಾಲು ನನಗೆ ಬೇಡವೇ ಬೇಡ’ ಅಂದ. ‘ಭಾರತದಲ್ಲಿ ಇಂತಹ ಶಾಲುಗಳನ್ನು ನಾನು ಬೇಕೆಂದಾಗ ಕೊಳ್ಳಬಲ್ಲೆ. ನಿನಗೆ ಅದು ಎಲ್ಲಿ ಸಿಗಬೇಕು? ಇದು ನನ್ನದಲ್ಲ. ಭಾರತದ್ದು. ಬೇಡ ಎನ್ನಬೇಡ. ಇದನ್ನು ಸಾಂಸ್ಕೃತಿಕ ವಿನಿಮಯದ ಒಂದು ಭಾಗ ಎಂದು ತಿಳಿದುಕೋ” ಎಂದೆ. ಆ ಶಾಲಿಗೆ ಯಾವಾಗಲೋ ಮನಸೋತಿದ್ದ ಪೇಜಸ್‌ ಜುವಾನ್‌ ಮತ್ತೆ ನಿರಾಕರಿಸಲು ಹೋಗಲಿಲ್ಲ.

ಲ್ಯಾಂಗ್‌ಡಕ್ಕಿನ ವೆರ್ಸೈಲ್ಸ್‌  ಪೆಜೆನಾಸ್‌

ಎಪ್ರಿಲ್‌ ಹತ್ತೊಂಬತ್ತರಂದು ಬೆಳಿಗ್ಗೆ ನಾಬೋನ್‌ನಿಂದ ಹೊರಟು ನಾವು ಪೆಜೆನಾಸ್‌ ಮಾರ್ಗವಾಗಿ ಮಾಂಪಿಲಿಯೆಗೆ ಸಂಜೆ ಏಳಕ್ಕೆ ತಲುಪಬೇಕಿತ್ತು. ಪೆಜೆನಾಸ್‌ನಲ್ಲಿ ಮಧ್ಯಾಹ್ನದ ಊಟ, ಊಟದ ಬಳಿಕ ಪೆಜೆನಾಸ್‌ ದರ್ಶನ. ಇದು ನಮ್ಮ ನಿಗದಿತ ಕಾರ್ಯಕ್ರಮವಾಗಿತ್ತು. ಲ್ಯಾಂಗ್‌ಡಕ್ಕ್‌ ಪ್ರದೇಶದ ವೆರ್ಸೈಲ್ಸ್‌ ಎಂಬ ಕೀರ್ತಿಗೆ ಪಾತ್ರವಾದ ಪೆಜೆನಾಸ್‌ ಬಗ್ಗೆ ನಾಬೋನ್‌ನಲ್ಲೇ ಸಾಕಷ್ಟು ಕೇಳಿದ್ದೆವು. ವಾಸ್ತುಶಿಲ್ಪದ ಬಗ್ಗೆ ಆಸಕ್ತಿ ಇರುವವರ ಚಿಂತನೆಗೆ ಯಥೇಚ್ಛಗ್ರಾಸ ಒದಗಿಸುವ ಪುಟ್ಟ ಪಟ್ಟಣ ಪೆಜೆನಾಸ್‌. ಭೂತಕಾಲದ ಅದ್ಭುತ ಕಟ್ಟಡಗಳನ್ನು ಅದೇ ವಿನ್ಯಾಸಗಳಲ್ಲಿ ಉಳಿಸಿ, ಸಂರಕಿಸುತ್ತಿರುವ ಮತ್ತು ಶಿಥಿಲ ಕಟ್ಟಡಗಳನ್ನು ಪುನರುತ್ಥಾನಗೊಳಿಸುತ್ತಿರುವ ಪೆಜೆನಾಸ್‌ನ ನಗರಸಭೆ ಮತ್ತು ನಾಗರಿಕರ ಇತಿಹಾಸಪ್ರಜ್ಞೆಗೆ, ಕಾರ್ಯವಿಧಾನಕ್ಕೆ ಯಾರಾದರೂ ಬೆರಗಾಗಲೇಬೇಕು.

