ನಿನ್ನೇಕೆ ಪ್ರೀತಿಸಿದೆ?

ನಿನ್ನೇಕೆ ಪ್ರೀತಿಸಿದೆ?

ನನ್ನಲ್ಲೇನು ಕಂಡು ನೀ ನನ್ನ ಇಷ್ಟಪಟ್ಟೆ? ನೆನಪಿದೆಯಾ ಮನು…..ನೀನಂದು ನನ್ನಲಿ ಏಕಾ‌ಏಕಿ ಪ್ರಶ್ನಿಸಿದಾಗ ನಾ ಏನೂ ಹೇಳಲಾರದೆ ಸುಮ್ಮನಾಗಿದ್ದೆ. ಆದ್ರೆ ಈಗ ಹೇಳ್ತಿದ್ದೇನೆ ಕೇಳು. ಜೀವನದಲ್ಲಿ ಮುನ್ನುಗ್ಗುವಂತೆ ಧೈರ್ಯ ತುಂಬುವ ನಿನ್ನ ಪರಿ, ಪರರ ಬಗ್ಗೆ ನಿನಗಿರೋ ಅಭಿಮಾನ, ಒಳ್ಳೆಯತನವನ್ನು ಗೌರವಿಸೋ ಆ ದೊಡ್ಡ ಗುಣ. ಇವೆಲ್ಲಾ…..ನಾನಿನ್ನ ಮೆಚ್ಕೊಳ್ಳೋಕೆ ಮೊದಲ ಕಾರಣ ಮನು……ಮತ್ತೆ ಇದ್ದೇ ಇದೆಯಲ್ಲಾ ನಿನ್ನ ಆ ನಿಷ್ಕಳಂಕ ಪ್ರೀತಿ. ಇದು ಪ್ರೇಮಿಸಿದವರೆಲ್ಲ ಹೇಳೋ ಸಾಮಾನ್ಯ ಮಾತಾದರೂ ನಿನ್ನೊಳಗಿನ ಆ ನಿಷ್ಕಳಂಕ ಪ್ರೀತಿ ಪೂರ್ಣ ಭಾವನೆಗಳನ್ನು ವರ್ಣಿಸಲಸಾಧ್ಯ. ಮನೂ……ನನ್ನೆಲ್ಲಾ ಪರೀಕ್ಷೆಗಳಲ್ಲಿ ನೀ ಗೆದ್ದುಬಿಟ್ಟೆ ಕಣೋ. ಜೊತೆಗೆ ಭಾವನೆಗಳ ಕಾವ್ಯಾತ್ಮಕವಾಗಿ ಹಂಚ್ಕೊಳ್ಳೋ ನನ್ನ ಪುಟ್ಟ ಕವಿ ಮನಸ್ಸನ್ನು ಬಹು ಬೇಗ ಅವರಿಸಿಕೊಂಡುಬಿಟ್ಟೆ ಮನೂ……

