ಗೋಡ್ರು ಮುನ್ಸಿಕಂಡ್ರೋ ಎನಿಮಿ ಮಟಾಷ್

ಅಹಿಂದ ರ್‍ಯಾಲಿ ನಡೆಸಿ ಗೋಡ್ರ ಶಾಪಕ್ಕೆ ಗುರಿಯಾದ ಸಿದ್ರಾಮು ಮಾದೇವು ಜಾರ್ಕಿಹೊಳಿ ಅಧಿಕಾರದ ವಜನ್ ಕಳ್ಕೊಂಡು ವನವಾಸ್ದಗವರೆ. ವನವಾಸ ಅಂಬೋದು ಹದಿನಾಕು ವರ್ಸವೋ ನಾಕು ವರ್ಸವೋ ಮುಂದಿನ ಚುನಾವಣೆ ಹೊತ್ಗೇ ಮುಗಿತದೋ ಮೈಲಾರಲಿಂಗನೇ ಬಲ್ಲ. ಆದ್ರೂವೆ ಹಠಕ್ಕೆ ಐದ್ದರಂಗೆ ಆಹಿಂದ ರ್‍ಯಾಲಿಯಾ ಊರು ಊರಾಗೆ ತೊಡೆ ತಟ್ಟಿಸ್ಕಂಡು ನಿಂತದೆ ಸಿದ್ದು ಅಂಡ್ ಪಾರ್ಟಿ. ತುಮಕೂರ್ನಾಗೆ ನಡೆಯೋ ರ್‍ಯಾಲಿ ಯಾವ ತಕಲೀಫ್ ತಂದಿತ್ತದೆ ಅಥವಾ ಬೀರಪ್ಪನ ಜಾತ್ರೆ ಹಂಗೆ ಗದ್ದಲಮಾಡಿ ನಿದ್ದೆ ಹೋತದೋ ವೇಟ್ ಅಂಡ್ ಸೀ. ನೀವೇನೇ ಹೇಳವಲ್ಲರ್‍ಯಾಕೆ ಯಾರ ಹಗೆ ಕಟ್ಕೊಂಡ್ರೂ ಗೋಡ್ರ ಹಗೆ ಕಟ್ಕೋಬಾರ್ದು. ಯಾಕಂದ್ರೆ, ಹಾವಿಗೆ ಹಲ್ಲಿನಾಗೆ ಮಾತ್ರ ಇಸ. ಗೋಡ್ರ ಸುರ್ವಾಂಗವೂ ಇಸಮಯರೀ. ಯಾಕಂತಿರೋ ಅವರದು ದಿನದ ೨೪ ಗಂಟೆನೂ ಪಾಲಿಟಿಕ್ಸ್. ಗೋಡ್ರ ರಾಜಕೀಯ ವರಸೇನೆ ಹಂಗೆ, ಶತ್ರುನಾ ರೂಟ್ ಸಮೇತ ಕಿತ್ತು ಹಾಕೋ ಚಾಣಕ್ಯನ ಟೈಪು. ಅಹಿಂದ ಮಂದಿ ಏಟೇ ಗದ್ದಲ ಮಾಡಿ ಗೋಡ್ರ ಗೊಂಬಿ ಸುಟ್ಟರೂ ಗೋಡ್ರು ಮಾತ್ರ ಶಾಂತವಾಗವರೆ. ಆಗಾಗ ಓರೆಮಾಡಿ ಹುಸಿನಗೆ ಬೀರ್ತಾರೆ ನೋಡಿ ಅದೇ ಡೇಂಜರ್ರ. ಅದರ ಹಿಂದಾಗಡೆ ಬ್ಯಾಡ್‌ನ್ಯೂಸ್ ಹೊರಾಗ್ ಬರ್ಲಿಕ್ಕೆ ಹಾದಿ ಹುಡುಕ್ತಾ ಇರ್ತದೆ ಅಂಬೋ ರಾಜಕೀಯ ಬಲ್ಲೋರಿಗೆಲ್ಲಾ ಗೊತ್ತಿರೋ ಮ್ಯಾಟರ್ರೇ. ಗೋಡ್ರಿಗೆ ಸಿಟ್ಟು ಬಂತೋ ಇದ್ದಕ್ಕಿದ್ದಂಗೆ ಅಮಾಸೆ ಪೂಜೆ ಇಟ್ಕೊಂತಾರೆ. ಯಾತ್ರೆ ಹೊಕ್ಕಾರೆ ಮಾಟಮಂತ್ರ ದೋರ್‍ಗೆ ಡೈವ್ ಹೊಡಿತಾರೆ. ಪರಿಣಾಮ ಏನಾಗ್ತದ ಗೊತ್ತುಂಟಾ. ಗೋಡ್ರ ಹಗೆ ಕಟ್ಕೊಂಡ ನಿಸ್ಸೀಮರಾದ ಕೆ.ಎನ್. ನಾಗೇಗೋಡ, ಎಂ.ವಿ. ಚಂದ್ರಶೇಖರ ಮೂತ್ರಿ, ಭೈರೇಗೌಡ, ವೈ.ಕೆ. ರಾಮಯ್ಯ, ಗುಳ್ಳೆನರಿ ಹೆಗಡೆ ಇವರೆಲ್ಲಾ ಎಲ್ಲಿ ಅದಾರೀಗ? ಭೂಮಿ ಒಳಗಡೆ ಸೆಟ್ಲಾಗಿಲ್ವಾ? ಹವ್ದಿಲ್ರೋ ? ಮಂದಿನ ಸರದಿ ಸಾಲಿನಾಗೆ ಸಿದ್ರಾಮು, ಡಿಕೆಶಿ, ಮಾದೇವು, ಜಾರ್ಕಿಹೊಳಿ, ತೇಜಶ್ರೀ ಇರಬೋದಂತ ಪಾಲಿಟಿಕ್ಸ್ ಪರಿಣಿತರು ಅರ್ಥಾತ್ ಪೇಪರ್ ಮಂದಿ ಗೆಸ್ ಮಾಡ್ಲಿಕತ್ತಾರೆ. ಗೋಡ್ರು ಮುನಿಸಕ್ಸಂಡ್ರೋ ಎನಿಮೀಸೆಲ್ಲಾ ಮಟಾಶ್.

ಅವರ ಸ್ವಭಾವೇ ಹಂಗ್ ಬಿಡ್ರಿ. ಇದ್ದ ಹತ್ತರ ಇರೋರಲ್ಲ ಬಿದ್ದಗೋಡಿ ಕಟ್ಟೋರಲ್ಲ. ಮನಸ್ಸು ಮಾಡಿದ್ರೋ ಕಟ್ಟೋರು ಅವರೆ ಒಡೆಯೋರು ಅವರೆ. ಅವರೇ ಡಬ್ಬಲ್ ಆಕ್ಟಿಂಗ್. ಇಚಾರ ಮಾಡಿ ನೋಡಿದ್ರೆ ಗೋಡ್ರ ಪಾಲಿಟ್ರಿಕ್ಸ್ ಗ್ರಾಫೇ ಹಂಗದೆ. ಅವರೂ ನೆಟ್ಟಗೆ ಅವಧಿ ಪೂರಾ ಪವರ್ನಾಗಿರಲ್ಲ. ಇರೋರ್ನ್ನು ಬಿಡಲ್ಲ. ೧೯೮೩ರಾಗೆ ಫಸ್ಟೇಟ್ಗೆ ಅಧಿಕಾರಕ್ಕೆ ಬಂದ ಕಾಂಗ್ರೇತರ ಸರ್ಕಾರದಾಗೆ ಲೋಕೋಪಯೋಗಿ ಮಂತ್ರಿಯಾದೋರು ಗಂಟು ಮಾಡ್ಕೊಂಬೋ ಮೊದ್ಲೆ ಸೀಟ್‌ಬಿಟ್ರು. ಪಕ್ಷದ ಅಧ್ಯಕ್ಷರಾಗಿ ಸಂಘಟ್ನಿ ಮಾಡೋ ಹೊಣೆ ಹೊತ್ಕಂಡ್ರು. ೧೯೮೫ರಾಗೆ ಜನತಾಪಕ್ಷ ಪವರ್ರಗೆ ಬಂತು. ಗೊಡ್ರಿಗೆ ಮಂತ್ರಿಗಿರಿನೂ ಸಿಕ್ತು. ಆಗ್ಲೂವೆ ಪೀರಿಯಡ್ ಪೂರಾ ಮುಗಿಸ್ದಂಗೆ ಔಟಾದ್ರು. ನೀರಾವರಿಗೆ ಕೇಳಿರೋ ರೊಕ್ಕ ಕೊಡಲಿಲ್ಲ ಅಂತ ಕ್ಯಾತೆ ತೆಗ್ದು ಸಿ‌ಎಂ-ಕಂ-ಫೈನಾನ್ಸ್ ಮಡಿಕ್ಕಂಡಿದ್ದಹೆಗಡೆ ಮ್ಯಾಗೆ ಮುನಿಸ್ಕೊಂಡು ರಾಜಿನಾಮೆ ಒಗಾಸಿದ್ರು. ಬೊಮ್ಮಾಯಿ ಸರ್ಕಾರ ಬಂತು. ಮತ್ತೆ ಗೋಡ್ರು ಮಂತ್ರಿಯಾದರು. ಬ್ಯಾಡಲಕ್ ಬಿಡಬೇಕಲ್ಲ. ಪಕ್ಷ ಎಲ್ಡು ಹೊಲ್ಳಾದ್ದು ಆವಾಗ್ಲೇಯಾ. ಆಮೇಲಾಮೇಲೆ ಹೊಡೆದಾಡಿ ಆಕಾಸ ಭೂಮಿ ಒಂದ್ ಮಾಡಿ ಗೋಡ್ರು ಸಿ‌ಎಂ ಆಗೇಬಿಟ್ಟರು. ವರ್ಷ ಮುಗಿಸಿದ್ರಲ್ಲ ಅನ್ನೋವಾಗ್ಲೆ ಪ್ರಧಾನಿ ಆಗೋ ಲಕ್ ಹೊಡ್ಕೊಂಡು ಬಂತು. ಗೋಡ್ರು ಡೆಲ್ಲಿಗೆ ದೌಡು. ಸಿ‌ಎಂ ಆಗಿ ಕಂಪ್ಲೀಟ್ ಪಿರಿಯಡ್ ಮುಗಿಸದೆ ಗೋಡ್ರು ಪಿ.ಎಂ. ಆಗಿವೆ. ಪಿರಿಯಡ್ಗೆ ಮೊದ್ಲೆ ರಿಟರ್ನ್ಡು ಟು ಹೆಡ್‌ಕ್ವಾರ್ಟರ್. ಈಗಂತೊ ಸಿ.ಎಂ. ಅಲ್ಲ ಪಿ.ಎಂ. ಅಲ್ಲವಾದ್ರೂ ಜೆಡಿ‌ಎಸ್ನೇ ಅವರ ಟಾಪು ಬಾಟಮ್ಮು ಎಲ್ಲಾ. ಈಗ ೧೪ ತಿಂಗಳಾಗಿರಬೋದೇನೋ ಮತ್ತಾಗಲೆ ಪಕ್ಷ ಎಲ್ಡು ಹೋಳಾಗೋ ರೆಡ್ ಸಿಗ್ನಲ್ ಲೇಟು ಹತ್ಕಂಡದೆ. ಅಧಿಕಾರಕ್ಕೆ ಈವಯ್ಯ ಅಮರಿಕೊಂಡಾಗೆಲ್ಲಾ ಡೆಲಿವರಿ ಆದದ್ಕಿಂತ ಅಬಾರ್ಶನ್ ಆದ್ದೇ ಹೆಚ್ಚು ಕಣ್ ಬಿಡ್ರಿ. ಇದೆಲ್ಲಾ ಒತ್ತಟ್ಟಿಗಿರ್ಲಿ. ಸಿದ್ರಾಮು ಹುಬ್ಳಿನಾಗೆ ನಡೆಸಿದ ಅಹಿಂದಕ್ಕೆ ಸಪೋಲ್ಟ್ ಮಾಡೋರೆಲ್ಲಾ ಸಿದ್ರಾಮು ಮ್ಯಾಗಿನ ಪ್ರೀತಿಯಿಂದ ಮಾಡವರೆ ಅಂತ ತಿಳಿದಿರೇನು? ಬೀರಪ್ಪನಾಣೆಗೂ ಸುಳ್ರಿ. ವಚನ ವಾಚಸ್ಪತಿ ಇಬ್ರಾಹಿಮ್ಮು, ಕ್ಯಾಪಿಟೇಶನ್ ಜಾಲಪ್ಪ, ಟಿವಿಸ್ಟಾರ್ ರಮೇಸಕುಮಾರು, ದಿಕ್ಕೆಟ್ಟ ಡಿಕೆಶಿ, ಕನಕಪುರ ಮಾರಿ ತೇಜಶ್ರೀ, ಗಬ್ಬು ನಾರೋ ಇಸ್ವನಾತ, ಬಾಲ್ಡಿಶಂಕ್ರಾ, ಎಕೆ-೪೭ ಸುಬ್ಬಯ್ಯ. ಕೋದಂಡ್ರಾಮ, ವೈಜನಾಥ, ಲಕ್ಷ್ಮಿಸಾಗರ ಇತ್ಯಾದಿ ಹಳೆ ತಗಡು ಪಾರ್ಟಿಗಳೆಲ್ಲಾ ಗೋಡ್ರಿಂದ ಒಂದಲ್ಲ ಒಂದ ಸಲಾ ಒದೆ ತಿಂದೋರೆಯಾ. ಹಿಂಗಾಗಿ ಸಿದ್ರಾಮು ಮ್ಯಾಗಿನ ಮೋಬತ್‌ಗಿಂತ ಗೋಡ್ರ ಅಂಡ್ ಹಿಸ್ ಸನ್ಸ್‌ ಮ್ಯಾಗಳ ದುಶ್ಮನಿಯಿಂದಾಗಿ ಅಹಿಂದ ರ್‍ಯಾಲಿಗೆ ಕುಮ್ಮಕ್ಕು ಕೊಟ್ಟರು. ಈಗಂತೂ ಬರಿ ಗದ್ದಲ ಮಾಡ್ತಾ ಪೇಪರ್ ಸ್ಪೇಟ್ಮೆಂಟ್ ಕೊಡ್ತಾ ಸಿದ್ರಾಮು ಕಡೀಗೆ ಇದ್ದೋರಂಗೆ ಫೋಜ್ ಕೊಡ್ತಾ ಅವರೆ. ಸಿದ್ರಾಮು ಅಂಬೋ ಕುರಿನಾ ಹಳ್ಳಕ್ಕೆ ತಳ್ಳಿ ಆಳ ಬ್ಯಾರೆ ನೋಡ್ತಾ ಅವರೆ. ಇಸ್ವನಾತು ತಾನು ಕೆಟ್ಟಿದ್ದಲ್ದೆ ಕೋತಿ ವನಾನೂ ಕೆಡಿಸ್ತು ಅಂಬಂತೆ ಸಿದ್ರಾಮು ತಲಿಗೆ ನಿಂಬೆ ಹಣ್ಣು ತಿಕ್ಕಿದ್ದು ಹೆಂಗೆ ಗೊತ್ತೇನ್ರಿ? ನೋಡಪಾ ಸಿದ್ದು ಜೆಡಿ‌ಎಸ್ನಾಗಿದ್ರೆ ಸಾಯೋವರರ್ಗೂ ಡಿಸಿ‌ಎಂ ಆಗಿರ್ತಿ. ಯಾಕೀ ಮಾತು ಹೇಳ್ತಿನಂದ್ರೆ ಫಸ್ಟ್ ಏಟ್ಗೆ ಜಂತಾದಳದೋರು ಗೆದ್ದಾಗ ಹೆಗಡೆ ಒಂದಷ್ಟು ದಿನ, ರವಷ್ಟು ದಿನ ಬೊಮ್ಮಾಯಿ ಸಿ‌ಎಂ ಗಿರಿ ಹಂಚಿಕೊಂಡ್ರು. ತಿರುಗ ಗೆದ್ದಾಗ ಗೋಡ, ಪಟೇಲ ಹಂಚ್ಕೊಂಡು ಉಂಡ್ರು. ಇನ್ನೊಂದು ಸತಿ ಏನಾದ್ರೂ ಗೆದ್ದರೋ ಆವಾಗ ಸೆಕಂಡ್ ಸನ್‌ನ ಸಿ.ಎಂ. ಆಗೋದು ಸೆಂಟ್ ಪರ್ಸೆಂಟ್ ಗ್ಯಾರಂಟಿ. ನಿನ್ನ ಹಿಂದೆ ಜನಸಾಗರವೇ ಐತೆ ಅಂತ ಮಳ್ಳು ಮಾಡಿ ಇದ್ದೊಬ್ಬ ಒಳ್ಳೆ ಮನುಷ್ಯನ್ನ ಹಳ್ಳ ಕೆಡವಿಬಿಟ್ಟರು ಕಣ್ರಿ. ಗೋಡ್ರು ಈಗ್ಲೂ ಸಾಂತವಾಗವರೆ ದೇಶದ ತುಂಬಾ ಅಹಿಂದ ಜಾತ್ರೆ ನಡೆಸ್ತಾ ತಮ್ಮ ಗೊಂಬಿ ಮಾಡಿ ಸುಡ್ತಾ ಇರೋದ್ನ ಟಿ.ವಿ ನಾಗೆ ಮುಂದಾಗಡೆ ಕುಂತು ನೋಡ್ತಾ ಸುಟ್ಟಗೊಂಬಿ ಲೆಕ್ಕ ಇಟ್ಕೋತಾ ಕೊಮಾರಣ್ಣಂಗೆ ಆಲ್ಡರ್ ಮಾಡವರೆ. ನನ್ನ ಗೊಂಬಿಯಾ ಸಾವಿರಾರು ಕಡೆ ಸುಡ್ತಾ ಅವರೆ. ಅದು ಗಿನ್ನಿಸ್ ದಾಖಲೆ ಆಯ್ತದೆ. ಕಾರಣ ಈಗ್ಲೆ ಗಿನ್ನಿಸ್ ರೆಕಾಲ್ಡ್‌ಗೆ ಅಪ್ಲಿಕೇಶನ್ ರೆಡಿಮಾಡಿ ಒಗಾಯಿಸತ್ತ ಅಂತ, ಅಡ್ವೈಜ್ ಮಾಡಿ ಆನಂದ ಪಡ್ತಾ ಅವರೆ. ಈ ನ್ಯೂಸ್ ಕೇಳಿದ ಅಹಿಂದ ರ್‍ಯಾಲಿ ನೆಡೆಸಿಸೋ ಹಿಂದು ಮುಂದಿಲ್ಲದ ಮುಕಡಪ್ಪ ಅಂಡ್ ಗ್ಯಾಂಗ್, ಗೋಡ್ರ ಗೊಂಬಿಯಾ ಸುಡ್ತಾ ಇರೋರು ನಾವು ಗಿನ್ನಿಸ್ ದಾಖಲೆನಾಗೆ ಸೇರೋ ವಜನ್ ನಮ್ಗೆ ಇರಾದು. ಅದ್ಕೂ ಕಲ್ಲು ಹಾಕೋಕೆ ಬಂದ್ನಲ್ಲ ಈ ಗೌಡಪ್ಪ ಅಂತ ತೆಲಿಮ್ಯಾಲೆ ಕೈ ಹೊತ್ಕಂಡು ಕುಂತಾವಂತೆ!

ಈ ಮದ್ಯೆ ಗೋಡ್ರ ನಂಬ್ಕಂಡು ಬಿಜೆಪಿಯೋರು ಹಳೆಚಡ್ಡಿ ಬಿಟ್ಟೆಸೆದು ಬಂದರ ಗೋಡ ತ್ಯಾಪೆ ಚಲ್ಲಣ ತೊಡಿಸಿದ್ರೇನ್ ಗತಿ ಅಂತ ವಯೋವೃದ್ಧ ಎಂ. ರಾಜಸೇಕರ ಮೂತ್ರಿ ಮೂತಿ ಸೊಟ್ಟ ಮಾಡಕ್ಕಂಡ್ರೆ, ಸೀನವಾಸ ಪ್ರಸಾದುಗೂ ಅಗ್ದಿ ಡವಟೇ. ಹೆಂಗೂ ರಾಜಕೀಯ ಒಗಾಸಿ ಕಾವಿಚಾಟಿ ಹಾಕ್ಕಂಡಿದ್ದ ನನ್ನಾ ಮತ್ತೆ ರಾಜಕೀಯ ರಾಡಿಗೆ ಎಳ್ದು ಎಲ್ಲಿ ಗಬ್ಬೆಬ್ಬಿಸಿ ಬಿಡ್ತಾನೋ ಗೋಡ ಅಂತ ಎದೆಗುದಿ. ಅಟ್ ಲೀಸ್ಟ್‌ ಕ್ಯಾಬಿನೇಟ್ ಪೊಜಿಷನ್ನಾದ್ರೂ ದಕ್ಕದಿದ್ದ ಮ್ಯಾಗೆ ದಳಕ್ಕೋದ್ರೇನು ಕಾಂಗೈಗೋದ್ರೇನು ಎಲ್ಲಿಗೋದ್ರೆ ಹೆಂಗೋ ಎಂಬ ಪೀಕಲಾಟ ಒಂದ್ಕಡೆ, ಅಧಿಕಾರವೇ ಬಂದು ಬಾಗಿಲು ತಟ್ಟೋವಾಗ ಉದಾಸೀನ ಮಾಡಿದ್ರೆ ಹೆಂಗೆ ಎಂಬ ಲಾಲಸೆ ಒಂದ್ಕಡೆ. ಹಿಂಗಾಗಿ ತಾವು ಯಾವ ಕಡೆ ನುಗ್ಗೋಣ ಅಂಬೋದೇ ತಿಳಿವಲ್ಲದಂಗಾಗಿ ವೇಟ್ ಅಂಡ್ ಸೀ ಪಾಲಿಸಿಗೆ ಜೋತು ಬಿದ್ದವರೆ. ಗೋಡ್ರಂತೂ ಈ ಆನೆಗಳಿಗೆ ಖೆಡ್ಡಾ ರೆಡಿ ಮಾಡ್ಕಂಡವ್ರೆ. ಇದೀಗ ಬಂದ ತಾಜಾ ಸುದ್ದಿ: ಸಿದ್ರಾಮು ಕಾಲು ಮುರ್ಕಂಡು ಪೊಜಿಶನ್ ಕಳ್ಕೊಂಡು ರಿಟೈರ್ಡ್ ಅಪಿಸಿಯಲ್ಲಂಗೆ ಥಿಂಕ್ ಟ್ಯಾಂಕ್ ಆಗಿ ಕುತ್ಕಂಬಾಕೆ ಮೇನ್ ಕಾರಣ ಗೋಡ್ರು ಅಲ್ಲವೇ ಅಲ್ಲ ಅಂದಿರೋ ಪುಲ್ ಟೈಂ ರಾಜಕಾರಣಿ ಕಂ ಪಾರ್ಟ್ ಟೈಂ ಸನ್ಯಾಸಿ ಪೇಜಾವರರು ಮತ್ತೂ ಮುಂದುವರೆಸಿ, ಕುರುಬರ ರ್‍ಯಾಲಿ ನಡೆಸಿ ಉಡುಪಿಗೆ ನುಗ್ಲಿ ತಮಗೆ ಎಗೆನೆಸ್ಟ್ ಆಗಿ ಕನಕನ್ನ ಎತ್ತಿಕಟ್ಟಿ ಮಠವನ್ನೇ ಅಪಲಾಯಿಸೋಕೆ ಸಿದ್ರಾಮು ಗ್ರೂಪು ಸ್ಕೆಚ್‌ ಹಾಕಿದ್ರಿಂದಾಗಿ ಮನನೊಂದು ಕೆಟ್ಟ ಕೋಪದಿಂದ ಕೊಟ್ಟ ಶಾಪದ ಪ್ರಭಾವವೇ ಅಂತ ಅವರಿವರ ಬಳಿ ಅಲವತ್ತಕೊಂಡ ಸುದ್ಧಿ ಹಬೈತೆ. ನಂಬಿದ್ರೆ ನಂಬಿ ಬಿಟ್ಟರೆ ಬಿಡ್ರಿ.
*****

( ದಿ. ೩೧-೦೮-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ಸಂಪತ್ತು
Next post ನಿರ್ಭಾಗ್ಯ ಸುಂದರಿ

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…