ಪೆಜೆನಾಸಿನಲ್ಲಿ ವಿಲಾಸಿಗಳಿಗೆ ಬೇಕಾದುದೆಲ್ಲಾ ಸಿಗಲಾರದು. ವಾಣಿಜ್ಯೋದ್ಯಮಕ್ಕೆ ಇಲ್ಲಿ ಅವಕಾಶಗಳಿಲ್ಲ. ಕೈಗಾರಿಕೆ ಸ್ಥಾಪನೆಗೆ ನಗರಸಭೆ ಅನುಮತಿ ಕೊಡುವುದಿಲ್ಲ. ಇಲ್ಲಿಯ ಜನಸಂಖ್ಯೆ ತೀರಾ ಕಡಿಮೆ. ಮಾರಾಟಕ್ಕೆ ಸಾಕಷ್ಟು ಭೂಮಿ ಕಡಿಮೆ ಕ್ರಯಕ್ಕೆ ಲಭ್ಯವಿದೆ. ಹಾಗಂತ ಭೂಮಿ ಕೊಂಡವರು ತಮಗಿಷ್ಟವಾದ ಆಧುನಿಕ ವಿನ್ಯಾಸದ ಮನೆ ಕಟ್ಟಿಕೊಳ್ಳಲು ನಗರಸಭೆ ಅನುಮತಿ ನೀಡುವುದಿಲ್ಲ. ನಗರಸಭೆಯ ಅನುಮತಿಯಿಲ್ಲದೆ ಮನೆಕಟ್ಟುವಂತಿಲ್ಲ. ಮನೆ ಕಟ್ಟಲು ಅನುಮತಿ ನೀಡುವಾಗ ಮನೆಯ ಹೊರವಿನ್ಯಾಸದ ನಕ್ಷೆಯನ್ನು ಅದೇ ನೀಡುತ್ತದೆ. ಮನೆಗೆ ಯಾವ ಬಣ್ಣ ಹಾಕಬೇಕು ಎನ್ನುವುದನ್ನು ಕೂಡಾ ನಗರಸಭೆ ನಿರ್ಧರಿಸುತ್ತದೆ. ಹೊರ ವಿನ್ಯಾಸ, ಬಣ್ಣ ಎಲ್ಲವಕ್ಕೂ ಪೆಜೆನಾಸಿನ ಹಳೆಯ ಕಟ್ಟಡ ಗಳೇ ಮಾದರಿಗಳು. ‘ಇಷ್ಟೆಲ್ಲಾ ಶರತ್ತುಗಳಿಗೆ ಒಪ್ಪಿ ಇಲ್ಲಿಗೆ ಯಾರು ಬಂದು ನೆಲೆಸುತ್ತಾರೆ?’ ಎಂದು ಕೇಳಿದರೆ ‘ನಾವು, ಹೊಸಬರು ಇಲ್ಲಿಗೆ ಬಂದು ಹೊಸ ಮನೆ ಕಟ್ಟಿ ಇಲ್ಲಿ ನೆಲೆಸಬೇ ಕೆಂದು ಬಯಸುವುದಿಲ್ಲ. ಯಾವ ಕಾರಣಕ್ಕೂ ಈ ಪಟ್ಟಣ ತನ್ನ ಮೂಲರೂಪವನ್ನು ಕಳಕೊಳ್ಳ ಬಾರದು ಎನ್ನುವುದು ನಮ್ಮ ಇರಾದೆ’ ಎಂದು ಇಲ್ಲಿನ ಜನ ಉತ್ತರಿಸುತ್ತಾರೆ. ಆದುದರಿಂದ 1950ರಲ್ಲಿ ಇದಕ್ಕೆ ‘ವಿಶೇಷ ವಾಸ್ತುಶಿಲ್ಪಾಸಕ್ತಿಯ ಪಟ್ಟಣ’ ಎಂಬ ಬಿರುದನ್ನು ನೀಡಲಾಗಿದೆ.

