ಉದ್ದನ್ನ ವ್ಯಕ್ತಿಯ ಆಡೆತಡೆಗಳು

ಉದ್ದನ್ನ ವ್ಯಕ್ತಿಯ ಆಡೆತಡೆಗಳು

ಚಿತ್ರ: ಡೆಲ್ ಗ್ರೀನ್

ಒಂದು ಮುಂಜಾನೆ ಎದ್ದೆ; ರಿಪವ್ಯಾನ್ ವಿಂಕಲನು ಹದಿನೆಂಟು ವರ್ಷಗಳ ದೀರ್ಘ ನಿದ್ರೆಯಿಂದ ಎದ್ದು ಮೊಳಕಾಲನ್ನು ಮುಟ್ಟುತ್ತಿರುವ ಗಡ್ಡವನ್ನು ಕಂಡಂತೆ ನನ್ನನ್ನು ನಾನು ವಿಪರೀತ ಎತ್ತರವಾಗಿ ಬೆಳೆದದ್ದನ್ನು ಕಂಡೆ. ಮಲಗಿದ್ದ ಹಾಸಿಗೆ ದಿನದಂತೆ ಅಸ್ತವ್ಯಸ್ತವಾಗಿತ್ತು. ಹೊದ್ದುಕೊಂಡ ಶಾಲು ನನ್ನ ಜೇಟುಕಾಲನ್ನು ದಾಟಿ ಮೊಳಕಾಲಿಗೆ ಬಂದಿತ್ತು. “ಹಾಸಿಗೆಯಿದ್ದಷ್ಟು ಕಾಲನ್ನು ಚಾಚು” ಎಂದು ಹಿರಿಯರೇನೋ ಹೇಳಿದರು. ನನ್ನಂತಹ ಎತ್ತರ ಜನಾಂಗಕ್ಕೆ ಸೇರಿದ ದುರ್ದೈವಿಗಳು ಮಾತ್ರ ಕಾಲನ್ನು ಸುಖವಾಗಿ ಚಾಚುವಷ್ಟು ಹಾಸಿಗೆಯನ್ನು ಸಾವರಿಸಬೇಕೆನ್ನುವ ಮಾತಿಗೆ ತಲುಪಿದೆ. ಎದ್ದು ಪ್ರಾತರ್ವಿಧಿಯ-ದುರ್ದೆಶೆಗಳನ್ನು ಸಾಂಗೋಪಾಂಗವಾಗಿ ನೆರವೇರಿಸಲು ಅಡಿಗೆ ಮನೆಯ ಹೊಸ್ತಿಲನ್ನು ದಾಟುವ ಸುಸಂದರ್ಭದಲ್ಲಿ ತಲೆಗೆ ಪಟ್ ಎಂದು ಅಡಿಗೆ ಮನೆಯ ತಲೆಬಾಗಿಲು ಬಡೆದಾಗ ನನ್ನ ಅಪರಿಮಿತ ಬೆಳವಣಿಗೆಯ ಅನುಭವವು ತನ್ನಷ್ಟಕ್ಕೆ ತಾನೇ ಮನವರಿಕೆಯಾಯಿತು. ಇಷ್ಟು ಕಡಿಮೆ ಎತ್ತರ ತಲೆಬಾಗಿಲನ್ನು ಕಟ್ಟಿಸಿದ ಹಿರಿಯರನ್ನು ಮನಸಾರೆ ಶಪಿಸಿ ಮುಂದೆ ಸಾಗಿದೆ.

