ಮೂಲ: ಟಿ ಎಸ್ ಎಲಿಯಟ್
ಪ್ರಭೂ೨
ರೋಮನ್ ಹ್ಯಾಸಿಂಥ್ ಹೂವು ಕುಂಡದಲ್ಲಿ ಅರಳಿವೆ
ಚಳಿದಿನಗಳ ರವಿಬಿಂಬ ಹಿಮಗಿರಿಗಳ ಮೇಲೆ
ತೆವಳಿ ತೆವಳಿ ಹತ್ತಿದೆ.
ಪಟ್ಟು ಹಿಡಿದು ನಿಂತಿದೆ ಋತು ಗಟ್ಟಿ ಕಾಲನ್ನೂರಿ.
ನನ್ನ ಬಾಳ ದೀಪ
ಮುಂಗೈ ಮೇಲಿನ ಹಗುರು ಹಕ್ಕಿಗರಿಯ ಹಾಗೆ
ಸಾವಿನ ಗಾಳಿಗೆ ಕಾದಿದೆ.
ಧೂಳಿನ ಕಣ ಬಿಸಿಲಲ್ಲಿ, ನೆನಪು ಮೂಲೆಗಳಲ್ಲಿ
ಸಾವಿನ ನಾಡಿಗೆ ಒಯ್ಯುವ ಗಾಳಿಗೆ ಕಾಯುತ್ತಿವೆ.
ಅನುಗ್ರಹಿಸು ಪ್ರಭೂ ನಮಗೆ ನಿನ್ನ ಶಾಂತಿಯನ್ನು.
ಓಡಾಡಿರುವೆ ಎಷ್ಟೋ ವರ್ಷ ಈ ನಗರದಲ್ಲಿ,
ವ್ರತ ಉಪವಾಸ ಮಾಡಿರುವೆ, ಉಣಬಡಿಸಿರುವೆ ಬಡವರಿಗೆ
ಕೊಟ್ಟಿದ್ದೇನೆ ಪಡೆದಿದ್ದೇನೆ ಗೌರವ ನೆಮ್ಮದಿಗಳನ್ನು.
ಎಂದೂ ಹಿಂದೆ ಕಳಿಸಿಲ್ಲ ಬರಿಗೈಯಲ್ಲಿ ಯಾರನ್ನೂ,
ದುಃಖದ ಹೊತ್ತು ಬಂದಾಗ ನನ್ನನ್ನು ನೆನೆಯುತ್ತಾರೆ ಯಾರು?೩
ನನ್ನ ಮಕ್ಕಳ ಮಕ್ಕಳು ವಾಸಿಸುತ್ತಾರೆ ಎಲ್ಲಿ?
ಹೊರಗಿನವರ ಕಣ್ಣಿಂದ, ಹೊರಗಿನವರ ಖಡ್ಗದಿಂದ
ದೂರ ದೂರ ಓಡುತ್ತ
ಸೇರುತ್ತಾರೆ ಅವರು ಕಡೆಗೆ
ಹೋತ ನಡೆವ ಹಾದಿಗೆ, ನರಿವಾಸದ ಬೀಡಿಗೆ೪
ಸೆರೆಯಾಗುವ ಹೊತ್ತು೫ ಶಿಕ್ಷೆ ಕೊಡುವ ಹೊತ್ತು, ಪ್ರಲಾಪಿಸುವ ಹೊತ್ತು೬
ಬರುವುದಕ್ಕೂ ಮುಂಚೆಯೇ
ಅನುಗ್ರಹಿಸು ಪ್ರಭೂ ನಮಗೆ ನಿನ್ನ ಶಾಂತಿಯನ್ನು
ಜನರು ತೊರೆದ ಬೆಟ್ಟದಲ್ಲಿ೭
ನಿನ್ನ ಬವಣೆಬಾಳ ಚಿತ್ರದೆದುರು ನಿಂತು ಕಣ್ಣೀರಿಡುವ
ಹೊತ್ತು ಬರುವ ಮುಂಚೆಯೇ೮
ಮಗನಿಗಾಗಿ ತಾಯಿ ಅಳುವ ಹೊತ್ತು ಬರುವ ಮುಂಚೆಯೇ೯
ಮೃತ್ಯು ಹುಟ್ಟಿ ಬರುತ್ತಿರುವ ಈ ಗಳಿಗೆಯಲ್ಲಿ
ಇನ್ನೂ ಮಾತನಾಡದ, ಅನುಕ್ತಶಬ್ದ ಈ ಮಗು೧೦
ಅನುಗ್ರಹಿಸಲಿ ಇಸ್ರೇಲಿಗೆ ಅದರ ಶಾಂತಿಯನ್ನು೧೧
ಅನುಗ್ರಹಿಸು ಎಂಬತ್ತಕ್ಕೆ ಬಂದ ಜೀವವನ್ನು
ನಾಳೆಯೊಂದು ತನ್ನ ಪಾಲಿಗಿಲ್ಲದ ನನ್ನನ್ನು.