ಹದಿಮೂರನೆಯ ಶತಮಾನದಲ್ಲಿ ಪೆಜೆನಾಸ್‌ ಒಮ್ಮಮಿಂದೊಮ್ಮೆಗೆ ಪ್ರವರ್ಧಮಾನಕ್ಕೆ ಬಂತು. ಆಗ ಅಲ್ಲಿ ನಡೆಯುತ್ತಿದ್ದ ಜವುಳಿ ಮೇಳಗಳು (Cloth fairs)  ಸ್ಥಳೀಯ ಶ್ರೀಮಂತರ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿದವು. ಕ್ರಿ.ಶ.1456 ರಿಂದ 1692ರ ಅವಧಿಯಲ್ಲಿ ಲ್ಯಾಂಗ್‌ಡಕ್ಕಿನ ರಾಜ್ಯಗಳು ಆಗಾಗ ಸಮಾವೇಶಗೊಳ್ಳಲು ಪೆಜೆನಾಸನ್ನೇ ಆಯ್ಕೆ ಮಾಡುತ್ತಿದ್ದವು. ಪೆಜೆನಾಸಿಗೆ ಆಗ ಪ್ರಾಂತೀಯ ರಾಜಧಾನಿಯ ಗೌರವ ಲಭ್ಯವಾಯಿತು. ಆದರೆ ಚಕ್ರವರ್ತಿಯ ವಿರುದ್ಧದ ದಂಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಫೆಜೆನಾಸ್‌ ಪ್ರಭುತ್ವದ ಆಕ್ರರೋಶಕ್ಕೆ ಈಡಾಗಬೇಕಾಯಿತು. ಅದಕ್ಕಿದ್ದ ವಿಶೇಷ ಹಕ್ಕುಗಳನ್ನು ಚಕ್ರವರ್ತಿ ಕಿತ್ತು ಕೊಂಡ. ಆ ಬಳಿಕ ಪೆಜೆನಾಸ್‌ ಒಂದು ರೀತಿಯ ಅಜಗರ ನಿದ್ರಾಸ್ಥಿತಿಗೆ ಜಾರಿತು. ಹದಿನೆಂಟ ನೆಯ ಶತಮಾನದುದ್ದಕ್ಕೂ ಇದೇ ಪರಿಸ್ಥತಿ ಮುಂದುವರಿಯಿತು. ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಇದು ಯುರೋಪಿನ ಪ್ರವಾಸಿಗರ ಕಣ್ಮನ ಸೆಳೆಯಲು ಆರಂಭಿಸಿತು. ವಾಸ್ತುಶಿಲ್ಪ ನಗರಿ ಎಂದು ಪ್ರವಾಸಿಗರು ಅದನ್ನು ಮೆಚ್ಚಿಕೊಂಡರು. ಇತಿಹಾಸ ಮತ್ತು ವಾಸ್ತು ಶಿಲ್ಪಗಳ ಬಗ್ಗೆ ಅಪಾರ ಗೌರವವಿರುವ ಫ್ರೆಂಚರಿಗೆ ಪೆಜೆನಾಸ್‌ ಒಂದು ರಾಷ್ಟ್ರೀಯ ಗೌರವದ ಸಂಕೇತವೆನಿಸಿದೆ. ಅವರು ಅದನ್ನು ಅನುರಕಿಸುತ್ತಿರುವ ರೀತಿಯನ್ನು ನೋಡಿದ ಕನ್ನಡಿಗರಿಗೆ ಐಹೊಳೆ ಮತ್ತು ಪಟ್ಟದಕಲ್ಲು ನೆನಪಾಗಿ ನಿಟ್ಟುಸಿರು ಬಾರದಿರಲು ಸಾಧ್ಯವೇ ಇಲ್ಲ!