ಆ ದಿನ ಇನ್ನೂ ಚೆನ್ನಾಗಿಯೇ ನೆನಪಿದೆ. ನಿನ್ನ ಪರಿಚಯವಾದಾಗಿನಿಂದ ನಿನ್ನಲ್ಲೇನೋ ಅಭಿಮಾನ ನನ್ಗೆ. ಈ ಪ್ರಪಂಚದ ಅರಿವೇ ಇಲ್ಲದ ನಾನಾಗ ಅದೇನೋ ಪಟಪಟಾಂತ ಮಾತಾಡ್ತಿದ್ದೆ. ಆ ವಯಸ್ಸು ಹಾಗಿತ್ತು. ಆದರೆ ಆ ದಿನ ನಾ ಕಾಲೇಜು ಬಿಟ್ಟು ಬರೋ ಹೊತ್ತಿಗೆ ನೀ ಬೈಕಿನಲ್ಲಿ ಧುತ್ತೆಂದು ಪ್ರತ್ಯಕ್ಷವಾದಾಗ ಮೊದಲ ಬಾರಿಗೆ ನಿನ್ನ ಆ ಕಣ್ಣೋಟವನ್ನು ನಾ ಎದುರಿಸಲಾರದಾದೆ. ಬಹುಶಃ ನಿನ್ನ ಹೃದಯದ ಭಾವನೆಗಳು ನನ್ನ ಮನಸ್ಸನ್ನು ಸ್ಪರ್ಶಿಸಿತೋ ಏನೋ, ನೀ ನಿನ್ನ ಒಲವನ್ನು ತೋಡಿಕೊಂಡೇ ಬಿಟ್ಟೆ. ನನಗೇನೂ ತೋಚಲಿಲ್ಲ. ನಿಜ ಅದೇಕೋ ನಾ ಸಂಕೋಚದ ಮುದ್ದೆಯಾಗು  ಹೋಗಿದ್ದೆ. ಹಲವು ಭಾವನೆಗಳು ಮನದೊಳು ಮಿಂಚಿ ಮರೆಯಾಗಿತ್ತು. ಜೊತೆಗೆ ಭಯ ಆತಂಕ. ನೀ ಅಭಿಪ್ರಾಯ ತಿಳಿಸಲು ಕಾಲಾವಕಾಶ ಕೊಟ್ಟೆ. ಏನು ಯೋಚಿಸಬೇಕು, ಹೇಗೆ ಪ್ರತಿಕ್ರಿಯಿಸಬೇಕು, ಯಾವುದೊಂದು ನಿರ್ಧಾರಕ್ಕೆ ಬರಲಾರದೆ ತೊಳಲಾಡಿದೆ. ನೀ ಪ್ರಶ್ನಿಸಿದಾಗಲೆಲ್ಲಾ ನಾ ಏನೂ ಹೇಳಲಾರದೆ ಮೌನಿಯಾದೆ. ನಿನ್ಮೇಲಿನ ಅಭಿಮಾನ ಹಾಗೇ ಮುಂದುವರೆಯಿತು. ಇದ್ದಕ್ಕಿದ್ದಂತೆ ಆದ ಅದೊಂದು ಬಾಹ್ಯ ಕಹಿ ಘಟನೆ ನಮ್ಮಿಬ್ಬರನು ದೂರವಾಗಿಸಿತು ಮನು. ಯಾವ ಭಾವನೆಗಳನ್ನು ಪರಸ್ಪರ ಹಂಚ್ಕೊಳದೇ ಮೌನವಾಗಿಯೇ ನಮ್ಮಿಬ್ಬರ ಬಾಳ ಪಯಣ ಸಾಗುತ್ತಲೇ ಇತ್ತು. ನಾ ಓದೋದರಲ್ಲೇ ತಲ್ಲೀನಳಾದೆ. ಆದರೆ ನಿನ್ನೊಳಗಿನ ನೋವನ್ನೂ, ಕೊರಗನ್ನೊ ನಾ ಅರಿಯದಾದೆ. ನನ್ನ ಹೃದಯವೆಂಬ ಗಿಡದಲ್ಲಿ ನಿನ್ನ ಪ್ರೀತಿಯೆಂಬ ಮೊಗ್ಗು ಅರಳಲಿಲ್ಲ ಅಂತ ಗೊತ್ತಿದ್ದರೂ ನೀ ನನ್ನ ಬಿಡಲೇ ಇಲ್ಲ. ಹೃದಯಲ್ಲೇ ಆರಾಧಿಸತೊಡಗಿದೆ.

ಕಾಲ ಉರುಳುತ್ತಿತ್ತು. ಹೀಗಾಗಿ ಆರು ವರ್ಷಗಳು ಕಳೆದವು. ಅದೊಂದು ದಿನ ಆ ಮಾತು ಕೇಳಿ ನಾ ನಿಂತಲ್ಲೇ ಕಲ್ಲಾದೆ. “ಅವನೀಗಲೂ ನಿನಗಾಗಿಯೇ ಕಾಯ್ತಾ ಇದ್ದಾನಂತೆ. ಬೇರೆ ಮದುವೆಯಾಗಲ್ವಂತೆ.” ನನ್ನ ಕಿವಿಗಳನ್ನೇ ನಾ ನಂಬದಾದೆ. ಪರಸ್ಪರ ಏನೂ ಭಾವನೆಗಳನ್ನು ಹಂಚಿಕೊಳ್ಳದೆ ಯಾವ ಭರವಸೆಗಳಿಲ್ಲದ ಏಕಮುಖವಾಗಿ ಒಂದು ಹುಡುಗ ಇಷ್ಟು ವರ್ಷಗಳಿಂದ ಕಾಯೋದು ಸಾಧ್ಯಾನಾ? ಅಥವಾ ಇದೇನೋ ಕಪಟ ನಾಟಕವೇ?

