ಎಲ್ಲಿ ಕುಂತಾನೊ ದೇವರು

ಎಲ್ಲಿ ಕುಂತಾನೊ ದೇವರು ಎಲ್ಲವ
ನೋಡುತ ಕುಂತಾನೊ ದೇವರು||

ನ್ಯಾಯಾಲಯದಲಿ ಜಡ್ಜನ ಮುಂದೆ
ದೇವರ ಮೇಲೆ ಪ್ರಮಾಣ ಮಾಡಿಸಿ
ಸುಳ್ಳನೆ ವಾದಿಸಿ ಸಾಧಿಸಿ ಗೆಲ್ಲುವ
ಕಳ್ಳರ ಭಂಡರ ಉಳಿಸ್ಯಾನಲ್ಲಾ || ಎಲ್ಲಿ ||

ಪಾರ್ಲಿಮೆಂಟಿನಲಿ ವಿಧಾನಸೌಧದಿ
ಜನಗಳ ಸೇವೆ ಮಾಡ್ತೀವಂತ
ಪ್ರತಿಜ್ಞೆವಚನಾ ಮಾಡಿದ ಮಂತ್ರಿ
ಕೋಟಿಗಟ್ಟಲೆ ನುಂಗುತ್ತಿರಲು || ಎಲ್ಲಿ ||

ಜೀವಾ ಉಳಿಸುವ ಪ್ರತಿಜ್ಞೆಮಾಡುತ
ಹೆಣವಾದರು ಜನ ಹಣವನೆ ಬಳಿವರು
ಅಂಗಾಂಗಗಳನೆ ಮಾರಿಕೊಳ್ಳುವ
ಕಳ್ಳ ವೈದ್ಯರನು ನೋಡಿಯು ಕೂಡ || ಎಲ್ಲಿ ||

ದೇವರುಗಳನ್ನೆ ವ್ಯಾಪಾರಕಿಟ್ಟು
ದುಡ್ಡನು ಕೀಳುವ ಪೂಜಾರಿಗಳನು
ದೇವರ ಹೆಸರಲಿ ಸೂಳೆಗಾರಿಕೆಯ
ಬೆಳೆಸುವ ಖದೀಮರೆಲರ ಕಂಡು || ಎಲ್ಲಿ ||

ಸರ್ಕಾರ್ ಕೆಲಸಾ ದೇವರ ಕೆಲಸ
ಎನ್ನುವ ಬೋರ್ಡನು ಹಾಕಿದ ಕಛೇರಿ
ಲಂಚಾ ವಶೀಲಿ ಇಲ್ಲದೆ ಒಲಿಯದು
ಅಂಥಾ ಭ್ರಷ್ಟರ ಏನೂ ಮಾಡದೆ || ಎಲ್ಲಿ ||

ನಮ್ಮ ದೇವರೇ ನಮ್ಮ ಧರ್ಮವೇ
ಹೆಚ್ಚಿನದೆಂದು ಕೊಚ್ಚಿ ಕೊಳ್ಳುತ
ಬೇರೆಯ ಜನರನು ಕೊಲ್ಲಲು ಹೇಸದ
ನರಹುಳುಗಳನೀ ನೆಲದಲಿ ಹುಟ್ಟಿಸಿ || ಎಲ್ಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರಿ
Next post ಚಿಂತಕ

ಸಣ್ಣ ಕತೆ