ಫೆಜೆನಾಸಿನ ಒಳಹೊಕ್ಕವರಿಗೆ ಆ ವಾಸ್ತುಶಿಲ್ಪ ಸೌಂದರ್ಯದ ಚಕ್ರವ್ಯೂಹ ದಿಂದ ಹೊರಬರಲು ಸಾಧ್ಯವಾಗದು. ಪಟ್ಟಣದ ಫ್ರಾಂಕೋ ಔಸ್‌ಟ್ರಿನ್‌ ಬೀದಿಯಲ್ಲಿ ಲಾಕೋಸ್ತಿನ ಬ್ಯಾರನ್‌ಗಳು ಕ್ರಿ.ಶ. 15 ರಿಂದ 17ನೇ ಶತಮಾನದವರೆಗೆ ವಾಸಿಸಿದ
ಸುಂದರವಾದ ಭವನವೊಂದಿದೆ. ಗ್ಯಾಂಬೆಟ್ಟಾದಲ್ಲಿರುವ ಆಯುಷ್ಕರ್ಮಿಯ ಮನೆ (Barber House) ಬಹಳ ಪ್ರಖ್ಯಾತವಾದುದು. ಗೇಲಿ ಎಂಬ ನಾಯಿಂದನಿಗೆ ಸೇರಿದ ಈ ಕಟ್ಟಡ ಸಮಚ್ಚಯದ ಒಂದು ಭಾಗದಲ್ಲಿ ಪೆಜೆನಾಸಿನ ನಟ ಸೌರ್ವಭೌಮ ಮೋಲಿಯೆರ್‌ ವಾಸ ವಾಗಿದ್ದ. ಕೋಂತಿಯ ರಾಜಕುಮಾರನ ಆಸ್ಥಾನ ಕಲಾವಿದನಾಗಿದ್ದ ಮೋಲಿಯೆರ್‌ನ ಪ್ರತಿಮೆ ಯನ್ನು ಊರ ಮಧ್ಯದಲ್ಲಿ ನಿಲ್ಲಿಸಿ ಅದರ ಸುತ್ತ ಸುಂದರವಾದ ಉದ್ಯಾನವನವನ್ನು ನಿರ್ಮಿಸ ಲಾಗಿದೆ. ಕ್ರಿ.ಶ.1650 ರಿಂದ 1656 ರ ಅವಧಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಅವನ ನಾಟಕ ಗಳಿಗೆ ಫ್ರಾನ್ಸಿನ ಸಾಂಸ್ಕೃತಿಕ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. ಮೋಲಿಯೆರ್‌ ವಾಸವಾಗಿದ್ದ ಕಟ್ಟಡ ಪ್ರವಾಸೋದ್ಯಮ ಇಲಾಖೆಯ ಕಛೇರಿ ಮತ್ತು ಮ್ಯೂಸಿಯಂ ಆಗಿ ಪರಿವರ್ತಿತವಾಗಿ ದ್ದರೂ ಜನರು ಇಂದಿಗೂ ಅದನ್ನು ಕರೆಯುತ್ತಿರುವುದು ಆಯುಷ್ಕರ್ಮಿಯ ಮನೆಯೆಂದೇ!