ನನ್ನ ಪ್ರಾಥಮಿಕ ಶಾಲೆಯ ಪ್ರಿಯಗುರುಗಳನ್ನು ಮುಂಜಾವಿನ ಮುಂಬೆಳಗಿನಲ್ಲಿ ನನೆದರೆ-ಮಾಡಿದ್ದ-ಮಾಡಿರದ-ಮಾಡಲು ಹೆದರಿದ ಪಾಪಗಳೆಲ್ಲ ತೊಳೆದುಕೊಂಡು ಹೋಗುವವೆಂದು ನನ್ನ ಮೂಢನಂಬಿಕೆ. ಯಾಕೆಂದರೆ ನನ್ನ ಅರೆಕೊರೆಗಳನ್ನು, ಲೋಪದೋಷಗಳನ್ನು ಮುಕ್ತಕಂಠವಾಗಿ ಅವರಲ್ಲದೆ ಇನ್ನಾರು ನನ್ನ ಅವಲಕ್ಷಣವನ್ನು ನನ್ನ ಮುಖಕ್ಕೆ ಎಸೆಯುವಂತೆ ಹೇಳಿಕೊಟ್ಟಾರು? ಒಮ್ಮೆ ಬೂದಿಯೊಳಗಿನ ‘ಬಳುವ’ ಎಂದರು. ಇನ್ನೊಮ್ಮೆ ‘ಹೇಸಿ’ ಎಂದರು. ಹೇಸಿ ಗುರುವಿಗೆ ಸಮಗಾರ ಶಿಷ್ಯ ಅಂತ ಅಂದುಕೊಂಡೆ. ಮಗುದೊಮ್ಮೆ ‘ದರಿದ್ರ’ ಎಂದರು. ನನಗೆ ದರಿದ್ರ ಅಂದ ಅವರಲ್ಲಿ ಯಾವ ಶ್ರೀಮಂತಿಕೆಯು ಉಕ್ಕಿ ಹರಿಯುತ್ತಿತ್ತೋ ಯಾರು ಬಲ್ಲರು? ಯಾವ ಸಂಪನ್ಲಕ್ಷ್ಮಿಯು ಇವರ ಪದತಳದಲ್ಲಿ ಕುಳಿತು ಸೇವೆ ಸಲ್ಲಿಸಿದ್ದಳೋ. ಅವರ ಪ್ರಶಂಶಾತ್ಮಕ ವಾಗ್ಝರಿಯಲ್ಲಿ ಮಿಂದು ಪಾವನವಾಗುತ್ತಿದೆ. ಅವರ ಅಮೃತಹಸ್ತದಲ್ಲಿ ನನ್ನ ಕಿವಿಗಳನ್ನು ನಿರಾಸಕ್ತಿಯಿಂದ ಕೊಟ್ಟುನಿಲ್ಲುತ್ತಿದ್ದ ನಾನು ಸ್ಪರ್ಗದ ಬಾಗಿಲಿನ ಒಂದೊಂದು ಮೆಟ್ಟಲನ್ನು ಹಾತುತ್ತಿದ್ದೆ. ಇಂದು ಜಗತ್ತು ನನ್ನನ್ನು ಒಂದು ಮೂರ್ತಿಯನ್ನಾಗಿ ಮಾಡಿ ನಿಲ್ಲಿಸಿದೆ. ನೋವು, ಅಪಮಾನ, ಕಷ್ಟಕಾರ್ಪಣ್ಯ, ಅವಮಾನ, ನಾಚಿಕೆ ಮುಂತಾದ ಸುತ್ತಿಗೆ ಏಟುಗಳಿಂದ ರೂಪವೇನೋ ನಿರ್ಮಾಣವಾಗಿದೆ. ಮೂರ್ತಿಯ ಉದ್ಘಾಟನೆಯನ್ನು ಮಾಡಿದ ಕೀರ್ತಿ ಅವರಿಗೇನೇ ಸಲ್ಲಬೇಕು (ಪ್ರಥಮಂ ವಂದೇ ಪ್ರಾಥಮಿಕ ಶಾಲಾ ಗುರುಂ.)

ಅಂಥ ಗುರುಗಳ ಸಾನ್ನಿಧ್ಯದಲ್ಲಿ ಹೋಗುವಾಗ ಭಯ, ಭಕ್ತಿಯಿಂದ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅತ್ತೆಯ ಮನೆಗೆ ಪ್ರವೇಶ ಮಾಡುವಂತೆ ಕ್ಲಾಸಿಗೆ ಹೋದೆ. ತಡವಾಗಿ ಹೋಗಿದ್ದಕ್ಕೆ ನನ್ನ ಜೀವ ಮೊದಲೇ ವಿಲಿವಿಲಿ ಒದ್ದಾಡುತ್ತಿತ್ತು. ಇನ್ನೂ ದರಿದ್ರ ಪಿಗ್ಮಿ ಬಂದಿಲ್ಲವೇ ಎಂದು ನನ್ನ ಬಗ್ಗೆ ಈಗಾಗಲೇ ಕೇಳಿದ್ದರೆಂದು ತೋರುತ್ತದೆ. ನಾನು ಹೊಸ್ತಿಲಲ್ಲಿ ಕಾಲನ್ನಿಟ್ಟು ನುಸುಳಿ ಹೋಗಬೇಕೆಂದೆ; ಸಾಧ್ಯಾವಾಗಲಿಲ್ಲ. ನನ್ನ ಕಡೆ ಅವರ ದೃಷ್ಟಿ ಹೊರಳಿತು. ಬೇಟೆಗಾರನಿಗೆ ಬೇಟೆಯಂತೆ ನನ್ನನ್ನು ಹರಿದು ತಿನ್ನುವಂತೆ ನೋಡಿದರು. I could not stand his rigid stare. ಅಪಾದ ಮಸ್ತಕನಾಗಿ ಮೇಲ್ಪದಿಯ ಟೊಪ್ಪಿಗೆಯವರೆಗೆ ಕನ್ನಡಕ ತೆಗದು ಒರೆಯಿಸಿ ನೋಡಿಯೇ ನೋಡಿದರು. ನನ್ನ ಅಪರಿಮಿತ ಬೆಳವಣಿಗೆಯ ಜ್ಞಾನೋದಯವಾಯಿತು-ನಮ್ಮ ಗುರುಗಳ ಪ್ರಚಂಡ ಗುಹೋಪಾದಿಯಲ್ಲಿ ಇರುವ ತಲೆಯಲ್ಲಿ ಅವರ ದರಿದ್ರ ಪಿಗ್ಮಿ ನಾಮಕರಣಕ್ಕೆ ಆಹ್ವಾನವೋ ಎಂಬಂತೆ ನನ್ನ ಬೆಳವಣಿಗೆ ಅಪರಿಮಿತವಾಗಿಯೇ ಇತ್ತು.

