Home / ಕವನ / ಕವಿತೆ / `ಹುಬ್ಬಳ್ಳಿ ಮಂಗ್ಯಾ’ನ ದುಂದುಮೆ

`ಹುಬ್ಬಳ್ಳಿ ಮಂಗ್ಯಾ’ನ ದುಂದುಮೆ

ದುಂದುಮೆ ಕೇಳ್ರಿ ದುಂದುಮೆ ||ಪ||
ದುಂದುಮೆ ಎಂತೆಂದು ಪಾಡಿರಿ ಜನರು
ದುಂದುಮೆ ಬಸವಂತನ ಹಬ್ಬ | ದುಂದುಮೆ |
ದುಂದುಮೆ ನಿರ್ದುಮೆ ಸಾಲಗನ್ನಿರೆ |
ದುಂದುಮೆ ಕೇಳ್ರಿ ದುಂದುಮೆ ||ಅ. ಪ||

ಸಬ್ಬ ದೇಶದೊಳು ಇಂಥ ಹೆಚ್ಚಿನ ಮರ್ಕಟ
ಅಬ್ಬರಿಸುತ್ತ ಹಾರ್ಯಾಡುವವು | ತಮ್ಮ
ಹುಬ್ಬು ಹಾರಿಸಿ ಹಲ್ಲು ಕಿಸಿಯುವವು | ಮತ್ತ
ತಬ್ಬುಬ್ಬಿ ಎಲೆಯಲ್ಲಿ ಕೂಡುವವು | ಮೈಯ ||
ಉಬ್ಬುತ ಕೊಬ್ಬುತ ಹಬ್ಬುತ ಒಳಗೆಲ್ಲ
ಹುಬ್ಬಳ್ಳಿಯೊಳು ಮಂಗ ಹುಡದಿಯಾಡಿದವು || ದುಂ ೧

ಅಂಗನೆಯರು ತಮ್ಮ ಅಂಗಳದೊಳು ಮನಿ
ಮುಂಗಡಿಯೊಳಗೆಲ್ಲ ಕೂಡಿದವು | ಮತ್ತೆ
ಹಿಂಗದೆ ಒಳಪೊಕ್ಕು ನೋಡಿದವು | ದೊಡ್ಡ
ಸಂಗಟಿಸ್ವಾರಿ ಈಡಾಡಿದವು | ಇಟ್ಟ ||
ಗಂಗಳ ತಂಬಿಗಿ ಆಂಬ್ರ ಚೆಲ್ಲಿದವವ್ವಾ
ಮಂಗಳವಾರ ಪ್ಯಾಟಿ ಮಾನಗೇಡಿ ಮಂಗ || ದುಂ ೨

ದೊಡ್ಡ ಮುಂಡಾಸ ಗಿಡ್ಡಂಗಿ ಜನಿವಾರ
ದೊಡ್ಡೆ ಗೊಂಗಡಿಯನ್ನು ಹಾಸಿಯರು | ಸಣ್ಣ
ಗಡ್ಡ ಹತ್ತಿ ಮೀಸಿ ಚಿನಿವಾಲರು | ಮುಂದೆ
ಅಡ್ಡ ಹಾಯ್ದರೆ ನೋಡಿ ಕರೆಯುವರು | ಹೊನ್ನು ||
ದುಡ್ಡು ರೂಪಾಯಿ ಚೀಲ ಅಡ್ಡಡ್ಡ ಎಳಿದಾಡಿ
ಎಡ್ಡು ಹಚ್ಚಿತಲ್ಲೊ ಅಡಮುಟ್ಟ ಮಂಗ|| ದುಂ ೩

ಹಪ್ಪಳ ಸಾಂವಿಗಿ ಸೆಂಡಿಗಿ ಗುಳಗಿಯ
ಚಪ್ಪರ ಮುಂದೊಣ ಹಾಕಿಹಳು | ಒಂದು
ತುಪ್ಪದ ಚಟಿಕೀಯ ಮುಂದಿಟ್ಟಹಳು । ಕೈಯ
ಚೆಪ್ಪಳಿಕ್ಕುತ ಮಾತನಾಡುವಳು | ನೋಡಿ ||
ತಪ್ಪದೆ ಹೊಕ್ಕೆಲ್ಲೊ ತಿಂದು ತಕ್ಕಿಯ ಬಿದ್ದು
ಕುಪ್ಪಸ ಹರಿದಿತು ಕುಲಗೇಡಿ ಮಂಗ ದುಂ ೪

ಪಂಚಮಿ ಬಂತೆಂದು ಹಂಚಿ ಬಿಟ್ಟಳ್ಳನು
ಹಂಚಿಕೆಯಿಂದ್ಹುರಿದಿಟ್ಟಿದ್ದೆನೆ | ಆಗ
ಮುಂಚೆ ಎಳ್ಳಚಿಗಳಿ ತಂಬಿಟ್ಟು ಕಟ್ಟಿದ್ದೆನೆ | ಹೊಸ
ಕುಂಚಿಗಿ ಟೊಪ್ಪಿಗಿ ಹೊಲಿಸಿಟ್ಟಿದ್ದೆನೆ | ಮನಿಯ
ಹಂಚು ಒಡೆದೊಳಗ್ಹೊಕ್ಕೆಲ್ಲ ತಿಂದಿತು
ಕಂಚಕಾರೋಂಣಿ ಕಸವಂಟ ಮಂಗ ದುಂ ೫

ಅಚ್ಚಬಾಳಿಯ ಹಣ್ಣು ಬಟ್ಟಿಟ್ಟು ಗಲ್ಲಕೆ
ಹಚ್ಚಿತು ಕೈಯನು ಮುಂಬಿನಲಿ | ಅದು
ತಬ್ಬಿಕೊಂಡೋಡಿತು ಕುಂಬಿಯಲಿ | ಕೂತು
ಬಿಚ್ಚಿತೆೊ ತೋವಿಯ ಕೈಯಿಂದಲಿ | ಬಾಯ್ಗೆ ॥
ಹಚ್ಚಿತೆನ್ನಯ ಜೀವ ಕಿಚ್ಚೆದ್ದು ಹೊಯ್ಕೊಂಡೆ
ಹೆಚ್ಚೆಂದು ಕಾಣವ್ವ ಹಿರಿಪ್ಯಾಟಿ ಮಂಗ ದುಂ ೬

ನಲ್ಲೆರ ಕೈಯಾನ ರಾಟಿಯ ಒಳಗಿನ
ಚಿಲ್ಲನು ಕತ್ತು ಈಡಾಡಿತಲ್ಲ | ಬುಟ್ಟಿ
ಯಲ್ಲಿದ್ದ ಕುಕ್ಕಡಿ ಹರದೀತಲ್ಲ ! ಹಾಸುಗ್ಹಾರಿ
ಹಲ್ಲಿಂದ ಹರಿದೋಡಿತಲ | ಮತ್ತು ||
ಹಲ್ಲಿಟ್ಟು ಹಣ್ಣುಕಾಯಿ ನೀರಲ ಪೇರಲ
ಪಲ್ಲೇವ ತಿಂದಿತು ಪಡನೆಂಟಿ ಮಂಗ ದುಂ ೭

ಬುಟ್ಟೇದ ಕುಪ್ಪಸ ಬುಗುಡಿ ಅಂಚಿನ ಸೀರಿ
ಉಟ್ಟು ತೊಟಗೊಂಡಿರುತಿದ್ದೆನೆ | ಅಕ್ಕಿ
ಕುಟ್ಟಿಕೊಂತ ನಾ ಕುಂತಿದ್ದೆನೆ | ಒಂದು
ಕಟ್ಟಿಗಿ ಕೋಲನ್ನು ಇಟ್ಟಿದ್ದೆನೆ | ಬಂದು ||
ಬಟ್ಟ ಕುಚವ ಮುಟ್ಟಿ ಕಟ್ಟನೆ ಕಡದೀತು
ಕಟ್ಟಾಣಿ ಹರದೀತು ಕವಡಿಯ ಮಂಗ ದುಂ ೮

ಬುಕ್ಕಿಟ್ಟಿನ ಚೀಲ ಬುಡಮೇಲ ಮಾಡಿತು
ಚಿಕ್ಕ ತಕ್ಕಂಗಡಿ ಹೊಕ್ಕಿತಲ್ಲ | ಕಲ್ಲ-
ಸಕ್ಕರೆ ಚೀಲವ ನೆಕ್ಕಿತಲ್ಲ | ಮತ್ತೆ
ತಕ್ಕಡಿ ದಂಡಿಗಿ ಮುರದಿತಲ್ಲ । ಅವ- ||
ಲಕ್ಕಿ ರೇವಡಿ ಬೆಂಡು ಬೆತ್ತನ ಪುಟಾಣಿ
ಮಕ್ಕಳ ಕಸಕೊಂಡು ಮುಕ್ಕಿತು ಮಂಗ ದುಂ ೯

