
೧
ಹೊಸ ಬಾಳಿನ ಹೊಸತಿಲಿನಲಿ
ಝಗ ಝಗಿಸುವ ಬೆಳಕು
ನಿಶೆ ಸರಿದಳೆ ಉಷೆ ಸುರಿದಳೆ
ಒಳ ಹೊರಗೂ ಹೊಳಪು
೨
ಅರಿಷಿಣದೊಳು ಮಿಂದಾಯಿತೆ
ಬಂದಾಯಿತೆ ಜೊತೆಗೆ
ನೆರಳಿನ ಸರಿ ನಿಂದಾಯಿತೆ
ಶುಭಕೋರುತ ಪತಿಗೆ.
೩
ಹಸನಾಯಿತೆ ಹೊಸದಾಯಿತೆ
ಮನೆಯಂಗಳ ಚೆಲುವು
ತಿಳಿ ನೀರಿನ ತಳಿಯಾಯಿತೆ
ರಂಗೋಲಿಯ ರೂಹು.
೪
ಬಾಗಿಲಿನಲಿ ಮಾಂದಳಿರಿನ
ತಿಳಿ ಹಸುರಿನ ನೆರಳು
ಶ್ರೀಗಂಧದ ಸೌಭಾಗ್ಯದ
ಸಿರಿ ಕುಂಕುಮ ಬೆರಳು.
೫
ಜೋಲ್-ಮುಡಿಯಲಿ ಪೂಸರವಿದೆ
ಸಿಂಗಾರದ ಗೌರಿ
ಎದೆ ಎದೆಗೂ ಸುಖ ನೀಡಿವೆ
ಕಣ್-ಮನವೂ ಸೇರಿ.
೬
ಗಲ್ಲದೊಳ್ ಹೂವರಳಿದೆ
ಸೌರಭವನು ಸೂಸಿ
ಕಣ್ಣಿನೊಳೂ ಕೋಲ್-ಮಿಂಚಿದೆ
ಎದೆಯಾಶೆಯ ಬಯಸಿ
೭
ಮನದುಂಬಿಯ ಝೇಂಕಾರದ
ಓಂಕಾರಕೆ ಹೂವು
ಕಣ್ಣರಳಿಸಿ ಎದೆಯಲುಗಿಸಿ
ಮುಂಚಾಚಿದೆ ಬಾಹು
೮
ಇಂದ್ರಾಣಿಯ ಚೆಲ್ವಿಕೆಯೂ
ಮೈ ತಳೆದರು ಕೂಡ
ಮನಮೋಹಿನಿ ಮಾಯಾವಿನಿ
ರಮಿಸಿದರೂ ಬೇಡ.
೯
ಶ್ರೀಚಂದ್ರನ ರೋಹಿಣಿಯೊಲು
ಎದೆಗಿಳಿಯಿತು ಪ್ರೀತಿ
ಹಾಲ್-ಜೇನಿನ ಹೊಳೆ ಹರಿಯಿತು
ಎರಡಂಚೂ ಸೂಸಿ.
೧೦
ಬೆಳುದಿಂಗಳ ಮಳೆಯಾಯಿತು
ಸುಖವಾಗಲಿ ಬದುಕು
ಮಕರಂದವೊ ಮಲ್ಲಿಗೆಯೊ
ಮನೆ ತುಂಬಿತು ಬೆಳಕು.
*****
