“ಏನೋ ದರಿದ್ರಾ-ಕಾಲಿಗೇನು ಪಡವಲಕಾಯಿಯ ಬಳ್ಳಿಯಂತೆ ಕಲ್ಲು ಕಟ್ಟಿಕೊಂಡು ಮಲಗಿದ್ದೆಯಾ? ಕತ್ತೆ!” ಎಂದರು. ನಾನು ಪದ್ಧತಿಯಂತೆ ನಿರುತ್ತರಕುಮಾರನಾದೆ. ಅದು ಅವರ ಆಶೀರ್ವಾದವೋ ಶಾಪವೋ ಅಂದಿನಿಂದ ಬೆಳೆದೇ ಬೆಳೆದೆ. ಸದಾ ದರಿದ್ರ ಪಿಗ್ಮಿಯೆಂದು ಹೆಸರು ಗಳಿಸಿದ್ದ ನಾನು ಉದ್ದನ್ನ ಮೊದ್ದ ಎನ್ನುವ ಕಾಲ ಬಂದೇ ಬಂತು.

“ಉದ್ದನ್ನವರಿಗೆ ಬುದ್ಧಿಯಿಲ್ಲ” ಎನ್ನುವ ತಿರಸ್ಕಾರಪೂರಿತ ಗಾದೆಯ ಮಾತೆಂದರೆ ಸಮಾಜವು ಉಗುಳಿದ ತಂಗುಳನ್ನವೆಂದೇ ನನ್ನ ತಿಳುವಳಿಕೆ. ಶಾಲೆಯ ಮಾಸ್ತರರಿಗೆ ಬುದ್ಧಿಸರಿಯಿಲ್ಲವೆಂದು ಸಮಾಜವು ಒದರುತ್ತ ಇದ್ದರೂ ಬೆಳೆಯುವ, ನಿರ್ಮಾಣಗೊಳ್ಳುತ್ತಿರುವ, ಮೇಣದ ಮುದ್ದೆಯಂತಿರುವ ತಮ್ಮ ಮಕ್ಕಳನ್ನು ಅದಾವ ಶ್ರದ್ಧೆಯಿಂದ ವಿಶ್ವಾಸದಿಂದ ಬುದ್ದಿಹೀನ ಮಾಸ್ತರನ ವಶದಲ್ಲಿ ಕೊಡುತ್ತಾರೆನ್ನುವುದು ಗೂಢವಾಗಿಯೇ ಉಳಿದಿದೆ; (ಮಾತಿಗೂ-ಕೃತಿಗೂ ಯಾವ ಬಾದರಾಯಣ ಸಂಬಂಧವೂ ಇದ್ದಂತಿಲ್ಲ.) ಸುಳ್ಳಿನ ಮೊಟ್ಟೆಯೆಂದು ವಕೀಲನನ್ನು ತೆಗಳಿ ಅವನ ಮನೆಗೆ ಚಪ್ಪಲು ಹರಿಯುವವರೆಗೆ ಅದಾರು ತಪ್ಪದೆ ಸಂದರ್ಶಿಸುತ್ತಾರೆ? ರಾಜಕಾರಣಿಯು ವಿಶ್ವಾಸಘಾತಕಿಯೆಂದು ತಿಳಿದೂ ಸಮಾಜವು ಓಟು ಹಾಕಿ ತಮ್ಮ ಮುಖಂಡತ್ವದ ಗುತ್ತಿಗೆಯನ್ನು ಅರ್ಪಿಸುವುದಿಲ್ಲವೆ? ಹೀಗೆಯೇ ಮಾತಿಗೂ ಕೃತಿಗೂ ಯಾವ ಸಂಬಂಧವೂ ಇಲ್ಲವೆನ್ನುವ ಸಂದರ್ಭವೊದಗಿದೆ. ಪುರಾಣದ ಬದನೆಕಾಯಿಯನ್ನು ತಿನ್ನುವ ಪುರಾಣಿಕರ ಸಂತೆಯೇ ಈ ಜಗತ್ತು ಎಂದು ನನಗೆ ತೋರುತ್ತದೆ.

