ರೆಮಾಂಡ್ ಪೀಟರ್ ಅಲ್ರಿ ಅಂವಾ ಡೈಮಂಡ್ ಪೀಟರ್!

ಅಂತು ಇಂತು ಚಾಮುಂಡೇಸ್ವರಿ ಕ್ಷೇತ್ರದಾಗೆ ಸದ್ದುಗದ್ದಲ ಇಲ್ದಂಗೆ ಲಾಂಗು ಮಚ್ಚು ಮ್ಯಾಕೇಳ್ದಂಗೆ ರಕ್ತದೋಕುಳಿ ಆಡ್ದಂಗೆ ಯಲಕ್ಷನ್ ಮುಗಿದೋಗದೆ ಅಂಬೋದೇ ಟೆಂತ್‍ವಂಡರ್. ಹಿಂಗಾಗ್ಲಿಕ್ಕೆ ಯಾರಪ್ಪಾ ಕಾರಣ? ಕಾಂಗ್ರಸ್ನೋಗೆ ಭಗವಂತ ಒಳ್ಳೆ, ಬುದ್ಧಿ ಕೊಟ್ನೆ? ದೃತರಾಷ್ಟ ಸುಯೋಧನರಿಗೆ ಒಳ್ಳೆ ಗ್ಯಾನ ಬಂದಿದ್ದಾತೆ! ಎಲ್ಡೂ ಕೊಚ್ಚೆ, ಇಚೆ ಬಂದಂಗೆ ನೆಡ್ಕೊಂಬವೆಯಾ. ಎಲ್ಡು ಗೂಳಿಗೂ ಮೂಗೂದಾಣ ಹಾಕಿದ ರಿಯಲ್ ಗಂಡು ಅಂದ್ರೆ ರೆಮಾಂಡ್ ಪೀಟರ್. ೪೮ ಮಾಜಿ ಮಂತ್ರಿಗಳು ಕೋಜಾ ಸರ್ಕಾರದ ಎಲ್ಲಾ ಮಂತ್ರಿಗಳು ಕಂತ್ರಿಗಳು ಸ್ಯಾಸಕರು ಸೇಕಂಡು ಸಿ‌ಎಂ, ಡಿಸಿ‌ಎಂ, ಜೊತೆಗೆ ದೊಡ್ಡ ಗೋಡ್ರೂ ಯಾವಾಗ ಚಾಮುಂಡೇಸ್ವರಿನಾಗೆ ಕಾಲುಮಡಗಿ ಗದ್ದಲ ಶುರು ಮಾಡಿದ್ರೋ ಪೀಟರ್ ಭಲೆ ಹುಷಾರಾಗಿಬಿಟ್ಟ. ಬಿಹಾರದಂತಹ ಬೀಹಾರದ ಯಲಕ್ಷನ್ಗೆ ಮೂಗುದಾಣ ಹಾಕಿ ರೌಡಿಸಮ್ಮೇ ನೆಡಿದಂಗೆ ಮಾಡಿದ ರಣಧೀರ. ಛಪ್ರಾ ಲೋಕಸಭಾ ಚುನಾವಣೆನಾಗ ತಾನು ಹೇಳ್ದಂಗೆ ನೆಡಿಲಿಲ್ಲ ಅಕ್ರಮವೇ ಸಕ್ರಮವಾಗ್ತಾ ಅದೆ ಅಂತ ತಿಳಿಯತ್ಲೂ ಚುನಾವಣೆನೇ ಮುಂದೂಡಿದ ಸರದಾರ. ಕಾಂಗ್ರೆಸ್ ನೋವ್ರು ಜೆಡಿ‌ಎಸ್ ನೋವು ಏನೇನೋ ಆಟ ಆಡಬೇಕಂತ ಇದ್ದೋವ್ಕೆ ಪೀಟರ್ ದನಿ ಎತ್ತದಂಗೆ ಒಂದೊಂದೇ ಕಾನೂನು ಕಟ್ಲೆ ಜಾರಿ ಮಾಡ್ತಿದ್ದಂಗೆ ಯಲಕ್ಷನ್ನೇ ಎಲ್ಲಿ ಕನೆಕ್ಷನ್ ತಪ್ಪಿ ಎಕ್ಕುಟಿ ಹೋತದೋ ಅಂತ ಗಾಬರಿ ಬಿದ್ದು ಹೋದ್ವು.

