ರಂಗಣ್ಣನ ಕನಸಿನ ದಿನಗಳು – ೨೨

ರಂಗಣ್ಣನ ಕನಸಿನ ದಿನಗಳು – ೨೨

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

ಮಾರನೆಯ ದಿನ ಜನಾರ್ದನಪುರಕ್ಕೆ ಹಿಂದಿರುಗುವ ಮೊದಲು ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿಗಳನ್ನು ಹೊಕ್ಕು ಹೋಗೋಣವೆಂದು ರಂಗಣ್ಣನಿಗೆ ಅನ್ನಿಸಿತು. ಅದನ್ನು ಶಂಕರಪ್ಪನಿಗೆ ತಿಳಿಸಿ, `ಜನಾರ್ದನಪುರಕ್ಕೆ ಗೋಪಾಲ ಹಿಂದಿರುಗಲಿ ನಾವು ಆ ಹಳ್ಳಿಗಳ ವ್ಯಾಜ್ಯಗಳನ್ನು ಪರಿಹರಿಸಿ ಅನಂತರ ಊರು ಸೇರೋಣ’ ಎಂದು ಹೇಳಿದನು.

`ಸ್ವಾಮಿ! ಆ ಹಳ್ಳಿಗಳ ವ್ಯಾಜ್ಯ ಬಹಳ ತೊಡಕು. ಆ ಜನ ಬಹಳ ಒರಟು. ಹಿಂದಿನ ಇನ್‌ಸ್ಪೆಕ್ಟರು ಬಹಳ ಭಂಗಪಟ್ಟು ಹೋದರು!’ ಎಂದು ಶಂಕರಪ್ಪ ಹೇಳಿದನು.

`ಎಲ್ಲವೂ ಸರಿಯೆ. ಆದರೆ ಸಾಹೇಬರು ಹೇಳಿದ್ದಾರಲ್ಲ! ನಾವು ಸಹ ಆ ವ್ಯಾಜ್ಯಕ್ಕೆ ಏನಾದರೊಂದು ಪರಿಹಾರವನ್ನು ಹುಡುಕಬೇಕಾಗಿದಯಲ್ಲ, ಹಾಗೆಯೇ ಬೆಳಸುವುದು ಚೆನ್ನಾಗಿಲ್ಲ.’

`ತಮ್ಮ ಚಿತ್ತ ಸ್ವಾಮಿ! ಹೋಗೋಣ’

ಹಳ್ಳಿಗಳ ಜಗಳ ಹನುಮಂತನಿಗೂ ಗರುಡನಿಗೂ ಆದ ಯುದ್ಧದ ಮತ್ತು ಗರುಡಗರ್ವ ಭಂಗದ ಪೌರಾಣಿಕ ಕಥೆಯನ್ನು ನಮ್ಮ ಸ್ಮರಣೆಗೆ ತರಬಹುದು. ಯಾವ ಮಹಾರಾಯರು ಆ ಹಳ್ಳಿಗಳಿಗೆ ಆ ಹೆಸರುಗಳನ್ನು ಇಟ್ಟರ! ಒಂದು ಗ್ರಾಟು ಸ್ಕೂಲಿನ ವಿಚಾರದಲ್ಲಿ ಆ ಹಳ್ಳಿಗಳಿಗೆ ಪ್ರಬಲವಾದ ಜಗಳಗಳು ನಡೆಯುತ್ತಿದ್ದವು. ಗರುಡನ ಹಳ್ಳಿಗೂ ಹನುಮನ ಹಳ್ಳಿಗೂ ಮೂರೇ ಮೂರು ಫರ್ಲಾಂಗು ಅಂತರ. ಒಂದೊಂದರಲ್ಲಿ ಸುಮಾರು ಇನ್ನೂರೈವತ್ತು ಪ್ರಜಾಸಂಖ್ಯೆಯಿದ್ದು ಒಟ್ಟಿನಲ್ಲಿ ಐನೂರು ಜನಸಂಖ್ಯೆ ಆ ಪಂಚಾಯತಿಗೆ ದಾಖಲಾಗಿತ್ತು. ಆ ಎರಡು ಹಳ್ಳಿಗಳಿಂದಲೂ ಒಂದೇ ಗ್ರಾಮಪಂಚಾಯತಿ; ಅರ್ಧ ಸದಸ್ಯರು ಗರುಡನ ಹಳ್ಳಿ ಯವರು, ಉಳಿದರ್ಧ ಹನುಮನ ಹಳ್ಳಿಯವರು. ಚೇರಮನ್ನು ಗರುಡನ ಹಳ್ಳಿಯ ಪಟೇಲ್, ಕಾರ್ಯದರ್ಶಿ ಹನುಮನ ಹಳ್ಳಿಯ ಶ್ಯಾನು ಭೋಗ್, ಒಂದೇ ಪಂಚಾಯತಿ ಆದರೂ, ಗರುಡನ ಹಳ್ಳಿಯಲ್ಲೊಂದು ಪಂಚಾಯತಿ ಹಾಲ್ ! ಹನುಮನ ಹಳ್ಳಿಯಲ್ಲೊಂದು ಪಂಚಾಯತಿ ಹಾಲ್ ! ಒಂದು ತಿಂಗಳು ಪಂಚಾಯತಿಯ ಮೀಟಿಂಗು ಗರುಡನ ಹಳ್ಳಿಯಲ್ಲಿ ಸೇರಿದರೆ, ಮುಂದಿನ ತಿಂಗಳು ಹನುಮನ ಹಳ್ಳಿಯಲ್ಲಿ ಸೇರುತ್ತಿತ್ತು. ಹೀಗೆ ಪರ್ಯಾಯ ಕ್ರಮದಲ್ಲಿ ಪಂಚಾಯತಿ ಸಭೆ ಎರಡು ಹಳ್ಳಿಗಳಲ್ಲಿಯೂ ನಡೆಯುವಂತೆ ಏರ್ಪಾಡಾಗಿತ್ತು.

ಪಂಚಾಯತಿಯವರು ಗರುಡನ ಹಳ್ಳಿಯಲ್ಲಿ ಸಭೆ ಸೇರಿದ ಒಂದು ತಿಂಗಳಲ್ಲಿ ಒಂದು ಪಾಠಶಾಲೆಯನ್ನು ಸರಕಾರದವರು ಕೊಡಬೇಕೆಂದೂ ಸಾಮಾನುಗಳಿಗಾಗಿ ಒಂದು ನೂರು ರುಪಾಯಿಗಳನ್ನು ಖಜಾನೆಗೆ ಕಟ್ಟಿರುವುದಾಗಿಯೂ ತಿಳಿಸಿ ನಿರ್ಣಯಮಾಡಿ ಇಲಾಖೆಗೆ ಕಳಿಸಿಕೊಟ್ಟರು. ಇಲಾಖೆಯವರು ಅಲ್ಲಿಗೆ ಒಂದು ಗ್ರಾಂಟ್ ಸ್ಕೂಲನ್ನು ಮಂಜೂರ್ ಮಾಡಿದರು, ಹಿಂದಿನ ಇನ್ಸ್‌ಪೆಕ್ಟರು ಒಬ್ಬ ಮೇಷ್ಟ್ರನ್ನು ಗೊತ್ತು ಮಾಡಿ ಪಾಠ ಶಾಲೆಯನ್ನು ತೆರೆಯುವಂತೆಯೂ ಗ್ರಾಮಸ್ಥರಿಗೆ ಹೇಳಿ ಬೆಂಚು, ಬೋರ್ಡು ಮೊದಲಾದುವನ್ನು ಕಚೇರಿಯಿಂದ ತೆಗೆಸಿಕೊಂಡು ಹೋಗ ಬೇಕೆಂದೂ ಅಪ್ಪಣೆ ಮಾಡಿದರು. ಅವರು ಕೊಟ್ಟ ಅಪ್ಪಣೆಯಲ್ಲಿ ಹನುಮನ ಹಳ್ಳಿಯ ಪಂಚಾಯತಿ ಹಾಲಿನಲ್ಲಿ ಪಾಠಶಾಲೆಯನ್ನು ತೆರೆಯಬೇಕೆಂದು ಹೇಳಿತ್ತು. ಆ ಮೇಷ್ಟ್ರು ಗರುಡನ ಹಳ್ಳಿ ಯಾವುದು ? ಹನುಮನ ಹಳ್ಳಿ ಯಾವುದು ? ಎಂಬುದು ತಿಳಿಯದೆ ಆರ್ಡರ್ ತೆಗೆದು ಕೊಂಡು ಬರುತ್ತ ದಾರಿಯಲ್ಲಿ ಮೊದಲು ಸಿಕ್ಕ ಗರುಡನ ಹಳ್ಳಿಯಲ್ಲಿ ಅದನ್ನು ತೋರಿಸಿದನು. ಚೇರ್ಮನ್ ಆಗಿದ್ದ ಪಟೇಲನು ಮೇಷ್ಟ್ರನ್ನು ಅಲ್ಲಿಯೇ ನಿಲ್ಲಿಸಿಕೊಂಡು ಹುಡುಗರನ್ನು ಜಮಾಯಿಸಿಕೊಟ್ಟು ಪಾಠಶಾಲೆಯ ಪ್ರಾರಂಭೋತ್ಸವವನ್ನು ನೆರವೇರಿಸಿದನು ; ಮತ್ತು ಮಾರನೆಯ ದಿನ ಗಾಡಿಯನ್ನು ಜನಾರ್ದನಪುರಕ್ಕೆ ಕಳಿಸಿ ಬೋರ್ಡ ಬೆಂಚು ಮೊದಲಾದುವನ್ನು ತರಿಸಿ ಕೊಂಡನು. ಪಾಠಶಾಲೆಯನ್ನು ಪಂಚಾಯತಿಯ ಚೇರ್ಮನ್ನಿನ ಆಜ್ಞಾನುಸಾರವಾಗಿ ಪ್ರಾರಂಭ ಮಾಡಿರುವುದಾಗಿಯೂ ಸಾಮಾನುಗಳನ್ನೆಲ್ಲ ದಾಖಲೆಗೆ ತೆಗೆದುಕೊಂಡಿರುವುದಾಗಿಯೂ ಮೇಷ್ಟ್ರು ಇನ್ಸೆಪೆಕ್ಟರಿಗೆ ರಿಪೋರ್ಟು ಮಾಡಿದ್ದಾಯಿತು.