“ಉದ್ದನ್ನ ಮೊದ್ದ” “ಉದ್ಧನ್ನ ಬುದ್ದಿಹೀನ” ಎಂದಾಗಲೆಲ್ಲ ಚೇಳು ಕುಟಿಕಿದ ವೇದನೆಯೇ ಆಗುತ್ತದೆ. ‘ಮೊದ್ದ’ ಎನ್ನುವ ಮಾತು ಕಿವಿಗೆ ಅಷ್ಟೊಂದು ಹಿತಕರವಿಲ್ಲದಿದ್ದರೂ ತಾಳಿದರೆ ತಾಳಿಯೇನು. ಉದ್ದನ್ನ ಎನ್ನುವ ಮಾತು ನೇರವಾಗಿ ಎದೆಯ ಗುಂಡಿಗೆಗೇನೇ ತಾಗುತ್ತದೆ. ಸಾಧಾರಣ ನಿಲುವಿನ ಮೊದ್ದರೂ ಇರುತ್ತಾರೆ ಎನ್ನಿ. ಆದರೆ ಇದ್ದೂ ಇಲ್ಲದಂತೆ ಅವರ ಬಾಳ್ವೆ. ನಾಲ್ಕು ಜನರ ಕಣ್ಣನ್ನು ಕೋರೈಸುವಷ್ಟು ಎತ್ತರವಿರುವುದಿಲ್ಲವಲ್ಲ. ಬೊಟ್ಟುಮಾಡಿ ತೋರಿಸುವಷ್ಟೂ ನಿಲುವು ಇರದ ಮೊದ್ದರು ಜಗದ ಕಾಕ ಕ್ರೂರ ಕಣ್ಣಿಗೆ ಬೀಳುವದಿಲ್ಲ. ಕಾಲೇಜಿನಲ್ಲಿ ತುಂಟತನವನ್ನು ಮಾಡಿ ಬಡ ‘ಲೆಕ್ಚರರ’ ಕಣ್ಣು ತಪ್ಪಿಸುವುದು ಸಾಧಾರಣ ನಿಲುವಿಗೆ ನಿಲುಕುವಂತಹದು. ಉದ್ದನ್ನ ಮೊದ್ದು ವಿದ್ಯಾರ್ಥಿಗೆ ಅಲ್ಲ. ಅದರಂತೆ ಮೊದ್ದುತನವನ್ನು ನಾಲ್ಕು ಜನರ ಕಣ್ಣಿಗೆ ಬೀಳದಂತಿರುವ-ಸಾಧಾರಣ ನಿಲುವಿನವನಿಗೆ ‘ಮೊದ್ದ’ನೆಂದು ಅನ್ನಲು ಯಾರೂ ಹೋಗಲಿಲ್ಲವೆಂದೇ ಕಾಣುತ್ತದೆ.

ಆದರೆ ಅದೇ ಪ್ರಸಿದ್ದರಿದ್ದರೆ, ಸಾಧಾರಣ ನಿಲುವಿನವರಿಗೆ ಮಿತಿ ಮೀರಿದ ಅಳತೆಗೆಟ್ಟ ಗೌರವ ಸಂದಾಯವಾಗುತ್ತದೆ. ಲಾಲಬಹದ್ದೂರ ಶಾಸ್ತ್ರಿ ಐದು ಪೂಟು ಇದ್ದರೇನಾಯ್ತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿಸ್ತಾರವಾಗಿ ಹಬ್ಬಿದ ಸಸ್ಯಶಾಮಲೆಯ ಭರತಖಂಡದ ಭಾರ ಹೊತ್ತಿದ್ದಾರೆ. ಕಾಣಲು ವಾಮನಾವತಾರವಾದರೇನಾಯ್ತು. ವಾಮನ ಮೂರು ಲೋಕವನ್ನೇ ದಾನವಾಗಿ ಕೇಳಿದಂತೆ ಎಷ್ಟು ಖಂಡಗಳಿಂದ ಉಪಖಂಡಗಳಿಂದ ರಾಶಿಯಾಗಿ ಧಾನ್ಯಕಣಜವನ್ನು ತಂದು ಹಾಕಿದ್ದಾರೆ. ಆ ಸಣ್ಣ ದೇಹದಲ್ಲಿ ಅದೆಂಥ ಭವ್ಯವಾದ ಅದ್ಭುತವಾದ ಶಕ್ತಿ ಹುದುಗಿಕೊಂಡಿದೆ ಎಂದು ಉದ್ಗರಿಸುತ್ತದೆ ಜನ. Gaint spirit in a frail body ಎಂದು ದೇಶವಿದೇಶಗಳ ಪತ್ರಿಕೆಗಳಲ್ಲಿ ಸುದ್ದಿಮಾಡುವ ವ್ಯಕ್ತಿಗಳಾಗಿ ಕುಳಿತರು. ನೆಪೋಲಿಯನ್ನನ ಸಾಧಾರಣ ನಿಲುವಿಗೂ ಇದೇ ರೀತಿಯ ಪ್ರಶಂಸೆಯ ಸುರಿಮಳೆಯೇ ಆಯಿತು. ಹೀಗೆ ಸಾಧಾರಣ ನಿಲುವಿನವರು ಪ್ರಸಿದ್ಧರಾದರೆ, ಏನೋ ಕೌತುಕ, ಅದ್ಭುತ ಅದ್ವಿತೀಯ ಘಟನೆ, ಪವಾಡ ಆಯಿತೆನ್ನುವಷ್ಟು ಕೋಲಾಹಲ. ಅವರ ದೈಹಿಕ ಕೊರತೆ ಅವರ ಹೆಚ್ಚಿನ ಸ್ಥಾನಮಾನ ಗಳಿಸಲು ಅನುಕೂಲವೇ ಆಗುತ್ತದೆ. ಉದ್ದನ್ನ ವ್ಯಕ್ತಿಗೆ ಮೊದ್ದನೆನ್ನಿಸಿಕೊಳ್ಳಲು ಅವಕಾಶ ಕಾದು ಕುಳಿತಿರುವಂತೆ, ಗಿಡ್ಡ ಸಾಧಾರಣ ನಿಲುವಿನ ವ್ಯಕ್ತಿಗಳಿಗೆ ಪ್ರಸಿದ್ದಿಯ ದೊಡ್ಡಸ್ತಿಕೆಯ ಮನ್ನಣೆಯ ಮಹಾದ್ವಾರಗಳು ಯಾವಾಗಲೂ ತೆರೆದಿರುವಂತೆಯೇ ಕಾಣುತ್ತದೆ. ಹಾಗಿದ್ದರೆ ಪ್ರಸಿದ್ದಿಯು ಬೇಡ ಎಂದು, ನಿಲುಕದ ದ್ರಾಕ್ಷಿ ಹುಳಿಯೆಂದು ನರಿ ಹೇಳುವಂತೆ ನಾನು ಹೇಳಲಾರೆ.

