ಸಂಕ್ರಾಂತಿ
ಸೂರ್ಯ ಬದಲಿಸುವ ಪಯಣದ ದಿಕ್ಕು
ಆ ದಿಕ್ಕು
ನಾನಾಗುವುದೆಂದು?
ಸಂಕ್ರಾಂತಿ
ಎಲ್ಲೆಲ್ಲೂ ಹೊಮ್ಮಿಸುವ ಈ ಭೂಮಿ
ಅದಕ್ಕೆ
ಅರ್ಥ ತಾರದೇಕೆ?
ಭುವಿಗಿಳಿದ ಸಂಕ್ರಾಂತಿ
ನನ್ನೆದೆಗಿಳಿಯಲಿಲ್ಲ
ಎದೆಗಿಳಿದರೂ ಅಲ್ಲಿ
ಸಮೃದ್ಧಿ ತರಲಿಲ್ಲ
ಸಮೃದ್ಧಿಯ ಮೇಲೆ
ಮೊದಲಿಂದಲೂ ಇದೆ ಪೇಟೆಂಟ್ಸ
ಹಾಗಾಗಿ ಸಂಕ್ರಾಂತಿ ನನ್ನದೇನು?
ನೀವು ಕೇಳಬಹುದು
ನನ್ನೊಡನೆ ನೀವು ನಕ್ಕಿಲ್ಲವೇ? ಎಂದು
ನಕ್ಕಿದ್ದೇನೆ –
ಇನ್ನೊಬ್ಬರ ಸಂತಸದಲಿ ನಗುವ ಅಭ್ಯಾಸ
ಕರಗತವಾಗಿದೆ ನನಗೆ
ಬೆಳಿಗ್ಗೆಯಿಂದಲೂ ನನಗೆ ಬರುತ್ತಿವೆ ಹಾರೈಕೆಗಳು
‘ಎಳ್ಳು ತಿಂದು ಒಳ್ಳೆ ಮಾತಾಡು’
ನಿಮ್ಮ ಐಷಾರಾಮದ ಬಂಡಿಯ ನೊಗ ಹೊತ್ತ ನಾನು
ಮೊದಲಿಂದಲೂ ಮಾಡಿದ್ದು ಅದೇ ಅಲ್ಲವೇನು?
ಈಗಲೂ ಅದನ್ನೇ ಮಾಡಬೇಕೆಂದು ನೀವು
ಬಯಸುತ್ತೀರೇನು!
ಸಂಭ್ರಮವ ನಿಮ್ಮೊಡನೆ ಹಂಚಿಕೊಂಡರೆ ಸಂಕಟ
ಸಿಗುವುದೇನು? ನನ್ನ ಪಾಲು!
*****