ಹೀಗೆ ಗರುಡನ ಹಳ್ಳಿಯಲ್ಲಿ ಸ್ಕೂಲ್ ಸ್ಥಾಪಿತವಾಯಿತೆಂದು ತಿಳಿಯುತ್ತಲೂ ಪಂಚಾಯತಿಯ ಕಾರ್ಯದರ್ಶಿಯಾದ ಶ್ಯಾನುಭೋಗನು ಜನರನ್ನು ಕಟ್ಟಿ ಕೊಂಡು ಹೋಗಿ ಚೇರ್ಮನ್ನನನ್ನು ಕಂಡು ಪಂಚಾಯತಿಯ ರೆಜಲ್ಯೂಷನ್ನಿನಂತೆ ಸ್ಕೂಲನ್ನು ಹನುಮನ ಹಳ್ಳಿಯಲ್ಲಿ ಸ್ಥಾಪಿಸ ಬೇಕಲ್ಲದೆ ಗರುಡನ ಹಳ್ಳಿಯಲ್ಲಿ ಸ್ಥಾಪಿಸಕೂಡದೆಂದು ಜಗಳ ತೆಗೆದನು. ಆದರೆ ಗರುಡನ ಹಳ್ಳಿಯಲ್ಲಿ ಜನ ಗುಂಪು ಕಟ್ಟಿ, ’ಸ್ಕೂಲ್ ನಮ್ಮದು, ನಿಮ್ಮ ಹುಡುಗರನ್ನು ಇಲ್ಲಿಗೇನೆ ಕಳಿಸಿಕೊಡಿ. ನಮ್ಮ ಆಕ್ಷೇಪಣೆಯಿಲ್ಲ ? ಎಂದು ಹೇಳಿದರು. ಅದರಮೇಲೆ ಶ್ಯಾನುಭೋಗನು ತನ್ನ ಹಳ್ಳಿಯ ಪಂಚಾಯತಿಯ ಮೆಂಬರುಗಳನ್ನು ಜೊತೆಗೆ ಕಟ್ಟಿಕೊಂಡು ಜನಾರ್ದನ ಪುರಕ್ಕೆ ಹೋಗಿ ಇನ್ಸ್‌ಪೆಕ್ಟರ್ ಸಾಹೇಬರನ್ನು ಕಂಡು ನಿಂಬೆಯ ಹಣ್ಣುಗಳನ್ನು ಕೈಗೆ ಕೊಟ್ಟು, ತೆಂಗಿನ ಕಾಯಿ ಖರ್ಜೂರ ಬಾದಾಮಿ ಕಲ್ಸಕ್ಕರೆ ಬಾಳೆ ಹಣ್ಣುಗಳ ತಟ್ಟೆಗಳನ್ನು ಮೇಜಿನ ಮೇಲಿಟ್ಟು, ಅಹವಾಲನ್ನು ಹೇಳಿ ಕೊಂಡನು. ಪಂಚಾಯತಿ ಮೆಂಬರುಗಳು, `ಸ್ವಾಮಿ ! ಹನುಮನ ಹಳ್ಳಿಯಲ್ಲಿಯೇ ಇ ಸ್ಕೂಲ್ ಸ್ಥಾಪಿತವಾಗಬೇಕೆಂದು ಪಂಚಾಯತಿಯ ರೆಜಲ್ಯೂಷನ್ ಆಗಿದೆ. ತಾವು ಸಹ ಹನುಮನ ಹಳ್ಳಿಯಲ್ಲಿಯೆ ಇ ಸ್ಕೂಲ್ ಮಾಡು ಎಂದು ಮೇಷ್ಟರಿಗೆ ತಾಕೀತು ಮಾಡಿದ್ದೀರಿ. ಆದರೂ ಚೇರ್ಮನ್ನು ಜುಲುಮಿನಿಂದ ಗರುಡನ ಹಳ್ಳಿಯಲ್ಲೇ ಮೇಷ್ಟರನ್ನು ನಿಲ್ಲಿಸಿ ಕೊಂಡು ಇ ಸ್ಕೂಲನ್ನು ಅಲ್ಲೇ ಮಾಡಿಸುತ್ತಿದ್ದಾನೆ. ಈ ಅನ್ಯಾಯವನ್ನು ಪರಿಹರಿಸಬೇಕು’ ಎಂದು ಕೈ ಮುಗಿದು ಕೇಳಿಕೊಂಡರು. ಇನ್ಸ್‌ಪೆಕ್ಟರು ತಮ್ಮ ಆಜ್ಞೆಯಂತೆ ಮೇಷ್ಟ್ರು ನಡೆಯಲಿಲ್ಲವಲ್ಲ ಎಂದು ಕೋಪಗೊಂಡರು; ರೆಜಲ್ಯೂಷನ್ನಿಗೆ ವ್ಯತಿರಿಕ್ತವಾಗಿ ಇನ್ಸ್‌ಪೆಕ್ಟರು ನಡೆದರೆಂದು ಪಂಚಾಯತಿ ಮೆಂಬರುಗಳು ಎಲ್ಲಿ ಅರ್ಜಿ ಹಾಕುವರೋ ಎಂದು ಹೆದರಿಕೊಂಡರು; ಮತ್ತು ಮೇಜಿನಮೇಲಿದ್ದ ಕಾಣಿಕೆಗಳನ್ನು ನೋಡಿ ಸುಪ್ರೀತರಾದರು. ಅವುಗಳ ಪರಿಣಾಮವಾಗಿ ಮೇಷ್ಟರಿಗೆ, `ಹನುಮನ ಹಳ್ಳಿಗೇನೆ ಸಾಮಾನು ಸಾಗಿಸಿಕೊಂಡು ಹೋಗಿ ಅಲ್ಲಿಯೇ ಪಾಠ ಮಾಡಬೇಕು. ಇಲ್ಲವಾದರೆ ಸಂಬಳ ಕೊಡುವುದಿಲ್ಲ.’ ಎಂದು ಹುಕುಂ ಮಾಡಿ ಅದರ ನಕಲನ್ನು ಶ್ಯಾನುಭೋಗನ ಕೈಯಲ್ಲಿ ಕೊಟ್ಟು ಕಳುಹಿಸಿದರು.

ಮಾರನೆಯ ದಿನ ಮೇಷ್ಟರಿಗೆ ಹುಕುಂ ತಲುಪಿತು. ಸಾಮಾನನ್ನು ತರಲು ಹನುಮನ ಹಳ್ಳಿಯಿಂದ ಗಾಡಿಯೂ ಹೋಯಿತು. ಗರುಡನ ಹಳ್ಳಿಯವರು ಸಾಮಾನು ಕೊಡಲಿಲ್ಲ ; ಮೇಷ್ಟರು ಹೋಗುವುದಕ್ಕೂ ಅವಕಾಶಕೊಡದೆ ತಡೆದುಬಿಟ್ಟರು. ಹನುಮನ ಹಳ್ಳಿಯವರಿಗೆ ರೇಗಿ ಹೋಯಿತು. ದೊಣ್ಣೆಗಳನ್ನೆತಿಕೊಂಡು ಹೊರಟು ಗರುಡನ ಹಳ್ಳಿಗೆ ಮುತ್ತಿಗೆ ಹಾಕಿದರು! ಗರುಡನ ಹಳ್ಳಿಯವರು ತಮ್ಮಲ್ಲೂ ದೊಣ್ಣೆಗಳುಂಟೆಂದು ತೋರಿಸುತ್ತ ಕದನಕ್ಕೆ ಸಿದ್ದರಾದರು! ಸ್ವಲ್ಪ ಮಾರಾಮಾರಿ ಆಯಿತು! ಅಷ್ಟರಲ್ಲಿ ಶ್ಯಾನುಭೋಗನಿಂದ ಪೊಲೀಸಿಗೆ ಯಾದಿಹೋಯಿತು. ಇದನ್ನು ತಿಳಿದು ಕೊಂಡು ಜನ ಸ್ವಲ್ಪ ಚದರಿದರು. ಸ್ವಲ್ಪ ಹೊತ್ತಿನ ಮೇಲೆ ಸಮಾಧಾನ ಸ್ತಿತಿ ಏರ್ಪಟ್ಟಿತು.

ಮಾರನೆಯ ದಿನ ಮೇಷ್ಟರು ಹನುಮನ ಹಳ್ಳಿಗೆ ಹೋಗಿ ಶ್ಯಾನು ಭೋಗನನ್ನು ಕಂಡನು. ಆತನು ಪಂಚಾಯತಿ ಹಾಲಿನಲ್ಲಿ ಹುಡುಗರನ್ನು ಜಮಾಯಿಸಿಕೊಟ್ಟು ಪಾಠಶಾಲೆಯನ್ನು ಅಲ್ಲಿ ನಡೆಸುವಂತೆ ಹೇಳಿದನು. ಇದರ ಫಲವಾಗಿ ದಾಖಲೆಗಳೂ ಸಾಮಾನುಗಳೂ ಗರುಡನ ಹಳ್ಳಿಯಲ್ಲಿ ಉಳಿದುಕೊಂಡುವು; ಮೇಷ್ಟ್ರು ಮಾತ್ರ ಹನುಮನ ಹಳ್ಳಿಯಲ್ಲಿ ಹುಡುಗರಿಗೆ ಪಾಠ ಹೇಳುತ್ತ ಕಾಲ ಕಳೆದನು, ಇನ್ಸ್‌ಪೆಕ್ಟರವರ ಹುಕುಮಿನಂತೆ ಅವನು ನಡೆದುಕೊಂಡದ್ದರಿಂದ ಸಂಬಳವೇನೋ ತಿಂಗಳು ತಿಂಗಳಿಗೆ ತಪ್ಪದೆ ಬರುತ್ತಿತ್ತು. ಶ್ಯಾನುಭೋಗನ ಬೆಂಚು, ಬೋರ್ಡು ಮೊದಲಾದ ಸಾಮಾನುಗಳನ್ನೂ ಹಾಜರಿ ರಿಜಿಸ್ಟರ್ ಮೊದಲಾದ ದಾಖಲೆಗಳನ್ನೂ ಗರುಡನ ಹಳ್ಳಿಯಿಂದ ತರಿಸಿಕೊಡಬೇಕೆಂದು ಅಮಲ್ದಾರರಿಗೂ, ಸ್ಕೂಲ್ ಇನ್‌ಸ್ಪೆಕ್ಟರಿಗೂ ಅರ್ಜಿಗಳನ್ನು ಗುಜರಾಯಿಸಿದನು. ಸ್ಕೂಲ್ ಇನ್‌ಸ್ಪೆಕ್ಟರವರು ಪೊಲೀಸ್ ಇನ್‌ಸ್ಪೆಕ್ಟರಿಗೂ ಅಮಲ್ದಾರರಿಗೂ ಕಾಗದಗಳನ್ನು ಬರೆದು ಅವರ ಕುಮ್ಮಕ್ಕಿನಿಂದ ದಾಖಲೆಗಳನ್ನ ಸಾಮಾನುಗಳನ್ನೂ ಹನುಮನ ಹಳ್ಳಿಗೆ ವರ್ಗಾಯಿಸಿದರು. ಈ ಬಲಾತ್ಕಾರ ಪ್ರಯೋಗದಿಂದ ಹನುಮನ ಹಳ್ಳಿಯವರಿಗೂ ಗರುಡನ ಹಳ್ಳಿಯವರಿಗೂ ಬಲವಾದ ದ್ವೇಷ ಬೆಳೆದು ಪರಸ್ಪರವಾಗಿ ಜನರು ಹೋಗಿ ಬರುವುದು ನಿಂತುಹೋಯಿತು. ಜೊತೆಗೆ ಗರುಡನ ಹಳ್ಳಿಯವರಿಗೆ ಛಲಹುಟ್ಟಿ, ಅವರು ಪಂಚಾಯತಿ ಚೇರ್ಮನ್ ಮತ್ತು ತಮ್ಮ ಹಳ್ಳಿಯಲ್ಲಿದ್ದ ಪಂಚಾಯತಿ ಮೆಂಬರುಗಳನ್ನು ಮುಂದುಮಾಡಿಕೊಂಡು ಮೇಲ್ಪಟ್ಟ ಸಾಹೇಬರಲ್ಲಿಗೆ ಹೋದರು. ನಿಂಬೆಯಹಣ್ಣುಗಳು, ಒಂದು ಗೊನೆ ರಸಬಾಳೆಹಣ್ಣು, ಎರಡು ಹಲಸಿನಹಣ್ಣುಗಳು, ಎಳನೀರು ಮೊದಲಾದ ಕಾಣಿಕೆಗಳನ್ನು ತೆಗೆದು ಕೊಂಡು ಹೋಗಿ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡು ಅಹವಾಲನ್ನು ಹೇಳಿಕೊಂಡರು ಸಾಹೇಬರು ಸಾವಧಾನವಾಗಿ ಎಲ್ಲವನ್ನೂ ಕೇಳಿ ಇನ್ಸ್‌ಪೆಕ್ಟರ್ ಮಾಡಿದ್ದು ತಪ್ಪೆಂದು ತೀರ್ಮಾನಿಸಿಕೊಂಡು, ಪಾಠ ಶಾಲೆಯನ್ನು ಗರುಡನ ಹಳ್ಳಿಗೆ ವರ್ಗಾಯಿಸಿ ಹುಕುಂ ಮಾಡಿದರು. ಮಧ್ಯಾಹ್ನ ಗರುಡನ ಹಳ್ಳಿಯವರು ಆ ಹುಕುಮಿನ ನಕಲನ್ನು ತೆಗೆದುಕೊಂಡು ಜಯಘೋಷ ಮಾಡುತ್ತ ಕಚೇರಿಯಿಂದ ಹೊರಟು ತಮ್ಮ ಹಳ್ಳಿಯನ್ನು ಸೇರಿದರು. ಇನ್ಸ್‌ಪೆಕ್ಟರಿಗೂ ಹುಕುಮಿನ ನಕಲುಹೊಯಿತು. ಅವರು ಆ ಹುಕುಮಿನಂತೆ ಹನುಮನ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ ಮೇಷ್ಟರಿಗೆ ತಾಕೀತು ಮಾಡಿದರು. ಪುನಃ ಅವನು ಗರುಡನ ಹಳ್ಳಿಗೆ ಹೋಗಿ ಕೆಲಸಮಾಡತೊಡಗಿದನು!