ನಾನಂತೂ ವಿಪರೀತ ಉದ್ದನ್ನ ವ್ಯಕ್ತಿಯಾಗಿರುವದರಿಂದ, ಪ್ರಸಿದ್ಧಿಯ ಮಹಾದ್ವಾರಗಳು ನನ್ನ ಪಾಲಿಗೆ ಬಹುಮಟ್ಟಿಗೆ ಮುಚ್ಚಿದಂತೆಯೇ ಸೈ. ಮೊದ್ದನೆನ್ನಿಸಿಕೊಳ್ಳಬಾರದೆನ್ನುವ ಒಂದೇ ಒಂದು ಧೃಢಸಂಕಲ್ಪದಿಂದ ನನ್ನ ಬೆಳವಣಿಗೆ ಎಂದು ನಿಲ್ಲವದು ಎನ್ನುವ ವಿಚಾರ ವರ್ಷಗಟ್ಟಲೆ ನನ್ನ ತಲೆಯಲ್ಲಿ ಹೆಗ್ಗಣದಂತೆ ಕೊರೆಯುತ್ತಲೇ ಇತ್ತು. ಬಸವಣ್ಣನ ಬೆಳವಣಿಗೆಯನ್ನು ನಿಲ್ಲಿಸಲು ಆತನ ಕುತ್ತಿಗೆಯ ಮೇಲೆ ಮೊಳೆ ಜಡಿದರೆನ್ನುವ ಮಾತು ಕೇಳಿದ್ದ ನಾನು ಗೆಳೆಯರಾರಾದರೂ ಭೆಟ್ಟಿಯಾದ ಕ್ಷಣ ಚಂಗನೇ ಹಾರಿ ಸಲಿಗೆಯ ಮಾತಾಡಿ, ಕಾಫಿಯ ಲಂಚವನ್ನು ಅರ್ಪಿಸಿ ಅವರ ಕೈಗಳನ್ನು ಏನಕೇನ ಪ್ರಕಾರೇಣ ನನ್ನ ಹೆಗಲ ಮೇಲೆ ಹಾಕಿ ಬೆಳವಣಿಗೆಯ ಅಸ್ತಮಾನವನ್ನು ಎದುರುನೋಡುವ ನನ್ನ ಹುಚ್ಚಾಟದ ದಿನಗಳೂ ಸರಿದು ಹೋದವು. ಯಾವ ಪ್ರಚಂಡ ಶಕ್ತಿಯು ನನ್ನೊಳಗೆ ಕುಳಿತು ನನ್ನನ್ನು ಹೀಗೆ ಲೋಕದ ಪರೀಕ್ಷೆಗೆ ಈಡು ಮಾಡಿದೆಯೋ ಏನೋ.

