ಹಿಡಿಯೊಳಗೇ ಅವಿತು
ಮೆಲ್ಲಗೆ ಮಿಸುಕು
ಜಾಡು ತಪ್ಪುವ ಭಯಕ್ಕೆ
ಬೊಗಸೆ ಮೀರದ ಬದುಕು.

ಏಕಿಂಥ ಕೀಳರಿಮೆ
ಹಿಡಿಯಲ್ಲೇ ಹುಡಿಯಾಗುವ ಹುಚ್ಚು?
ಕಣ್ತೆರೆದಷ್ಟೂ ಕಾಣುತ್ತದೆ ಬೆಳಕು
ಮೊದಲು ದೀಪ ಹಚ್ಚು.

ಹಾರು ಹಾರೆಲೆ ಹಾಡೇ
ಭುವಿಯಿಂದ ಬಾನಿಗೆ
ಅಳೆದುಬಿಡು ಎಲ್ಲೆಗಳ
ಅಡಿಯಿಂದ ಮುಡಿಗೆ.

ಹಾಡು ಹಾಡೆಲೆ ಹಾಡೇ
ಎಲ್ಲ ಎಲ್ಲೆಯ ಮೀರಿ
ಎಲ್ಲ ಎಲ್ಲವೂ ನೀನಾಗು
ನಿನ್ನೊಳಗೇ ಎಲ್ಲವಾಗಿ!

ಅರಳಲಿ ಎದೆಹೂಗಳು
ಕರಗಲಿ ಕಟುಕ ಒಡಲು
ಬಿರಿದೊಡೆಯಲಿ ಕರಿಮುಗಿಲು
ಉಕ್ಕಲಿ ಪ್ರೀತಿ ಕಡಲು.
*****