ದ್ರೌಪದೀ,
ಅಂದು
ಋತುಮತಿಯಾಗಿದ್ದ ನಿನ್ನನ್ನು
ದರದರ ಎಳೆದು ತಂದು
ತುಂಬಿದ ಸಭೆಯಲ್ಲಿ
ದುಶ್ಯಾಸನ ನಿನ್ನ ಸೆರಗಿಗೆ ಕೈ ಹಾಕಿದಾಗ,
ನೀನೇಕೆ ಅವನ ದಹಿಸದೆ
ನಿನ್ನ ಪಣ ಒಡ್ಡಿದವರ ಬೇಡಿದೆ?
ಅವರು ಅಸಹಾಯಕರಾಗಿ ತಲೆತಗ್ಗಿಸಿ ಕುಳಿತಾಗ
ನಿನ್ನ ಕೂಗಿಗೆ ಓಗೊಡಲು ಶ್ರೀಕೃಷ್ಣನಿದ್ದ,
ನಿನ್ನ ಸೀರೆಯ ಅಕ್ಷಯವಾಗಿಸಿದ.
ನಾವೇನ ಮಾಡಲಿ ಹೇಳು?
ನೀನಂದು ಒಬ್ಬ ದುಶ್ಯಾಸನನ ದಹಿಸಿದ್ದರೆ
ಇಂದು ಮತ್ತೆ ಮತ್ತೆ ದುಶ್ಯಾಸನರು
ಹೆಡೆ ಎತ್ತುತ್ತಿರಲಿಲ್ಲ.
ಈಗ ಎಲ್ಲೆಲ್ಲೂ ದುಶ್ಯಾಸನರೇ
ಶ್ರೀಕೃಷ್ಣ ಮಾತ್ರ ಇಲ್ಲ.
ಹೆಣ್ಣಿನ ಸೀರೆ ಎಳೆಯುವಾಗ
ಅಂದಿನಂತೆ ಇಂದೂ
ಎಲ್ಲ ನಿಂತು ನೋಡುವವರೇ;
ಅಕ್ಷಯ ವಸನವಿಲ್ಲದೆ ಬೆತ್ತಲಾಗುವುದೇ
ಇಂದಿನ ಸ್ಥಿತಿ, ಇಂದಿನ ಗತಿ.
ರಕ್ಷಿಸಲು ಯಾರು ಬರುತ್ತಾರೆ ಹೇಳು?
ನೀನು ದುಶ್ಯಾಸನನ ಹಿಂದೆ ಬಿಟ್ಟು ಹೋದ ಹಾಗೆ
ನಿನ್ನ ಮರ್ಯಾದೆಯ ಕಾಯ್ದ
ಶ್ರೀಕೃಷ್ಣನ ಬಿಟ್ಟು ಹೋಗಲಿಲ್ಲವೇಕೆ?
*****