ಸಿದ್ರಾಮುಗೆ ಎಂದೆಂದಿಗೂ ಆರಾಮಾಗಿರೋ ಹಂಗೆ ಮಾಡ್ಬೇಕಂತ ದೊಡ್ಡ ಗೋಡ್ರು ಯಲಕ್ಷನ್ ಮಧ್ಯದಾಗೆ ಕೇರಳ ಚೆನ್ನೈಗೆ ಓಡಿದರು. ಮಲೆಯಾಳಿ ಮಾಂತ್ರಿಕನ್ನ ಕೊಂಗಾಟಿ ಮಾಟದೋನ್ನ ಹಿಡ್ದು ಸಿದ್ರಾಮ ರಕ್ತ ಕಾರಿ ಸಾಯೋವಂಗೆ ನಿಂಬೆಹಣ್ಣ ಕೊಯ್ಸಿಸವರೆ. ನಾಕು ಕಾಲಿನ ಜೀವರಾಶಿ ಜೊತೆಗೆ ಆರುಕಾಲಿಂದೂ (ನೊಣ) ಬಲಿ ಕೂಡಿಸವರೆ ಅಂತ ಸುದ್ಧಿ ಹಬ್ಬುತ್ಲು ಕಾಂಗ್ರೆಸ್ನೊವ್ಕೆ ಫೀವರು, ಸಿದ್ರಾಮುಗೆ ಫೀಯರು. ಮ್ಯಾಟರ್ ತಿಳಿದ ಮೈಸೂರು ಮಾರಾಜರೇ ದೊಡ್ಡ ಸರೀರ ಹೊತ್ಕೊಂಡು ಬಂದೇ ಬಿಟ್ಟರು. ‘ಡೋಂಟ್ ಫೀಯರ್ ಐ ಆಮ್ ಹಿಯರ್ ಸಿದ್ದು’ ಅಂತ ಕರ್ಕೊಂಡು ಹೋಗಿ ಮಾರ್ಕಂಡೇಯ ಜಪತಪ ಹೋಮ ಮಾಡಿಸಿ ಮಾಟಕ್ಕೆ ತಿರುಗು ಮಾಟ ಮಾಡಿಸಿದರು. ದೊಡ್ಡ ಸರೀರದ ದೊಡ್ಡರುದಯ ಮಾರಾಜದು. ಒನ್ಸ್ ಅಪನೇ ಟೈಮು ಅರಮನೆನೇ ಕಸ್ಕೊಂಬಾಕೆ ಹೊಂಟಿದ್ದ ಸಿದ್ದು ಪರವಾಗಿ ಕ್ಯಾನ್‌ವಾಸೂ ಮಾಡಿದರೆನ್ನಿ. ಆದರೆ ಮೈಸೂರಿನ ಮಾಪ್ರಜೆಗಳು ಏಟರ ಮಟ್ಟಿಗೆ ಮಾರಾಜರಿಗೆ ಮರ್ಯಾದೆ ಸಲ್ಲಿಸವರೆ ಅಂತ ತಿಳಿಯಾಕೆ ಏಳನೇ ತಾರೀಕಿನಂದು ಪ್ರಕಟವಾದ ರಿಸಲ್ಟೇ ಹೇಳ್ತದ್ರಿ.