ನಾನು ಸಾಧಾರಣ ನಿಲುವಿನ ವ್ಯಕ್ತಿಗಳನ್ನು ನೋಡಿದಾಗಲೊಮ್ಮೆ ಅಸೂಯೆಯ ಜ್ವಾಲೆಯು ನನ್ನ ಮೈಯನ್ನೆಲ್ಲ ವ್ಯಾಪಿಸಿ, ನನ್ನ ಹೃದಯವನ್ನೇ ಹುರುಪಳಿಸುವಂತೆ ಮಾಡುತ್ತದೆ. ವಯಸ್ಸಾದರೂ ತಾರುಣ್ಯದ ಕಳೆ ಹೋಗಿರುವುದಿಲ್ಲ ಅಥವಾ ಹೋದಂತೆ ಕಾಣುವುದಿಲ್ಲ. ಅವರಲ್ಲಿಯ ಅದಮ್ಯ ಉತ್ಸಾಹದ ಸೆಲೆ ಬತ್ತಿಹೋಗಿರುವುದಿಲ್ಲ. ಅದೇ ಒಂದು ಕ್ಷಣ ಅವರ ಸ್ಥಾನದಲ್ಲಿ ನಿಂತು ನಿಟ್ಟಿಸಿದರೆ ನಮ್ಮ ಜನಾಂಗದ ಕಡೆ ಕ್ರೂರ ಕಣ್ಣಿನಿಂದ ನೋಡುತ್ತಾರೆ; ನಿಡಿದಾದ ನಿಟ್ಟುಸಿರನ್ನು ಬಿಡುತ್ತಾರೆ. ಪೇಪರಿನಲ್ಲಿ ಬರುವ ಜಾಹೀರಾತಿನ ಔಷಧಿಗಳನ್ನೆಲ್ಲ ಗುಪ್ತವಾಗಿ ತರಿತರಿಸಿ ಗುಟಕರಿಸುತ್ತಾರೆ. ಗುಟುಕು ಗುಟುಕಿಗೂ ಒಂದು ಮಿಲಿಮೀಟರ ಎತ್ತರವಾದೆವೋ ಎನ್ನುವ ಆತ್ಮಪೌರುಷ ಹೊಂದುತ್ತಾರೆ. ಹೀಗೆ ವ್ಯಕ್ತಿವ್ಯಕ್ತಿಗೂ ತನ್ನ ಜೀವನದ ಬಗೆಗಿರುವ ಅತೃಪ್ತಿಯು ಸಾಮಾನ್ಯ ವಿಷಯವೆಂದೇ ಕಾಣುತ್ತದೆ. ದೇವರ ಮೇಲೆ ರಿಟ್ ಹಾಕಲು ಬರುತ್ತಿದ್ದರೆ ಶತಮಾನಗಳು ಕಳೆದರು-ಧೂಳುಹಾರಿಸಲು ಬಾರದಷ್ಟು ಫೈಲುಗಳ ರಾಶಿಯೇ ಅಸಂಖ್ಯ ಕಾರಕೂನರ ಮುಂದೆ ಬೀಳಬಹುದಿತ್ತು. ಗೊಣಗುಟ್ಟುವುದು, ಆಕ್ಷೇಪ ಎತ್ತುವುದು, ಎರಡನೇಯವರ ದೊಡ್ಡಸ್ತಿಕೆಯನ್ನು ಸಹಿಸದಿರುವುದು, ತನಗಿಲ್ಲದ ಹಾಗೂ ತನ್ನಳವಿಗೆ ದಕ್ಕದ ಬಿಸಿಲ್ಗುದುರೆಯ ಬೆನ್ನು ಹತ್ತುವುದು ಮಾನವನ ಸ್ಪಭಾವದ ಗುಣವಿಶೇಷಗಳೆಂದು ಕಾಣುತ್ತದೆ. ಬೀದಿಯಲ್ಲಿ ಹೋಗುವವರ ಮುಖವನ್ನು ಪರೀಕ್ಷಿಸಿ ನೋಡಿ, ಹತ್ತರಲ್ಲಿ ಒಂಬತ್ತು ಜನ ಮುಖದ ಮೇಲೆ ಆಕ್ಷೇಪಗಳನ್ನೆತ್ತಿ ಗೊಣಗುಟ್ಟುವ ಸ್ವಭಾವವೇ ಬರೆದಿರುತ್ತದೆ. ಜೀವನವೆಂದರೆ ಇಂಥ ಆಕ್ಷೇಪ ಗೊಣಗಾಟಗಳ ಒಂದು ಮುಗಿಯದ ಕತೆಯೆಂದೇ ಕಾಣುತ್ತದೆ.

ಹೀಗಿದ್ದು ಎತ್ತರ ನಿಲುವಿನವರಿಗೆ ಜಗತ್ತೇ ಮೋಸದ ಸಂತೆಯಾಗಿ ಕಾಣುತ್ತದೆ. ಮೋಸದ ಸಂತೆಯಲ್ಲಿ ಹಾನಿಗೀಡಾದರೂ ಕೆಲವು ಗುಣಗಳನ್ನು ಕಲಿಯುತ್ತಾರೆ. ವ್ಯವಹಾರಿಕವಾಗಿ ಬಟ್ಟೆ ಖರೀದಿ ಮಾಡಲು ಹೋದ ಇಂಥ ಸುದೈವಿ ಎತ್ತರ ಮನುಷ್ಯರು ಅಂಗಡಿಯಲ್ಲಿ ಲೋಡಿಗಾನಿಸಿ ಕುಳಿತರೂ ನಿಂತವರ ನಿಲುವಿಗೆ ಇರುತ್ತದೆ. (ನಾನು ನೋಡಿದ ವಿಶ್ವದ ಅದ್ಭುತಗಳಲ್ಲಿ ಒಂದು ಚಿತ್ರ. ಸ್ವಾಮಿಗಳೊಬ್ಬರ ಎದುರು ಎತ್ತರವಾಗಿ ಭವ್ಯವಾಗಿ ಬೆಳೆದ ಮಹಾರಾಜರೊಬ್ಬರು ತಲೆಬಾಗಿಸಿ ನಿಂತ ಚಿತ್ರ. ನೋಡಿದರೆ ಆಶೀರ್ವಾದ ಮಾಡುವ ಸ್ವಾಮಿಗಳ ಕೈ ಕೆಳಗಿದೆ. ಬಾಗಿನಿಂತ ಮಹಾರಾಜರ ತಲೆ ಮೇಲೇರಿದೆ.) ಸಾಮಾನ್ಯವಾಗಿ ಎಲ್ಲರಿಗಿಂತಲೂ ಹೆಚ್ಚು ಗಜಬಟ್ಟೆ ತೆಗೆದುಕೊಂಡರೂ ಟೇಲರ್ ಮಾತ್ರ ಮೂಗು ಮುರಿಯದೇ ಬಿಡುವದಿಲ್ಲ. ‘ನಿಮ್ಮ ದೇಹಕ್ಕೆ ಪ್ಯಾಂಟೇ ಸರಿಯಲ್ಲ’ ಎಂದು ಮುಖಕ್ಕೆ ಹೊಡೆಯುವಂತೆ ಮಾತಾಡುತ್ತಾನೆ. ನಮ್ಮ ನಿಲುವು ಹೆಚ್ಚು ಬಟ್ಟೆಯನ್ನು ಕದಿಯಲು ಹೆಚ್ಚು ಅನುಕೂಲ ಪರಿಸ್ಥಿತಿಯನ್ನು ಒದಗಿಸಿಕೊಡುತ್ತದೆ. ಬಾಟಾ ಶೂ ಕಂಪನಿಗಳಂತೂ ನಮ್ಮ ಕಾಲಿನ ಅಳತೆಯ ಬೂಟುಗಳನ್ನಾಗಲಿ, ಚಪ್ಪಲಿಗಳನ್ನಾಗಲಿ ಕಾಣದೇ ‘ಸ್ಪೆಶಲ್ ಆರ್ಡರ್’ ಕೊಟ್ಟು ಮಾಡಿಸಬೇಕಾಗುತ್ತದೆ. ಹೀಗೆ ವ್ಯಾವಹಾರಿಕ ಜಗತ್ತೆಲ್ಲ ನಮಗೆ ಮೋಸ ಮಾಡಲು ಸಂಚು ಹಾಕಿದಂತೆ ಭಾಸವಾಗುತ್ತದೆ. ಎಲ್ಲಿ ನೋಡಿದರೂ ಕಳ್ಳರೇ.

ಎತ್ತರ ನಿಲುವಿನ ಆಸಾಮಿ ಸಾಧಾರಣವಾಗಿ ತಾಳ್ಮೆವಂತನೇ ಆಗಿರುತ್ತಾನೆ. ‘ನಂದಿಯ ಕೋಲು’ ಬರುತ್ತದೆ. ‘ಒಂಟೆಯ ಡುಬ್ಬ ಹೊರಟಿದೆ’ ಎನ್ನುವ ಚುಚ್ಚು ಮಾತುಗಳಿಗೆ ನಾವು ಎಂದಾದರೂ ಲಕ್ಷ್ಯ ಕೊಡುತ್ತೇವೆಯೆ? ಛೇ ಎಂದೂ ಇಲ್ಲ. ನೂರು ಸಲ, ಸಹಸ್ರ ಸಲ ಬಾಗಿಲ ತಲೆಬಡೆದು ದಡ್ಡುಗಟ್ಟಿದ ತಲೆ ಹೇಳುತ್ತದೆ. “ಇನ್ನಿಷ್ಟು ಬಾಗು, ಇನ್ನಿಷ್ಟು ಬಾಗು. ಇದಕ್ಕಿಂತಲೂ ಜಗತ್ತಿನಲ್ಲಿ ಇನ್ನೇನಿದೆ ಕಲಿಯಲಿಕ್ಕೆ? ಯಾರ ಮನೆ ಪ್ರವೇಶ ಮಾಡಬೇಕಿದ್ದರೂ ಮೊದಲು ನಾನು ಪರೀಕ್ಷಿಸುವುದು ಆ ಯಜಮಾನನ ಶ್ರೀಮಂತಿಕೆಯನ್ನಲ್ಲ ಔದಾರ್ಯವನ್ನಲ್ಲ ಆ ಮನೆಯ ಯಜಮಾನನ ಬಾಗಿಲ ಚೌಕಟ್ಟಿನ ಸುತ್ತಳತೆಯನ್ನು, ಬಾಗಿಲ ಎತ್ತರವನ್ನು. ಒಂದೊಂದು ಹೆಜ್ಜೆಯಿಡುವಾಗಲೂ ಎಚ್ಚರಿಕೆಯಿಂದ, ತಾಳ್ಮೆಯಿಂದ, ಗುರುತ್ವ ಮಧ್ಯಬಿಂದುವು ತಪ್ಪದಂತೆ ಶಿವಶಿವ ಎನ್ನುವ ನಾನು ಶರಣ ಸಂತಾನಕ್ಕೆ ಸೇರಿದವನು. ದೂರದಲ್ಲಿ ಬಿದ್ದುಕೊಂಡಿರುವ ವಸ್ತುವನ್ನು ತಕ್ಕೊಳ್ಳಲು ನಾನೇನು ಏಳಬೇಕಾಗಿಲ್ಲ. ಚಟುವಟಿಕೆಯಿಂದಿರಲು ನಾನೇನು ಸಾಧಾರಣ ನಿಲುವಿನವನೆ? ಕೈ ಚಾಚಿದರೆ ಇದ್ದಲ್ಲಿಯ ವಸ್ತು ನನ್ನ ಹಸ್ತಗತವಾಗುತ್ತದೆ. ಆಲಸ್ಯದ ಮಾಧುರ್ಯವನ್ನು ಸವಿಯಬಲ್ಲವರು ಎತ್ತರ ನಿಲುವಿನ ಮಹನೀಯರಲ್ಲದೆ, ಸಾಧಾರಣ ನಿಲುವಿನ ಕ್ಷುದ್ರ ವಂಶದವರಲ್ಲ.

ಹಾರ್ಡಿಯು ತನ್ನ ಕಾದಂಬರಿಯ ಪಾತ್ರವೊಂದನ್ನು ವರ್ಣಿಸುವಾಗ ಹೇಳಿದ್ದಾನೆ- ವಿಚಾರದ ಗೆರೆಗಳು ಆತನ ಸೌಂದರ್ಯದ ಗೆರೆಗಳನ್ನು ಅಳುಕಿಸುವಂತೆ ಮಾಡಿದವು. ಅದರಂತೆ ಎತ್ತರ ದೇಹದಾರ್ಡ್ಯವು ಮನುಷ್ಯನ ತಗಲು ತಿಪಲುಗಳನ್ನು ವ್ಯವಹಾರಿಕ ಜಾಣ್ಮೆ- ಮೋಸಗಾರಿಕೆಯನ್ನು ಅಳಕಿಸುತ್ತದೆ ಎಂದು ತಿರುಗಿಸುವಲ್ಲಿ ಕಲ್ಪನೆಯ ಕೈಚಳಕವೇನೂ ಇಲ್ಲ. ಎತ್ತರ ನಿಲುವಿನವರು, ಪಾಪದ ಲೇಪವೇ ಹತ್ತದ, ಮೋಸಗಾರಿಕೆಯ ಲವಲೇಶಷವೂ ಅಂಟಿಕೊಳ್ಳದ ಮುಗ್ಧಜೀವಿಗಳು. ಅವರ ನಿಲುವನ್ನಾದರೂ ನೋಡಿ. ಆಕಾಶದ ಕಡೆ ಒಲಿದಿರುವ ಆ ನಿಲುವು ಜೀವನದ ಕ್ಷುದ್ರತೆಯನ್ನು ಕುರೂಪವನ್ನು ಮೆಟ್ಟಿನಿಲ್ಲುವಂತಹದು.

ಎತ್ತರವಾಗಿ ಬೆಳೆದು ನಿಲ್ಲುವುದು ಪುರುಷನ ಗುಣಧರ್ಮ. ಹಾಗೆ ಬೆಳೆಯುವ ವ್ಯಕ್ತಿ ವಿಶ್ವಾಸಕ್ಕೆ ಅರ್ಹನಲ್ಲನೆನ್ನುವ ಮಾತು Ceasarನ `He is lean and hungry looking- Therfore he is dangerous’ ಎನ್ನುವ ಮಾತನ್ನೇ ಸಾಧಾರಣ ನಿಲುವಿಗೆ ತಿರುಗಿಸಬಹುದು. ನಾವು ಜೀವಿಸುತ್ತಿರುವ ಕಾಲ ಬೌದ್ಧಿಕ, ಸಾಂಸ್ಕೃತಿಕ ಮಟ್ಟದಲ್ಲಿ ಸಾಧಾರಣ ನಿಲುವಿನ ಕಾಲ. ಎಲ್ಲಿ ನೋಡಿದಲ್ಲಿ ಕ್ಷುದ್ರತೆ, ಅಲ್ಪತೆ ತಾಂಡವಾಡುತ್ತಿರುವ ಅವಸಾನ ಅವಧಿ. ನಮ್ಮ ಸುತ್ತಲೂ ನೆರೆದಿರುವ ಜನರೆಲ್ಲರಲ್ಲಿ ಬಹುಮಟ್ಟಗೆ ಆತ್ಮದ ಕುರೂಪತೆಯನ್ನು, ಮನಸ್ಸಿನ ಜಾಡ್ಯವನ್ನು ಹೊಂದಿದವರು. ಇಂಥ ಮರುಭೂಮಿಯ ರಣಗುಟ್ಟುವ ವಾತಾವರಣದಲ್ಲಿ ದೈಹಿಕವಾಗಿ ಎತ್ತರ ನಿಲುವಿನ ಭೆಟ್ಟಿಯಂದರೆ-ಓಯಸಿಸ್‍ನ ಹಸಿರು ಹುಲ್ಲಿನ ದರ್ಶನದಷ್ಟೇ ಅಪರೂಪವಾಗಿದೆ. ವ್ಯಾವಹಾರಿಕವಾಗಿ ಮೊದ್ದನೆನ್ನಿಸಿಕೊಳ್ಳುವ ವ್ಯಕ್ತಿ ತನ್ನ ಗಾಂಭೀರ್ಯದಿಂದ ಆತ್ಮಗೌರವವನ್ನು ಇಟ್ಟುಕೊಳ್ಳಬಲ್ಲವನಾಗಿದ್ದಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಸ ಆಸೆಗೆ ಕಾರಣವೇ
Next post ಹುರಿಯಾಳು

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys