೨೦೦೫ರ ಸೆಪ್ಟೆಂಬರ್ ೧೩ ಮಂಗಳವಾರ ನನಗೆ ಒಂದು ಮುಖ್ಯವಾದ ದಿನ. ಅಂದು ನಮ್ಮ ಪ್ರಿಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎನ್. ಧರ್ಮಸಿಂಗ್ ಅವರು ಬಸವನಗುಡಿಯಲ್ಲಿ ನ್ಯಾಷನಲ್ ಕಾಲೇಜ್ ವೃತ್ತದಲ್ಲಿ ಮೇಲ್ದಾರಿಯನ್ನು ಉದ್ಘಾಟಿಸಿದರು. ನ್ಯಾಷನಲ್ ಕಾಲೇಜ್ ವೃತ್ತವು (ವಾಣಿ ವಿಲಾಸ ವೃತ್ತವು) ಒಂದು ಸುಂದರ ವೃತ್ತವಾಗಿತ್ತು. ಹಸಿರೆಲೆಗಳ, ಎತ್ತರದ ಸುಂದರ ಸಾಲುಮರಗಳನ್ನುಳ್ಳ ಐದು ವಿಶಾಲ ರಸ್ತೆಗಳು ಇಡೀ ಬೆಂಗಳೂರಿನಲ್ಲೇ ವಿಶಿಷ್ಟವಾಗಿ ವೃತ್ತವನ್ನು ಕೂಡಿತ್ತು. ಈ ವೃತ್ತದಲ್ಲೇ ನಾನು ನಗರ ಜೀವನದ ಜಂಜಾಟದಿಂದ ತಪ್ಪಿಸಿಕೊಂಡು ಎರಡು ಕಡೆಗಳಲ್ಲೂ, ಹುಲ್ಲು ಹಾಸಿರುವ ಉಪವನವಿರುವ ಸಾಲು ಮರಗಳನ್ನು ಹೊಂದಿದ ದಾರಿಯಲ್ಲಿ ಶಾಂತವಾಗಿ ನಡೆಯುತ್ತಿದ್ದೆನು. ವಾಣಿ ವಿಲಾಸ ವೃತ್ತದಿಂದ ಕೋಟೆ ಹೈಸ್ಕೂಲ್‌ವರೆಗೆ, ಈ ರಸ್ತೆಯ ಕಾಲುದಾರಿಯಲ್ಲಿ ನಡೆದಾಗ ಕಾಲ್ಗಳಿಗೆ ಹಸಿರು ಹುಲ್ಲಿನ, ಮೇಲೆ ಉದಕ್ಕೂ ಹಸಿರು ಉಪವನದ ಸಂತೋಷಾನುಭವವಾಗುತ್ತಿತ್ತು. ಎಲ್ಲೋ ವನದೊಳಗೆ ಸೇರಿಹೋಗಿದ್ದೇನೆಂದು ಅನ್ನಿಸುತ್ತಿತ್ತು. ಅದೊಂದು ಸುಂದರ ಅನುಭವವಾಗಿತ್ತು. ಆದರೆ ಇಂದು ಮೆಟ್ರೋ ಮಾರ್ಗಕ್ಕಾಗಿ ವೃಕ್ಷಚ್ಚೇದದಿಂದ ಹಸಿರುವನ ಕಂದು ಮೈದಾನವಾಗಿದೆ. ಈ ರಸ್ತೆಯಲ್ಲಿ ಈ ಮರಗಳು ೧೦೦ ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಇದ್ದವು. ೨೨.೪.೨೦೧೦ ರಂದು ನಾನು ಮೆಟ್ರೊಗಾಗಿ ಕಡಿಯಲ್ಪಟ್ಟ ಮರಗಳ ಸಂಖ್ಯೆಯನ್ನು ಎಣಿಸೋಣ ಎಂದು ಈ ರಸ್ತೆಯಲ್ಲಿ ನಡೆಯ ಹೊರಟೆ. ಈ ವೃತ್ತದಿಂದಲೇ ನಾನು ಪೂರ್ವದ ಕಡೆಗೆ ಎರಡು ಕಡೆಯಲ್ಲೂ ಮೇ ಫ್ಲವರ್ ವೃಕ್ಷಗಳ ಸಾಲಿನಿಂದ ಕೂಡಿದ ಭವ್ಯವಾದ ರಸ್ತೆಯಲ್ಲಿ ಸಾಗಿ ಲಾಲ್‌ಬಾಗ್‌ನ ಪಶ್ಚಿಮ ದಿಕ್ಕಿನ ಬಾಗಿಲಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸೂಚನೆಯಂತೆ (ನಡೆ ನಡೆದು ಬನ್ನಿ ಕೆಂಪು ಹೂವು ಸಾಲುಮರದ ಹಾದಿಯಲ್ಲಿ ಈ ಕೆಂಪು ಹೂವು ತೋಟಕ್ಕೆ) ಕೈಜೋಡಿಸಿ ಪ್ರವೇಶಿಸುತ್ತಿದ್ದೆ.

ಆದರೆ ಕೆಂಪು ಹೂ ಸಾಲುಮರ ಇಂದು ಎಲ್ಲಿದೆ ? ಪ್ರಸಿದ್ಧ ಕವಿಯ ಪ್ರಸಿದ್ಧ ಕವನ ವಾಸ್ತವಿಕ ವರ್ಣನೆಯಲ್ಲವೇನೋ, ಕವಿ ಕಲ್ಪಿತವೋ ಎಂಬಂತೆ ಇತಿಹಾಸವನ್ನು ಸೇರಿದೆ. ಸುಂದರವಾದ ರಸ್ತೆಯನ್ನು ಅಲಂಕರಿಸಿದ ನಿಜವಾದ ಮೇ ಫ್ಲವರ್ ಮರಗಳನ್ನು ಕವನ ವರ್ಣಿಸಿತ್ತು. ಭವ್ಯ ಮೇ ಪ್ಲವರ್ ವನದ ಮೇಲೆ ಕಾನ್‌ಕ್ರೀಟ್ ಕಾಡಿನ ವಿಜಯವೇ ಇದು ನಿಜ. ಆಕರ್ಷಕವಾಗಿದ್ದ ಕೆಂಪು ಹೂ ಸಾಲುಮರದ ಹಾದಿಯಿತ್ತೆಂದು ಮುಂದಿನ ಪೀಳಿಗೆಯು ಎಂದಿಗು ತಿಳಿಯುವುದೂ ಇಲ್ಲ, ನಂಬುವುದೂ ಇಲ್ಲ.

ಲಾಲ್‌ಬಾಗ್‌ನ ಬಸವನಗುಡಿ ಬಾಗಿಲಿನಿಂದ ದಕ್ಷಿಣ ದಿಕ್ಕಿಗೆ ಆರ್‌ವಿಟಿಸಿ ವೃತ್ತದವರೆಗೆ ಎರಡು ಕಾಲುದಾರಿಯಲ್ಲೂ ಕೆಂಪು ಹೂವು ಸಾಲು ಮರಗಳ ಹಾದಿಯನ್ನು ಸೃಷ್ಟಿಸಲು ಸಲಹೆಯನ್ನು ಕೊಡೋಣವೆಂದು ಆಲೋಚಿಸಿದ್ದೆ. ಆದರೆ ದಿಢೀರನೆ ದೈತ್ಯಾಕಾರದ ಮೆಟ್ರೋ ಕಾಲುದಾರಿ ಮಾತ್ರವಲ್ಲದೆ ಲಾಲ್‌ಬಾಗಿನ ಒಂದು ಸುಂದರ ಮೂಲೆಯನ್ನೇ ನಂಗಲು ಕಾಣಿಸಿಕೊಂಡಿತು. ಇದು ಲಾಲ್ ಬಾಗ್‌ನ ಕೊನೆಯ ಆರಂಭವಷ್ಟೆ. ಇತರ ಆಧುನಿಕ ವಾಹನ ದೈತ್ಯಗಳ ಆವಶ್ಯಕತೆ ಇನ್ನೇನು? ಮಾನೋರೇಲ್, ಹೈಸ್ಪೀಡ್ ರೇಲ್, ಲೋಕಲ್ ಟ್ರೇನ್, ಎಕ್ಸ್‌ಪ್ರೆಸ್ ವೇ, ಸುರಂಗಮಾರ್ಗ, ಎತ್ತರಿಸಿದ ಹೆದ್ದಾರಿ, ಕೆಳರಸ್ತೆ ಮೊದಲಾದವುಗಳು ಲಾಲ್‌ಬಾಗಿನ ಎಂಟು ಸುಂದರ ಮೂಲೆಗಳನ್ನು ನುಂಗಲು ಕಾದಿವೆ. ಲಾಲ್‌ಬಾಗಿ ನಲ್ಲಿ ನೀವು ಗುಲಾಬಿ ತೋಟದ ಸೌಂದರ್ಯವನ್ನು ಅನುಭವಿಸುತ್ತಿರಬಹುದು. ಆದರೆ, ಲಾಲ್‌ಬಾಗ್ ಮೂಲಕವೇ ಸಿಮೆಂಟ್ ಕಂಬಗಳ ಮೇಲಿನ ಮಾರ್ಗದಲ್ಲಿ ನಿಮ್ಮ ತಲೆಯ ಮೇಲೆ ಮಾನೋರೇಲ್ ಝರ್ ಎಂದು ಹೋದರೂ ಆಶ್ಚರ್ಯ ವಿಲ್ಲ. ಈಗಿನ ‘ಲಾಲ್ ಬಾಗ್ ಗ್ಲಾಸ್ ಹೌಸ್’ ಅನ್ನು ಮೆಟ್ರೋ ರೈಲ್ ಸ್ಟೇಷನ್ ಆಗಿ ಪರಿವರ್ತಿಸಿ ಎಂದು ಡಿಲ್ಲಿಯಿಂದ ಸುಗ್ರೀವಾಜ್ಞೆ ಬಂದೇ ಬರಬಹುದು. ಆಶ್ವರ್ಯವೇನಿಲ್ಲ.

ನ್ಯಾಷನಲ್ ಕಾಲೇಜ್ ವೃತ್ತದ ಮಧ್ಯದಲ್ಲಿ ಐದು ದೀಪಗಳನ್ನು ಹೊತ್ತ ಎತ್ತರದ ದೀಪಸ್ತಂಭವಿತ್ತು. ಏನಾದರೊಂದು ಕಾರಣಕ್ಕಾಗಿ ಸಾರ್ವಜನಿಕ ಪ್ರತಿಭಟನೆ ಯಾದಾಗಲೆಲ್ಲ ಆ ಐದು ದೀಪಗಳು ಕಲ್ಲೆಸೆತಕ್ಕೆ, ಗುರಿಯಾಗುತ್ತಿದ್ದವು. ಆದರೆ ದೀಪಗಳ ಹತ್ತಿರ ಆ ಕಲ್ಲುಗಳು ತಲುಪುತ್ತಿರಲಿಲ್ಲ. ಎಲ್ಲ ಸಮಯದಲ್ಲೂ, ಎಲ್ಲ ಜನರಿಗೂ ಬೆಳಕನ್ನು ಕೊಡುತ್ತ ದೀಪದ ಕಂಬ ಭವ್ಯವಾಗಿ ನಿಂತಿತ್ತು. ಬೆಂಗಳೂರಿನ ಹಲವಾರು ಸುಂದರ ಉದ್ಯಾನಗಳಲ್ಲೊಂದರಲ್ಲಿ ಇದನ್ನು ಪುನಃ ಸ್ಥಾಪಿಸಬೇಕು. ಸಮೀಪದಲ್ಲೇ ನಮ್ಮ ಪೂರ್ವಜರ ಮನೆಯಲ್ಲಿ ನಾನು ಇದ್ದೆ. ಸುಮಾರು ೫೦ ವರ್ಷಗಳ ಕಾಲ ನನಗೆ ಈ ಸುಂದರ ಸ್ತಂಭವು ಸೌಂದರ್ಯದ ಗೌರವದ ಮತ್ತು ಭಕ್ತಿಯ ಮಹಾವಸ್ತುವಾಗಿತ್ತು. ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ದೀಪದ ಕಂಬದ ಕೆಳಗೆ ಓದುತ್ತಿದ್ದರೆಂದು ನನ್ನ ಪ್ರಾಥಮಿಕ ವಿದ್ಯಾಭ್ಯಾಸದ ದಿನಗಳಲ್ಲಿ ನಾನು ಕೇಳಿದ್ದೆ. ಯಾವ ದೀಪದ ಕಂಬದ ಕೆಳಗೆ ಓದುತ್ತಿದ್ದರೋ ಅದು ಇದೇ ಇದ್ದಿರಬೇಕೆಂದು ನಾನು ನಂಬಿದ್ದೆ. ಈಗ ಈ ದೀಪಸ್ತಂಭ ಈಗ ಎಲ್ಲಿದೆಯೋ ನನಗೆ ತಿಳಿಯದು.

ಆ ದೀಪಸ್ತಂಭವು ಅತ್ಯಂತ ಸುಂದರವಾಗಿತ್ತು. ಅಂತಹ ದೀಪ ಸ್ತಂಭಗಳಲ್ಲಿ ಅದು ಕಡೆಯದಾಗಿ ಉಳಿದುಕೊಂಡಿದ್ದಿರಬಹುದು. ಅದನ್ನು ಪರಂಪರೆಯ ಒಂದು ಉತ್ತಮ ವಸ್ತುವನ್ನಾಗಿ ಘೋಷಿಸಿ ಹತ್ತಿರದ ಒಂದು ವೃತ್ತದ ಮಧ್ಯಕ್ಕೆ ಸ್ಥಳಾಂತರಿಸಬೇಕಿತ್ತು.

ದುರ್ದೈವವಶಾತ್ ಮೇಲುರಸ್ತೆ ನಿರ್ಮಾಣಕ್ಕಾಗಿ ಈ ಕಂಬದ ದುಃಖಕರ ನಿರ್ಮೂಲನಕ್ಕಿಂತ ಮೊದಲೇ ಈ ದೀಪದ ಕಂಬದ ಸೌಂದರ್ಯವನ್ನು ಅನುಭವಿಸಿದ್ದ ಬಸವನಗುಡಿಯ ಕನ್ನಡಿಗರು ಉತ್ತರ ಭಾರತದ ಸಂಸ್ಕೃತಿಗೆ ದಾರಿ ಮಾಡಿಕೊಟ್ಟು ಬಸವನಗುಡಿಯನ್ನು ತೊರೆದಿದ್ದರು. ಹತ್ತಿರದಲ್ಲಿ ಸೂಕ್ತವಾದೊಂದು ಸ್ಥಳದಲ್ಲಿ ಅದರ ಪುನಃ ಸ್ಥಾಪನೆಯ ಸಲಹೆಯನ್ನು ಕೊಡಲು ಸಮೀಪದಲ್ಲಿ ಕನ್ನಡಿಗರು ಯಾರೂ ಇರಲಿಲ್ಲ. ಆ ಸುಂದರ ಕಂಬವನ್ನು ಕೆಡವಿದ್ದಾರೆ ಎಂದು ನನಗೆ ಒಂದು ದಿನ ಸುದ್ದಿ ಬಂದಿತು. ಅದನ್ನು ನೋಡಲು ಅಲ್ಲಿಗೆ ಹೋದೆ. ಅದರ ಪಕ್ಕದಲ್ಲೆ ನಿಂತು, ನನ್ನ ದುಃಖದ ಮನಸ್ಸು ಮತ್ತು ಸುರಿವ ಕಣ್ಣೀರ ಮುಖ ಇವೆರಡು ಕಾಣಿಸುವ ಹಾಗೆ ಫೋಟೊ ತೆಗಿಸಿಕೊಳ್ಳಬೇಕೆಂದು ಆಸೆ ಇತ್ತು. ಆದರೆ ಆ ಕಂಬ ಅಲ್ಲಿರಲಿಲ್ಲ. ದೂರದ ಕಸದ ಗುಡ್ಡೆಗೆ ಎಸೆದಿದ್ದಾರೆಂದು ತಿಳಿಯಿತು. ದುಃಖದಿಂದ ಹಾಗೆಯೆ ಹಿಂತಿರುಗಿದೆ.

ಇಂದು ನಾನು ನ್ಯಾಷನಲ್ ಕಾಲೇಜ್ ವೃತ್ತದಲ್ಲಿ ಮೇಲುರಸ್ತೆಯಲ್ಲಿ ನಿಂತು ಸುತ್ತ ನೋಡಿದರೆ ನಾನೊಂದು ಬೆಂಗಾಡಿನಲ್ಲಿದ್ದಂತೆ ಅನ್ನಿಸುತ್ತದೆ. ಪೂರ್ವದಲ್ಲಿ ಕೆಂಪು ಹೂ ಸಾಲು ಮರದ ಹಾದಿ ಹೋಯಿತು. ಉತ್ತರದಲ್ಲಿ ಬೂಲೆವಾರ್ಡ್ ಯುಕ್ತ ಸಾಲು ಮರದೇ ಹಾದಿ ಹೋಯಿತು. ಪಶ್ಚಿಮದಲ್ಲಿ ಸಾಲುಮರದ ಹಾದಿ ಹೋಯಿತು. ಯಾವ ದಿಕ್ಕಿನಿಂದ ಸೂರ್ಯ ತನ್ನೆಲ್ಲ ಕಿರಣಗಳಿಂದ ನನ್ನನ್ನೂ ಬಡಿಯುತ್ತಿದ್ದಾನೆಂದು ನಾನು ತಿಳಿಯಲಾರೆ. ಮೊದಲಾದರೋ ಎಣಿಸಬಹುದಾದಷ್ಟು ಸೂರ್ಯಕಿರಣಗಳು ಮರಗಳ ದಪ್ಪ ಕೊಂಬೆಗಳ ನಡುವೆ, ಹಸಿರೆಲೆಗಳ ಮಧ್ಯದಿಂದ ಗೆರೆಗಳಾಗಿ ಬೀಳುತ್ತಿದ್ದವು. ಹಸಿರು ಹೋಯಿತು. ಆದರೆ ಈಗ ಬೆಂಗಳೂರು ನಗರ ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭವಾಗಿದೆ.

ಅದರ ಹಸಿರಿಗಾಗಿ ಅಷ್ಟೊಂದು ನಾವು ಪ್ರೀತಿಸುತ್ತಿದ್ದ ಆ ಉದ್ಯಾನನಗರಿಯಾದ ಬೆಂಗಳೂರು ಎಂದೆಂದಿಗೂ ಬೂದು ಬೂದಾಗುತ್ತಲಿದೆ.

ನಾನು ಬಸವನಗುಡಿಯಿಂದ ದೂರಕ್ಕೆ ವಾಸ ಬದಲಾಯಿಸಿದ್ದೇನೆ. ಆದರೆ ಬಸವನಗುಡಿಯ ಮೇಲಿನ ಪ್ರೀತಿ ಇಮ್ಮಡಿಯಾಗಿದೆ. ಒಂದು ದಿನ ಬೆಳಿಗ್ಗೆ ಬಸವನಗುಡಿಯನ್ನೂ ಮತ್ತು ಪ್ರಸಿದ್ಧ ಸರ್ ಎಂ. ಎನ್. ಕೆ. ಉದ್ಯಾನವನ್ನೂ ನೋಡಲು ನಿರ್ಧರಿಸಿದೆ. ನಾನು ನ್ಯಾಷನಲ್ ಹೈಸ್ಕೂಲ್ ವೃತ್ತದಲ್ಲಿ ಮೇಲು ರಸ್ತೆಯ ಕೆಳಗೆ ನಿಂತಿದ್ದೇನೆ. ಈ ಮೇಲುರಸ್ತೆ ಬರುವುದಕ್ಕಿಂತ ಮುಂಚೆ ಅದರ ಸುತ್ತಲೆಲ್ಲ ಹೂ ಗಿಡಗಳು ಮತ್ತು ಸಮೀಪದಲ್ಲಿ ಹಸಿರು ಮರಗಳು. ಆದರೆ ದುರದೃಷ್ಟಕರವಶಾತ್ ಈಗ ನಾನು ಕಾಣುತ್ತಿರುವುದು ಎಲ್ಲೆಲ್ಲೂ ಬೂದು ಬಣ್ಣದ ಪೆಡಂಭೂತ ಕಂಬಗಳು. ಮೇಲು ರಸ್ತೆಯ ಕೆಳಗೆ ನಿಂತು ಅಲ್ಲಿಗೆ ಸೇರಿಕೊಂಡಿದ್ದ ಐದು ರಸ್ತೆಗಳಲ್ಲಿ ಕಳೆದು ಹೋದ ಮೂರು ಸುಂದರ ರಸ್ತೆಗಳ ಬಗ್ಗೆ ದುಃಖವನ್ನನುಭವಿಸಿದೆ. ಒಂದು ಉತ್ತರಕ್ಕೆ, ಇನ್ನೊಂದು ಪೂರ್ವಕ್ಕೆ ಮತ್ತೊಂದು ಪಶ್ಚಿಮಕ್ಕೆ ಇದ್ದವು. ಈಶಾನ್ಯಕ್ಕೆ ಮತ್ತು ದಕ್ಷಿಣಕ್ಕೆ ಇದ್ದ ರಸ್ತೆಗಳು ಸುರಕ್ಷಿತವಾಗಿವೆಯೆಂದುಕೊಂಡು ಸರ್ ಎಂ. ಎನ್. ಕೆ. ಪಾರ್ಕ್‌ಗೆ ಹೋಗುವುದೆಂದು ದಕ್ಷಿಣದ ರಸ್ತೆಯಲ್ಲಿ ನಡೆಯಲು ನಿಶ್ಚಯಿಸಿದೆ. ಪಾದಚಾರಿಗಳ ಪಥಗಳನ್ನೂ ಹೊಂದಿ ಮೀಡಿಯನ್‌ಯುಕ್ತ ಮೊದಲ ರಸ್ತೆ ಬಹುಶಃ ಬೆಂಗಳೂರಿನಲ್ಲಿ ಇದೇ ಎಂದುಕೊಂಡೆ. ವಿದ್ವಾಂಸನ ಮುಖಭಾವದಿಂದ ಕೈಯಲ್ಲಿ ಪುಸ್ತಕ ಹಿಡಿದು ಯಾವಾಗ ಘನತೆಯಿಂದ ನಡೆದುಹೋಗುತ್ತಿದ್ದೇನೋ ಆಗ ನಾನು ಎಲ್ಲರ ದೃಷ್ಟಿಗೂ ಏಕೈಕಪಾತ್ರವೆಂದು ಭಾವಿಸಿದೆ. ಎರಡು ಪಕ್ಕದಲ್ಲೂ ಭವ್ಯ ಮರಗಳಿದ್ದು ಸರ್ ಎಂ. ಎನ್. ಕೆ. ಪಾರ್ಕ್‌ನ ಪಶ್ಚಿಮದ್ವಾರದ ಮುಂದಕ್ಕೆ ಹೋಗುವ ಈ ರಸ್ತೆ ಒಂದು ಸುಂದರ ರಸ್ತೆಯಾಗಿತ್ತು. ಟ್ಯಾಗೋರ್ ಸರ್ಕಲ್ ಸಮೀಪ ತಲುಪಿದಾಗ ನನಗೆ ಆಘಾತವೇ ಆಯಿತು. ಹಸಿರು ಮರಗಳನ್ನು ಕಡಿದು ಹಾಕಿದ್ದರು. ಕೆಳ ರಸ್ತೆ ನಿರ್ಮಿಸುವುದಕ್ಕಾಗಿ ೨೦೧೦ನೇ ಇಸವಿಯಲ್ಲಿ ಈ ಕೆ. ಆರ್. ರಸ್ತೆಯನ್ನು ಆಳವಾಗಿ ಅಗೆದಿದ್ದರು.

ಉದ್ಯಾನವನ್ನು ಪ್ರವೇಶಿಸಲು ಸಾಧ್ಯವಿರಲಿಲ್ಲ. ನನಗೆ ಆಶಾಭಂಗವಾಯಿತು. ಪಶ್ಚಿಮದ್ವಾರ ಅದೃಶ್ಯವಾಗಿತ್ತು ಮತ್ತು ಪ್ರದೇಶ ಅಗಮ್ಯವಾಗಿತ್ತು. ನನಗೆ ನೆನಪಿದೆ. ಈ ಪ್ರವೇಶದ್ದಾರದಲ್ಲಿಯೇ ೧೯೫೬ರಲ್ಲಿ ನನ್ನ ಬಾಲ್ಯ. ಶಕುಂತಲೆಯು ತನ್ನ ಪಾದಕ್ಕೆ ಚುಚ್ಚಿಕೊಂಡು ನೋಯಿಸುತ್ತಿದ್ದ ಮುಳ್ಳನ್ನು ತೆಗೆಯಲು ನನ್ನನ್ನು ಕೇಳಿದ್ದು, ನಾನು ಮುಳ್ಳನ್ನು ತೆಗೆದೆ. ಮಾತಾಡದೆ ಮುಂದೆ ಹೊರಟುಹೋದೆ. ಆದರೆ ಕೂಡಲೇ ಅವಳನ್ನು ಮಾತನಾಡಿಸದೆ ನಾನೊಂದು ದೊಡ್ಡ ತಪ್ಪನ್ನು ಮಾಡಿದೆನೆಂದು ತಿಳಿದುಕೊಂಡೆ. ಅವಳು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಚೆಲುವೆ ಬಾಲೆ. ಮೌನದಿಂದ ನಾನು ಮುಂದೆ ಹೋಗಿದ್ದು ಅವಳ ಮನಸ್ಸಿಗೆ ನೋವಾಗಿದ್ದಿರಬೇಕು. ಅವಳ ಪಾದದಿಂದ ನೋವನ್ನು ತೆಗೆದು ಅವಳ ಮನಸ್ಸಿನಲ್ಲಿ ನೋವಿಟ್ಟೆ. ನಿನ್ನ ಹೆಸರೇನು? ಎಷ್ಟನೇ ಕ್ಲಾಸು? ಚೆನ್ನಾಗಿ ಓದು. ರ್‍ಯಾಂಕ್ ತೊಗೊ ಎಂಬ ಈ ಮಾತುಗಳು ಅವಳಿಗೆ ತುಂಬ ಸಂತೋಷವನ್ನುಂಟುಮಾಡುತ್ತಿದ್ದವು. ಆದರೆ ನಾನು ಆ ಧೀರ, ಚೆಲುವೆಯನ್ನು ಮಾತಾಡಿಸದೆ ವಿಫಲವಾದೆ. ಅದು ನನಗೆ ಒಂದು ವಿಫಲತೆಯ ಕ್ಷಣ. ಅಂತಹ ವೈಫಲ್ಯದ ಕ್ಷಣಗಳು ನಮಲ್ಲಿ ಶಾಶ್ವತ ಮುಳ್ಳುಗಳಾಗಿರುತ್ತವೆ.

ಬಸವನಗುಡಿ ಬೆಂಗಳೂರಿನ ರತ್ನವಾಗಿತ್ತು. ಕನ್ನಡಿಗರಿಗೆ ಅದು ಒಂದು ಮಹಾರತ್ನ. ವಿ. ವಿ. ರಸ್ತೆ, ಆರ್. ವಿ. ರಸ್ತೆ, ನಿಟ್ಟೂರು ಎಸ್. ಆರ್. ರಸ್ತೆ ಮತ್ತು ಬಸವನಗುಡಿ ರಸ್ತೆಗಳಿಂದ ಸುತ್ತುವರಿಯಲ್ಪಟ್ಟ ಬಸವನಗುಡಿಯು ಲಾಲ್‌ಬಾಗ್ ಮತ್ತಿತರ ಉದ್ಯಾನಗಳಿಂದ ಕೂಡಿ ಒಂದು ಸುಂದರ ನಿವಾಸ ಪ್ರದೇಶ. ನ್ಯಾಷನಲ್ ಹೈಸ್ಕೂಲ್ ಆಟದ ಮೈದಾನ, ಸಾಹಸಪ್ರಿಯರಿಗೆ ಬ್ಯೂಗಲ್ ರಾಕ್ ಇವೆ. ಉತ್ತಮ ಸಂಸ್ಕೃತಿಗೆ ಅದು ತೊಟ್ಟಿಲಾಗಿತ್ತು. ಇವೆಲ್ಲವೂ ಹೋಯಿತು. ಕನ್ನಡಿಗರು ಬಸವನಗುಡಿಯನ್ನು ತಟ್ಟೆಯ ಮೇಲಿಟ್ಟು ಬೇರೆಯವರಿಗೆ ಕೊಟ್ಟುಬಿಟ್ಟರು. ಭಾರಿ ಒತ್ತಡವಿದ್ದರೂ ಮಹಾರಾಷ್ಟ್ರದವರು ದಾದರ್ ಅನ್ನು ಬಿಟ್ಟುಕೊಡಲಿಲ್ಲ. ಬಸವನಗುಡಿ ಯಲ್ಲೊಂದು ದೊಡ್ಡ ಸಾಂಸ್ಕ್ರತಿಕ ಸಭಾಭವನವಿದ್ದಿದ್ದರೆ ಪ್ರಾಯಶಃ ಕನ್ನಡಿಗರು ಬಸವನಗುಡಿಯನ್ನು ತೊರೆಯುತ್ತಿರಲಿಲ್ಲ. ಈ ಅತಿದೊಡ್ಡ ಮತ್ತು ಸುಂದರವಾದ ಹಾಗು ಭವ್ಯದಾದ ಸಾಂಸ್ಕೃತಿಕ ಸಭಾಭವನದಿಂದ ಕನ್ನಡಿಗರಿಗೆ ದೂರ ಇರಲು ಸಾಧ್ಯವಾಗುತ್ತಿರಲಿಲ್ಲ. ಬಸವನಗುಡಿ ಕನ್ನಡಿಗರ ಶಾಶ್ವತವಾಗಿ ಉಳಿಯುತ್ತಿತ್ತು.

ಈಗ ಉತ್ತಮ ಪರಿಹಾರವೇನೆಂದರೆ ಪ್ರಸ್ತಾಪಿಸಲ್ಪಟ್ಟಿರುವ ನಾಡಪ್ರಭು ಕೆಂಪೇಗೌಡ ಮಹಾ ಬಡಾವಣೆಯಲ್ಲಿ ಬಸವನಗುಡಿಯನ್ನು ಪುನನಿರ್ಮಾಣ ಮಾಡುವುದು. ಈ ಹೊಸ ಬಸವನಗುಡಿ (New Basavanagudi) ಮೇಲುರಸ್ತೆ, ಕೆಳರಸ್ತೆ, ಮೆಟ್ರೋ ಮೊದಲಾದವುಗಳಿಲ್ಲದೆ ಎರಡೇ ಆಯಾಮದ (Two dimentional) ಬಡಾವಣೆ ಆಗಬೇಕು. ರಸ್ತೆಗಳ ಅಗಲವನ್ನು ಹೆಚ್ಚಿಸಬಹುದು. ಆದರೆ ಎಂದೂ ಕಡಿಮೆ ಮಾಡಕೂಡದು.
*****