ಹನುಮನ ಹಳ್ಳಿಯವರು ಶ್ಯಾನುಭೋಗನ ಮುಖಂಡತನದಲ್ಲಿ ಪಂಚಾಯತಿ ಹಾಲಿನಲ್ಲಿ ಸಭೆ ಸೇರಿದರು. ತಮಗೆ ಅಪಜಯವಾದುದಕ್ಕೆ ಖಿನ್ನರಾದರು. `ಯುದ್ಧದಲ್ಲಿ ಜಯಾಪಜಯಗಳು ದೈವ ಯೋಗದಿಂದ ಉಂಟಾಗತಕ್ಕುವು. ಆದರೂ ಮನುಷ್ಯನು ಕಾರ್ಯ ಸಾಧನೆಯ ಪ್ರಯತ್ನ ವನ್ನು ಬಿಡಬಾರದು’ ಎಂದು ಶ್ಯಾನುಭೋಗನು ಅವರಿಗೆಲ್ಲ ಸಮಾಧಾನ ಹೇಳಿ, ಊರ ಜನರನ್ನು ಕಟ್ಟಿಕೊಂಡು, ಎರಡು ಗೊನೆ ರಸಬಾಳೆಹಣ್ಣು, ಒಂದು ಮಣ ಒಳ್ಳೆಯ ತುಪ್ಪ, ಹಲಸಿನಹಣ್ಣುಗಳು, ದ್ರಾಕ್ಷಿ, ಖರ್ಜೂರ ಬಾದಾಮಿ- ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಒಬ್ಬರು ಮುಖಂಡರನ್ನು ಮುಂದುಮಾಡಿಕೊಂಡು ಡೆಪ್ಯುಟಿ ಡೈರೆಕ್ಟರ್ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡನು ; ಕಾಣಿಕೆಗಳನ್ನು ಒಪ್ಪಿಸಿದನು. ಆ ದೊಡ್ಡ ಗುಂಪನ್ನು ಆ ಸಾಹೇಬರು ನೋಡಿ ನ್ಯಾಯ ಅವರ ಕಡೆಯೇ ಇರುವುದೆಂದು ತೀರ್ಮಾನಿಸಿಕೊಂಡು, ಆ ಸ್ಕೂಲು ಸಂಬಂಧವಾದ ಕಡವನ್ನು ತರಿಸಿಕೊಂಡು ಹುಕುಂ ಮಾಡಿದರು : `ಇನ್ಸ್‌ಪೆಕ್ಟರು ಪಂಚಯತಿಯ ರೆಜಲ್ಯೂಷನ್ನಿನಂತೆ ಸರಿಯಾಗಿ ಏರ್ಪಾಟು ಮಾಡಿದ್ದರು. ಡಿ. ಇ. ಓ. ಸಾಹೇಬರು ಅದನ್ನು ಬದಲಾಯಿಸಿ ಸ್ಕೂಲನ್ನು ಗರುಡನ ಹಳ್ಳಿಗೆ ವರ್ಗಾಯಿಸಿದ್ದು ಶುದ್ಧ ತಪ್ಪು. ಈಗ ಮೊದಲಿನಂತೆಯೇ ಸ್ಕೂಲನ್ನು ಹನುಮನ ಹಳ್ಳಿಯಲ್ಲಿ ನಡೆಸಬೇಕು. ಆ ಬಗ್ಗೆ ರಿಪೋರ್ಟು ಮಾಡಬೇಕು’ ಎಂದು ಹುಕುಮಿನಲ್ಲಿತ್ತು. ಅದರ ನಕಲನ್ನು ನೇರವಾಗಿ ಇನ್‌ಸ್ಪೆಕ್ಟರ್ ಅವರಿಗೂ ಕಳಿಸಿಬಿಟ್ಟು, ಕೂಡಲೇ ರಿಪೋರ್ಟು ಮಾಡ ಬೇಕೆಂದು ತಿಳಿಸಿದರು. ತಾನು ಮಾಡಿದ್ದ ಏರ್ಪಾಟನ್ನೇ ಡೆಪ್ಯುಟಿ ಡೈರೆಕ್ಟರ್ ಸಾಹೇಬರು ಮಂಜೂರ್ ಮಾಡಿದ್ದನ್ನೂ ಡಿ, ಇ, ಓ ಸಾಹೇಬರ ಹುಕುಮನ್ನು ರದ್ದು ಪಡಿಸಿದ್ದನ್ನೂ ನೋಡಿ ಇನ್ಸ್‌ಪೆಕ್ಟರಿಗೆ ಬಹಳ ಸಂತೋಷವಾಯಿತು. ಆ ಹುಕುಮಿನಂತೆ ತಾವು ಮೇಷ್ಟರಿಗೆ ತಾಕೀತು ಮಾಡಿ, ಆ ವಿಚಾರವನ್ನು ಮೇಲ್ಪಟ್ಟ ಇಬ್ಬರು ಅಧಿಕಾರಿಗಳಿಗೂ ತಿಳಿಸದರು. ಪಾಪ! ಆ ಮೇಷ್ಟ್ರು ಹುಕುಮನ್ನು ನೋಡಿಕೊಂಡು ಪುನಃ ಹನುಮನಹಳ್ಳಿಗೆ ಹೊರಟು ಹೋದನು! ಮೇಲೆ ಹೇಳಿದ ವರ್ಗಾವರ್ಗಿಗಳ ಗಲಾಟೆಯಿಂದ ಸ್ಕೂಲ್ ಕೆಲಸ ಎಲ್ಲಿಯೂ ಚೆನ್ನಾಗಿ ನಡೆಯಲಿಲ್ಲ. ಆದರೆ ವರ್ಷಕ್ಕೊಂದು ಬಾರಿ ಪದ್ದತಿಯಂತೆ ಮಾಡಬೇಕಾದ ತನಿಖೆಗಾಗಿ ಇನ್ಸ್‌ಪೆಕ್ಟರು ಹನುಮನಹಳ್ಳಿಗೆ ಹೋದರು. ಹೀಗೆ ಅವರು ತನಿಖೆಗಾಗಿ ಬಂದಿರುವ ಸಮಾಚಾರ ಗರುಡನ ಹಳ್ಳಿಗೆ ಮುಟ್ಟಿತು. ಪಂಚಾಯತಿ ಚೇರ್ಮನ್ನು, ಇತರ ಮೆಂಬರುಗಳು, ಮತ್ತು ಜನ ಗರುಡನ ಹಳ್ಳಿಯಿಂದ ಹನುಮನ ಹಳ್ಳಿಗೆ ಹೋದರು. ತಮ್ಮ ಹಟವೇ ಗೆದ್ದ ಉತ್ಸಾಹದಲ್ಲಿ ಇನ್ಸ್‌ಪೆಕ್ಟರು ಆ ಜನರನ್ನು ಎದುರು ಹಾಕಿಕೊಂಡರು. ಆ ಒರಟು ಜನ ಒರಟು ಮಾತುಗಳಲ್ಲಿ ಇನ್ಸ್‌ಪೆಕ್ಟರನ್ನು ಬೈದರು ; ಅವರನ್ನು ಹೊಡೆಯುವುದಕ್ಕೂ ಹೋದರು. ಹನುಮನ ಹಳ್ಳಿ ಯವರು ಅಡ್ಡ ಬಂದು ಆ ಇನ್ಸ್‌ಪೆಕ್ಟರನ್ನು ರಕ್ಷಿಸಿ ಕಡೆಗೆ ಅವರನ್ನು ಜನಾರ್ದನಪುರಕ್ಕೆ ಕ್ಷೇಮವಾಗಿ ಸೇರಿಸಿದರು.

ಮೇಲಿನ ವ್ಯಾಜ್ಯ ಅಷ್ಟರಲ್ಲೇ ಮುಗಿಯಲಿಲ್ಲ. ಗರುಡನ ಹಳ್ಳಿಯವರು ಡೈರೆಕ್ಟರ್ ಸಾಹೇಬರಲ್ಲಿ ಅಪೀಲುಹೋಗಿ ಮನವಿ ಮಾಡಿಕೊಂಡರು; ಬೆಂಗಳೂರಿನಲ್ಲಿ ತಮಗೆ ಬೇಕಾದ ಕೆಲವರು ಮುಖಂಡರ ಸಹಾಯವನ್ನು ಪಡೆದುಕೊಂಡರು. ಒಂದು ವಾರದವರೆಗೂ ಡೈರೆಕ್ಟರ್ ಸಾಹೇಬರ ಕಚೇರಿಗೆ ಮುತ್ತಿಗೆ ಹಾಕಿ ಕಡೆಯಲ್ಲಿ ತಮ್ಮ ಪರವಾಗಿ ಹುಕುಮನ್ನು ಮಾಡಿಸಿದರು: `ಗರುಡನ ಹಳ್ಳಿಯಲ್ಲಿ ನಡೆಯುತ್ತಿದ್ದ ಪಾಠಶಾಲೆಯನ್ನು ಅಲ್ಲಿಂದ ಬದಲಾಯಿಸಿದ್ದು ಶುದ್ಧ ತಪ್ಪು, ಇನ್ ಸ್ಪೆಕ್ಟರೂ ಡೆಪ್ಯುಟಿ ಡೈರೆಕ್ಟರೂ ವಿವೇಚನೆಯನ್ನು ಉಪಯೋಗಿಸಲಿಲ್ಲ. ಇಷ್ಟೆಲ್ಲ ಗಲಭೆಗೆ ಅವರೇ ಕಾರಣರು. ಈಗ ಪ್ರಾರಂಭದಲ್ಲಿದ್ದಂತೆಯೇ ಗರುಡನ ಹಳ್ಳಿಯಲ್ಲಿ ಪಾಠಶಾಲೆ ನಡೆಯಬೇಕು’ ಎಂದು ಕೆಳಗಿನವರಿಗೆ ತಾಕೀತು ಆಯಿತು! ಅದರ ನಕಲನ್ನು ನೇರವಾಗಿ ಇನ್ಸ್‌ಪೆಕ್ಟರಿಗೆ ಕಳಿಸಿಕೊಟ್ಟರು!

ಹೀಗೆ ಒಂದು ಬಾರಿ ಗರುಡನ ಹಳ್ಳಿಯವರಿಗೆ ಜಯ, ಒಂದು ಬಾರಿ ಹನುಮನ ಹಳ್ಳಿಯವರಿಗೆ ಜಯ ಕೈಗೂಡಿ, ಆ ಯುದ್ದ ಸಮುದ್ರ ತರಂಗದಂತೆ ಹಿಂದಕ್ಕೂ ಮುಂದಕ್ಕೂ ಆಂದೋಲನವಾಗುತ್ತಿತ್ತು. ಹನುಮನ ಹಳ್ಳಿಯವರು ತಮಗಾದ ಅಪಜಯವನ್ನು ನೋಡಿ, `ಹೊಳೆಯ ತನಕ ಓಟ, ದೊರೆಯ ತನಕ ದೂರು’ ಎನ್ನುವ ಗಾದೆಯನ್ನು ಜ್ಞಾಪಕಕ್ಕೆ ತಂದುಕೊಂಡು, ಧೈರ್ಯಗುಂದದೆ, ಈ ಯುದ್ಧದಲ್ಲಿ ಗರುಡ ಗರ್ವ ಭಂಗವೇ ಆಗಿ ಪರಮ ಭಕ್ತನಾದ ಹನುಮನ ಹಳ್ಳಿಗೇನೆ ಜಯ ಸಿದ್ದಿಸುವುದೆಂದು ಹುರುಪುಗೊಂಡು ಸರ್ಕಾರಕ್ಕೆ ಅರ್ಜಿಯನ್ನು ಗುಜರಾಯಿಸಿ, ಕೌನ್ಸಿಲರ್ ಸಾಹೇಬರನ್ನು ಅಠಾರಾ ಕಚೇರಿಯಲ್ಲಿ ಕಂಡು ಆಹವಾಲುಗಳನ್ನು ಹೇಳಿಕೊಂಡರು. ಸರ್ಕಾರದವರು ಆ ಅರ್ಜಿಯನ್ನು ರಿಪೋರ್ಟು ಬಗ್ಗೆ ಡೈರೆಕ್ಟರ್ ಸಾಹೇಬರಿಗೆ ಕೊಟ್ಟು ಕಳಿಸಿದರು. ಅದು ಆ ಕಚೇರಿ ಯಿಂದ ಪದ್ಧತಿಯಂತೆ ಡೆಪ್ಯುಟಿ ಡೈರೆಕ್ಟರವರ ಕಚೇರಿಗೂ ಅಲ್ಲಿಂದ ಡಿ. ಇ. ಓ. ಸಾಹೇಬರ ಕಚೇರಿಗೂ ಇಳಿದು ಬಂದು, ಕಟ್ಟ ಕಡೆಯಲ್ಲಿ ವಿವರವಾದ ವರದಿಯನ್ನು ಕಳಿಸುವ ಬಗ್ಗೆ ಇನ್ಸ್‌ಪೆಕ್ಟರ್ ರಂಗಣ್ಣನ ಕಚೇರಿಗೆ ಬಂದು ಸೇರಿತು! ಈ ಮಧ್ಯದಲ್ಲಿ ಡೈರೆಕ್ಟರ್ ಸಾಹೇಬರಿಂದ ಡಿ. ಇ. ಓ, ಸಾಹೇಬರಿಗೆ ಬೇಗ ವರದಿ ಕಳಿಸಬೇಕೆಂದೂ ಸರ್ಕಾರಕ್ಕೆ ರಿಪೋರ್ಟು ಮಾಡುವುದು ತಡವಾಗುತ್ತಿರುವುದೆಂದೂ ಖಾಸಗಿ ಪತ್ರ ಬಂತು. ಆದ್ದರಿಂದಲೇ ರಂಗನಾಥಪುರದಲ್ಲಿ ಸಂಘದ ಸಭೆ ಮುಗಿದ ಮೇಲೆ, ಸಾಹೇಬರು ಬಸ್ಸು ಹತ್ತುವ ಹೊತ್ತಿನಲ್ಲಿ ರಂಗಣ್ಣನಿಗೆ ಆ ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಯವನ್ನು ಹೇಗಾದರೂ ಪರಿಹಾರಮಾಡಿ ವರದಿ ಕಳಿಸಬೇಕೆಂದು ಹೇಳಿದ್ದು! ರಂಗಣ್ಣನು ಏನೋ ಒಂದು ಆತ್ಮ ವಿಶ್ವಾಸದಿಂದ, “ಆಗಲಿ ಸಾರ್!” ಎಂದು ಹೇಳಿದ್ದನು.

ರಂಗಣ್ಣನೂ ಶಂಕರಪ್ಪನೂ ಮೊದಲು ಹನುಮನ ಹಳ್ಳಿಗೆ ಹೋಗಿ ಪಂಚಾಯತಿ ಹಾಲಿನಲ್ಲಿ ಕುಳಿತರು. ಇನ್ಸ್‌ಪೆಕ್ಟರ ಸವಾರಿ ಬಂದಿದೆ ಎಂದು ತಿಳಿದು ಶ್ಯಾನುಭೋಗನೂ ಕೆಲವರು ಪಂಚಾಯತಿ ಮೆಂಬರುಗಳೂ ಬಂದರು. ಈಚೆಗೆ ಸ್ಕೂಲನ್ನು ಕಳೆದುಕೊಂಡು ಅಪಜಯದ ನೋವನ್ನು ಅನುಭವಿಸುತ್ತಿದ್ದವರು ಅವರು, `ಏನು ಸ್ವಾಮಿ! ನಿಮ್ಮ ಇಲಾಖೆಯವರ ದರ್ಬಾರು ಅತಿ ವಿಚಿತ್ರವಾಗಿದೆ! ರಿಕಾರ್ಡನ್ನು ನೋಡಿ ನ್ಯಾಯವನ್ನು ದೊರಕಿಸುವುದಕ್ಕೆ ಬದಲು ಬಾಳೇಹಣ್ಣಿನ ಗೊನೆಗಳನ್ನು ನೋಡುತ್ತ ಸಾಹೇಬರುಗಳು ತೀರ್ಮಾನ ಮಾಡುತ್ತಾರೆ!’ ಎಂದು ಅವರು ಕಟುವಾಗಿ ಆಡಿದರು.

`ನಿಮ್ಮ ನಿಮ್ಮಲ್ಲಿ ಈ ವ್ಯಾಜ್ಯವನ್ನು ಪರಿಹಾರ ಮಾಡಿಕೊಳ್ಳದೆ ಬಾಳೇಹಣ್ಣಿನ ಗೊನೆಗಳನ್ನು ಎರಡು ಕಕ್ಷಿಯವರೂ ಏಕೆ ಹೊತ್ತು ಕೊಂಡು ಹೋದಿರಿ?’ ಎಂದು ನಗುತ್ತಾ ರಂಗಣ್ಣ ಕೇಳಿದನು.

`ಈ ವ್ಯಾಜ್ಯ ನಮ್ಮ ನಮ್ಮಲ್ಲೇ ಫೈಸಲ್ ಆಗುವುದಿಲ್ಲ ಸ್ವಾಮಿ!’

`ಗರುಡನ ಹಳ್ಳಿಯವರನ್ನು ಇಲ್ಲಿಗೆ ಕರೆಸಿ, ಅವರ ವಾದವನ್ನು ಕೇಳೋಣ.’

`ಅವರು ಈ ಹಳ್ಳಿಯ ಎಲ್ಲೆಯೊಳಕ್ಕೆ ಬರುವುದಿಲ್ಲ ಸ್ವಾಮಿ!’

`ಒಳ್ಳೆಯದು, ನಡೆಯಿರಿ, ಅವರ ಹಳ್ಳಿಗೇನೆ ನಾವೆಲ್ಲ ಹೋಗೋಣ. ಅಲ್ಲಿಯೂ ಪಂಚಾಯತಿ ಹಾಲ್ ಇದೆಯಲ್ಲ!’

`ನಾವು ಆ ಹಳ್ಳಿಯ ಎಲ್ಲೆಯನ್ನು ಮೆಟ್ಟುವುದಿಲ್ಲ ಸ್ವಾಮಿ!’

`ಹಾಗಾದರೆ ಈ ವ್ಯಾಜ್ಯ ಹೇಗೆ ಫೈಸಲಾಗಬೇಕು?’

`ಸರಕಾರಕ್ಕೆ ಅರ್ಜಿ ಗುಜರಾಯಿಸಿಕೊಂಡಿದ್ದೇವೆ. ನ್ಯಾಯವನ್ನು ನೋಡಿ ನಮ್ಮ ಹಳ್ಳಿಯಲ್ಲಿ ಸ್ಕೂಲು ಮಾಡುವಂತೆ ಹುಕುಂ ಮಾಡಲಿ!’

`ಇಬ್ಬರೂ ತಮ್ಮದೇ ನ್ಯಾಯವೆಂದು ಹೊಡೆದಾಡುತ್ತಿದ್ದೀರಲ್ಲ!’

`ಅದು ಹೇಗೆ ಸ್ವಾಮಿ? ಕಣ್ಣು ಬಿಟ್ಟು ನ್ಯಾಯ ನೋಡಬೇಕು; ನಮ್ಮ ಪಂಚಾಯತಿ ರೆಜಲ್ಯೂಷನ್ ನೋಡಬೇಕು. ತಾವೇ ಈ ರಿಕಾರ್ಡನ್ನು ನೋಡಿ ಸ್ವಾಮಿ!’ ಎಂದು ಹೇಳುತ್ತ ಶ್ಯಾನುಭೋಗನು ಪಂಚಾಯತಿ ಮೀಟಿಂಗ್ ಪುಸ್ತಕವನ್ನು ಕೈಗೆ ಕೊಟ್ಟು, ಹಿಂದೆ ಆದ ಮೀಟಿಂಗಿನ ವರದಿಯಿದ್ದ ಹಾಳೆಯನ್ನು ತೋರಿಸಿದನು. ಅದರಲ್ಲಿ ಹನುಮನಹಳ್ಳಿ ಯಲ್ಲಿ ಸ್ಕೂಲನ್ನು ಮಾಡಬೇಕೆಂದು ತೀರ್ಮಾನವಿತ್ತು.

`ನೋಡಿ ಸ್ವಾಮಿ! ಪಟೇಲನೇ ಚೇರ್ಮನ್ನು, ಸ್ವಹಸ್ತದಿಂದ ರುಜು ಮಾಡಿದ್ದಾನೆ! ಅಕ್ಷರ ತಿಳಿದ ಇತರರು ರುಜು ಮಾಡಿದ್ದಾರೆ! ಅಕ್ಷರ ತಿಳಿಯದ ಮೆಂಬರುಗಳು ಹೆಬ್ಬೆಟ್ಟು ಗುರುತು ಹಾಕಿದ್ದಾರೆ. ಅದಕ್ಕೆ ಚೇರ್ಮನ್ನೇ ಬರಹ ಬರೆದಿದ್ದಾನೆ. ಹೀಗಿದ್ದರೂ ಕೂಡ ಈಗ ಗಂಡಾ ಗುಂಡಿ ವ್ಯಾಜ್ಯ ತೆಗೆಯೋ ಜನಕ್ಕೆ ಛೀಮಾರಿಮಾಡದೆ ಸ್ಕೂಲನ್ನು ಗರುಡನ ಹಳ್ಳಿಗೆ ವರ್ಗಾಯಿಸಿದ್ದೀರಿ!’

`ಈ ರಿಕಾರ್ಡುಗಳನ್ನೆಲ್ಲ ತೆಗೆದುಕೊಳ್ಳಿ ಶ್ಯಾನುಭೋಗರೆ! ಅಲ್ಲಿಗೆ ಹೋಗೋಣ. ನಮ್ಮ ಮರ್ಯಾದೆಗೇನೂ ಕಡಮೆಯಾಗವುದಿಲ್ಲ.’

`ಕ್ಷಮಿಸಬೇಕು ಸ್ವಾಮಿ! ನಾವು ಈಚೆಗೆ ಆ ಹಳ್ಳಿಗೆ ಹೋಗುತ್ತಾ ಇಲ್ಲ! ಆ ಹಳ್ಳಿಯವರೂ ಇಲ್ಲಿಗೆ ಬರುತ್ತಾ ಇಲ್ಲ! ಈಚೆಗೆ ಪಂಚಾಯತಿ ಮೀಟಿಂಗುಗಳನ್ನು ಸಹ ನಾವು ನಡೆಸುತ್ತಾ ಇಲ್ಲ!’

`ಹಾಗಾದರೆ, ಒಂದು ಕೆಲಸ ಮಾಡಿ. ನಿಮ್ಮ ಹಳ್ಳಿಯ ಎಲ್ಲೆಯ ಹತ್ತಿರ ಹೋಗೋಣ, ಅವರನ್ನು ಅಲ್ಲಿಗೆ ಬರಮಾಡಿಕೊಳ್ಳೋಣ.’

`ಏನೋ ಸ್ವಾಮಿ! ತಾವು ಹೇಳುತ್ತೀರಿ. ಮನಸ್ಸಿಲ್ಲದ ಮನಸ್ಸಿನಿಂದ ನಾವು ಒಪ್ಪಿ ಕೊಳ್ಳಬೇಕು. ಗರುಡನ ಹಳ್ಳಿಯವರಂತೆ ಒರಟಾಟ ಮಾಡುವುದಕ್ಕೆ ನಮಗೆ ಇಷ್ಟವಿಲ್ಲ.’

ಕಡೆಗೆ ಹನುಮನ ಹಳ್ಳಿಯವರು ಇನ್ಸ್‌ಪೆಕ್ಟರವರ ಜೊತೆಯಲ್ಲಿ ಹೊರಟರು, ಎಲ್ಲೆಯ ಬಳಿ ಬಂದು ಅಲ್ಲಿದ್ದ ಒಂದು ಆಲದ ಮರದ ಕೆಳಗೆ ಎಲ್ಲರೂ ಕುಳಿತರು. ರಂಗಣ್ಣನೂ ಶಂಕರಪ್ಪನೂ ಗರುಡನ ಹಳ್ಳಿಯ ಕಡೆಗೆ ಹೊರಟರು. ಆಗ ಶ್ಯಾನುಭೋಗನು,

`ಸ್ವಾಮಿ! ಗರುಡನ ಹಳ್ಳಿ ಯವರು ಬಹಳ ಪುಂಡರು. ಹಿಂದಿನ ಇನ್‌ಸ್ಪೆಕ್ಟರನ್ನು ಹೀನಾಮಾನ ಬೈದರು; ಹೊಡೆಯುವುದಕ್ಕೂ ಕೈಯೆತ್ತಿದರು. ಆದರೆ ಆ ಪ್ರಸಂಗ ನಮ್ಮ ಹಳ್ಳಿಯಲ್ಲಿ ನಡೆಯಿತು. ನಾವು ಇನಸ್‌ಪೆಕ್ಟರನ್ನು ರಕ್ಷಿಸಿದೆವು. ಈಗ ನೀವು ಬೆಂಬಲವಿಲ್ಲದೆ ಗರುಡನ ಹಳ್ಳಿಗೆ ಹೋಗುತ್ತೀರಿ. ಆಲೋಚನೆಮಾಡಿ ಸ್ವಾಮಿ! ಬೇಕಾದರೆ ತಳವಾರನ ಕೈಯಲ್ಲಿ ಹೇಳಿ ಕಳಿಸೋಣ’-ಎಂದನು.

`ಶ್ಯಾನುಭೋಗರೇ! ಅವರು ಹೊಡೆದರೆ ಹೊಡೆಸಿಕೊಂಡು ಬರುತ್ತೇನೆ! ನಾನೀಗ ಏನು ಮಾಡಬೇಕು? ನೀವುಗಳಾರೂ ನನ್ನ ಬೆಂಬಲಕ್ಕೆ ಬರುವುದಿಲ್ಲ. ತಮಾಷೆ ನೋಡೋಣವೆಂದು ಇಲ್ಲಿ ಕುಳಿತಿದ್ದೀರಿ. ತಳವಾರನನ್ನು ಕಳಿಸಿದರೆ ಅವರು ಬರುತ್ತಾರೆಯೆ? ನಾನು ಹೋದರೂ ಏನು ಮಾಡುತ್ತಾರೋ ಗೊತ್ತಿಲ್ಲ. ಪ್ರಯತ್ನ ಪಟ್ಟು ನೋಡುತ್ತೇನೆ’ – ಎಂದು ಹೇಳುತ್ತಾ ರಂಗಣ್ಣಹೊರಟನು. ಪಂಚಾಯತಿ ಮೆಂಬರುಗಳು ಒಂದೆರಡು ನಿಮಿಷ ತಂತಮ್ಮಲ್ಲೇ ಆಲೋಚನೆ ಮಾಡಿ ಕೊಂಡು, ಕಡೆಗೆ ಇನ್ಸ್‌ಪೆಕ್ಟರ ಬೆಂಬಲಕ್ಕೆ ನಾಲ್ಕು ಜನ ಆಳುಗಳನ್ನು ಕಳಿಸಿಕೊಟ್ಟರು.

ರಂಗಣ್ಣ ಗರುಡನ ಹಳ್ಳಿಯ ಪಂಚಾಯತಿ ಹಾಲನ್ನು ಪ್ರವೇಶಿಸಿದಾಗ ಸ್ಕೂಲು ನಡೆಯುತ್ತಿತ್ತು. ಮಕ್ಕಳು ಎದ್ದು ನಿಂತುಕೊಂಡು ನಮಸ್ಕಾರ ಮಾಡಿದರು. ಮೇಷ್ಟ್ರು ಕೈ ಮುಗಿದು ದೂರದಲ್ಲಿ ನಿಂತು ಕೊಂಡನು.

`ಮೇಷ್ಟ್ರೆ! ಚೇರ್ಮನ್ನರನ್ನೂ ಪಂಚಾಯತಿಯ ಮೆಂಬರುಗಳನ್ನೂ ಇಲ್ಲಿಗೆ ಕರೆಸಿ’- ಎಂದು ರಂಗಣ್ಣ ಹೇಳಿದನು. ಮೇಷ್ಟ್ರು ತಾನೇ ಹೋಗಿ ಅವರನ್ನು ಕರೆದುಕೊಂಡು ಬಂದನು. ಚೇರ್ಮನ್ನು ಒಳ್ಳೆಯ ಭಾರಿ ಆಳು; ಮುರಿಮೀಸೆ, ಅಗಲವಾದ ಹಣೆ, ಮೆಂಬರುಗಳು ಸಾಮಾನ್ಯವಾಗಿದ್ದರು. ಮಕ್ಕಳನ್ನೆಲ್ಲ ಆಟಕ್ಕೆ ಬಿಟ್ಟು ರಂಗಣ್ಣ ಅವರೊಡನೆ ಮಾತಿಗಾರಂಭಿಸಿದನು.

`ನೀವೆಲ್ಲ ಒಂದೇ ಪಂಚಾಯತಿ ತಾಯಿಗೆ ಸೇರಿದ ಮಕ್ಕಳು. ಅಣ್ಣ ತಮ್ಮಂದಿರಂತೆ ಇದ್ದವರು. ಹಾಳು ಈ ಒಂದು ಗ್ರಾಂಟು ಸ್ಕೂಲಿಗೋಸ್ಕರ ವ್ಯಾಜ್ಯ ಕಾದು ಒಬ್ಬರ ಮನೆಗೆ ಮತ್ತೊಬ್ಬರು ಕಾಲಿಕ್ಕದಷ್ಟು ವೈರ ಬೆಳಸಿಕೊಂಡಿದ್ದಿರಿ. ಏಕೋ ಚೆನ್ನಾಗಿ ಕಾಣುತ್ತಾ ಇಲ್ಲ!’

`ಸ್ವಾಮಿ! ನಾವು ನ್ಯಾಯಬಿಟ್ಟು ಹೋಗೋದಿಲ್ಲ. ಇಸ್ಕೂಲು ಇಲ್ಲದಿದ್ದರೆ ಕತ್ತೆಯ ಬಾಲ ಹೋಯಿತು! ನಮ್ಮದು ಅನ್ಯಾಯ ತೋರಿಸಿ ಕೊಡಿ ಸ್ವಾಮಿ!’ ಎಂದು ಚೇರ್ಮನ್ನು ಗಟ್ಟಿ ಧ್ವನಿಯಲ್ಲಿ ಹೇಳಿದನು.

`ಹನುಮನ ಹಳ್ಳಿಯಲ್ಲೇ ಸ್ಕೂಲು ಮಾಡಬೇಕೆಂದು ಪಂಚಾಯತಿ ರಜಲ್ಯೂಷನ್ ಆಗಲಿಲ್ಲವೋ? ಅದಕ್ಕೆ ವ್ಯತಿರಿಕ್ತವಾಗಿ ನೀವುಗಳೇಕೆ ನಡೆಯುತ್ತೀರಿ? ರಿಕಾರ್ಡು ನೋಡಿ.’

`ಸ್ವಾಮಿ! ಆ ಶ್ಯಾನುಭೋಗರು ಸಾಮಾನ್ಯರಲ್ಲ! ಲೋಕವನ್ನೆ ನುಂಗೋವರು! ಈ ಗರುಡನ ಹಳ್ಳಿಯಲ್ಲೇ ನಾವು ಸಭೆಮಾಡಿ ಆ ದಿನ ಗರುಡನ ಹಳ್ಳಿಯಲ್ಲೇ ಇಸ್ಕೂಲು ಸ್ಥಾಪಿಸಬೇಕು ಎಂದು ತೀರ್ಮಾನ ಮಾಡಿದೆವು. ಮೊದಲು ಹನುಮನ ಹಳ್ಳಿ ಯವರದು ಆಕ್ಷೇಪಣೆ ಇತ್ತು. ಈ ಕಟ್ಟಡದ ಪಕ್ಕದಲ್ಲಿ ನೀರಿನ ಸಣ್ಣ ಕುಂಟೆ ಇದೆ. ತಮ್ಮ ಮಕ್ಕಳು ಪಕ್ಕದಲ್ಲಿ ನಡೆದು ಬರುತ್ತಾ ಬಿದ್ದು ಹೋಗುತ್ತಾರೆ, ಸತ್ತು ಹೋಗುತ್ತಾರೆ; ಆದ್ದರಿಂದ ಹನುಮನ ಹಳ್ಳಿಯಲ್ಲೇ ಇಸ್ಕೂಲು ಮಾಡಬೇಕು ಎಂದರು. ನಾನು ಅದಕ್ಕೆ- ಹನುಮನ ಹಳ್ಳಿಯ ಪಂಚಾಯತಿ ಕಟ್ಟಡದ ಪಕ್ಕದಲ್ಲ ಕುಂಟೆ ಇದೆಯಲ್ಲ! ನಮ್ಮ ಮಕ್ಕಳು ಅಲ್ಲಿ ಬಿದ್ದು ಸಾಯೋದಿಲ್ಲವೇ? ಇದೇನು ಮಾತು! ಕುಂಟೆಯಿದ್ದ ಕಡೆ ಎರಡು ಹಳ್ಳಿಯ ಮಕ್ಕಳಿಗೂ ಅಪಾಯವೇ. ಸದ್ಯಕ್ಕೆ ಈ ಪಂಚಾಯತಿ ಕಟ್ಟಡದಲ್ಲಿ ಇಸ್ಕೂಲ್ ನಡೀತಾ ಇರಲಿ, ಮೂರು ತಿಂಗಳೊಳಗೆ ಈ ಹಳ್ಳಿಯ ಆಚೆ ಇರುವ ಕಲ್ಲು ಮಂಟಪಕ್ಕೆ ಗೋಡೆ ಎತ್ತಿ ಕಿಟಕಿ ಬಾಗಿಲು ಇಟ್ಟು ಪಕ್ಕಾ ಕಟ್ಟಡ ಮಾಡಿಕೊಡುತ್ತೇ. ಎರಡು ಹಳ್ಳಿಯ ಮಕ್ಕಳಿಗೂ ಅನುಕೂಲ ಆಗುತ್ತದೆ-ಎಂದು ಹೇಳಿದೆ. ಗರುಡನ ಹಳ್ಳಿಯಲ್ಲೇ ಇಸ್ಕೂಲ್ ನಡೆಯಬೇಕು ಎಂದು ರಜಲ್ಯೂಷನ್ ಮಾಡಿದೆವು. ಶ್ಯಾನುಭೋಗರು ರೆಜಲ್ಯೂಷನ್ ಬರೆಯೋ ಕಾಲಕ್ಕೆ ಗರುಡನ ಹಳ್ಳಿಗೆ ಬದಲು ಹನುಮನ ಹಳ್ಳಿ ಅಂತ ಬರೆದು ರಿಕಾರ್ಡು ಮಾಡಿಬಿಟ್ಟರು! ಸರಿಯಾಗಿ ಬರೆದಿರಬಹುದು ಎಂದು ನಾನು ನಂಬಿ ಬೇಹುಷಾರಾಗಿ ರುಜು ಮಾಡಿಬಿಟ್ಟೆ ಸ್ವಾಮಿ! ನಮ್ಮವರೂ ಹೆಬ್ಬೆಟ್ಟು ಗುರುತು ಒತ್ತಿಬಿಟ್ಟರು. ಆಮೇಲೆ ನಮಗೆ ಶ್ಯಾನುಭೋಗರು ಮಾಡಿದ ಮೋಸ ತಿಳಿಯಿತು ಸ್ವಾಮಿ! ತಾವು ನ್ಯಾಯ ಫೈಸಲ್ ಮಾಡಿ! ನಮ್ಮದು ಅನ್ಯಾಯ ಎಂದು ತೋರಿಸಿಕೊಡಿ; ತಮ್ಮ ಗುಲಾಮನಾಗ್ತೇನೆ.’

ಗರುಡನಹಳ್ಳಿ ಯವರದೇ ತಪ್ಪು ಎಂದ ಖಂಡಿತ ಮಾಡಿಕೊಂಡು ಬಂದಿದ್ದ ರಂಗಣ್ಣನಿಗೆ ನ್ಯಾಯ ಎತ್ತ ಕಡೆಗಿದೆ ಎನ್ನುವುದು ತಿಳಿಯದೇ ಹೋಯಿತು. ಶ್ಯಾನುಭೋಗನು ಕೈ ಕೊಟ್ಟಿದ್ದರೂ ಕೊಟ್ಟಿರಬಹುದು ಎಂದು ಸಂದೇಹಪಟ್ಟನು. ಹೇಗಾದರೂ ಆಗಲಿ, ಈಗ ಒಂದು ಸಮಾಧಾನದ ಮಾರ್ಗವನ್ನು ಹುಡುಕುವುದು ಒಳ್ಳೆಯದು ಎಂದು ನಿರ್ಧರಿಸಿಕೊಂಡು, `ಚೇರ್ಮನ್ನರೇ! ಈ ಊರಾಚೆಯ ಕಲ್ಲು ಮಂಟಪ ಎಲ್ಲಿದೆ? ತೋರಿಸಿ, ಅದು ಅನುಕೂಲವಾಗಿದ್ದರೆ ಹನುಮನಹಳ್ಳಿ ಯವರಿಗೆ ಬುದ್ದಿ ಹೇಳೋಣ’ ಎಂದನು. `ಆಗಲಿ ಸ್ವಾಮಿ! ತೋರಿಸುತ್ತೇನೆ; ನಡೆಯಿರಿ. ನಮ್ಮನ್ಯಾಯ ತಾವಾದರೂ ಗ್ರಹಿಸಿಕೊಳ್ಳಿ, ಅಲ್ಲಿ ಇಸ್ಕೂಲ್ ಮಾಡಿದರೆ ಹನುಮನ ಹಳ್ಳಿಯ ಮಕ್ಕಳು ಬರುವುದಕ್ಕೆ ಏನು ಅಡ್ಡಿ? ತಾವೇ ಎಲ್ಲವನ್ನೂ ನೋಡಿ’- ಎಂದು ಚೇರ್ಮನ್ನು ಹೇಳಿ ಇನ್‌ಸ್ಪೆಕ್ಟರನ್ನು ಕರೆದು ಕೊಂಡು ಹೊರಟನು. ಹಳ್ಳಿಯ ಆಚೆ ಹನುಮನ ಹಳ್ಳಿಗೆ ಹೋಗುವ ದಾರಿಯಲ್ಲಿ ಕಲ್ಲುಮಂಟಪವಿತ್ತು. ಅದು ಸುಮಾರಾಗಿ ಚೆನ್ನಾಗಿಯೇ ಇತ್ತು. ಮುಂಭಾಗದಲ್ಲಿ ಗೋಡೆ ಹಾಕಿ, ಕಿಟಕಿಗಳನ್ನು ಇಟ್ಟರೆ ಪಾಠ ಶಾಲೆಯನ್ನು ನಡೆಸುವುದಕ್ಕೆ ಅನುಕೂಲವಾಗುವಂತಿತ್ತು. ಅದನ್ನು ನೋಡಿ ರಂಗಣ್ಣನು, ’ನೀವು ಹೇಳಿದ ಮಾತು ನ್ಯಾಯವಾಗಿದೆ. ಆ ಆಲದ ಮರದ ಕೆಳಗೆ ಹನುಮನ ಹಳ್ಳಿಯವರು ಕುಳಿತಿದ್ದಾರೆ. ಅಲ್ಲಿಗೆ ಹೋಗೋಣ, ಈ ದಿನ ಏನಾದರೊಂದನ್ನು ಇತ್ಯರ್ಥ ಮಾಡಿಬಿಡೋಣ. ಎಲ್ಲವನ್ನೂ ಮಹಾತ್ಮ ಗಾಂಧಿಯವರ ತತ್ತ್ವದಂತೆ ಅಹಿಂಸೆ ಮತ್ತು ಸತ್ಯಗಳಿಂದಲೇ ಪರಿಹಾರ ಮಾಡಿಬಿಡೋಣ, ನಿಮ್ಮ ಎರಡು ಹಳ್ಳಿಗಳಲ್ಲಿಯೂ ರಾಮರಾಜ್ಯ ಪ್ರತ್ಯಕ್ಷವಾಗಲಿ’ ಎಂದು ಹೇಳಿದನು. ಗರುಡನಹಳ್ಳಿಯವರು, `ಏನೋ ಸ್ವಾಮಿ! ನಡೆಯಿರಿ, ಬರುತ್ತೇವೆ. ಆದರೆ ಹನುಮನ ಹಳ್ಳಿಯವರು ಬಹಳ ಪುಂಡುಜನ! ಆ ದಿವಸ ದೊಣ್ಣೆಯೆತ್ತಿ ಕೊಂಡು ನಮ್ಮನ್ನೆಲ್ಲ ಹೊಡೆಯುವುದಕ್ಕೆ ಬಂದರು! ಈ ಪಂಚಾಯತಿಗೆ ನೀವು ಬಂದು ಎಲ್ಲಿ ಏಟು ತಿನ್ನುತ್ತೀರೋ ಎಂಬುದೇ ನಮ್ಮ ಹೆದರಿಕೆ!’ ಎಂದು ಹೇಳುತ್ತಾ ಜೊತೆಯಲ್ಲಿ ಹೊರಟರು.

ಹೀಗೆ ಆ ಎರಡು ಹಳ್ಳಿಯ ಮುಖಂಡರೂ ಕೆಲವರು ರೈತರೂ ಗಡಿಯ ಪ್ರದೇಶದಲ್ಲಿದ್ದ ಆಲದಮರದ ಕೆಳಗೆ ಸೇರಿದರು. ರಂಗಣ್ಣನು ದಾರಿಯುದ್ದಕ್ಕೂ ಆಲೋಚನೆ ಮಾಡುತ್ತಾ ಬರುತ್ತಿದ್ದವನು ತೊಡಕಿಗೆ ಸುಲಭವಾದ ಪರಿಹಾರ ಹೊಳೆಯದೆ, ಆ ಜನರನ್ನೆಲ್ಲ ಉದ್ದೇಶಿಸಿ, `ಹಿಂದೆ ಆದದ್ದನ್ನೆಲ್ಲ ಈಗ ಎತ್ತಿ ಆಡುವುದು ಬೇಡ. ಮಾತಿಗೆ ಮಾತು ಬೆಳೆದು ಮನಸ್ತಾಪ ಬೆಳೆಯುತ್ತದೆ. ಈಗ ಬೆಳದಿರುವ ವೈರವೇ ಸಾಕು. ನೀವಿಬ್ಬರೂ ಅನ್ಯೂನ್ಯವಾಗಿರುವುದಕ್ಕೆ ಒಂದು ಸಲಹೆಯನ್ನು ಕೊಡಿ’ ಎಂದು ಕೇಳಿದನು.

`ಸ್ವಾಮಿ ! ಪಂಚಾಯತಿ ರೆಜಲ್ಯೂಷನ್ನಿನಂತೆ ನಡೆದರೆ ಎಲ್ಲವೂ ಸರಿ ಹೋಗುತ್ತದೆ’ ಎಂದು ಹನುಮನಹಳ್ಳಿ ಯವರು ಹೇಳಿದರು.

`ರೆಜಲ್ಯೂಷನ್ನಿನ ಮಾತು ಆಡ ಬೇಡಿ. ಅದು ರದ್ದಾಗಿಹೋಯಿತೆಂದು ತಿಳಿಯಿರಿ’ ಎಂದು ರಂಗಣ್ಣ ಹೇಳಿದನು.

`ಸ್ವಾಮಿ! ಈಗ ನಮ್ಮ ಗರುಡನ ಹಳ್ಳಿಯಲ್ಲಿ ಇಸ್ಕೂಲ್ ನಡೀತಾ ಇದೆ. ಅದು ಅಲ್ಲೇ ಇದ್ದು ಕೊಂಡು ಹೋಗಲಿ, ಹನುಮನ ಹಳ್ಳಿಯವರಿಗೊಂದು ಇಸ್ಕೂಲ್ ಕೊಟ್ಟು ಬಿಡಿ ಸ್ವಾಮಿ! ಅಲ್ಲಿಗೆ ನಮ್ಮ ನಮ್ಮ ಪಾಡಿಗೆ ನಾವಿರುತ್ತೇವೆ. ವ್ಯಾಜ್ಯ ಇರುವುದಿಲ್ಲ’ ಎಂದು ಗರುಡನ ಹಳ್ಳಿಯವರು ಹೇಳಿದರು.

`ಅದೇನೋ ಒಳ್ಳೆಯ ಸಲಹೆಯೇ! ಆದರೆ ಅದರಲ್ಲೂ ತೊಡಕಿದೆ. ಮೂರು ಫರ್ಲಾಂಗ್ ದೂರಕ್ಕೆ ಮತ್ತೊಂದು ಸ್ಕೂಲನ್ನು ಸರಕಾರದವರು ಕೊಡುವುದಿಲ್ಲ. ಅದೂ ಅಲ್ಲದೆ ನಿಮ್ಮ ಎರಡು ಹಳ್ಳಿಗಳೂ ಸೇರಿ ಜನ ಸಂಖ್ಯೆ ಐನೂರು ಆಗಿರುವುದರಿಂದ ಈ ಪಂಚಾಯತಿಗೆ ಒಂದು ಸ್ಕೂಲ್ ಕೊಟ್ಟಿದ್ದೇವೆ. ಈಗ ಇನ್ನೂರೈವತ್ತು ಪ್ರಜಾ ಸಂಖ್ಯೆಯ ಹಳ್ಳಿಗಳಿಗೆಲ್ಲ ಸ್ಕೂಲುಗಳನ್ನು ಕೊಡುತ್ತ ಹೋದರೆ ಇನ್ನೂ ಹೆಚ್ಚಿನ ಪ್ರಜಾ ಸಂಖ್ಯೆ ಇರುವ ಗ್ರಾಮಗಳವರು-ತಮಗೆ ಸ್ಕೂಲ್ ಕೊಡಲಿಲ್ಲ, ಹನುಮನಹಳ್ಳಿ ಯವರೂ ಗರುಡನಹಳ್ಳಿಯವರೂ ಬಾಳೆಹಣ್ಣಿನ ಗೊನೆಗಳನ್ನು ಕೊಟ್ಟಿದ್ದರಿಂದ ಇನ್ಸ್‌ಪೆಕ್ಟರು ಆ ಸಣ್ಣ ಹಳ್ಳಿಗಳಿಗೆಲ್ಲ ಇಸ್ಕೂಲು ಕೊಟ್ಟು ಬಿಟ್ಟರು ಎಂದು ನನ್ನನ್ನು ವೃಥಾ ದೂರುತ್ತಾರೆ. ಅಷ್ಟೇ ಅಲ್ಲ, ಕೇಳಿ, ಹನುಮನ ಹಳ್ಳಿಗೆ ಕೊಟ್ಟರೆ ಒಂದು ಗ್ರಾಂಟು ಸ್ಕೂಲನ್ನು ಕೊಡಬೇಕು. ಈ ಗ್ರಾಂಟು ಸ್ಕೂಲುಗಳು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಗರುಡನ ಹಳ್ಳಿ ಯಲ್ಲೊಂದು, ಹನುಮನ ಹಳ್ಳಿ ಯಲ್ಲೊಂದು ಎರಡು ಕೆಲಸಕ್ಕೆ ಬಾರದ ಗ್ರಾಂಟ್ ಸ್ಕೂಲುಗಳನ್ನು ಕೊಟ್ಟರೆ ಪ್ರಯೋಜನವೇನು? ಒಂದುವೇಳೆ ಹನುಮನ ಹಳ್ಳಿಗೆ ಸರಕಾರಿ ಸ್ಕೂಲನ್ನು ನಾನು ಕೊಟ್ಟರೆ ಪುನಃ ನಿಮ ನಿಮಗೆ ವ್ಯಾಜ್ಯ ಬೆಳೆಯುತ್ತದೆ. ಹನುಮನ ಹಳ್ಳಿಯವರಿಗೆ ಸರಕಾರಿ ಸೂಲ್! ನಮಗೆ ಮಾತ್ರ ಗ್ರಾಂಟ್ ಸ್ಕೂಲ್! ಇದೇನು ಸ್ವಾಮಿ ನಿಮ್ಮ ನ್ಯಾಯ? ಎಂದು ನನ್ನನ್ನು ಕೇಳುತ್ತೀರಿ. ಆದ್ದರಿಂದ ನಾನು ನನ್ನ ಸಲಹೆಯನ್ನು ಹೇಳುತ್ತೇನೆ. ಅದನ್ನು ಸ್ವಲ್ಪ ಆಲೋಚಿಸಿ, ಈಗ ಇಲ್ಲಿ ಮೂವರು ಕಕ್ಷಿಗಾರರಿದ್ದೇವೆ: ಗರುಡನ ಹಳ್ಳಿಯವರು, ಹನುಮನ ಹಳ್ಳಿ ಯವರು, ಮತ್ತು ನಾನು. ಮೂವರೂ ಹೊಂದಿಕೊಂಡು ಹೋಗೋಣ, ಈಗ ನಿಮ್ಮಿಬ್ಬರಿಗೂ ವೈಮನಸ್ಯ ಇದೆ. ಒಬ್ಬರು ಹೇಳಿದ್ದಕ್ಕೆ ಇನ್ನೂಬ್ಬರು ಪ್ರತಿ ಹೇಳುತ್ತೀರಿ. ಆದ್ದರಿಂದ ನಾನು ಹೇಳಿದಂತೆ ನೀವಿಬ್ಬರೂ ಕೇಳಿದರೆ ಚೆನ್ನಾಗಿರುತ್ತದೆ.’

`ಅದೇನು ಸ್ವಾಮಿ? ಹೇಳಿ ನೋಡೋಣ’ ಎಂದು ಚೇರ್ಮನ್ನು ಕೇಳಿದನು.

`ಆ ಎದುರಿಗಿರುವ ಹೊಲ ಯಾರಿಗೆ ಸೇರಿದ್ದು? ಪೈರು ಚೆನ್ನಾಗಿ ಬಂದಿದೆ!’ ಎಂದು ರಂಗಣ್ಣ ಕೇಳಿದನು.

`ಅದು ಹನುಮನ ಹಳ್ಳಿಯ ರೈತನದು ಸ್ವಾಮಿ! ಇಗೋ ಇಲ್ಲಿಯೇ ಇದ್ದಾನೆ ರೈತ’ ಎಂದು ಶ್ಯಾನುಭೋಗನು ಹೇಳಿ ಒಬ್ಬ ರೈತನನ್ನು ಮುಂದಕ್ಕೆ ತಳ್ಳಿ ಪರಿಚಯಮಾಡಿಕೊಟ್ಟನು.

`ಈಗ ಆ ಜಮೀನಿನಲ್ಲಿ ಸ್ಕೂಲಿಗೆ ಬೇಕಾದಷ್ಟು ಜಾಗವನ್ನು ಹನುಮನ ಹಳ್ಳಿಯವರು ಮುಫತ್ತಾಗಿ ಕೊಡಲಿ. ಆ ರೈತನಿಗೆ ಹೇಳಿ ಅದನ್ನು ಕೊಡಿಸುವ ಜವಾಬ್ದಾರಿ ಶ್ಯಾನುಭೋಗರದು. ಆ ಜಾಗದಲ್ಲಿ ಗರುಡನ ಹಳ್ಳಿಯವರು ಕಟ್ಟಡ ಮುಫತ್ತಾಗಿ ಕಟ್ಟಿ ಕೊಡಲಿ, ಎಂತಿದ್ದರೂ ಕಲ್ಲುಗಳನ್ನೂ ಮರವನ್ನೂ ಶೇಖರಿಸಿಟ್ಟು ಕೊಂಡಿದ್ದಾರೆ. ಆ ಮಂಟಪ ವನ್ನು ಸರಿಪಡಿಸುವುದಕ್ಕೆ ಬದಲು ಅದೇ ಸಾಮಾನುಗಳಿಂದ ಇಲ್ಲಿ ಕಟ್ಟಡ ಎಬ್ಬಿಸಬಹುದು. ಇದರ ಜವಾಬ್ದಾರಿ ಚೇರ್ಮನ್ನರದು, ನನ್ನ ಜವಾಬ್ದಾರಿ: ಆ ಕಟ್ಟಡದಲ್ಲಿ ಇಬ್ಬರು ಮೇಷ್ಟರಿರುವ ಪಕ್ಕಾ ಸರಕಾರಿ ಸ್ಕೂಲನ್ನು ಸ್ಥಾಪಿಸುವದು! ಹೀಗೆ ನಾವು ಮೂವರೂ ನಮ್ಮ ನಮ್ಮ ಭಾಗದ ಕೆಲಸಗಳನ್ನು ಮಾಡಿಕೊಟ್ಟರೆ ಎರಡು ಹಳ್ಳಿಯ ಮಕ್ಕಳೂ ಉದ್ದಾರವಾಗುತ್ತಾರೆ! ಏನು ಹೇಳುತ್ತಿರಿ? ನೀವು ಒಪ್ಪಿದರೆ ಒಂದು ವಾರದೊಳಗಾಗಿ ಸರಕಾರಿ ಸ್ಕೂಲನ್ನು ಮಂಜೂರ್ ಮಾಡಿ ಕೊಡುತ್ತೇನೆ. ಅಷ್ಟರೊಳಗಾಗಿ ನೀವು ಮುಚ್ಚಳಿಕೆಗಳನ್ನು ಬರೆದು ಕೊಡಬೇಕು. ಜಮೀನಿನ ವಿಚಾರದಲ್ಲಿ ಛಾಪಾ ಕಾಗದದಲ್ಲಿ ಬರೆದು ರಿಜಿಸ್ಟರ್ ಮಾಡಿಸಿ ಇಲಾಖೆಗೆ ವಹಿಸಿಬಿಡಬೇಕು. ನನಗೆ ಜವಾಬು ಕೊಡಿ’ ಎಂದು ರಂಗಣ್ಣನು ಹೇಳಿದನು.

ಎರಡು ನಿಮಿಷಗಳ ಕಾಲ ಯಾರೂ ಮಾತನಾಡಲಿಲ್ಲ. ಶ್ಯಾನುಭೋಗನು ಜಮೀನಿನ ರೈತನನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಏನನ್ನೊ ಬೋಧಿಸಿದನು. ಸ್ವಲ್ಪ ಹೊತ್ತಿನಮೇಲೆ ಅವರಿಬ್ಬರೂ ಹಿಂದಿರಗಿದರು. `ಸ್ವಾಮಿ! ರೈತನು ಹತ್ತು ಗುಂಟೆ ಜಮೀನನ್ನು ಮುಫತ್ತಾಗಿ ಕೊಡಲು ಒಪ್ಪಿದ್ದಾನೆ. ಈಗಲೇ ಬರಿ ಕಾಗದದಲ್ಲಿ ಮುಚ್ಚಳಿಕೆ ಬರೆದು ಕೊಡುತ್ತಾನೆ. ನಾಳೆ ಜನಾರ್ದನಪುರಕ್ಕೆ ಬಂದು ಛಾಪಾ ಕಾಗದದಲ್ಲಿ ಬರೆಯಿಸಿ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ರಿಜಿಸ್ಟರ್ ಮಾಡಿಸಿಕೊಡುತ್ತಾನೆ. ಆದರೆ ಈಗಿರುವ ಬೆಳೆಯನ್ನು ರೈತ ತೆಗೆದುಕೊಳ್ಳುವುದಕ್ಕೆ ಮಾತ್ರ ಆವಕಾಶ ಕೊಡಿ. ಇನ್ನೆಲ್ಲ ಒಂದು ತಿಂಗಳಿಗೆ ಕೂಯ್ಲು ಆಗುತ್ತದೆ’- ಎಂದು ಶಾನುಭೋಗನು ಹೇಳಿದನು. ರೈತನು ಅನುಮೋದಿಸಿದನು, ರಂಗಣ್ಣನೂ ಒಪ್ಪಿಕೊಂಡನು. ಚೇರ್ಮನ್ನು, ’ಸ್ವಾಮಿ! ತಮ್ಮ ಇರಾದಯಂತೆ ಇಲ್ಲಿ ಕಟ್ಟಡ ಕಟ್ಟುತ್ತೇವೆ. ಆದರೆ ಮಂಟಪವನ್ನು ಸರಿಮಾಡವುದಕ್ಕೆ ಲಾಗೋಡು ಹೆಚ್ಚು ಹಿಡಿಯುತ್ತಿರಲಿಲ್ಲ. ಪಾಯ ಹಿಂದೆ ಹಾಕಿದ್ದು ಭದ್ರವಾಗಿದೆ; ಮೂರು ಕಡೆ ಗೋಡೆಗಳೂ ಈಗಿವೆ. ಇಲ್ಲಿ ಹೊಸದಾಗಿ ಕಟ್ಟಡ ಕಟ್ಟಬೇಕು. ಸರಕಾರದಿಂದ ಏನಾದರೂ ಗ್ರಾಂಟು ಸಹಾಯ ಮಾಡಿ ಸ್ವಾಮಿ! ಎಂದು ಹೇಳಿದನು. ರಂಗಣ್ಣ, `ಆಗಲಿ! ನೀವು ಹೇಳುವುದು ನ್ಯಾಯವಾಗಿದೆ. ಸರಕಾರದಿಂದ ಐನೂರು ರೂಪಾಯಿ ಗ್ರಾಂಟನ್ನು ಕೊಡಿಸಲು ಶಿಫಾರಸು ಮಾಡುತ್ತೇನೆ; ಪ್ರಯತ್ನ ಪಟ್ಟು, ಕೊಡಿಸುತ್ತೇನೆ; ಉಳಿದ ಖರ್ಚೆಲ್ಲ ನಿಮ್ಮದು’ ಎಂದು ಹೇಳಿದನು. ಬಳಿಕ, `ಶಂಕರಪ್ಪ! ನೋಟುಮಾಡಿಕೊಳ್ಳಿ, ಈಗ ಹೊಸದಾಗಿ ಮಂಜೂರಾಗಿರುವ ಸರಕಾರಿ ಸ್ಕೂಲುಗಳಲ್ಲಿ ಒಂದು ಇಲ್ಲಿಗೆ; ಇನ್ನೊಂದು ನಾಗೇನಹಳ್ಳಿಗೆ, ಉಳಿದುವನ್ನು ಆಮೇಲೆ ತಿಳಿಸುತ್ತೇನೆ. ಜನಾರ್ದನ ಪುರಕ್ಕೆ ಹೋದಮೇಲೆ ಆರ್ಡರುಗಳನ್ನು ಬರೆಯರಿ. ರುಜು ಮಾಡುತ್ತೇನೆ’ ಎಂದು ರಂಗಣ್ಣ ಗುಮಾಸ್ತೆಗೆ ಹೇಳಿದನು. ಎಲ್ಲರಿಗೂ ಸಂತೋಷವಾಯಿತು. ಆ ಆಲದಮರದ ಕೆಳಗೆ ಕುಳಿತವರು ಅಲ್ಲಿಯೇ ಮುಚ್ಚಳಿಕೆಗಳನ್ನು ಬರೆದು ಕೊಟ್ಟರು. `ಸ್ವಾಮಿ! ಕೊಯ್ಲಾದ ಒಂದು ತಿಂಗಳೊಳಗಾಗಿ ಕಟ್ಟಡವನ್ನು ಕಟ್ಟಿ ಬಿಡುತ್ತೇವೆ. ಸರಕಾರಿ ಸ್ಕೂಲಿನ ಪ್ರಾರಂಭೋತ್ಸವಕ್ಕೆ ತಾವೇ ದಯಮಾಡಿಸಬೇಕು’ ಎಂದು ಚೇರ್ಮನ್ನು ಹೇಳಿದನು. `ಆಗಲಿ! ಬಹಳ ಸಂತೋಷದಿಂದ ಬರುತ್ತೇನೆ. ನೋಡಿ! ಹಾಳು ಒಂದು ಗ್ರಾಂಟ್ ಸ್ಕೂಲಿನ ಜಗಳದಲ್ಲಿ ರಸ ಬಾಳೆಹಣ್ಣಿನ ಗೊನೆಗಳನ್ನು ಬಹಳವಾಗಿ ಖರ್ಚು ಮಾಡಿದಿರಿ! ಸರಕಾರಿ ಸ್ಕೂಲನ್ನು ಕೊಟ್ಟಿರುವ ನನಗೆ ಏನು ಇನಾಮು ಕೊಡುತ್ತೀರಿ’ ಎಂದು ರಂಗಣ್ಣನು ನಗುತ್ತಾ ಹೇಳಿದನು.

`ತಾವು ಮಾಡಿರುವ ಉಪಕಾರಕ್ಕೆ ಬೆಲೆಯೇ ಇಲ್ಲ ಸ್ವಾಮಿ! ನಾವು ಹಳ್ಳಿಯ ಜನ, ಒರಟು; ಏನೋ ಹುಚ್ಚು ಹಟ ಹಿಡಿದು ಕೋರ್ಟು ಕಚೇರಿಗಳನ್ನು ಹತ್ತಿ ನಷ್ಟ ಮಾಡಿಕೋತೇವೆ. ಬುದ್ದಿ ಹೇಳಿ ಪಂಚಾಯತಿ ನಡೆಸೋ ಧಣಿಗಳು ಬರಬೇಕು. ಆಗ ನಾವೂ ಸುಧಾರಿಸುತ್ತೇವೆ’ ಎಂದು ಚೇರ್ಮನ್ನು ಹೇಳಿದನು.

`ಸ್ವಾಮಿ ! ಮನೆಗೆ ದಯಮಾಡಿಸಿ ಬಡವನ ಆತಿಥ್ಯ ಸ್ವೀಕಾರ ಮಾಡಬೇಕು’ ಎಂದು ಶ್ಯಾನುಭೋಗನು ಆಹ್ವಾನವನ್ನು ಕೊಟ್ಟನು.

`ಒಳ್ಳೆಯದು ನಡೆಯಿರಿ. ಬೆನ್ನು ಹತ್ತಿರುವ ಸುಖಪ್ರಾರಬ್ಧವನ್ನು ಅನುಭವಿಸಿತೀರಬೇಕಲ್ಲ’ ಎಂದು ರಂಗಣ್ಣನು ನಗುತ್ತ ಮುಚ್ಚಳಿಕೆಗಳನ್ನು ಶಂಕರಪ್ಪನಿಗೆ ಕೊಟ್ಟು ಹನುಮನ ಹಳ್ಳಿಯ ಕಡೆಗೆ ಹೊರಟನು. ಗರುಡನ ಹಳ್ಳಿಯವರು ಜೊತೆಯಲ್ಲಿಯೇ ಬಂದು ಹನುಮನ ಹಳ್ಳಿಯ ಪಂಚಾಯತಿಯ ಹಾಲಿನಲ್ಲಿ ಕುಳಿತರು. ರಂಗಣ್ಣನು ಶ್ಯಾನುಭೋಗರ ಮನೆಗೆ ಶಂಕರಪ್ಪನೊಡನೆ ಹೋದನು. ಅಲ್ಲಿ ಉಪಾಹಾರ ಸ್ವೀಕಾರ ಮಾಡುತ್ತ ‘ಏನು ಶ್ಯಾನುಭೋಗರೇ! ಪಂಚಾಯತಿಯ ರೆಜಲ್ಯೂಷನ್ನಿನಲ್ಲಿ ಗರುಡನ ಹಳ್ಳಿಗೆ ಬದಲು ಹನುಮನ ಹಳ್ಳಿ ಎಂದು ಕೈತಪ್ಪಿ ನಿಂದ ಬಿದ್ದು ಹೋಯಿತೇ?’ ಎಂದು ಕೇಳಿದನು.

`ಕೈ ತಪ್ಪೋ ಇಲ್ಲ, ಏನೂ ಇಲ್ಲ ಸ್ವಾಮಿ! ಆ ಚೇರ್ಮನ್ನು ಈಚೆಗೆ ನನ್ನ ಮೇಲೆ ಇಲ್ಲದ ಕಥೆ ಹರಡಿದ್ದಾನೆ. ಪಂಚಾಯತಿಯ ರೆಜಲ್ಯೂಷನ್ನುಗಳನ್ನು ಬರೆದಮೇಲೆ ಚೇರ್ಮನ್ನಿನ ರುಜು ಆಗುವ ಮೊದಲು ಗಟ್ಟಿಯಾಗಿ ಓದುವ ಪದ್ಧತಿ ಇದೆ. ಜೊತೆಗೆ ಚೇರ್ಮನ್ನು ಓದು ಬರಹ ತಿಳಿದವನು. ನಮ್ಮನ್ನು ನಂಬುವುದಿಲ್ಲ. ಎಲ್ಲವನ್ನೂ ತಾನೇ ಓದಿ ನೋಡಿಕೊಳ್ಳುತ್ತಾನೆ. ಆ ದಿನ ಚರ್ಚೆಯೇನೋ ಆಯಿತು. ಕಡೆಗೆ ಹನುಮನ ಹಳ್ಳಿಯಲ್ಲಿಯೇ ಸ್ಕೂಲನ್ನು ಸ್ಥಾಪಿಸಬೇಕೆಂದು ಬಹುಮತದಿಂದ ನಿರ್ಣಯವಾಯಿತು. ಹಾಗೆ ಚರ್ಚೆಯಾದ ವಿಚಾರವನ್ನು ಆತ ನೋಡದೆ ರುಜು ಮಾಡುವುದೆಂದರೇನು? ಮೇಷ್ಟ್ರು ಮೊದಲು ಆ ಹಳ್ಳಿಗೆ ಹೋಗಿ ಆರ್ಡರನ್ನು ತೋರಿಸಿದ. ಅಲ್ಲೇ ಅವನನ್ನು ನಿಲ್ಲಿಸಿಕೊಂಡು ಅಲ್ಲೇ ಸ್ಕೂಲ್ ನಡೆಸೋಣ ಎಂದು ಉಪಾಯ ಮಾಡಿದರು. ಅಷ್ಟೇ ಸ್ವಾಮಿ! ಪ್ರಮಾಣವಾಗಿ ಹೇಳುತ್ತೇನೆ.’

‘ಹೋಗಲಿ ಬಿಡಿ. ಈಗ ನಾನು ಮಾಡಿದ ಏರ್ಪಾಟು ನಿಮಗೆ ಮೆಚ್ಚಿಕೆಯಾಯಿತೇ>’

‘ಭೇಷ್ ಏರ್ಪಾಟು ಸ್ವಾಮಿ! ಎಲ್ಲರಿಗೂ ತೃಪ್ತಿಯಾಯಿತು. ಒಂದುವೇಳೆ ಗರುಡನ ಹಳ್ಳಿಯವರು ಕಟ್ಟಡ ಕಟ್ಟಲಿಲ್ಲ ಅನ್ನಿ. ನಾವೇ ಕಟ್ಟಡ ಎಬ್ಬಿಸಲಿಕ್ಕೂ ಸಿದ್ಧರಿದ್ದೇವೆ. ಸರ್ಕಾರಿ ಸ್ಕೂಲು ನಮಗೆ ದೊರೆಯಿತಲ್ಲ! ಅದೇ ನಮಗೆ ಪರಮಾನಂದ!’

ಉಪಾಹಾರ ಮುಗಿಯಿತು. ರಂಗಣ್ಣ ಶ್ಯಾನುಭೋಗನೊಡನೆ ಹೊರಟು ಪಂಚಾಯತಿ ಹಾಲಿಗೆ ಬಂದನು. ಅಲ್ಲಿ ಗರುಡನ ಹಳ್ಳಿಯವರು ರಸಬಾಳೆಯ ಹಣ್ಣುಗಳನ್ನೂ ಹಾಲನ್ನೂ ಇಟ್ಟು ಕೊಂಡಿದ್ದರು. ’ಸ್ವಾಮಿಯವರು ತೆಗೋಬೇಕು!’ ಎಂದು ಚೇರ್ಮನ್ನು ಹೇಳಿ ತಟ್ಟೆಯನ್ನು ಮುಂದಿಟ್ಟನು. ಯಥಾಶಕ್ತಿ ಅವುಗಳನ್ನು ತೆಗೆದುಕೊಂಡು, ಎಲ್ಲರಿಂದಲೂ ನಮಸ್ಕಾರ ಮಾಡಿಸಿಕೊಂಡು, ಎಲ್ಲರಿಗೂ ತಾನೂ ನಮಸ್ಕಾರ ಮಾಡಿ ಜೋಡೆತ್ತಿನ ಗಾಡಿಯನ್ನು ರಂಗಣ್ಣ ಹತ್ತಿದನು. ಶಂಕರಪ್ಪ ಹಿಂದುಗಡೆ ಹತ್ತಿಕೊಂಡನು.

`ಶ್ಯಾನುಭೋಗರೇ! ನಾಳೆಯೇ ಪತ್ರ ರಿಜಿಸ್ಟರ್ ಆಗಿ ಹೋಗಬೇಕು. ಪಾರ್ಟಿ ತನ್ನ ಮನಸ್ಸು ಬದಲಾಯಿಸಿ ಬಿಟ್ಟಾನು!’ ಎಂದು ರಂಗಣ್ಣ ಹೇಳಿದನು.

`ನಾಳೆಯೇ ಬರುತ್ತೇನೆ ಸ್ವಾಮಿ! ಇನ್ನು ಇದರಲ್ಲಿ ಯಾರೂ ಬದಲಾಯಿಸುವುದಿಲ್ಲ.’ ಎಂದು ಶ್ಯಾನುಭೋಗನು ಉತ್ತರಕೊಟ್ಟನು.

ಗಾಡಿ ಹೊರಟಿತು. ’ಬಹಳ ಸೊಗಸಾದ ಏರ್ಪಾಟನ್ನು ಮಾಡಿಬಿಟ್ಟರಿ, ಸ್ವಾಮ! ಈ ತೊಡಕು ವ್ಯಾಜ್ಯ ಹೇಗೆ ತಾನೆ ಪರಿಹಾರವಾಗುತ್ತದೆಯೋ? ಏನೇನು ಭಂಗ ಪಡಬೇಕೋ? ಎಂದು ನಾನು ಹೆದರಿ ಕೊಂಡಿದ್ದೆ’ ಎಂದು ಶಂಕರಪ್ಪ ಹೇಳಿದನು.

`ದೇವರು ಪ್ರೇರೇಪಣೆ ಮಾಡಿ ಹೇಗೋ ಪರಿಹಾರ ಮಾಡಿದನು ಶಂಕರಪ್ಪ! ನನ್ನ ಕೈಯಲ್ಲಿ ಏನಿದೆ!’
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪಿಸಿಕೊಳ್ಳಬೇಕವರನ್ನೊಮ್ಮೆ
Next post ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…