ನಾನಾಗ ಬೇಕೆಂದೇ ಪ್ರಶ್ನಿಸಿದೆ ” ನಾ ಬೇರೆ ಯಾರನ್ನೋ ಮದುವೆಯಾದ್ರೆ ಅವನೇನು ಮಾಡ್ತಾನೆ?” “ನಿನ್ನೊಂದಿಗೆ ಅಂದು ಕಳೆದ ಆ ಸಿಹಿ ನೆನಪಿನಲ್ಲೇ ಜೀವನ ಪೂರ್ತಿ ಕಳೆಯುತ್ತಾನಂತೆ.” ನನಗಾಗ ಮಾತೇ ಹೊರಡಲಿಲ್ಲ. ತುಂಬಾ ಪಶ್ಚಾತ್ತಾಪ ಪಟ್ಟೆ.ಇಷ್ಟಕ್ಕೂ ನಮ್ಮಿಬ್ಬರಲೊಳು ಏನಿತ್ತು. ಈ ಆರು ವರ್ಷಗಳಲ್ಲಿ ಒಂದೇ ಒಂದು ಮಾತು ಆಡಿಲ್ಲ. ಒಂದು ಕಿರುನಗೆ ಸೊಸಿಲ್ಲ. ಆದರೂ……ಪ್ರೀತಿ ಅಂದ್ರೆ ಇದೇನಾ? ಪ್ರೀತಿ ಎಂಬ ಎರಡಕ್ಷರ ಇಷ್ಟೊಂದು ಅದ್ಭುತಾನ ಅಂತ ನನ್ನಲ್ಲೇ ನಾ ಪ್ರಶ್ನಿಸಿಕೊಂಡೆ.

ಅಂದಿನಿಂದ ನನ್ನೀ ಹೃದಯ ನಿನ್ನ ನಿಷ್ಕಲ್ಮಷ ಪ್ರೀತಿಗಾಗಿ ಮಿಡಿಯಿತೊಡಗಿತು. ಆದರೆ ಹೇಳಿಕೊಳ್ಳಲು ಅದೇನೋ ಭಯ ಸಂಕೋಚ.ಎಲ್ಲಾದರೂ ನೀ ಪ್ರತ್ಯಕ್ಷವಾದಾಗ ತುಂಬಾ  ಸಂತೋಷಪಡುತ್ತಿದ್ದೆ. ನಮ್ಮಿಬ್ಬರ ನಂಟು ಹಾಯ್ ಬಾಯ್ ಗಷ್ಟೇ ಸೀಮಿತವಾಗಿತ್ತು. ಬರೀ ನೋಟದಲ್ಲೇ ಅದೆಷ್ಟೋ ಸುಪ್ತ ಭಾವನೆಗಳು ರವಾನೆಯಾದಂತೆನಿಸುತ್ತಿತ್ತು. ಈ ಮಧ್ಯೆ ಮಗದೊಮ್ಮೆ ನಿನ್ನ ಪ್ರಸ್ತಾಪವಾಯ್ತು. ನಾನೀಗ ಸ್ವಂತ ನಿರ್ಧಾರ ಕೈಗೊಳ್ಳುವಷ್ಟು ಪ್ರೌಢಳಾಗಿದ್ದೆ. ನನ್ನ ಪೂರ್ಣ ಒಪ್ಪಿಗೆಯನ್ನು ಸೂಚಿಸಿಯೇ ಬಿಟ್ಟೆ. ಜೊತೆಗೆ ನನ್ನ ಹಿತೈಷಿಗಳೂ ಧ್ವನಿಗೂಡಿಸಿದರು.