ಅದೆಂಗಾರ ಇರವಲ್ದ್ಯಾಕೆ ರೆಮಾಂಡ್ ಪೀಟನ ಮೈಸೂರು ಮಂಡ್ಯ ಮಂದಿ ಅಷ್ಟೇ ಅಲ್ಲಿ ಇಡೀ ಕರ್ನಾಟಕವೇ ಡೈಮಂಡ್ ಪೀಟರ್ ಅಂತ ಹಾಡಿ ಹೊಗಳಿಕತ್ತದ. ಉಗುಳಿ ಕತ್ತಿರೋರು ಅಪ್ಪ ಮಕ್ಕಳು ಮಾತ್ರವೆ. ಗೋಡ್ರಂತೂ ಗಾಂಧಿಮಾತ್ಮನ ಪ್ರತಿಮೆ ಬಾಜು ಧರಣಿಗೇ ಕುಕ್ಕಂಡ್ರು. ‘ಮಿಸ್ಪರ್ ಪೀಟರ್ ಯು ಆರ್ ಎ ಗೋಸ್ಟ್… ಅಷ್ಟೇ ಅಲ್ಲ ಯು ಆರ್ ಎ ಸೋನಿಯಾಗಾಂಧಿ ಹೋಸ್ಟ್. ನಮ್ಮನ್ನ ಮುಂಡಾ ಮೋಚೋಕೆ ಅಂತ್ಲೆ ಬಂದಿಯಲೆ ವೇಸ್ಟ್. ಕಾಂಗ್ರೆಸ್ನೋರು ದೂರು ಮರ್ಜಿ ಕೂಡುತ್ಲು ಪೋಲಿಸ್ ಅಧಿಕಾರಿಗಳ್ನ ಎತ್ತಂಗಡಿ ಮಾಡ್ದೆ. ನನ್ನ ಮುತ್ತಿನಂಥ ಮಗನಿಗೆ ಛೀಮಾರಿ ಹಾಕ್ದೆ. ಅಟ್ಲೀಸ್ಟ್ ಮಾಜಿ ಪಿ‌ಎಂ ನಾನಿಲ್ಲಿದೀನಿ ಅನ್ನೋ ಭಯಾನನ ಬ್ಯಾಡ್ವೇನ್ಲೆ ಬದ್ಮಾಷ್? ಪಾರ್ಷಿಯಾಲಿಟಿ ಮಾಡ್ತಿದಿಯಾ… ಕಾಂಗ್ರೆಸ್ ಕಣ್ಣಿಗೆ ಬೆಣ್ಣೆ ಇಕ್ಕಿ ನಮ್ಮ ಕಣ್ಣಿಗೆ ಸುಣ್ಣ ಇಕ್ತಿಯಾ? ಇದನ್ನೆಲ್ಲಾ ಮಾತ್ಮಾಗಾಂಧೀನೇ ನೋಡಿಕೊಳ್ಳಿ ಅಂತಹಾಡ್ತಾ ಪ್ರತಿಮೆ ಮುಂದಾಗಡೆ ಲೀಟರ್ಗಟ್ಲೆ ಕಣ್ಣೀರು ಸುರಿಸಿದರು. ನಿನ್ನ ಮೇಲೆ ಆಕ್ಶನ್ ತಗೋತೀನಿ ಅಂತ ಗೋಡ ಗುಡುಗುತ್ತಿರುವಾಗಲೆ ದರಿದ್ರ ಫೇಸ್ಕಟ್ಟಿನ ಹೊರಟ್ಟಿ ಮೇಷ್ಟ್ರೂ ಮೇಡಮ್‌ಗುಳ್ನಕುಂಡ್ರಿಸ್ಕ್ಯಂಡು ಓಟು ಹಾಕೋ ಪಾಠ ಹೇಳ್ತಾ ಅವನೆ ಅಂತ ನ್ಯೂಸಾತು. ಹಿಂದಾಗಡೆನೇ ರಾಕ್ಷಸ ಫೇಸ್ಕಟ್ಟಿನ ಚೆಲುವ ಚೆನ್ನಿಗ ಮಾಧ್ಯಮದೋರ್ಗೆ ಬೈದು ಒದ್ದು ಕ್ಯಾಮರಾ ಕಸ್ಕೊಂಡು ದೊಡ್ಡ ಗದ್ದಲ ಮಾಡಿಕ್ಯಂಡ. ಮತ್ತೆ ಪೀಟರ್ ಮೈಸೂರು ವೀಳ್ಯ ಹಾಕ್ಕಂಡು ಇವರ ಮಕ್ಕೆ ಉಗಿದ. ಗೋಡ್ರು ಅಂಡು ಸುಟ್ಟ ಬೆಕ್ಕಿನಂಗೆ ಗಪ್ ಕುಂತರು. ಪೀಟರ್ ಆದ್ರೇನು ಜಾನ್ ಆದ್ರೇನು, ಸೋನಿ ಮೇಡಂ ಯಾನೇಛೂಬಿಡ್ಲಿ ಹಾಕಿಸ್ಲಿ ವೋಂಟ್ ಕೇರ್.

ಗೆದ್ದರೆ ಉಪ್ಪರಿಗೆ ಸೋತ್ರೆ ತಿಪ್ಪೆಗೆ ಅಂತ ಡಿಸೈಡ್ ಮಾಡ್ಕೊಂಡ ಸಿದ್ದು ರೆಸ್ಟ್ ತಗೆಣಾಕೆ ಸಿಕ್ರೇಟ್ ಪ್ಲೇಸ್ಗೆ ಹೋದ್ರೆ ಗುರುಸಾಮಿ ಟಿವಿ ಹಾಕ್ಕಂಡು ಸಂಗೀತ ಕೇಳ್ತಾ ನಿದ್ದೆ ಹೋದ. ಶಿವಬಸಜ್ಜ ಮೊಮ್ಮಕ್ಕಳ ಸಂಗಡ ಕುಂಟೆಬಿಲ್ಲೆ ಆಡಿದರೆ, ಕುರಣಾಕರ ಮರುಚುನಾವಣೆ ಆಗ್ಲಿ ನನ್ಗೆ ಅನ್ಯಾಯ ಆಗೇತಿ ಅಂತ  ಕರುಣಾಜನಕವಾಗಿ ಅತ್ತರೂ ಕೇಳೋರೇ ದಿಕ್ಕಿಲ್ರಿ. ಉಳಿದೋರು ಠೇವಣಿ ಆಸೆಬಿಟ್ಟು ಹೆಂಡ್ರು ಮಕ್ಕಳ್ನ ಕೂಡಿಕೊಂಡು ಸಿಲಿಮಾ ನೋಡ್ಲಿಕ್ಕೆ ಹೊಂಟರು. ಕುಮಾಸಾಮಿ ಭಾಳದಿನದ ಮ್ಯಾಗೆ ಅನಿತಕ್ಕನ ಕೈ ರುಚಿ ನೋಡಿ ಬೆಡ್ ರೆಸ್ಟ್‌ನಾಗಿದ್ದರೆ, ಗೋಡ್ರು ಮಾತ್ರ ಪೀಟರ್ಗೆ ಸಹಸ್ರ ನಾಮಾರ್ಚನೆ ಮಾಡ್ತಾ ಕಣ್ಣೀರು ಸುರಿತ್ತಾ ಸಾಂತಿಯುತ ಮತದಾನವಾಗಿದ್ದರ ಹಿನ್ನೆಲೆನಾಗೆ ಸೋನಿಯಾ ಮೇಡಂನ ಮಸಲತ್ ಐತೆ. ಪೀಟರ್ದು ಅತಿ ಆತು ಆ ಏಸು ಸ್ವಾಮಿನೇ ಇವರ್ಗೆಲ್ಲಾ ಸದ್ಬುದ್ಧಿ ಕೊಡ್ಲಿ ಅಂತ ಗೃಹ ಸಚಿವ ಪ್ರಕಾಸು ಜೊತೆ ಕೋರಸ್ ಹಾಡ್ಲಿಕತ್ತಾರಿ! ಯಲಕ್ಷನ್ನಾಗೆ ದುಡಿದು ಹೈರಾಣಾದ ಜೆಡಿ‌ಎಸ್ ಕಾಂಗ್ರೆಸ್‌ನ ಲೀಡರ್ಸ್ ಸ್ಯಾಸಕರೆಲ್ಲಾ ಸಾಮೂಹಿಕವಾಗಿ ನಿದ್ದೆ ಹೊಡಿಲಿಕತ್ತಿದ್ದು ಕಂಡ ಇಡೀ ಇಧಾನಸೌಧವೇ ಮಕಾಡೆ ಮಲ್ಕಂಡದೆ!

ನಿದ್ದೆ ಮಾಡ್ಡೆ ಎದದ್ದಿರೋನು ಒಬ್ನೆಯಾ! ಯಾರು ಹೇಳಿ ನೋಡೋಂವಾ? ನೋ ಢೌಟ್ ಅದೆ! ಸದಾ ಹಲ್ಲುಗಿಸಗ ಸದಾ ಆನಂದಗೋಡ. ಇರೋಧಿಗಳಿಂದ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಕುತ್ತು ಬಂದದೆ. ಸಪೋಲ್ಟರ್ ಯಡೂರಿನೂ ಸಪ್ಪೆಗಾಗವ್ನೆ. ಹಿಂಗಾರೆ ನಿದ್ರೆ ಹೆಂಗೆ ಬಂದಿತೇಳ್ರಿ. ಅಜ್ಜಿಗೆ ಅರಿವೆ ಚಿಂತೆಯಾದ್ರೆ ಮೊಮ್ಮಗಳಿಗೆ ಅದ್ಯಾವಂದೋ ಚಿಂತೆಯಂತೆ ಹಂಗಾತ್ರಪಾ. ಇದನ್ನು ಓದೋದ್ರಾಗೆ ಗ್ಯಾರಂಟಿ ಯಾರೋ ಒಬ್ಬರು ಯಲಕ್ಷನ್ದಾಗೆ ಗೆದ್ದಿರ್ತಾರೆ. ಗೆದ್ದೋರ್ಗೆ ರೆಸ್‌ಪೆಕ್ಟು ಸೋತೋರ್ಗೆ ನೆಗ್‌ಲೆಕ್ಟು. ಇದೇ ರಾಜಕೀಯದ ಪಟ್ಟು ಗುಟ್ಟು ಅಲ್ರಾ?
*****

(೨೦-೧೨-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ಹಾಡಿಗೆ
Next post ನಗೆ ಡಂಗುರ – ೧೦೩

ಸಣ್ಣ ಕತೆ

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ಕನಸು ದಿಟವಾಯಿತು

  ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…