ಪೆಟ್ಟಿಗಿಯೊಳಗಿನ ವಟ್ಟೆದಂಚಿನ ಸೀರಿ
ಇಟ್ಟು ಬಚ್ಚಲದಾಗ ಕುಂತಿದ್ದೆನೆ | ಎನ್ನ
ಕಟ್ಟಿದ ಕೂದಲ ಬಿಚ್ಚಿದ್ದೆನೆ | ಮತ್ತೆ
ಬಟ್ಟ ಬತ್ತಲೆ ನಾನು ಕೂತಿದ್ದೆನೆ | ಆಗ ||
ತಟ್ಟಿ ಮುರಿದು ಬಂದು ಇಟ್ಟಿಸೀರಿಯ ಕೊಂಡ
ಕಟ್ಟು ಕುಲಾಯವ ಸಕಸಿಕೊಂತು ಮಂಗ ದುಂ ೧೦

ಬಗ್ಗನೆ ಹೊಕ್ಕಿತು ಮಗ್ಗದವರ ಮನಿಯ
ಹುಗ್ಗಿಯ ಗಡಿಗಿಗೆ ಹಾರಿತಲ್ಲ | ಅದು
ಬಗ್ಗಿಸಿ ಬಾರಲ್ಹಾಕಿತಲ್ಲ | ಬಲು
ಸುಗ್ಗಿಯಾಯಿತೆಂದು ಹಿಗ್ಗಿತಲ್ಲ | ಕುಂತು ||
ಬಗ್ಗಿದವರ ಮೇಲೆ ಹಗ್ಗ ಹರಿದಿಳಿದು
ನುಗ್ಗ ಮಾಡಿತವ್ವ ಅಗ್ಗದ ಮಂಗ ದುಂ ೧೧

ಹಾರಿತು ಜವಳಿಯ ಅಂಗಡಿ ಸಾಲಿಗೆ
ಬಾರಲ್ಹಾಕಿತು ಮಸಿದೌತಿಯನು | ಕಿತ್ತು
ಈಡಾಡಿತೆಲ್ಲ ಜವಳಿಯನು | ಮಣಿ
ಗಾರಂಗಡಿಗಿಟ್ಟು ದಾಳಿಯನು | ವಟ್ಟೆ ||
ಮಾರುನಾರೇರ ಮಾರಿಯ ಮೇಲ್ಹೊಡೆದು
ನೀರಿಯ ಕಳೆದಿತು ಸಿರಿಗೇಡಿ ಮಂಗ ದುಂ ೧೨

ಮತ್ತೆನಾ ಬಸುರೆಂದು ಬುತ್ತಿಬೋನ್ಹದ ಮಾಡಿ
ಒತ್ತಿ ಒಳೊಳ್ಳಿ ಹರಿಸಿದ್ದೆನೆ | ಆಗ
ಚಿತ್ತೆಲ್ಲ ನಾನಲ್ಲಿ ಇರಿಸಿದ್ದೆನೆ | ನನ್ನ
ಸುತ್ತಲೆ ಯಾರಿಲ್ಲ ಕುಳಿತಿದ್ದೆನೆ | ಒಳ್ಳೆ ||
ಹೊತ್ತು ನೋಡಿ ಬಂದು ಮುತ್ತಿಕೊಂಡಿತೊಂದು-
ತುತ್ತಾರ ಬಿಡಲಿಲ್ಲ ತುಡಗಿನ ಮಂಗ ದುಂ ೧೩

ಹುಡಗೇರೆಲ್ಲರು ಕೂಡಿ ಕಡಲಿ ಕೊಬ್ಬರಿ ಕಬ್ಬು
ಹಿಡಕೊಂಡು ಹೋಗಲು ತುಡಕಿತವ್ವ | ಗಲ್ಲ
ಹಿಡಿದೆನ್ನ ಮಾರಿಯ ನೋಡಿತವ್ವ | ಉಟ್ರ
ಸಡಿಲಿಸಿ ನಿರಿಗೆಗಳ ಕಳಚಿತವ | ದೊಡ್ಡ ||
ಕಡುವನಂತ ಮೂಳ ಕಾಲಾಗ ಬಂದಿತು
ಉಡಿಯ ಚೆಲ್ಲಿಕೊಂಡು ಓಡಿತ ಮಂಗ ದುಂ ೧೪

ಲೋಕದೊಳೆಲ್ಲೆಲ್ಲ ನಾಕಾಣೆನಿಂತ್ಹಾದು
ಸಾಕು ಸಾಕಾದೀತು ಜನ್ಮಕೀಗ | ಇದರ
ಕಟಕಟಿ ಬಹಳವ್ವ ಅದರುಷ್ಟಕ | ಬೆಂಕಿ
ಹಚ್ಚಲೆವ್ವ ಮಾಡುವ ಬಾಳುವಿಗೆ | ಮುದದಿ ||
ಶ್ರೀ ಕುಂದಗೋಳ ಭೂಕಾಂತ ಗುರುವಿಗೆ ನಾನು
ಕಾಯ ಒಡೆದೇನಿ ಸಾಯಲಿ ಮಂಗ ದುಂ ೧೫
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...