ನಮ್ಮ ಮನೆಯ ಪುಟ್ಟ ಬೆಕ್ಕು
ಬಿರ್ಜು ಅದರ ಹೆಸರು
ಭಾಳ ಇಷ್ಟ ಬಿರ್ಜೂಗೆ
ಗಟ್ಟಿ ಹಾಲು ಮೊಸರು.

ಬಿರ್ಜುಗಿದೆ ಗಾಜುಗಣ್ಣು
ಗೋಲಿಯಂತೆ ಫಳ ಫಳ,
ಅದರ ಬಣ್ಣ ಸೇಬಿನ್ಹಣ್ಣು
ರೇಶ್ಮೆಯಂತೆ ಥಳ ಥಳ,
ಮಲಗಿದ್ದರೆ ಪುಟ್ಟ ಹುಲಿ
ಓಡುತಿದ್ರೆ ಚೂಪು ಇಲಿ
ರಾತ್ರಿ ಇಡೀ ಬಿರ್ಜು ಬೇಟೆ-
ಯಾಡಿ ಬರುವುದು
ಹಗಲು ಮಲಗಿ ಇಲಿಯ ಕನಸ
ಕಾಣುತಿರುವುದು!

ಅಮ್ಮ ಕೊಂಚ ಕೂತಳೋ
ಬಿರ್ಜು ಓಡಿಬರುವುದು
ಮಗುವಿನಂತೆ ಅಮ್ಮನ ತೊಡೆ
ಏರಿ ಕೂತುಬಿಡುವುದು,
ಅಮ್ಮನ ಮೈ ಹತ್ತಿ
ಎದೆಗೆ ಕಯ್ಯನೊತ್ತಿ
ಪಾಪನಂತೆ ಕಣ್ಣು ಮುಚ್ಚಿ
ಒರಗಿಬಿಡುವುದು
ಜೊಂಪು ಹತ್ತಿ ಮೆಲ್ಲಗೆ
ಗೊರಕೆ ಹೊಡೆವುದು!

ಬಾರೋ ಬಿರ್ಜು ಬಾರೋ,
ಕಾಂಪೌಂಡನು ಹಾರೋ,
ಗಟ್ಟಿಹಾಲು ಕುಡಿದು ಆಗು
ಬೆಕ್ಕುಗಳಿಗೆ ಹೀರೋ;
ರೂಪ ನಡಿಗೆ ಗತ್ತಿನಲ್ಲಿ
ನೀನು ಥೇಟು ಹುಲಿ
ಬೇಟೆಯಾಡಿ ಹಿಡಿಯುವುದೋ
ವರ್ಷಕೊಂದು ಇಲಿ!
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)