ನೀನು ನುಡಿದ ಹಾಗೇ ಅವರು
ನಿನ್ನನ್ನು ಸ್ತುತಿಸುತ್ತಾರೆ ಹಿಂಸೆಗೆ ಗುರಿಯಾಗುತ್ತಾರೆ
ವೈಭವ ಪರಿಹಾಸ್ಯ ಹೊತ್ತು ಪ್ರತಿಪೀಳಿಗೆಯಲ್ಲೂ೧೨
ದೀಪದ ಮೇಲೊಂದು ದೀಪ, ಸಂತನ ಎತ್ತರ ಏರಿ.
ನನಗಲ್ಲ ಹುತಾತ್ಮಪಟ್ಟ, ಚಿಂತನೆ ಪ್ರಾರ್ಥನೆ ನೀಡುವ ಆ ದಿವ್ಯತೃಪ್ತಿ.
ನನಗಲ್ಲವೆ ಅಲ್ಲ ಆ ತುತ್ತತುದಿಯ ದರ್ಶನ.
ದಯಪಾಲಿಸು ಪ್ರಭೂ ನನಗೆ ನಿನ್ನ ಶಾಂತಿಯನ್ನು.
(ನಾಟುತ್ತದೆ ಕತ್ತಿಯೊಂದು ನಿನ್ನೀ ಎದೆಯನ್ನು,
ಹೌದು ನಿನ್ನದನ್ನೂ.)
ನನ್ನ ಬಾಳಿನಲ್ಲಿ ಹಾಗೂ ಬರಲಿರುವರ ಬಾಳಿನಲ್ಲಿ
ಬಳಲಿದ್ದೇನೆ ನಾನು,
ನನ್ನ ಸಾವಿನಲ್ಲಿ ಹಾಗೂ ಬರಲಿರುವರ ಸಾವಿನಲ್ಲಿ
ಸಾಯುತ್ತಿರುವೆ ನಾನು,
ನಿನ್ನ ವಿಮೋಚನೆಯ ಕಂಡ ಈ ಸೇವಕನನ್ನು
ಹೊರಡಲುಬಿಡು ಇನ್ನು.
*****
೧೯೨೮
೧. ‘Anglican Book of Common prayer’ ಪುಸ್ತಕದಲ್ಲಿ Luke II ೨೯ ರೊಂದ ಆರಂಭವಾಗುವ ಸಾಲುಗಅಲು (Lord now lettest thou thy servant depart in peace….) Nunc Dimittis ಅಥವಾ ಸಿಮಿಯೆನ್ನನ ಹಾಡು ಎಂದು ಕರೆಯುವ ಭಾಗಕ್ಕೆ ಸೇರುತ್ತದೆ. ಆದ್ದರಿಂದ ಎಲಿಯಟ್ ಈ ಕವಿತೆಯನ್ನು ಸಿಮಿಯೆನ್ನನ ಹಾಡು ಎಂದೇ ಕರೆದಿದ್ದಾನೆ.
ಎಲಿಯಟ್ಟನ ಅಜ್ಜನಾಗಿದ್ದ ರೆವರೆಂಡ್ ವಿಲಿಯಮ್ ಗ್ರೀನ್ ಲೀಫ್ ಎಲಿಯಟ್ ಕೂಡ ಒಂದು Nunc Dimittis ಪದ್ಯ ಬರೆದಿದ್ದ. ಅದರ ವಸ್ತುವೂ ಈ ಪದ್ಯದ್ದೇ. ಅದರಲ್ಲಿಯೂ ಬೈಬಲ್‌ನಲ್ಲಿ ಬರುವ ಕೆಲವು ಪದಪುಂಜಗಳನ್ನು ಬಳಸಿದೆ. ಅವನು ಆ ಪದ್ಯ ಬರೆದದ್ದು ೧೮೮೬ರಲ್ಲಿ, ತನ್ನ ಎಪ್ಪತ್ತಾರನೆಯ ಹುಟ್ಟುದಿನದ ಸಂದರ್ಭದಲ್ಲಿ.
ಸಿಮಿಯೆನ್ ಜೆರೂಸಲೆಮ್ಮಿನಲ್ಲಿದ್ದ ಧರ್ಮಶ್ರದ್ಧೆಯುಳ್ಳ ಒಬ್ಬ ಯೆಹೂದಿ. ಅವನು ಕ್ರಿಸ್ತನನ್ನು ಕಾಣುವವರೆಗೆ ಸಾಯುವಂತಿಲ್ಲವೆಂದು ಅವನಿಗೆ ದೇವವಾಣಿ ತಿಳಿಸಿರುತ್ತದೆ. ಶಿಶುಕ್ರಿಸ್ತನನ್ನು ಅವನ ತಂದೆ ತಾಯಿಗಳು (ಜೋಸೆಫ್ ಮತ್ತು ಮೇರಿ) ಪರಿಕರ್ತನ ವಿಧಿಗಾಗಿ ದೇವಾಲಯಕ್ಕೆ ಕರೆತಂದಾಗ ಸಿಮಿಯೆನ್ ದೇವವಾಣಿಯ ಮಾರ್ಗದರ್ಶನದಂತೆ ಅಲ್ಲಿಗೆ ಬರುತ್ತಾನೆ; ಶುಕ್ರಿಸ್ತನನ್ನು ತನ್ನ ತೋಳಿನಲ್ಲಿ ಎತ್ತಿಕೊಳ್ಳುತ್ತಾನೆ. ಆಗ ಅವನು ಹೇಳುವ ಮಾತುಗಳಿವು.
Lord, now lettest thou thy servant depart in peace, according to thy word. For mine eyes have seen thy salvation which thou hast prepared before the face of all people; A light to lighten the Gentiles, and the glory of thy people Israel.
೨. ಪ್ರಭೂ : ಸಿಮಿಯನ್ನನ ಪ್ರಾರ್ಥನೆಯ ಆರಂಭದ ಪದವನ್ನೇ ಎಲಿಯಟ್ ತನ್ನ
ಕವಿತೆಯಲ್ಲೂ ಬಳಸಿದ್ದಾನೆ.
೩. ದುಃಖದ ಹೊತ್ತು ಬಂದಾಗ… ಯಾರು? : ಮುಂದೆ ತಾವೆಲ್ಲ ಎದುರಿಸಬೇಕಾಗಿ ಬರುವ ಶಿಕ್ಷೆಯ ಸಂಬಂಧವಾಗಿ ಕ್ರಿಸ್ತ ತನ್ನ ಶಿಷ್ಯರಿಗೆ ಎಚ್ಚರಿಕೆ ಕೊಡುವ ಭಾಗದಿಂದ ಎಲಿಯಟ್ ಕೆಲವು ಮಾತುಗಳನ್ನು ತೆಗೆದುಕೊಂಡಂತೆ ತೋರುತ್ತದೆ. ಆದರೆ ಅಸಹ್ಯಕರವಾದ, ಕಂಗಾಲಾಗುವ ಪರಿಸ್ಥಿತಿ ಬಂದಾಗ ಜುಡಾಯಿನಲ್ಲಿರುವವರು ಬೆಟ್ಟದ ತಪ್ಪಲಿಗೆ ಓಡಿ ಹೋಗಲಿ” (ಮಾರ್ಕ್ XIII, ೧೪).
೪. ನನ್ನ ಮಕ್ಕಳ ಮಕ್ಕಳು ವಾಸಿಸುತ್ತಾರೆ ಎಲ್ಲಿ?…. ನರಿವಾಸದ ಬೀಡಿಗೆ : ಭವಿಷ್ಯದ ಬಗ್ಗೆ ಆತಂಕ ತೋರುವ, ಬೆನ್ನಟ್ಟಿ ಬರುವವರ ಭಯದಿಂದ ಕೂಡಿದ ಈ ಚಿತ್ರಗಳು ಬೈಬಲ್ಲಿನ ಭವಿಷ್ಯದ ಮಾತುಗಳಿಂದ ಹುಟ್ಟಿದವು. (ನೋಡಿ ಈಸಾಯಿ III-೩.) ಎರಡನೆಯ ಅವತಾರಕ್ಕೆ ಮುಂಚೆ ಅನುಭವಿಸಬೇಕಾದ ‘ದುಃಖಗಳ ಆರಂಭ’ ಕುರಿತು ಕ್ರಿಸ್ತ ಹೇಳುವ ಮಾತುಗಳಿಗೆ ನೋಡಿ: ಮ್ಯಾಲ್ಯೂ XXIV, ೮ ಮತ್ತು ಮಾರ್ಕ್ XIII,೮.
ತಾನು ಆಯ್ದುಕೊಂಡವರನ್ನೇ ದೇವರು ಕೈಬಿಟ್ಟಿದಾನೆಂದೂ, ಜಿಯಾನ್ ಪರ್ವತ ನಿರ್ಜನವಾಗಿದ್ದು ಅಲ್ಲಿ ನರಿಗಳು ಓಡಾಡುತ್ತಿವೆಯೆಂದೂ ಜಿರೇಮಿಯಾ ದೇವರಲ್ಲಿ ದೂರುತ್ತಾನೆ. (ಲ್ಯಾಮೆಂಟೇಷನ್ಸ್ V, ೧೭) ಪ್ರಾಣಿಪ್ರತಿಮೆಗಳು ಬೇರೆ ಕಡೆಯೂ ಬರುತ್ತವೆ. “ನರಿಗಳಿಗೆ ಬಿಲ ಇವೆ; ಗಾಳಿಯಲ್ಲಿ ಹಾಯುವ ಹಕ್ಕಿಗಳಿಗೂ ಗೂಡು ಇವೆ; ಆದರೆ ಮಾನವ ಪುತ್ರನಿಗೆ ಮಾತ್ರ ತಲೆಯಿಡಲೂ ಎಡೆಯಿಲ್ಲ” (ಮ್ಯಾಥ್ಯVIII,೨೦)
೫. ಸೆರೆಯಾಗುವ ಹೊತ್ತು: ರೋಮನ ರಾಜ್ಯಪಾಲನಾಗಿದ್ದ ಪೈಲೇಟನ ಆದೇಶದಂತೆ ಏಸುವನ್ನು ಬಂಧಿಸಿ ದಂಡಿಸಲಾಯಿತು.
೬. ಪ್ರಲಾಪಿಸುವ ಹೊತ್ತು : ಏಸುವನ್ನು ಶಿಲುಬೆಗೇರಿಸಲು ಜೆರೂಸಲೆಮ್ಮಿನಿಂದ ಹೊರಡಿಸಿಕೊಂಡು ನಡೆದಾಗ ಹೆಂಗಸರು ಗುಂಪು ಸೇರಿ ಅಳುತ್ತ ಅವನನ್ನು ಹಿಂಬಾಲಿಸಿದ್ದನ್ನು ನೆನಪಿಸಿಕೊಳ್ಳಬಹುದು.
೭. ಜನರು ತೊರೆದ ಬೆಟ್ಟದಲ್ಲಿ: ಕ್ರಿಸ್ತನನ್ನು ಶಿಲುಬೆಗೇರಿಸಿದ ಜಾಗ, ಅದಕ್ಕೆ ಕಾಲ್ವರಿ ಎಂಬ
ಹೆಸರಿದೆ.
೮. ನಿನ್ನ ಬವಣೆ ಬಾಳ ಚಿತ್ರದೆದುರು…. ಬರುವ ಮುಂಚೆಯೇ : ರೋಮನ್ ಕ್ಯಾಥೊಲಿಕ್ ಧಾರ್ಮಿಕ ಸಂಪ್ರದಾಯದಲ್ಲಿ ಕ್ರಿಸ್ತನನ್ನು ಶಿಲುಬೆಗೆ ಏರಿಸಿದಾಗಿನಿಂದ ಅವನ ಶವವನ್ನು ಸಮಾಧಿಗುಹೆಯಲ್ಲಿ ಇಡುವವರೆಗೆ ನಡೆದ ಘಟನೆಗಳನ್ನು ಸಂಕೇತಿಸುವ ವಿಗ್ರಹಗಳ ಅಥವಾ ಚಿತ್ರಗಳ ಎದುರು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇದನ್ನು ‘ಸ್ಟೇಷನ್ಸ್ ಆಫ್ ಕ್ರಾಸ್’ ಎಂದು ಕರೆಯುತ್ತಾರೆ.
