ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು;
ಕಾಲವೇ ನೀನು ಪೇರಿಸುವ ಪಿರಮಿಡ್ಡುಗಳು
ಹೊಸದಲ್ಲವೇ ಅಲ್ಲ ನನ್ನ ಪಾಲಿಗೆ ಎಂದೂ;
ಇಂದೂ ಅವು ಹಳೆಯ ದೃಶ್ಯಗಳ ಮರುನೋಟಗಳು.
ಅಲ್ಪಾವಧಿಯ ಬಾಳು ಇದು, ಎಂದೆ ಮೆಚ್ಚುವೆವು
ಹಿಂದಿನಿಂದಲು ನೀನು ತಂದು ನಮಗಿತ್ತುದನು,
ಹಿಂದೆ ಕೇಳಿದ್ದ ಬಗೆಯಲ್ಲಿ ಕಾಣದೆ ನಾವು
ನಮ್ಮ ಬಯಕೆಗೆಹೊಂದುವಂತೆ ಮಾರ್‍ಪಡಿಸುವೆವು.
ಹೊಸತು ಹಳತೆರಡಕ್ಕೂ ಬೆರಗುಪಡದಿರುವೆ
ನಿನ್ನೆಲ್ಲ ದಾಖಲೆಗಳನ್ನು ನಿನ್ನನೂ ಜೊತೆಗೆ
ಮೂದಲಿಸುವೆನು ಏಕೆ ಗೊತ್ತೆ ಅವು ಎದುರೆದುರೆ
ಬದಲಾಗುವುವು ನಿನ್ನ ಅವಸರದ ನಡಿಗೆಗೆ:
ಆಣೆಯಿಟ್ಟೊರೆವೆ ಇದು ಎಂದೂ ಹೀಗೇ ಎಂದು,
ನೀನು, ಕುಡುಗೋಲು ಇದ್ದೂ ನಾನೆ ನಿಜ ಎಂದು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 123
No! Time thou shalt not boast that I do change