ಪೆಜೆನಾಸಿನ ನೂರಾರು ಸುಂದರ ಭವನಗಳಲ್ಲಿ ಜೆರುಸಲೇಮಿನ ನೈಟ್‌ಗಳ (KNIGHTS) ಹಳೆಯ ಕಾರ್ಯಾಲಯವೂ ಒಂದು. ಲ್ಯಾಂಗ್‌ಡಕ್ಕಿನ ರಾಜ್ಯಪಾಲರುಗಳು ಸಭೆ ಸೇರುತ್ತಿದ್ದ ಕೌನ್ಸುಲ್ಯಾರ್‌ ಹೌಸ್‌ ತುಂಬಾ ಆಕರ್ಷಕವಾಗಿದೆ. ಅದರ ಸಮೀಪದಲ್ಲೇ ಇರುವ ಸೇಂಟ್‌ ಜರ್ಮನ್‌ ಮ್ಯೂಸಿಯಮ್ಮಮಿನಲ್ಲಿ ಚಿತ್ರವಸ್ತ್ರಗಳ (ಗವನಿಕೆ), ಪ್ರಾಚೀನ ಪಾತ್ರೆಗಳ, ಪೀಠೋಪಕರಣಗಳ ಮತ್ತು ಶಿಲ್ಪಾಕೃತಿಗಳ ಬಹುದೊಡ್ಡ ಸಂಗ್ರಹವಿದೆ. ಪೆಜೆನಾಸಿನ ವಾಣಿಯ ಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಟ್ರೇಡ್‌ ಟ್ರಿಬ್ಯೂನಲ್‌ ಭವನ ದೂರಕ್ಕೆ ಒಂದು ಚರ್ಚ್‌ನಂತೆ ಕಾಣುತ್ತದೆ. ಪೆಜೆನಾಸಿನ ಕೆಲವು ಭವನಗಳ ಹೊರಭಾಗದಲ್ಲಿ, ಮನೆಯ ಗೋಡೆಗಳಲ್ಲಿ ಕಲ್ಲಿನ ಆಕೃತಿಗಳನ್ನು ಕೆತ್ತಿದ್ದಾರೆ. ಜನರು ಅವುಗಳನ್ನು ಅಮೂಲ್ಯ ಆಸ್ತಿ ಎಂಬಂತೆ ಕಾಪಾಡಿಕೊಂಡು ಬಂದಿದ್ದಾರೆ.

ಪೆಜೆನಾಸಿನ ಶಾಜಹಾನ್‌ : ಪೆಜೆನಾಸಿನಲ್ಲಿ ನಮಗೆ ಮಧ್ಯಾಹ್ನದ ಊಟವನ್ನು, ಅಲ್ಲಿರುವ ಏಕೈಕ ಭಾರತೀಯ ಹೋಟೆಲಾದ ತಾಜ್‌ಮಹಲಿನಲ್ಲಿ ಏರ್ಪಡಿಸಲಾಗಿತ್ತು. ಫ್ರಾನ್ಸಿನಲ್ಲಿ ನಾವು ನೋಡಿದ ಮೊತ್ತಮೊದಲನೆಯ ಭಾರತೀಯ ಹೋಟೆಲ್‌ ಅದು. ಆ ಪುಟ್ಟ ಪಟ್ಟಣದಲ್ಲಿ ಭಾರತೀಯ ಹೋಟೆಲೊಂದು ಇರಬಹುದೆಂಬ ಕಲ್ಪನೆಯೂ ನಮಗಿರಲಿಲ್ಲ. ಹೋಟೆಲಿನ ಹೆಸರು ಕೇಳಿಯೇ ಪುಳಕಗೊಂಡ ನಮಗೆ, ಹೋಟೆಲು ಹೊಕ್ಕಾಗ ಕರ್ನಾಟಕದ ಯಾವುದೋ ಮೂಲೆಯ ಉಡುಪಿ ಹೋಟೆಲೊಂದನ್ನು ಹೊಕ್ಕ ಅನುಭವ. ಗಲ್ಲಾದಲ್ಲಿ ಮಾಲಿಕನ ತಲೆಯ ಮೇಲೆ ಲಕ್ಷ್ಮಿ, ಪಾರ್ವತಿ ಮತ್ತು ಸರಸ್ವತಿಯರ ಚಿತ್ರಗಳು. ಅಡುಗೆ ಮನೆಗೆ ಪ್ರವೇಶಿಸುವಲ್ಲಿ ರಾಮ, ಲಕ್ಮಣ, ಸೀತೆ ಮತ್ತು ರಾಧಾಕೃಷ್ಣರ ಸುಂದರ ಚಿತ್ರಗಳು. ಅಲ್ಲಲ್ಲಿ ಹಚ್ಚಿಟ್ಟ ಗಂಧದ ಕಡ್ಡಿಗಳು. ನಮ್ಮನ್ನು ಸ್ವಾಗತಿಸಿದ್ದು ಬಾಲಮುರಳಿಯ ಸಂಗೀತ.