ಅಂದಿನಿಂದ ನಾವಾಡಿದ ಮಾತು, ಹಂಚ್ಕೊಂಡ ಭಾವನೆಗಳು ವರ್ಣಿಸಲಸಾಧ್ಯ. ಹಿಂದೆಲ್ಲಾ ನನಗನಿಸಿದ್ದಿದೆ. ಒಂದು ಹುಡುಗನಿಂದ ಕೇವಲ ನಿಷ್ಕಲ್ಮಶ ಪ್ರೀತಿಯನ್ನು ಅದೆಷ್ಟೋ ವರ್ಷಗಳ ಕಾಲ ಪಡೆಯೋದು ಮರೀಚಿಕೆಯೇ ಸರಿ ಅಂತ. ಆದರೆ ನಿನ್ನಿಂದ ನಾನು ಆ ನಿರ್ಧಾರನ ಬದಲಾಯಿಸಬೇಕಾಯ್ತು ಮನೂ. ನಿನ್ನ ಹೃದಯ ಶ್ರೀಮಂತಿಕೆಯ ಅರಿವಾದಾಗ ನನ್ನ ಆಯ್ಕೆಯ ಬಗ್ಗೆ ನನಗೆ ಹೆಮ್ಮೆ ಯೆನಿಸುತ್ತಿದೆ. ನೀನಂದ್ರೆ ನಂಗಿಷ್ಟ ಕಣೋ. ಆದರೆ ನೀ ಕೆಲವೊಮ್ಮೆ ನಿನ್ನ ಬಗ್ಗೆ ಕೀಳರಿಮೆ ಯಿಂದ ಮಾತಾಡ್ಕೊಂಡಾಗ ನನಗೆ ತುಂಬಾ ನೋವಾಗುತ್ತೆ. ತನ್ನ ಬಗ್ಗೆ ಅದ್ಭುತ ಸಾಧನೆಯಾಗಿ ಮಾತಾಡುತ್ತಿ. ನೀನಂದುಕೊಂಡಂತೆ ನನ್ನಲ್ಲೇನೂ ಇಲ್ಲ ಮನೂ. ಏನೋ ಒಂದೆರಡು ಕತೆ ಕವನ ಗೀಚುತೀನಿ ಅಷ್ಟೆ. ನಿನಗೇನಾಗಿದೆ.  ಆ ಭಗವಂತನು ಒಳ್ಳೆಯ ಕಂಠಸಿರಿಯನ್ನು ನೀಡಿದ್ದಾನೆ. ಅದು ನನ್ನ ಜೀವ. ನಿನ್ನ ಮಡಿಲಿನಲ್ಲಿ ಹಾಯಾಗಿ ಮಲಗಿ ನಿನ್ನ ಆ ಗಾಯನವನ್ನು ಕೇಳಲು ಹಾತೊರೆಯುತ್ತಿದ್ದೇನೆ ಮನೂ……….

’ನೀ ಮತ್ತೊಮ್ಮೆ ಯೋಚಿಸಿ ನಿರ್ಧಾರ ತಗೋ. ನನಗೆ ನಿನ್ನ ಸಂತೋಷಾನೇ ಮುಖ್ಯ. ನಿನ್ನ ಒಳ್ಳೇದಕ್ಕೆ ನಾ ಯಾವ ತ್ಯಾಗಕ್ಕೊ ಸಿದ್ಧ. ಹಾಗೇನಾದ್ರೂ ಆದ್ರೆ ನಾ ನಿನ್ನ ನೆನಪಿನಲ್ಲೇ ಯಾವುದಾದ್ರೂ ಅನಾಥ ಮಕ್ಕಳಿಗೆ ಸಹಾಯ ಮಾಡ್ತಾ ಜೀವನಪೂರ್ತಿ ಕಳೆದುಬಿಡ್ತೀನಿ.’ ಅಂತ ಭಾವುಕನಾಗಿ ನುಡಿಯುತ್ತೀಯಲ್ಲಾ? ನಾನೀಗ ನಿನಗಾಗಿ ಹಾತೊರೆಯುವುದು, ನಿನ್ಮೇಲೆ ನನಗಿರೋ ಪ್ರೀತೀನ ಅರ್ಥ್ಯೆಸಿಕೊಂಡೂ ನೀ ಹೀಗೆ ಹೇಳೋದು ಸರಿನಾ ಮನೂ? ಪ್ರೀತಿ ಅಂದ್ರೆ ಸುಲಭ ಅಲ್ಲ ಕಣೋ ಅದೆಷ್ಟು ಜನರ ಕಣ್ತಪ್ಪಿಸಿ ನನ್ನ ಪ್ರೀತೀನ ಹಂಚ್ಕೊಂಡೆ ಅನ್ನೋದನ್ನು ಮರೀಬೇಡ. ನಾನೇನು ಅಂತಹ ಸ್ವಾರ್ಥಿ ಅಂದ್ಕೊಂಡೆಯಾ? ನನ್ಗೆ ಪ್ರೀತಿ ಅಂದ್ರೆ ಏನು ಅಂತ ತೋರಿಸಿಕೊಟ್ಟವನು ನೀನೇ ಕಣೋ.

ಇಷ್ಟು ದಿನಗಳಲ್ಲಿ ಒಂದು ದಿನ ಸಭ್ಯತೆಯ ಎಲ್ಲೆ ಮೀರು ನಡೆದುಕೊಳ್ಳೋದು ಬಿಡು. ಮಾತಾಡಿಲ್ಲ. ಅಂತಹ ಪವಿತ್ರ ಪ್ರೀತಿಯಿಂದ ನನ್ನನ್ನು ಬೇರ್ಪಡಿಸಬೇಡ ಮನೂ……..ನನ್ನನ್ನು ನಮ್ಮವರನ್ನೂ ಕೀಳಾಗಿ ಕಾಣುವ, ಶ್ರೀಮಂತಿಕೆಯಿದ್ದೂ ಹೃದಯವಂತಿಕೆ ಯಿಲ್ಲದವರ ಕಾಲಡಿಗೆ ನನ್ನ ತಳ್ಬೇಡ ಮನೂ. ನಿನ್ನೊಂದಿಗಿನ ಪ್ರೀತಿ ತುಂಬಿದ ಬದುಕೇ ನನಗೆ ಸಾಕು. ಅದಕ್ಕೆ ನಾ ನಿನಗೆ ಒಂದು ಕಾರಣವನ್ನೂ ಹೇಳ್ತೀದೀನಿ ಕೇಳು. ನನ್ನ ಆತ್ಮೀಯ ಗೆಳತಿಯೊಬ್ಬಳು ಶ್ರೀಮಂತಿಕೆಯ ಎಲ್ಲ ಲಕ್ಷಣಗಳನ್ನು ಹೊಂದಿರುವ ಹುಡುಗ ನೊಬ್ಬನ ಕೈ ಹಿಡಿದಳು. ಆದರೇನು ಅವಳತ್ತೆ ಕತ್ತೆಯಂತೆ ದುಡಿಸಿಕೊಳ್ಳುತ್ತಿದ್ದಳು. ಹೃದಯಶ್ರೀಮಂತಿಕೆ ಯಿಲ್ಲದ ಸಂಕುಚಿತ ಮನೋಭಾವದ ಪತಿ ಬೇರೆ. ಆಕೆಯ ಕ್ಷೇಮ ಸಮಾಚಾರ ವಿಚಾರಿಸಲೆಂದು ಕಾಲೇಜಿನ ಸಹಪಾಥಿಯೊಬ್ಬ ಕಾಲ್ ಮಾಡಿದಾಗ ಆಕೆಯ ಶ್ರೀಮಂತ ಗಂಡನಿಂದ ಬಂದ ಉತ್ತರ ಏನು ಗೊತ್ತಾ?” ’ಅವಳಿಗೆ ಏನು ಹೇಳಲಿಕ್ಕಿದೆಯೋ ಅದನ್ನು ನನ್ನಲ್ಲಿ ಹೇಳಿ’ ಅಂತ. ಇಂತಹ ಅದೆಷ್ಟು ಉದಾಹರಣೆಗಳು ಬೇಕು ನಿನಗೆ ಈಗ್ಲಾದ್ರೂ ಅರ್ಥೈಸಿಕೊಂಡೆಯಾ  ಮನೂ ಬದುಕನ್ನು ಚೆನ್ನಾಗಿ ಅರ್ಥೈಸಿಕೊಂಡ ನೀನೊಬ್ಬನಿದ್ರೆ ಸಾಕು. ನನ್ನ ಬಾಳಿಗೆ. ಮತ್ತೇನು ಬೇಡ ಸುಖ ದುಃಖಗಳನ್ನು ಹಂಚ್ಕೊಳ್ಳೋಣ.

ಈಗ ಹೇಳು ಮನೂ ನಿನ್ನ ವಿಶಾಲ ಹೃದಯದ ತ್ಯಾಗದ ಮೂಲಕ ನನ್ನನ್ನು ಇಂತಹ ಬದುಕಿಗೆ ತಳ್ತೀಯಾ? ಅಥವಾ ನಿನ್ನ ಕೈಸೆರೆಯೊಳು ಜೋಪಾನವಾಗಿರೋ ಆಸರೆ ನೀಡ್ತೀಯಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೋಳ್ ತೋಳ್ ತೋಳೆ
Next post ಸೂರ್ಯ ಬರಲೇ ಇಲ್ಲ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys