ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ

ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ

ಅಧ್ಯಾಯ – ೧ ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ

ನಮ್ಮ ಶರೀರದ ಎಲ್ಲ ಅಂಗಾಂಗಗಳನ್ನು ನಿರ್ದೇಶಿಸುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ರೂಪಿಸುವ ಹಾಗೂ ನಮ್ಮ ಮನಸ್ಸಿನ ಕ್ರಿಯೆಗಳಾದ ಆಲೋಚನೆ, ಭಾವನೆ, ಸಂವಹನ, ಸಂವೇದನೆ, ಕಲಿಕೆ, ನೆನಪು, ಬುದ್ದಿವಂತಿಕೆ, ನೈತಿಕ ಮೌಲ್ಯಗಳನ್ನು ನಿರ್ವಹಿಸುವ ಪರಮೋಚ್ಛ ವ್ಯವಸ್ಥೆಯೇ ಮಿದುಳು ಮತ್ತು ನರಮಂಡಲ. ಸುಮಾರು ಒಂದೂ ಕಾಲು ಕಿಲೋಗ್ರಾಂ ತೂಗುವ ಮಿದುಳು ನಮ್ಮ ತಲೆ ಬುರುಡೆಯೊಳಗೆ ಸುರಕ್ಷಿತವಾಗಿ ಕುಳಿತಿದೆ. ದೊಡ್ಡ ಮಿದುಳು, ಸಣ್ಣ ಮಿದುಳು, ಮಿದುಳುಕಾಂಡ, ಮಿದುಳ ಬಳ್ಳಿ ೧೨ ಜೊತೆ ತಲೆ ನರಗಳು, ಮಿದುಳ ಬಳ್ಳಿಯಿಂದ ಕತ್ತು, ಬೆನ್ನು ಸೊಂಟದಿಂದ ಹೊರಡುವ ೩೧ ಜೊತೆ ಬೆನ್ನು ನರಗಳು ಸೇರಿ ಮಾಡಲ್ಪಟ್ಟ ಈ ವ್ಯವಸ್ಥೆಯ ರಚನೆ ಮತ್ತು ಕಾರ್ಯವೈಖರಿ ಅದ್ಭುತ ಮತ್ತು ಅಪೂರ್ವ.

ಜೀವಾಂಕುರವಾಗಿ, ಮೂರನೇ ವಾರದ ಕೊನೆಯ ವೇಳೆಗೆ, ಒಂದು ಲಕ್ಷ ಜೀವಕೋಶಗಳುಳ್ಳ ನರ ತಟ್ಟೆಯನ್ನು ಗುರುತಿಸಬಹುದು. ಇದು ಒಂದು ಕೊಳವೆಯಾಗಿ ಮಾರ್ಪಟ್ಟು, ಪ್ರತಿ ನಿಮಿಷ ಎರಡೂವರೆ ಲಕ್ಷ ಜೀವಕೋಶಗಳ ಸೇರ್ಪಡೆಯಾಗುತ್ತಾ, ಮಿದುಳಿನ ವಿವಿಧ ಭಾಗಗಳು ರೂಪುಗೊಳ್ಳುತ್ತವೆ. ನರಕೋಶಗಳ ಜೊತೆ ಜೊತೆಗೆ ಮಿದುಳಿನ ಗಾತ್ರಕ್ಕೆ ತಮ್ಮ ಕೊಡುಗೆಯನ್ನು ನೀಡುವ ಗ್ಲೆಯಲ್ ಜೀವಕೋಶಗಳ ಸಂಖ್ಯಾಭಿವೃದ್ಧಿಯೂ ಆಗತೊಡಗುತ್ತದೆ. ಮಗು ಹುಟ್ಟುವ ವೇಳೆಗೆ ಮಿದುಳಿನ ಶೇ.೬೦ರಷ್ಟು ಭಾಗ ಬೆಳೆದಿರುತ್ತದೆ. ನವಜಾತ ಮಗುವಿನ ಮಿದುಳಿನ ತೂಕ ೩೫೦ ಗ್ರಾಂ. ಅದಕ್ಕೆ ಒಂದು ವರ್ಷ ವಯಸ್ಸಾದಾಗ ೭೫೦ಗ್ರಾಂ ಇದ್ದು, ಐದು ವರ್ಷದ ವಯಸಿನ ಮಗುವಿನ ಮಿದುಳಿನ ಬೆಳವಣಿಗೆ ಪೂರ್ಣ ಗೊಂಡಿರುತ್ತದೆ. ಮನುಷ್ಯರ ಮಿದುಳಿನ ಸರಾಸರಿ ತೂಕ ೧,೨೫೦ ಗ್ರಾಂಗಳು.

ಮಿದುಳು ಮತ್ತು ನರಮಂಡಲದ ಪ್ರಮುಖ ಭಾಗಗಳು:
ಅ) ದೊಡ್ಡಮಿದುಳು – ಸೆರೆಬ್ರಮ್, ಅದರ ಎಡ ಮತ್ತು ಬಲ – ಅರೋಗೋಲಗಳು
ಆ) ಕಿರಿಮಿದುಳು – ಸೆರೆಬ್ರಲ್ಲಮ್, ಅದರ ಎಡ ಮತ್ತು ಬಲ ಅರೆಗೋಲಗಳು
ಇ) ಮಿದುಳಕಾಂಡ – ಬ್ರೇನ್‌ಸ್ಟೆಮ್ – (ಪಾನ್ಸ್, ಮಿಡ್ ಬ್ರೈನ್, ಮೆಡುಲ್ಲ ಅಬ್ಲಾಂಗೇಟ)
ಈ) ಮಿದುಳ ಬಳ್ಳಿ – ಸ್ಪೈನಲ್ ಕಾರ್ಡ್
ಉ) ತಲೆನರಗಳು – ೧೨ ಜೋಡಿ (ಕ್ರೇನಿಯಲ್ ನರ್ವ್ಸ್)
ಊ) ಬೆನ್ನು ನರಗಳು – ೩೧ ಜೋಡಿ (ಸ್ಪೈನಲ್ ನರ್ವ್ಸ್)

 

ದೊಡ್ಡ ಮಿದುಳು:
ಇದರ ಮೇಲ್ಮೈ / ತೊಗಟೆ (ಕಾರ್ಟೆಕ್ಸ್) ಯು ಮಡಿಕೆಗಳಾಗಿರುವುದರಿಂದ ವಿಶಾಲವಾಗಿದೆ. ಮಡಿಕೆ ಮಡಿಕೆಯಾಗಿರುವ ಒಂದು ವಸ್ತು (ನರಕೋಶಗಳು) ವ್ಯಕ್ತಿಯ ಮಾನಸಿಕ ಸಾಮರ್ಥ್ಯವನ್ನು ರೂಪಿಸುತ್ತವೆ. ಬಿಳಿಯ ವಸ್ತು (white matter) ನರಕೋಶಗಳಿಗೆ ಆಸರೆ ನೀಡುವ ಭಾಗ. ದೊಡ್ಡ ಮಿದುಳನ್ನು ಐದು ಭಾಗಗಳಾಗಿ ವಿಂಗಡಿಸಬಹುದು.

೧) ಮುಂಭಾಗ (Frontal Lobe)
೨) ಹಿಂಭಾಗ (Occipital Lobe)
೩) ಪಾರ್ಶ್ವ ಭಾಗ (Parietal Lobe)
೪) ಕಪೋಲ ಭಾಗ (Temporal Lobe)
೫) ಲಿಂಬಿಕ್ ವ್ಯವಸ್ಥೆ (Limbic system)

ಮುಂಭಾಗ: ಬೇರ ಪ್ರಾಣಿಗಳಿಗೆ ಹೋಲಿಸಿದರೆ, ಮಿದುಳಿನ ಮುಂಭಾಗ ಮನುಷ್ಯನಲ್ಲಿ ಅತಿ ಪ್ರಮುಖವಾಗಿ ಹಾಗೂ ವಿಸ್ತಾರವಾಗಿ ಬೆಳವಣಿಗೆಯಾಗಿವೆ. ಈ ಭಾಗವು ನಿಯಂತ್ರಿಸಿ, ನಿರ್ದೇಶಿಸುವ ಕಾರ್ಯಗಳೆಂದರೆ, ಕೈಕಾಲುಗಳು, ದೇಹದ ಚಲನೆ, ಮಾತು, ಕಣ್ಣುಗುಡ್ಡೆಗಳ ಚಲನೆ, ತರ್ಕಬದ್ಧವಾಗಿ, ವಿಮರ್ಶಾತ್ಮಕವಾಗಿ ಆಲೋಚಿಸುವುದು, ವಿಶ್ಲೇಷಿಸುವುದು, ತೀರ್ಮಾನ ಮಾಡುವುದು, ಸಮಸ್ಯೆಗಳಿಗೆ ಪರಿಹಾರ ಹುಡುಕುವುದು, ಕಲಿಕೆ, ನೆನಪು, ಬೌದ್ಧಿಕ ಕೆಲಸ, ಯೋಜನೆಗಳನ್ನು ಮಾಡುವುದು, ಸಾಮಾಜಿಕ ನಡವಳಿಕೆಗಳನ್ನು ರೂಪಿಸುವುದು, ಒಳ್ಳೆಯದು ಕೆಟ್ಟದು, ಸರಿ, ತಪ್ಪುಗಳನ್ನು ನಿರ್ಧರಿಸುವುದು, ಕ್ರಿಯೆ ಪ್ರತಿಕ್ರಿಯೆಗಳನ್ನು ನಿರ್ಧರಿಸುವುದು ಇತ್ಯಾದಿ.

ಹಿಂಭಾಗ: ಕಣ್ಣುಗಳ ಮುಖಾಂತರ ಒಳಬಂದ ದೃಶ್ಯ ಮಾಹಿತಿಯನ್ನು ಅರ್ಥೈಸುವುದು ಮತ್ತು ಅದನ್ನು ದಾಖಲಿಸಿ, ನೆನಪಿನಲ್ಲಿಟ್ಟುಕೊಳ್ಳುವುದು.

ಪಾರ್ಶ್ವಭಾಗ: ಸ್ಪರ್ಶ ಸಂವೇದನೆ (ದೇಹದ ಯಾವುದೇ ಹೊರಭಾಗದಲ್ಲಿ ಆಗುವ ಸ್ಪರ್ಶ, ನೋವು, ಉರಿ, ಒತ್ತಡಗಳನ್ನು ಗುರುತಿಸುವುದು), ಕಣ್ಣಿನಿಂದ ನೋಡದೇ, ಕಿವಿಯಿಂದ ಕೇಳದೆಯೇ, ಸ್ಪರ್ಶದಿಂದಲೇ ವಸ್ತುಗಳನ್ನು ಗುರುತಿಸುವುದು, ದೇಹದ ವಿವಿಧ ಭಾಗಗಳ ಭಂಗಿಯನ್ನು ತಿಳಿಯುವುದು. ಉಡುಪು ತೊಡುವುದು, ನೋಡಿ ಚಿತ್ರ ಬಿಡಿಸುವುದು, ಕೆಲಸದ ವಿವಿಧ ಹಂತಗಳನ್ನು ಗಮನಿಸಿ, ಶ್ರಮ ಬದ್ಧವಾಗಿ ಕೆಲಸ ನಿರ್ವಹಿಸುವುದು. (ಉದಾಹರಣೆಗೆ : ದೀಪ ಹಚ್ಚಬೇಕಾದರೆ, ದೀಪಕ್ಕೆ ಎಣ್ಣೆ ಬತ್ತಿ ಹಾಕುವುದು, ಬೆಂಕಿ ಕಡ್ಡಿ ಗೀರಿ ಹಚ್ಚಿ, ದೀಪ ಬೆಳಗುವುದು)

ಕಪೋಲಭಾಗ: ಕಿವಿಯ ಮೂಲ ಒಳಬಂದ ಶಬ್ಧ ಧ್ವನಿಗಳನ್ನು, ಮೂಗಿನಿಂದ ಬಂದ ವಾಸನೆ, ನಾಲಿಗೆಯಿಂದ ಒಳಬಂದ ರುಚಿಯನ್ನು ಗುರುತಿಸಿ ದಾಖಲಿಸುವುದು. ಸಂಗೀತವನ್ನು ಆಲಿಸಿ, ಅನುಭವಿಸುವುದು, ಶಬ್ಧ ಧ್ವನಿರೂಪದ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು. ಯಾವುದೇ ಕೆಲಸ ಮಾಡಲು ಗುರಿ ಮುಟ್ಟಲು ಬೇಕಾದ ಪ್ರೇರಣೆ, ಆಸಕ್ತಿ ಹಾಗೂ ಬದ್ಧತೆಯ ಹತೋಟಿ.

ಲಿಂಬಿಕ್ ವ್ಯವಸ್ಥೆ: ನಮ್ಮ ಭಾವನೆಗಳ ಪ್ರಕಟಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಮಿದುಳಿನ ವ್ಯವಸ್ಥೆಯನ್ನು ಮೊಟ್ಟ ಮೊದಲು ವಿವರಿಸಿದವನು ಜೇಮ್ಸ್ ಪಾಪೆಜ್. ಮಿದುಳಿನ ದೊಡ್ಡ ಮಿದುಳಿನ ಮೇಲ್ಮೈಗೂ ಕೆಳ ಶಿರಗುಳಿ (ಹೈಪೋಥೆಲಾಮಸ್)ಗೂ ನಡುವಿನ ನರತಂತು ವ್ಯೂಹವೇ ಈ ಲಿಂಬಿಕ್ ವ್ಯವಸ್ಥೆ. ಈ ವ್ಯವಸ್ಥೆಯು ನಮ್ಮ ಶರೀರದ ಕೆಲವು ಪ್ರಾಥಮಿಕ ಕೆಲಸ ಕಾರ್ಯಗಳನ್ನು ನಿರ್ದೇಶಿಸುತ್ತದೆ.

೦ ಆಹಾರ ಸೇವನೆ, ನಿದ್ರೆ ಮತ್ತು ಮೈಥುನ
೦ ಮಕ್ಕಳ ಲಾಲನೆ, ಪಾಲನೆ
೦ ಭಾವನೆಗಳನ್ನು ಸೃಷ್ಟಿಸುವುದು
೦ ಆಕ್ರಮಣ ಶೀಲತೆ / ಸೌಹಾರ್ದತೆ
೦ ತತ್ಕಾಲದ ನೆನಪು (working or immediate memory)

ದೊಡ್ಡ ಮಿದುಳಿನ ಇನ್ನು ಕೆಲವು ಭಾಗಗಳು:

ಅ) ಶಿರಗುಳಿ (ಥಲಾಮಸ್) : ಮಿದುಳಿನ ೩ ನೇ ಕುಳಿಯ (3rd Ventricle) ಅಕ್ಕಪಕ್ಕದಲ್ಲಿರುವ ಈ ಭಾಗಕ್ಕೆ ದೇಹದ ಎಲ್ಲ ಭಾಗಗಳಿಂದ ಬರುವ ಸ್ಪರ್ಶ, ನೋವು, ಒತ್ತಡ, ತಾಪದಂತಹ ಸಂವೇದನೆಗಳು ಬರುತ್ತವೆ. ಥಲಾಮಸ್ ಇವನ್ನು ಸ್ವೀಕರಿಸಿ, ಪಾರ್ಶ್ವಭಾಗಕ್ಕೆ ರವಾನಿಸುತ್ತದೆ, ಹೀಗೆ ಇದೊಂದು ಪ್ರಸಾರ ಸ್ವೀಕಾರ ಕೇಂದ್ರವೆಂದರೆ ಸರಿಯಾದೀತು. ಇದು ವ್ಯಕ್ತಿಯ ಜಾಗರೂಕ ಸ್ಥಿತಿಯನ್ನು ನಿಯಂತ್ರಿಸುವುದಲ್ಲದೆ, ಸಂವೇದನೆಗಳನು ಭಾವನೆಗಳನ್ನಾಗಿ ಮಾರ್ಪಾಡು ಮಾಡಲು ನೆರವಾಗುತ್ತದೆ. ಉದಾಹರಣೆಗೆ ನೋವಿನ ಸಂವೇದನೆಯಾದಾಗ ದುಃಖದ ಪ್ರಕಟಣೆ! ಶಿರಗುಳಿಗೆ ಹಾನಿಯಾದರೆ, ಸ್ನಾಯುಗಳು ನಿಶ್ಯಕ್ತಿಗೊಂಡು ಜೋತು ಬೀಳುತ್ತವೆ. ಅಸಮತೋಲನ ನಡಿಗೆ ಇರುತ್ತದೆ. ಸ್ಪರ್ಶ ಎಲ್ಲಿ ಆಗುತ್ತಿದೆ, ವಿವಿಧ ಸ್ಪರ್ಶಗಳಲ್ಲಿರುವ ವ್ಯತ್ಯಾಸ, ಕೀಲುಗಳ ಅಲ್ಪಚಲನೆಯ ಅರಿವು ವ್ಯಕ್ತಿಗೆ ಆಗುವುದಿಲ್ಲ.

ಆ) ಕೆಳಶಿರಗುಳಿ (ಹೈಪೋಥಲಾಮಸ್) : ಶಿರಗುಳಿಯ ಕೆಳಗಡೆ, ಬೂದು ವಸ್ತವುಳ್ಳ ನರಕೋಶಗಳ ರಾಶಿಯನ್ನು ಕೆಳಶಿರಗುಳಿ ಎನ್ನುತ್ತಾರೆ. ಕೇವಲ ೩ ಗ್ರಾಂ ತೂಗುವ ಈ ಭಾಗವನ್ನು ಶಸ್ತ್ರಕ್ರಿಯೆ ಮಾಡುವಾಗ ಹತ್ತಿಯಿಂದ ಸ್ಪರ್ಶಿಸಿದರೆ, ರೋಗಿಯ ತಾಪಮಾನ ಏರಿ, ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಾನೆ. ಮರಳಿ ಸಾಮಾನ್ಯ ಸ್ಥಿತಿಗೆ ಬರಲು ಹಲವು ತಾಸುಗಳೇ ಬೇಕಾಗಬಹುದು. ದೇಹದ ಎಲ್ಲ ಒಳ ಅಂಗಾಂಗಗಳು (ಉದಾ: ಹೃದಯ, ಶ್ವಾಸಕೋಶ, ಜೀರ್ಣಾಂಗಗಳು, ಜನನಾಂಗಗಳು, ಮೂತ್ರ ವಿಸರ್ಜನಾ ಅಂಗಗಳು, ನಿರ್ನಾಳ ಗ್ರಂಥಿಗಳು) ಇದರ ಅಧೀನದಲ್ಲಿರುತ್ತವೆ. ಪ್ರಯೋಗ ಶಾಲೆಯಲ್ಲಿ ಬೆಕ್ಕಿನ ಕೆಳಶಿರಗುಳಿಯ ಒಂದು ಭಾಗವನ್ನು ಪ್ರಚೋದಿಸಿದರೆ ಅದು ಕೆರಳಿ ಆಕ್ರಮಣ ಮಾಡಿದರೆ, ಮತ್ತೊಂದು ಭಾಗವನ್ನು ಪ್ರಚೋದಿಸಿದರೆ ಅದು ಲಲ್ಲೆಯಾಡುತ್ತಾ ನಿಮ್ಮ ಕೈಯನ್ನು ಪ್ರೀತಿಯಿಂದ ನೆಕ್ಕಲು ಪ್ರಾರಂಭಿಸುತ್ತದೆ? ಯಾವುದೇ ಸನ್ನಿವೇಶದಲ್ಲಿ ಇದು ವ್ಯಕ್ತಿಯನ್ನು ಹೋರಾಟಕ್ಕೆ ಆಥವಾ ಪಲಾಯನಕ್ಕೆ ಸಜ್ಜು ಮಾಡುತ್ತದೆ! ಅದರ ಕಾರ್ಯವ್ಯಾಪ್ತಿಯ ಹರವನ್ನು ನೋಡಿ!

೧) ಶರೀರದ ತಾಪದ ನಿಭಾವಣೆ: ಹೊರಗಿನ ತಾಪಮಾನ ಡಿಗ್ರಿ ಅಥವಾ ೪೫°cಇರಲಿ ಅಥವಾ -೧°Cರಿಂದ -೨೦°Cವರೆಗೆ ಇರಲಿ! ನಮ್ಮ ಶರೀರದ ತಾಪಮಾನವನ್ನು ಸದಾ ೩೭°C ಇರುವಂತೆ ನೋಡಿಕೊಳ್ಳುತ್ತದೆ.

೨) ನೀರಿನ ಪ್ರಮಾಣದ ನಿಭಾವಣೆ: ನಮ್ಮ ಶರೀರದ ೭೦% ಭಾಗ ನೀರು. ಪತಿ ಜೀವಕೋಶದಲ್ಲಿ ನೀರಿದೆ, ರಕ್ತ ಲಿಂಫ್ ರಸ, ಬೆವರು, ಜೊಲ್ಲುರಸ, ಜೀರ್ಣರಸಗಳು, ಕಲ್ಮಶಗಳನ್ನು ಹೊರಹಾಕುವ ಮೂತ್ರ ಎಲ್ಲವೂ ನೀರೇ. ನೀರಿನಂಶ ಕಡಿಮೆಯಾದರೆ ಅಪಾಯ, ಅಂಗಾಂಗಗಳಿಗೆ ಹಾನಿಯಾಗುತ್ತವೆ. ಪಾಣವೇ ಹೋಗಬಹುದು. ನಾವು ಎಷ್ಟು ನೀರು ಕುಡಿಯಬೇಕು ಅಥವಾ ಕುಡಿಯಬಾರದೆನ್ನುವುದನ್ನು ಹಾಗೂ ಶರೀರದಿಂದ ಹೊರಗೆ ಎಷ್ಟು ನೀರು ಹೋಗಬೇಕೆನ್ನುವುದನ್ನು ನಿರ್ಧರಿಸಲಾಗುತ್ತದೆ. ಹೈಪೋಥಲಾಮಸ್ ಆದೇಶದ ಮೇರೆಗೆ ಪಿಟ್ಯೂಟರಿ ಗ್ರಂಥಿಯು “ವೇಸೋಪ್ರಸಿನ್” ಎಂಬ ಹಾರ್ಮೋನನ್ನು ಸ್ರವಿಸಿ, ಈ ನೀರಿನ ಹತೋಟಿಯ ಕೆಲಸ ಮಾಡುತ್ತದೆ.

೩) ಹಾರ್ಮೋನುಗಳ ಉತ್ಪತ್ತಿ: ಥೈರಾಕ್ಸಿನ್, ಇನ್ಸುಲಿನ್, ಪ್ಯಾರಾಥೈರಾಯಿಡ್ ಹಾರ್ಮೋನು, ಅಡ್ರಿನಲಿನ್, ವೇಸೋಪ್ರಸಿನ್, ಸ್ಟೀರಾಯಿಡ್‌ಗಳು, ಲೈಂಗಿಕ ಹಾರ್ಮೋನುಗಳನ್ನು ಉತ್ಪಾದಿಸುವ ಎಲ್ಲಾ ನಿರ್ನಾಳ ಗ್ರಂಥಿಗಳ ಹೈಕಮಾಂಡ್ ಈ ಹೈಪೋಥಲಾಮಸ್‌.

೪) ನಿದ್ರೆ: ಎಷ್ಟು ನಿದ್ರೆ ಎಷ್ಟು ಎಚ್ಚರ, ಯಾವಾಗ ನಿದ್ರೆ ಎಂಬುದನ್ನು ಕೆಳಶಿರಗುಳಿ ನಿಯಂತ್ರಿಸುತ್ತದೆ.

೫) ಲೈಂಗಿಕ ಆಸೆ / ನಿಯಂತ್ರಣ ಹಾಗೂ ಕ್ರಿಯೆಯ ನಿರ್ದೇಶನ: ಪುರುಷನಿಗೆ ಲೈಂಗಿಕ ಆಸೆಯಾದಾಗ ಜನನಾಂಗ ನಿಮಿರುವುದು, ಸ್ತ್ರೀಗೆ ಲೈಂಗಿಕ ಆಸೆಯಾದಾಗ ಯೋನಿ ಹಿಗ್ಗಿ, ಯೋನಿ ಸ್ರಾವವಾಗುವುದು, ಸಂಭೋಗ ಸಮಯದಲ್ಲಿ ವೀರ್ಯ ಸ್ಖಲನ ಮತ್ತು ಯೋನಿಯ ಸಂಕುಚನಗಳು ಹೈಪೋಥಲಾಮಸ್ ಆದೇಶದಂತೆಯೇ ನಡೆಯುತ್ತದೆ.

೬) ಆಹಾರ ಸೇವನೆ : ಹಸಿವಾಗುವುದು, ಆಹಾರ ಸೇವನೆ ಬೇಡ/ಸಾಕು ಎನ್ನುವುದು ಕೆಳಶಿರಗುಳಿಯ ಕೆಲಸ.

೭) ಭಾವೋದ್ವೇಗಗಳ ಸೃಷ್ಟಿ: ಹೊರಗಿನ ಪ್ರಚೋದನೆ ಅಥವಾ ವ್ಯಕ್ತಿಯ ಆಲೋಚನೆ, ಅನುಭವಕ್ಕೆ ಪೂರಕವಾಗಿ, ಕೋಪ, ದುಃಖ, ಭಯ, ಮತ್ಸರ, ಪ್ರೀತಿ, ದಯೆ, ಸಹನೆಗಳು ಹೈಪೋಥಲಾಮಸ್‌ನ ಸೃಷ್ಟಿ. ಭಾವೋದ್ವೇಗವಾದಾಗ ಉಂಟಾಗುವ ದೈಹಿಕ ಮತ್ತು ಮಾನಸಿಕ ಪ್ರತಿಕ್ರಿಯೆಗಳಿಗೆ ಹೈಪೋಥಲಾಮಸ್ ಕಾರಣ.

೮) ಒತ್ತಡದ ಪ್ರತಿಕ್ರಿಯೆಗಳು: ಯಾವುದೇ ರೀತಿಯ ಮಾನಸಿಕ ಒತ್ತಡ ಉಂಟಾದಾಗ, ಕಾಣಿಸಿಕೊಳ್ಳುವ Fight-Flight Response ಆಕ್ರಮಣಶೀಲತೆ – ಪಲಾಯನ ಚಟುವಟಿಕೆಗೆ ಕೆಳಶಿರಗುಳಿಯೇ ಜವಾಬ್ದಾರಿ.

ಕೆಳಶಿರಗುಳಿ ಹಾನಿಗೀಡಾದರೆ, ಶರೀರದಲ್ಲಿ ಆಹಾರ, ನೀರಿನ ಪ್ರಮಾಣ ಏರುಪೇರಾಗುತ್ತದೆ. ಸದಾ ತೂಕಡಿಕೆ, ಅತಿ ನಿದ್ರೆ ಅಥವಾ ನಿದ್ರೆ ಕಡಿಮೆ, ಅಥವಾ ಹಗಲು ನಿದ್ರೆ ಮಾಡಿ ರಾತ್ರಿ ಇಡೀ ಎಚ್ಚರದಲ್ಲಿರುವುದು. ಲೈಂಗಿಕ ಕ್ರಿಯೆ ಏರುಪೇರು (ಷಂಡತನ ಅಥವಾ ಅತೀ ಕಾಮ) ಹಾಗು ಭಾವನೆಗಳ ಪ್ರಕಟಣೆ ಅಸ್ತವ್ಯಸ್ತಗೊಳ್ಳುತ್ತದೆ.

ಕಿರುಮಿದುಳು : ಸ್ನಾಯು ಮತ್ತು ಸ್ನಾಯು ಸಮೂಹದ ಹೊಂದಾಣಿಕೆಯ ಚಾಲನೆ ನಡೆಯುವುದು ಕಿರುಮಿದುಳಿನ ಸಹಾಯದಿಂದ ನಡೆಯುವಾಗ ಸಮತೋಲನ ಚಾಲನೆ, ಬರೆಯುವಾಗ, ಬೆರಳುಗಳ ಸರಾಗ ಚಾಲನೆ, ತೋರು ಬೆರಳಿನಿಂದ ಒಂದು ವಸ್ತುವನ್ನು ಅದರಲ್ಲೂ ಚಲಿಸುವ ಅಥವಾ ಅತ್ತಿಂದತ್ತ ಓಡಾಡುವ ವಸ್ತುವನ್ನು ಮುಟ್ಟುವುದು, ನೃತ್ಯಗಾತಿಯ ಮನಮೋಹಕ ಬಳುಕು, ಲಯಾಧಾರಿತ ಕುಣಿತ, ಬ್ಯಾಲೆ ಪಟು ಅಥವಾ ಜಿಮ್ನಾಸ್ಟಿಕ್ ಪಟುವಿನ ಅತ್ಯಾಕರ್ಷಕ ಭಂಗಿಗಳು, ವೀಣೆಯನ್ನು ನುಡಿಸುವ ವೈಣಿಕನ ಬೆರಳುಗಳ ಚಾಲನೆ ಎಲ್ಲವೂ ಕಿರುಮಿದುಳಿನ ಕಾಣಿಕೆಗಳೇ! ಕಿರುಮಿದುಳಿನಲ್ಲೂ ಎರಡು ಅರೆಗೋಳಗಳಿವೆ. ಪರಿಧಿಯಿಂದ ಬರುವ ಎಲ್ಲ ಸಂವೇದನೆಗಳು ಹಾಗೂ ಮಿದುಳಿನ ಮೇಲ್ಮೈ ಯಿಂದ ಹೊರಡುವ ಚಲನಾ ಸಂದೇಶಗಳು ಕಿರುಮಿದುಳನ್ನು ಮುಟ್ಟಿ ಹೋಗುತ್ತದೆ. ಕಿರುಮಿದುಳು ಹಾನಿಗೀಡಾದರೆ ವ್ಯಕ್ತಿ ನೇರವಾಗಿ ಸ್ಥಿರವಾಗಿ ನಡೆಯಲಾರ. ಕುಡುಕನಂತೆ ವಾಲಾಡುತ್ತಾನೆ. ಕಣ್ಣಿನ ದೃಷ್ಟಿ ಚೆನ್ನಾಗಿದ್ದರೂ, ಸೂಜಿಗೆ ದಾರವನ್ನು ಪೋಣಿಸಲಾರ, ಮೂಗಿನ ಮೇಲೋ, ಗಲ್ಲದ ಮೇಲೋ ಕುಳಿತ ಸೊಳೆಯನ್ನು ಓಡಿಸಲು ಕೈ ಎತ್ತಿದರೆ, ಅದು ಮುಖವನ್ನು ಅಪ್ಪಳಿಸಬಹುದು. ಕುಳಿತ ಭಂಗಿಯಿಂದ ಎದ್ದು ನಿಲ್ಲಲಾರ. ಕೈಚಾಚಿ ವಸ್ತುವನ್ನು ಎತ್ತಿಕೊಳ್ಳಲಾರ. ಕಿರುಮಿದುಳಿನ ಕಾರ್ಯ ಏನೆಂಬುದು ಈಗ ನಿಮಗೆ ಅರ್ಥವಾಗಿರಬೇಕಲ್ಲವೆ. ಮದ್ಯಪಾನ ಮಾಡಿದ ವ್ಯಕ್ತಿ ತೂರಾಡಲು ಕಾರಣ, ಮದ್ಯ ಕಿರುಮಿದುಳನ್ನು ಕುಗ್ಗಿಸುವುದು.

ಮಿದುಳು ಕಾಂಡ:
ಮಿದುಳಿನ ಬಾಲದಂತಿರುವ ಈ ಭಾಗ ಅತ್ಯಂತ ಮುಖ್ಯವಾದುದು. ಏಕೆಂದರೆ ಈ ಭಾಗಕ್ಕೆ ಅತ್ಯಲ್ಪ ಹಾನಿಯಾದರೂ ವ್ಯಕ್ತಿಗೆ ಪ್ರಜ್ಞೆ ತಪ್ಪುತ್ತದೆ. ಇನ್ನಷ್ಟು ಹಾನಿಯಾದರೆ ಕೋಮ ಸ್ಥಿತಿ ಉಂಟಗುತ್ತದೆ. ಮತ್ತಷ್ಟು ಹಾನಿಯಾದರೆ ಸಾವು ಸಂಭವಿಸುತ್ತದೆ. ಅಪಘಾತದಲ್ಲಿ ಮಿದುಳು ಕಾಂಡಕ್ಕೆ ಹಾನಿಯುಂಟಾಗಿ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿ, ಕೋಮಾ ಸ್ಥಿತಿಯನ್ನು ತಲುಪುವುದನ್ನು ನೀವೆಲ್ಲ ಕೇಳಿರುತ್ತೀರಿ.

ಮಿದುಳಿನ ಕಾಂಡದಲ್ಲಿ ಪಾನ್, ಮಿಡ್ ಬ್ರೇನ್ ಮತ್ತು ಮೆಡುಲ್ಲಾ ಅಬ್ಲಾಂಗೇಟ ಎಂಬ ಮೂರು ಭಾಗಗಳಿವೆ. ಮೆಡುಲ್ಲಾ ಅಬ್ಲಾಂಗೇಟಾ, ಮಿದುಳ ಬಳ್ಳಿಯಾಗಿ ಬೆನ್ನಿಗಿಳಿಯುತ್ತದೆ.

ಕ್ರಮಬದ್ಧವಾಗಿ ಉಸಿರಾಡುವುದು, ರಕ್ತದೊತ್ತಡವನ್ನು ಒಂದು ನಿರ್ದಿಷ್ಟ ಮಟ್ಟದಲ್ಲಿಡುವುದು, ಹೃದಯ ಮಿಡಿತದ ನಿಯಂತ್ರಣ, ಆಹಾರವನ್ನು ನುಂಗುವುದು, ವಾಕರಿಕೆ, ವಾಂತಿಯನ್ನು ಉತ್ಪತ್ತಿ ಮಾಡುವುದು, ಮೆಡುಲ್ಲಾದ ಕೆಲಸ. ಮೆಡುಲ್ಲಾದ ಕೆಳಗೆ ಮಿದುಳ ಬಳ್ಳಿಯನ್ನು ಕತ್ತರಿಸಿ ಹಾಕಿದರೆ ರಕ್ತದೊತ್ತಡ ಸೊನ್ನೆಗೆ ಇಳಿಯುತ್ತದೆ. ಉಸಿರಾಟ ನಿಂತು ಸಾವು ಸಂಭವಿಸುತ್ತದೆ.

ಪೋಲಿಯೋ ರೋಗಾಣುಗಳೂ ಮೆಡುಲ್ಲಾಗೆ ಹಾನಿಯನ್ನುಂಟು ಮಾಡಬಹುದು. ಮಿದುಳಕಾಂಡದ ಮೇಲ್ಭಾಗವನ್ನು ಪಾನ್ಸ್ ಅಥವಾ ನರಸೇತು ಎಂದು ಕರೆಯುತ್ತಾರೆ. ಮೇಲ್ಗಡೆ ಮಧ್ಯ ಮಿದುಳಿದೆ. (ಮಿಡ್ ಬ್ರೇನ್) ಈ ಭಾಗದ ಮೂಲಕ ನಾವು ಅಸ್ಪಷ್ಟವಾಗಿ ಕೇಳಬಹುದು ಮತ್ತು ನೋಡಲೂಬಹುದು.

ಬಲಮಿದುಳು ಮತ್ತು ಎಡಮಿದುಳಿನ ವಿಶಿಷ್ಟ ಕಾರ್ಯಗಳು:
ನಾಲ್ಕು ದಶಕಗಳ ಹಿಂದೆ, ಮಿದುಳಿನ ಒಂದು ಭಾಗವನ್ನು ಪ್ರಧಾನ ಎಂದೂ ಇನ್ನೊಂದನ್ನು ಪ್ರಧಾನವಲ್ಲದ್ದು ಎಂದು ಗುರುತಿಸಲಾಗುತ್ತಿತ್ತು. ಬಲಗೈಯನ್ನು ಹೆಚ್ಚು ಬಳಸುವವರಲ್ಲಿ ಎಡಮಿದುಳು ಪ್ರಧಾನವೆಂದು (Dominant Hemisphere), ಎಡಗೈಯನ್ನು ಹೆಚ್ಚು ಬಳಸುವವರಲ್ಲಿ ಬಲಮಿದುಳು ಪ್ರಧಾನವೆಂದೂ ನಂಬಲಾಗಿತ್ತು. ಈ ಭಾಗವೇ ದೇಹದ ಮತ್ತು ಮನಸ್ಸಿನ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತವೆ ಎಂದು ನಂಬಲಾಗಿತ್ತು.

ಮಿದುಳಿನ ‘ಕಾರ್ಪಸ್ ಕಲೋಸಮ್’ (ಎಡ ಮತ್ತು ಬಲಗೋಳಗಳನ್ನು ಸೇರಿಸುವ ಸೇತು) ಅನ್ನು ಸೀಳಿ, ಎಡ ಮತ್ತು ಬಲ ಮಿದುಳನ್ನು ಪ್ರತ್ಯೇಕಿಸಿ ಅನೇಕ ಪ್ರಯೋಗಗಳನ್ನು ಮಾಡಲಾಯಿತು. ಹಾಗೆಯೇ ನಾನಾ ಕಾರಣಗಳಿಂದ ಬಲಮಿದುಳು ಅಥವಾ ಎಡ ಮಿದುಳು ಹಾನಿಗೀಡಾದವರನ್ನು ಅಧ್ಯಯನ ಮಾಡಲಾಯಿತು ಹಾಗು ಮಿದುಳಿನ ಕಾರ್ಯವನ್ನು PETಸ್ಕ್ಯಾನ್ FMRI ಮುಖಾಂತರ ಅಭ್ಯಾಸ ಮಾಡಲಾಯಿತು. ಇವಲ್ಲ ಅಧ್ಯಯನಗಳ ಫಲಶೃತಿಯಿಂದ ಎಡ ಮತ್ತು ಬಲ ಮಿದುಳಿನ ವಿಶಿಷ್ಟ ಕಾರ್ಯಗಳನ್ನು ಗುರುತಿಸಲಾಗಿದೆ.

ಎಡ ಮಿದುಳಿನ ಕೆಲಸಗಳು:
೧) ಭಾಷಾ ಸಾಮರ್ಥ್ಯ: ಭಾಷೆ/ಭಾಷೆಗಳನ್ನು ಕಲಿಯುವುದು, ಭಾಷೆಯನ್ನು ಸಂವಹನಕ್ಕೆ ಯಶಸ್ವಿಯಾಗಿ ಬಳಸುವುದು, ಭಾಷಾ ಪಾಂಡಿತ್ಯವನ್ನು ಸಾಧಿಸುವುದು.

೨) ಗಣಿತ, ಲೆಕ್ಕಾಚಾರ: ಅಂಕಿ ಅಂಶಗಳನ್ನು ಅರ್ಥ ಮಾಡಿ ಕೊಳ್ಳುವುದು, ಸರಳ ಗಣಿತದಿಂದ ಹಿಡಿದು ಸಂಕೀರ್ಣ ಹಾಗೂ ವಿಶೇಷ ಗಣಿತ ಸಾಮರ್ಥ್ಯ.

೩) ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅರ್ಥಮಾಡುವುದು, ಅದರಲ್ಲಿ ಪಾಂಡಿತ್ಯ ಮತ್ತು ಕೌಶಲ್ಯಗಳನ್ನು ಸಂಪಾದಿಸುವುದು.

೪) ಸೂಕ್ಷ್ಮಾವಲೋಕನ : ಸಣ್ಣ ಪುಟ್ಟ ವಿವರಗಳನ್ನು ಗಮನಿಸುವುದು.

೫) ಶಬ್ಧರೂಪದ ಮಾಹಿತಿಯ ಸಂಗ್ರಹಣೆ ಮತ್ತು ನೆನಪು.

೬) ಚಿಂತನೆ : ವಿಮರ್ಶಾತ್ಮಕ, ತಾರ್ಕಿಕ, ಅಮೂರ್ತ ಚಿಂತನೆ, ಸಮಸ್ಯಾ ವಿಶ್ಲೇಷಣೆ, ತೀರ್ಮಾನ ನಿರ್ಧಾರ ಕೈಗೊಳ್ಳುವುದು ಇತ್ಯಾದಿ.

ಬಲಮಿದುಳಿನ ಕೆಲಸಗಳು:
೧)ಭಾವನೆಗಳ ಪ್ರಕಟಣೆ, ಸಮಯ – ಸಂದರ್ಭಕ್ಕೆ ಸೂಕ್ತವಾದ ರೀತಿಯಲ್ಲಿ ಭಾವನೆಗಳ ಅಭಿವ್ಯಕ್ತಿ.

೨) ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿಯಾಗಿ ಎಲ್ಲ ಲಲಿತ ಕಲೆಗಳಲ್ಲಿ ಆಸಕ್ತಿ ಮತ್ತು ಚಟುವಟಿಕೆ.

೩) ಧರ್ಮ ಮತ್ತು ಆಧ್ಯಾತ್ಮಿಕ ವಿಚಾರಗಳು.

೪) ದೃಶ್ಯರೂಪದ ಮಾಹಿತಿಯ ಸಂಗ್ರಹಣೆ ಮತ್ತು ನೆನಪು.

೫) ಸಂಬಂಧಗಳನ್ನು ಉಳಿಸಿಕೊಳ್ಳುವುದು/ ಬೆಳೆಸುವುದು.

೬) ಕ್ಷೇತ್ರಜ್ಞಾನ : ಪ್ರತಿಯೊಂದು ವಸ್ತುವಿನ ಆಕಾರ, ವಸ್ತು ವಸ್ತು ನಡುವಿನ ಅಂತರ, ಅಗಲ, ಉದ್ದ, ಆಳ ದೂರವನ್ನು ಗುರುತಿಸುವುದು. ಉದಾಹರಣೆಗೆ ಟೇಬಲ್ ಮೇಲಿರುವ ಪಾತ್ರೆಯನ್ನು ಎತ್ತಿ ಬೇರೆಡೆಗೆ ಇಡಲು, ದೇಹವನ್ನು ಕೈಯನು ಎಷ್ಟು ಚಲಿಸಬೇಕು. ವಾಹನ ಚಲಿಸುವಾಗ, ಇರುವ ಜಾಗದಲ್ಲಿ ವಾಹನ ನುಗ್ಗಬಹುದೆ, ಎದುರಿನ ವಾಹನ ಎಷ್ಟು ದೂರದಲ್ಲಿದೆ. ಟೇಕ್ ಓವರ್ ಮಾಡಬಹುದೇ, ಭೂಪಟ ನೋಡಿದಾಗ ಉತರ/ದಕ್ಷಿಣ ಇತ್ಯಾದಿ ದಿಕ್ಕುಗಳನ್ನು ಅರ್ಥಮಾಡಿಕೊಳ್ಳುವುದು.

ನರಕೋಶ:

ಮಿದುಳಿನ ಕಾರ್ಯ ಘಟಕವೇ ನರಕೋಶ, ನ್ಯೂರಾನ್ ಅಥವಾ ನರ್ವೆ‍ಸೆಲ್. ಮಿದುಳಿನಲ್ಲಿ ಸುಮಾರು ೧೦,೦೦೦ಕೋಟಿ ನರಕೋಶಗಳಿವೆ! ನರಕೋಶದಲ್ಲಿ ಮೂರು ಭಾಗಗಳಿವೆ. ಒಡಲು, ಕವಲುಗಳು ಮತ್ತು ಬಾಲ (Body, Dendrites and Axon). ಬಾಲದ ಕವಲುಗಳು ಇತರೆ ನರಕೋಶಗಳ ಕವಲುಗಳೊಂದಿಗೆ ಸಂಪರ್ಕದಲ್ಲಿರುತ್ತವೆ. ಒಂದು ಕವಲಿನ ತುದಿ ಮತ್ತು ಮತ್ತೊಂದು ಕೋಶದ ಕವಲಿನ ತುದಿಯ ನಡುವೆ ಜಾಗವಿದ್ದು, ಇದನ್ನು ಸೈನಾಪ್ಸ್ ಎನ್ನುತ್ತಾರೆ. ನರಸಂದೇಶ ಬಂದಾಗ, ನರ ತುದಿಯಲ್ಲಿ ಸಂಗ್ರಹವಾಗಿರುವ ನರವಾಹಕ ಕಣಗಳು ಸೈನಾಪ್ಸ್‌ನ ಒಳಕ್ಕೆ ಚೆಲ್ಲಲ್ಪಡುತ್ತವೆ. ನರಸಂದೇಶ ಬಂದಾಗ, ಮತ್ತೊಂದು ತುದಿಯ “ರಿಸೆಪ್ಟಾ‌ರ್‍ಗಳ” ಜೊತೆಗೆ ಸಂಪರ್ಕ ಸಾಧನ ಸಂದೇಶದ ಸಾಗಾಟದಲ್ಲಿ ಪಾಲ್ಗೊಳ್ಳುತ್ತವೆ, ನರಬಾಲವನ್ನು ಒಂದು ತೆಳುಪೊರೆ ಆವರಿಸಿರುತ್ತದೆ. ಈ ಪೊರೆಯಲ್ಲಿ ಶ್ವಾನ್ ಕೋಶಗಳಿರುತ್ತದೆ. “ಮೈಲಿನ್” ಸವೆದುಹೋದರೆ ನರತಂತುಗಳಲ್ಲಿ ಸಂದೇಶ ಸಾಗಾಟಕ್ಕೆ ಅಡ್ಡಿಯುಂಟಾಗುತ್ತದೆ.

ನರಕೋಶಗಳ ಸಾಮಾನ್ಯ ಲಕ್ಷಣವೆಂದರೆ ಅವು ಪ್ರಚೋದನೆ ಗೊಳ್ಳುತ್ತವೆ. ಭೌತಿಕ, ರಾಸಾಯನಿಕ, ಯಾಂತ್ರಿಕ ಅಥವಾ ವಿದ್ಯುತ್‌ ರೂಪದಲ್ಲಿ ಪ್ರಚೋದನೆಗಳಿರಬಹುದು. ಇವು ಉತ್ಪಾದಿಸಿದ ಮಾಹಿತಿ, ನರ ತಂತುವಿನ ಉದ್ದಕ್ಕೂ ಸಾಗುತ್ತದೆ. ಇದನ್ನು ಆವೇಗ ಅಥವಾ ವಿದ್ಯುದಾವೇಗ ಎಂದು ಕರೆಯುತ್ತಾರೆ. ಈ ಸಂದೇಶ ಸಾಗಾಟದಲ್ಲಿ ಪೊಟಾಶಿಯಂ, ಸೋಡಿಯಂ ಲವಣಗಳು ಪಾಲ್ಗೊಳ್ಳುತ್ತವೆ. ಒಂದು ನರ ತುದಿ ಮತ್ತೊಂದು ನರತುದಿಯ ಜೊತೆ ಸೇರುವ ಸ್ಥಳ ನರಸಂಧಿಯಲ್ಲಿ “ನರವಾಹಕ” (Neuro transmitters) ಗಳದೇ ಕಾರುಬಾರು. ನೂರಕ್ಕೂ ಹೆಚ್ಚಿನ ನರವಾಹಕಗಳಿವೆ. ಮುಖ್ಯವಾದವು ಅಸೀಟೈಲ್ ಕೋಲಿನ್, ಅಡ್ರಿನಲಿನ್, ನಾರ್‌ಅಡಿನಲಿನ್, ಡೋಪಮಿನ್, ಗ್ಲೈಸಿನ್, ಗಾಬಾ, ಗ್ಲುಟಾಮಿಕ್ ಆಮ್ಲ, ಸೆರೋಟೋನಿನ್ ಇತ್ಯಾದಿ. ಈ ನರವಾಹಕಗಳ ಪ್ರಮಾಣ ಮತ್ತು ಅವುಗಳ ಕಾರ್ಯಕ್ಷಮತೆ ಏರುಪೇರು ಆದಲ್ಲಿ, ಮಾನಸಿಕ ತೊಂದರೆ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದು ಗಮನಾರ್ಹ. ಉದಾಹರಣೆಗೆ

ಅಸಿಟೈಲ್ ಕೋಲಿನ್ ಕಡಿಮೆಯಾದರೆ – ಮರೆವು ಹೆಚ್ಚುತ್ತದೆ.

ಡೋಪಮಿನ್ ಕಡಿಮೆಯಾದರೆ – ಖಿನ್ನತೆ ಕಾಯಿಲೆ ಕಾಣಿಸಿಕೊಳ್ಳುತ್ತದೆ.

ಡೋಪಮಿನ್ ಹೆಚ್ಚಾದರೆ – ಮೇನಿಯಾ ಕಾಯಿಲೆ

ಗಾಬಾ ಹೆಚ್ಚಾದರೆ – ಆತಂಕ, ಭಯ ಉಂಟಾಗುತ್ತದೆ.

ಡೋಪಮಿನ್ ವ್ಯವಸ್ಥೆ ಅತಿ ಚುರುಕಾದರೆ – ತೀವ್ರ ಮಾನಸಿಕ ಕಾಯಿಲೆ ಕಾಣಿಸಿಕೊಳ್ಳುತ್ತದೆ
*

Previous post ಬಗೆ ಬಗೆ ದೀಪಾವಳಿ ಬೆಳಗುತ್ತಿದೆ
Next post ಫೈಲು

ಸಣ್ಣ ಕತೆ

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ವಿಷಚಕ್ರ

  "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys