ದೂರದ ಗೋವೆಯಿಂದ ವಧು ಬಂದಿತ್ತು
ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು.
ಕಣ್ಗಳೇ ಆಡಿದವು ನೂರಾರು ಮಾತು,
ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು.
ಬಾಂಧವ್ಯಕೆ ಭಾಷೆಯ ಬಂಧನವಿಲ್ಲ
ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ
ವ್ಯವಸ್ಥಿತ ಮದುವೆ ಆಯಿತು ಪ್ರೇಮ ವಿವಾಹ
ನಿಶ್ಚಿತದ ಬಳಿಕ ಉಳಿದಿದ್ದುದು
ನೂರು ದೀರ್ಘ ದಿನಗಳು, ಬರೆದುದು ನೂರೇ ಪತ್ರ!
ಇಬ್ಬರದೂ ಸೇರಿ ಸಾವಿರ ಪುಟಗಳು ಮಾತ್ರ
ಕಥೆ, ಕವನ, ಕನಸು, ಹಗಲುಗನಸು,
ನಾಟಕ, ರೂಪಕ, ಧಾರಾವಾಹಿ…
ಏನೆಲ್ಲ ರೂಪಗಳಲ್ಲಿ ಹರಿಯಿತು ಪತ್ರಧಾರೆ.
ದಿನ ದಿನವೂ ಕಾಯುತ್ತಿದ್ದೆವು ಪತ್ರಕ್ಕಾಗಿ
ರಾಮನಿಗಾಗಿ ಕಾದ ಶಬರಿಯಂತೆ
ಮಳೆಗಾಗಿ ಕಾದ ಚಾತಕ ಪಕ್ಷಿಯಂತೆ.
ಆಫೀಸಿನಲ್ಲಿ ಮನೆಯಲ್ಲಿ ಎಲ್ಲೆಲ್ಲೂ
ಅದೇ ಮಾತು – ಗುಲ್ಲೋ ಗುಲ್ಲು.
ಯಾರೂ ಆಗದ ಲಗ್ನ ಇವರೇ ಆದಂತೆ
ಎಂದವರ ಅಸೂಯಾಗ್ನಿಗೆ ತುಪ್ಪ ಹುಯ್ದಂತೆ
ಪತ್ರ ರೂಪದಿ ಭಾವಗಳು ಹೊರ ಹೊಮ್ಮಿ ಪಸರಿಸಿ
ವಿರಹ ವೇದನೆಯ ತಣಿಸಿತ್ತು
ಮನಕೆ-ಮನವ ತಲುಪಿಸಿತ್ತು
ಸುಂದರ ವೈವಾಹಿಕ ಜೀವನಕೆ
ಭದ್ರ ಬುನಾದಿಯ ಹಾಕಿತ್ತು
ಮಧುರ ಮಿಲನವು ಹೃದಯಗಳ ಬೆಸೆದಿತ್ತು
*****
೨೦-೦೩-೧೯೮೪