೯. ಮಗನಿಗಾಗಿ ತಾಯಿ ಅಳುವ… ಮುಂಚೆಯೇ : ಕ್ರಿಸ್ತತೀರಿಕೊಂಡ ಹೊತ್ತು ಅವನು ಒಂಬತ್ತು ಗಂಟೆಗೆ ತೀರಿಕೊಂಡನೆಂದು ಸುವಾರ್ತೆಗಳು ದಾಖಲಿಸಿವೆ.
೧೦. ಇನ್ನೂ ಮಾತನಾಡದ ಅನುಕ್ತ ಶಬ್ದ ಈ ಮಗು: ‘ಮಗು’ ಎನ್ನುವ ಪದ ಮತ್ತು `ಇನ್ನೂ ಮಾತನಾಡದ ಅನುಚ್ಚರಿತ ಶಬ್ದ’ ಎಂಬ ಮಾತುಗಳು ಜಾನ್ (I.೧) ಹೇಳುವ ಮಾತನ್ನೂ ಮತ್ತು ಅದನ್ನು ಆಧರಿಸಿ ಲ್ಯಾನ್ಸೆಲಾಟ್ ಆ್ಯಂಡ್ರಸ್ ಬಳಸುವ ಶಿಶುಕ್ರಿಸ್ತನ ಚಿತ್ರವನ್ನೂ ಎಲಿಯಟ್ ಗಮನದಲ್ಲಿಟ್ಟುಕೊಂಡಿರುವುದನ್ನು ಸೂಚಿಸುತ್ತವೆ. ಆ್ಯಂಡ್ರಸ್ ಹೇಳುವ ಮಾತು: The word without a word; the eternal word not able to speak a word. ಎಲಿಯಟ್ ಇದೇ ಮಾತನ್ನೇ ಕೊಂಚ ಬದಲಿಸಿ The word within a word unable to speak a word ಎಂದು ಬಳಸುತ್ತಾನೆ. ಲ್ಯಾನ್ಸೆಲಾಟ್ ಆ್ಯಂಡ್ರೂಸ್‌ನಲ್ಲಿ ಕಾಣುವ ಈ ಬಗೆಯ ಕೆಲವು ಪದಪುಂಜಗಳನ್ನು ಮಿಂಚಿನಂಥ ಮಾತುಗಳೆಂದು ಎಲಿಯಟ್ ಪ್ರಶಂಸಿದ್ದಾನೆ; ಹಾಗೆಯೇ ಅವುಗಳನ್ನು ಬಳಸಿಕೊಂಡಿದ್ದಾನೆ.
೧೧. ಅನುಗ್ರಹಿಸಲಿ…. ಶಾಂತಿಯನ್ನು: ದೇವರು ತಾನು ಆಯ್ದ ಜನರಿಗೆಂದು ಇಸ್ರೇಲನ್ನು ಒಂದು ಭರವಸೆಯಾಗಿ ನೀಡಿದ. ಅಲೆದಾಟ, ಬಂಧನ ಮತ್ತು ಇತರ ಹಲವು ಸಂಕಷ್ಟಗಳನ್ನು ಎದುರಿಸಿದ ನಂತರ ಅವರು ಇಸ್ರೇಲಿನಲ್ಲಿ ಸ್ವತಂತ್ರರಾಗಿ ಬಾಳುವರೆನ್ನುವುದು ಆ ಭರವಸೆ.
೧೨. ನಿನ್ನನ್ನು ಸ್ತುತಿಸುತ್ತಾರೆ…. ಪ್ರತಿ ಪೀಳಿಗೆಯಲ್ಲೂ: ಸಿಮಿಯೆನ್ ಕ್ರಿಸ್ತನ ತಾಯಿ ಮೇರಿಗೆ ಹೇಳಿದ ಮಾತನ್ನು ಇದು ನೆನಪಿಸುತ್ತದೆ. ಮಗನ ಕಷ್ಟಸಾವುಗಳನ್ನು ನೋಡಿ ಅವಳು ಪಡಬೇಕಾಗಿ ಬರುವ ಯಾತನೆಯನ್ನೂ ಇದು ಸೂಚಿಸುತ್ತದೆ.