ಅಂದಿನ ಊಟವನ್ನು ಅದೆಷ್ಟು ವರ್ಣಿಸಿದರೂ ಸಾಲದು. ಚಪಾತಿ, ಚಟ್ಟಂಬಡೆ, ಬೋಂಡ, ದಾಲ್‌, ಬದನೆ ಸಾರು, ಬಸುಮತಿ ಅನ್ನ, ಮಜ್ಜಿಗೆ ಮತ್ತು ಸೇವಿಗೆ ಖೀರು. ನಾನಂತೂ ಸಖತ್ತಾಗಿ ಹೊಡೆದೆ. ವಿನಿಮಯ ಕಾರ್ಯಕ್ರಮವೊಂದರ ಪ್ರಕಾರ ಪೆಜೆನಾಸ್‌ ನೋಡಲು ಸ್ವೀಡನಿನ್ನಿಂದ ಬಂದಿದ್ದ ನಾಟ್‌ ಓಚ್‌ಡೇಗ್‌ ಮತ್ತು ಆತನ ಪತ್ನಿಗೆ ಭಾರತೀಯ ಊಟದ ರುಚಿ ಸವಿಯುವ ಸೌಭಾಗ್ಯ. ನನ್ನ ಪಕ್ಕದಲ್ಲೇ ಕೂತಿದ್ದ ಓಚ್‌ಡೇಗ್‌ ಹಾಸ್ಯಪ್ರಿಯ ವ್ಯಕ್ತಿ. ಊಟದ ಮುಕ್ತಾಯ ಹಂತದಲ್ಲಿ ಆತ ‘ಇಂತಹ ಐಟಮ್ಮುಗಳನ್ನು ನಾವು ತಿನ್ನುತ್ತಿರುವುದು ಇದೇ ಮೊದಲು. ಈಗ ತ್ರೀ ಟಿ ಆಯಿತು’ ಎಂದು ಹೇಳಿ ತಾನೇ ಗಹಗಹಿಸಿದ. ಅವನ ಜೋಕು ನನಗೆ ಅರ್ಥವಾಗದೆ ‘ತ್ರೀಟಿ ಅಂದೆಯಲ್ಲಾ’ ಅದೇನದು?’ ಎಂದು ಕೇಳಿದೆ. ಮೊದಲೇ ಸಾಕಷ್ಟು ಉಬ್ಬಿ ಮುಂದಕ್ಕೆ ಬಂದಿದ್ದ, ಊಟದ ಬಳಿಕ ಇನ್ನಷ್ಟು ಉಬ್ಬಿದ ತನ್ನ ಗುಡಾಣ ಹೊಟ್ಟೆಯನ್ನು ತೋರಿಸುತ್ತಾ ಆತ ‘ಟಮ್ಮಿ ಟಚಿಂಗ್‌ ಟೇಬಲ್‌’ ಎಂದು ಮತ್ತೊಮ್ಮೆ ನಕ್ಕ. ನಾನದಕ್ಕೆ ‘ನೀನು ನಮ್ಮ ದಕ್ಷಿಣ ಕನ್ನಡಿ ಜಿಲ್ಲೆಗೆ ಬರಬೇಕು. ನಮ್ಮ ಜಿಲ್ಲೆಯಲ್ಲಿ ಉಡುಪಿ ಅಂತ ಒಂದೂರು ಇದೆ. ಅಲ್ಲಿನ ಜನರ ಹಾಗೆ ವೈವಿಧ್ಯಮಯವಾಗಿ ಮತ್ತು ರುಚಿಕಟ್ಟಾಗಿ ಅಡುಗೆ ಮಾಡಬಲ್ಲವರೇ ಇಲ್ಲ. ಭಾರತ ಮಾತ್ರವಲ್ಲ ವಿಶ್ವದ ಎಲ್ಲೆಡೆ ಉಡುಪಿ ಹೋಟೆಲುಗಳಿವೆ. 1969ರಲ್ಲಿ ನೀಲ್‌ ಆರ್ಮಸ್ಟ್ರಾಂಗ್‌ ಚಂದ್ರನ ಮೇಲಿಳಿದ ಮೊದಲ ಮಾನವ ಎನಿಸಿಕೊಂಡನಲ್ಲವೆ? ಚಂದ್ರ ನಲ್ಲಿ ಅವನು ಉಳಿದುಕೊಂಡದ್ದು ಉಡುಪಿ ಹೋಟೆಲಲ್ಲಂತೆ!’ ಎಂದೆ. ಈಗ ಓಚ್‌ಡೇಗ್‌ ಇನ್ನೂ ಗಟ್ಟಿಯಾಗಿ ನಕ್ಕು ‘ಭಾರತದ ಬಗ್ಗೆ ಬೇಕಾದ್ದು, ಬೇಡದ್ದು ಕೇಳಿ ಕೇಳಿ ಒಮ್ಮೆ ನಿನ್ನ ದೇಶ ನೋಡಲೇಬೇಕು ಅಂತ ಅನಿಸಿಬಿಟ್ಟಿದೆ ಮಾರಾಯ. ಬಂದೇ ಬರುತ್ತೇನೆ’ ಎಂದ.

ಊಟ ಮುಗಿದ ಬಳಿಕ ತಾಜಮಹಲ್‌ ಹೋಟೆಲಿನ ಯಜಮಾನನನ್ನು ಮಾತಾಡಿಸಿದೆ. ಕಪ್ಪು ಬಣ್ಣದ ಬಕ್ಕತಲೆಯ ಆತ ಫ್ರೆಂಚ್‌ ಗಡ್ಡ ಬಿಟ್ಟು ಫಕ್ಕನೆ ಆಫ್ರಿಕನನ್ನ ಹಾಗೆ ಕಂಡು ಬರುತ್ತಾನೆ. ಆದರೆ ಆತನೊಬ್ಬ ಪಂಜಾಬಿ. ಆತ ನೀಡಿದ ಭೋಜನ ರುಚಿಕರವಾಗಿತ್ತೆಂದು ಹೇಳಿ ‘ನಿನ್ನ ಹೆಸರೇನು?’ ಎಂದು ಕೇಳಿದೆ. ಅವನಾಗ ನಕ್ಕು ‘ನೀನು ಇತಿಹಾಸ ಓದಿದ್ದಿ ತಾನೆ? ತಾಜ್‌ಮಹಲನ್ನು ಯಾರು ಕಟ್ಟಿಸಿದ್ದು? ಆ ಶಾಜಹಾನ್‌ ನಾನೇ ‘ ಎಂದ. ಅವನ ಹೆಂಡತಿ ಲಂಡನಿನ್ನಲ್ಲಿ ಕಂಪ್ಯುಟರ್‌ ಸಂಸ್ಥೆಯೊಂದನ್ನು ನಡೆಸಿ ಚೆನ್ನಾಗಿ ಗಳಿಸುತ್ತಾಳೆ. ವಾರಕ್ಕೊಮ್ಮೆ ಹೆಂಡತಿಯ ಬಳಿಗೆ ಹಾರುವ ಈತ ಲಂಡನಿನ್ನಲ್ಲಿ ಯಥೇಚ್ಢವಾಗಿ ಸಿಗುವ ತರಕಾರಿ, ಹಪ್ಪಳ, ದವಸಧಾನ್ಯಗಳನ್ನು ತರುತ್ತಾನೆ. ‘ಮೊದಲು ಸೇನೆಯಲ್ಲಿದ್ದೆ. ಒಮ್ಮೆ ಮರಣಾಂತಿಕ ಏಟಾಗಿ ಅದ್ಹೇಗೋ ನಿಮಗಿಂದು ಊಟ ಹಾಕಲು ಬದುಕಿ ಉಳಿದೆ. ಏಟಾದ ಬಳಿಕ ದೃಷ್ಟಿಗೆ ಸ್ವಲ್ಪ ತೊಂದರೆಯಾಗಿ ನಾನು ಸೇನೆ ಬಿಟ್ಟು ಬರಬೇಕಾಯಿತು. ಬದುಕನ್ನು ಅರಸುತ್ತಾ ಗುರಿಯಿಲ್ಲದ ಪಯಣ ಮಾಡುತ್ತಿದ್ದ ನನಗೆ, ಈ ಊರು ಪುನರ್ಜನ್ಮ ನೀಡಿತು. ನನ್ನ ಹೋಟೆಲು ಯಶಸ್ವಿಯಾಯಿತು. ಮದುವೆಯಾದ ಬಳಿಕ ಈ ಹೋಟೆಲು ಬಿಟ್ಟು ಬಿಡಲು ಹೆಂಡತಿ ಒತ್ತಾಯಿಸುತ್ತಲೇ ಇದ್ದಾಳೆ. ಆದರೆ ಪೆಜೆನಾಸಿನವರು ‘ನೀನು ಹೋಗಬೇಡ’ ಎನ್ನುತ್ತಿದ್ದಾರೆ. ಈ ಊರಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ನನಗೆ ಅದನ್ನು ಹರಿದೊಗೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಲ್ಲೇ ಇದ್ದೇನೆ’ ಅಂದ.

ಅವನ ಹೋಟೆಲಿಂದ ಹೊರಡುವಾಗ ಅವನಿಗೆ ರಾಖಿ ಕಟ್ಟಲು ಅನಿತಾ ಮರೆಯಲಿಲ್ಲ. ನಾನು ಕೊಟ್ಟ ಭಾರತದ ಧ್ವಜ ಅವನ ಗಲ್ಲಾದಲ್ಲಿ ರಾರಾಜಿಸತೊಡಗಿತು. ಪೆಜೆನಾಸಿನ ಹನಿಮಳೆಯಲ್ಲಿ ನಡುಗುತ್ತಾ ನಾವು ಕಾರುಗಳನ್ನ ಏರಿ ಮಾಂಪಿಲಿಯೇದತ್ತ ಹೊರಟಾಗ ರೋಟರಿ ಅಧ್ಯಕ್ಷ ಪಿಯರೆ ಥಾಮಸ್‌, ಸ್ವೀಡನಿನ್ನ ಓಚ್‌ಡೇಗ್‌ ದಂಪತಿ, ತಾಜಮಹಲಿನ ಶಾಜಹಾನ್‌ ಕೈಬೀಸಿ ನಮ್ಮನ್ನು ಬೀಳ್ಕೂಟ್ಟರು. ಕಾರು ಮಾಂಪಿಲಿಯೇದತ್ತ ಸಾಗುತ್ತಿದ್ದಂತೆ ನಾನು ಹಾಡೊದನ್ನು ಗುನುಗುನಿಸತೊಡಗಿದೆ.

‘ಮಮತಾಜಳನು ಹುಗಿದು ತಾಜಮಹಲನು ಕಟ್ಟಿ

ನಿಜದುಃಖ ಮರೆಯಬಹುದೆ?’

******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಷ್ಯನಾಗಿ ಪರಿವರ್ತನೆಯಾಗಬಹುದಾದ ಚಿಂಪಾಂಜಿ
Next post ವಿಮಾನ ನಿಲ್ದಾಣಗಳು

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…