ಒಂದೇ ಮಾತು ಒಂದೇ ಮನಸು
ಒಂದೇ ನಡೆ ಒಂದಾಗಲಿ ಈ ನಾಡಿನ್ಯಾಗ
ಡಾಲರ್‌ಗಾಗಿ ಭಾಷೇನ ಒತ್ತಿ ಇಡೋ ಮಂದಿ
ಈ ನಾಡಿನ ಹಿತ ಹ್ಯಾಂಗ ಕಾಯ್ತಾರ
ಮಾಡ್ತೀವಿ ಕನ್ನಡದ ಪೂಜಿ ಅಂತಾರ
ಆಹ್ವಾನ ಪತ್ರ ಛಾಪಿಸ್ತಾರ ಆಂಗ್ಲ ಭಾಷೆಯೊಳಗ
ಆಂಗ್ಲದ ಗುಂಗಿನ್ಯಾಗ ಇಂಗ್ಲ್ಯಾಂಡ ಮಾಡ್ತಾರ
ಮೇರೀತೈತಿ ತಾರತಮ್ಯ ಬೇಧಭಾವ
ಆಂಗ್ಲ ಭಾಷೇನ ಬಳಸೀ ಬಳಸೀ
ಕೊಲ್ತಾರ ನಮ್ಮ ತಾಯಿ ನುಡೀನ
ಆಂಗ್ಲ ವ್ಯಾಮೋಹದ ಗುಹೆಯೊಳಗಿಂದ
ಹೊರ ಬರ್ರೀ ಕನ್ನಡದ ಬೆಳಕಿಗೆ
ಗುಲಾಮರಾಗ್ಬ್ಯಾಡ್ರಿ ಜಾಗತೀಕರಣದಿಂದ
ಮಾರಿಕೊಳ್ಳಬ್ಯಾಡ್ರಿ ತಮ್ಮತನವ
ಅರಿಯಿರಿ ಕನ್ನಡದ ಮರ್‍ಮಾನ
ಇದಕ್ಕೈತಿ ಭವ್ಯವಾದ ಇತಿಹಾಸ
ಅರಳು ಮಲ್ಲಿಗೀ ಕನ್ನಡದ ಕಂಪ
ದೂರ ದೂರ ಸಾಗರದಾಚೆ ಹರಡ್ಲಿ
ಇವರುಣ್ಣೋದು ಕನ್ನಡದನ್ನಾನ
ಇವರ ಜೀವಕ್ಕ ಕನ್ನಡದುಸಿರು
ಬದುಕು ಕನ್ನಡ ನೆಲ್ದಾಗ
ಕನ್ನಡ ಬ್ಯಾಡಾಂದ್ರ ಹ್ಯಾಂಗ?
ಲೀನವಾಗ್ತೈತಿ ಈ ಕಾಯ
ಕನ್ನಡದ ಮಣ್ಣಿನ್ಯಾಗ
ತೀರಿಸ್ರೀ ಈ ಮಣ್ಣಿನ ಋ….ಣಾನ.
*****



















