ಕಲ್ಲು ಕರಗಿತು ಮಣ್ಣು ಕರಗಿತು
ಬಯಲು ಬಯಲೇ ಉಳಿಯಿತು
ಎಲುವು ಕರಗಿತು ನರವು ಕರಗಿತು
ಜ್ಯೋತಿ ಮಾತ್ರವೆ ಉಳಿಯಿತು ||೧||

ಮೌಢ್ಯ ಕರಗಿತು ಜಾಢ್ಯ ಕರಗಿತು
ಹೂವು ಹೂವೆ ಅರಳಿತು
ಮುಳ್ಳು ಕರಗಿತು ಸುಳ್ಳು ಕರಗಿತು
ಆತ್ಮ ಪಕ್ಷಿಯು ಹಾರಿತು ||೨||

ಬಾನಿನಾಚೆಗೆ ನೀಲದಾಚೆಗೆ
ಆಚೆ ಆಚೆಗೆ ಸಾರಿತು
ಚಂದ್ರನಾಚೆಗೆ ಸೂರ್ಯನಾಚೆಗೆ
ರುಂದ್ರ ಸತ್ಯವ ಸೇರಿತು ||೩||

ಏನು ಸಂಪೈ ಎನಿತು ತಂಪೈ
ಕಂಪು ಕಂಪನು ಕೂಡಿತು
ಸಂತೆ ಹೋಯಿತು ಚಿಂತೆ ಜಾರಿತು
ಪ್ರೀತಿಯೊಂದೆ ಉಳಿಯಿತು ||೪||
*****